Friday 24 February 2012

ಮೇಧಾ ಪಾಟ್ಕರ್‌ರವರ ಆತ್ಮಸಾಕ್ಷಿಯ ನಡೆ....


ಕೃಪೆ: ದ ಹಿಂದು

ಅದೆಕೋ ಗೊತ್ತಿಲ್ಲ ಕೆಲವರಂತೂ ಬೇಡ ಬೇಡವೆಂದ್ರು ನಮ್ಮ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ. ಸೂರ್ಯಕಾಂತಿಗೆ ಸೂರ್ಯ ಹತ್ತಿರವಾದಂತೆ. ನಮ್ಮ ಜೀವಮಾನದಲ್ಲೇ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿರುವುದಿಲ್ಲ. ಸಾಲದಕ್ಕೆ, ಅವರಲ್ಲಿ ಒಂದು ಮಾತು ಕೂಡ ನಾವು ಆಡಿರುವುದಿಲ್ಲ. ಕೆಲವೊಂದು ಸಲ, ಅವರು ಮತ್ತು ನಮ್ಮ ನಡುವೆ ತಲೆಮಾರುಗಳ ಅಂತರ ಬೇರೆ. ಆದರೂ ಅವರ ಮಾತು ನಿಲುವುಗಳು, ಮೌಲ್ಯಗಳು, ನೈತಿಕತೆ, ಎದೆಗಾರಿಕೆ, ಮಾನವನ ಉನ್ನತಿಗೆ ತೊಡೆ ತಟ್ಟಿ ನಿಲ್ಲುವ ಮೊಂಡು ಧೈರ್ಯ ಕಾಲವನ್ನು ಮೀರಿ ನಮಗೆ ಆಪ್ತವಾಗಿಬಿಟ್ಟಿರುತ್ತವೆ. “ಬಾಳಿದರೆ ಮನುಷ್ಯನಂತೆ ಬಾಳಿ ಬದುಕಬೇಕು ನೋಡಪ್ಪಮನವೊಪ್ಪುವಂತ ಮಾತನ್ನು ಅದೆಗೋ ನಮ್ಮಲ್ಲಿ ಹುಟ್ಟಿಸಿಬಿಟ್ಟಿರುತ್ತದೆ. ಅಷ್ಟೇ ಮಾತ್ರವಲ್ಲ ನಮ್ಮ ಅಸಂವೇದಿತ್ವವನ್ನು ಪ್ರಶ್ನಿಸುವ ನೈತಿಕತೆಯ ತಾಕತ್ತನ್ನು ಸಹ ಅವರು ಪಡೆದುಕೊಂಡುಬಿಟ್ಟಿರುತ್ತಾರೆ. ಅವರ ನಿಲುವು, ಸಿದ್ಧಾಂತಗಳು ಪ್ರಚಾರಕ್ಕೆ ಯಾವ adavertising agency ಗಳ ಮೊರೆಹೋಗಿರುವುದೇ ಇಲ್ಲ. ಆವುಗಳ ಪ್ರೊಮೊಶನ್ಗೆ ಕೋಟಿ ಕೋಟಿ ರೂಗಳನ್ನು ಖರ್ಚು ಮಾಡಬೇಕಾದ ಅವಕಶ್ಯತೆಯೂ ಅವರಿಗೆ ಕಂಡಿರುವುದಿಲ್ಲ. ಪ್ರಚಾರ ರಾಯಭಾರಿ/Ambassador ಗಳನ್ನು ನೇಮಕಾತಿ ಮಾಡುವ ಸಮಸ್ಯೆಯಂತೂ ಖಂಡಿತ ಅವರಿಗೆ ಒದಗಿ ಬಂದಿರುವುದಿಲ್ಲ. ಆದರೂ ಸಾವಿರಾರು ಹಿಂಬಾಲಕರನ್ನು ಗಳಿಸಿಕೊಂಡುಬಿಟ್ಟಿರುತ್ತಾರೆ. ಮಾತ್ರವಲ್ಲದೆ, ನೂರಾರು ಜನರ ಮನಗಳಲ್ಲಿ ಚಿರಸ್ಥಾಯಿಯಾಗಿಬಿಟ್ಟಿರುತ್ತಾರೆ. ಕಾಲವು ಕೂಡ ಲುಪ್ತವಾಗಿಸದ ಕಾಲತೀತ ವ್ಯಕ್ತಿಗಳಾಗಿಬಿಟ್ಟಿರುತ್ತಾರೆ. ಅದು ಹೇಗೆ? ಎಂಬ ಪ್ರಶ್ನೆಯ ಬೆನ್ನತ್ತಿ ಹೊರಟಾಗ ನಮಗೆ ಒಮ್ಮೆಲೇ ಗೋಚರಿಸುವುದು ಅವರ ಮೌಲ್ಯಭರಿತ ಸಾತ್ವಿಕ ಬದುಕು. ಮಾತು-ಕೃತಿ ಬೆರೆತ ಅವರ ಬದುಕೇ ಜಾಹೀರಾತಾಗಿ ಬಿಟ್ಟಿರುತ್ತದೆ. ಇಂತಹ ನೂರಾರು ಮಹಾತ್ಮರ ಪಂಕ್ತಿಗೆ ನಿಸ್ಸಂದೇಹವಾಗಿ ಸೇರಿಕೊಳ್ಳಲೇ ಬೇಕಾದವರು ಮೇಧಾ ಪಾಟ್ಕರ್ ಕೂಡ ಒಬ್ಬರು.

