Sunday, 27 November 2011

ಕುಲಜ


Read more!
ಪ್ರೀತಿಯ ಅನುಗೆ,
ಸ್ನೇಹಾಂಜಲಿ. ಹಲವಾರು ವರ್ಷಗಳಿಂದ ಗರ್ಭಕಟ್ಟಿಕೊಂಡಿದ್ದ ಕುಲಜ ಎಂಬ ಸಣ್ಣ ಕಥೆ, ಅಕ್ಷರ ರೂಪದಲ್ಲಿ ಪ್ರಸವಗೊಂಡಿದೆ. ನನ್ನ ವೈಯಕ್ತಿಕ ಅನುಭವ ಮತ್ತು ಕಲ್ಪನ ಶಕ್ತಿಯ ಕೂಡಿನಿಂದ ಹುಟ್ಟಿದ ಕೂಸಿದು. ಈ ಕಥೆಯನು ಓದಿ ಪ್ರತಿಕ್ರಿಯಿಸುವೆ ಎಂಬ ಉನ್ನತ ಭರವಸೆಯಿಂದ … ಕಥೆಯ ಓದಿಗೆ ನಿನ್ನನ್ನು ವಿನಯದಿಂದ ಸ್ವಾಗತಿಸುತ್ತೇನೆ…. Happy reading!!

ಕುಲಜ
ಕೊಲ್ಲುವವನೇ ಮಾದಿಗ.. ಕೊಲ್ಲುವವನೇ ಮಾದಿಗ.. ಹೊಲಸು ತಿಂಬುವವನೇ ಹೊಲೆಯ,
ಹೊಲೆಯ….. ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು…
ಮಗಳು ಬಾಯಿಪಾಠ ಮಾಡುತ್ತಿದ್ದ ವಚನವು ಮುಂಭಾಗದ ಕೋಣೆಯಲ್ಲಿದ್ದ ರಾಜಣ್ಣ ಗೌಡ್ರಿಗೆ ಚೆನ್ನಾಗಿ ಕೇಳಿಸುತಿತ್ತು. ಅದೇ ಕೋಣೆಯ ಒಂದು ಮೂಲೆಯಲ್ಲಿ ಹೆಸರಿಗೆ ತಕ್ಕಂತೆ ಮೈ ಬಣ್ಣ ಹೊಂದಿದ್ದ ಕರಿಯ ಕೂತಿದ್ದ. ಕಾಕಿ ಚಡ್ಡಿ..ತ್ಯಾಪೆಗಳ ಅಂಗಿ…ಅವನ ವ್ಯಾಸಕ್ಕೆ ತಕ್ಕಂತಿದ್ದವು. ಗೌಡ್ರ ಮನೆಯ ಮಾಮೂಲು ಗಿರಾಕಿಯಾಗಿದ್ದ ಉಲ್ಲಾಸಪ್ಪ.. ಗೌಡ್ರ ಪಕ್ಕದಲೇ ಇದ್ದ ಕುರ್ಚಿ ಮೇಲೆ ಕುಳಿತು..ಗೌಡ್ರ ಜೊತೆಗೆ ಮಾತಿಗಿಳಿಯಲು ಯಾವುದೋ ಘನವಾದ ವಿಷಯದ ಹುಡುಕಾಟದಲ್ಲಿರುವಂತೆ ಕಂಡು ಬಂದರು. ಗೌಡ್ರ ಪಕ್ಕದ ಮನೆಯವ ಇಡೀ ಊರಿಗೆ ಕೇಳಿಸುವಂತೆ ರೇಡಿಯೋ ಹಚ್ಚಿದ್ದನು…
“ತುತ್ತು ಅನ್ನ ತಿನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ” ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡಿಗೆ ಕರಿಯ ಕೈಯಲ್ಲಿದ್ದ ಬೆಂಕೆಪೊಟ್ಟಣದ ಸಹಾಯದಿಂದ ತಾಳ ಹಾಕುತ್ತಿದ್ದ. ತಕ್ಷಣ ಎನೋ ಹೊಳ್ದದಂತೆ “ಗೌಡ್ರೆ ನಮ್ ಕೇರಿಲಿ ನೆನ್ನೆ ರಾತ್ರಿ ಅಂತೋಣಪ್ಪ ಗಂಟ್ಲು ತುಂಬಾ ಕುಡ್ದು ಸಿಕ್ಕಾಪಟ್ಟೆ ಜಗ್ಳ ಮಾಡ್ದ ಗೌಡ್ರೆ… ಎಂದು ಅಲ್ಪವಿರಾಮ ಕೊಟ್ಟು ..ಕಥೆಯನ್ನು ಇನ್ನೇನು ಮುಂದುವರಿಸಬೇಕು ಅಷ್ಟ್ರಲ್ಲಿ ಶಿವ್ ಪೂಜೆಯಲ್ಲಿ ಕರಡಿ ಬಿಟ್ಟಂತೆ ಉಲ್ಲಾಸಪ್ಪ..”ನಿಮ್ ಜಾತಿಯವ್ರೆ ಅಂಗೆ..ಯಾವಗ್ಲೂ ಹುಚ್ಚು ನಾಯಿಗಳಂಗೆ ಕಚ್ಚಾಡೋದೇ ನಿಮ್ ಕೆಲ್ಸ” ಎಂದು ಹೀಯಾಳಿಸಿ ಕಥೆ ಹೇಳುತ್ತಿದ್ದ ಕರಿಯನ ಮುಖವನ್ನು ಸಣ್ಣದಾಗಿಸಿದ.
