Friday 20 July 2018

’ಸ್ಪಾಸಿಬೋ’

ಸ್ಪಾಸಿಬೋಎಂಬ ರಷ್ಯನ್ ಪದವನ್ನು ಬರೆದ ಚೀಟೊಯೊಂದನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ  ಬಿಟ್ಟು ಹೋಗಲಾಗಿತ್ತು. ಹಾಗೆ ಹೋಗುವಾಗ ಇಡೀ ಕೋಣೆ ಆಗ ತಾನೇ ಸ್ವಚ್ಛಗೊಂಡಿತ್ತೇನೋ, ಇನ್ನೂ ಯಾರೂ ಉಪಯೋಗಿಸಿಲ್ಲವೇನೋ ಎಂಬಷ್ಟು ಸ್ವಚ್ಛಾತಿ ಸ್ವಚ್ಛ. ರಷ್ಯನ್ ಭಾಷೆಯಲ್ಲಿಸ್ಪಾಸಿಬೋ ಎಂದರೆವಂದನೆಗಳು ಎಂದು ಅರ್ಥ. ವಿಶ್ವಕಪ್ ಬೆಲ್ಜಿಯಂ ವಿರುದ್ಧದ ಪಂದ್ಯದ ನಂತರ ಟೋರ್ನಿಯಿಂದ ಹೊರ ನಡೆದ ಜಪಾನ್ ತಂಡ ತನ್ನ ಡ್ರೆಸ್ಸಿಂಗ್ ಕೋಣೆಯನ್ನು ಪೂರ ಸ್ವಚ್ಛ ಮಾಡಿಟ್ಟು ಹೋದ ಕೋಣೆಯ ಚಿತ್ರ ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ.

ಬಲಿಷ್ಠ ಬೆಲ್ಜಿಯಂ ತಂಡದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮುನ್ನಡೆ ಕಾಯ್ದುಕೊಂಡು ಬಂದು ಕೊನೆಯ ಕ್ಷಣಗಳಲ್ಲಿ ಆಘಾತ ಅನುಭವಿಸಿ ಸೋತದ್ದು ಜಪಾನ್ ತಂಡದೊಡ್ಡ ನಿರಾಸೆ, ದುಖದ ನಡುವೆಯೂ ತಂಡದ ಸದಸ್ಯರು ತೋರಿದ ಸೌಜನ್ಯ, ಸಮಯ ಪ್ರಜ್ಞೆ, ಬದ್ಧತೆ ಇಂದು ವಿಶ್ವದ ಮನೆ ಮಾತಾಗುತ್ತಿದೆ.

 ಇದು ತಂಡದ ಆಟಗಾರರಿಗೆ ಮಾತ್ರ ಸೀಮಿತವಾಗಲಿಲ್ಲ. ಪಂದ್ಯವನ್ನು ವೀಕ್ಷಿಸಲು ಬಂದ ಜಪಾನ್ ಪ್ರೇಕ್ಷಕರು ಸಹಾ ಪಂದ್ಯದ ನಂತರ ಅಳುತ್ತಲೇ ತಾವು ಕೂತಿದ್ದ ಗ್ಯಾಲರಿಯ ಕಸ, ಕಾಗದಗಳನ್ನು ಚೀಲಗಳಲ್ಲಿ ತುಂಬಿಕೊಂಡು ಕಸದ ಬುಟ್ಟಿಗೆ ರವಾನಿಸಿದ್ದರು. ಇದು ತಾವು ಎಸೆದ ಕಸವಲ್ಲ ಇತರ ಪ್ರೇಕ್ಷಕರು ಎಸೆದು ಹೋಗಿದ್ದ ಕಸದ  ರಾಶಿ. ಜಪಾನ್ ತಂಡದ ಪ್ರತಿ ಪಂದ್ಯದ ನಂತರವೂ ಇದೇ ಪರಿಪಾಠವನ್ನು ಜಪಾನ್ ಅಭಿಮಾನಿಗಳು ಪಾಲಿಸಿದ್ದರು. 2014 ರಲ್ಲಿ ಸಹಾ ಇದೇ ರೀತಿ ಮಾಡಿ ವಿಶ್ವದ ಗಮನ ಸೆಳೆದಿದ್ದರುಇದೆಲ್ಲಾ ನಮಗೆ, ಇತರರಿಗೆ ಅಚ್ಚರಿಯ, ಮೆಚ್ಚುಗೆಯ ವಿಷಯವಾಗಿರಬಹುದು. ಆದರೆ ಜಪಾನ್ ನಾಗರಿಕರಿಗೆ, ಅಲ್ಲಿ ವಾಸ ಮಾಡಿದವರಿಗೆ, ಪ್ರವಾಸ ಕೈಗೊಂಡವರಿಗೆ ಇದು ಸಾಮಾನ್ಯವೆಂಬಷ್ಟು ಸಹಜ ಸಂಗತಿ.

