Sunday 10 May 2020

ಮಿನುಗಿ ಮರೆಯಾದ ಬ್ರದರ್ ಚಿನ್ನಪ್ಪ



ಒಂದಾಗಿ ಸೇರೋಣ ಬನ್ನಿರೋ, ವಾದ್ಯಮೇಳ ಮೊಳಗಲಿ ಜೇನು ಮಳೆ ಸುರಿಯಲಿ, ಕುಂದಿದೆ  ಮನವು, ಯೇಸುವೇ ಸ್ತೋತ್ರ, ಶಿರ ಬಾಗಿಹೆ ಕರ ಚಾಚಿಹೆ,  ನಿನಗಾರು ದೇವರೆಂದರೆ ಯೇಸು ಎನ್ನುವೆನು, ಪುನರುತ್ಥಾನರಾದರೇಸು ಮುಂತಾದ ಹಾಡುಗಳನ್ನು ಕೇಳಿ ತಲೆದೂಗದವರಿಲ್ಲ, ದನಿಗೂಡಿಸದವರಿಲ್ಲ.  80 ದಶಕದ ಕೊನೆಯಲ್ಲಿ ಹೊಮ್ಮಿದ ಈ ಹಾಡುಗಳನ್ನು ಎಂದಿಗಾದರೂ
ಮರೆಯುವುದುಂಟೆ?

ಹತ್ತು ಹನ್ನೆರೆಡು ವರ್ಷಗಳ ಹಿಂದೆ ಒಂದಷ್ಟು ಜನಪ್ರಿಯ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆರಿಸಿ, ಅದರಿಂದ ವಾದ್ಯಸಂಗೀತದ ಇನ್ಸ್ಟ್ರುಮೆಂಟಲ್ ಸಿಡಿ  ಮಾಡುವ ಬಗ್ಗೆ ಯೋಚಿಸಿದ್ದೆವು. ಸೆಲ್ವ, ಚಂದ್ರು ಇದರ ಮುಂಚೂಣಿಯಲ್ಲಿ ನಿಂತು, ಸಿಡಿಗೆ ಒಂದು ಒಳ್ಳೆಯ ಹೆಸರಿಡುವ  ಆಲೋಚನೆಯನ್ನು ನಮಗೆ ಬಿಟ್ಟಿದರು. ಕನ್ನಡದ ಯಾವುದಾದರೂ ಜನಪ್ರಿಯ ಕ್ರೈಸ್ತ ಭಕ್ತಿಗೀತೆಯ ಮೊದಲ ಸಾಲನ್ನೇ ಸಿಡಿಯ  ಹೆಸರಾಗಿಸುವ ನಿರ್ಧಾರ ಮಾಡಿದೆವು. ಜನಪ್ರಿಯ ಹೆಸರಾದರೆ ಕೊಳ್ಳುಗರನ್ನು ಸೆಳೆಯಬಹುದು ಎಂಬುದು ಮತ್ತೊಂದು ಉದ್ದೇಶ. ಯಾವ ಶೀರ್ಷಿಕೆ ಎಂದು ಸುಮಾರು ಗೀತೆಗಳನ್ನು ರಿಸಿಕೊಂಡು ಹುಡುಕತೊಡಗಿದೆವು. ನೂರಾರು ಹಾಡುಗಳ ಟಫ್ ಫೈಟ್ ನಡುವೆ ಆಯ್ಕೆಯಾದದ್ದು ಚೇತನ ಧ್ವನಿಸುರಳಿಯ ಯೇಸುವೇ ಸ್ತೋತ್ರ’. 

