Friday 15 March 2013

ಹಾರೋಬೆಲೆಗೆ ಈ ಹೆಸರು ಹೇಗೆ ಬಂದಿರಬಹುದು?????


ಹಾರೋಬೆಲೆ, ಇದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಎಂಬ ಒಂದು ಚಿಕ್ಕ ಗ್ರಾಮ. ಕೆಲವೇ ವರ್ಷಗಳ ಹಿಂದಿನವರೆಗೂ ಒಂದು ಗ್ರಾಮಕ್ಕೆ ಇರಬಹುದಾದ ಸುಂದರವಾದ ಪರಿಸರ ಇಲ್ಲೂ ಕಾಣಬಹುದಿತ್ತು. ಪೂರ್ವದಲ್ಲಿ ಬಳುಕುತ್ತಾ ಸಾಗುತ್ತಿದ್ದ ಅರ್ಕಾವತಿ ನದಿ, ಪಶ್ಚಿಮದಲ್ಲಿ ಪ್ರಶಾಂತವಾದ ಪಾದ್ರಿ ಕೆರೆ, ಗಂಭೀರವಾಗಿ ನಿಂತ ಸುತ್ತಮುತ್ತಲಿನ ಬೆಟ್ಟಗಳು, ದಕ್ಷಿಣದಲ್ಲಿ  ತಂಪಾಗಿ ಹರಿಯುತ್ತಿದ್ದ ಹೊಂಗೆ ಹಳ್ಳ ಇವೆಲ್ಲವೂ ಗ್ರಾಮದ ಪ್ರತೀಕವಾಗಿ ನಿಂತಿದ್ದವು. ಆದರೆ ಇಂದು ಬತ್ತುತ್ತಿರುವ ಅರ್ಕಾವತಿಗೆ ಬೆಂಗಳೂರಿನ ಕಲುಷಿತ ನೀರೂ ಸೇರಿಕೊಂಡಿದೆ. ದಡದಲ್ಲಿನ ಸುಂದರ ಮರಳು ಮಾಯವಾಗಿವೆ. ಹಳ್ಳದಲ್ಲಿನ ನೀರಿಗೆ ಹಿಂದಿನ ಜುಳು ಜುಳುವೂ ಇಲ್ಲ, ಶುಭ್ರತೆಯಂತೂ ಇಲ್ಲವೇ ಇಲ್ಲ.  ಕೆರೆ, ಇದ್ದರೂ ಇಲ್ಲದಂತೆ ಜನ ಸಾಮನ್ಯರ ಆಸಕ್ತಿ, ಕುತೂಹಲ ಉಳಿಸಿಕೊಳ್ಳಲು ಪರದಾಡುತ್ತಿದೆ. ಇನ್ನೂ, ಕರಗುತ್ತಿರುವ ಇತರ ಬೆಟ್ಟಗಳ ನಡುವೆ ಕಪಾಲ ಬೆಟ್ಟವೊಂದೇ ಇಂದಿಗೂ ಅಸ್ತಿತ್ವ ಉಳಿಸಿಕೊಂಡರೆ, ಇತ್ತೀಚೆಗೆ ತಲೆ ಎತ್ತಿರುವ ಅರ್ಕಾವತಿ ಡ್ಯಾಂ ಮಾತ್ರ ಇನ್ನಷ್ಟು ಅಭಿವೃದ್ಧಿಯ ಭರವಸೆಯನ್ನು ಮೂಡಿಸಿದೆ. 

