Friday, 21 September 2012

"ಬಂದ್" ದಿತರಿಗೆ ಬಿಡುಗಡೆ......?

     ಹೋದ್ಯಾ ಪಿಶಾಚಿ ಆದ್ರೆ ಬಂದೆ ಗವಾಕ್ಷಿಲಿ ಅಂತ "ಬಂದ್" ಬಂದು ಮೂರುದಿನ ಆಗಿಲ್ಲ ಆಗಲೇ ಪುನಃ ಬಂದ್ ಅಂತ ಹೇಳ್ತಾರಲ್ಲ ಎಂದು ನನ್ನ ಗೆಳೆಯನೊಬ್ಬ ಸಿಡುಕಿದ. ಸಾಮಾನ್ಯವಾಗಿ ನಮಗೆ ರಜೆ, ತುರ್ತು ರಜೆಗಳು ಖುಷಿಕೊಡುತ್ತವೆ. ಆದರೆ ಇವನ ಈ ಮಾತಿನಿಂದ ಆಶ್ಚರ್ಯವಾಯಿತು. ನಿಜಕ್ಕೂ ಈ ಬಂದ್ ಎಂದರೆ ಏನು? ಏಕೆ? ಮತ್ತು ಹೇಗೆ? ಎಂದು ವಿಚಾರಮಂಥನ ಮಾಡಿದಾಗ ತಿಳಿದದು ಬಂದ್ ಒಂದು ಸಾಮೂಹಿಕ ಪ್ರತಿಭಟನೆ. ತಮ್ಮ ಕೆಲಸಕಾರ್ಯಗಳನ್ನು ಸೇವೆ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅವಿಧೇಯತೆಯನ್ನು ಪ್ರದರ್ಶಿಸುವ ರಾಜಕೀಯ ಪ್ರಕ್ರಿಯೆ. ಮೂಲತಃ ಪ್ರತಿಭಟನೆಯನ್ನು ಬಂದ್ ಹೆಸರಿನಲ್ಲಿ ಕರೆಯುವುದು ಭಾರತ ಹಾಗೂ ನೇಪಾಳದಲ್ಲಿ ರೂಢಿಯಲ್ಲಿದೆ. ಭಾರತಕ್ಕೂ ಬಂದ್ ಗು ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಆಡಳಿತ ಪಕ್ಷದ ನಿರ್ಣಯಗಳ ವಿರುದ್ಧ ವಿರೋಧಪಕ್ಷಗಳು ಸಾರುವ ಯುದ್ಧ. ದೇಶದಾದ್ಯಂತ ಕರೆಕೊಡುವ ಈ ಯುದ್ಧಕ್ಕೆ "ಭಾರತ್ ಬಂದ್" ಅಂತಲೇ ಕರೆಯುತ್ತಾರೆ.

         ಮೇ 31 ಕ್ಕೆ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಆಚರಿಸಿದವು. ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಬಸ್ಸುಗಳು ಎರಡು ದಿನ ಬೀದಿಗಿಳಿಯದೇ ಬಂದ್ ಆಚರಿಸಿದವು.  ಅದಕ್ಕೂ ಮೊದಲು ಭಾರತದಾದ್ಯಂತ ಬ್ಯಾಂಕ್ ಗಳು ಎರಡು ದಿನ ವಹಿವಾಟು ಸ್ಥಗಿತಗೊಳಿಸಿ ಬಂದ್ ನಡೆಸಿತ್ತು. ಸೆಪ್ಟಂಬರ್ 20ರಂದು ಮತ್ತದೇ ಬಂದ್ ವಕ್ಕರಿಸಿದೆ. ಕಾವೇರಿ ವಿವಾದದಲ್ಲಿ ಕಾವೇರಿದ ಹಲವು ದಿನಗಳು ಬಂದ್ ಗೆ ಶರಣಾಗುತ್ತವೆ,. ಹೀಗೆ ಬಂದ್ ಮಾಡುವುದರಿಂದ ಸಾರ್ವಜನಿಕವಾಗಿ ನಮ್ಮ ಆಕ್ರೋಶವನ್ನು, ಒತ್ತಡ ಹೇರುವಂತ ತಂತ್ರವು ಪರಿಣಾಮಕಾರಿಯಾದದ್ದೆ. ಕೈಗೊಂಡ ನಿರ್ಧಾರಗಳ ಮುಂದಿನ ನಡೆಯು ಪರಿಶೀಲನೆಗೆ ಒಳಪಡಬೇಕು ಅಥವಾ ಮುಂದೆ ಎಂದಾದರೂ ಇಂತಹದೇ ವಿಷಯದಲ್ಲಿ ನಿರ್ಣಯಗಳಾಗುವಾಗ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಸೂಚಿಗಳಾಗಬೇಕು ಎಂಬ ಎಚ್ಚರಿಕೆಯ ಬಿಸಿ ಮುಟ್ಟಿಸುವುದು ಪ್ರಜಾಪ್ರಭುತ್ವದ ಬಹುದೊಡ್ಡ ಅಸ್ತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಮಾಡಿದ್ದು ತಪ್ಪು ಎನಿಸಿದರೆ ಬಂದ್ ಗೆ ಕರೆಗೊಡುತ್ತೇವೆ. ನಮ್ಮ ತಪ್ಪನ್ನು ಮಾಫಿ ಮಾಡಿ ಎಂದು ಬಂದ್ ನಡೆಯುತ್ತದೆ. ಹೊಸತನಕ್ಕೊಂದು ಬಂದ್, ಹೆಸರೇ ಇಲ್ಲದಿರುವ ಕೆಲವು ಬಂದ್. ಇವ ಸೋತದ್ದಕ್ಕೆ ಒಂದು ಬಂದ್, ಅವ ಸತ್ತದಕ್ಕೆ ಒಂದು ಬಂದ್. ಬಂದ್ ಮೇಲೆ ಬಂದ್..!! ನಮ್ಮ ದೇಶದ ಸರ್ವೋಚ್ಚನ್ಯಾಯಲವು ಇಂತಹ ಬಂದ್ ಗಳನ್ನು ನಡೆಸಕೂಡದು ಎಂದು 1998ರಲ್ಲಿ ತಾಕೀತು ಮಾಡಿತ್ತು.  ಮತ್ತೆ 2004ರಲ್ಲಿ ಮುಂಬೈ ಬಾಂಬ್ ದಾಳಿ ವಿರೋಧಿಸಿ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ನಡೆಸಿದ ಬಂದ್ ಗೆ ನ್ಯಾಯಾಲಯ ತೀವ್ರ ಅಕ್ಷೇಪ ವ್ಯಕ್ತಪಡಿಸಿತ್ತು. ಈಗಲೂ ವರ್ಷಕ್ಕೆ 40 ರಿಂದ 50 ಭಾರಿ ಬಂದ್ ಆಚರಿಸುತ್ತದೆ ನಮ್ಮ ಪಶ್ಚಿಮ ಬಂಗಾಳ.

       ಇದೇ ಬಂದ್ ಗಳ ಅಡ್ಡಪಾರಿಣಾಮಗಳು ಜನಸಾಮಾನ್ಯರ ಕಾಲಿಗೆ ಬಂದು ಸುತ್ತಿಕೊಳ್ಳುತ್ತವೆ ಎಂದು ಯೋಚಿಸಿದ್ದೇವಾ? ಇಲ್ಲ. ನಮ್ಮಲ್ಲಿ ಆಕ್ರೋಶ ಮನೆಮಾಡಿರುವುದರಿಂದ ನಮ್ಮ ಮನೆ ಕಿಟಕಿಗಾಜು ಬಾಗಿಲುಗಳನ್ನು ದ್ವ 0ಸ ಮಾಡುತ್ತೇವೆಯೇ ಇಲ್ಲ ಅದರಬದಲು ಸರ್ಕಾರಿ ಕಛೇರಿಗಳ ಮೇಲೆ, ಸಾರ್ವಜನಿಕ ವಾಹನಗಳಿಗೆ ಕಲ್ಲು ತೂರಿ, ರಸ್ತೆ ಅಗೆದು, ಟಯರ್ ಸುಟ್ಟು, ಅಂಗಡೀಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಸಿಸಿ ಬಂದ್ ಆಚರಿಸುತ್ತೇವೆ. ಅಷ್ಟಕ್ಕೂ ಇಲ್ಲಿ ಸಾರ್ವಜನಿಕರು ಯಾರು? ಯಾವುದೋ ಪಕ್ಷ ಅಥವಾ ಸಂಘಟನೆಗಳು ಅಷ್ಟೇ. ಇವರ ಪ್ರತಿಷ್ಟೆಯನ್ನು ತೋರಿಸಲೊ, ಇವರ ಇರುವಿಕೆಯನ್ನು ಪ್ರದರ್ಶಿಸಲೊ ಹುಟ್ಟಿಕೊಳ್ಳುವ ಬಂದ್. ಇಂತಹ ಬಂದ್ ನಿಂದಾಗಿ ದೇಶಕ್ಕಾಗುವ ನಷ್ಟವಾದರೂ ಎಷ್ಟು ಗೊತ್ತೇ? ಬರೊಬರಿ 2500 ಸಾವಿರ ಕೋಟಿಯ ಅಂದಾಜು. ಅಂದರೆ ರಾಜ್ಯದಲ್ಲಿ ಬರ ಬಂದಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪರಿಹಾರಧನವಾಗಿ ಮೀಸಲಿಟ್ಟ ಹಣದ ಮೊತ್ತಕ್ಕೆ ಸಮ. ಇಷ್ಟು ದೊಡ್ಡ ಮೊತ್ತವನ್ನು ಮತ್ತೆ ಗಳಿಸಿಕೊಳ್ಳುಲೇಬೇಕಾದ ಸರ್ಕಾರ ತಮ್ಮ ನೀತಿ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸುತ್ತದೆ. ಅದು ಹೇಗೆ ಎಂದರೆ ತುಸು ಬೆಲೆ ಏರಿಕೆ, ತೆರಿಗೆ ಹೇರಿಕೆ, ಸೌಲಭ್ಯಗಳಲ್ಲಿ ಕಡಿತ, ಸಬ್ಸಿಡಿಗಳನ್ನು ಮೊಟಕುಮಾಡಿ ಪ್ರತಿಯೊಬ್ಬನ ಭುಜದ ಮೇಲೆ ಹೊರೆಹೊರೆಸಿಬಿಡುತ್ತಾರೆ. ಇದರ ಪರಿಣಾಮ ದೇಶದ GDPಯಲ್ಲಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.  