ಕನ್ನಡ ಕ್ರೈಸ್ತರ ವ್ಯಾಪ್ತಿಯಲ್ಲಿ ಒಂದಷ್ಟು ಹಾಡುಗಳು ಗಾಳಿಯಷ್ಟೇ ವ್ಯಾಪಕ. ’ಸುಂದರವಾದ ಮನೆಯಲ್ಲಿ’ ಹಾಡು ಹಾಡಿಸಿಕೊಳ್ಳದ ನೂತನ ಮನೆಯಿಲ್ಲ. ’ಮಣ್ಣಿನಿಂದ ಸೃಷ್ಟಿಯಾದ ಮನುಜನೇ’ ಹಾಡಿಲ್ಲದ ಶವ ಸಂಸ್ಕಾರವಿಲ್ಲ. ಈಗಂತೂ ’ಪಾವನಾತ್ಮರೇ ಪ್ರಿಯ ಪಾವನಾತ್ಮರೇ’ ಇಲ್ಲದ ಸಾಮೂಹಿಕ ಪ್ರಾರ್ಥನೆಯಿಲ್ಲ. ಹೀಗೆ ಹಳೆಯ ಹಾಡುಗಳು,  ಫಾ. ಫೆಲಿಕ್ಸ್, ಫಾ.ಚಸರಾ, ಫಾ ಮರಿಜೋ ಮುಂತಾದವರ ಹಾಡುಗಳ ನಡುವೆ ನಾವು ಈ  ’ಯೇಸುವೇ ಸೋತ್ರ’ ಹಾಡು ಆರಿಸಿಕೊಂಡದ್ದು ಆಕಸ್ಮಿಕವೇನ್ನಲ್ಲ.  ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಕನ್ನಡ ಬಲ್ಲ ಎಲ್ಲಾ ಕ್ರೈಸ್ತರಲ್ಲೂ ಈ ಹಾಡು ಸುಪರಿಚಿತವಾಗಿತ್ತು. ಅಲ್ಲದೆ ಈ  ಹಾಡಿಗೂ, ಭಕ್ತರಿಗೂ  ಒಂದು ಅವಿನಾಭಾವ ಸಂಬಂಧವಿತ್ತು. ಪೂಜೆಗಳಲ್ಲಿ ಮಾತ್ರವಲ್ಲದೆ,  ಪ್ರಾರ್ಥನೆಗಳಲ್ಲಿ, ಧ್ಯಾನಗಳಲ್ಲೂ ಈ ಹಾಡನ್ನು ಜನರು ಸುಲಲಿತವಾಗಿ ಹಾಡುತ್ತಿರುವುದನ್ನು ನಮ್ಮ ಮಟ್ಟಿಗೆ ನಾವು ಗಮನಿಸಿದ್ದೆವು. ಕೊನೆಗೆ ಸಿಡಿಯ ಹೆಸರು ’ಯೇಸುವೇ ಸ್ತೋತ್ರ’ ಆಯಿತು, ಸಿಡಿಯ ಮೊದಲ ಹಾಡೂ ಅದೇ ಆಯಿತು.

ಫಾ.ಜೆ ಅಂತೋಣಪ್ಪ (ಆಗಿನ್ನು ಬ್ರದರ್)ನವರ ’ಯೇಸುವೇ ಸ್ತೋತ್ರ’ದ ಸರಳ, ಸುಂದರ ಸಾಹಿತ್ಯಕ್ಕೆ ಮಧುರವಾಗಿ ಕೊರಳಾದವರು ಗಾಯಕಿ ಕಸ್ತೂರಿ ಶಂಕರ್. ಆದರೆ ಹಾಡಿನ ಹಿಂದಿನ ಮಾಂತ್ರಿಕತೆಯಿದದ್ದು ರಾಗ   ಸಂಯೋಜನೆಯಲ್ಲಿ. ಆ ರಾಗ-ಸ್ವರ ಮಾಂತ್ರಿಕನೇ ಬ್ರದರ್ ಚಿನ್ನಪ್ಪ M V ಅಥವಾ ಎಲ್ಲರ ಮೆಚ್ಚಿನ ಚಿನ್ನು. ಮೊದಲು ತಿಳಿಸಿದ ಆ ಎಲ್ಲಾ ಹಾಡುಗಳೂ ಅವರದೇ.
ಇದೇ ಏಪ್ರಿಲ್ ಗೆ ಬ್ರದರ್ ಚಿನ್ನು ಅಗಲಿ ಮೂವತ್ತು ವರ್ಷಗಳು. 90 ಏಪ್ರಿಲ್ 16ರ ಆ ದೌರ್ಭಾಗ್ಯದ ದಿನದಂದು ಮರಳಿ ಬಾರದ ಲೋಕಕ್ಕೆ ಹೊರಟ ಚಿನ್ನು, ಬಿಟ್ಟು ಹೋದದ್ದು ಒಂದಷ್ಟು ಸುಮಧುರ ಹಾಡುಗಳ ಬುತ್ತಿ, ತುಂಬಲಾಗದ ಖಾಲಿತನ ಹಾಗೂ ಎಂದಿಗೂ ಮುಗಿಯದ ಗುನುಗು.           

