Sunday 20 January 2019

K G F - ಕಾರ್ಯಕಾರಿ ನಿರ್ಮಾಪಕರೊಂದಿಗೆ ಒಂದು ಸಂವಾದ

3 ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ಸುದ್ದಿ ಮಾಡುತ್ತಲೇ ಬಂದ ಕೆ.ಜಿ.ಫ್ ಸಿನಿಮಾ ಬಿಡುಗಡೆಯ ನಂತರ ಅದೆಲ್ಲವನ್ನೂ ಮೀರಿಸುವಂತ ಹೆಸರು ಮಾಡಿರುವುದು ಕನ್ನಡದ ಮಟ್ಟಿಗೆ ಒಂದು ದೈತ್ಯ ಹೆಜ್ಜೆಯೇ. ಕನ್ನಡದ ಮಾರುಕಟ್ಟೆಗೆ ಹಾಗೂ ಕ್ಯಾನ್ವಸ್ಸಿಗೆ ಮೀರಿದ ಬಡ್ಜೆಟ್ಟ್ನಲ್ಲಿ ತಯಾರಾದ ಚಿತ್ರ, ಕನ್ನಡದ ಮಾರುಕಟ್ಟೆಯನ್ನು ಮೀರಿ ಇತರ ಚಿತ್ರರಂಗದಲ್ಲೂ ತನ್ನ ಕೈ ಚಳಕ ತೋರಿದೆ. ಇತರ ಭಾಷೆಯಲ್ಲೂ ಬಿಡುಗಡೆಯಾದ ಚಿತ್ರ ಅದೇ ಸಮಯದಲ್ಲಿ ಬಿಡುಗಡೆಯಾದ ದೊಡ್ಡ ಸ್ಟಾರ್  ಚಿತ್ರಗಳ ನಡುವೆಯೂ ಗೆದ್ದಿದೆ.

ಇದರಲ್ಲಿ ಚಿತ್ರದ ವಸ್ತು ಹಾಗೂ ಅದರಲ್ಲಿ ಭಾಗಿಯಾದ ಎಲ್ಲರ ಕೊಡುಗೆ ಎಷ್ಟು ಮುಖ್ಯವೂ ನನ್ನ ಅನಿಸಿಕೆಯಲ್ಲಿ ಈ ಚಿತ್ರದ ನಿರ್ಮಾಪಕರ ಶ್ರಮ, ಧೈರ್ಯ, ಚಿತ್ರ ಪ್ರೀತಿ, ಮಾರ್ಕೆಟಿಂಗ್ ಹಾಗೂ ಮೂರು ವರ್ಷಗಳ ಶ್ರಮ – ಸಹನೆಯೂ ಅಷ್ಟೇ ಮುಖ್ಯವಾಗಿದೆ. ಒಂದು ಕನ್ನಡ ಚಿತ್ರವನ್ನೂ ಇಡೀ ಭಾರತ ಮಾತ್ರವಲ್ಲದೆ , ಅದರಾಚೆಗೂ ಕೊಂಡೊಯ್ಯಬಹುದು ಎಂಬ ನಿರ್ಮಾಪಕರ ಆಲೋಚನೆ, ಆತ್ಮ ವಿಶ್ವಾಸ ನಿಜಕ್ಕೂ ಅದ್ಭುತ. ಚಿತ್ರದ ನಾಯಕ, ತಾಂತ್ರಿಕ ವರ್ಗದ ಮಾತುಗಳನ್ನು ಹಲವಾರು ಕಡೆ ಕೇಳಿದ್ದೇವೆ, ಓದಿದ್ದೇವೆ.

ಚಿತ್ರದ ಹಿಂದಿನ ನಿರ್ಮಾಪಕ ತಂಡದ ಅನುಭವವನ್ನು ಚಿತ್ರದ ಕಾರ್ಯಕಾರಿ ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಇಲ್ಲಿ ಹಂಚಿಕೊಂಡಿದ್ದಾರೆ. ಅವರು ಪ್ರಮುಖ ನಿರ್ಮಾಪಕರಾದ ವಿಜಯ್ ಕಿರಗಂದೂರ್ ರವರ ಕಸಿನ್ ಕೂಡ. ಒಂದು ಅರ್ಥದಲ್ಲಿ ಈ ಚಿತ್ರ ನಿರ್ಮಾಣವಾಗಲು ಕಾರ್ತಿಕ್ ರವರು ಸಹಾ ಪ್ರಮುಖ ಕಾರಣಕರ್ತರು. ಮಿತಭಾಷಿಯಾದ ಕಾರ್ತಿಕ್ ಒಮೊಮ್ಮೆ ಪ್ರಶ್ನೆಗಿಂತಲೂ ಸಣ್ಣ  ಉತ್ತರಗಳನ್ನು ಕೊಟ್ಟಿದ್ದಾರೆ. ಅವರೊಂದಿಗಿನ ಕಿರು ಸಂದರ್ಶನ ಇಲ್ಲಿದೆ -  
 
