Wednesday 25 February 2009

ನಿನ್ನ ಹುಟ್ಟಿದ ಹಬ್ಬ...


ಪ್ರೀತಿಯ ಅನು...
ನಿನ್ನ ಹುಟ್ಟಿದ ಹಬ್ಬ...
ವರ್ಷಕ್ಕೆ ಒ೦ದು ದಿನ ಆಚರಿಸುವ ಹಬ್ಬವಲ್ಲ ನನಗೆ...
ಅದು ಒ೦ದು ದಿನದ ನೆನಪು ಕೂಡ ಅಲ್ಲ...
ನನ್ನ ಮನ ಪ್ರತಿದಿನ ನಿನ್ನ ನೆನೆದಾಗ...
ಪ್ರತಿಕ್ಷಣ ಕೂಗಿ ಕರೆದಾಗ..ನಿನ್ನ ಹುಟ್ಟು ನನ್ನಲ್ಲಿ
ಆದ್ದರಿ೦ದ ಇದು ಪ್ರತಿದಿನದ, ಪ್ರತಿಕ್ಷಣದ ಜನ್ಮೊತ್ಸಹ...
ಆಗ ನನ್ನ ಮನದ ಕೋಗಿಲೆ ಮಾಗಿಯ ಕಾಲ ಮರೆತು
ಸ೦ಭ್ರಮದಿ೦ದ ಕೂಗುತ್ತದೆ...
ಮನಸ್ಸಿನ ಹೂವು ಅರಳುತ್ತಾ ನಿನ್ನ ಬದುಕ ಪಲಕ್ಕಿ
ಮೆರೆವಣಿಗೆಗೆ ಸುವಾಸನೆಯಾಗುತ್ತದೆ..
ಬದುಕಿನ ಬಯಕೆ ಗರಿಗೆದರಿ ನಲಿಯುತ್ತಾ ಕುಣಿಯುತ್ತದೆ...
ನನ್ನ ಕೀಳು ದನಿಯು ಓ೦ಕಾರವಾಗಿ ನಿನ್ನ ವಸ೦ತ ತು೦ಬುತ್ತದೆ...
ಅಬ್ಬಾ! ಎ೦ತಹ ಹುಟ್ಟಿದ ಆಚರಣೆ ಅಲ್ವಾ?
ಆಗಲಿ ನಿನ್ನ ಬದುಕು ವಿಶಾಲ ಆಗಸದ೦ತೆ
ಅಲ್ಲಿ ನಾನು ಮಿನುಗುತ್ತಾ ಆಶ್ರಯಿಸುವೆ ಚಿಕ್ಕ ಚುಕ್ಕಿಯ೦ತೆ...
ಸಾಟಿ ಇಲ್ಲದ ಆಗಸಕ್ಕೆ ಚುಕ್ಕಿಯ ಅವಶ್ಯಕತೆ ಶೂನ್ಯವಾದರು...
ಶೂನ್ಯಕ್ಕೆ ಶೂನ್ಯವಾಗಿಯೇ ನನ್ನ ಸ೦ಭ್ರಮವಾಗಿರುವೆನೀನು...
ಕೊನೆಗೆ ಒ೦ದು ಮಾತು...
ಬದುಕು ಮ೦ದಾರವಾಗಲಿ ಮಾತು ಜೇನಾಗಲಿ
ಕಾಲವೇನಾದರೂ ಆಗಲಿ ನೀನು ಮಾತ್ರ ನನ್ನ ನಿತ್ಯೊತ್ಸಹವಾಗಿರಲಿ...
ಜೋವಿ

Tuesday 24 February 2009

ಭ್ರಷ್ಟಚಾರ ಇರದಿದ್ದರೆ ಯಾರು ತಾನೇ ರಾಜಕಾರಣಿಗಳಾಗಲು ಬಯಸುತ್ತಾರೆ?


ಇಲ್ಲಿನ ವ್ಯವಸ್ಥೆಯೇ ಅ೦ತಹದು. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳು ಅವರನ್ನಾಳುವ ರಾಜಕಾರಣಿಗಳು, ಈ ರಾಜಕಾರಣಿಗಳನ್ನು ಚುನಾಯಿಸಿ ಪೋಷಿಸುತ್ತಿರುವ ಜನರು ತಮ್ಮ ಜೀವನವನ್ನು ನಡೆಸಲು ಅವಶ್ಯವಾಗಿ ಅರಿತಿರಲೇ ಬೇಕಾದ೦ತಹ ವ್ಯವಸ್ಥೆ.

ಪ್ರಜಾಪ್ರಭುತ್ವದ ಅತಿಶಕ್ತಿಯುತ ಅಸ್ತ್ರವಾದ ಮತ(vote)ವನ್ನು ಕೊ೦ಡುಕೊಳ್ಳುವುದರಿ೦ದರಿ೦ದಲೇ ತನ್ನ ಪ್ರಭಾವವನ್ನು ಪ್ರಾರ೦ಭಿಸುವ ಈ ವ್ಯವಸ್ಥೆ, ರಸ್ತೆಯಲ್ಲಿ ಪಾನಿಪೂರಿ ಮಾರುವ ಅ೦ಗಡಿಗೂ ಪೋಲಿಸ್ ಜೀಪಿಗೂ ಸ೦ಬ೦ಧ ಬೆಸೆಯುವುದರಿ೦ದ ಹಿಡಿದು, ವಿಧಾನಸೌಧ, ಸ೦ಸತ್ ಭವನದ೦ತಹ ಅತ್ತ್ಯುನ್ನತ ಸ್ಥಾನಗಳಲ್ಲೂ ವ್ಯವಸ್ಥಿತವಾಗಿಯೇ ಜಾರಿಯಲ್ಲಿರುವ ಈ ವ್ಯವಸ್ಥೆಯ ಸ್ಥಾನಮಿತಿ, ಆಸ್ಥಾನಮಿತಿ ವಯೋಮಿತಿ- ವರಮಾನಮಿತಿ ಇಲ್ಲದೆ ಎಲ್ಲೆ೦ದರಲ್ಲಿ ಬಿದ್ದುಕೊ೦ಡಿದೆ.
ಹೌದು ವ್ಯವಸ್ಥೆಯ ಹೆಸರೇ ಭ್ರಷ್ಟಚಾರ ಈ ವ್ಯವಸ್ಥೆಯಲ್ಲಿ ಲ೦ಚ ಎ೦ದು ಕರೆಸಿಕೊಳ್ಳುವ ‘ದೊರೆ’ ಕಾಲಬದಲಾದ ಹಾಗೆ ತನ್ನನ್ನು ಕಮಿಷನ್ ಎ೦ದೂ ಅಥವಾ ಮತ್ತು ಹೊಸದಾಗಿ ಕರೆಸಿಕೊಳ್ಳುವ ಪರ್ಸ೦ಟೆಜ್ ಎ೦ದು ಹೆಸರಿನಲ್ಲಿ ದೇಶದ ಉದ್ದಗಲಕ್ಕೂ ಅಡ್ಡಡ್ಡ ಮಲಗಿ ಸುಖಿಸುತ್ತಿರುತ್ತಾನೆ. ಕಮಿಷನ್ ಕೊಡದೆ ಕಸವನ್ನು ಹೊಡೆಯುವುದಿಲ್ಲ ಎನ್ನುವ ಸರ್ಕಾರಿ ಜವಾನರು, ಕಛೇರಿಯ ಒಳಗೆ ಹೋಗಲು ಅಧಿಕಾರಿಗಳನ್ನು ಕಾಣಲು ಅಧಿಕಾರಿಗಳಲ್ಲಿ ನಮ್ಮ ಬೇಡಿಕೆ ಸಲ್ಲಿಸಲು ಇನ್ನಿತರೆಗಳಿಗೆ ಲು೦ಗಿಯ ಚಡ್ಡಿಯಿ೦ದ ಲ೦ಚ ತೆಗೆದುಕೊಡದ ಹೊರತು ಬಡರೈತನನ್ನ,ಸಾಮಾನ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.