ರಾಜ್ಯ ಸರ್ಕಾರದ ೨೦೧೦ ಸಾಲಿನ ಪ್ರತಿಷ್ಠಿತ ಬಸವ ಪುರಸ್ಕಾರಕ್ಕೆ ಮೇಧ ಪಾಟ್ಕರ್ರವರ ಸಾಮಾಜಿಕ ನ್ಯಾಯಾಕ್ಕಾಗಿ ಹೋರಾಟ ಹಾಗು ದೇಶವ್ಯಾಪ್ತಿ ಜನಪರ ಚಳವಳಿಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಗುರುತಿಸಿ ಅವರನ್ನು ಸಂಶೋಧಕ ಡಾII ಎಂ.ಎಂ. ಕಲಬುರ್ಗಿ ನೇತೃತ್ವದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ೧೦ ಲಕ್ಷ ರೂ ನಗದು, ಪ್ರಶಸ್ತಿಪತ್ರ ಸ್ಮರಣಿಕೆ ಒಳಗೊಂಡಂತಹ ಬಸವ ಪ್ರಶಸ್ತಿಯನ್ನು ಸ್ವಿಕರಿಸಲು ಮೇಧಾ ಪಾಟ್ಕರ್‍ರವರು ನಿರಾಕರಿಸಿದ್ದಾರೆ. ಅವರು ನಿರಾಕರಿಸಿರುವ ಸುದ್ದಿ ಸುದ್ದಿಯಾಗುವ ಮೊದಲೇ ಬೇಕೆಂದೇ ಕಣ್ಮರೆಯಾದಂತಿದೆ. 

ಇಂತಹ ಪ್ರತಿಷ್ಠೆಯ ಪುರಸ್ಕಾರವನ್ನು ನಿರಾಕರಿಸಿದರವಲ್ಲಿ ಮೇಧಾ ಪಾಟ್ಕರ್‍ವರು ಮೊದಲಿಗರೇನು ಅಲ್ಲ. ನಾನಾ ಕಾರಣಗಳಿಂದಾಗಿ ರೀತಿಯ ಪ್ರಶಸ್ತಿಯನ್ನು ನಿರಾಕರಿಸಿರುವ ನೂರಾರು ಜನರ ತಾಜಾ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆದರೂ ಮೇಧಾ ಪಾಟ್ಕರ್ರವರ ನಿರಾಕರಣೆ ನನ್ನನು  ಕಾಡಿದಾದರು ಏಕೆ?
ತನ್ನ ಕಾರ್ಯಕ್ರಮಗಳನ್ನು ಒಪ್ಪಿ ಅವುಗಳಲ್ಲಿ ಬೇಕು ಬೇಕಾಂತಲೇ extraordinaryನು ಕಾಣುವ ಹೊಗಳು ಭಟ್ಟರಿಗೆಂದೇ ಪ್ರಶಸ್ತಿಗಳನ್ನು ಮೀಸಲಿಟ್ಟಿರುವ ನಮ್ಮ ಸರ್ಕಾರ, ಅಪವಾದವೆಂಬಂತೆ ಭಾರಿ ಸಿಕ್ಕ ಸಿಕ್ಕ ಅವಕಾಶಗಳನ್ನು ಬಿಡದೆ, ಸರ್ಕಾರದ ಆಷಾಡಭೂತಿತನವನ್ನು, ಭ್ರಷ್ಟತೆಯನ್ನು ಏಕಏಕಾಗಿಯಾಗಿ ಖಂಡಿಸಿದ ಮೇಧಾ ಪಾಟ್ಕರ್ರವರಂತಹ ಯೋಗ್ಯ ಮಹಿಳೆಗೆ ಬಸವ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿರುವುದೇ ಒಂದು ಅದ್ಭುತ. ಇಂತದರಲ್ಲಿ ಪ್ರಶಸ್ತಿಗೆ ಮೇಧಾ ಪಾಟ್ಕರ್ರವರು ಒಲ್ಲೆ ಎಂದಿರುವುದು ಎಷ್ಟೂ ಸಮಂಜಸ?