ಪ್ರಶ್ನೆ  : ನಮಸ್ಕಾರ ಕಾರ್ತಿಕ್, ಮೊದಲಿಗೆ ನಿಮಗೆ ನಿಮ್ಮ ಇಡೀ ತಂಡಕ್ಕೆ ದೊಡ್ಡ ಶುಭಾಶಯ. ನಿಮ್ಮ ಕೆಜಿಫ್ ಸಿನಿಮಾ ದೊಡ್ಡ ಯಶಸ್ಸಿನ ಜೊತೆ, ಹಲವಾರು ಹೊಸ ದಾರಿಗಳನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟಿದೆ. ಅದಕ್ಕೆ ನಿಮಗೆ ಧನ್ಯವಾದಗಳು ಹಾಗೂ ಶುಭಾಶಯಗಳು

ಕಾರ್ತಿಕ್ – ವಂದನೆಗಳು ಸಾರ್.


ಪ್ರಶ್ನೆ : ಒಂದು ಸಂದರ್ಶನದಲ್ಲಿ ನಾಯಕ ಯಶ್, ’ ಚಿತ್ರದ ಬಗ್ಗೆ ಮೊದಲು ನನ್ನ ಬಳಿ ಹೇಳಿದ್ದು ಕಾರ್ತಿಕ್ ಅವರು’ ಎಂದು ಹೇಳಿದ್ದನ್ನು ಕೇಳಿದ್ದೇವೆ. ಕೆ.ಜಿ.ಎಫ್ ಮೊದಲು ಹೇಗೆ ರೂಪುಗೊಂಡಿತು?

ಕಾರ್ತಿಕ್ – ಉಗ್ರಂ ಚಿತ್ರ ನೋಡಿ, ಇಷ್ಟವಾಗಿ ನಾನು ಪ್ರಶಾಂತ್ ನೀಲ್ ರವರನ್ನು ಸಂಪರ್ಕಿಸಿದೆ. ನಮ್ಮ ಸಂಸ್ಥೆಗೂ ಒಂದು ಚಿತ್ರ ಮಾಡಿ ಕೊಡಿ ಅಂಥ. ಆಗ ಅವರು ಈ ಚಿತ್ರದ ಲೈನ್ ಹೇಳಿದ್ರು. ಅದನ್ನ ನಾನು ಯಶ್ ಅವರ ಬಳಿ ಹೋಗಿ ಹೇಳಿದೆ.


 ಪ್ರಶ್ನೆ : ಆರಂಭದ ದಿನಗಳಲ್ಲಿ ಚಿತ್ರ ಇಷ್ಟೊಂದು ದೊಡ್ಡ ಕ್ಯಾನ್ವಸ್ಸಿನಲ್ಲಿ ನಿರ್ಮಾಣವಾಗುತ್ತದೆ ಎಂಬ ಅರಿವು, ಸುಳಿವು ನಿಮ್ಮಗಿತ್ತ ಅಥವಾ ಹಂತ ಹಂತವಾಗಿ ಇದು ಬೆಳೆಯುತ್ತಾ ಹೋಯಿತಾ?

ಕಾರ್ತಿಕ್ – ಕೆಜಿಎಫ್ ಚಿತ್ರ ಮಾಡಬೇಕು ಅಂಥ ನಿರ್ಧಾರ ಮಾಡಿದಾಗಲಿಂದಲೂ ಇದು ಒಂದು ದೊಡ್ಡ ಸಿನಿಮಾ ಅಗುತ್ತೆ ಅಂಥ ನಾವು ಮೈಂಡ್ ಸೆಟ್ ಮಾಡಿಕೊಂಡಿವಿ. ಆದರೆ ಐದು ಭಾಷೆಯಲ್ಲಿ ಆಗುತ್ತೆ ಅನ್ನೋ ಐಡಿಯಾ ಇರಲಿಲ್ಲ ಅಷ್ಟೇ.