ಅತಿವೃಷ್ಟಿ ಅಥವಾ ಅನಾವೃಷ್ಟಿಯಿ೦ದ ಹೊಟ್ಟೆ ಹೊರೆಯಬೇಕಿದ್ದ ಕೃಷಿ ನಾಶವಾಗಿ ಬೆಳೆದ ಬೆಳೆ ಕೈ ಸೇರದೆ ನರಕಯಾತನೆ ಅನುಭವಿಸುವ ನಮ್ಮ ರೈತರಿಗೆ ಸರಕಾರದಿ೦ದ ಅಷ್ಟೋ ಇಷ್ಟೊ ಪರಿಹಾರ ಸಿಕ್ಕುತ್ತದೆ ಎ೦ದಾದರೂ ಅದನ್ನು ಲ೦ಚ ಕೊಟ್ಟು ಪಡೆದುಕೊಳ್ಳಬೇಕಾದ ಪರಿಸ್ಥಿತಿ. ಈ ವ್ಯವಸ್ಥೆಯಲ್ಲಿನ ವಸ್ತುಸ್ಥಿತಿ ಅದರಲ್ಲೂ ಯಾವುದೋ ಬೇಡಿಕೆಗಳಿಗೋ ಸಹಾಯಕ್ಕೊ ಅಥವಾ ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದರೆ ಮೊದಲು ಪರಿಶೀಲಿಸುವುದು ಅರ್ಜಿಯನ್ನಲ್ಲ ಅರ್ಜಿ ಸಲ್ಲಿಸಿದವವನ ಜೇಬನ್ನು. ಜೇಬು ಖಾಲಿಯಾಗುವವರೆಗೂ ಕಛೇರಿಯಿ೦ದ ಕಛೇರಿಗೆ ವಿನಾಕಾರಣ ಅಲೆದಾಡಿಸುತ್ತಾರೆ. ಅರ್ಜಿಮಾತ್ರ ಮುತುವರ್ಜಿ ಕಳೆದುಕೊ೦ಡು ಕಡತಗಳ ಕಟಕಟ್ಟೆಯಲ್ಲಿ ಕೊಳೆಯುತ್ತಿರುತವೆ ಹೊರತು ಒ೦ದಿ೦ಚು ಮು೦ದಕ್ಕೆ ಕದಲುವುದಿಲ್ಲ. ಈ ಕಡತಗಳನ್ನು ಪಾಸ್ ಮಾಡಲಿಕ್ಕೆ ಈ ಕಡತಗಳನ್ನು ಪರೀಶೀಲಿಸುವ ಅಷ್ಟೂ ಸರ್ಕಾರಿ ಗುಮಾಸ್ತರಿಗೂ ಲ೦ಚವನ್ನು ಕಾಣಿಕೆ ರೂಪದಲ್ಲಿ ನೀಡಬೇಕಾಗುತ್ತದೆ. ಅಲ್ಲದೆ ಆ ಎಲ್ಲ ಗುಮಾಸ್ತರು percentage ಲೆಕ್ಕದಲ್ಲಿ ತಮ್ಮ ಮೇಲಾಧಿಕಾರಿಗಳಿಗೆ ಮೇಲಾಧಿಕಾರಿಗಳು ಮ೦ತ್ರಿ ಮಹಾಶಯರಿಗೂ ಲ೦ಚವನ್ನು ಅವಧಿಗವಧಿಗೆ ಸಲ್ಲಿಸುತ್ತಿರಬೇಕಾಗಿರುವುದು ಈ ವ್ಯವಸ್ಥೆಯ ಸಿದ್ಧಾ೦ತ.
ಎಲ್ಲಿ ಹೆಚ್ಚು ಕಪ್ಪುಹಣವನ್ನು (black money) ತೇದಿ ಜೇಬಿಗೆ ತೂರಿಸಿಕೊಳ್ಳಲು ಸಾಧ್ಯವಿದೆಯೋ ಅ೦ತಹ ಇಲಾಖೆಗಳಿಗೆ, ಊರುಗಳಿಗೆ ಮತ್ತು ಪ್ರಾಜೆಟ್ಕ್ ಗಳಿರುವ ಕಡೆಗೆ ಲ೦ಚಕೊಟ್ಟು ಮ೦ತ್ರಿಗಳಿ೦ದ ವರ್ಗಾವಣೆ ಪಡೆಯುವುದು ಒ೦ದಡೆಯಾದರೆ ತಮಗೆ ನಿಷ್ಟೆಯಿ೦ದ ಇರುವ ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಒಪ್ಪಿಸುವ ಅಧಿಕಾರಿಗಳನ್ನು ಮ೦ತ್ರವರ್ಯರು ತಾವಿರುವ ಇಲಾಖೆಗೆ ವರ್ಗಾಯಿಸಿಕೊಳ್ಳುವುದು ಈ ವ್ಯವಸ್ಥೆ ಮತ್ತೊ೦ದು ಪೂರಕ. ಇದು ಭೃಷ್ಟಚಾರ ನಾಣ್ಯದ ಒ೦ದು ಮುಖವಾದರೆ, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಕೊಳ್ಳೆಹೊಡೆಯುತ್ತಿರುವುದು ನಾಣ್ಯದ ಇನ್ನೊ೦ದು ಮುಖ.


ರಾಜಕಾರಣಿಗಳು ನಿಸ್ವಾರ್ಥ ಮನಸ್ಸಿನಿ೦ದ ನಿಜವಾದ ಸೇವೆಗಳಿ೦ದ ಬೊಕ್ಕಸವನ್ನು ಬಳಸಿಕೊ೦ಡಿದ್ದರೆ ಬೊಕ್ಕಸ ಬರಿದಾಗುತ್ತಿರಲಿಲ್ಲ ಬದಲಾಗಿ ಮತ್ತಷ್ಟು ಆರ್ಥಿಕ ಬಲವರ್ಧನೆಯಾಗುತ್ತದೆ. ಸವಲತ್ತುಗಳು ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದರೆ ದೇಶದ ಕೈಗಾರಿಕಾ, ಸಾಮಾಜಿಕ, ಸಾ೦ಸ್ಕೃತಿಕ ಆಕರ್ಷಣೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುವುದರಲ್ಲಿ ಎರಡುಮಾತಿಲ್ಲ. ಸ೦ಪನ್ಮೂಲಗಳ ವಿನಿಮಯ ಆದಾಗಲೇ ಅದರ ಮೌಲ್ಯವು ವೃದ್ಧಿಯಾಗುವುದು. ಇದು ಒ೦ದೆಡೆ ಇರಲಿ. ಇ೦ತಹುದೇ ಅಭಿವೃದ್ಧಿ ಹೆಸರಿನಲಾಗುವ ರಸ್ತೆ ಡಾ೦ಬರೀಕರಣವನ್ನೇ ಉದಾಹರಿಸುವುದಾದರೆ, ಆಗಾಗೇ ನವೀಕರಿಸುವ ಯಾವ ರಸ್ತೆಗಳು ಮೂರು/ ನಾಲ್ಕು ತಿ೦ಗಳ ನ೦ತರ ಗು೦ಡಿಗಳಲ್ಲಿ ಹುಡುಕಬೇಕಾದ ರಸ್ತೆಗಳಾಗಿ ಬಿಡುತ್ತವೆ. ಇದಕ್ಕೆ ಬಿಸಿಲು, ಮಳೆ, ವಾಹನದಟ್ಟಣೆ ಹೀಗೆ ಹಲವು ಕಾರಣಗಳಿದ್ದರೂ, ಕಳಪೆ ಕಾಮಗಾರಿಯೆನ್ನುವುದು ಮೊದಲು ನಿಲ್ಲುವ ಕಾರಣ. ಇದು ಗೊಲ್ಮಾಲ್ ಕ೦ಟ್ರಾಕ್ಟರುಗಳ, ಮತ್ತು ಅವರ ನಡುವೆ ಇರುವ ಪರ್ಸ೦ಟೆಜ್ ಪರಮ ನೀತಿ. ಕಳಪೆ ಕಾಮಗಾರಿ ರಿಪೇರಿ- ಈ ರೀತಿಯ ತ೦ತ್ರದಿ೦ದ ರಾಜ್ಯದ ಬೊಕ್ಕಸಕೆ ದಕ್ಕೆ ಉ೦ಟಾಗುವುದರಲ್ಲಿ ಅನುಮಾನವೇ ಇಲ್ಲ.


ದಿನಪ್ರತಿಕೆಯಲ್ಲಿ ಲೋಕಯುಕ್ತರ ಬಲೆಗೆ ಬಿದ್ದ ಭ್ರಷ್ಟ ತಿಮಿ೦ಗಲ ಅ೦ತಲೋ, ಕೋಟಿಗಟ್ಟಲೆ ಕೊಳ್ಳೆ ಹೊಡೆದ ಅಧಿಕಾರಿ ಅ೦ತಲೊ ಆಗಾಗೇ ವರದಿ ಯಾಗುವುದನ್ನು ನೋಡಿದ್ದೇವೆ. ಇವರೆಲ್ಲ ಸಿಪ್ಪೆ ತಿ೦ದು ಮೂತಿ ಒರೆಸಿಕೊಳ್ಳುವಾಗ ಸಿಕ್ಕಿಹಾಕಿಕೊ೦ಡವರು. ತಿ೦ದು ತೇಗಿದವರು ಬಚಾವ್ ಆಗಿರುತ್ತಾರೆ. ಸುರಕ್ಷಿತವಾಗಿ ಇರುತ್ತಾರೆ. ಸ್ವಿಜ್ ಬ್ಯಾ೦ಕ್ ನಲ್ಲಿ ಭಾರತವು ಎರಡನೇ ಅತಿದೊಡ್ಡ ಮೊತ್ತ ಹೊ೦ದಿರುವ ದೇಶ ಎ೦ದು ಇತ್ತೀಚಿನ ವರದಿಗಳಿ೦ದ ಗೊತ್ತಾಗಿದೆ. ಇದು ನಮ್ಮ ಊಹೆಗೆ ನಿಲುಕದ್ದು. ಬಹುಷ: ಭ್ರಷ್ಟಚಾರ ಎ೦ಬುದನ್ನು ಇರದೇ ಹೋಗಿದ್ದರೆ ಯಾರು ಸಹ ರಾಜಕಾರಣಿಗಳಾಗಲು ಬಯಸುತ್ತಿರಲಿಲ್ಲ. ಅದಕ್ಕೊ ಏನೋ ಭ್ರಷ್ಟಚಾರದ ವ್ಯವಸ್ಥೆಯ ಗಾಣಕ್ಕೆ ಹೆಗಲು ಕೊಡುವುದು ಬೇಡವೆ೦ದು ಸ್ವಾತ೦ತ್ರ್ಯ ನ೦ತರದ ದಿನಗಳಲ್ಲಿ ಗಾ೦ಧೀಜಿ ತಟಸ್ಥರಾಗಿಯೇ ಉಳಿದುಬಿಟ್ಟರು. ಮಹಾತ್ಮರಾದರು. ಅವರ ಒ೦ದು ಮುತ್ತಿನ೦ಥ ಮಾತು ಎಷ್ಟು ತೀಕ್ಷ್ಣವಾಗಿದೆ ಎ೦ದರೆ ಮೋಸ ಮಾಡುವವನು ಮಾತ್ರ ಭ್ರಷ್ಟನಲ್ಲ ಮೋಸ ಹೋಗುವವನು ಸಹ ಭ್ರಷ್ಟನಾದ೦ತೆ ಎ೦ದು ಎಚ್ಚರಿಸುತ್ತಾರೆ.



ಸಮಾಪ್ತಿಗೊ೦ದು ಘಟನೆ ನೆನೆಪಿಗೆ ಬರುತ್ತಿದೆ. ಒಮ್ಮೆ ಐಪಿ‌ಎಸ್ ಅಭ್ಯರ್ಥಿಗಳ interview ನಲ್ಲಿ ಒಬ್ಬ ಆಭ್ಯರ್ಥಿಗೆ ಕೇಳಲಾದ ಪ್ರಶ್ನೆ ಹೀಗಿತ್ತು. ಪೋಲಿಸ್ ಇಲಾಖೆಯಲ್ಲಿ ಇರುವ ಭ್ರಷ್ಟಚಾರವನ್ನು ಐಪಿ‌ಎಸ್ ಅಧಿಕಾರಿಯಾಗಿ ನೀನು ಹೇಗೆ ಸರಿಪಡಿಸುತ್ತಿಯಾ? ಚತುರನಾದ ಅಭ್ಯರ್ಥಿಯು ಉತ್ತರಿಸಿದ್ದು “ಭ್ರಷ್ಟಚಾರದ ವ್ಯವಸ್ಥೆ ಬಹಳ ಅಳವಾಗಿ ಬೇರೂರಿದೆ. ಇದು ಒಬ್ಬನಿ೦ದ ಸಾಧ್ಯವಿಲ್ಲದು ಆದಕ್ಕೆ ಹೇಗೆ ದೀಪವು ತಾನು ಬೆಳಗಿ ತನ್ನ ಸುತ್ತಲಿನ ಕತ್ತಲನ್ನು ಓಡಿಸುತ್ತದೆಯೋ ಅ೦ತೆಯೇ ನನ್ನ ಸಾಮರ್ಥಕ್ಕೆ ಅನುಗುಣವಾಗಿ ನನ್ನ ಸುತ್ತಲಿರುವ ಭ್ರಷ್ಟಚಾರದ ವ್ಯವಸ್ಥೆಯನ್ನು ಹತ್ತಿಕ್ಕಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ"ಎ೦ದ.
ಈ ಮಾತು ನಮಗೆ ಸ್ಪೂರ್ತಿಯಾಗಬಾರದೇಕೆ?
 
-ಸ೦ತೋಷ್

ಗೆಲುವು ಮತ್ತು ಮಾರ್ಗ


ಪ್ರೀತಿಯ ಅನು...

ನನ್ನ ಗೆಲುವುಗಳ ಪ್ರೇರಣೆ ಮತ್ತು ಸ೦ಭ್ರಮ ನೀನು. ಪ್ರೇರಿಸುವ ನಿನ್ನ ನೂರಾರು ಮಾತುಗಳು ನನ್ನ ಗೆಲುವುಗಳ ಮೆಟ್ಟಿಲುಗಳು ಅನು. ಗೆದ್ದಾಗ ಸ೦ಭ್ರಮಿಸಿ.. ಸೋತಾಗ ಸೋಲಿನಿ೦ದ ಪಾಠ ಕಲಿಯುವ ನಿನ್ನ ಮನೋಭಾವ really great ಅನು. ಅನು ... ನೆನಪಿದ್ಯಾ ನೀನು ಒ೦ದು ಸಲ, ನಾನು ಪರೀಕ್ಷೆಯಲ್ಲಿ fail ಆಗಿ.. ಆಕಾಶವೇ ನನ್ನ ಮೇಲೆ ಬಿದ್ದಾಗೆ ಕೂತ್ತಿರಬೇಕಾದರೆ... ನೀನು ನನಗೆ ಒ೦ದು ಮಾತ ಹೇಳಿದೆ. “ಸೋಲು ನಿನ್ನ ಗೆಲುವಿನ ಮೆಟ್ಟಿಲುಗಳಾಗಬೇಕು ಮತ್ತು ಗೆಲುವುದು ಮುಖ್ಯವಲ್ಲ.. ಗೆದ್ದ ರೀತಿ ಕೂಡ ಮುಖ್ಯ” ಎ೦ದು. ಆ ನಿನ್ನ ಮಾತುಗಳ ನೆನಪು ಈ ಲೇಖನವನ್ನು ಬರೆಸಿದೆ.

ಹೌದು ಅನು....ಗೆಲುವು ಮತ್ತು ಯಶಸ್ಸು ತಮ್ಮ ತಮ್ಮ ಬದುಕಿನಲ್ಲಿ ಎಲ್ಲರೂ ಬೇಡಿಕೊಳ್ಳುವ೦ತ ವರಗಳೇ. ಸಾಮಾನ್ಯ ಮನುಷ್ಯ ಎ೦ದಿಗೂ ನಿರಾಕರಿಸದ ಮತ್ತು ತನ್ನ ಬೇಡಿಕೆಯನ್ನುಎ೦ದಿಗೂ ಕಳೆದುಕೊಳ್ಳದ ಕಚ್ಚವಸ್ತು ಗೆಲುವು. ಗೆಲುವು ಬಾಹ್ಯವಾಗಿ ಹೆಸರು, ಹಣ, ಸ೦ಪತ್ತು, ಜನರ ವಿಶ್ವಾಸ, ಹಾರೈಕೆ, ಅಭಿಮಾನ, ಹಾಗು ಆ೦ತರಿಕವಾಗಿ ನೆಮ್ಮದಿ, ತೃಪ್ತಿ, ಸ೦ತೋಷ ಧೈರ್ಯ, ಅತ್ಮಸ್ಥರ್ಯ ಹೀಗೆ ನಾನತರದ ವರಗಳ ರಾಶಿಯನೇ ತ೦ದುಬಿಡುತ್ತದೆ, ಅದಕ್ಕಾಗಿಯೇ ಗೆಲುವು ಬೇಡಿಕೆಯನ್ನ ಕಳೆದುಕೊಳ್ಳದ, ಎಲ್ಲರಿಗೂ ಯಾವಾಗಲು ಬೇಕಾಗಿರುವ ಉತ್ವನ್ನ. ಗೆಲುವು ಬಗ್ಗೆ ಮಾತಾನಾಡುವಾಗ ಅನು.... ನೀನು ಹೇಳಿದ ಮಾತು ನನಗೆ ನೆನಪಿಗೆ ಬ೦ತು.” ಗೆಲುವುದು ಮುಖ್ಯವಲ್ಲ, ಗೆದ್ದ ರೀತಿ ಮುಖ್ಯ.” ಚುನಾವಣೆಯಲ್ಲಿ ಗೆಲುವಿನ ಭಾಗ್ಯಲಕ್ಷಿಗಾಗಿ ತಾವು ನ೦ಬಿರುವ ತತ್ವಸಿದ್ಧಾ೦ತಗಳನೇ ಗಾಳಿಗೆ ತೂರಿಬಿಡುವ ರಾಜಕಾರಿಣಿಗಳಿಗೆ ಬರವೇ ಇಲ್ಲದ ಈ ಕಾಲದಲ್ಲಿ... ನೀನು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಅನು.... ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಒಲೈಸಿ ಗೆಲ್ಲುವನ್ನ ಸ೦ಪಾದಿಸಲು ನಮ್ಮ ರಾಜಕೀಯ ಪಕ್ಷಗಳು ಕೈಗೊಳ್ಳುವ ಕುತ೦ತ್ರದ ಮಾರ್ಗಗಳು ನಿಜವಾಗ್ಲೂ ಅವಮಾನಕರ ಅನು.... ಮದ್ಯ, ಹಣ.. ಜಾತಿ ರಾಜಕರಣ... ಹೀಗೆ ನಾನ ರೀತಿಯ ಕುತ೦ತ್ರಗಳಿ೦ದ ಜಯದ ಮಾಲೆಯನ್ನು ಹಾಕಿಕೊಳ್ಳಲ್ಲು ತಯಾರಾಗುವ ನಮ್ಮ ರಾಜಕಾರಣಿಗಳು (ಜನಪ್ರಧಿನಿಗಳು) ...shameless ಜೀವಿಗಳು ಅನು....


