Saturday 28 January 2012

ಪುಣ್ಯಕೋಟಿಯ ಸಾವು


ಪ್ರೀತಿಯ ಅನು
ಶುಭಹಾರೈಕೆಗಳು. ನಾನೊಬ್ಬ ಕಸಬುದಾರ ಬರಗಾರನಲ್ಲದಿದ್ದರೂ ನನ್ನಲ್ಲಿರುವ ಸೂಕ್ಷ್ಮತೆ, ಸಂವೇದನತ್ವ ನನ್ನನ್ನು ಸುಮ್ಮನಿರಲು ಬಿಡುತ್ತಿಲ್ಲ. ಜೀವಪೂರಕ ಚಿಂತನೆಗಳು ಹೆಚ್ಚು ಹೆಚ್ಚು ಹರಿದಾಡಬೇಕೆಂಬ ಅಸೆ ನನ್ನ ಕೈಯಿಂದ ಈ ಲೇಖನಗಳನ್ನು ಬರೆಸಿದೆ. ಅನು …ನನ್ನ ಚಿಂತನೆಗಳು, ಅನುಭಗಳು ಚಿತ್ಕಾರಗಳು ಅಕ್ಷರರೂಪ ಪಡೆಯುವಂತೆ ಸತಯಿಸಿದವರಲ್ಲಿ ನಿನ್ನದು ಸಿಂಹಪಾಲು. ನನ್ನ ಅನೇಕ ಅನುಭಗಳು ಚಿಂತನೆಗಳು, ಚಿತ್ಕಾರಗಳು ಅಭಿವ್ಯಕ್ತಿಗೊಳ್ಳಲು ಅಕ್ಷರ/ಪದಗಳ ಮುಂದೆ ಭಿಕ್ಷೆ ಬೇಡುತ್ತಾ ಸಾಲಾಗಿ ನಿಂತಿವೆ. ಅಂತಹ ಒಂದು ಅನುಭವವನ್ನು ಮಾತು ಕೈಹಿಡಿದ್ದ ಪ್ರತಿಫಲವೇ ಈ ಕತೆ.

ಪುಣ್ಯಕೋಟಿಯ ಸಾವು

ಆಕಾಶದಲ್ಲಿ ಹೆಪ್ಪುಗಟ್ಟಿದ ಕತ್ತಲು, ಆಕಾಶವನ್ನು ಬಿಟ್ಟು ಹೋಗಲು ತಯಾರಿಲ್ಲದಿದ್ದರೂ ದಂಡೆತ್ತಿ ಬರುತ್ತಿದ್ದ ದಂಡನಾಯಕ ಸೂರ್ಯನಿಗೆ ಸೋಲಲೇ ಬೇಕಾದ ಅಸಹಾಯಕತೆಯಿಂದ ಜಾರಿಕೊಳ್ಳುತ್ತಿತ್ತು. ದಂಡನಾಯಕನ ಕಿರಣಗಳು ಕತ್ತಲೆಯ ಸೀಳಿ ರಾಜರೋಷವಾಗಿ ಆಕಾಶವನಾವರಿಸಿಕೊಳ್ಳುತ್ತಿದ್ದಂತೆ ಹಕ್ಕಿಗಳ ಇಂಚರ ಬಾನ ತುಂಬಿ ಬೆಳಕಿನ ಮೆರವಣಿಗೆಗೆ ಸುಪ್ರಭಾತ  ಹಾಡುವಂತ್ತಿತ್ತು. ಕಡೆ, ಇಗರ್ಜಿಯ ಗಂಟೆಯ ಸಪ್ಪಳಕ್ಕೆ ಆರೋಗ್ಯಮ್ಮ ಎದ್ದಳೋ ಅಥವಾ ಆರೋಗ್ಯಮ್ಮಳ ಸಪ್ಪಳಕ್ಕೆ ಗಂಟೆ ಎಚ್ಚರವಾಯಿತೋ! ಆರೋಗ್ಯಮ್ಮ ಆಗಲೇ ನಿದ್ದೆಗೆ ಶುಭಮಸ್ತು ಹೇಳಿ ಪುಣ್ಯಕೋಟಿಯ ದರ್ಶನಕ್ಕೆಂದು ಕೊಟ್ಟಿಗೆಯ ಕಡೆ ಹೆಜ್ಜೆ ಹಾಕಿದಳು. ಪುಣ್ಯಕೋಟಿಯ ದರ್ಶನದಿಂದ ದಿನ ಸುಗಮವಾಗಿರುತದೆಂಬ ಅಳವಾದ ನಂಬಿಕೆಯಿಂದ ಹುಟ್ಟಿಕೊಂಡ ಪ್ರತಿದಿನದ ಶಿಷ್ಟಚಾರ ಇದ್ದಾಗಿತ್ತು. ಆರೋಗ್ಯಮ್ಮಳ ವಿಧಿವತ್ತಾದ ಪ್ರವೇಶದಿಂದ ನೆಲದ ಮೇಲೆ ಮರದಿಮ್ಮಿಗಳಂತೆ ಬಿದ್ದುಕೊಂಡಿದ್ದ ಹಸುಗಳು ಚಂಗನೇ ಪುಟ್ಟಿದೆದ್ದವು. ಅವುಗಳ ಕೊರಳುಗಳಲ್ಲಿ ಕಟ್ಟಿದ ಗಂಟೆಗಳ ಸಪ್ಪಳ ಕೊಟ್ಟಿಗೆಯ ತುಂಬಾ ಮಾರ್ಧನಿಸಲಾರಂಭಿಸಿತ್ತು. ಕಡೆ ಪುಣ್ಯಕೋಟಿಯ ದರ್ಶನಕ್ಕೆ ಹಾತೊರೆಯುತ್ತಿದ್ದ ಆರೋಗ್ಯಮ್ಮಳ ಕಂಗಳು ಪುಣ್ಯಕೋಟಿಯನ್ನು ಕಂಡಾಕ್ಷಣ ರವಿಯ ಸ್ವರ್ಶಕಂಡ ಹೂವಂತಾಗಿ ಅರಳಾರಂಭಿಸಿತ್ತು. ಅವಳ ಮುಖ ಸೂರ್ಯನಿಗೆ ಕನ್ನಡಿಯಿಡಿದಂತ್ತಿತ್ತು.

ಕೊಟ್ಟಿಗೆಯ ಮಗುಲಿಗಿದ್ದ ಪಡಸಾಲೆ ಮೇಲೆ ಗೋಣಿಚೀಲವನ್ನು ಮೈತುಂಬಾ ಹೊದ್ದುಕೊಂಡು ಮಲಗಿಕೊಂಡಿದ್ದ ಮೂಗ ಗಂಟೆಗಳ ಸದ್ದಿಗೆ ಚೆಂಡು ಪುಟಿಯುವಂತೆ ಎದ್ದು ಕಣ್ಣು ಮಿಟುಕಿಸಿಕೊಳ್ಳುತ್ತಾ ಕೊಟ್ಟಿಗೆಯ ಬಾಗಿಲ ಬಳಿ ಹಾಜರಾದರೂ ನಿದ್ರಾದೇವಿ ಅವನನ್ನು ಬಿಟ್ಟಿದಂತಿರಲಿಲ್ಲ. ಪುಣ್ಯಕೋಟಿಯ ದರ್ಶನಕೆಂದು ಬಂದಿದ್ದ ಆರೋಗ್ಯಮ್ಮ ಮಾತ್ರ ಧನ್ಯತೆ ತುಂಬಿದ ಕಂಗಳಿಂದ ಪುಣ್ಯಕೋಟಿಯನ್ನೇ ದಿಟ್ಟಿಸುತ್ತಾ, ಒಂದು ಹೊತ್ಗೆ ಊಟಕ್ಕೂ ಅಲೆಯುವಂತಹ ಕಷ್ಟದ ಸಮಯದಾಗ ನನ್ಗೆ ಭಾಗ್ಯದಾತೆಯಂತೆ ಬಂದಲ್ಲ ತಾಯೇ  ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಪುಣ್ಯಕೋಟಿಯ ತಲೆಯನ್ನು ತೀಡುತ್ತಿದ್ದಂತೆ ಯಜಮಾನಿಯ ಮನಸ್ಸನ್ನು ಅರಿತಂತೆ ಪುಣ್ಯಕೋಟಿ ಖುಷಿಯಿಂದ ತಲೆಯಾಡಿಸತೊಡಗಿತ್ತು. ಹೀಗೆ ದಿನದ ಶಿಷ್ಟಚಾರ ಮುಗಿಸಿದ ಆರೋಗ್ಯಮ್ಮ ಬೇಗಾ ಕೊಟ್ಗೆ ಕ್ಲೀನ್ ಮಾಡಿ ಹಾಲ್ ಕರ್ದು ನಾಷ್ಟ ಹಾಕ್ಸುಕೊಂಡು, ಹಸುಗಳ್ನ ತೊರೆದಿಂಡಿಗೆ ಹೊಡ್ಕೊಂಡು ಒಗು ಮೂಗನಿಗೆ ಆಜ್ಞಾನಪಿಸುತ್ತಾ ಕೊಟ್ಟಿಗೆಯ ಹೂರ ನಡೆದಳು. ಯಜಮಾನಿಯ ಮಾತಿಗೆ ತಲೆಯಾಡಿಸುತ್ತಾ ಕೊಟ್ಟಿಗೆಯ ತಿಪ್ಪೆಯನ್ನು ಬಳಿಯಲು ಸಜ್ಜಾದ.

ಪುಣ್ಯಕೋಟಿಯು ಒಂದು ಅಸಾಮಾನ್ಯ ಹಸುವೆಂದು ಊರಿಗೆ ಊರೇ ಮಾತನಾಡಿಕೊಳ್ಳುತ್ತಿತ್ತು. ಗೋವಿನ ಹಾಡಿನಲ್ಲಿ ಬರುವ ಪುಣ್ಯಕೋಟಿಯ ಹೆಸರು ಆರೋಗ್ಯಮ್ಮಳ ಹಸುಗೆ ಹೇಗೆ ಬಂದಿತ್ತೋ ಗೊತ್ತಿಲ್ಲ, ಆದರೆ ಸಾಕ್ಷತ್ ಪುಣ್ಯಕೋಟಿಯೇ ಮೈದಾಳಿದಂತಿತ್ತು ಹಸು. ಇಡೀ ತಾಲ್ಲೂಕಿನಲ್ಲೇ ಯಾವ ಹಸುವು ಕೊಡದಷ್ಟು ಹಾಲನ್ನು ಕರೆಯುತ್ತಾ ಎಲ್ಲರ ಮನೆ ಮಾತಾಗಿತ್ತು. ಬ್ಯಾಂಕಿನಿಂದ ಸಾಲ ಪಡೆದು ಪುಣ್ಯಕೋಟಿಯನ್ನು ಖರೀದಿಸಿದ್ದರೂ ಇಂತಹ ಅಸಾಧರಣವಾದ ಹಸು ಸಿಕ್ಕಿದು ದೇವರ ಕೈವಾಡವೇ ವಿನಃ ಬೇರೇನೂ ಅಲ್ಲ ಎಂಬುವುದು ಆರೋಗ್ಯಮ್ಮಳ ಬಲವಾದ ನಂಬಿಕೆಗೆ ಕಾರಣವೂ ಇತ್ತು. ಬಡತನ ದವಡೆಗೆ ಸಿಕ್ಕಿ ನುಚ್ಚುನೂರಾಗಿದ್ದ ಆರೋಗ್ಯಮ್ಮಳಿಗೆ ಪುಣ್ಯಕೋಟಿಯು ಅಧಿಕ ಹಾಲನ್ನು ಕರೆಯುವುದರ ಮೂಲಕ ಸ್ವಾಲಂಬನೆಯ ಹಾಲನ್ನು ಉಣಿಸಿ, ಉಜ್ವಲ ಭವಿಷ್ಯದ ಕಿಡಿಯನ್ನ ಅವಳಲ್ಲಿ ಹೊತ್ತಿಸಿತ್ತು. ಕಡೇ ಚಿಕ್ಕ ಪುಟ್ಟ ಕಾರಣಕ್ಕೆಲ್ಲಾ ಕಾಲು ಕೆರೆದುಕೊಂಡು ಆರೋಗ್ಯಮ್ಮ ಬಳಿ ಜಗಳ ಮಾಡುತ್ತಿದ್ದ ಪಕ್ಕದ ಮನೆಯವರಿಗೆ ಮಾತ್ರ ಆರೋಗ್ಯಮ್ಮಳ ಆಶಾದಾಯಕ ಚೇತರಿಕೆ ನುಂಗಲಾಗದ ತುತ್ತಾಯಿತ್ತು.

ಯಜಮಾನಿಯ ಪ್ರತಿದಿನದ ಶಿಷ್ಟಚಾರವನ್ನು ಮೂಕ ಸಾಕ್ಷಿಯಂತೆ ನೋಡುತ್ತಿದ್ದ ಮೂಗನ ನಿಜವಾದ ಹೆಸರು ರಾಜ. ಬಾಯಿಬಾರದ ಕಾರಣ ಊರಿನವರು ಅವನನ್ನು ಮೂಗ ಎಂದೇ ಕರೆಯುತ್ತಿದ್ದರು. ಊರಿನಲ್ಲಿ ಚಲಾವಣೆಯಲ್ಲಿದ್ದ ಕತೆಯ ಪ್ರಕಾರ ರಾಜ ಸಣ್ಣವನಿರುವಾಗ ತನ್ನ ತಾಯಿಯ ಸಾವಿನ ಸುದ್ಧಿಯನ್ನು ಕೇಳುತ್ತಲೇ ತನ್ನ ವಾಕ್ ಚಾತುರ್ಯವನ್ನು ಕಳೆದುಕೊಂಡಿದ್ದ. ಚಿಕ್ಕವಯಸಿನಲೇ ಅನಾಥನಾಗಿದ್ದ ರಾಜ ಅವರಿವ್ರ ಮನೆಗಳಲ್ಲಿ ಜೀತಮಾಡುತ್ತಾ ಕೊನೆಗೆ ಆರೋಗ್ಯಮಳ ಮನೆಯಲ್ಲಿ ಪುಣ್ಯಕೋಟಿ ಮತ್ತು ಇತರ ಹಸುಗಳ ಪಾಲನೆಗೆ ಅಧಿಕೃತವಾಗಿ ನೇಮಕಗೊಂಡಿದ್ದ. ಎಲ್ಲಾ ಹಸುಗಳಿಂತ ಪುಣ್ಯಕೋಟಿಯ ಮೇಲೆ ಮೂಗನಿಗೆ ಅತಿಯಾದ ಪ್ರೀತಿ. ಪುಣ್ಯಕೋಟಿಯನ್ನು ನೆನದಾಗಲ್ಲ ಮೂಗನ ಮನಸ್ಸು ಸಂತೋಷದಿಂದ ಬಲೂನ್ನಂತೆ ಉಬ್ಬಿಕೊಳ್ಳುತಿತ್ತು. ಮೂಗ ಯಾರಿಗೂ ಹೇಳಿಕೊಳ್ಳಲಾಗದ ನೋವನ್ನುಪುಣ್ಯಕೋಟಿಯ ಬಳಿ ಹೇಳಿಕೊಳ್ಳುತ್ತಾ ಹೃದಯವನ್ನು ಹಗುರ ಮಾಡಿಕೊಳ್ಳುತ್ತಿದ್ದ. ಪುಣ್ಯಕೋಟಿಯ ಕರುವು ಜಿಗಿಜಿಗಿದು ಅಮ್ಮಳ ಬಳಿಬಂದಾಗ ಪುಣ್ಯಕೋಟಿ ತನ್ನ ಕರುವಿನ ಮೈಯನೆಲ್ಲಾ ಅಕ್ಕರೆಯಿಂದ ನೆಕ್ಕುತ್ತಾ ಹಾಲು