ಜಪಾನ್ ನಗರಗಳ ರಸ್ತೆಗಳು ಜಗತ್ತಿನ ಯಾವುದೇ ಜನಬಿಡ ನಗರಗಳ ಬೀದಿಗಳಷ್ಟೇ ಜನರಿಂದ ತುಂಬಿ ತುಳುಕುತ್ತವೆ. ಜನ ಸಂಖ್ಯೆ ಅಲ್ಲೂ ಹೆಚ್ಚಿದೆ. ಆದರೂ ಅಲ್ಲಿನ ಜನರ ಸ್ವಚ್ಛತೆಯೆಡೆಗಿನ ಬದ್ಧತೆ ಹಾಗೂ ಪ್ರೀತಿಯಿಂದಾಗಿ ಅಲ್ಲಿನ ರಸ್ತೆ, ಸಾರ್ವಜನಿಕ ಸ್ಥಳಗಳು Spotless and clean ಎಂದೇ ಹೆಸರುವಾಸಿ.

Going out of the way : ಇಂಗ್ಲಿಷಿನಲ್ಲಿ Going out of the way ಎಂಬ ಮಾತಿದೆ. ಸಹಾಯ ಮಾಡಲು ಒಂದಷ್ಟು ಹೆಚ್ಚು ಎನ್ನುವಷ್ಟು ಕಷ್ಟ, ಶ್ರಮವನ್ನು ತೆಗೆದುಕೊಳ್ಳುವುದು ಎಂಬುದು ಇದರ ಅರ್ಥ. ’ಯಾರಾದರೂ ನನ್ನೊಡನೆ ಒಂದು ಕಿಲೋಮೀಟರ್ ಬಾ ಎಂದರೆ ಎರಡು ಕಿಲೋಮೀಟರ್ ಹೋಗು’ ಎಂಬ ಕ್ರಿಸ್ತನ ಮಾತಂತೆ. ಜಪಾನ್ ಜನರಿಗೆ ಈ ಸೌಜನ್ಯ ಹಾಗೂ ನಿರೀಕ್ಷೆಗಿಂತ ಹೆಚ್ಚಿನ ಸಹಾಯ ಮಾಡುವ ಸ್ವಭಾವ ಅಭ್ಯಾಸವಾಗಿ ಹೋಗಿದೆ.

ಅಲ್ಲಿ ಪ್ರವಾಸ ಮಾಡಿದವರ ಅನುಭವದಂತೆ ಅಲ್ಲಿ ಯಾರ ಬಳಿಯಾದರೂ ಒಂದು ವಿಳಾಸದ ಬಗ್ಗೆ ವಿಚಾರಿಸಿದರೆ, 100ಕ್ಕೆ 90%ರಷ್ಟು ಬಾರಿ ನೀವು ವಿಚಾರಿಸಿದ ಜಪಾನ್ ವ್ಯಕ್ತಿ ನಿಮ್ಮನ್ನು ಆ ಸ್ಥಳಕ್ಕೆ ತಾನೇ ಕರೆದುಕೊಂಡು ಹೋಗುತ್ತಾನೆ ಎಂಬ ಮಾತಿದೆ . ನೀವು ಹುಡುಕುತ್ತಾ ಕಳೆದು ಹೋಗಬಹುದೆಂಬ ಕಾಳಜಿಯಿಂದ. ಇದು ಅತಿರೇಕವೆಂಬಂತೆ ಕಾಣಬಹುದು. ಇಲ್ಲವೇ ಭಾರತದಂತ ಜನಸಂಖ್ಯೆಯ ದೇಶದಲ್ಲಿ ವಾಸ್ತವಲ್ಲ ಎನ್ನಬಹುದು. ಆದರೆ ಜಪಾನ್ ಕೂಡ ಭಾರಿ ಜನಸಂಖ್ಯೆಯ ದೇಶವೇ. ಆ ದೇಶದ 65% ಜನರು ನಗರಗಳಲ್ಲೇ ವಾಸಿಸುತ್ತಾರೆ. ಅಲ್ಲಿನ ಯಾವುದೇ ಜನಬಿಡ ರಸ್ತೆಯಲ್ಲಿ ನೀವು ನಡೆದುಕೊಂಡು ಹೋದರೆ ಮತ್ತೊಬ್ಬರಿಗೆ ಡಿಕ್ಕಿಯೊಡೆಯದೆ ಸಾಗಲು ಸಾಧ್ಯವೇ ಇಲ್ಲ ಎಂಬ ಮಾತಿದೆ.

ಅದೇ ಕಾರಣಕ್ಕೇ ಏನೋ, ಅಲ್ಲಿನ ಜನರು ಅಲ್ಲಿನ ನಿಯಮಗಳ ಜೊತೆ ಜೊತೆಗೆ ಮೌಲ್ಯಗಳನ್ನು ಸಹಾ ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. Thanks ಮತ್ತು Sorry ಇಲ್ಲಿನ ಜನರ ಬಾಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಪದಗಳು. ಅದು ಕೇವಲ ಬಾಯಿಮಾತಿನ ಆಚರಣೆಯಲ್ಲ. ತೀರ ಸೌಜನ್ಯದಿಂದಲೂ, ಗೌರವಯುತವಾಗಿ ನಡೆದುಕೊಳ್ಳುವವರು ಎಂದೇ ಜಪಾನಿನ ಜನರು ಹೆಸರುವಾಸಿ.

ಇವುಗಳ ಮೂಲ ಯಾವುದು? ಈ ಸೌಜನ್ಯಕ್ಕೆ ಕಾರಣವಾದರೂ ಏನು ಎಂಬುದು ಕುತೂಹಲಕ್ಕಾರಿ ಪ್ರಶ್ನೆ. ಅದಕ್ಕೆ ಕಾರಣ ಧಾರ್ಮಿಕತೆಯೇ, ಅಲ್ಲಿನ ಸಂಸ್ಕೃತಿಯೇ, ಶಿಕ್ಷಣ ಪದ್ಧತಿಯೇ, ದೇಶದ ಭೌಗೋಳಿಕ ರಚನೆಯೇ? ಎಲ್ಲವೂ ಹೌದು, ಇಲ್ಲ ಯಾವುದೂ ಅಲ್ಲ. ಉತ್ತರ ತುಸು ಕಷ್ಟವೇ.