ಸುಮಾರು ೧೧ನೇ ಶತಮಾನದ ಅನುಭಾವಿ, ಸಮಾಜ ಸುಧಾರಕ, ಕ್ರಾಂತಿಕಾರ, ಪ್ರವಾದಿ ಬಸವಣ್ಣನವರ ಹೆಸರಿನಲ್ಲಿ ನೀಡುತ್ತಿರುವ ಪುರಸ್ಕಾರಕ್ಕೆ ತಾವು ಯೋಗ್ಯರಲ್ಲವೆಂಬ ಭಾವನೆ ಮೇಧಾರನ್ನು ಕಾಡಿತೇ? ಸುಮಾರು ೨೭ ವರ್ಷಗಳಿಂದ ನರ್ಮದಾ ಬಚಾವೋ ಅಂದೋಲನದ ರೂವಾರಿಯಾಗಿ, ಮಾನವಹಕ್ಕುಗಳ ಹುಟ್ಟು ಹೋರಾಟಗಾರ್ತಿಯಾಗಿ, ಪರಿಸರವಾದಿಯಾಗಿ ದೇಶವ್ಯಾಪ್ತಿ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾಲ್ಗೊಳ್ಳುತ್ತಾ ಬಂದಿರುವ ಮೇಧಾ ಪಾಟ್ಕರ್‍ರವರು ಬಸವ ಪ್ರಶಸ್ತಿಯನ್ನು ಪಡೆಯಲು ಆರ್ಹರಲ್ಲವೇ? ಸ್ಲಂ ನಿವಾಸಿಗಳ, ದಲಿತರ ಅಲ್ಪಸಂಖ್ಯಾತರ, ಆದಿವಾಸಿಗಳ, ರೈತರ, ಪರಿಸರವಾದಿಗಳ ಜತೆ ಗುರುತಿಸಿಕೊಂಡಿರುವ ಮೇಧಾ ಪಾಟ್ಕರ್ರವರು ದನಿರಹಿತ ಜನರ ರಕ್ಷಣೆಗೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಮಾನವತವಾದಿಯೂ ಹೌದು. ಜತೆಗೆ ನಮ್ಮ ರಾಜ್ಯದಲ್ಲೇ ನಡೆದ ಸ್ಲಂ ನಿವಾಸಿಗಳ, ದಲಿತರ ಅಲ್ಪಸಂಖ್ಯಾತರ, ರೈತರ, ಪರಿಸರವಾದಿಗಳ ಚಳುವಳಿ ಮತ್ತು ಅಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರ್ಕಾರವನ್ನು ಛೇಡಿಸಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಆದ್ದರಿಂದ ಬಸವಣ್ಣ ಹೆಸರಿನ ಪುರಸ್ಕಾರಕ್ಕೆ ಮೇಧಾರವರು ಹೇಳಿ ಮಾಡಿಸಿದಂತಹ ವ್ಯಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನೊಂದು ಕಡೆ, ಅವರೇ ಹೇಳುವಂತೆ ಬಸವಣ್ಣನ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದೆಂದರೆ ಅವರ ಪಾಲಿಗೆ ಅದೊಂದು ಗೌರವದ ಸಂಗತಿಯು ಹೌದು. ಆದ್ದರಿಂದ ಮೇಧಾ ಪಾಟ್ಕರವರ ಆರ್ಹತೆಯ ಬಗ್ಗೆ ನಾವು ಅಪ್ಪಿತಪ್ಪಿಯೂ ಸಂಶಯಪಡಲಾಗುವುದಿಲ್ಲ. ಆದರೂ ಪ್ರಶಸ್ತಿಯನ್ನು ಏಕೆ ನಿರಾಕರಿಸಿದರೆಂಬುವುದೇ  ಹಿಡಿ ಹಿಡಿಯಾಗಿ ನಮ್ಮನ್ನು ಕಾಡುವ ಪ್ರಶ್ನೆ.