           ಅರ್ಥವ್ಯವಸ್ಥೆಯಲ್ಲಿ GDP(Gross Domestic Product) ಎನ್ನುವುದು ಪ್ರತಿಯೊಬ್ಬ ಭಾರತಿಯನ ಸರಾಸರಿ ಜೀವನಮಟ್ಟವನ್ನು ಅಳೆಯುವ ಮಾಪನ. ಭಾರತದ ಆರ್ಥಿಕತೆಯ ಪ್ರಗತಿಯನ್ನು ಈ ಮಾಪನದ ಆಧಾರದಿಂದಲೇ ಗುರುತಿಸಲಾಗುವುದು. ದೇಶದಲ್ಲಿನ ಉತ್ಪನಗಳನ್ನು ಜನರ ಬೇಡಿಕೆಗೆ ತಕ್ಕಂತೆ ಬೆಲೆ ನಿಗದಿಮಾಡಿ ಅದರಿಂದ ಬರುವ ಆದಾಯ ನಡುವಣ ಲೆಕ್ಕಚಾರವೇ GDP. ಸಾಮಾನ್ಯರ ಭಾಷೆಯಲ್ಲಿ "ತಲಾದಾಯ" ಎಂತಲೂ ಕರೆದು ಸರಳೀಕರಿಸಿದ್ದಾರೆ. ಇಂತಹ GDP ಕಳೆದ ವರ್ಷದಿಂದ ಇಳಿಮುಖವಾಗುತಿದೆ. ಜಾಗತಿಕ ಆರ್ಥಿಕಾವಲಯದಲ್ಲಿ 120 ನೇ ಸ್ಥಾನದಲ್ಲಿದ್ದ ಭಾರತದ GDP ಈಗ 140ನೇ ಸ್ಥಾನಕ್ಕೆ ದೂಡಲ್ಪಟ್ಟಿರುವುದು ಶೋಚನೀಯ. ಇದರಿಂದ ರೂಪಾಯಿ ಮೌಲ್ಯವು ಕುಸಿತ ಕಂಡಿದೆ. ಇದೂ ಒಂದು ರೀತಿಯಲ್ಲಿ ಬರ (ಆರ್ಥಿಕ ಬರ). ಇದರ ಬಗ್ಗೆ ಸರ್ಕಾರ ಬಹು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿತ್ತಾದರೂ, ಬಂದ್ ನಂತಹ ಕ್ರಮದಿಂದ ದೇಶದ ಆರ್ಥವ್ಯವಸ್ಥೆಗೆ ಇನ್ನೂ ಹೊಡೆತ ಬೀಳುತ್ತದೆ ವಿನಃ ಮತ್ತೇನೂ ಇಲ್ಲ. ಪಾಳುಬಾವಿಗೆ ಬಿದ್ದವನ ಮೇಲೆ ಆಳಿಗೋಂದು ಕಲ್ಲು ಎನ್ನುವಂತೆ. ಬಂದ್ ಮಾಡುವುದರಿಂದ ಉತ್ಪನಗಳ ತಯಾರಿಕೆಯಲ್ಲಿ, ವಿವಿಧ ಸೇವೆ ಸುಧಾರಣೆಗಳಲ್ಲಿ, ವಹಿವಾಟುಗಳಲ್ಲಿ ತದನಂತರ ಆಧಾಯ ಗಳಿಕೆಗಳಲ್ಲಿ ತೊಂದರೆಯಾಗುವುದರಿಂದ ಬಂದ್ ದೇಶದ ಅಭಿವೃದ್ಧಿಗೆ ಮಾರಕವೇ ಸರಿ. ಇದರ ಬದಲು ಸಾಮಾಜಿಕ ಕಳಕಳಿ ಪ್ರದರ್ಶಿಸುವ ಬಂದ್ ಗಳು ಪ್ರಯೋಜನಕಾರಿ ಎಂದು ನನ್ನ ಅಭಿಪ್ರಾಯ. ಉದಾಹರಣೆಗೆ ಹತ್ತಿರವಿರುವ ಅಂಗಡಿಗೆ ನಡೆದೇ ಹೋಗುವುದು. ಸ್ವಂತ ವಾಹನ ಇದ್ದವರು ತಿಂಗಳಿಗೆ ಒಂದೆರಡುಸಲವಾದರು ಓಡಾಟಕ್ಕೆ ಸಾರ್ವಜನಿಕ ಬಸ್ಸುಗಳನ್ನು ಬಳಸುವುದು, ಒಬೋಬ್ಬರೇ ಓಡಾಡುವಾಗ ಕಾರಿಗಿಂತ ದ್ವಿಚಕ್ರ ವಾಹನ ಬಳಸುವುದರಿಂದ ಪೆಟ್ರೊಲ್ ಡೀಸೇಲಿನ ಉಳಿತಾಯ ಸಾಧ್ಯ. ವಿದ್ಯುತ್ ಚಕ್ತಿಯನ್ನು ಅವಶ್ಯವಿದ್ದಾಗ ಮಾತ್ರ ಬಳಸುವುದು, ಸಾಧ್ಯವಾದರೆ ಸೋಲಾರ್ (ಸೌರಶಕ್ತಿ) ಅಳವಡಿಸಿಕೊಳ್ಳುವುದು ಧನಾತ್ಮಕ ಅಂಶ. ಅಡುಗೆ ಅನಿಲದ ಬಳಕೆಯಲ್ಲಿ ತುಸು ಜಿಪುಣತವಿದ್ದರೆ ಒಳ್ಳೆಯದೇ. ಇದೆಲ್ಲ ನಮ್ಮ ದಿನ ಬಳಕೆಯ ಅಗತ್ಯತೆಗಳು ಮತ್ತು ನೈಸರ್ಗಿಕವಾಗಿ ಸಿಗುವಂತ ಸಂಪನ್ಮೂಲಗಳಾದರೂ ನಿಸರ್ಗ ಈ ಮನುಷ್ಯನ ಹೊಟ್ಟೆಬಾಕುತನವನ್ನು ನೀಗಿಸುವಲ್ಲಿ ದಿನೆದಿನೇ ದಣಿದುಹೋಗುತಿದೆ. ಮುಂದಿನ ದಿನಗಳಲ್ಲಿ ಈ ಸಂಪನ್ಮೂಲಗಳ ಕೊರತೆಯೂ ನಮಗೆ ತಟ್ಟದೆ ಇರದು. 

