Tuesday 19 August 2014

ಆಡಿಯೋ ಅನಿಸಿಕೆ - ಅಂಬರೀಶ

ದರ್ಶನ್ ಚಿತ್ರವೆಂದರೆ ಸಾಕು ಅವರ ಅಭಿಮಾನಿಗಳಿಗೆ ಪಾಲಿಗೆ ಅದೇ ಒಂದು ಹಬ್ಬ. ಇನ್ನೂ ಕನ್ನಡ ಚಿತ್ರರಂಗದಲ್ಲಿ ’ಅಂಬರೀಶ’ ಎಂಬ ಪದಕ್ಕೆ ತನ್ನದೇ ಆದ ವಿಶೇಷತೆ, ಆತ್ಮೀಯತೆ ಹಾಗೂ ಸಡಗರವಿದೆ. ಮಾಸ್ ಹಿಟ್ ಗಳನ್ನು ನೀಡುತ್ತಲೇ ಬಾಕ್ಸ್ ಆಫೀಸ್  ನ ಡಾರ್ಲಿಂಗ್ ಆಗಿ ಹೋಗಿರುವ ದರ್ಶನ್, ಅದೇ ಹೆಸರಿನ ಮಹೇಶ್ ಸುಖಧರೆ ನಿರ್ದೇಶನದ ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಬಳಿಗೆ ಬರುತ್ತಿದ್ದಾರೆ ಎಂದರೆ ಕೇಳಬೇಕೆ? ದರ್ಶನ್ ಹಾಗೂ ಅಂಬಿ ಇಬ್ಬರ ಅಭಿಮಾನಿಗಳೂ
ಕಾತರದಿಂದ ಕಾಯುತ್ತಿರುವ ಚಿತ್ರದ ಧ್ವನಿ ಸುರಳಿ ಇತ್ತೀಚೆಗೆ ಬಿಡುಗಡೆ ಆಗಿದ್ದೂ ಮಾತ್ರವಲ್ಲದೆ ಯಶಸ್ಸನ್ನೂ ಕಂಡಿದೆ.ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಹೇಗಿದೆ? ನೋಡೋಣ ಬನ್ನಿ -

ವಾಲೆಕುಂ
ಗಾಯನ - ಹೇಮಂತ್
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಚಿತ್ರದಲ್ಲಿ ನಾಯಕ ಶ್ರಮ ಜೀವಿ ಆಗಿದ್ದರೆ ಇಂಥ  ಹಾಡು ಕಟ್ಟಿಟ್ಟ ಬುತ್ತಿ. ಸಾರಥಿ ಚಿತ್ರದ ಅತಿರಥ ಮಹಾರಥ ಹಾಡನ್ನು ನೆನಪಿಸುವಂಥ ಗುಣ ಈ ಹಾಡಿನ ಸಾಹಿತ್ಯ, ಸಂಗೀತದಲ್ಲಿ  ಬೆರೆತು ಹೋಗಿದೆ. ನಾಗೆಂದ್ರ ಪ್ರಸಾದ್ ರ ಸಾಹಿತ್ಯ ಸಂಗೀತಕ್ಕೆ ಪೂರಕವಾಗಿದ್ದು, ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಬಹುದು. ಹೇಮಂತರ ಗಾಯನದಲ್ಲಿ ಲವಲವಿಕೆ ಇದೆ.