ಉಣಿಸುತ್ತಿದ್ದ ದೃಶ್ಯವನ್ನು ಕಂಡು ಮೂಗ ಹರ್ಷ ಚಿತ್ತನಾಗಿ ಮೈಮರೆಯುತ್ತಿದ್ದ. ಚಿಕ್ಕಂದಿನಲೇ ತಾಯಿಯನ್ನು ಕಳೆದುಕೊಂಡಿದ್ದ ದುರ್ದೈವಿ ಮೂಗನಿಗೆ ಹಸುವಿನ ಮಮತೆ ತನ್ನ ಅಮ್ಮಳ ಮಮತೆಯನ್ನು ಸಾದೃಶ್ಯಗೊಳಿಸುವಂತಿರುತಿತ್ತು. ಹೀಗೆ ಪುಣ್ಯಕೋಟಿಯ ಬಳಿ ಇದ್ದಾಗ ಮೂಗನ ಪ್ರತಿಯೊಂದು ಸನ್ನೆಯು ಮಾತಾಗಿ ಪುಣ್ಯಕೋಟಿಗೆ ಬಹುಬೇಗ ಅರ್ಥವಾಗಿ ಬಿಡುತಿತ್ತು. ಮೌನದಲೇ ಇಬ್ಬರ ಒಡನಾಟ ಬೆಳೆದು ಹೆಮ್ಮರವಾಗಿತ್ತು. ಮೌನ ಸಂಬಂಧಗಳ ಸದೃಢ ಭಾಷೆಗೆ ಮಾತೇ  ಬೇಡವಾಗಿತ್ತು.
ಹೀಗೆ ದಿನಗಳು ಉರುಳಿ ತಿಂಗಳಾದವು.. ಸ್ವಾಭಿವಿಕ ಎಂಬಂತೆ ಪುಣ್ಯಕೋಟಿಯು ಹಾಲು ಕರೆಯುವುದನ್ನು ಕಡಿಮೆಮಾಡಿತ್ತು. ಜತೆಗೆ ಯಾವುದೋ ಒಂದು ಭಯಂಕರವಾದ ರೋಗ ಪುಣ್ಯಕೋಟಿಯನ್ನು ಕಾಡತೊಡಗಿತ್ತು. ಪುಣ್ಯಕೋಟಿಯನ್ನು ಗುಣಮುಖವಾಗಿಸಲು ಪ್ರಯತ್ನಿಸಿದ ಅನೇಕ ಪಶುವೈದ್ಯರು ಸಾಧ್ಯವಾಗದೆ ಕೈಚೆಲ್ಲಿದರುಒಂದು ಕಾಲದಲ್ಲಿ ಊರಿನ ಜನರಿಗೆಲ್ಲಾ ಅವರ ಬೇಡಿಕೆಯ ಪ್ರಕಾರ ಹಾಲವನ್ನು ಒದಗಿಸುತ್ತಿದ್ದ ಪುಣ್ಯಕೋಟಿ ಈಗ ತಾನು ಕರೆಯುತ್ತಿದ್ದ ಹಾಲು ಆರೋಗ್ಯಮ್ಮಳ ಮನೆಯ ದಿನನಿತ್ಯದ ಕಾಫಿ ಟೀಗೆ ಸಾಕಾಗುತ್ತಿರಲಿಲ್ಲ. ಬ್ಯಾಂಕಿನ ಸಾಲ ತೀರಿಸುವ ಪ್ರಶ್ನೆ ಬೇರೆ ಪೆಡಂಭೂತವಾಗಿ ಅರೋಗ್ಯಮ್ಮಳನ್ನು ಕಾಡಲು ಪ್ರಾರಂಭಿಸಿತ್ತು. ರೀತಿಯ ವಿಷಮ ಪರಿಸ್ಥಿತಿಯಿಂದ ಆರೋಗ್ಯಮ್ಮಳ ಆರೋಗ್ಯದ ಪರಿಸ್ಥಿತಿ ಕೂಡ ಹದಗೆಡಲು ಪ್ರಾರಂಭಿಸಿತ್ತು.