ಕನ್ನಡ ಕ್ರೈಸ್ತ ಭಕ್ತಿ ಸಂಗೀತದ ಪರಂಪರೆ ದೊಡ್ಡದು. ಚಿನ್ನುರವರ ಮುಂಚೆ ನೂರಾರು ಗೀತೆಗಳು ಬಂದಿವೆ. ಇನ್ನು ಅವರ ನಿಧನದ ನಂತರದ ವರ್ಷಗಳಲ್ಲಂತೂ ಕನ್ನಡ ಭಕ್ತಿ ಗೀತೆಗಳು ಮತ್ತಷ್ಟು ಸಮೃದ್ಧಿಯಾಗಿ ಬೆಳೆದು ನಿಂತಿದೆ. ಆದರೆ ದಶಕದ ಸೆಮಿನರಿ ಒಡನಾಟದಲ್ಲಿ, ಆ ಐದಾರು ವರ್ಷಗಳ ಕ್ರಿಯಾಶೀಲತೆಯಲ್ಲಿ, ಬೆರಳೆಣಿಕೆಯಷ್ಟು ಕ್ಯಾಸೆಟ್ಟುಗಳಲ್ಲಿ, ಕೆಲವೇ ಗೀತೆಗಳ ಸಂಯೋಜನೆಯಲ್ಲಿ, ಸುಂದರ ಕಂಠ ಸಿರಿಯಲ್ಲಿ ಚಿನ್ನು ಮೂಡಿಸಿದ ಭರವಸೆ, ಒತ್ತಿದ ಛಾಪು, ಉಳಿಸಿ ಹೋದ ಕೊರತೆ ಗಮನಾರ್ಹ. ಬ್ರದರ್ ಚಿನ್ನು ನವರ ಒಡನಾಟದಲ್ಲಿದ್ದ, ಬಲ್ಲ ಯಾರನ್ನು ಕೇಳಿದರೂ ಅದು ಸುಂದರ ನೆನಪುಗಳ ಮಂದಾರ, ಇನ್ನೂ ಇರಬೇಕಿತ್ತು ಎಂಬ ಏಕ ಅಭಿಪ್ರಾಯದ  ದುಃಖದ ಉದ್ಘಾರ.
 
90 ದಶಕ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳ ಧ್ವನಿ ಸುರಳಿಗಳ ಪರ್ವಕಾಲ. ಆದರೆ ಅದಕ್ಕೂ ಹಿಂದಿನ 80ದಶಕ ಒಂದು ವಿಶಿಷ್ಟ ಚಟುವಟಿಕೆ ಕಾಲ. ಹಿರಿಯರಾದ ಫಾದರ್ ಫೆಲಿಕ್ಸ್, ಫಾದರ್ ಮರಿಜೋ ತಮ್ಮ ಗಾನೆ ಸುಧೆ ಹರಿಸುತ್ತಾ ಪ್ಲೇಟ್, ಕ್ಯಾಸೆಟ್ಟುಗಳ ಮೂಲಕ ಮನೆ ಮನಗಳ ತಾಕತ್ತಿದ್ದರು. ಇತ್ತ ಕಿರಿಯರ ಪಡೆಯೊಂದು ಆ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವ ಭರವಸೆಯನ್ನು ಮೂಡಿಸಿದ್ದರು. ಆ ದಶಕದ ಎರಡನೆಯ ಭಾಗದಲ್ಲಂತೂ ಕನ್ನಡ ಕ್ರೈಸ್ತ ಸಾಂಸ್ಕೃತಿಕ ಲೋಕ ಭರಪೂರ ಕೊಯ್ಲನ್ನು ಕಂಡಿತು. ಚಸರಾ ಎಂಬ ತಾರೆ ಸಂಗೀತ ಲೋಕದಲ್ಲಿ ಉದಯಿಸಿ ಮಿನುಗಲು ಆರಂಭಿಸಿದರೆ, ವಿನ್ಸೆಂಟ್ , ಡೇವಿಡ್ ಮುಂತಾದವರ ಜನಧಾರೆ, ಗಾನವೃಂದ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳತ್ತಲೂ  ಏರುಮುಖದಲ್ಲಿತ್ತು. ಸ ರಾ ಡಾಮನಿಕ್ ತಮ್ಮದೇ ಕ್ಯಾಸೆಟ್ಟುಗಳ ಮೂಲಕ ಸಣ್ಣ ಕಂಪನಗಳನ್ನು ಮೂಡಿಸುತ್ತಿದ್ದರು.

ಇತ್ತ ಸೆಮನರಿಯಲ್ಲಿನ ಬ್ರದರುಗಳು, ಯಾಜಕ ದೀಕ್ಷೆಯ ಹೊಸಿಲಲ್ಲಿದ್ದವರು, ನವ ಯಾಜಕರೂ ಎಲ್ಲರೂ ಸೇರಿ ಉತ್ಸಾಹದ  ಹೊಸ ದಾರಿಯ ಅನ್ವೇಷಣೆಯಲ್ಲಿ ಕ್ರಿಯಾಶೀಲರಾಗಿದ್ದರು. ಅದರಲ್ಲಿ ಮಿಂಚು ತಾರೆಯಂತೆ ಮಿನುಗಿ ಮರೆಯಾದದ್ದು ಬ್ರದರ್ ಚಿನ್ನು. ಒಂದೆರೆಡು ತಿಂಗಳಲ್ಲಿ ಡೀಕನ್ ಆಗಬೇಕಿತಷ್ಟೇ. ಫಾ.ಜೆ ಅಂತೋಣಪ್ಪ ಹಾಗೂ ಫಾ.ಲೂರ್ದಪ್ಪನವರ ಗುರು ದೀಕ್ಷೆಯ ಸ್ಮರಣಾರ್ಥ ಬಂದ ’ಅಭಿಷೇಕ’  ಪ್ರಾಯಶ: ಅವರು ತೊಡಗಿಸಿಕೊಂಡ ಕೊನೆಯ ಧ್ವನಿಸುರಳಿ. ಅದರಲ್ಲಂತೂ ಸುಮಧುರ, ಅರ್ಥಗರ್ಭಿತ ಮಾತ್ರವಲ್ಲದೆ ಸೂಪರ್ ಹಿಟ್ ಹಾಡುಗಳ ತೋರಣವೇ ಇತ್ತು.’ನಡೆಸು ಎನ್ನ ಸೇವಕ ಪ್ರಭು’, ತಗ್ಗಿ ನಡೆಯಬೇಕು ಮನುಜ’ ಬಂದೆನು ಇಂದು ತಂದೆಯ ನೆನೆದು’, ಧ್ಯಾನಿಸು’ ವಾರ್ತೆ ಕೇಳಿ ಧ್ಯಾನ ಮಾಡಿ ’ ಜಗಜ್ಯೋತಿ ಯೇಸು’ ಎಲ್ಲವೂ ಒಂದಕ್ಕಿಂತ ಒಂದು ಮೀರಿಸುವಂತ ಹಾಡುಗಳೇ.