ಕಣ್ಣಲ್ಲೇ : 
ಗಾಯನ - ಶ್ರೇಯಾ ಘೋಷಾಲ್ ಹಾಗೂ ಸೋನು ನಿಗಮ್
ಸಾಹಿತ್ಯ - ನಾಗೇಂದ್ರ ಪ್ರಸಾದ್
ಹರಿಕೃಷ್ಣರ ಸಂಗೀತದ ಆಲ್ಬಂ ಒಂದರಲ್ಲಿ ಈ ರೀತಿಯ ಹಾಡಿಲ್ಲದಿದ್ದರೆ ಆಲ್ಬಂ ಪೂರ್ಣವಾಗುವುದಿಲ್ಲವೇನೋ ಎಂಬಂತೆ, ನಿರೀಕ್ಷೆಯಂತೆ ಎದುರಾಗುವ ಡ್ಯೂಯಟ್ ಗೀತೆ. ನಿರೀಕ್ಷೆಯಂತೆ ಶ್ರೇಯಾ ಹಾಗೂ ಸೋನು ನಿಗಂ ಉತ್ತಮವಾಗಿ ಹಾಡಿದ್ದಾರೆ. ಕ್ಲಾಸ್ ಮಾಸ್ ಎರಡೂ ರೀತಿಯ ಸಾಹಿತ್ಯ ನೀಡಬಲ್ಲ ನಾಗೇಂದ್ರ ಪ್ರಸಾದ್ ತಮ್ಮ ಮೇಲಿನ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ. ಇಂಪಾದ ಗೀತೆ.

ಗಂಡರ ಗಂಡ
ಗಾಯನ - ಎಸ್ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ - ನಾಗೇಂದ್ರ ಪ್ರಸಾದ್
ಬಹಳ ದಿನಗಳ ನಂತರ ಕೇಳಿ ಬರುವ ಎಸ್ಪಿಬಿ ಧ್ವನಿ ಆತ್ಮೀಯವಾಗಿ ತಾಕುತ್ತಲೇ, ಇನ್ನೂ ತನ್ನ ಮಾಂತ್ರಿಕತೆಯನ್ನು ಉಳಿಸಿಕೊಂಡಿದೆ. ನಾಗೇಂದ್ರ ಪ್ರಸಾದರ ತೂಕದ, ಗಾಂಭೀರ್ಯದ ಸಾಹಿತ್ಯಕ್ಕೆ ಎಸ್ಪಿ ಉತ್ತಮವಾಗಿ ಜೀವ ತುಂಬಿದ್ದಾರೆ. ನಾಡ ಪ್ರಭು ಕೆಂಪೇಗೌಡರ ವ್ಯಕ್ತಿತ್ವ, ಸಾಧನೆಯ ಬಗ್ಗೆ ಪರಿಚಯ ಮಾಡಿಕೊಡುತ್ತಾ, ಐತಿಹಾಸಿಕ ಮಾಹಿತಿಗಳನ್ನು ಕಟ್ಟಿ ಕೊಡುತ್ತದೆ ಈ ಗೀತೆ. ತೆರೆಯ ಮೇಲೆ ಹೇಗೆ ಚಿತ್ರಿತವಾಗಿದೆ ಎಂಬ ಸಹಜ ಕುತೂಹಲ ಅಭಿಮಾನಿಗಳದ್ದು.

ಅಸಕು ಪಸಕು :
ಗಾಯನ -  ಟಿಪ್ಪು ಹಾಗೂ ಲಕ್ಷ್ಮಿ ವಿಜಯ್
ಸಾಹಿತ್ಯ - ನಾಗೇಂದ್ರ ಪ್ರಸಾದ್
೮೦ರ ದಶಕದಲ್ಲಿ ಪಡ್ದೆ ಹುಡುಗರಿಗೆ ಕಚಗುಳಿ ಇಟ್ಟ ಚಕ್ರವ್ಯೂಹ ಚಿತ್ರದ ಚಳಿ ಚಳಿ ಹಾಡನ್ನು ಮರೆಯಲು ಸಾಧ್ಯವೇ? ಹಾಡು ಕೇಳಿದೊಡನೆ ಅಂಬರೀಶ್ ನೆನಪಾಗದೇ ಇರಲಾರರು. ಅದೇ ಹಾಡನ್ನು ನೆನಪಿಸುವ ಗೀತೆ. ಆ ಗೀತೆಗೆ ಇದ್ದ ಮಾದಕತೆ ಇಲ್ಲಿ ಇಲ್ಲದಿದ್ದರೂ ತುಂಟತನವನ್ನು ಹೊದ್ದುಕೊಂಡಿರುವ ಗೀತೆ. ಟಿಪ್ಪು ಹಾಗೂ ಲಕ್ಷ್ಮಿ ಯವರ ಧ್ವನಿಯಲ್ಲಿ ಹಾಡಿಗೆ ಬೇಕಾದ ಎಲ್ಲವೂ ಇದೆ. ಸಾಹಿತ್ಯಕ್ಕೂ ಅದೇ ಮಾತನ್ನು ಹೇಳಬಹುದು