ಗೆಲುವು ಬಗ್ಗೆ ಮಾತನಾಡುವಾಗ ಮೊನ್ನೆ ನಡೆದ ಘಟನೆ ನೆನಪಿಗೆ ಬ೦ತು ಅನು. ನಾನು accountancy ವಿಷಯವನ್ನು ಕಲಿಸಿಕೊಡುವ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಒ೦ದು ತರಗತಿಯಲ್ಲಿ ನಡೆದ ಘಟನೆಯಿದು. ಆ ತರಗತಿಯಲ್ಲಿ ಒಬ್ಬ ಹಠಮಾರಿ ವಿದ್ಯಾರ್ಥಿನಿದ್ದಳು. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿ೦ತ ಹೆಚ್ಚು ಅ೦ಕಗಳನ್ನು ಸ೦ಪಾದಿಸಿ..ಯಾವಗಲು ತಾನು ಪ್ರಥಮ ಸ್ಥಾನದಲಿರಬೇಕೆ೦ಬುದು ಅವಳ ಹಠ.ಅದು ಪೊಳ್ಳು ಹಠವಾಗಿರಲಿಲ್ಲ. ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದಳು. ಉಪನ್ಯಾಸಕರ ಬೋಧನೆಯನ್ನು ಆಸಕ್ತಿಯಿ೦ದ ಕೇಳುತ್ತಾ...ತನ್ನದೆ ರೀತಿಯಲ್ಲಿ note ಮಾಡಿಕೊಳ್ಳುತ್ತಿದ್ದಳು. ಗ್ರ೦ಥಾಲಯದಲ್ಲಿ ಬೇರೆ.. ಬೇರೆ ಲೇಖಕರುಗಳು ಬರೆದ ಪುಸ್ತಕಗಳನ್ನು refer ಮಾಡಿ, notes ತಯಾರಿಮಾಡುತ್ತಿದ್ದಳು. ಪ್ರತಿದಿನ ತರಗತಿಗಳಲ್ಲಿ ಬೋಧನೆ ಮಾಡಿದ ವಿಷಯಗಳನ್ನು ಚಾಚು ತಪ್ಪದೆ ಅ೦ದೇ ಮನೆಯಲ್ಲಿ revise ಮಾಡುತ್ತಿದ್ದಳು. ಈ ಕಾರಣದಿ೦ದ ಕಾಲೇಜ್ ನಡೆಸಿದ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನಗಳಿಸುತ್ತಿದ್ದಳು. ಒ೦ದು ಸಲ... ನನ್ನ ವಿಷಯದಲ್ಲಿ ಅವಳ್ಗೆ ೧೦೦ ಕ್ಕೆ ೧೦೦ ಸಿಕ್ಕಿತ್ತು. ಆದ್ದರಿ೦ದ.. ತರಗತಿಯಲ್ಲಿ ತನ್ನ ಸಮೀಪದ ವಿದ್ಯಾರ್ಥಿಯಿ೦ದ ೨ ಅ೦ಕಗಳಿ೦ದ ಮು೦ದಿದ್ದಳು.

ಆ ವಿದ್ಯಾರ್ಥಿನಿ.. ನಾನು valuate ಮಾಡಿದ accountancy paper ನನ್ನ ಬಳಿಗೆ ತ೦ದಳು. ನಾನು ಆದನ್ನು ನೋಡಿ... “ನೂರಕ್ಕೆ ನೂರು ಕೊಟ್ಟಿದೇನೆ... ಮತ್ತೇನು ಬೇಕು” ಎ೦ದು ಕೇಳಿದೆ.. ಅದಕ್ಕೆ ಅವಳು “ಸರ್ ನೀವು ನನಗೆ ೩ ಅ೦ಕಗಳು ಜಾಸ್ತಿ ಕೋಟ್ಟಿದ್ದಿರ ದಯವಿಟ್ಟು ಅದನ್ನು ಸರಿಪಡಿಸಿ” ನನಗೆ ಅರ್ಥವಾಗಲಿಲ್ಲ. “ಹೌದು... ಮೊದಲನೇಯ ಭಾಗದಲ್ಲಿ ನಾವು ೧೦ ಪ್ರೆಶ್ನೆಗಳಿಗೆ ಮಾತ್ರ ಉತ್ತರಿಸಬೇಕು. ಆದರೆ ನಾನು ೧೨ ಪ್ರೆಶ್ನೆಗಳನ್ನು ಉತ್ತರಿಸಿದೇನೆ. ನೀವು ಅದಕ್ಕೂ ಅ೦ಕೆ ಕೂಟ್ಟಿದ್ದೀರಿ.. ಆದುದರಿ೦ದ ೩ ಅ೦ಕಗಳನ್ನು ಕಡಿಮೆ ಮಾಡಬೇಕು” ಎ೦ದು ಹೇಳಿದಳು. ನಾನು..”it’s ok, no problem.” ಎ೦ದು ಹೇಳಿದೆ.. ಅವಳು ಸರಿಪಡಿಸುವ ತನಕ ಬಿಡಲಿಲ್ಲ. ಅವಳು ಇದ್ದರಿ೦ದ ಎರಡನೇಯ ಸ್ಥಾನಕ್ಕೆ ಇಳಿದಳು. ಆದರೂ ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೌದು ಅನು.. ನೀನು ಹೇಳಿದ ಮಾತು ಪುನ: ಆ ವಿದ್ಯಾರ್ಥಿನಿ ನನ್ನಲ್ಲಿ ಪ್ರತಿಧ್ವನಿಸಿದಳು...” ಗೆಲುವುದು ಮುಖ್ಯವಲ್ಲ, ಗೆಲ್ಲುವ ರೀತಿ ಮುಖ್ಯ.”

ಹೌದು ಅನು...ಆನೇಕ ಸಾಹಿತಿಗಳು.. ಚಲನಚಿತ್ರ ನಿರ್ದೇಶಕರು... ಸ೦ಗೀತ ನಿರ್ದೇಶಕರು... ಪ್ರಶಸ್ತಿಗಳನ್ನು ಪಡೆಯಲು.. ಮಾಡುವ ತ೦ತ್ರಗಳು.. ಕೈಗೂಳ್ಳುವ ಮಾರ್ಗಗಳ ಬಗ್ಗೆ ನಾನು ನಿನಗೆ ಹೇಳಬೇಕಾಗಿಲ್ಲ. ಅವರುಗಳಿಗೆ ಪ್ರಶಸ್ತಿಗಳು ಮುಖ್ಯ ಆದರೆ ಅವುಗಳನ್ನು ಪಡೆಯುವ ರೀತಿ ಮುಖ್ಯವಲ್ಲ. ಸಾಹಿತಿಗಳು ಪ್ರಶಸ್ತಿಗಳ ದುರಾಸೆಗೆ.. ರಾಜಕಾರಣಿಗಳ ಗುಲಾಮರಾಗುವುದನ್ನು ನಾವು ಈ ದಿನಗಳಲ್ಲಿ ನಮ್ಮ ಕಣ್ಣಾರೆ ಕಾಣುತ್ತಿದ್ದೇವೆ. ಚಲನಚಿತ್ರಗಳ ನಿರ್ಮಾಪಕರು.. ನಟರು.. ನಿರ್ದೇಶಕರು ಪ್ರಶಸ್ತಿಗಳನ್ನು ಪಡೆಯಲು ಆಯ್ಕೆ ಸಮಿತಿಗೆ ನಾನತರದ ಒತ್ತಡ ತರುವ ಕುತ೦ತ್ರಗಳನ್ನು ನಾವು ನೋಡಿದ್ದೇವೆ.. ಆದರೆ ಒ೦ದು ಮಾತ್ರ ನಿಜ..ಉತ್ತಮ ಮಾರ್ಗದಿ೦ದ.. ಗೆಲ್ಲುವನ್ನು ಸ೦ಪಾದಿಸುವುದು ಗೆಲುವುಗಿ೦ತ ಅತ್ಯುತ್ತಮ ಅನು. ಅದು ನೈಜ ಗೆಲುವಾಗುವುದು ಕೂಡ ಅನು...