ಪ್ರಶ್ನೆ : ಇಂಥಹ ಚಿತ್ರಗಳಲ್ಲಿ ತೆರೆಮರೆಯ ವ್ಯಕ್ತಿಗಳ ಪಾತ್ರ ದೊಡ್ಡದು, ಅದರಲ್ಲೂ ಒಬ್ಬ ಕಾರ್ಯಕಾರಿ ನಿರ್ಮಾಪಕ ಎಲ್ಲವನ್ನೂ ಹೊಂದಿಸುತ್ತಾ ಹೋಗಬೇಕು? ನೀವು ಎದುರಿಸಿದ ಸವಾಲುಗಳೇನು?

ಕಾರ್ತಿಕ್ –  ನನ್ನ ಜೊತೆ ಮತ್ತೊಬ್ಬ ಕಾರ್ಯಕಾರಿ ನಿರ್ಮಾಪಕರಾದ ರಾಮರಾವ್ ಸಾರ್ ಇದ್ದಾರೆ. ಸಿನಿಮಾ ರಂಗದಲ್ಲಿ ಬಹಳ ಅನುಭವ ಇರುವ ಅವರು ನನ್ನ ಜೊತೆ ಬಹುತೇಕ ನಿರ್ಮಾಣದ ಜವಬ್ದಾರಿಯನ್ನು ನಿರ್ವಹಿಸಿದರು. ಜೊತೆಗೆ ನಮದೊಂದು ಟೀಮ್ ಇತ್ತು. ನಾವೆಲ್ಲಾ ಜೊತೆಗೆ ಕೆಲಸ ಮಾಡಿದ್ವಿ. ಏನೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ನಾವು ತಂಡವಾಗಿಯೇ ನಿರ್ಧಾರ ಮಾಡುತ್ತಿದ್ದೆವು. ಸವಾಲುಗಳು ಸಾಮಾನ್ಯ ಸಾರ್. ಎಲ್ಲಾ ಸಿನಿಮಾದಲ್ಲೂ ಅದು ಇರುತ್ತೆ. ಅಲ್ಲಿ ಏನು ಇರುತ್ತೋ ಇಲ್ಲೂ ಅದೇ ಇದಿದ್ದು. ನಡುವಲ್ಲಿ 5 ಭಾಷೆಯಾದರಿಂದ ಸವಾಲುಗಳು ಸ್ವಲ್ಪ ಜಾಸ್ತಿನೇ ಆಯ್ತು. ಕೆಲವು ಹೊಸ ಸವಾಲುಗಳೂ ಎದುರಾದವು. ದೇವರ ದಯೆಯಿಂದ ಎಲ್ಲವನ್ನೂ ಎದುರಿಸಿಕೊಂಡು ಬಂದ್ವಿ.  

ಪ್ರಶ್ನೆ : ನೀವಿನ್ನೂ ಯುವಕರು, ಅಂತೆಯೇ ವರ್ಷಾನುಗಟ್ಟಲೆ ಅನುಭವ ಇರುವವರೂ ಅಲ್ಲ. ಆದರೂ ಇದೆಲ್ಲವನ್ನು ಅದ್ಭುತವಾಗಿ ನಿರ್ವಹಿಸುವಲ್ಲಿ ಹೇಗೆ ಯಶಸ್ವಿಯಾದಿರಿ?

ಕಾರ್ತಿಕ್ –  ಹ ಹ ಹ, ಎಲ್ಲಾ ನಮ್ಮ ಬ್ರದರ್ ವಿಜಯ್ ಕಿರಗಂದೂರ್ರವರ ಮಾರ್ಗದರ್ಶನ ಅಷ್ಟೇ.

ಪ್ರಶ್ನೆ : ಯಾವುದೇ ಹಂತದಲ್ಲಿ ಬಡ್ಜೆಟ್ ಹೆಚ್ಚುತ್ತಿದೆ, ಮರಳಿ ಗಳಿಸಲು ಸಾಧ್ಯವೇ ಎಂಬ ಅಳಕು ನಿಮ್ಮ ತಂಡಕ್ಕೆ ಎಂದಾದರೂ ಬಂತೇ?

ಕಾರ್ತಿಕ್ – ಖಂಡಿತ ಇಲ್ಲ.

ಪ್ರಶ್ನೆ : ಚಿತ್ರೀಕರಣದ ಸಂದರ್ಭದಲ್ಲಿ ಅಥವಾ ನಿರ್ಮಾಣದ ಸಮಯದಲ್ಲಿ ನಿಮಗೆ ಮರೆಯಲು ಸಾಧ್ಯವಾಗದ ಘಟನೆ ಯಾವುದು? 