ಧಾರ್ಮಿಕ ನಂಬಿಕೆ ಹಾಗೂ ಸಂಸ್ಕೃತಿ : ಸಾರ್ವಜನಿಕವಾಗಿ ಉನ್ನತವಾದ ಮೌಲ್ಯಗಳಿಂದ ಬದುಕುವ ಜಪಾನ್ ಜನರಲ್ಲಿ ಸುಮಾರು 60 ರಿಂದ 70 ರಷ್ಟು ಜನರು ಯಾವುದೇ ಧರ್ಮದ ಹಿಂಬಾಲಕರಲ್ಲ ಎಂಬುದು ಆಶ್ಚರ್ಯದ ಸಂಗತಿ. ದಾಖಲೆಗಳ ಪ್ರಕಾರ ಯಾವುದೋ ಒಂದು ಧರ್ಮಕ್ಕೆ ಸೇರಿದವರಾಗಿದ್ದರೂ ನಿರ್ದಿಷ್ಠ ಧರ್ಮಕ್ಕೆ ಕಟ್ಟು ಬೀಳದ ಜನ ಸಂಖ್ಯೆ ಇಲ್ಲಿ ದೊಡ್ಡದಿದೆ. ಆದರೆ ಅಷ್ಟೇ ಆಶ್ಚರ್ಯದ ಸಂಗತಿ ಎಂದರೆ  ಇಲ್ಲಿನ ಯಾವುದೇ ಧಾರ್ಮಿಕ ಸಾರ್ವಜನಿಕ ಸಂಭ್ರಮದಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಆಗ್ಗಿಂದಾಗೆ ಇಲ್ಲೆ ಅನೇಕ ಸಾರ್ವಜನಿಕ ಆಚರಣೆ, ಸಂಭ್ರಮಗಳು ನಡೆಯುತ್ತಲೇ ಇದ್ದೂ, ಜನ ಸಂಭ್ರಮದಿಂದಲೇ ಪಾಲ್ಗೊಳ್ಳುತ್ತಾರೆ. ಬೌದ್ಧ ಧರ್ಮ, ಶಿಂಟೋಯಿಸಮ್, ಕ್ರೈಸ್ತ ಧರ್ಮದ ಜೊತೆ ಜೊತೆಯಲ್ಲೇ ಅತಿ ಪುರಾತನ ಜೀವನ ಕ್ರಮವಾದ ಕನಫ್ಯೂಷಿಸಮ್ ಇಲ್ಲಿ ಬಳಕೆಯಲ್ಲಿದೆ. ಈ ಎಲ್ಲಾ ಧರ್ಮಗಳಿಗಿಂತ ಕನ್‍ಫ್ಯೂಶಸ್‍ನ ಸಿದ್ಧಾಂತಗಳೇ ಇಲ್ಲಿ ಒಂದಷ್ಟು ಹೆಚ್ಚು ಜನನಿತ.

ಶಿಕ್ಷಣ : ಇನ್ನೂ ಜಪಾನಿಯರ ಜೀವನ ಕ್ರಮದ ಮೇಲೆ ಅಲ್ಲಿನ ಶಿಕ್ಷಣ ಪದ್ದತಿ ಬಹು ದೊಡ್ಡ ಪರಿಣಾಮವನ್ನು ಬೀರಿದೆ. ದೇಶದ ಶಿಕ್ಷಣದ ಪಠ್ಯಕ್ರಮದಲ್ಲಿ Moral Education ಬಹು ದೊಡ್ಡ ಭಾಗವಾಗಿದೆ. ಅಂದರೆ ನಮ್ಮ ಶಿಕ್ಷಣದಲ್ಲಿನ ನೀತಿ ಪಾಠದಂತೆ. ಆದರೆ ಅಲ್ಲಿ ಒಂದು  ಈ ಮಗುವಿನ ಮೊದಲ 9 ವರ್ಷಗಳಲ್ಲಿ ಈ ನೀತಿ ಪಾಠ ಅಥವಾ ನೈತಿಕ ಶಿಕ್ಷಣವನ್ನು ಒಂದು ಪ್ರಮುಖ ವಿಷಯವನ್ನಾಗಿ ಬೋಧಿಸಲಾಗುತ್ತದೆ. ಬೋಧನೆ ಎನ್ನುವುದಕ್ಕಿಂತ ವ್ಯವಸ್ಥಿತವಾಗಿ ಹೇಳಿಕೊಡಲಾಗುತ್ತದೆ. ಮಾಹಿತಿಗಳ ಪ್ರಕಾರ ಈ ನೀತಿ ಪಾಠಗಳಲ್ಲಿ  ಸುಮಾರು 70 ವಿಷಯಗಳು ಇರುತ್ತವೆ. ಅವುಗಳಲ್ಲಿ ನಾಲ್ಕು ಸಂಬಂಧ ಹಾಗೂ ಸಮುದಾಯ, ಸಮಾಜದೊಂದಿಗಿನ ಸಂಬಂಧ ಇಲ್ಲಿನ ವಿಷಯಗಳು. ಇವುಗಳ ಮೂಲಕ ಮಕ್ಕಳಿಗೆ ಸೌಜನ್ಯ, ಇತರರ ಬಗ್ಗೆ ಕಾಳಜಿ, ಸ್ನೇಹ-ಗೌರವ, ವಿನಯ-ವಿನಮ್ರತೆ, ಸಮಾಜಕ್ಕೆ ಕೊಡುಗೆ, ಸಂಸ್ಕೃತಿಯೆಡೆಗೆ ಗೌರವ ಈ ರೀತಿ ಅನೇಕ ಮೌಲ್ಯಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಇವುಗಳನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಲಾಗುವುದರಿಂದ ಹಾಗೂ ಹಿರಿಯರು ಈಗಾಗಲೇ ಅದನ್ನೆಲ್ಲಾ ಪಾಲಿಸಿಕೊಂಡು ಬರುತ್ತಿರುವುದರಿಂದ ಅದೊಂದು ಸಂಸ್ಕೃತಿಯಾಗಿಯೇ ಬೆಳೆದು ನಿಲ್ಲುತ್ತದೆ.