       ಮುಂದುವರೆದ ದೇಶಗಳು 'ಗ್ಲೋಬಲ್ ವಾರ್ಮಿಂಗ್' (ಉಷ್ಣಾಂಶದ ಕಾವು ಹೆಚ್ಕಳದಿಂದಾಗಿ ಜಗತ್ತು ವಿನಾಷದ ಅಂಚಿಗೆ ಹೋಗುತ್ತಿರುವ ಸುಳಿವು)  ತಗ್ಗಿಸುವಂತಹ ದೂರದೃಷ್ಟಿ ಇರುವ ಯೋಜನೆಗಳತ್ತ ಚಿತ್ತಹರಿಸುತ್ತಿದ್ದರೆ, ನಮ್ಮ ದೇಶದಲ್ಲಿ ನಾಳೆಯ ಯೋಚನೆಯೂ ನಮ್ಮಲ್ಲಿ ಸುಳಿಯುತ್ತಿಲ್ಲ. ಇವತ್ತಿನ ಆರ್ಥಿಕ ಅಂತಃಪತನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಈ ಸಂದಿಗ್ಧ ಪರಿಸ್ಥಿತಿಯನ್ನು ಸಂಸತ್ತಿನಂತಹ ದಿವ್ಯ ಸನ್ನಿಧಿಯಲ್ಲಿ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಾದ ರಾಷ್ಟ್ರೀಯ ಪಕ್ಷಗಳು ಬಹಿಷ್ಕಾರ, ಪ್ರತಿಭಟನೆ, ಜಗಳಗಳಿಂದಾಗಿ ಕಾಲಹರಣ ಮಾಡಿದ್ದಲ್ಲದೇ ಬಂದ್ ಹೆಸರಿನಲ್ಲಿ ಭಾರತಕ್ಕೆ ಬೀಗ ಹಾಕಿ ಜನಸಾಮಾನ್ಯರನ್ನು ಹಾದಿ ತಪ್ಪಿಸುತ್ತಿವೆ. 

-ಸಂತೋಷ್ ಇಗ್ನೇಷಿಯಸ್
 Read more!

Friday, 14 September 2012

ಲಂಡನ್, ಒಲಂಪಿಕ್ಸ್ ಹಾಗೂ ಭಾರತ


ವೈವಿಧ್ಯಮಯವಾಗಿ ಆರಂಭಗೊಂಡ ೨೦೧೨ರ ಲಂಡನ್ ಒಲಂಪಿಕ್ಸ್ ಭರ್ಜರಿಯಾಗಿ ಮುಗಿದಿದೆ. ಮುಗಿದ ಒಲಂಪಿಕ್ಸ್ ಅನೇಕ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ವಿಶ್ವದ ಅತ್ಯಂತ ಅಧುನಿಕ ನಗರಗಳಲ್ಲಿ ಒಂದಾದ ಲಂಡನ್, ಒಲಂಪಿಕ್ಸ್ ಕೂಟವನ್ನು ಹೇಗೆ ನಿಭಾಯಿಸಬಹುದು ಎಂಬ ಕುತೂಹಲದ ಪ್ರಶ್ನೆ ಕೂಟಕ್ಕೆ ಮುಂಚೆ ಎದ್ದಿತ್ತು. ಇದಕ್ಕೆ ಹಲವಾರು ಕಾರಣಗಳಿದ್ದವು. ಆದರೆ ಈ ಎಲ್ಲಾ ಕುತೂಹಲ, ಸಂಶಯ, ಅಡರು ತೊಡರುಗಳನ್ನು ಮೀರಿ ಲಂಡನ್ ನಗರ, ಒಲಂಪಿಕ್ ಸಂಸ್ಥೆ ಹಾಗೂ ಆಯೋಜಕರು ಅತ್ಯಂತ ಯಶಸ್ವಿ ಕ್ರೀಡಾ ಕೂಟವೊಂದನ್ನು ನಡೆಸಿಕೊಟ್ಟರು ಎಂದರೆ ತಪ್ಪಾಗಲಾರದು. ಒಲಂಪಿಕ್ಸ್ ಎಂದರೆ ಒಂದು ಕ್ರೀಡಾ ಕೂಟ, ಅದರಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳೇನಿರುತ್ತವೆ? ಇದ್ದರೂ ಒಂದು ದೇಶ ಒಲಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವಷ್ಟು ಆರ್ಥಿಕವಾಗಿ ಬಲಶಾಲಿಯೇ, ಸಮರ್ಥವೇ ಎಂಬದಷ್ಟೇ ಮುಖ್ಯ ಎಂಬ ಮಾತುಗಳು ಕೇಳಿ ಬರಬಹುದಾದರೂ, ವಿಷಯ ಅಷ್ಟೇನು ಸರಳವಲ್ಲ.


