Friday 15 March 2013

ಪ್ರಾದೇಶಿಕತೆಯ ಅನಿವಾರ್ಯತೆಯಲ್ಲಿ ದೈವಶಾಸ್ತ್ರದ ಅಧ್ಯಯನ!


ಈ ದಿನಗಳಲ್ಲಿ ಪ್ರಾದೇಶಿಕ ದೈವಶಾಸ್ತ್ರದ ಸಾಧ್ಯತೆ ಮತ್ತು ಅಗತ್ಯತೆಯ ಬಗ್ಗೆ ವಸ್ತುನಿಷ್ಠತೆಯಿಂದ ಅವಲೋಕಿಸುವುದಕ್ಕಿಂತ ಅಪನಂಬಿಕೆಯ ಕಾಮಾಲೆ ಕಣ್ಣುಗಳಿಂದ ನೋಡುವವರೇ ಹೆಚ್ಚು. ಅದಕ್ಕೆ ಕಾರಣಗಳಿಲ್ಲ ಅಂತಲ್ಲ. ಆ ಕಾರಣಗಳ ಪ್ರಸ್ತಾಪ ಇಲ್ಲಿ ಮುಖ್ಯವೆನ್ನಿಸುವುದಿಲ್ಲ. ಆ ಉದ್ದೇಶ ಕೂಡ ಈ ಲೇಖನಕ್ಕಿಲ್ಲ. ಪ್ರಾದೇಶಿಕತೆಯೆಂಬುವುದು ಹೇಗೆ ದೈವಶಾಸ್ತ್ರದ ಅಧ್ಯಯನವನ್ನು ಶ್ರಿಮಂತಗೊಳಿಸಬಹುದೆಂಬ ಅಂಶವನ್ನು ಬಯಲಿಗೆಳೆಯುವ ಸಣ್ಣ ಪ್ರಯತ್ನವಿದು.

ಕ್ರೈಸ್ತ ಯಾಜಕ ಒಬ್ಬ ದೇವರ ವಕ್ತಾರ. ದೇವರ ಮತ್ತು ಜನರ ಮಧ್ಯ ನಿಂತಿರುವ ಅಧಿಕೃತ ಸೇತುಬಂಧು (ಕೊಂಡಿ). ಜನರ ಅಶೋತ್ತರಗಳನ್ನು ದೇವರಿಗೆ ಅರ್ಪಿಸಿ ದೇವರ ಚಿತ್ತವನ್ನು ಜನರಿಗೆ ತಿಳಿ ಹೇಳುವ ಪ್ರವಾದಿ, ಒಬ್ಬ ಧರ್ಮಗುರು. ಜನರನ್ನು ಮುನ್ನೆಡೆಸುವ ಒಬ್ಬ ಕುರಿಗಾಹಿ. ಆದ್ದರಿಂದ ಯಾಜಕನ ಜವಬ್ದಾರಿ ಸಾಮಾನ್ಯವಾದುದಲ್ಲ. ಕಟ್ಟುವ ಕೆಡುವ ಕಾರ್ಯ ಅವನದು. ತೆಗಳುವ ಹುರಿದುಂಬಿಸುವ ಮಾತು ಅವನು. ಪ್ರಜ್ಞೆಹೀನ ಸಮಾಜದಲ್ಲಿ ಅವನೊಬ್ಬ ದೇವಪಜ್ಞೆ. ಜನರ ಕೈಗಳಿಗೆ ಒಂದು ಊರುಗೋಲು ದನಿರಹಿತ ಜನರ ದನಿ ಅವನು. ಹತ್ತಾಶರಿಗೆ ಒಂದು ಆಶಾದನಿ ಅವನು. ಆದ್ದರಿಂದ ಯಾಜಕನಾಗಲು ಕರೆಯಲ್ಪಟ್ಟವನು ಸುಮಾರು ಹತ್ತರಿಂದ ಹದಿನೈದು ವರ್ಷಗಳ ತರಬೇತಿಯನ್ನು ಪಡೆಯುತ್ತಾನೆ. ಐಹಿಕ ವಿಷಯಗಳ ಜತೆ ಜತೆಗೆ ತತ್ವಶಾಸ್ತ್ರ ಮತ್ತು ದೈವಶಾಸ್ತ್ರ ವಿಷಯಗಳನ್ನು ಅಳವಾಗಿ ಅಧ್ಯಯನ ಮಾಡುತ್ತಾನೆ. ಅವನು ಹೊತ್ತುಕೊಳ್ಳುವ ಜವಬ್ದಾರಿಗೆ ಈ ರೀತಿಯ ತರಬೇತಿ ಬೇಕಾಗಿದ್ದೆ.