ಆ ಅಂತೋಣಪ್ಪನ ಹೆಂಡ್ರು ಅವ್ಳಾತ್ರ ಇರೋ ಮಗುನಾ ಜನಕ್ಕೆ ತೋರ್ಸಕೊಂಡು… ಇದು ಚಿನ್ನಿದು ಮಗು ಅಂತಾ ಸಾರ್ಕೊಂಡು ಬರ್ತಾಳಂತೆ. ಅದ್ಕೆ ಚಿನ್ನಿ ಎಲ್ಲಿ ಹೂಲೆಯಾಳ ಜೊತೆ ಮಲಗಿದ್ದ ಅಂತಾ ,, ಜನರು ಆಡ್ಕೋತಾರೆ ಅಂತಾ.. ಅಂತೋಣಪ್ಪಗೆ ಚೆಂದಾಗಿ ಕುಡ್ಸಿ ಹೆಂಡ್ತಿಯ ಬಾಯಿಮುಚ್ಚಿಸೋಕೆ ಹೇಳಿ ಕಳ್ಸಿದ್ನಂತೆ” ಕಥೆ ಹೇಳಿ ಮುಗಿಸುವಷ್ಟರಲ್ಲಿ, ನಾಗಮ್ಮ ಹೋಟ್ಲಿಂದ ನಂಜುಂಡ ಬಿಸಿ ಬಿಸಿ ಕಾಫಿ ತಂದ. ಗೌಡ್ರ ಹೆಂಡ್ತಿ ಇವತ್ತು ಬೆಳ್ಳಿಗೆನೇ ಬಟ್ಟೆ ಹೊಗೆಯುವುದಕ್ಕೆ ತೊರೆಗೆ ಹೋಗಿದ್ದರಿಂದ ಗೌಡ್ರ ಮನೆಯ ಮಾಮೂಲು ಗಿರಾಕಿಗಳಿಗೆ ಗೌಡ್ರ ಮನೆಯ ಸ್ಟ್ರಾಂಗ್ ಕಾಫಿ ಕುಡಿಯುವ ಪುಣ್ಯ ತಪ್ಪಿತ್ತು.
ಬಿಸಿ ಬಿಸಿ ಕಾಫಿ ಕಂಡಾಕ್ಷಣ ಕರಿಯ …ಕೋಣೆಯ ಮೂಲೆಯಲ್ಲಿ ಪ್ರತ್ಯೇಕವಾಗಿ ಇಟ್ಟಿದ ಅಲ್ಯೂಮಿನಿಯಂ ಲೋಟವನ್ನು ಎತ್ಕೊಂಡು ತನ್ನ ಭುಜದ ಮೇಲಿದ್ದ ಹಳೇ ಟವಾಲಿನಿಂದ ಒರೆಸಿಕೊಳ್ಳುತಾ ಕಾಫಿ ಹಾಕಿಸಿಕೊಳ್ಳಲು ಅಣಿಯಾದ.
ನಂಜುಂಡ ಗೌಡ್ರುಗೆ ಹಾಗು ಉಲ್ಲಾಸಪ್ಪಗೆ ಕಾಫಿ ಕೊಟ್ಟು.. ಕರಿಯನ ಅಲ್ಯೂಮಿನಿಯಂ ಲೋಟಕ್ಕೆ ಮೇಲೆತ್ತಿ ತಂದಿದ್ದ ಲೋಟದಿಂದ ಕಾಫಿ ಸುರಿದ. ಆಷ್ಟ್ರಲಿ ಗೌಡ್ರ ಮಗಳು ಶಾಲೆಚೀಲವನ್ನು ಬೆನ್ನಿಗೆ ನೇತಾಕಿಕೊಂಡು .. ಶಾಲೆಗೆ ಹೊರಡುತ್ತಿದ್ದಂತೆ” ಮಗ ನಿಮ್ ಅಮ್ಮ ಇನ್ನೂ ತೂರೆಯಿಂದ ಬಂದಿಲ್ಲ. ಏನಾಯ್ತಂಥ ನೋಡ್ಕೋ ಬರೋಗ್, ಬೆಳ್ಗೆ ಅಷ್ಟೋತ್ಕೆ ಹೋದ್ಳು. ಇನ್ನೂ ಬಂದೇಯಿಲ್ಲ..” ಗೌಡ್ರು ಮಗಳಿಗೆ ಹೇಳುತ್ತಿದಂತೆ “ ಶಾಲೆಗೆ ಟೈಮ್ ಆಯಿತ್ತಾಪ್ಪ ಲೇಟಾದ್ರೆ ಟೀಚರ್ ಹೊಡಿತಾರೆ” ಅಂತಾ ಹೇಳಿ ಮನೆಯಿಂದ ಓಟಕಿತ್ತಳು.