ಇಷ್ಟಾದರೂ ಬಹುತೇಕ ಕ್ರೈಸ್ತರೇ ತುಂಬಿರುವ ಈ ಗ್ರಾಮ ಇಂದಿಗೂ ತನ್ನದೇ ಆದ ವೈಶಿಷ್ಠತೆಯಿಂದಾಗಿ ಗಮನ ಸೆಳೆಯುತ್ತದೆ. ಭಿನ್ನವಾದ ದೃಷ್ಠಿಕೋನ ಹೊಂದಿದ ಜನರ ನಡುವೆಯೂ ಬಲವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೊಂಡಿಯಿಂದಾಗಿ ಗ್ರಾಮ ಇಂದಿಗೂ ತನ್ನತನವನ್ನು ಉಳಿಸಿಕೊಂಡಿದೆ. ಯೇಸುಕ್ರಿಸ್ತನ ಜೀವನ, ಬೋಧನೆ, ವಿಶೇಷವಾಗಿ ಆತನ ಶಿಲುಬೆ ಮರಣದ ಸನಿಹದ ಯಾತನಾಮಯ ಘಟನೆಗಳು ಹಾಗೂ ನಂತರದ ಪುನರುತ್ಥಾನದ ಬಗೆಗಿನ ಬೈಬಲ್ಲಿನ ವೃತ್ತಾಂತವನ್ನು ಮೂಲ ಕಥಾವಸ್ತುವಾಗಿಸಿಕೊಂಡು ನಡೆಯುವ ಇಲ್ಲಿನ ನಾಟಕಕ್ಕೆ ಒಂದು ಶತಮಾನದಷ್ಟು ಇತಿಹಾಸವಿದೆ. 1906ರಲ್ಲಿ ಆರಂಭಗೊಂಡ ಈ ನಾಟಕವು ಪ್ರತಿವರ್ಷ ಶುಭಶುಕ್ರವಾರದಂದು ನಡೆದು ಬಂದು, ಇಂದಿಗೆ 107 ಪ್ರದರ್ಶನಗಳನ್ನು ಪೂರೈಸಿದೆ ಎಂದರೆ ಅದು ಕನ್ನಡ ರಂಗಭೂಮಿಯ ಹಾಗೂ ಜನಪದದ ಮಟ್ಟಿಗೆ ನಿಜಕ್ಕೂ ಹೆಮ್ಮೆಯ ಸಂಗತಿ. ಜನರ ಬಾಯಲ್ಲಿ ಮಹಿಮೆ ನಾಟಕ ಎಂದೇ ಕರೆಸಿಕೊಳ್ಳುವ ಈ ನಾಟಕದಿಂದಾಗಿಯೇ ಗ್ರಾಮವು ಕರ್ನಾಟಕದ ಜೆರುಸಲೇಮ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಅಂತೆಯೇ ಈ ಗ್ರಾಮಕ್ಕೆ ಹಾರೋಬೆಲೆ ಎಂಬ ನಾಮ ಹೇಗೆ ಬಂತು ಎಂದು ಹುಡುಕುತ್ತಾ ಹೋದಾಗ ಸ್ಪಷ್ಟವಾದ ಉತ್ತರಗಳು ದೊರಕುವುದಿಲ್ಲವಾದರೂ ಅನೇಕ ಆಸಕ್ತಿಕರ ಸಂಗತಿಗಳು ಕಾಣಸಿಗುತ್ತವೆ.  ಇವುಗಳಲ್ಲಿ ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ತಳಕುಗೊಂಡಿರುವುದನ್ನು ಕಾಣಬಹುದು. ಗ್ರಾಮಕ್ಕೆ  ಹಾರೋಬೆಲೆ ಎಂಬ ನಾಮಕ್ಕೆ ಇಂಗ್ಲೀಷಿನ 'Horrible' ಪದವೇ ಮೂಲ ಎಂಬುದು ತಮಾಷೆಯಾಗಿ ಕಂಡರೂ, ಅದೇ ಹೆಚ್ಚಾಗಿ ಪ್ರಚಲಿತವಾಗಿದೆ. 16ನೇ ಶತಮಾನದಲ್ಲಿ ಇಟಲಿ ಮೂಲದ ಜೆಸ್ವಿಟ್ ಕ್ರೈಸ್ತ ಮಿಷಿನರಿಗಳು  ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಈ ಊರಿಗೆ ಬಂದರು ಎಂಬ ಐತಿಹಾಸಿಕ ಮಾಹಿತಿಗಳಿವೆ. ಗುಡ್ಡ ಬೆಟ್ಟ ಕಾಡಿನಿಂದ ತುಂಬಿದ ಊರು ಹಾಗೂ ಊರಿನ ದಾರಿ ದುರ್ಗಮವಾಗಿದ್ದೂ, ಅದರಿಂದಾಗಿ ಈ ಊರಿನ ಪ್ರಯಾಣ ಬಹಳ ಪ್ರಯಾಸದಾಯಕವಾಗಿತ್ತು. ಈ ಕಷ್ಟವಾದ ಪ್ರಯಾಣ, ಅನುಭವ, ಊರಿನ ಪರಿಸರವನ್ನು ಆ ವಿದೇಶಿ ಗುರುಗಳು ತಮ್ಮದೇ ಭಾಷೆಯಲ್ಲಿ  orrible ಅಥವಾ ಇಂಗ್ಲೀಷಿನ Horrible ಎಂದು ಕರೆಯುತ್ತಿದ್ದರಿಂದ ಊರಿಗೆ ಅದೇ ಹೆಸರಾಯಿತು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಮಾತು.