 ೨೦೦೮ ಚೀನಾದ ಒಲಂಪಿಕ್ಸ್ ಕೂಟವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದು ನಡೆದದ್ದು ದೂರದ ಚೀನಾದಲ್ಲಾದರೂ ಅಲ್ಲಿನ ಕ್ರೀಡಾಂಗಣಗಳ ನಿರ್ಮಾಣಕ್ಕೆ ಬೇಕಾದ ಕಬ್ಬಿಣ ಭಾರತದಿಂದಲೂ ಸರಬರಾಜಾಯಿತು. ನಮ್ಮದೇ ಬಳ್ಳಾರಿಯ ಕಬ್ಬಿಣದ ಗಣಿಗಳಿಗೆ ಚಿನ್ನದ ಬೆಲೆ ಬಂದು, ಅವುಗಳಲ್ಲಿನ ಹಣ ಇಲ್ಲಿನ ರಾಜಕೀಯ ವ್ಯವಸ್ಥೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಸಹಾ ನಮಗೆ ಗೊತ್ತೇ ಇದೆ.  ಮುಂದೆ ಏನಾಯಿತು ಎಂಬುದು ಇಲ್ಲಿ ಅಪ್ರಸ್ತತವಾದರೂ ಒಂದು ಒಲಂಪಿಕ್ಸ್‌ನ ಕದಂಬ ಬಾಹುಗಳು, ಪರಿಣಾಮಗಳು ಎಲ್ಲಿಯುವೆರೆಗೂ ಚಾಚಬಹುದು ಎಂಬುದಕ್ಕೆ ಇದು ಒಂದು ಚಿಕ್ಕ ಉದಾಹರಣೆ, ಈ ರೀತಿಯದು ಇನ್ನೆಷ್ಟೋ? ಆದರಿಂದಲೇ ಒಂದು ಜಾಗತಿಕ ಮಟ್ಟದ ಕ್ರೀಡಾ ಕೂಟಕ್ಕೆ ತನ್ನದೇ ಆದ ಅನೇಕ ಆಯಾಮಗಳಿರುತ್ತವೆ.  
  
೨೦೦೮ರ ಒಲಂಪಿಕ್ಸ್ ಆಯೋಜಿಸಿದ ಚೀನಾ ಅದನ್ನು  ಅತ್ಯಂತ ಯಶಸ್ವಿಯಾಗಿ ನಿರ್ವಯಿಸಿದ್ದು ಮಾತ್ರವಲ್ಲದೆ ವೈಭವಯುತವಾಗಿ ನಡೆಸಿಕೊಟ್ಟಿತು. ಜಾಗತಿಕ ಮಟ್ಟದ ಕೂಟವನ್ನು ಜಗವೇ ನಿಬ್ಬೆರಗಾಗಿ ನೊಡುವಂತ ಸಾಮರ್ಥ್ಯ, ಆರ್ಥಿಕ ಶಕ್ತಿ ಹಾಗೂ ಮಾನವ ಸಂಪನ್ಮೂಲ ತನಗಿದೆ ಎಂಬುದನ್ನು ತೋರಿಸಿಕೊಡುವ ವೇದಿಕೆಯನ್ನಾಗಿ ಬಳಸಿಕೊಂಡಿತು. ವಿಶ್ವದ ಆರ್ಥಿಕತೆಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ತಾನು ಎಲ್ಲಾ ರಂಗಗಳಲ್ಲೂ ಸಮರ್ಥ ಎನ್ನುವ ಸಂದೇಶವನ್ನು ಸಾರಿದ ಚೀನಾ ಒಲಂಪಿಕ್ಸ್ ಅಯೋಜಿಸುವ ವಿಷಯದಲ್ಲಿ ಒಂದು ಹೊಸ ಮಾನದಂಡವನ್ನು ನಿರ್ಮಿಸಿತು. ಚೀನಾದ ಒಲಂಪಿಕ್ಸ್ ಕ್ರೀಡಾಕೂಟ ಮುಂದೆ ಮುಂದಿನ ಯಾವುದೇ ಕೂಟ ಸಪ್ಪೆಯಾಗುವ ಅಪಾಯವಿತ್ತು ಮತ್ತು ಜನರು ಸಹಾ ಎಂದಿಗೂ ಅದನ್ನು ಚೀನಾ ಮುಂದೆ ಹೋಲಿಕೆ ಮಾಡುವ ಸಂಭವಗಳಿದ್ದವು.