“ಗೌಡ್ರೆ ನನ್ ಮಗ ಸಾಲೆಗೆ ಹೋಗ್ತಿನಿ ಅಂತಾದಾ” ಎಂದು ಕರಿಯ ಗೊಣಗಿದಾಗ, “ನಿಮ್ಮ ಕೇರಿಯವರ್ಗೆ ಶಾಲೆ ಏಕೆ ಬೇಕು ಹೇಳು… ಯಾರದಾದ್ರು ಮನೇಲ್ಲಿ ಸಂಬಳ್ಕೆ ಇರ್ಸು ಅಷ್ಟೋ ಇಷ್ಟೋ ಕೈಗೆ ಸಿಗ್ತದೆ ” ಎಂದು ಉಲ್ಲಾಸಪ್ಪ ಕರಿಯಂಗೆ ಉಚಿತ ಸಲಹೆಯನ್ನಿಟ್ಟು, ಗೌಡ್ರುಗೆ ಸಂಜೆ ಬರುವುದಾಗಿ ಹೇಳಿ, ತನ್ನ ತೋಟದ ಕಡೆ ಹೆಜ್ಜೆ ಹಾಕಿದ. ಕರಿಯ ಕೂಡ ಕೇರಿ ಕಡೆಗೆ ನಡೆದ. ಹೆಂಡ್ತಿ ಯಾಕೆ ತೊರೆಯಿಂದ ಇನ್ನೂ ಬಂದಿಲ್ಲ? ತನ್ನನೇ ಪ್ರಶ್ನೆ ಮಾಡಿಕೊಂಡ. ಪಕ್ಕದ ಮನೆಯ ರೇಡಿಯೋ ಇನ್ನೂ ಜೋರಾಗಿ ಕಿರುಚಿಕೊಳ್ಳುತ್ತಿತ್ತು.
ಯಾಕೆ ಇಷ್ಟು ಲೇಟ್? ತಲೆಕೂದಲೆಲ್ಲ ಕೆದರಿದೆ, ಬಟ್ಟೆ ಬರಿಯಲ್ಲ ಮಣ್ಣಾಗಿದೆ ಏನಾಯ್ತು? ರಾಜಪ್ಪ ಕಣ್ಣು ಬಾಯಿಬಿಟ್ಟುಕೊಂಡು ಕೇಳುತ್ತಿದಂತೆ” ತೊರೆಯಿಂದ ಬಟ್ಟೆ ಒರುವಾಗ ತಲೆಸುತ್ತಾಂಗಾಗಿ. ಬಿದ್ಬಿಟ್ಟೆ.” ಎಂದು ಹೇಳಿ ಮನೆ ಒಳ ನಡೆದಳು. “ರಾಜಪ್ಪ ಎನೋ ನೆನಸಿಕೊಂಡು ಮನೆಯ ಹೂರಗೆ ಬಂದು ನಿಂತ ಕೆಲಕ್ಷಣಗಳಲ್ಲೇ… ಕೆಲ ಜನರು ಕೆಟ್ಟ ಮಾತುಗಳಿಂದ ಬೈಯುತ್ತಾ ಹುಚ್ಚು ಕೆಂಚಣ್ಣನನ್ನು ದೊಣ್ಣೆಗಳಿಂದ ಯದ್ವಾತದ್ವಾ ಹೊಡೆಯುತ್ತಿದ್ದರು. ಹುಚ್ಚು ಕೆಂಚಣ್ಣನ ಅಸಹಾಯಕತೆಯಿಂದ ಮುಗಿಲು ಮುಟ್ಟುವಂತೆ ಕೂಗುತ್ತಿದ್ದರು ಹೂಡೆತ ನಿಲ್ಲಲಿಲ್ಲ. “ರಾಜಪ್ಪನವರೇ ಆ ಮಾದ್ಗ ಹುಚ್ಚು ಕೆಂಚಣ್ಣ ನಮ್ಮ ಬಾವಿಯಿಂದ ನೀರು ಸೇದಿ ಮೈಲಿಗೆ ಮಾಡಿದ್ದರಿಂದ ಜನರು ಅವನನ್ನು ಹಿಟಾಡಿಸಿಕೊಂಡು ಬಡಿಯುತ್ತಿದ್ದಾರೆ.. “ ಊರವ ಎಂದಾಕ್ಷಣವೇ ರಾಜಪ್ಪನವರ ಮುಖ ಕೋಪದಿಂದ ಕೆಂಡಮಂಡಲವಾಯಿತ್ತು. ಈ ಕಡೇ ಕೆಂಚಣ್ಣನ ಸ್ಥಿತಿ ಹಸಿದ ಹುಲಿಗೆ ಸಾರಗ ಸಿಕ್ಕಿದಂತಾಗಿತ್ತು. “ನಮ್ಗಿದ್ದದು ಒಂದು ಬಾವಿ, ಹಾಳಾದವ್ನೇ ಅದ್ನು ಮೈಲಿಗೆ ಮಾಡ್ಬುಟ್ಟಲೋ ನಾವು ನೀರಿಗೆ ಏನ್ಮಾಡೊದು?” ಎಂದು ಒಬ್ಬ ಕೆಂಚಣ್ಣ ಎದೆ ಮೇಲೆ ಒದ್ರೆ, ಇನ್ನೊಬ್ಬ ಊರಲ್ಲಿ ಇರೋದು ಒಂದೇ ಬೋರ್ ವೆಲ್ ಅದ್ರಲ್ಲೂ ಸರಿಯಾಗಿ ನೀರು ಬರೋಲ್ಲ.. ಒಂದು ಮೈಲಿ ದೂರ ಬೇರೆ ನಾವು ನೀರಿಗೆ ಏನ್ಮಾಡ್ಕೊಂಡು ಸಾಯೋದ್ ? ಪ್ರಶ್ನೆ ಕೇಳುತ್ತಲೇ ದೊಣ್ಣೆಯಿಂದ ತಲೆಗೆ ಬಡಿದ, ಹೀಗೆ ಜನರೆಲ್ಲಾ ಸೇರಿ ವಿಚಾರಿಸದೆ ಯದ್ವಾತದ್ವಾ ಹೊಡೆದು ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬೀದಿಯಲ್ಲೇ ಬಿಟ್ಟು ಹೋದರು.