ಕ್ರೈಸ್ತ ಯಾಜಕನಾಗಲು ಬಯಸುವ ವ್ಯಕ್ತಿಗೆ, ದೈವಶಾಸ್ತ್ರದ ಅಧ್ಯಯನ ತರಬೇತಿಯ ಪ್ರಮುಖವಾದ ಮತ್ತು ಅಂತಿಮ ಘಟ್ಟ. ಅದು, ಕ್ರೈಸ್ತ ವಿಶ್ವಾಸವನ್ನು ಅರ್ಥಮಾಡಿಸುವ ಮತ್ತು ಗ್ರಹಿಕೆಯ ತೆಕ್ಕೆಗೆ ಬರಮಾಡಿಸುವ ಒಂದು ಶಾಸ್ತ್ರ. ಈ ಒಂದು ಘಟ್ಟದಲ್ಲಿ ಕ್ರೈಸ್ತ ವಿಶ್ವಾಸದ ಒಳಹು ಮತ್ತು ದೇವರ ಪರಮಾಭಿವ್ಯಕ್ತಿಗಳಾದ ದೈವ ಪ್ರಕಟನೆ, ದೇವರರಕ್ಷಣಾಕಾರ್ಯ, ಸಂಸ್ಕಾರಗಳು, ವಿಶ್ವಾಸ ಪ್ರಮಾಣ ಇತ್ಯಾದಿಗಳನ್ನು ಹಿಡಿ ಹಿಡಿಯಾಗಿ ಅಭ್ಯಾಸಿಸುತ್ತಾನೆ. ಜತೆಗೆ ಆದಿಕ್ರೈಸ್ತರ ವಿಶ್ವಾಸದ ಅಭಿವ್ಯಕ್ತಿಯೇ ಎನ್ನಬಹುದಾದ, ದೇವರ ರಕ್ಷಣಾ ಇತಿಹಾಸದ ಶ್ರೀಗ್ರಂಥ ಬೈಬಲ್‍ನ್ನು ಅದರಲ್ಲಿರುವ ಹಲವಾರು ಪುಸ್ತಕಗಳನ್ನು, ಅವುಗಳ ಚಾರಿತ್ರಿಕ ಹಿನ್ನಲೆ, ಉದ್ದೇಶ ಇತ್ಯಾದಿಗಳನ್ನು ರೂಪ, ಐತಿಹಾಸಿಕ, ಸಂಪಾದನೀಯ ಹಾಗು ಪಠ್ಯ ವಿಮರ್ಶೆಗಳಿಂದ ಅಳವಾಗಿ ತಿಳಿದುಕೊಳ್ಳುತ್ತಾನೆ. ಆದ್ದರಿಂದ ಕ್ರೈಸ್ತ ಧರ್ಮದ ಸಾರವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಅಲ್ಪಸ್ವಲ್ಪ ಕರಗತ ಮಾಡಿಸುವುದು ಒಂದು ಭಾಗ ದೈವಶಾಸ್ತ್ರದು. ಜತೆಗೆ ಕೈಸ್ತ ಧರ್ಮದ ಮೂಲ ವಿಶ್ವಾಸವನ್ನು ಪರಿಚಿಯಿಸಿ ಅವನಿಗೆ ಅರ್ಥಮಾಡಿಸುತ್ತಲೇ ಅವನಲ್ಲಿ ಒಂದು ರೀತಿಯ ಮನಸ್ಥಿತಿ, ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಕಟ್ಟಿಕೊಡುವ ಒಂದು ಪಕ್ವತೆಯ ಕಾಲವು ಹೌದು. ಈ ಕಾರಣದಿಂದಾಗಿ ದೈವಶಾಸ್ತ್ರವೆಂಬುವುದು ದೇವರ ಬಗೆಗಿನ ನಮ್ಮ ಜನರ ಅಸಮರ್ಪಕ ಮಾತು ಅಥವಾ ಹೇಳಿಕೆಗಳನ್ನು ಗ್ರಹಿಕೆಗೆ ಒಳಪಡಿಸುವುದು; ನಮ್ಮ ಜನರ ಜೀವನ ಸನ್ನಿವೇಶವನ್ನು ಆಗುಹೋಗುಗಳನ್ನು ಬೈಬಲ್ ಮೌಲ್ಯಗಳ ಕಣ್ಣುಗಳಲ್ಲಿ ಕಾಣುವ ವಿಮರ್ಶಾತ್ಮಕ ಪ್ರಕ್ರಿಯೆಯೂ ಹೌದು. ಆದ್ದರಿಂದ ದೈವಶಾಸ್ತ್ರವೆಂಬುವುದು ನಾಲ್ಕುಗೋಡೆಗಳ ಮಧ್ಯೆ ಕೈಗೊಂಡು ಮೂರು ಅಥವಾ ನಾಲ್ಕು ವರ್ಷಗಳ ಅವಧಿಯಲ್ಲಿ ಮುಗಿಸಿಬಿಡುವ ಒಂದು ಅಧ್ಯಯನವಲ್ಲ, ಉರುಹಚ್ಚಿ ಪರೀಕ್ಷೆ ಬರೆದು ಪಾಸ್‍ಮಾಡಿಬಿಡುವಂತ ಅಭ್ಯಾಸವಲ್ಲ. ಈ ಘಟ್ಟದಲ್ಲಿ ಅವನು ಪಡೆದುಕೊಂಡ ಗ್ರಹಿಕೆ, ವಿಧಾನ, ಕ್ರಮವನ್ನು ಪ್ರತಿದಿನದ ವಾಸ್ತವಕ್ಕೆ ಅಳವಡಿಸಿ ವಿಶ್ವಾಸಕ್ಕೆ ಪ್ರಸ್ತುತತೆಯನ್ನು ತಂದುಕೊಳ್ಳುವ ಒಂದು ನಿರಂತರ ಪ್ರಕ್ರಿಯೆ, ಕ್ರಮ, ದೃಷ್ಟಿ ಮತ್ತು ಸೃಷ್ಟಿ.

ಈ ಒಂದು ಹಿನ್ನಲೆಯಲ್ಲಿ ಪ್ರಾದೇಶಿಕತೆ ನಮ್ಮ ದೇವಶಾಸ್ತ್ರೀಯ ಅಭ್ಯಾಸಕ್ಕೆ, ಅಧ್ಯಯನಕ್ಕೆ ಮತ್ತು ನಿರಂತರ ಕ್ರಿಯೆಗೆ ಹೇಗೆ ಉಪಯುಕ್ತವಾಗಬಹುದು? ಎಂಬ ಪ್ರಶ್ನೆಗೆ ಉತ್ತರದ ಸುರುಳಿಯನ್ನು ಬಿಚ್ಚಿಡುವುದೇ ನನ್ನ ಮುಂದಿನ ಕೆಲಸ.

೧.ಪ್ರಾದೇಶಿಕತೆ ಅಧ್ಯಾಯನಕ್ಕೆ ಬಹು ಮುಖ್ಯವಾಗಿ ಬೇಕಾಗಿರುವುದು ಸ್ಥಳೀಯ ಭಾಷೆ, ಸಂಸ್ಕೃತಿಗಳ ಗ್ರಹಿಕೆ ಮತ್ತು ಅವುಗಳೊಡನೆ ಬೆಳೆಸಿಕೊಳ್ಳಬೇಕಾದ ಆತ್ಮೀಯತೆ. ಇದು ಜನರ ನಾಡುಮಿಡಿತವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ನುಡಿಗಟ್ಟುಗಳನ್ನು, ರೂಪಕಗಳನ್ನು ಹಿಡಿಯಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವುದಲ್ಲದೇ ನಮ್ಮ ವಿಶ್ವಾಸದ ಅಭಿವ್ಯಕ್ತಿಯನ್ನು ಸರಳೀಕರಿಸಿ ನಮ್ಮನ್ನು ಸ್ಥಳೀಕರಣಗೊಳಿಸುಬಿಡುತ್ತದೆ. ಆಗ ನಮ್ಮ ಮಾತು, ಬೋಧನೆಗಳು ಕೃತಕ ಬಟ್ಟೆಯನ್ನು ಕಳಚಿ ಚಿಗರೊಡೆಯುವ ಬೀಜಗಳಾಗಿಬಿಡುತ್ತವೆ.  