 ಭ್ರಷ್ಟಚಾರದಲ್ಲೇ ಮುಳುಗಿಹೋಗಿರುವ, ಮಾನವ ಹಕ್ಕಗಳಿಗೆ ಬೆಲೆ ಕೊಡದೆ, ಶೋಷಿತರ ಬಗ್ಗೆ ಅಪ್ಪಿತಪ್ಪಿಯೂ ಕಾಳಜಿ ತೋರದ, ಅಕ್ರಮ ಗಣಿಗಾರಿಕೆ ಮತ್ತು ಆಗಿಂದಾಗೆ ಕಂಡು ಬರುತ್ತಿರುವ ಹಗರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳದೇ ಭ್ರಷ್ಟತೆಯನ್ನು ಉತ್ತೇಜಿಸುತ್ತಿರುವ ಹಾಗು ಭ್ರಷ್ಟಚಾರದ ಪ್ರತೀಕವೇ ಆಗಿ ಹೋಗಿರುವ ಜನವಿರೋಧಿ ಸರ್ಕಾರದಿಂದ ಬಸವಣ್ಣ ಪ್ರಶಸ್ತಿ ಪಡೆಯುವುದು ಎಷ್ಟ ಸರಿ? ಅಂತಹ ಪ್ರಶಸ್ತಿಯನ್ನು ನೀಡಲು ನಮ್ಮ ಸರ್ಕಾರ ಆರ್ಹವೇ? ಭ್ರಷ್ಟ ಸರ್ಕಾರದಿಂದ ನೈತಿಕತೆಯ ಪ್ರಶಸ್ತಿ ಪಡೆಯುವ  ಅಗತ್ಯವಾದರೂ ಏನು?
ತನ್ನ ವಿರುದ್ಧ ಮಾತನಾಡುವ ಚಳುವಳಿಗಾರರನ್ನು ಬಾಯಿಮುಚ್ಚಿಸಲು ನಮ್ಮ ಸರ್ಕಾರಗಳ ಕೈಗಳಲ್ಲಿ ಅನೇಕ ರೆಡಿಮೇಡ್ ತಂತ್ರಗಳಿವೆ. ಪ್ರತಿಭಟನಕಾರರನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಿ, ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಸೃಷ್ಟಿಸಿ ಸೆರೆಮನೆಗೆ ತಳ್ಳುವ ಒಂದು ತಂತ್ರವಾದರೆ, ತನ್ನ ವಿರೋಧಿಗಳನ್ನು (ಚಳಿವಳಿಗಾರರು) ಗುರುತಿಸಿ ಯಾವುದೋ ಒಂದು ಪರಿಷತ್ತಿನ ಅಧ್ಯಕ್ಷಗಿರಿಯೋ ಅಥವಾ ಪ್ರಶಸ್ತಿಗಳನ್ನು ಕೊಟ್ಟೋ ತಮ್ಮ ಪಾಲುದಾರಾಗಿಸಿಕೊಳ್ಳುವ ತಂತ್ರ ಇನ್ನೊಂದು. ಬರಹಗಾರ, ತತ್ತ್ವ ಜ್ಞಾನಿ, ನಾಟಕಗಾರ, ಅಸ್ತಿತ್ವವಾದದ ಪ್ರತಿವಾದಕ ಜೀನ್‌-ಪಾಲ್ಸಾರ್ತ್ರ್‌ಗೆ ೧೯೬೪ರಲ್ಲಿ ನೊಬೆಲ್ ಪ್ರಶಸ್ತಿ ಬಂದಾಗ, ಪ್ರಶಸ್ತಿಯು ಬರಹಗಾರನನ್ನು ಒಂದು ವ್ಯವಸ್ಥೆಯಾಗಿಸಿಬಿಡುವುದಲ್ಲದೆ, ವ್ಯವಸ್ಥೆಯ ಪಾಲುದಾರನಾಗಿಸಿ ಅವನ ಬರಹಗಳ ಪರಿಣಾಮವನ್ನು ಕ್ಷೀಣಿಸಿಬಿಡುತ್ತದೆ ಎಂದು ನೋಬೆಲ್ ಪ್ರಶಸ್ತಿಯನ್ನು ಬಟಾಟೆಗಳ ಚೀಲಕ್ಕೆ ಹೋಲಿಸಿ, ತನಗೆ ದೊರೆತಿದ್ದ ಇತರ ಪ್ರಶಸ್ತಿಗಳಂತೆಯೇ ಅದನ್ನೂ ನಿರಾಕರಿಸಿದ್ದನು. ಹೌದು ಭ್ರಷ್ಟ ಸರ್ಕಾರದಿಂದ ಪ್ರಶಸ್ತಿ ಪಡೆಯುವುದೆಂದರೆ ಭ್ರಷ್ಟ ಸರ್ಕಾರದ ಜೊತೆ ರಾಜಿ ಮಾಡಿಕೊಂಡಂತೆಯೇ. ರೀತಿಯ ರಾಜಿಗಳು ಚಳುವಳಿಗಳ ನೈತಿಕತೆಯನ್ನು ತಿಂದು ಬಿಡುವುದಲ್ಲದೇ, ಚಳುವಳಿಗಳ ಮೂಲ ಉದ್ದೇಶವನ್ನೇ ಬ್ಲ್ಯಾಕ್‍ಮೇಲ್ ಮಾಡಿಬಿಡುತ್ತದೆ.