ಅವನ ಕಪ್ಪು ಮೈ ಬಣ್ಣ ಕೆಂಪಾಗಿತ್ತು.ಮುಖ ನೋವಿನಿಂದ ಕಿವುಚಿಕೊಂಡಿತ್ತು. .. ರಸ್ತೆಯಲ್ಲಿ ಅಸಹಾಯಕತೆಯಿಂದ ಬಿದ್ದಿದ್ದ ಹುಚ್ಹು ಕೆಂಚಣ್ಣ ಕಷ್ಟದಿಂದ ಎದ್ದು.. ಮುಖ ಒರೆಸಿಕೊಳ್ಳುತ್ತಾ… “ತೊರೆಯಿಂದ ಬರುತ್ತಿದ್ದ . ಹೆಣ್ಣ್ ಮಗ್ಳುತಲೆ ತಿರುಗಿ ಬಿದ್ದರಿಂದ ನಾನು ಬಾವಿಯಿಂದ ನೀರು ಸೇದಿ..ಅವಳ್ಗಿ ನೀರು ಕುಡ್ಸಿ.. ಎಬ್ಬಿಸಿ ಕಳ್ಸಿದು ತಪ್ಪಾ?...ಎಂದು ಅಳುತ್ತಾ ತನ್ನನ್ನೇ ಕೇಳಿಕೊಳ್ಳುತ್ತಾ ಮೇಲೇಳಲು ಪ್ರಯತ್ನಿಸುತ್ತಿದಂತೆ… ಗೌಡ್ರ ಹೆಂಡತಿ ತೊಳೆದ ಬಟ್ಟೆಯನ್ನು ಒಣಗಲು ಮನೆಯ ಮುಂದಿದ್ದ ತಂತಿ ಮೇಲೆ ಹಾಕುತ್ತಾ.. ಸುತ್ತಮುತ್ತಲು ಕಣ್ಣು ಹಾಯಿಸಿ ಅಸಹಾಯಕತೆಯಲ್ಲಿ ಅಳುತ್ತಾ ಮೇಲೇಳುತ್ತಿದ್ದ ಹುಚ್ಚು ಕೆಂಚಣ್ಣನನ್ನು ಕಣ್ಣಂಚಿಂದಲ್ಲೇ ನೋಡಿ.. ಮರುಗುತ್ತಾ ಮನೆಸೇರಿಕೊಂಡಳು. ಅವನ ಮನೆಯವರು ಬಂದು ಅವನ್ನು ಬೈಯುತ್ತಾ ಕರೆದುಕೊಂಡು ಹೋದರು. ಜನರ ವರ್ತನೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿತ್ತು. ಕೆಂಚಣ್ಣಗೆ ಬಿದ್ದ ಹೊಡೆತಗಳು ಕೇವಲ ಅವನ ಕೃತ್ಯಕ್ಕೆ ಶಿಕ್ಷೆ ಮಾತ್ರ ಅಗಿರಲಿಲ್ಲ, ಊರಲಿದ್ದ ಇತರ ಹೊಲೆಯರಿಗೆ ಎಚ್ಚರಿಕೆಯ ಗಂಟೆಯಾಗಿತ್ತು.
ಮೈಲಿಗೆ ಆದ ಬಾವಿ ಪಾಳಾಯ್ತು. ಕುಡಿಯುವ ನೀರಿಗಾಗಿ ಜನರು ಊರಿನಲ್ಲಿದ್ದ ಒಂದೇ ಒಂದು ಬೋರ್ ವೆಲ್ ಮೇಲೆ ಅವಲಂಬಿತರಾದ್ದರು. ಒಂದೇ ಒಂದು ಬೋರ್ ಊರಿನ ಜನರಿಗೆ ಎಷ್ಟ ದಿನ ನೀರು ಕೊಡಲು ಸಾಧ್ಯ?. ಕೆಲವು ದಿನಗಳ ನಂತರ ಬೋರ್ ಕೂಡ ಮಿತಿಮೀರಿದ ಬಳಕೆಯಿಂದ ಕೆಟ್ಟಿತ್ತು. ಬೇಸಿಗೆಯಾದ್ದರಿಂದ ತೊರೆಯಲ್ಲಿ ಕೂಡ ನೀರು ಸುಂಡಿತ್ತು.ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಯಿತ್ತು. ಕೆಲ ಜನರು ತಮ್ಮ ತೋಟದ ಬಾವಿಗಳಿಂದ ಎತ್ತಿನಗಾಡಿಗಳ ಮೂಲಕ ದೊಡ್ಡ ದೊಡ್ಡ ಡ್ರಮ್ ಗಳಲ್ಲಿ ನೀರು ತುಂಬಿಸಿ ತರಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಊರಿನಲ್ಲಿದ್ದ ಜಾತಿವ್ಯವಸ್ಥಯ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದ ಇಗರ್ಜಿಯ ಗುರುಗಳು ಯಾವುದೇ ರೀತಿಯ ಫಲಕಾಣದೆ ಮೌನಕ್ಕೆ ಶರಣಾಗಿದ್ದರು.