ಅನ್ಯನೆಂಬ ಆಪಾದನೆಗೆ ನೆಲೆ ಇಲ್ಲದಂತಾಗುತ್ತದೆ.  ಈ ಒಂದು ಕ್ರಿಯೆಯಲ್ಲಿ ಸಾಹಿತ್ಯವು ಕೂಡ ಯಥ್ಛೇಚವಾಗಿ ಬೆಳೆಯುತ್ತದೆ. ಈ ದಿನಗಳಲ್ಲಿ ಆನೇಕ ಭಾರತೀಯ ಸಿನಿಮಾಗಳು ಹಾಲಿವುಡ್ ಸಿನಿಮಗಳ ಕಥೆಯನ್ನು ಪಡೆದು, ಆ ಕಥೆಗಳನ್ನು ನಮ್ಮ ಜನರ ಸಂಸ್ಕೃತಿಗೆ ಅಳವಡಿಸಿ, ನಮ್ಮ ಜನರ ಭಾಷೆಯಲ್ಲಿ ಸಾದರಪಾಡಿಸಿ, ಯಶಸ್ಸುಗಳಿಸುತ್ತಿರುವುದು ಜನಜನಿತ. ಈ ರೀತಿಯ ಪ್ರವೃತ್ತಿ ವ್ಯಾಪಾರ ಪ್ರಪಂಚದಲೂ ಕಾಣಬಹುದು. ತಾವು ಉತ್ಪಾದಿಸುವ ವಸ್ತುಗಳ ರೂಪ ಲಕ್ಷಣಗಳನ್ನು ಸ್ಥಳೀಯ ಸಂಸ್ಕೃತಿಗೆ, ಜನರ ಆಸೆ ಅಭಿಲಾಸೆಗೆ ಅನುಗುಣವಾಗಿ ಉತ್ಪಾದಿಸಿ, ಉತ್ಪಾದನೆಯ ಬೇಡಿಕೆ ಹೆಚ್ಚಿಸಿಕೊಳ್ಳುತಾರೆ. ಲೌಕಿಕತೆಯಲ್ಲಿ ಈ ರೀತಿಯ ಪ್ರವೃತಿ, ಧಾರ್ಮಿಕತೆಯಲ್ಲೂ ಕಾಣಬೇಕಾಗಿದೆ. ನಮ್ಮ ಧರ್ಮದ ಮೂಲತತ್ವಗಳನ್ನು ಮತ್ತು ಸಂಪ್ರದಾಯವನ್ನು ನಮ್ಮ ಜನರಿಗೆ ತಿಳಿಸಲು ಮತ್ತು ಕ್ರಿಸ್ತನ ಮೌಲ್ಯಗಳನ್ನು ಇತರರಿಗೂ ದತ್ತಿಯಾಗಿಸಲು ನಮ್ಮ ಜನರ ಸಂಸ್ಕೃತಿಯನ್ನು ತಿಳಿಯಬೇಕಾಗಿದೆ. ಅವರು ಅಭಿವ್ಯಕ್ತಿಗೊಳ್ಳಿಸುವ ರೀತಿ, ಅವರ ಯೋಚನಾ ಕ್ರಮವನ್ನು, ಅಲೋಚನೆಗಳನ್ನು ತಿಳಿಯಬೇಕಾದ ಅನಿವಾರ್ಯತೆ ನಮ್ಮ ಹೆಗಲಿಗಿದೆ. ಇದ್ದಾದಾಗ ಮಾತ್ರ ನಾವು ಕ್ರಿಸ್ತನ ಪರಿಣಾಮಕಾರಿ ರಾಯಭಾರಿಗಳಾಗಬಹುದು. ಇಂತಹ ನಿಕಟ ಪರಿಚಯ ಪ್ರಾದೇಶಿಕ ದೈವಶಾಸ್ತ್ರದಿಂದ ಮಾತ್ರ ಸಾಧ್ಯವೆಂಬುದು ಅನುಭವದ ಮಾತು. ಈ ನಿಟ್ಟಿನಲ್ಲಿ ಕ್ರಿಸ್ತ ನಮಗೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾನೆ. ಭಗವಂತನ ಬಗ್ಗೆ ತಿಳಿಸಲು, ಸ್ವರ್ಗರಾಜ್ಯವನ್ನು ವರ್ಣಿಸಲು ತನ್ನ ಜನರು ಬಳಸುತ್ತಿದ್ದ ರೂಪಕಗಳೇ ಅವನ ಸಾಮತಿಯ ಕಥಾವಸ್ತುಗಳಾದವು. ಅವನ ಬೋಧನೆಯಲ್ಲಿ ಸೃಜನಾತ್ಮಕತೆ ಇತ್ತು, ಸಾಮಾನ್ಯ ಜನರಿಗೆ ಬಹುಬೇಗ ತಲುಪುವ ಸರಳತೆ ಮತ್ತು ಮಣ್ಣಿನವಾಸನೆ ಅವುಗಳಲ್ಲಿತ್ತು, ಜನರ ನೋವಿತ್ತು, ಮೌಲ್ಯಗಳ ದೃಷ್ಟಿಯಲ್ಲಿ ವಿಮರ್ಶಿಸಿದ ತಪ್ಪುಒಪ್ಪುಗಳ ಪಾಠವಿತ್ತು. ಜನರ ನಿಕಟ ಪರಿಚಯ, ಬದುಕಿನ ವಾಸ್ತವದ ಅರಿವು ಕ್ರಿಸ್ತನನ್ನು ಒಬ್ಬ ಮಹಾನ್ ದೇವರ ವಕ್ತಾರನನ್ನಾಗಿ ಮಾಡಿತ್ತು. ಅವನ ದೈವಶಾಸ್ತ್ರ ಎಂದೂ ಸಿದ್ಧವಸ್ತುವಾಗಿರಲಿಲ್ಲ. ಬದಲಾಗಿ ದೈವಾನುಭವದ ಆಧಾರದ ಮೇರೆಗೆ ದೈನಂದಿನ ಜೀವನದ ಚಿಂತನಾಪ್ರಕ್ರಿಯೆಯಿಂದ ಉಗಮವಾದ ದಿವ್ಯ ಚೇತನವಾಗಿತ್ತು. ಅವನ ದೈವಶಾಸ್ತ್ರ ಚಿಂತನಾಕ್ರಮವು ಎಂದೂ ಜೀವನ ಸನ್ನಿವೇಶವನ್ನು ಹೊರಗಿಡಲಿಲ್ಲ. ಆದ್ದರಿಂದ ಅವನ ದೇವರ ಬಗೆಗಿನ ಮಾತುಗಳು ಪ್ರಾಮುಖ್ಯತೆಯನ್ನು ಪ್ರಾಶಸ್ತ್ಯವನ್ನು ಕಳೆದುಕೊಳ್ಳದ ಕಾಲಾತೀತ ಸತ್ಯಗಳಾದವು.

೨. ದೇವರು ತಮ್ಮನ್ನು ಪ್ರಕಟಿಸಲು ಉಪಯೋಗಿಸಿಕೊಳ್ಳದ ಸಂದರ್ಭ ಸಾಧನಗಳಿಲ್ಲ, ಕೈಬಿಟ್ಟ ವ್ಯಕ್ತಿಗಳಿಲ್ಲ. ಐತಿಹಾಸಿಕವಾಗಿ ನಮ್ಮ ಬದುಕಿನ ಪ್ರತಿದಿನದ ಹಾಗುಹೋಗುವುಗಳಲ್ಲಿ ತನ್ನನ್ನೇ ತಿಳಿಯಪಡಿಸಿ, ಪ್ರಕಟಿಸಿದ್ದ ಸತ್ಯಗಳನ್ನು ಗಟ್ಟಿಮಾಡಲು ದೇವರು ನಮ್ಮ ಬದುಕಗಳನ್ನು ಹಾಸುಹೊಕ್ಕಿ ಅವನ ಅನುಭವಕ್ಕೆ ಅಣಿಮಾಡಿಕೊಡುತ್ತಾನೆ. ಇಂತಹ ಆಧ್ಯಾತ್ಮಿಕ ಅನುಭವಗಳು ಮಾತಿನ ಕೈಹಿಡಿದು ನಮ್ಮ ಮಾತುಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆಯಾದರೂ ಅವು ನಮ್ಮ ಅಸಮರ್ಪಕ ಮಾತುಗಳೇ. ಏಕೆಂದರೆ ಮಾತೆಂಬುವುದು ಅನುಭಗಳನ್ನು ಸಂಪೂರ್ಣವಾಗಿ ಹಿಡಿದಿಡಲಾಗದ ಒಂದು ಅಶಕ್ತ ಸಂಜ್ಞೆ. ಅವು ಅಗಾಧ ಅನುಭವಗಳ ಅಭಿವ್ಯಕ್ತಾ ಕಿಂಡಿಗಳಷ್ಟೇ. ಈ ನಿಟ್ಟಿನಲ್ಲಿ, ದೈವಶಾಸ್ತ್ರವೆನ್ನುವುದು ದೇವರ ಬಗೆಗಿನ ನಮ್ಮ ಜನರ ಅಸಮರ್ಪಕ ಮಾತು ಅಥವಾ ಹೇಳಿಕೆಗಳನ್ನು ಗ್ರಹಿಕೆಗೆ ಒಳಪಡಿಸುವ ಒಂದು ಕ್ರಿಯೆ. ಜನರ ವಿಭಿನ್ನ ಅನುಭವಗಳ ಪ್ರಕ್ರಿಯೆಯಿಂದಾಗಿ ದೇವರ ಬಗೆಗಿನ ಜನರ ಮಾತುಗಳು, ನಂಬಿಕೆಗಳು, ನಿಲುವುಗಳು ಸಹ ಭಿನ್ನವಾಗಿರುತ್ತವೆ. ಈ ರೀತಿಯ ವಿಭಿನ್ನತೆ ಸಹಜ ಮತ್ತು ಅತ್ಯವಶ್ಯಕ ಕೂಡ. ಈ ನಿಟ್ಟಿನಲ್ಲಿ ನಮ್ಮ ಜನರ ದೇವರ ಬಗೆಗಿನ ಅಸಮರ್ಪಕ ಮಾತುಗಳ ಭಿನ್ನತೆ ಮತ್ತು ಸಾಮ್ಯತೆಗಳನ್ನು ಕಾಣಲು ಅವುಗಳ ಹುಟ್ಟುಗಳನ್ನು, ಅನುಭವಗಳ ಹಿನ್ನಲೆಗಳನ್ನು ಅಳವಾಗಿ ಪರಿಶೋಧಿಸಲು ಪ್ರಾದೇಶಿಕ ದೈವಶಾಸ್ತ್ರ ಒಂದು ವೇದಿಕೆಯನ್ನು ಸೃಷ್ಟಿಸಿಕೊಡುತ್ತದೆ ಎಂದರೆ ಅತ್ಯುಕ್ತಿಯಾಗಾಲಾರದು. ಬಹುಧರ್ಮಗಳ ನಾಡಿನಲ್ಲಿ ಇಂಥದೊಂದು ಅರಿವು ಅಭ್ಯಾಸ, ಪರಿಶೋಧನೆ ಅತ್ಯಗತ್ಯ. ಇದು ಅಂತರ್ ಧರ್ಮೀಯ ಅಧ್ಯಯನಕ್ಕೆ ಮತ್ತು ಸಂವಾದಕ್ಕೆ ಅತ್ಯಂತ ಸೂಕ್ತವಾದ ಪ್ರಕ್ರಿಯೆ ಕೂಡ. ಇಲ್ಲವಾದಲ್ಲಿ ನಮ್ಮ ದೈವಶಾಸ್ತ್ರವು ಜನರ ಅಗತ್ಯ ಪರಿಸ್ಥಿತಿಗೆ ಸ್ವಂದಿಸದೆ, ಹಳಸಿದ, ಕೆಲಸಕ್ಕೆ ಬಾರದ ಬೌದ್ಧಿಕ ಕಾರ್ಯವಾಗಿ ಜನರಿಂದ ದೂರವಾಗುವುದರಲ್ಲಿ ಅನುಮಾನವೇ ಇಲ್ಲ. ಇಂತಹ ಒಂದು ಕ್ರಿಯೆಗೆ ಪ್ರಾದೇಶಿಕ ದೈವಶಾಸ್ತ್ರ ಬಹು ಮುಖ್ಯವೆನ್ನಿಸುತ್ತದೆ ಮತ್ತು ಇಂತಹ ಕ್ರಿಯೆಯನ್ನು ಪರಿಣಾಮಕಾರಿಯಾಗಿಸುವುದೇ ಪ್ರಾದೇಶಿಕ ದೈವಶಾಸ್ತ್ರ.