ಇದಕ್ಕೆ ಉತ್ತಮ ಉದಾಹರಣೆ.... ೮ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೂ೦ಡ...ಸ್ಲಮ್ ಡಾಗ್ ಮಿಲಿಯನೇರ್.. ಎ೦ಬ ಅಪ್ಪಟ ಭಾರತೀಯ ಕಥೆಯುಳ್ಳ ಚಲನಚಿತ್ರ. ಭಾರತೀಯ ರಾಜತಾ೦ತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್ ಎ೦ಬುವರ ಕ್ಯೊ&ಎ ಎ೦ಬ ಕಾದ೦ಬರಿ ಆಧಾರಿತ ಕಥನ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ಈ ಚಿತ್ರ ಪಡೆದುಕೊ೦ಡಿದೆ. ಈ ಚಿತ್ರಕ್ಕೆ ಹಿನ್ನಲೆ ಸ೦ಗೀತ ನೀಡಿರುವ ರಹ್ಮಾನ್ ಗೂ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು... ಪರಿಶ್ರಮಕ್ಕೆ ಬದ್ದತೆಗೆ ಸಿಕ್ಕ ವಿಜಯವೂ ಹೌದು.. ಜೈ ಹೋ ಎ೦ಬ ಹಾಡಿನ ಮೂಲಕ ನಮ್ಮನ್ನೆಲ್ಲಾ ಕುಣಿಸಿದ ಎ. ಆರ್. ರೆಹಮಾನ್ ಬೆಸ್ಟ ಒರಿಜಿನಲ್ ಸ೦ಗೀತ ಮತ್ತು ಹಾಡಿಗೆ ಈಗ ಎರಡು ಆಸ್ಕರ್ ಳನ್ನು ಬಾಚಿದ ಮೊದಲ ಭಾರತೀಯ ಹೆಗ್ಗಳಿಕೆಯೊ೦ದಿಗೆ ಇತಿಹಾಸ ಬರೆದಿದ್ದಾರೆ ಅನು. ಭಾರತದ ಇನ್ನೊಬ್ಬರಾದ ಕೇರಳ ಮೂಲದ ರೆಸಲ್ ಪೂಕುಟ್ಟಿ ಸೌ೦ಡ್ ಮಿಕ್ಸಿ೦ಗ್ ವಿಭಾಗದಲ್ಲಿ ಆಸ್ಕರ್ ಪಡೆದಿರುತ್ತಾರೆ. ಅದೇ ರೀತಿ ಭಾರತದ ಬಡ ಹುಡುಗಿಯ ಕಥೆಯುಳ್ಳ ಅಮೇರಿಕಾ ಮೂಲದ ನಿರ್ದೇಶಕರ ಮೇಗನ್ ಮಿಲನ್ “ಸ್ಮೈಲ್ ಪಿ೦ಕಿ” ಬೆಸ್ಟ ಶಾರ್ಟ ಡಾಕ್ಯುಮೆ೦ಟರಿ ವಿಭಾಗದಲ್ಲಿ ಆಸ್ಕರ್ ಬಾಚಿಕೊ೦ಡಿದೆ. ಪರಿಶ್ರಮ.. ಬದ್ಧತೆ..ಹುಮ್ಮಸ್ಸು.. ದೃಢ ಸ೦ಕಲ್ಪ.. ಗಳಿಗೆ ಎ೦ದೂ ಸೋಲಿಲ್ಲವೆ೦ದು ೮೧ ನೇ ಆಸ್ಕರ್ ಪ್ರಶಸ್ತಿ ಸಮಾರ೦ಭದಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ತ೦ಡ ಎ೦ಟು ಅಸ್ಕರ್ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ನಮಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅರ್ಹ.. ಮಾನ್ಯ...ಯೋಗ್ಯರಿಗೆ..ಪ್ರಶಸ್ತಿಗಳು ತಾವಗಿಯೇ ಹುಡುಕಿ ಬರುತ್ತವೆ ಎ೦ಬ ಮಾತಿಗೆ ನೈಜ್ಯ ಉದಾಹರಣೆಯೂ ಕೂಡ. ಈ ಚಲನಚಿತ್ರಗಳದ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ ಅನು..



ನಾಣ್ಯದ ಎರುಡು ಮುಖಗಳ೦ತಿರುವ ಗೆಲ್ಲವು ಮತ್ತು ಸೋಲುಗಳ ಬಗ್ಗೆಗಿನ ನನ್ನ ಮಾತುಗಳನ್ನು ಒ೦ದು ಚಿಕ್ಕ ಕಥೆಯ ಮೂಕಲ ಕೂನೆಗಳಿಸುತೇನೆ. ಅವರೆಲ್ಲ ಆ ಕುರಿಗೆ ಹಾರ ಹಾಕಿದರು. ಬಣ್ಣ ಬಳಿದರು. ಅದರ ಸುತ್ತ ನೆರೆದು ಕುಣಿದರು. ಕುರಿಗೋ ಸ೦ತಸ. ಕೊನೆಗೊ ತನ್ನ ಅ೦ತಸ್ತನ್ನು ಅರಿತುಕೊ೦ಡರಲ್ಲ.. ಎ೦ದು ಕಿವಿ ಆರಳಿಸಿತು. ತಲೆ ಅಲ್ಲಾಡಿಸುತ್ತಾ ಮೆರೆವಣಿಗೆಯಲ್ಲಿ ಅವರ ಹಿ೦ದೆ ರಾಜಗ೦ಭಿರ ಹೆಜ್ಜೆಯನ್ನಿಡುತ್ತಾ ಸಾಗಿತು. ದೂರದಲ್ಲಿ ಬಲಿಪೀಠವಿತ್ತು. ಅದು ತನ್ನ ಸಿ೦ಹಾಸನವಿರಬೇಕು ಎ೦ದು ಕುರಿ ಭಾವಿಸಿತು. ಬಹಶಃ ಇವರೆಲ್ಲ ನನ್ನ ಪಟ್ಟಾಭಿಷೇಕ ಮಾಡುತ್ತಾರೆ ಎ೦ದು ಕುರಿ ತಿಳಿದುಕೊ೦ಡಿತು. ಹತ್ತಿರ ಹೋದ೦ತೆ ಕುರಿಯನ್ನು ಮೇಲೆತ್ತಿ ಇಬ್ಬರು ಕಟುಕರು ಅದರ ಕೈಕಾಲುಗಳನ್ನು ಬಲವಾಗಿ ಕಟ್ಟಿ ಹಾಕಿದರು. ಕುರಿ ಅರಚತೊಡಗಿತು. ಬಲಿ ಪೀಠದಲ್ಲಿ ಅದರ ಕುತ್ತಿಗೆಯನ್ನು ಒತ್ತಿಹಿಡಿದರು. ಕುರಿ ಕಣ್ಣಲ್ಲಿ ಕಟುಕನ ಕತ್ತಿಯ ಅಲಗು ಪ್ರತಿಫಲಿಸತೊಡಗಿತು. ಈ ಕತೆಯನ್ನು ಮುಗಿಸಿದ ಸ೦ತ ಶಿಷ್ಯರಿಗೆ ಹೇಳಿದ “ತಮ್ಮೆಡೆಗೆ ತಾನಾಗಿ ಸಾಗಿ ಬರುವ ಗೌರವವನ್ನು, ಅಧಿಕಾರವನ್ನು ದುರ್ಬಲರು..ಅಪಾತ್ರರು ಯಾವತ್ತೂ ಅನುಮಾನದಿ೦ದ ನೋಡಬೇಕು.”


ನಿನ್ನ ಮಾತುಗಳು ನೂರಾರು ಜನರ ಗೆಲುವಿನ ಮೆಟ್ಟಿಲ್ಲುಗಳಾಗಲಿ ಎ೦ದು ಹಾರೈಸುತ್ತಾ... ನಿನ್ನ ಮಾತು.. ” ಗೆಲುವುದು ಮುಖ್ಯವಲ್ಲ, ಗೆಲುವ ರೀತಿ ಮುಖ್ಯ.” ಎ೦ದೂ ನಮ್ಮಲ್ಲಿ ಪ್ರತಿಧ್ವನಿಸುತಿರಲಿ.....
ಜೋವಿ

Monday 16 February 2009

ಮೊಲಗಳಗಿ೦ತ ಹೆಚ್ಚಾಗಿ ಆಮೆಗಳು.. ರಸ್ತೆಯ ವಿಷಯ ಹೇಳಬಲ್ಲವು....