ಒಂದು ದಿನ ವಿಚಾರಣೆಗೆ ಹೂಸದಾಗಿ ನೇಮಕಗೊಂಡು ಘಟನೆಯ ಹಿನ್ನಲೆಯ ಬಗ್ಗೆ ಸಾಕಷ್ಟ ಮಾಹಿತಿ ಕಲೆಹಾಕಿದ್ದ ಯುವ ಗುರುಗಳು ಮೈಲಿಗೆಯಾಗಿದ್ದ ಬಾವಿಯಿಂದ ನೀರು ತಂದು ಉಪಯೋಗಿಸಲು ಪ್ರಾರಂಭಿಸಿದರು. ಗುರುಗಳ ಈ ರೀತಿಯ ವರ್ತನೆಯಿಂದ ದಿಗ್ಭ್ರಮೆಗೊಂಡ ಊರಿನ ಜನರು ಗುರುಗಳ ವಿರುದ್ಧ ಪಿತೂರಿ ನಡೆಸಲು ಪ್ರಾರಂಭಿಸಿದರು. ಗುರುಗಳನ್ನು ವರ್ಗಾಯಿಸಬೇಕೆಂಬ ಮನವಿಯೊಂದಿಗೆ ಊರಿನ ನಿಯೋಗವೊಂದು ಬಿಷಪ್ವರನ್ನು ವೈಯಕ್ತಿವಾಗಿ ಬೇಟಿಮಾಡಿ ಬಂದರು. ಒಂದು ದಿನ ಭಾನುವಾರದ ಬಲಿಪೂಜೆಯ ಪ್ರಬೋಧನೆಯ ಸಮಯದಲ್ಲಿ “ಮೈಲಿಗೆಯಾಗಿದ್ದ ಬಾವಿಯಿಂದ ನೀರು ತಂದು ನಾನು ಕುಡಿದರೂ ನನಗೆ ಯಾವ ರೋಗ ಬರಲಿಲ್ಲ … ಸಾಯಲಿಲ್ಲ?” ಎಂದು ಘಟನೆಯ ಬಗ್ಗೆ ಗುರುಗಳು ಹೇಳುತ್ತಿದ್ದಂತೆ.. ಊರಿನ ಕೆಲ ಹಿರಿಯರು, ಕೊನೆಯ ಭೋಜನದ ಸಮಯದಲ್ಲಿ ಗುರುದ್ರೋಹಿ ಯೂದನು ಕ್ರಿಸ್ತನನ್ನು ಬಿಟ್ಟು ಎದ್ದು ಹೊರಟು ಹೋದಂತೆ ದೇವಸ್ಥಾನದಿಂದ ಹೂರ ನಡೆಯಲು ಪ್ರಾರಂಭಿಸಿದರು!!!!!
ಜೋವಿ

Monday, 21 November 2011

ನಾವು ಏಕೆ ಬರೆಯುತ್ತೇವೆ ?

ಪ್ರೀತಿಯ ಅನುಗೆ
ಸ್ನೇಹಾಂಜಲಿ.
ನಾವು ಏಕೆ ಬರೆಯುತ್ತೇವೆ? ತಮ್ಮ ಬಿಡುವಿಲ್ಲದ ಬ್ಯುಸಿ ಲೈಪ್ ನಲ್ಲೂ ಬ್ಲಾಗ್ ಅಥವಾ ಟ್ವಿಟ್ ಮಾಡಲು celebraties ಹೇಗೂ ಸಮಯ ಹುಡುಕಿಕೊಳ್ಳುತ್ತಾರಲ್ಲ ಏಕೆ? ನೀರು, ಊಟ, ನಿದ್ದೆ,, ನಮ್ಮ ಬದುಕಿನ ಅತ್ಯಾವಶ್ಯಗಳ ಪ್ಯಾಕೇಜ್ ನಲ್ಲಿ ಬರೆಯುವುದು..ಶ್ರುತಪಡಿಸುವುದು ಕೂಡ ಒಂದಾ? ಕುವೆಂಪು ಅಷ್ಟೊಂದು ಕವಿತೆ, ಕಾದಂಬರಿಗಳನ್ನು ಏಕೆ ಬರೆದರು? ಕಾರ್ಲ್ ಮಾರ್ಕ್ಸ್ ಏಕೆ ಕ್ಯಾಪಿಟಲ್ ಎಂಬ ಗ್ರಂಥ ಬರೆದ? ಯಾವ ಶಕ್ತಿ ಯು.ಆರ್ ಅನಂತಮೂರ್ತಿಯವರ ಕೈಯಲ್ಲಿ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿರುವ ಸಂಸ್ಕಾರ ಎಂಬ ಕಾದಂಬರಿಯನ್ನು ಬರೆಸಿತ್ತು? ಗಿರೀಶ್ ಕಾರ್ನಾಡ್ ರವರು ನಾಟಕಗಳನ್ನು ಬರೆಯಲು ಕಾರಣವೇನಿರಬಹುದು? ಪ್ರರ್ತಕರ್ತರು ದಿನಪ್ರತಿ ಅಷ್ಟೊಂದು ಬರೆದು ದಿನಪತ್ರಿಕೆಯನ್ನು ತುಂಬಿಸುತ್ತಾರಲ್ಲ.. ಕಾರಣವೇನಿರಬಹುದೆಂದು ಎಂದಾದರೂ ನಾವು ಯೋಚಿಸಿದ್ದೇವೆಯೇ? ಮೊನ್ನೆ ರಾಜಕಾರಣಿಯೊಬ್ಬರು ಪ್ರಸ್ತುತ ಸರ್ಕಾರದ ದೌರ್ಬಲ್ಯ ಭ್ರಷ್ಟತೆ ಹಾಗು ನಿಷ್ಕ್ರಿಯತೆಗಳನ್ನು ಜನರಿಗೆ ತಿಳಿಸಲು ಕವಿತೆಗಳ ಮೊರೆ ಹೋಗಿದ್ದಾರಂತೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ೨೪ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ತಮ್ಮ ೪೦ ವರ್ಷಗಳ ಹೋರಾಟ ಬದುಕಿನ ವಿವರಗಳನ್ನು ಡೈರಿ

ಯಲ್ಲಿ ಬರೆದಿದ್ದಾರಂತೆ!