ಇದು ಲಂಡನ್ ನಗರಕ್ಕೆ ಮೊದಲ ಸವಾಲಾಗಿದ್ದರೂ, ಅದು ಹೊರಗಿನ ಸವಾಲಾಗಿತ್ತು. ಆದರೆ ಅದಕ್ಕಿಂತಲೂ  ಹೆಚ್ಚಾಗಿ ತನ್ನದೇ ಆದ ಆಂತರಿಕ ಸಮಸ್ಯೆಗಳಿಂದ ನಡುವೆ ನರಳಿ, ತೊಳಲಾಡುತ್ತಿದ್ದ ಲಂಡನ್ ನಗರ ಅವುಗಳನ್ನು ಮೆಟ್ಟಿ ನಿಲ್ಲುವ ಸ್ಥೈರ್ಯ ತೋರಬೇಕಾಗಿತ್ತು. ಈ ನಾಲ್ಕು ವರುಷಗಳಲ್ಲಿ ಲಂಡನ್ ನಗರದ ಆಗುಹೋಗುಗಳಲ್ಲಿ ಹಲವಾರು ಬದಲಾವಣೆಗಳಾಗಿದ್ದವು. ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಆರ್ಥಿಕ ದುಸ್ಥಿತಿಯಿಂದ ಬಳಲಿದ ಇತರ ಐರೋಪ ದೇಶಗಳಂತೆ ಯೂ.ಕೆ ಸಹಾ ಇನ್ನೂ ಚೇತರಿಕೆಯ ಹಾದಿಯಲ್ಲಿದ್ದು ಸಂಪೂರ್ಣವಾಗಿ ಎದ್ದು ನಿಂತಿಲ್ಲ. ಉದಾರ ಹಾಗೂ ಮುಕ್ತವಾದ ವಾತವರಣದಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯಿಂದಾಗಿ ಇಲ್ಲಿ ಬಂದು ನೆಲಸಿದ ವಲಸಿಗರ ಸಂಖ್ಯೆಯೂ ಹೆಚ್ಚು. ಅದರಲ್ಲೂ ಏಷ್ಯಾ ಖಂಡದ ಜನರಿಂದ ತುಂಬಿರುವ ಲಂಡನ್ ನಗರ, ಮೊದಲಿನಿಂದಲೂ ಇತರ ದೇಶದ ಜನರನ್ನು ತನ್ನತ್ತ ಮುಕ್ತವಾದ ಮನಸ್ಸಿನಿಂದ ಸೆಳೆಯುತ್ತಿದ್ದದ್ದು ಐತಿಹಾಸಿಕ ಸತ್ಯ.

ಆರ್ಥಿಕ ದುಸ್ಥಿಯ ನಂತರದ ವರ್ಷಗಳಲ್ಲಿಇದರ ಪರಿಣಾಮಗಳು ಲಂಡನ್ ನಗರದ ಮೇಲೆ ಕಾಣಿಸಿಕೊಂಡಿತು. ಒಂದೆಡೆ ತಮ್ಮ ಅಸ್ತಿತ್ವ, ಬೇರುಗಳನ್ನು ಕಳೆದುಕೊಳ್ಳುತ್ತಿರುವ ಭೀತಿ, ಕಾಳಜಿ ಅಲ್ಲಿನ ಸ್ಥಳೀಯರಲ್ಲಿ ಮನೆಮಾಡುತ್ತಿದ್ದಂತೆ ಭೂತಾಕಾರವಾಗಿ ಬೆಳೆದು ನಿಂತಿದ್ದು ನಿರುದ್ಯೋಗ ಸಮಸ್ಯೆ. ತಮ್ಮ ಉದ್ಯೋಗಗಳನ್ನು ವಲಸಿಗರು ಕಸಿದುಕೊಳ್ಳುತ್ತಿದ್ದರೆಂಬಾ ಭಾವ ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಸ್ಥಳೀಯರಲ್ಲಿ ಬೇರು ಬಿಟ್ಟಿತು. ಇಡೀ ದೇಶ ನಿರಾಶ ಭಾವದಲ್ಲಿ ಮುಳುಗಿ ಆತ್ಮವಿಶ್ವಾಸ ಕೊರತೆ ಎದ್ದು ಕಾಣುತ್ತಿತ್ತು. ಈ ಎಲ್ಲದರ ಹಿನ್ನಲೆಯಲ್ಲಿ ಒಲಂಪಿಕ್ಸ್ ಎಂಬ ಜಾಗತಿಕ ಮಟ್ಟದ ಕ್ರೀಡಾಕೂಟವನ್ನು ನಡೆಸಲು ಲಂಡನ್ ಸಮರ್ಥವೇ ಎಂಬ ಪ್ರಶ್ನೆಗಳು ಎದ್ದಿದ್ದವು. ಇವುಗಳ ಮಧ್ಯೆ ಕೂಟದ ಚಿಹ್ನೆ, ಪ್ರಮುಖ ಪ್ರಾಯೋಜಕರ ಬಗೆಗಿನ ಅಪಸ್ವರ ಮುಂತಾದ ಸಣ್ಣ ಪುಟ್ಟ ಅಡೆತಡೆಗಳೂ ಇದ್ದವು. ಅಷ್ಟು ಮಾತ್ರವಲ್ಲದೆ ೨೦೧೧ ರಲ್ಲಿ ಸಣ್ಣ ಕಾರಣವೊಂದಕ್ಕೆ ಪ್ರಾರಂಭವಾದ ಗಲಾಟೆ, ಗಲಭೆಯ ಸ್ವರೂಪ ಪಡೆದು ಒಂದು ವಾರದ ಕಾಲ ನಗರವನು ಅಲುಗಾಡಿಸಿದ್ದು, ಇಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಏಳುವಂತೆ ಮಾಡಿತು.  