೩.ಇನ್ನೊಂದು ಕಡೆ, ದೈವಶಾಸ್ತ್ರವೆನ್ನುವುದು ನಮ್ಮ ಜನರ ಜೀವನ ಸನ್ನಿವೇಶವನ್ನು ಬೈಬಲ್ ಮೌಲ್ಯಗಳ ದೃಷ್ಟಿಯಲ್ಲಿ ಕಾಣುವ ವಿಮರ್ಶಾತ್ಮಕ ಪ್ರಕ್ರಿಯೆ. ಈ ಒಂದು ಪ್ರಕ್ರಿಯೆ ಪರಿಸ್ಥಿತಿಯ ತಪ್ಪುಒಪ್ಪುಗಳನ್ನು ತೋರಿಸುತ್ತಾ ತಪ್ಪುಗಳನ್ನು ಸರಿಪಡಿಸುವ ಹೋರಾಟಕ್ಕೆ ಅಣಿಮಾಡಿಕೊಡುತ್ತದೆ.  ಅದ್ದರಿಂದ ಜನರ ಪರಿಸ್ಥಿತಿಯ ಜ್ಞಾನ, ವಾಸ್ತವದ ತಿಳುವಳಿಕೆ ದೈವಶಾಸ್ತ್ರೀಯ ಚಿಂತನಾಪ್ರಕ್ರಿಯೆಗೆ ಮುಖ್ಯವಾಗಿ ಬೇಕಾದಂತ ಅಂಶ. ಈ ರೀತಿಯ ಗ್ರಹಿಗೆಯನ್ನು ಪ್ರಾದೇಶಿಕ ದೈವಶಾಸ್ತ್ರದ ತರಬೇತಿ ಸಮರ್ಪಕವಾಗಿ ಒದಗಿಸಬಲ್ಲದು ಎಂದು ನಿರ್ಭಯದಿಂದ ಹೇಳಬಹುದು. ಈ ಅರಿವು ಮತ್ತು ಅನುಭವದಿಂದ ರೂಪಿತಗೊಳ್ಳುವ ದೈವಶಾಸ್ತ್ರವು ಜೀವನಕ್ಕೆ ಹೊಸ ಅರ್ಥವನ್ನು ಮತ್ತು ಧರ್ಮಕ್ಕೆ ಪ್ರಸ್ತುತತೆಯನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹ ದೈವಶಾಸ್ತ್ರದಲ್ಲಿ ಖಾಲಿಮಾತುಗಳಿರುವುದಿಲ್ಲ. ಜನರ ವಿಶ್ವಾಸ, ದೈವಾನುಭವ ಮತ್ತು ಜೀವನ ಸನ್ನಿವೇಶಗಳ ಪರಸ್ವರ ಸಂವಾದಿಂದ ಮೂಡಿಬರುವ ಅರ್ಥಗರ್ಭಿತ ಮಾತುಗಳಿರುತ್ತವೆ.

ಹೌದು ಕ್ರೈಸ್ತ ವಿಶ್ವಾಸವು ನಮ್ಮ ಮಣ್ಣಿನಲ್ಲಿ ಮಿಂದು ಅರಳುತ್ತಾ ಅಭಿವ್ಯಕ್ತವಾಗಬೇಕಾಗಿದೆ. ಅದು ನಮ್ಮ ಧರ್ಮಸಭೆಯ ಅಭಿಲಾಸೆಯೂ ಹೌದು. ಕ್ರೈಸ್ತ ವಿಶ್ವಾಸವನ್ನು ಸ್ಥಳೀಯ ಸಂಸ್ಕೃತಿ ಅಥವಾ ಸಂಸ್ಕೃತಿಗಳಲ್ಲಿ ಕರಗತವಾಗಿಸಬೇಕು, ವಿಲೀನಗೊಳಿಸಬೇಕು, ಅದು ನಮ್ಮದೇ ರೂಪಕಗಳಲ್ಲಿ ಅಭಿವ್ಯಕ್ತಗೊಳಬೇಕು ಈ ಹಿನ್ನಲೆಯಲ್ಲಿ ಎರಡನೆಯ ಅರಳಪ್ಪ ಚಿನ್ನಪ್ಪರು ಈ ರೀತಿ ಹೇಳುತ್ತಾರೆ “ಸಂಸ್ಕೃತಿಯ ಅಂಗವಾಗದ ಶ್ರದ್ಧೆ ಅಥವಾ ವಿಶ್ವಾಸ ಪರಿಪೂರ್ಣ ವಿಶ್ವಾಸವಲ್ಲ”. ಇಂತಹ ಕ್ರಿಯೆ ಪ್ರಕ್ರಿಯೆಗೆ ಪ್ರಾದೇಶಿಕ ದೈವಶಾಸ್ತ್ರ ಭೂಮಿಕೆ, ನೆಲೆ ಮತ್ತು ಪ್ರಜ್ಞೆಯನ್ನು ರೂಪಿಸುತ್ತದೆ ಎಂಬುವುದು ಅನುಭವದ ಮಾತು.