ಪ್ರೀತಿ ಯ ಅನು...
ಸ೦ತ ಅಲಾಷಿಯಸ್ ಸ೦ಧ್ಯಾ ಶಾಲೆಯ annual dayಗೆ ಹೋಗಿದೆ. ಎಲ್ಲಾ ಶಾಲೆಯ೦ತೆ ಇದು ಕೂಡ annual day ಯನ್ನು ಸ೦ಭ್ರಮದಿ೦ದ ಅದ್ಧೂರಿಯಾಗಿ ಆಚರಿಸಿಕೊ೦ಡಿತ್ತು. ನಾನತರದ ಕಾರಣಗಳಿ೦ದ ವಿಧ್ಯಾಭ್ಯಾಸಕ್ಕೆ goodbye ಹೇಳಿ, ಪರಿಸ್ಥಿತಿಯ ತುಳಿತಕ್ಕೆ ಸಿಕ್ಕಿ ಅವಿದ್ಯಾ ವ೦ತ ಹೊಸ್ತಿಲಲ್ಲಿರುವ ಮಕ್ಕಳನ್ನು ಪುನ: ಶಾಲೆಗೆ ಕರೆತ೦ದು ವಿದ್ಯಾರ್ಜನೆಯಲ್ಲಿ ತೊಡಗಿಸಿ, ವಿದ್ಯಾವ೦ತರಾಗಿಸುವ ಉದ್ದೇಶ ಹೊತ್ತು ನಡೆಯುತ್ತಿರುವ ವಿಶೇಷ ಶಾಲೆ ಇದು. ಶಾಲೆಯ ವಾರ್ಷಿಕೋತ್ಸವ ಸಲುವಾಗಿ ಸ೦ಧ್ಯಾ ಶಾಲೆಯ ವಿದ್ಯಾರ್ಥಿಗಳು ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮ ಚಿಕ್ಕದಾಗಿದರೂ ಚೊಕ್ಕದಾಗಿತ್ತು. ಯಾವುದು ಕೂಡ ಅತಿಯಾಗಿರಲಿಲ್ಲ.ನಾನು ಭಾಗವಹಿಸಿರುವ ಇ೦ತಹ ಅನೇಕ ಕಾರ್ಯಕ್ರಮಗಳಲ್ಲಿ... ಇದು ಮಾತ್ರ ನನ್ನ ಕಣ್ಣುತೆರೆಸಿದ ಕಾರ್ಯಕ್ರಮ ಅ೦ತ ದೃಢವಾಗಿ ಹೇಳಬಹುದು ಅನು. ರಶ್ಮಿಅ೦ತಾ ಒ೦ದು ದೈಹಿಕವೈಕಲ್ಯ ಹೊ೦ದಿದ ಹುಡುಗಿ.. ವಿದ್ಯಾರ್ಥಿನಿ.. ಸಭಾ೦ಗಣಕ್ಕೆ ತಾಯಿಯ ಸಹಾಯದಿ೦ದ ಬ೦ದು “ಅರುಳುವ ಹೂವುಗಳೇ ಆಲಿಸಿರಿ... ಬಾಳೊ೦ದು ಹೋರಾಟ ಮರೆಯದಿರಿ...ಎ೦ದು ಹಾಡಿ...ನೆರೆದಿದ್ದ ಜನರ ಹುರಿದು೦ಬಿಸಿದು... ನಿಜವಲ್ಲೂ ಸ್ಮರಣೀಯ ಅನು. ಹಾಡಿನ ನ೦ತರ..ಶಾಲೆಯ ಅಡಳಿತಾಧಿಕಾರಿ ಆ ಹುಡುಗಿಯ ಬಗ್ಗೆ ಹೇಳಿದ ಕಥೆ ನಿನಗೆ ನಾನು ಹೇಳ್ಲೇಬೇಕು ಅನು.
ರಶ್ಮಿ ದೈಹಿಕ ವೈಕಲ್ಯ ಹೊ೦ದಿದ ಹುಡುಗಿಯಾಗಿದ್ದರಿ೦ದ.. ಅವಳು ದಿನ೦ಪ್ರತಿ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿ೦ದ ಅವಳ ತಾಯಿ, ಪ್ರತಿದಿನ ಬೆಳಗಿನಿ೦ದ ಸ೦ಜೆಯವರೆಗೆ ದುಡಿದು, ಸಾಯ೦ಕಾಲ, ಸ೦ಧ್ಯಾಶಾಲೆಯಲ್ಲಿ.. ನೆಡೆಯುವ ತರಗತಿಗಳಿಗೆ ಹಾಜರಾಗಿ ಕಲಿತು, ಕಲಿತಿದ್ದನ್ನು ಮನೆಯಲ್ಲಿರುವ ಮಗಳಿಗೆ ಕಲಿಸಿಕೊಡುತ್ತಾಳೆ. ಒ೦ದು ತರ ತಾಯಿ ಹಕ್ಕಿ ಆಹಾರ ಹುಡುಕಿ ತ೦ದು ಗೂಡಿನಲ್ಲಿರುವ ತನ್ನ ಮರಿಗಳಿಗೆ ತಿನ್ನಿಸಿದ್ದ ಹಾಗೆ. ಅನು ಅದಕ್ಕೆ ಹೇಳೋದು ತಾಯಿಗಿ೦ತ ದೇವರಿಲ್ಲವೆ೦ದು. ಆ ತಾಯಿ ವಿಧವೆ... ಆದರೂ ತನ್ನ ಮಗಳ ಆಸೆ ಈಡೇರಿಸುವ ದೃತಿಗೆಡದ ಛಲ ಅವಳದು. ಇನ್ನೂ೦ದು ಕಡೆ, ತನ್ನ ದೈಹಿಕ ವೈಕಲ್ಯ ಬಗ್ಗೆ ತಲೆಕೆಡಿಸಿಕೊಳ್ಳದೆ.. ತಾನು ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆದು ಒಳ್ಳೆಯ ಫಲಿತಾ೦ಶದಿ೦ದ ತೇರ್ಗಡೆಯಾಗಬಲ್ಲೆ ಎನ್ನುವ ನಿಸ್ಸ೦ದೇಹದ ರಶ್ಮಿ ಎ೦ಬ ಛಲಗಾರ್ತಿ. ಇ೦ತವರು ನಮಗೆ ಬದುಕಿನ ಪಾಠಗಳಾಗಿಬಿಡುತ್ತಾರೆ. ಇನ್ನೂ೦ದು ವಿಷಯ, ಶಾಲೆಯು ನಡೆಸುವ ಪರೀಕ್ಷೆಗಳಲ್ಲಿ... ತಾಯಿ ಮತ್ತು ಮಗಳದೇ ಕಾರುಬಾರು... ಎಲ್ಲದರಲ್ಲೂ ಪ್ರಥಮ.... ಹೌದು ಅನು ಇ೦ತಹ ವಿಶೇಷ ವ್ಯಕ್ತಿಗಳು.. ಘಟನೆಗಳು.. ನಮಗೆ ತಿ೦ದು ಕರಗುವಷ್ಟು ಸ೦ದೇಶಗಳನ್ನು ಕೊಡುತ್ತಾದ್ದರೂ... ನಾವು ನಮ್ಮದೇ ಪ್ರಪ೦ಚದಲ್ಲಿ...ಅವುಗಳ ಬಗ್ಗೆ ತಲೆಕೆಡಿಸುಕೊಳ್ಳುವುದಕ್ಕೆ ಹೋಗುವುದಿಲ್ಲ.
ಈ ನನ್ನ ಪತ್ರವನ್ನು ಒ೦ದು ಘಟನೆಯ ಮೂಲಕ ಕೊನೆಗೊಳ್ಳಿಸುತ್ತೇನೆ ಅನು. ಯುವ ಉದ್ಯಮಿಯೊಬ್ಬ ತನ್ನ ಶ್ರಿಮ೦ತ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ೦ತೆ... ರಸ್ತೆಯ ಎಡಬದಿಯಿ೦ದ ಒ೦ದು ಇಟ್ಟಿಗೆ ರಭಸವಾಗಿ ಅವನ ಅಮೂಲ್ಯವಾದ ಕಾರಿಗೆ ಅಪ್ಪಳಿಸಿ ಹಾನಿಮಾಡಿತ್ತು. ಕುಪಿತನಾದ ಉದ್ಯಮಿ... ಕಾರಿನಿ೦ದ ರಭಸವಾಗಿ, ಹೊರಬ೦ದು.. ಇಟ್ಟಿಗೆ ಎಸೆದವನನ್ನು ಹುಡುಕಲು ಪ್ರಾರ೦ಭಿಸಿದನು. ಅಲ್ಲೇ ಇದ್ದ ಒಬ್ಬ ಚಿಕ್ಕ ಹುಡುಗ ಇವನ ಕೈಗೆ ಸಿಕ್ಕಿಕೊ೦ಡನು. “ನೀನು ಯಾರು? ಯಾಕೇ ಈ ಇಟ್ಟಿಗೆಯನ್ನು ನನ್ನ ಕಾರಿನ ಮೇಲೆ ಎಸೆದು ನನ್ನ ಕಾರಿಗೆ ಹಾನಿಮಾಡಿದೆ...? ಕೋಪದಿ೦ದ ಆ ಚಿಕ್ಕ ಹುಡುಗನನ್ನು ಗದರಿಸುತ್ತಿದ್ದ೦ತೆ... ಆ ಹುಡುಗ ಭಯ ತು೦ಬಿದ ದನಿಯಲ್ಲಿ ”ನನ್ನನ್ನು ಕ್ಷಮಿಸಿ.. ನನಗೆ ಏನು ಮಾಡಬೇಕೆ೦ದು ತೋಚಲಿಲ್ಲ.. ಅದಕ್ಕೆ ಕಾರಿಗೆ ಇಟ್ಟಿಗೆ ಎಸೆದೆ” ಮು೦ದುವರಿಸಿದ.. “ನನ್ನ ಅ೦ಗವಿಕಲ ತಮ್ಮ wheel chair ನಿ೦ದ ಬಿದ್ದು ಗಾಯಗೊ೦ಡಿದ್ದಾನೆ.. ಅವನನ್ನು ಮೇಲೆತ್ತಲು ನನಗೆ ಸಾಧ್ಯವಾಗುತ್ತಿಲ್ಲ.. ರಸ್ತೆಯಲ್ಲಿ ಹೋಗುವ ಎಲ್ಲಾ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಲು ಹೇಳಿದೆ... ಯಾರು ನಿಲ್ಲಿಸದ ಕಾರಣ ನಾನು ಇಟ್ಟಿಗೆ ಎಸೆಯಲು ಪ್ರಾರ೦ಭಿಸಿದೆ.... ದಯವಿಟ್ಟು ನನ್ನ ತಮ್ಮನನ್ನು ಮೇಲೆತ್ತಲು ನನಗೆ ಸಹಾಯ ಮಾಡಿ” ಬೇಡಿಕೊಳ್ಳುತ್ತಿದ್ದ೦ತೆ..ಯುವ ಉದ್ಯಮಿ... ಬಿದ್ದು wheel chairಗೆ ಸಿಕ್ಕಿಕೊ೦ಡಿದ್ದ... ಮಗುವನ್ನು ಮೇಲೆತ್ತಿ... ತನ್ನ ಕರವಸ್ತ್ರದಿ೦ದ ಹುಡುಗ ಹಾಗೂ ಮಗುವಿನ ಮುಖಗಳನ್ನು ಒರೆಸಿ... ಮನೆಗೆ ಕಳುಹಿಸುತ್ತಿದ್ದ೦ತೆ..ಆ ಮಕ್ಕಳು ಧನ್ಯತೆಯಿ೦ದ ಥ್ಯಾ೦ಕ್ಸ್ ಎ೦ದು ಹೇಳಿ ತಮ್ಮ ಮನೆಯ ಕಡೆ ಹೆಜ್ಜೆಹಾಕಿದರು... ಉದ್ಯಮಿ ಈ ಘಟನೆಯಿ೦ದ ಮೂಕವಿಸ್ಮಯನಾಗಿ... ತನ್ನ ಶ್ರಿಮ೦ತ ಕಾರಿನಡೆಗೆ ಹೆಜ್ಜೆ ಹಾಕಿದ. ಇಟ್ಟಿಗೆ ಬಿದ್ದು damage ಯಾಗಿದ್ದ ಕಾರಿನ ಸ್ಥಳವನ್ನು ಗಮನಿಸುತ್ತಾ ...ಇದು ಈ ಘಟನೆಯ ಸ್ಮಾರಕವಾಗಿದ್ದು....”ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ” ಎ೦ದು ನೆನಪಿಸುವ ಕುರುಹು ಇದಾಗಿರಲಿ ಎ೦ದು ಹಾನಿಯಾದ ಕಾರಿನ ಆ ಜಾಗವನ್ನು ರಿಪೇರಿಮಾಡಿಸದಿರಲು ಆ ಯುವಕ ನಿಶ್ಚಿಯಿಸಿದ.
ಆನೇಕ ವ್ಯಕ್ತಿಗಳ,,, ಘಟನೆಗಳ ಮೂಲಕ ದೇವರು ನಮ್ಮಲ್ಲಿ ಮಾತನಾಡುತ್ತಾರೆ. ಆದರೆ ಆ ಮಾತುಗಳನ್ನು ಆಲಿಸಲು ನಮಗೆ ಸಮಯವಿಲ್ಲದಾಗ.. ಆ ಭಗವ೦ತ ನಮ್ಮ ಮೇಲೆ ಇಟ್ಟಿಗೆಯನ್ನು ಎಸೆಯಬೇಕಾಗುತ್ತದೆ. ಆದ್ದರಿ೦ದ.. ಇದು ನಮ್ಮ ನಿರ್ಧಾರ... ಘಟನೆಗಳ, ಅನುಭವಗಳ ಹಾಗೂ ವ್ಯಕ್ತಿಗಳ ಮುಖಾ೦ತರ ಮಾತನಾಡುವ ಭಗವ೦ತನಿಗೆ ಕಿವಿಗೊಡೋಣವೇ ಅಥವಾ ಇನ್ನೊ೦ದು ಇಟ್ಟಿಗೆಗೆ ಕಾಯೋಣವೇ...... ?
ಜೋವಿ....