ಎಲ್ಲದಕ್ಕೂ ಉತ್ತರವೆಂಬಂತೆ ನಡೆದದ್ದು ೨೦೧೨ರ ಯಶಸ್ವಿ ಒಲಂಪಿಕ್ಸ್. ಕ್ರೀಡಾಕೂಟದ ಆರಂಭ ಸಮಾರಂಭದಲ್ಲೇ ಆಯೋಜಕರು ತಮ್ಮ ಮೊದಲ ಗೆಲುವನ್ನು ಕಂಡುಕೊಂಡರು ಎಂದರೆ ತಪ್ಪಾಗಲಾರದು. ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿಯ ಚಿತ್ರ ನಿರ್ದೇಶಕ ಡ್ಯಾನಿ ಬಾಯ್ಲ್ ನೇತೃತ್ವದಲ್ಲಿ ನಡೆದ ಈ ಸಮಾರಂಭ ಯಾವುದೇ ರೀತಿಯಲ್ಲೂ ನಾಲ್ಕು ವರ್ಷದ ಹಿಂದಿನ ಚೀನಾ ಸಮಾರಂಭದ ಛಾಯೆಗೆ ಒಳಪಡದೆ, ಇಂಗ್ಲೆಂಡ್ ದೇಶದ ಸಂಸ್ಕೃತಿ, ಇತಿಹಾಸ, ಸ್ಥಳೀಯತೆ, ಬೆಳವಣಿಗೆಗಳ ಬಗೆ ಹೆಚ್ಚು ಒತ್ತು ನೀಡಿತು. ಇಡೀ ಇಂಗ್ಲೆಂಡ್ ದೇಶವೇ ಕ್ರೀಡಾಂಗಣದಲ್ಲಿ ಮರುರೂಪ ಮಡೆದಂತೆ ಭಾಸವಾಗಿ ಎಂಥಾ ಆಧುನಿಕತೆಗೂ ತನ್ನದೇ ಆದ ಬೇರು ಇದೆ ಎಂಬುದನ್ನು ಆಯೋಜಕರು ತೋರಿಸಿಕೊಟ್ಟರು. ಈ ಸಮಾರಂಭದ ಯಶಸ್ಸು ಇಡೀ ಕೂಟಕ್ಕೆ ಹೊಸ ಚೈತನ್ಯವನ್ನು ತಂದು ಕೊಟ್ಟಿತು ಎಂದರೆ ತಪ್ಪಾಗಲಾರದು. 

ನಂತರ ಆಯೋಜಕರು ಹಿಂದೆ ನೋಡುವ ಪ್ರಮೇಯವೇ ಬರಲಿಲ್ಲ. ಕೂಟ ಯಶಸ್ವಿಯಾಯಿತು. ಟಿ.ವಿ. ರೇಟಿಂಗ್‌ಗಳು ಗಗನಕ್ಕೇರಿದವು, ವ್ಯವಸ್ಥೆ ಅಚ್ಚುಕಟ್ಟಾಗಿತ್ತು, ಹೊಸ ದಾಖಲೆಗಳಾದವು, ಕ್ರೀಡಾ ಪಟುಗಳು ತಮ್ಮ ಎಂದಿನ ನೈಪುಣ್ಯ ಮೆರೆದರು.  ಜಮೈಕಾದ ಉಸೇನ್ ಬೋಲ್ಟ್ ಮಿಂಚಿನ ಸಂಚಾರ ಮೂಡಿಸಿದರೆ, ಅಮೆರಿಕಾ ತನ್ನ ಅಗ್ರಸ್ಥಾನವನ್ನು ಮತ್ತೆ ಭರ್ಜರಿಯಾಗೇ ಪಡೆದುಕೊಂಡಿತು. ನಮ್ಮ ಬೆಂಗಳೂರಿನಷ್ಟು ಸಣ್ಣ ಪುಟ್ಟ ದೇಶಗಳು ಸಹಾ ಪದಕ ಪಟ್ಟಿಯಲ್ಲಿ ಮಿಂಚಿದವು. ಚೀನಾದ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯದಿಂದ ಅಚ್ಚರಿ ಮೂಡಿಸಿದರೂ, ತನ್ನ ಕ್ರೀಡಾಪಟುಗಳನ್ನು ಚೀನಾ ತಯಾರು ಮಾಡುವ ರೀತಿಯ ಬಗ್ಗೆ ಸಣ್ಣ ಅಪಸ್ವಗಳು ಎದ್ದಿವೆ. ಅದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದವು ಎಂಬ ಮಾತುಗಳು ಸಹಾ ಕೇಳಿ ಬಂದಿವೆ. ಅದೇನೆ ವಿವಾದಗಳಿದ್ದರೂ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತನ್ನದೇ ಆದ ವರ್ಚಸ್ಸಿದೆ, ಜನರ ಪ್ರೀತಿ ಇದೆ, ಇತಿಹಾಸವಿದೆ ಎಂಬ ಸತ್ಯವನ್ನು ಈ ಒಲಂಪಿಕ್ಸ್ ಮತ್ತೆ ನಿರೂಪಿಸಿದೆ. ಲಂಡನ್ ತನ್ನೆಲ್ಲಾ ಸಮಸ್ಯೆಗಳ ಮಧ್ಯೆಯೂ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿತು. ಕಾರ್ಯದೆಡೆಗೆ ನಿಷ್ಠೆ ಹಾಗೂ ಇಚ್ಛಾ ಶಕ್ತಿಯ ಮುಂದೆ ಎಂಥಾ ಸವಾಲುಗಳು ಸಹಾ ನಗಣ್ಯ ಎಂಬುದನ್ನು ಜಗಕ್ಕೆ ತೋರಿಸಿತು. ಕ್ರೀಡಾ ಕೂಟ ಯಶಸ್ವಿಯಾದ ಮಾತ್ರಕ್ಕೆ ಅದರ ಸಮಸ್ಯೆಗಳೆಲ್ಲಾ ಕಳೆಯಿತುಯೆಂದಲ್ಲ. ಆದರೆ ಇದರಿಂದ ದೇಶಕ್ಕೆ ದೊರಕಿದ ಆತ್ಮ ವಿಶ್ವಾಸ, ಸರಿದು ಹೋದ ನಿರಾಶ ಭಾವ ಮಾತ್ರ ಬೆಲೆ ಕಟ್ಟಲಾಗದು. ಮುಂದೆ ಅದು ಅಲ್ಲಿನ ಸರ್ಕಾರಕ್ಕೆ, ಆರ್ಥಿಕತೆಗೆ ಹೊಸ ಚೈತನ್ಯ ನೀಡಬಹುದು. 