ಹಿನ್ನಲೆಯಲ್ಲಿ ಮೇಧಾಪಾಟ್ಕರ್ರವರ ನಿಲುವು ಮೆಚ್ಚತಕ್ಕದೆ. ಭ್ರಷ್ಟ ಸರ್ಕಾರದಿಂದ ಪ್ರಶಸ್ತಿಯನ್ನು ಸ್ವೀಕರಿಸದೆ ತಮ್ಮ ಹೋರಾಟದ ನೈತಿಕತೆಯನ್ನು ಕಾಪಾಡಿಕೊಂಡಿದ್ದಾರೆ. ಭ್ರಷ್ಟ ಸರ್ಕಾರದ ಜೊತೆ ಕೈ ಜೋಡಿಸಲು ನಿರಾಕರಿಸಿದರೆ. ಜತೆಗೆ ಪುರಸ್ಕಾರವನ್ನು ನಿರಾಕರಿಸುವುದರ ಮೂಲಕ ಸರ್ಕಾರದ ಆತ್ಮ ವಿಮರ್ಶೆಗೆ ಕರೆನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸುವವರ ಆರ್ಹ ಮಾತ್ರ ಮುಖ್ಯವಲ್ಲ ಪ್ರಶಸ್ತಿಗಳನ್ನು ನೀಡುವವರ ಯೋಗ್ಯತೆಯು ಅಷ್ಟೇ ಮುಖ್ಯ ಎಂದು ಸರ್ಕಾರದ ಕಿವಿಹಿಂಡಿದ್ದಾರೆ.
ಸರ್ಕಾರದ ಪ್ರಶಸ್ತ್ರಿಗಳನ್ನು ಪಡೆಯಬೇಕೆಂಬ ಎಕೈಕ ಅಸೆಯಿಂದ ಅಡ್ಡ ದಾರಿಹಿಡಿಯುವ ನೂರಾರು ಜನರು ನಮ್ಮ ಮಧ್ಯೆ ಇರುವಾಗ, ಮನೆ ಬಾಗಿಲಿಗೆ ಬಂದ ಪುರಸ್ಕಾರವನ್ನು ನಿರಾಕರಿಸುವುದೆಂದರೆ ಏನು? ರೀತಿಯ ನಿರಾಕರಣೆ ಒಂದು ಸಮಾನ್ಯವಾದ ಕೃತ್ಯವಲ್ಲ. ತನ್ನ ಬದುಕಿನ ನಿಲುವುಗಳ ಹಾಗು ಆದರ್ಶಗಳ ಕುಲುಮೆಯಲ್ಲಿ ರೂಪುಗೊಂಡ convinced ಬದ್ದತೆ ಮತ್ತು ಸಂಕಲ್ಪ. ಆದ್ದರಿಂದ ಮೇಧಾ ಪಾಟ್ಕರ್ರವರ ನಿರಾಕರಣೆ ಜನಪ್ರಿಯತೆಯ ಗಿಮಿಕಾಗದೆ, ಅವರ ಆತ್ಮಸಾಕ್ಷಿಯ ನಡೆಯೆಂದು ನಿಸ್ಸಂಕೋಚವಾಗಿ ಒಪ್ಪಿಕೊಳ್ಳಬಹುದು. ಅವರ ಒಂದು ನಡೆ ನಮಗೆಲ್ಲಾ ಆದರ್ಶ ಪಾಠವಾಗಲಿ.
ಜೋವಿ
(vpaulsj@gmail.com)
Read more!