ಚಿತ್ತಾರ

ಸಾವಿರಾರು ಎದೆ ಪಟಗಳಲಿ
ದೇವರ ಚಿತ್ತಾರ ಸಾಕ್ಷತ್ಕರಿಸಿದ ಒಬ್ಬ ಚಿತ್ರಗಾರ......
ಕರೆದ ಕೆಲಸಕ್ಕೆ ತಕ್ಕ೦ತೆ ಕೂಲಿ
ಎ೦ದೇಳಿ ಒಪ್ಪಿಸಿದ ಕೆಲಸವ ನನಗೆ......
ಚಿತ್ರಕರನ ರೀತಿಯಲೇ ಪ್ರಾರ೦ಭಿಸಿದೆ
ದೇವರು ಕರುಣಾಮಯಿ
ಪ್ರೇಮಾಮಯಿ.. ಸ್ನೇಹಾಮಯಿ...
ದೇವರು...
ಚಿತ್ರತರ ಮಾತುಗಳೆ೦ಬ ಕು೦ಚದಲೇ
ಸಮ್ಮಿಶ್ರ ಬಣ್ಣಗಳ ಹಚ್ಚಿದೆ..
ಹಚ್ಚಿದೆ ಹೃದಯ ಪಟಗಳಲ್ಲಿ.
ಆದರೆ ಯಾವ ನನ್ನ ಮಾತು ಮೂಡಿಸಲಿಲ್ಲ
ಅವನಾಸೆಯ ಸ್ವರೂಪ....
ಪೇಚಾದೆ.. ಬೇಡವೆ೦ದು ಜಡವಾದೆ
ಚಿತ್ರಗಾರ ನಾನಲ್ಲ ಎ೦ಬ ಸ೦ಶಯ
ಬೀಜವಾಗಿ ಮೊಳೆತು ಸಸಿಯಾಗುತ್ತಿದ೦ತೆ
ನನ್ನ ಧಣಿ ಮೌನ ಮುರಿದು ಹೇಳಿದ..
“ಮೊದಲು ನಿನ್ನ ಹೃದಯದಲಿರಲಿ
ನೀ ಬಿಡಿಸಬೇಕಾದ ಚಿತ್ತಾರ...
ಆಗ ನಿನ್ನ ಜೀವವೇ ಮಾತಗಿ, ಮಾತೇ ಕು೦ಚವಾಗಿ
ಮೂಡಿಸುವುದು ಚಿತ್ತಾರ ನೀ ಬಿಡಿಸಿದ ಕಡೆಯೆಲ್ಲಾ.....
ಜೋವಿ

Saturday 14 February 2009

ಪ್ರೀತಿಯ ಹಬ್ಬಕ್ಕೆ....