ಇನ್ನೂ ಈ ಊರಿನ ಹೆಸರಿನ ಬಗೆಗಿನ ಇತರ ಲೇಖಕರ, ಸಂಶೋಧಕರ ವ್ಯಾಖ್ಯಾನಗಳು ಮತ್ತಷ್ಟು ಕುತೂಹಲ ಕೆರಳಿಸುತ್ತದೆ. ಇತಿಹಾಸ ತಜ್ಞರು, "ಹಾರುವರು" (ಬ್ರಾಹ್ಮಣರು) ಹೆಚ್ಚಾಗಿ ವಾಸವಾಗಿದ್ದ ಕಾರಣ "ಹಾರು" ಬಂದಿರಬಹುದೆಂದೂ, ಊರುಗಳನ್ನು "ಬೆಲೆ" (ಹುಲಿಬೆಲೆ, ಅತ್ತಿಬೆಲೆ)  ಎಂದು ಕರೆಯುವ ರೂಢಿಯಲ್ಲೇ "ಬೆಲೆ" ಸೇರಿಕೊಂಡು "ಹಾರುಬೆಲೆ" ಅಗಿರಬಹುದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲೂ ಈ ಸ್ಥಳವನ್ನು ಇಲ್ಲಿಯವರು ವಿಜಯನಗರದ ರಾಜ ಪ್ರತಿನಿಧಿಗಳಿಂದ ಬಳುವಳಿಯಾಗಿ ಪಡೆದರು ಎಂಬ ಮಾಹಿತಿಯಿಂದಾಗಿ ಸ್ಥಳಕ್ಕೆ ಐತಿಹಾಸಿಕ ಮಹತ್ವವೂ ದೊರೆಯುತ್ತದೆ. ಇನ್ನೂ ಈ ಊರಿನ ಬಗ್ಗೆ ಹಲವಾರು ಲೇಖನಗಳನ್ನೂ, ಇಲ್ಲಿನ ದೇವಾಲಯದಲ್ಲಿನ ಪ್ರತಿಮೆಯೊಂದರ ಬಗ್ಗೆ ಸಂಶೋಧನಾತ್ಮಕ ಪುಸ್ತಕವನ್ನೂ ಬರೆದಿರುವ ಪತ್ರಕರ್ತ ಎಫ್.ಎಂ.ನಂದಗಾವ್ ರವರು ಊರಿಗೆ ಈ ಹೆಸರು ಬರಲು ಕಾರಣವಾದ ಅನೇಕ ಸಾಧ್ಯತೆಗಳನ್ನು ಪಟ್ಟಿ ಮಾಡುತ್ತಾರೆ. ದಟ್ಟವಾದ ಪೊದೆ, ಮೆಳೆಗಳನ್ನೂ ’ಬಲ್ಲೆ’ ಎಂದು ಕರೆಯಲಾಗುತ್ತಿತ್ತು. ಊರಿನ ತುಂಬಾ ಇಂತಹ ಬಲ್ಲೆಗಳು ತುಂಬಿರುವಾಗ ಅದನು ದಾಟಿ ಸಾಗಲು ಅವನ್ನು ಹಾರುತ್ತಲೋ,  ಇಲ್ಲವೆ ಸವರಿಕೊಂಡೊ ಹೋಗಬೇಕಾದರಿಂದ, ಇಲ್ಲಿ ನೆಲಸಲು ಬಂದವರು ಅಂತಹ ಬಲ್ಲೆಗಳನ್ನು ಹಾರಿದವರೂ ಆದರಿಂದ, ಬಲ್ಲೆ ಹಾರುವವರ ಊರು, ಹಾಗೆಯೇ ಪದಗಳು ಅದಲು ಬದಲಾಗಿ ಹಾರುಬಲೆ, ಹಾರೋಬೆಲೆ ಆಗಿರಬಹುದೆಂದೂ ಹೇಳುತ್ತಾರೆ. ಅಂತೆಯೇ  ಆರು ಎಂಬ ಪದಕ್ಕೆ ಕೃಷಿ, ಉಳುಮೆ ಎಂಬ ಅರ್ಥವೂ ಇದ್ದೂ ಆದೂ ಸಹಾ ಆರುಬೆಲೆ ಗೆ ಮೂಲವಾಗಿ ಕ್ರಮೇಣ ಹಾರೋಬೆಲೆ ಆಗಿರಬಹುದೆಂಬ ಮಾತಿದ್ದರೂ, ಕೃಷಿಯೇ ಪ್ರಧಾನವಾದ ಅನೇಕ ಇತರ ಊರುಗಳಿಗೆ ಈ ಹೆಸರು ಏಕೆ ಬರಲಿಲ್ಲವೆಂಬ ಪ್ರಶ್ನೆಯೂ ಮೂಡಬಹುದು. ಇನ್ನೂ, ಕಾಡುಮಯ ಪ್ರದೇಶವಾದ್ದರಿಂದ ಕೃಷಿಯ ಜೊತೆಗೆ ಪ್ರಾಣಿ ಪಕ್ಷಿಗಳ ಬೇಟೆ ಉಪವೃತ್ತಿಯಾಗಿದ್ದೂ ಅ ಸಮಯದಲ್ಲಿ  ಬಳಸುವ  ಹಾರುವ ಬಲೆಯಿಂದಲೂ ಈ ಹೆಸರು ಬಂದಿರಬಹುದೆಂಬ ವಾದವನ್ನೂ ಅವರು ತೆರೆದಿಡುತ್ತಾರೆ. ಇನ್ನೂ ಊರಿನಲ್ಲಿರುವ ದೇವಮಾತೆಯ ವಿಗ್ರಹಕ್ಕೆ ವಿವಿಧ ಹಾರಗಳನ್ನು ಹಾಕಲಾಗಿ ಅದು ಹಾರಗಳ ಬಲೆಯಂತೆ ಗೋಚರವಾಗುತ್ತಿದ್ದು, ಅದರಿಂದಲೇ ಹಾರಗಳಬಲೆಗಳ  ಊರು, ಹಾರಬಲೆ, ಮುಂದೆ ಅದು ಹಾರೋಬೆಲೆ ಆಗಿರಬಹುದೆಂಬ ಅನಿಸಿಕೆಯೂ ಇದೆ.

ಇದರಲ್ಲಿ ಯಾವುದು ನಿಜವೋ, ಯಾವುದು ಮೂಲವೋ, ಯಾವುದು ಅಂತಿಮವೋ ನಿರ್ಧರಿಸುವುದು ಕಷ್ಟದ ಮಾತೇ ಸರಿ. ಅದರೂ ಮೂಲದ ಜಾಡು ಹಿಡಿದು ಹೊರಟಾಗ ಸಿಗುವ, ಗೋಚರವಾಗುವ ಅಂಶಗಳಂತೂ  ನಿಜಕ್ಕೂ ರೋಚಕ ಹಾಗೂ ಮುಂದಿನ ಸಂಶೋಧನೆಗೆ ಪೂರಕ, ಸ್ಪೂರ್ತಿದಾಯಕ. ಒಂದು ಊರಿನ ಹೆಸರೇ ಎಷ್ಟೊಂದು ಇತಿಹಾಸ, ಸ್ವಾರಸ್ಯವನ್ನು ಹೊಂದಿರುವಾಗ ಇನ್ನೂ ಇಡೀ ಊರು, ಅದರ ಜನರಲ್ಲಿ, ಇನ್ನೆಷ್ಟು ವಿಷಯಗಳು, ವಿಚಾರಗಳು ಅಡಗಿರುತ್ತವೆಯೋ. ಅವುಗಳನ್ನು ಸ್ವಲ್ಪವಾದರೂ ಹೆಕ್ಕಿ ತೆಗೆಯುವ ಪ್ರಯತ್ನವಾದರೆ, ನಮ್ಮ  ಸಾಂಸ್ಕೃತಿಕ, ಜನಪದ ಬೇರುಗಳು ಇನ್ನಷ್ಟು ಗಟ್ಟಿಯಾಗಬಹುದು. 

-ಪ್ರಶಾಂತ್ ಇಗ್ನೇಷಿಯಸ್

3 comments:

  1. ದಯವಿಟ್ಟು ಇದನ್ನು ನೋಡಿ.
    http://cmariejoseph.blogspot.in/2010/12/blog-post_17.html

    ReplyDelete
  2. ಇದನ್ನು ನೋಡಿದ್ದೀರಾ?
    http://cmariejoseph.blogspot.in/2010/12/blog-post_17.html

    ReplyDelete
  3. ಪ್ರಶಾಂತ್ .18 March 2013 at 10:09

    Good one sir. ನಾನು ಇದನ್ನು ಓದಿರಲಿಲ್ಲ. ಮೊನ್ನೆ ಹಾಯ್ ಬೆಂಗಳೂರ್ ಪತ್ರಿಕೆಯ "ನಿಮ್ಮ ಊರಿಗೆ ಹೆಸರು ಹೇಗೆ ಬಂತು" ಎಂಬ ಓದುಗರ
    ಅಂಕಣಕ್ಕೆ ಇದನ್ನು ಕಳುಹಿಸಿದೆ. ಅದರಲ್ಲಿ ಹಾರೋಬೆಲೆಯ ಮಹಿಮೆ ಸಂಚಿಕೆ, ಇನ್ನಾಸಪ್ಪನವರ ಹಾಗೂ ಫಾ.ಅಂತಪ್ಪನವರ ಲೆಖನಗಳ ಆಧಾರದಲ್ಲಿ ಇದನ್ನು ಬರೆದೆ. ನಂದಗಾವ್ ರವರು ಸಹಾ ತಮ್ಮ ಪುಸ್ತಕದ ಮುನ್ನಡಿಯಲ್ಲಿ ಹಲವಾರು ಸಾಧ್ಯತೆಗಳನ್ನು ಉಲ್ಲೇಖಿಸಿದ್ದಾರೆ.

    ReplyDelete