ಸರ್ಕಾರಗಳ ನಿರ್ಬಂಧವಿದ್ದರೂ ಅನೇಕರು ಸರ್ಕಾರದ ವಿರುದ್ಧ ಬರೆದು ಜೈಲು ಅಥವಾ ಗಡೀಪಾರಾದ ಅನೇಕ ಉದಾಹರಣೆಗಳು ನಮಗೆ ಇತಿಹಾಸದಲ್ಲಿ ಕಾಣಸಿಗುತ್ತವೆ. ಕೆಲವರಂತೂ ಬರೆಯುವುದಕ್ಕಾಗಿಯೇ ಮನೆ, ಆಸ್ತಿ, ಕುಟುಂಬ, ದೇಶ ಕೊನೆಗೆ ತಮ್ಮ ಪ್ರಾಣಗಳನ್ನೇ ಕಳೆದುಕೊಂಡ ಹಸಿ ಸತ್ಯ ನಮ್ಮ ಮುಂದಿದೆ. ಆದ್ದರಿಂದ ಬರೆಯುವುದು ಒಂದು ಗೀಳಾ? ಅಥವಾ ಪ್ರೊಫೆಶನಾ? ಒಡಲಾಳಿನ ಕರೆ ಅಥವಾ ಕೂಗಾ? ನಾನಾ ಕಾರಣಗಳಿಗೆ ನಾವು ಬರೆಯಬಹುದು. ಕೆಲವರಿಗೆ ಅದೊಂದು ಉದ್ಯೋಗವಾಗಿರಬಹುದು, ಇನ್ನೂ ಕೆಲವರಿಗೆ ಅನೇಕ ಹವ್ಯಾಸಗಳಲ್ಲಿ ಬರೆಯುವುದು ಒಂದು ಹವ್ಯಾಸವಾಗಿರಬಹುದು. ಮತ್ತೆ ಕೆಲವರು ತಮ್ಮ ಅಂತರಂಗದ ಭಾವನೆಗಳನ್ನು ಹೂರಹಾಕಲು ಬರವಣಿಗೆಯನ್ನು ಆಯ್ಕೆ ಮಾಡಿಕೊಂಡಿರಬಹುದು. ಕೆಲವರಿಗಂತೂ ಸಂತೋಷದ ಮೂಲ ಬುಗ್ಗೆಯೇ ಬರವಣಿಗೆಯಾಗಿರಬಹುದು. ಆದರೆ ಬರವಣಿಗೆ ಇಲ್ಲದ ಜಗತ್ತನ್ನು ಒಮ್ಮೆ ಊಹಿಸಿ ನೋಡಿ.. ಬರವಣಿಗೆ ಎಷ್ಟೂ ಅನಿವಾರ್ಯವೆಂದು ಒಡನೆ ನಮಗೆ ಗೋಚರಿಸಿಬಿಡುತ್ತದೆ.