ಇನ್ನೂ ಭಾರತದ ವಿಷಯಕ್ಕೆ ಬಂದರೆ, ಇದು ಅತ್ಯಂತ ಯಶಸ್ವಿ ಒಲಂಪಿಕ್ಸ್. ಪದಕಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚು. ಸಂತೋಷ. ಪದಕ ಗೆದ್ದವರು ಅಭಿನಂದನಾರ್ಹರು. ಇವರ ನಡುವೆ ಭಾರಿ ಭರವಸೆ ಮೂಡಿಸಿದ ಟೆನ್ನಿಸ್ ಹಾಗೂ ಹಾಕಿಯ ವೈಫಲ್ಯ ಭಾರತದ ಕ್ರೀಡಾ ವ್ಯವಸ್ಥೆ ಕನ್ನಡಿಯಾಗಿತ್ತು. ಒಂದು ಕಾಲದಲ್ಲಿ ರಾಜನಂತೆ ಮೆರೆದ ಹಾಕಿಯಲ್ಲಿ ಕೊನೆಯ ಸ್ಥಾನ. ಕಾರಣ ಆ ಕ್ರೀಡೆಯ  ನಿರ್ವಹಣೆಯಲ್ಲಿನ ಲೋಪ ದೋಷ, ಭ್ರಷ್ಟಚಾರ. ಇನ್ನೂ ಟೆನ್ನಿಸ್ ಬಳಲಿದ್ದು ಒಳಜಗಳದಿಂದ. ಈ ಎರಡು ಕಾರಣಗಳು ನಮ್ಮ ಕ್ರೀಡಾ ವ್ಯವಸ್ಥೆಯ ಪ್ರತಿಬಿಂಬವಲ್ಲದೆ ಏನು? 

ಕೊನೆಯಲ್ಲಿ, ತನ್ನದೇ ಸಮಸ್ಯೆಗಳಿಂದ ಬಳಲುತ್ತಲೇ, ತನ್ನ ಆತ್ಮಸ್ಥೈರ್ಯ, ಇಚ್ಛಾ ಶಕ್ತಿ, ನಿಷ್ಠೆ, ಸಂಘಟನಾ ಶಕ್ತಿಯಿಂದ ಗೆದ್ದ ಲಂಡನ್ನಿನ ಯಶಸ್ಸು ಭಾರತಕ್ಕೆ ಏಕೆ ಸಾಧ್ಯವಾಗುವುದಿಲ್ಲ? ಎಲ್ಲಾ ರೀತಿಯ ಶ್ರೀಮಂತ ಸಂಪನ್ಮೂಲದ ನಡುವೆಯೂ ಜಾಗತಿಕ ಮಟ್ಟದ ಕಾರ್ಯಗಳಲ್ಲಿ ಭಾರತ ಇನ್ನೂ ಹಿಂದುಳಿದಿರುವುದಾದರೂ ಏಕೆ? ಕಾಮನೆವೆಲ್ತ್ ಕೂಟದಲ್ಲಿ ಕಂಡು ಬಂದ ಅಷ್ಟು ಪ್ರಮಾಣದ ಭ್ರಷ್ಟಾಚಾರಕ್ಕೆ ಮುಂದಾದರೂ ಕೊನೆಯಿದೆಯೇ? ಊಟ, ಬಟ್ಟೆ, ಶಿಕ್ಷಣ, ಉದ್ಯೋಗವೆಂಬ ಮೂಲಭೂತ ಸಮಸ್ಯೆಗಳೇ ಸಾಕಷ್ಟಿರುವಾಗ ಒಲಂಪಿಕ್ಸ್ ರೀತಿಯ ಕೂಟವನ್ನು ನಡೆಸಲು ಬೇಕಾದ ಸಾಮರ್ಥ್ಯ ಭಾರತದ ಪಾಲಿಗೆ ನಿಜಕ್ಕೂ ಮರಿಚಿಕೆಯೇ? ನಮ್ಮ ರಾಜಕೀಯ ಇಚ್ಛಾಶಕ್ತಿ ಇಷ್ಟೊಂದು ದುರ್ಬಲವೇ? ಮುಂತಾದ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಭಾರತದ ಯುವ ಶಕ್ತಿ ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ಆ ಸಮಯ ಬಲು ಬೇಗ ಬರಲಿದೆ ಎಂಬ ಭರವಸೆಯನ್ನು ಇಂಥಹ ಒಲಂಪಿಕ್ಸ್‌ಗಳು ತರುತ್ತಿರಲಿ.

- ಪ್ರಶಾಂತ್ ಇಗ್ನೇಷಿಯಸ್