ದೈವಶಾಸ್ತ್ರೀಯ ಅಧ್ಯಯನ ಕೇವಲ ನಾಲ್ಕುಗೋಡೆಗಳ ಮಧ್ಯೆ ಮಾಡುವ ಅಧ್ಯಯನವಾದರೂ ಜನರ ಜೀವನದ ಸನ್ನಿವೇಶಗಳು, ಭಾಷೆ, ಸಂಸ್ಕೃತಿ, ದೈನಂದಿನದ ಆಗುಹೋಗುಗಳು, ರೂಪಕಗಳು ದೈವಶಾಸ್ತ್ರೀಯ ಅಧ್ಯಯನದ ಭಾಗಗಳಾಗಿರಬೇಕು. ಆಗ ಮಾತ್ರ ದೈವಶಾಸ್ತ್ರದ ಅಧ್ಯಯನಕ್ಕೆ ಅರ್ಥವಿರುತ್ತದೆ. ಪ್ರವಾದಿಯ ಬದುಕಿಗೆ ದಾರಿಮಾಡಿಕೊಡುತ್ತದೆ. ಧರ್ಮವು ಪ್ರಸ್ತುತತೆಯನ್ನು ಕಳೆದುಕೊಳ್ಳದೆ ಬದುಕನ್ನು ರೂಪಾಂತರಿಸುವ ಸಾಧನವಾಗುತ್ತದೆ. ಯಾಜಕ ಮತ್ತೊಬ್ಬ ಕ್ರಿಸ್ತನಾಗುತ್ತಾನೆ. ಈ ರೀತಿಯ ಕ್ರಿಯೆಯಲ್ಲಿ ಧರ್ಮದ ಪವಿತ್ರತೆಯನ್ನು ಕಾಪಾಡಿಕೊಳ್ಳುವುದು ಹಾಗು ಧರ್ಮದ ಮೂಲಭೂತ ತತ್ವಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಜತೆಗೆ ಪ್ರಾದೇಶಿಕ ದೈವಶಾಸ್ತ್ರವನ್ನು ಕಲಿಸುವ ಬೋಧಕರ ತಂಡದ ತಯಾರಿ ಕೂಡ ಅಷ್ಟೇ ಮುಖ್ಯವೆನ್ನಿಸುತ್ತದೆ.

ಈ ನಿಟ್ಟಿನಲ್ಲಿ ಜೆಸ್ವಿಟ್ಸ್‌ರ ಕೊಡುಗೆ ಅಪಾರ. ತಮ್ಮ ಸಭೆಯ ಯಾಜಕ ಅಭ್ಯರ್ಥಿಗಳ ತರಬೇತಿಯ ಪ್ರಯುಕ್ತ ಪ್ರಾದೇಶಿಕ ದೈವಶಾಸ್ತ್ರೀಯ ಕೇಂದ್ರವನ್ನು ಸ್ಥಾಪಿಸಿ, ಅರ್ಥಗರ್ಭಿತ ದೈವಶಾಸ್ತ್ರಿಯ ಅಧ್ಯಯನಕ್ಕೆ ಅಣೆಮಾಡಿಕೊಟ್ಟಿದೆ. ಈ ಯಶಸ್ಸಿನ ಪ್ರಯೋಗ ನಮ್ಮ ಕರ್ನಾಟಕದ ಮಹಾಧರ್ಮಕ್ಷೇತ್ರಗಳಲ್ಲಿ ಮೊಳಕೆಯೊಡೆಯಲಿ. ಸ್ಥಳದ ಸಾಂಸ್ಕೃತಿಕ ಹಾಗು ಜನರ ಜೀವನ ಸನ್ನಿವೇಶಗಳನ್ನು ಆಧರಿಸಿ ಅರ್ಥಗರ್ಭಿತವಾದ ದೈವಶಾಸ್ತ್ರೀಯ ಅಧ್ಯಯನಕ್ಕೆ ನಾಂದಿ ಹಾಡಲಿ.
ಜೋವಿ ಯೇ.ಸ
Read more!

No comments:

Post a Comment