ಜಾರ್ಜು ಅರ್ವೆಲ್ ಎಂಬುವನು ತನ್ನ ಲೇಕನದಲ್ಲಿ ನಾವು ಏಕೆ ಬರೆಯುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನಾಲ್ಕು ಪ್ರೇರಕ ಶಕ್ತಿಗಳನ್ನು ಪಟ್ಟಿ ಮಾಡುತ್ತಾನೆ. ಮೊದಲನೆಯದು ನಮ್ಮ ಆಹಂ; ನಾವು ಬರೆಯಲು ಅವಿರತವಾಗಿ ಪ್ರೋತ್ಸಾಹಿಸುವ ಒಂದು ಪ್ರೇರಣಾ ಶಕ್ತಿ. ನಾನು ಬುದ್ಧಿವಂತ, ನಾನು ಎಲ್ಲರ ಹೊಗಳಿಕೆಗೆ ಭಾಜನನಾಗಬೇಕು. ನನ್ನ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಬೇಕು, ನಾನು ಸತ್ತ ನಂತರವು ಜನ ನನ್ನನ್ನು ನೆನೆದು ಹಾಡಿ ಹೊಗಳಿ ಕೊಂಡಾಡಬೇಕೆಂಬ ವೈಯಕ್ತಿಕ ಆಸೆಗಳಿಗೆ ಹಠ ಬಿದ್ದು ಬರೆಯತೊಡಗಬಹುದು. ಈ ರೀತಿಯ ಡ್ರೈವ್ ವಿಜ್ಞಾನಿಗಳಲ್ಲಿ, ವಕೀಲರಲ್ಲೂ..ವಾಣಿಜ್ಯೋದ್ಯಮಿಗಳಲ್ಲೂ ಕೆಲಸಮಾಡುತ್ತಿರುತ್ತದೆ. ಎರಡನೆಯ ಪ್ರೇರಕಾ ಶಕ್ತಿ ರಾಜಕೀಯ ಉದ್ಡೇಶ. ರಾಜಕೀಯ ಎಂಬುವುದು ಇಲ್ಲಿ ವಿಶಾಲಾರ್ಥದಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಜಗತ್ತಿಗೆ ಮಾರ್ಗದರ್ಶನ ನೀಡಲು,,,ಜನರ ಕೆಲವೊಂದು ತಪ್ಪು ಸಿದ್ದಾಂತಗಳನ್ನು ತಿದ್ದಲು,.ಸಮಾಜದ ನೈತಿಕತೆಯನ್ನು ವೃದ್ಧಿಸಲು ಹೀಗೆ ನಾನಾ ಕಾರಣಗಳು ಒಬ್ಬನನ್ನು ಬರೆಯಲು ಪ್ರೋ ತ್ಸಾಹಿಸುತ್ತಿರುತ್ತವೆ. ಮೂರನೆಯ ಕಾರಣ ಐತಿಹಾಸಿಕ ಪ್ರಚೋದನೆಯಿರಬಹುದು. ನಮ್ಮ ನಡುವಿನ ಆಗುಹೋಗುಗಳನ್ನು ನೈಜತೆಯ ಕಣ್ಣುಗಳಲ್ಲಿ ನೋಡಿ ದಾಖಲಿಸಲು, ವಿಷಯಗಳ ಸತ್ಯತೆಯನ್ನು ಹೊರಹಾಕಲು ಅನ್ಯಾಯ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಲು ಜನರು ಬರೆಯುತ್ತಿರುತ್ತಾರೆ. ಕೊನೆಯದು ಸೌಂದರ್ಯಾಸ್ವಾದಕ್ಕೆ ಸಂಬಂಧಿಸಿದ ಶಕ್ತಿ. ಜಗತ್ತಿನ ಸೌಂದರ್ಯವನ್ನು ವರ್ಣಿಸಲು, ಅಥವಾ ಸುಂದರ ಪದಗಳು ಮತ್ತು ಪದಗಳ ಜೋಡನೆಯಿಂದ ರಚನೆಗೊಂಡ ಕಥೆಗಳನಾಗಲ್ಲಿ ಅಥವಾ ಕವಿತೆಗಳನಾಗಲಿ ಇನ್ನೊಬ್ಬರಿಗೆ ತಿಳಿಸಿ ಅದರ ಸ್ವಾದವನ್ನು ಅವರು ಸಹ ಅನುಭವಿಸಲಿ ಎಂಬ ಹಂಬಲದಿಂದ ಬರೆಯುತ್ತೇವೆ. ನಮಗೆ ಅಮೂಲ್ಯವೆನ್ನಿಸುವ ಘಟನೆ ಅಥವಾ ಅನುಭವಗಳನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲು ಸಹ ನಾವು ಬರೆಯಬೇಕಾಗುತ್ತದೆ. ಇನ್ನೊಂದು ಕಡೆ ತಮ್ಮ ಸಿದ್ದಾಂತಗಳನ್ನು promote ಮಾಡಲು, ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೆ ಗುಲಾಮರಾಗಿ ಅವುಗಳನ್ನು ಸಮರ್ಥಿಸಲು, ಜನರ ಮಧ್ಯೆ ಒಡಕನ್ನು ಮೂಡಿಸಿ ಸಾಮರಸ್ಯವನ್ನು ಕೆದಡಲು, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವರ್ಗ, ಜಾತಿ ವ್ಯವಸ್ಥೆಗಳನ್ನು ಸಮರ್ಥಿಸಲು ಹೀಗೆ ನಾನಾ ಕಾರಣಗಳಿಗೋಸ್ಕರ ಬರೆಯುವವರನ್ನು ಸಹ ನಾವು ಕಾಣುತ್ತೇವೆ.