ಪ್ರಕೃತಿ : ಇವುಗಳ ಜೊತೆ ಜಪಾನಿನ ಭೌಗೋಳಿಕ ಪ್ರದೇಶವೂ ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದಂತಿದೆ. ಸದಾ ಯಾವುದಾದರೂ ನೈಸರ್ಗಿಕ ವಿಕೋಪದ ಭಯದಲ್ಲೇ ವಾಸಿಸುವ ಇಲ್ಲಿನ ಜನತೆ ಅದೇ ಕಾರಣಕ್ಕೆ ಪ್ರಕೃತಿಯ ಶಕ್ತಿ, ಅಗಾಧತೆ, ಸೌಂದರ್ಯ ಹಾಗೂ ಉಪಯುಕ್ತತೆಯ ಸ್ಪಷ್ಟ ಜ್ಞಾನವನ್ನು ಪಡೆದಂತಿದೆ. ಆದರಿಂದಲೇ ಅಲ್ಲಿ ನಿಸರ್ಗದ, ಪರಿಸರದ ಕಡೆಗಿನ ಗೌರವವೂ ಹೆಚ್ಚು. ಕ್ರೀಡಾಂಗಣದಲ್ಲಿ ಕಸವನ್ನು ರಾಶಿ ಮಾಡಿ ಕಸದ ಬುಟ್ಟಿಗೆ ಎಸೆಯುವ ಅವರ ಮನೋಭಾವದ ಹಿಂದೆ ಇರುವುದು ಇದೇ ಪರಿಸರ ಕಾಳಜಿ.

ಏಳು ಬಾರಿ ಬಿದ್ದರೆ ಎಂಟು ಬಾರಿ ಏಳು : ಇದು ಜಪಾನಿನ ಒಂದು ನಾಣ್ಣುಡಿ. ಎರಡನೆಯ ಮಹಾಯುದ್ಧದ ನಂತರ ಅಕ್ಷರಶ: ನೆಲಕ್ಕೆ ಬಿದ್ದಿದ್ದ ಜಪಾನ್, ನಂತರ ಎದ್ದು ಜಗತ್ತಿನ ಪ್ರಮುಖ ಶಕ್ತಿಯಾಗಿ ಬೆಳೆದ ನಿಂತ ಪಯಣದಲ್ಲಿ ಈ ನೈತಿಕ ಮೌಲ್ಯ ಹಾಗೂ ಸಾರ್ವಜನಿಕ ಶಿಸ್ತು ದೊಡ್ಡ ಕೆಲಸ ಮಾಡಿದೆ. ಈ ರೂಪಾಂತರದಲ್ಲಿ ಭಾರತದಂತ ದೇಶಗಳು ಕಲಿಯುವಂತದ್ದು  ಬಹಳಷ್ಟಿದೆ.

ಇದು ಜಪಾನಿನ ಕಥೆ. ಹಾಗೆಂದ ಮಾತ್ರಕ್ಕೆ ಅಲ್ಲಿ ಎಲ್ಲವೂ ಸರಿಯಾಗಿದೆ, ನಮ್ಮಲ್ಲಿ ಎಲ್ಲವೂ ಹದೆಗಟ್ಟಿದೆ ಎಂಬುದಲ್ಲಾ. ಅಲ್ಲಿನ  ಈಗಿನ ಯುವ ಜನತೆಗೆ ಈ ಮೌಲ್ಯಗಳ ಬಗ್ಗೆ ಅಷ್ಟೇನು ಒಲವಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಅದಕ್ಕಿಂತ ಕಳವಳಕ್ಕಾರಿಯಾದ ವಿಷಯವೆಂದರೆ ಇಳಿಮುಖಗೊಳ್ಳುತ್ತಿರುವ ಅಲ್ಲಿನ ಜನಸಂಖ್ಯೆ.
  