ಬೇಸಿಗೆ ಕಾಲವಾದರೂ ಮೋಡ ಕವಿದ ವಾತವರಣ. ಮೋಡವು ಸೂರ್ಯನ ಆವರಿಸಿ ಬೀಗುತ್ತಾ ದಿನವನ್ನು ಮಂಕಾಗಿಸಿಬಿಟ್ಟಿತ್ತು.  ಪುಣ್ಯಕೋಟಿಯ ಆಕಸ್ಮಿಕ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ  ಊರೆಲ್ಲಾ ಹರಡಿತ್ತು. ಅಯ್ಯೋ ಎಂಥಾ ಹಸು ಸತೋಯಿತ್ತಲ್ಲ,, ಎಂದು ಕೆಲವರು ಮರುಕ ಪಟ್ಟರೆ, ಇನ್ನೂ ಕೆಲವರು ಅಭಿಮನ್ಯುನಂತೆ ಪುಣ್ಯಕೋಟಿಯ ಸಂಶಯಾಸ್ವದ ಸಾವಿನ ಚಕ್ರವೂಹ್ಯವನ್ನು ಭೇದಿಸಲು ಪ್ರಯತ್ನಿಸುತ್ತಿದ್ದರು. ಹಸು ಮೇಯಿಸುವಾಗ ಮೂಗ ಎಸೆದ ಕಲ್ಲು ಪುಣ್ಯಕೋಟಿಯ ತಲೆಮೇಲೆ ಬಲವಾಗಿ ಬಿದ್ದುದ್ದರಿಂದ ಪುಣ್ಯಕೋಟಿಸತೋಯಿತಂತೆ”, ಇಲ್ಲ, ಆರೋಗ್ಯಮ್ಮಳಿಗೆ ಆಗದವರು ಯಾರೋ ಹಸುಗೆ ವಿಷ ಹಾಕಿ.. ಹೀಗೆ ಅಂತೆಕಂತೆ ಕಥೆಗಳು ಪುಣ್ಯಕೋಟಿಯ ಸಾವಿನ ಸುತ್ತಾ ಹುಟ್ಟಿಕೊಂಡವು. ಯಾರಿಗೂ ಪುಣ್ಯಕೋಟಿಯ ಆಕಾಲಿಕ ಸಾವಿನ ನಿಖರವಾದ ಕಾರಣ ಗೂತ್ತಿರಲಿಲ್ಲ. ಮೂಗನಿಗೂ ಸಹ ಪುಣ್ಯಕೋಟಿಯ ಆಕಸ್ಮಿಕ ಸಾವು ಒಂದು ಪ್ರಶ್ನೆಯಾಗಿ ಉಳಿದಿತ್ತು. ತಾನು ಅತಿ ಯಾಗಿ ಪ್ರೀತಿಸುತ್ತಿದ್ದ ಹಸುವಿನ ಮರಣದಿಂದ ಮೂಗ ಗರಬಡಿದವನಂತಾಗಿದ್ದ. ಇನ್ನೊಂದು ಕಡೆ, ಪುಣ್ಯಕೋಟಿಯ ಆಕಾಲಿಕ ಸಾವು ಅರೋಗ್ಯಮ್ಮಳನ್ನು ಭ್ರಮನಿರಸನಗೊಳಿಸಿ, ಅವಳ ಬದುಕನ್ನು ಮೋಡ ಕವಿದ ವಾತವರಣವಾಗಿಸಿಬಿಟ್ಟಿತ್ತು.