ಬರೆಯುವುದು ಸುಲಭದ ಮಾತಲ್ಲ. ಅದು ಒಂದು ರೀತಿ ಮಗುವಿಗೆ ಜನ್ಮ ಕೊಟ್ಟಾಗೆ. ಅದು ನಮ್ಮ ಶಕ್ತಿಯನ್ನೆಲ್ಲಾ ಹಿಂಡಿ ಹೀರಿ ಬಿಡುವ ಹೆಣಗಾಟ. ಅರ್ಥಮಾಡಿಕೊಳ್ಳಲಾಗದ, ನಿಗ್ರಹಿಸಲಾಗದ ಯಾವುದೋ ಶಕ್ತಿಯಿಂದ ಪ್ರೇರಿತಗೊಂಡವನು ಮಾತ್ರ ಈ ರೀತಿಯ ಸೆಣಸಾಟಕ್ಕೆ ಕೈಹಾಕಬಹುದು. ಕೆಲವೊಮ್ಮೆ ತಮ್ಮ ಅಭಿವ್ಯಕ್ತಿಗೆ ಸರಿಯಾದ ಪದ ಅಥವಾ ವಾಕ್ಯಗಳು ಸಿಗದೆ ನಿದ್ದೆ ಊಟ ಬಿಟ್ಟವರು ಸಹ ನಮ್ಮಲ್ಲಿದ್ದಾರೆ.
ಹೌದು, ನಮ್ಮ ಯೋಜನೆಗಳನ್ನು ಜೀವನ ಅನುಭವಗಳನ್ನು ಅನುಭವಗಳಿಂದ ಕಲಿತೆ ಪಾಠಗಳನ್ನು ಆಂತರಿಕವಾಗಿ ನಮ್ಮಲ್ಲಿ ಹಾದು ಹೋಗುವ ಭಾವನೆಗಳನ್ನು ಆಸೆಗಳನ್ನು ಮತ್ತೊಬ್ಬರ ಮೇಲಿರುವ ಪ್ರೀತಿ ಪ್ರೇಮವನ್ನು ನಾವು ನಂಬುವ ಸಿದ್ಧಾಂತಗಳನ್ನು, ಸರಿ ಅನಿಸುವ ಸಲಹೆಗಳನ್ನು… ಹೀಗೆ ಇತರರಿಗೆ ತಿಳಿಸಲು ಹಂಬಲಿಸುತ್ತೇವೆ. ಹಂಬಲ ಎಷ್ಟೇಂದರೆ ಅದೇ ಜೀವನವೆನ್ನುವ ಮಟ್ಟಿಗೆ. ಇತರರಿಗೆ ತಿಳಿಸಲು ಉಪಯೋಗಿಸುವ ಪ್ರಕಾರ, ಸಾಧನಗಳು ಅಥವಾ ಮಾಧ್ಯಮಗಳು ಯಾವುದೇ ಇರಬಹುದು ಆದರೆ share ಅಥಾವ ಹಂಚುವ ಕಾರ್ಯಮಾತ್ರ must, ಇಂತಹ ಆಸೆ ಅಭಿಲಾಸೆಯಿಂದಲೇ, ಹಂಬಲದಿಂದಲೇ ನಮ್ಮ ಜಗತ್ತಿನಲ್ಲಿ ಅನೇಕ ಲೇಖಕರು, ಶಿಲ್ಪಿಗಳು, ಸಂಗೀತ ವಿದ್ವಾನರು, ಕವಿಗಳು ಹುಟ್ಟಿಕೊಂಡಿರುವುದು. ಜತೆಗೆ ಅನೇಕ ಸೃಜನಾತ್ಮಕ ಪ್ರಕಾರಗಳು, ಸಾಧನಗಳು ರೂಪಿತಗೊಂಡಿರುವುದು. ನಮ್ಮ ಸ್ವರಚಿತ್ತಾರ ನಮ್ಮಲ್ಲಿದ್ದ ಬರೆಯುವ ಹಂಬಲದಿಂದ ಹುಟ್ಟಿಕೊಂಡ ಪುಟ್ಟ ಕೂಸು.. ನಮ್ಮ ನಿಲ್ಲುವುಗಳನ್ನು, ಕಲಿಕೆಗಳನ್ನು, ವೈಯಕ್ತಿಕ ಚಿಂತನೆಗಳನ್ನು ತಿಳಿಸುವ, ಹಂಚಿಕೊಳ್ಳುವ ಒಂದು ವೇದಿಕೆಯನ್ನು ಈ ಬ್ಲಾಗ್ ಸೃಷ್ಟಿಮಾಡಿಕೊಟ್ಟಿದಕ್ಕೆ ಧನ್ಯವಾದ ಹೇಳುತ್ತಾ ಜತೆಗೆ ಅಸತ್ಯ ಅನ್ಯಾಯ, ಜೀವವಿರೋಧಿ, ಶೋಷಣೆ ಹಾಗು ಮನುಷ್ಯನನ್ನು ತುಚ್ಛವಾಗಿ ಕಾಣುವ ಸಿದ್ದಾಂತದ ವಿರುದ್ಧ ಸಾತ್ವಿಕ ಸಿಟ್ಟಿನಿಂದ ಬರೆಯುವ ಎಲ್ಲಾ ಲೇಖಕರನ್ನು ನೆನೆಯುತ್ತಾ ಉದಾತ್ತ ಮೌಲ್ಯಗಳಿಗೆ ಬೆಲೆಕೊಟ್ಟು ಜೀವಪೂರಕ ಬರವಣಿಯ ನೀಡಿ ಮನುಷ್ಯತ್ವ ಬೆಳಗಿದ ಎಲ್ಲಾ ಬರಹಗಾರರಿಗೆ ಧನ್ಯವಾದವನ್ನು ಹೇಳುತ್ತಾ ನನ್ನ ಈ ಲೇಖನಕ್ಕೆ ಶುಭಂ ಹೇಳುತ್ತೇನೆ.
ಜೋವಿ