ನಮ್ಮಲ್ಲಿನ ಅನೇಕ ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹೇಗೆ ಕಾರಣವೋ ಹಾಗೆಯೇ ನಾಗರಿಕರ ಸಾರ್ವಜನಿಕ ಅಶಿಸ್ತು, ನಿಯಮ, ಮೌಲ್ಯಗಳೆಡೆಗಿನ ನಿರ್ಲಕ್ಷ್ಯವೂ ಅಷ್ಟೇ ಕಾರಣ. ಶಿಕ್ಷಣವೂ ಒಳ್ಳೆಯ ಅಂಕಗಳನ್ನು ಪಡೆಯಲು ಸಹಾಯ ಮಾಡುವ ಸಂಸ್ಥೆಗಳಾಗಿಯೂ, ವ್ಯಾಪಾರಿ ಕೇಂದ್ರಗಳಾಗಿಯೂ ಕೆಲಸ ಮಾಡುತ್ತಿವೆ.

ಬೆಂಗಳೂರಿನ ಸಣ್ಣ ಸಣ್ಣ ರಸ್ತೆಯಲ್ಲೂ ಟ್ರಾಫಿಕ್ ಜ್ಯಾಮ್ ಆಗಲು ವಾಹನ ಸಂದಣಿ ಎಷ್ಟೋ ಕಾರಣವೋ, ಅಷ್ಟೇ ಕಾರಣ ಸವಾರರ ಲೇನ್ ಪಾಲಿಸದ ಅಶಿಸ್ತು. ಕಾಯುವ ಪೋಲಿಸನೊಬ್ಬ ಇಲ್ಲವೆಂದ ಮೇಲೆ ಟ್ರಾಫಿಕ್ ದೀಪಗಳು ಅಲಂಕಾರಿಕ ದೀಪಗಳಷ್ಟೇ. ಹೆಲ್ಮೆಟ್ ಬಳಸುವುದೂ ಕೇವಲ ದಂಡದ ಭಯಕ್ಕೆ. ನಮ್ಮ ನೈತಿಕ ಪ್ರಜ್ಞೆ ಎಚ್ಚರಗೊಳ್ಳುವುದು ಧಾರ್ಮಿಕತೆಯ ಸ್ವರ್ಗ ನರಕದ ಭಯದಲ್ಲಿ ಮಾತ್ರ.

ಅತ್ತ ತಂತ್ರಜ್ಞಾನದ ದೈತ್ಯ ಹೆಜ್ಜೆಗಳ ನಡುವೆಯೂ ಇಡೀ ಜಗತ್ತು ತನ್ನದೇ ಆದ ಅನೇಕ ಕಾರಣಗಳಿಂದ ನಿರಾಸೆಯಿಂದ ಬಳಲುತ್ತಿದೆ. ಭರವಸೆಯ ಆಶಾಕಿರಣಗಳನ್ನುಸಂಘರ್ಷದ ಕಾರ್ಮೋಡಗಳು ಅದುಮಿ ಮರೆಮಾಚುತ್ತಿವೆ. ಪರಪ್ರೀತಿ, ಸಹಿಷ್ಣುತೆ ಹಾಗೂ ಪರಸ್ಪರ ನಂಬಿಕೆ ಗೌರವಗಳೇ ಮುಂದಿನ ಪಯಣದ ಚಕ್ರಗಳಾಗಬೇಕು ಎಂಬ ಸಂದೇಶವನ್ನು ಜಪಾನಿನ ಪುಟ್ ಬಾಲ್ ತಂಡ, ಪ್ರೇಕ್ಷಕರು ತಮ್ಮದೇ ಅದ ರೀತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ನಾವೆಲ್ಲ ಅದರಿಂದ ಒಂದಷ್ಟು ಏನದರೂ ಕಲಿಯಬೇಕಿದೆ.