ಕಾರ್ತಿಕ್ – ಕೆಜಿಎಫ್ ಊರಲ್ಲಿ ಮಾಡಿದ ಪ್ರತಿಯೊಂದು ದಿನದ ಚಿತ್ರೀಕರಣವೂ ಮರೆಯಲಾಗದ ಅನುಭವವೇ. ಶೂಟಿಂಗ್ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ಅಲ್ಲಿ ಒಟ್ಟು 57 ದಿನ ಶೂಟಿಂಗ್ ಮಾಡಿದ್ವಿ, ಒಂದು ದಿನ ಕೂಡ ಮರೆಯೋಕೆ ಆಗೊಲ್ಲ.

ಪ್ರಶ್ನೆ : ಬೇರೆ ಭಾಷೆಯಲ್ಲೂ ಚಿತ್ರವನ್ನು ಡಬ್ಬ್ ಮಾಡಬೇಕು, ಇಡೀ ಭಾರತಕ್ಕೆ ತಲುಪಿಸಬೇಕೆಂಬ ಯೋಚನೆ ಮೂಡಿದ್ದು ಯಾವಾಗ? ಒಂದು ಹಂತದ ಚಿತ್ರೀಕರಣ ಮುಗಿದ ಮೇಲೆಯೇ ಅಥವಾ ಡಬ್ಬಿಂಗ್ ಸಮಯದಲ್ಲೇ?

ಕಾರ್ತಿಕ್ – ಇದು ಮತ್ತೆ ನಮ್ಮ ತಂಡದ ನಿರ್ಧಾರ. 3 ದಿನದ ಶೂಟಿಂಗ್ ಆದ ಮೇಲೆ, ವಿಶಿಯುಲ್ಸ್ ನೋಡಿದ ಮೇಲೆ ನಮ್ಮ ತಂಡ ಈ ನಿರ್ಧಾರಕ್ಕೆ ಬಂತು.

ಪ್ರಶ್ನೆ : ಚಿತ್ರದಲ್ಲಿ ತೊಡಗಿಕೊಂಡವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ನಿಮಗೆ ವ್ಯಯಕ್ತಿಕವಾಗಿ ಸಿಕ್ಕ ಅತ್ಯಂತ ದೊಡ್ಡ ಮೆಚ್ಚುಗೆ ಕಾಂಪ್ಲಿಮೆಂಟ್ ಯಾವುದು? ಯಾರದು?

ಕಾರ್ತಿಕ್ –  ಚಿತ್ರಮಂದಿರದ ಸೆಟ್ ಅಪ್ ಹಾಗೂ ಹಂಚಿಕೆ, ಅಂದರೆ ಡಿಸ್ಟ್ರಿಬೂಷನ್ ನಲ್ಲಿ ನನ್ನ ಕೆಲಸ ನೋಡಿ ನನ್ನ ಬ್ರದರ್ ವಿಜಯ್ ಕಿರಗಂದೂರ್ರವರು ಬಹಳ ಮೆಚ್ಚುಗೆ ಸೂಚಿಸಿದರು, ಸಂತೋಷ ಪಟ್ಟ್ರು. ಅದೇ ನನಗೆ ಸಿಕ್ಕ ದೊಡ್ಡ ಕಾಂಪ್ಲಿಮೆಂಟ್.

ಪ್ರಶ್ನೆ : ನೀವು ಈಗಾಗಲೇ ಕೆ.ಜಿ.ಸ್ಟುಡಿಯೋಸ್ ಮೂಲಕ ವಿತರಕರಾಗಿದ್ದೀರಿ, ನಿಮ್ಮಲ್ಲಿ ಒಬ್ಬ ಕಥೆಗಾರನಿದ್ದಾನೆ, ನಿರ್ದೇಶಕನಿದ್ದಾನೆ, ಕನಸುಗಾರನಿದ್ದಾನೆ. ನಿಮ್ಮ ಮುಂದಿನ ಯೋಜನೆಗಳು?

ಕಾರ್ತಿಕ್ –  ಗೊತ್ತಿಲ್ಲ ಸಾರ್. ಪ್ರತಿ ದಿನವೂ ಬೇರೆ, ಅದು ಬಂದಂಗೆ ಎದುರಿಸಬೇಕು ಅಷ್ಟೇ. ನಾಳೆ ಅದೇ ಮಾಡ್ತೀನಿ, ಇದೇ ಮಾಡ್ತೀನಿ ಅಂಥಾ ಹೇಳೋದು ಸುಲಭ ಆದ್ರೆ ಮಾಡೋದು ಕಷ್ಟ. ಸೋ, ಹೇಗೆ ಬರುತ್ತೋ ಹಾಗೆ ನಡೆದುಕೊಂಡು ಹೋಗೋಣ.
Read more!