ಪೂಜ್ಯಾಯ:
ಗಾಯನ - ಮಧು ಬಾಲಕೃಷ್ಣ
ಸಾಹಿತ್ಯ - ನಾಗೇಂದ್ರ ಪ್ರಸಾದ್
ಉತ್ತಮವಾದ ಮಧುರ ಭಕ್ತಿ ಗೀತೆ. ಹಳೆಯ ಭಕ್ತಿ ಗೀತೆಗಳನ್ನು ಕೇಳಿದೊಡನೆ ಇಂದಿಗೂ ಮನ ಅರಳುತ್ತದೆ. ಅದೇ ರೀತಿಯ ಉತ್ತಮವಾದ ಗೀತೆಗೆ, ಉತ್ತಮ ಸಾಹಿತ್ಯ ಒದಗಿ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಧು ಬಾಲ ಕೃಷ್ಣರ ಗಾಯನದಲ್ಲಿ ಭಕ್ತಿ ಗೀತೆಗೆ ಬೇಕಾದ ಸರ್ವ ಗುಣಗಳೂ ಕೂಡಿಬಂದು ನೆನಪಿನಲ್ಲಿ ಉಳಿಯುವಂತ ಗೀತೆಗಳ ಸಾಲಿಗೆ ಸೇರಿಕೊಳ್ಳುತ್ತದೆ. ರಾಯರ ಭಕ್ತರಿಗಂತೂ ಹೇಳಿ ಮಾಡಿಸದಂಥ ಗೀತೆ.

ಖೇಲ್ ಕತಂ :
ಗಾಯನ - ದರ್ಶನ್, ನವೀನ್ ಮಾಧವ್, ಸತ್ಯನ್, ಸಂತೋಷ್ ವೆಂಕಿ
ಸಾಹಿತ್ಯ - ನಾಗೇಂದ್ರ ಪ್ರಸಾದ್
ಎಲ್ಲೋ ಕೇಳಿದಂತೆ ಅನಿಸಿದರೂ ಸೆಳೆಯುವ ಗೀತೆ. ನಾಯಕ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾ ತನ್ನ ಕಾರ್ಯ ಸಾಧನೆಯ ವಿಧಾನವನ್ನು ವಿವರಿಸುವ ಈ ಗೀತೆಯಲ್ಲಿ ಬರುವ ಸಂಭಾಷಣೆಗೆ ದರ್ಶನ್ ತಾವೇ ಧ್ವನಿ ನೀಡಿದ್ದಾರೆ. ಲವಲವಿಕೆಯ ವಾದ್ಯ ಸಂಗೀತಕ್ಕೆ ನವೀನ್ ಮಾಧವ್, ಸತ್ಯನ್, ಸಂತೋಷ್ ವೆಂಕಿಯವರ ಕೋರಸ್ ಭರ್ಜರಿ ಸಾಥ್ ನೀಡಿದೆ. ದರ್ಶನ್ ರ ಸಂಭಾಷನೆಯ ವೈಖರಿ ಸಕ್ಕತಾಗಿದ್ದೂ  ಪರದೆಯಲ್ಲಿನ ಹಾಡಿನ ಉದ್ದಕ್ಕೂ ಅಭಿಮಾನಿಗಳು ವಿರಾಮವಿಲ್ಲದ ಶಿಳ್ಳೆಗೆ ಅಣಿಯಾಗಬೇಕೇನೋ?

-ಪ್ರಶಾಂತ್ ಇಗ್ನೇಶಿಯಸ್