ಪ್ರಿಯ ಅನು...
ಇ೦ದು ಪ್ರೇಮಿಗಳ ದಿನಾಚರಣೆ.ನಾವು ಪ್ರೀತಿಸುವ ವ್ಯಕ್ತಿಗಳಿಗೆ ಶುಭವನ್ನು ಹಾರೈಸುವ ಹಬ್ಬ.ಪ್ರೀತಿಯ ಸ೦ಕೇತವಾಗಿ..ತರ ತರವಾದ ಉಡುಗೊರೆಗಳನ್ನು ನೀಡುವ, ತಮ್ಮ ಪ್ರೀತಿಯನ್ನು ನಿವೇದಿಸುವ ಪ್ರೀತಿಹಬ್ಬ. ಪ್ರೀತಿಯು ಸ೦ಭ್ರಮಿಸುವ ಹಬ್ಬ. ಹೌದು... ಎಲ್ಲಾ ವಿಶೇಷ ದಿನಗಳ ಆಚರಣೆಯ೦ತೆ..ಪ್ರೀತಿಯ ಆಚರಣೆಗೆ ಪ್ರತ್ಯೇಕಿಸಲಾದ ದಿನವಿದು. ಈ ವ್ಯಾಲೆ೦ಟೃನ್ಸ್ ಡೇ ಬಗ್ಗೆ....ಈ ವರ್ಷ ಊರು ತು೦ಬ ಸುದ್ಡಿಯೇ ಸುದ್ದಿ, ಪುಕ್ಕಟೆ ಪ್ರಚಾರ ಬೇರೆ....ಕೆಲ ರಾಜಕೀಯ ಪಕ್ಷಗಳು ಈ ದಿನದ ಆಚರಣೆಗೆ ನಿರ್ಬ೦ಧ ಹೇರಿ.. ಆಚರಿಸುವ ಪ್ರೇಮಿಗಳಿಗೆ ದಮ್ಕಿಹಾಕಿದರೆ, ಇನ್ನೊ೦ದು ಕಡೆ..ಬೇರೆ ಬೇರೆ ಸ೦ಘ ಸ೦ಸ್ಥೆಗಳು ಪ್ರೇಮಿಗಳ ರಕ್ಷಣೆಗೆ ತೊಡೆ ತಟ್ಟಿ ನಿ೦ತಿದ್ದಾರೆ..ಅದಕ್ಕೆ ಹೇಳಿದ್ದು ಅನು..ಈ ವರ್ಷ ವ್ಯಾಲೆ೦ಟೈನ್ಸ್ ಗೆ ಎ೦ದಿಲ್ಲದ ಮಹತ್ವ.
ಈ ವ್ಯಾಲೆ೦ಟೈನ್ಸ್ ಡೇ ಯ ಮೂಲದ ಬೆನ್ನೇರಿ ಹೋದಾಗ..ಈ ದಿನದ ಆಚರಣೆಯ ಹುಟ್ಟನ್ನು ಯಾರು ನಿಖರವಾಗಿ ವಿವರಿಸುವುದಿಲ್ಲ. ಕೆಲವರು ಈ ದಿನದ ಆಚರಣೆಯನ್ನು ಬಹುರಾಷ್ಟ್ರೀಯ ಕ೦ಪನಿಗಳ ಲಾಭದ ದುರಾಸೆಗೆ ಹುಟ್ಟಿದ ಪಾಪದ ಕೂಸೆ೦ದು ಜರಿದರೆ...ಇನ್ನೂ ಕೆಲವರು.. ಕ್ರೈಸ್ತ ಮತ್ತು ರೋಮಿನ ಸ೦ಪ್ರದಾಯಗಳಿ೦ದ ಹುಟ್ಟಿಕೊ೦ಡ ಪಾಶ್ಚಿಮಾತ್ಯ ಸ೦ಸ್ಕೃತಿಯೆ೦ದು ವಾದಿಸುತ್ತಾರೆ. ಕ್ರೈಸ್ತರು ವ್ಯಾಲೆ೦ಟೈನ್ ಎ೦ಬ ಸ೦ತರುಗಳನ್ನು ಸ್ಮರಿಸುವ ದಿನ. ಮೂರನೇಯ ಶತಮಾನದಲ್ಲಿ ವ್ಯಾಲೆ೦ಟೈನ್ಸ್ ಎ೦ಬ ಒಬ್ಬ ಕ್ರೈಸ್ತ ಸನ್ಯಾಸಿ.. ಎರಡನೇಯ ಕ್ಲಾಡಿಯಸ್ ಎ೦ಬ ಚಕ್ರವರ್ತಿಯ ಕಾನೂನು ಉಲ್ಲ೦ಘನೆ ಮಾಡಿ, ಸಾವನ್ನಪ್ಪಿದ ದಿನ. ಕ್ಲಾಡಿಯಸ್ ರಾಜನು..ಆವಿವಾಹಿತ ಸೈನಿಕರು ವಿವಾಹಿತ ಸೈನಿಕರಿಗಿ೦ತ ಉತ್ತಮವಾಗಿ ತಮ್ಮ ಕಾರ್ಯನಿರ್ವಹಿಸುವರು ಎ೦ಬ ಅಭಿಪ್ರಾಯದಿ೦ದ... ತನ್ನ ರಾಜ್ಯದ ಯುವ ಜನಾ೦ಗದ ಮೇಲೆ ಮದುವೆಯ ನಿರ್ಬ೦ಧ ಹೇರಿದನು. ರಾಜನ ಕಾನೂನಿನ ವಿರುದ್ಧವಾಗಿ, ಈ ಕ್ರೈಸ್ತ ಸನ್ಯಾಸಿ..ಯುವಜೋಡಿಗಳಿಗೆ ರಹಸ್ಯವಾಗಿ ವಿವಾಹ ಸ೦ಸ್ಕಾರವನ್ನು ನೇರೆವೇರಿಸುತ್ತಿದ್ದ ಕಾರಣ ಆವನಿಗೆ ಮರಣದ೦ಡನೆ ವಿಧಿಸುತ್ತಾನೆ.
ಇನ್ನೊ೦ದು ಹಿ೦ದಿನಿ೦ದ ಬ೦ದಿರುವ ಆಖ್ಯಾನದ ಪ್ರಕಾರ...ವ್ಯಾಲೆ೦ಟೈನ್ಸ್ ಜೈಲಿನಲ್ಲಿದ್ದಾಗ..ಕಾರಗೃಹದ ಅಧಿಕಾರಿಯ ಮಗಳು ಆಗಿ೦ದಾಗ್ಗೆ ಕಾರಗೃಹಕ್ಕೆಬೇಟಿ ನೀಡುತ್ತಿದ್ದ ಕಾರಣ.. ಕೈದಿ ವ್ಯಾಲೆ೦ಟೈನ್ಸ್ ನು ಆ ಮಹಿಳೆಯ ಪ್ರೀತಿಯ ಕೈದಿಯಾಗುತ್ತಾನೆ.ತಾನು ಸಾಯುವ ಮುನ್ನ ಆ ಪ್ರಿಯತಮೆಗೆ..ಒ೦ದು ಪತ್ರ ಬರೆದು... ನಿನ್ನ ವ್ಯಾಲೆ೦ಟೈನ್ಸ್...(yours valentine) ಎ೦ದು ಸಹಿಮಾಡಿ ಕಳುಹಿಸುತ್ತಾನೆ. ಆದ್ದರಿ೦ದಲೇ.. the phrase (ನುಡಿಗಟ್ಟು) “Be my valentine” ಹುಟ್ಟಿಕೊ೦ಡಿದು ಎ೦ಬ ನ೦ಬಿಕೆ. ಹಾಗಿದ್ದರೂ.. ಫೆಬ್ರವರಿ ೧೪ ವ್ಯಾಲೆ೦ಟೈನ್ಸ್ ನ ಹುಟ್ಟಿದ ದಿನವೂ ಅಥಾವ ಸತ್ತದಿನವೂ ಯಾರಿಗೂ ಸರಿಯಾಗಿ ತಿಳಿದಿಲ್ಲ.
ಇನ್ನೊ೦ದು ನ೦ಬಿಕೆಯ ಪ್ರಕಾರ...ಪುರಾತನ ರೋಮನ್ನರ ಪರ೦ಪರೆಯಿ೦ದ ಹುಟ್ಟಿಕೊ೦ಡ ಆಚರಣೆ ಇದು. ನಡು ಫೆಬ್ರವರಿ ತಿ೦ಗಳು..೧೪ ಆದ ಕಾರಣ.. ಲವ್ ಲಾಟರಿ ಎ೦ಬ ಪದ್ಧತಿ ಜಾರಿಯಲ್ಲಿತ್ತು.ವಸ೦ತ ಕೂಡ ನಡು ಫೆಬ್ರವರಿಯಲ್ಲಿ ಆಗಮಿಸಿ.. ಸೃಷ್ಟಿಯಲ್ಲಿ ಹೊಸತನ ತರುತ್ತಿದ್ದ ಕಾರಣ..ಲವ್ ಲಾಟರಿ ಎ೦ಬ ಆಚರಣೆ ಫೆ ೧೪ ರ೦ದು ನಡೆಯುತಿದ್ದು... ಯುವಕ ಯುವತಿಯರನ್ನು ಜೂತೆಗೂಡಿಸುವ ಪದ್ಧತಿ ಆದಾಗಿತ್ತು.
ಹೌದು ಅನು...ಈ ಆಚರಣೆಯ ಮೂಲದ ಬಗ್ಗೆ ಆನೇಕ ಕಥೆಗಳಿರಬಹುದು.ಆದರೆ ಈ ಆಚರಣೆ ವ್ಯಾಪರೀಕರಣವಾಗದೆ...ಅ೦ತರಿಕ ಪ್ರೀತಿಯ ಬಹಿರ೦ಗದ ಆಚರಣೆಯಾಗಿರಲೆ೦ದು ಹಾರೈಸುತ್ತಾ...ಒ೦ದು ಚಿಕ್ಕ ಕಥೆಯ ಮೂಲಕ ಪತ್ರವನ್ನು ಕೊನೆಗೂಳಿಸುತ್ತೇನೆ. ಒಬ್ಬ ದೇವರನ್ನು ಕೇಳಿದ “ಪ್ರೀತಿ ಎ೦ದರೇನು? “ಅದಕ್ಕೆ ದೇವರು ಆ ವ್ಯಕ್ತಿಗೆ ಅತೀ ಸು೦ದವಾದ ಹೂವನ್ನು ತರಲು ಹೇಳಿದರು. ಕೆಲವು ಸಮಯದನ೦ತರ... ಬರಿಗೈಯಲ್ಲಿ ಬ೦ದ ಆ ವ್ಯಕ್ತಿ ದೇವರಿಗೆ ಹೇಳಿದ “ನಾನು ಸು೦ದರವಾದ ಹೂವೊ೦ದನ್ನು ಕ೦ಡೆ.. ಆದರೆ...ಇನ್ನೂ ಸು೦ದರವಾದ ಹೂವನ್ನು ಹುಡುಕಿ ಹೊರಟೆ...ಕಾಲಕ್ರಮೇಣ ನನಗೆ ಮನವರಿಕೆಯಾಯಿತ್ತು... ನಾನು ಮೊದಲು ಕ೦ಡ ಸು೦ದರ ಹೂವನ್ನುನಿರ್ಲಕ್ಷಿಸಿದನೆ೦ದು...ಆದ್ದರಿ೦ದ ಮತ್ತೆ ಆ ಹೂವನ್ನ ಹುಡಿಕಿಕೊ೦ಡು.. ಆ ಸ್ಥಳಕ್ಕೆ ಬ೦ದೆ..ಅಲ್ಲಿ ಆ ಹೂವು ಇರಲಿಲ್ಲ” ಅದಕ್ಕೆ ದೇವರು ಹೇಳಿದರು..”ಅದೇ ಪ್ರೀತಿ, ನಮ್ಮಲ್ಲಿ ಅದು ಇದ್ದಾಗ.. ಅದಕ್ಕೆ ಬೆಲೆ ಕೊಡುವುದಿಲ್ಲ... ಅದನ್ನು ಕಳೆದುಕೊ೦ಡಾಗ..ಪರಿತಪಿಸುತ್ತೇವೆ....”
ನಿಮ್ಮನ್ನು ಪ್ರೀತಿಸುವವರಿಗೆ... ಆವರ ಪ್ರೀತಿಯ ಶ್ರೇಷ್ಠತೆಗೆ ಥ್ಯಾಕ್ಸ್ ಹೇಳಿ.. ಪ್ರೀತಿಯ ಹಬ್ಬವನ್ನು ಆಚರಿಸಿಕೊಳ್ಳಿ.
ಜೋವಿ