ಕೆಲ ದಿನಗಳ ನಂತರ, ಪುಣ್ಯಕೋಟಿಯ ಆಕಸ್ಮಿಕ ಸಾವಿನಿಂದ ಉಂಟಾದ ನಷ್ಟವನ್ನು ತುಂಬಲು ಬ್ಯಾಂಕಿನ ಪರಿಹಾರ ಧನವು ಆರೋಗ್ಯಮಳ ಕೈಸೇರಿತ್ತು. ಪರಿಹಾರ ಹಣದಿಂದ ಅರೋಗ್ಯಮ್ಮ ಇನ್ನೊಂದು ಹಸುವನ್ನು ಖರೀದಿಸುವಳೆಂಬ ಕೆಲವರ ಊಹೆ ಸುಳ್ಳಾಯಿತ್ತು. ಪುಣ್ಯಕೋಟಿಯ ಕರುವು ಕೂಡ ಮನೆಯಿಂದ ಮಾಯವಾಯಿತ್ತು. ಆರೋಗ್ಯಮ್ಮ ಮದ್ಯವಸನಿಯಾಗಿ, ಪರಿಹಾರ ಹಣವನ್ನೆಲ್ಲಾ ಮದ್ಯಕ್ಕಾಗಿ ವ್ಯಯಿಸತೊಡಗಿದಳು. ಪುಣ್ಯಕೋಟಿಯ ಸತ್ತಿದಕ್ಕೆ ಆರೋಗ್ಯಮ್ಮ ತಲೆಕೆಡಿಸಿಕೊಂಡಿದ್ದಾಳೆಂದು, ಆರೋಗ್ಯಮ್ಮಳ ದುಸ್ಥಿತಿಗೆ ಊರಿನವರು ಮಮ್ಮಲ ಮರುಗಿದರು.
ಒಂದು ದಿನ ಎಂದಿನಂತೆ ಮೂಗ ಇದ್ದ ಕೆಲ ಹಸುಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ಸಾಗಿ, ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ, ಟೀ ಹಾಕಿಸಿಕೊಳ್ಳಲು ಅಣಿಯಾಗುತ್ತಿದಂತೆ, ಆರೋಗ್ಯಮ್ಮ ಕುಡಿದ ಅರೆಮತ್ತಲ್ಲಿ.. ಹಸು ಸತ್ರೆ ಬ್ಯಾಂಕ್ ನಿಂದ ಹಣ ಬರುವುದೆಂಬ ಅಸೆಯಿಂದ ನಾನೇ ಕೈಯಾರೆ ನನ್ನ ಪುಣ್ಯಕೋಟಿಗೆ ವಿಷ ಹಾಕಿ ಸಾಯ್ಸಿಬಿಟ್ನಲ್ಲ .. ಎಂದು ಪಾಪ ಪ್ರಜ್ಞೆಯಿಂದ ಹೇಳುತ್ತಿದ ಮಾತು ಮೂಗನ ಕಿವಿಗೆ ಬೀಳುತಿದ್ದಂತೆ...ಆರೋಗ್ಯಮ್ಮಳು ರಾಕ್ಷಸನಂತೆ ಸ್ವಾರ್ಥದ ಬಾಯಿಯನ್ನು ತೆರೆದು ತನ್ನನ್ನು ನುಂಗುಲು ಬರುತ್ತಿರುವಂತೆ ಮೂಗನಿಗೆ ಭಾಸವಾಗಿ... ಮೂಗ ಓಡಲು ಪ್ರಾರಂಭಿಸಿದ.
-ಜೋವಿ

Read more!