ಬ್ರದರ್ ಚಿನ್ನುರವರ ಬಗ್ಗೆ ಗೊತ್ತಿಲ್ಲದ ಓದುಗರಿಗೆ ಅವರನ್ನು ಪರಿಚಯಿಸಬೇಕಾದದು ಅವರ ಹಾಡುಗಳಿಂದಲೇ.  ಎಂಬತ್ತರ ದಶಕದ ಕೊನೆಯ ಭಾಗದಲ್ಲಿ  ಹೊರ ಬಂದ ಅರ್ಪಣ, ಚೇತನ, ಪಾದುವ ಪುಷ್ಪ, ಅಭಿಷೇಕ, ಮೃತ್ಯುಂಜಯ  ಮುಂತಾದ ಕ್ರೈಸ್ತ ಭಕ್ತಿ ಗೀತೆಗಳ ಧ್ವನಿಸುರುಳಿಗಳಲ್ಲಿನ ಅತ್ಯಂತ ಸುಮಧುರ ಹಾಡುಗಳ ರಚನಾಕಾರರು ಅವರು. ಸಂಗೀತ ರಚನೆ ಜೊತೆಗೆ ಕೆಲವೊಂದಕ್ಕೆ ತಾವೇ ಸಾಹಿತ್ಯ ರಚಿಸಿ, ಕಂಠವನ್ನೂ ಒದಗಿಸಿದ ಮಹಾನ್ ಪ್ರತಿಭೆ ಬ್ರದರ್ ಚಿನ್ನಪ್ಪ. ತಮ್ಮ ಮಧುರವಾದ ಕಂಠ ಸಿರಿಯಲ್ಲಿ ಹಾಡಿಗೆ ಹಾಗೂ ಸಾಹಿತ್ಯಕ್ಕೆ ಬೇಕಾದ ಭಾವಾರ್ಥಗಳನ್ನು ಸಮರ್ಥವಾಗಿ ತಂದವರು.

ಒಂದು ಹಾಡಿಗೆ ಇರಬೇಕಾದ ಎಲ್ಲ ಗುಣಗಳನ್ನು ಒಳಗೊಂಡ ಗೀತೆಗಳನ್ನು ಅತ್ಯಂತ ಅಲ್ಪ ಸಮಯದಲ್ಲಿ ಅತ್ಯಂತ ಯಶಸ್ವಿಯಾಗಿ ಕೇಳುಗರ ಮನಮುಟ್ಟಿಸಿದ ಹೆಗ್ಗಳಿಕೆ ಅವರದು. ಚಿನ್ನುರವರ ಹಾಡುಗಳಲ್ಲಿನ ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಸಾಹಿತ್ಯ ಒದಗಿಸಿದವರ ಪಟ್ಟಿ. ಅಂದಿನ ಸಮಯದ ಅನೇಕ ಬ್ರದರ್ ಗಳು ಈ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರು. ಅವರೆಲ್ಲಾ ಮುಂದೆ ಹಾಡುಗಳ ಕಾವ್ಯ ರಚನೆಯಲ್ಲಿ ತೊಡಗಿಕೊಂಡದ್ದು ವಿರಳವೇ.
ಹಾಡುಗಳ ವಿಶೇಷತೆಯ ಬಗ್ಗೆ ಹೇಳುವದಕ್ಕಿಂತ ಹಾಡುಗಳನ್ನು ಕೇಳುವುದೇ ಲೇಸು. ಸರಳವೆನಿಸುವ, ಎಲ್ಲರಿಗೂ ಸುಲಭವಾಗಿ ಮುಟ್ಟುವ, ದೇವಾಲಯದಲ್ಲಿ ಹಾಡಬಹುದಾದ, ಹಿಂದೆ ಬಂದ ಹಾಡುಗಳಿಗಿಂತ ತುಸು ಭಿನ್ನವಾಗಿ, ಮುಂದೆ ಬಂದ ಹಾಡುಗಳಿಗಿಂತ ಹೆಚ್ಚಾಗಿ ಬೈಬಲ್ ವಾಕ್ಯಗಳನ್ನೇ ನೆಚ್ಚಿಕೊಂಡ ಹಾಡುಗಳಿವು.

ಬ್ರದರ್ ಚಿನ್ನು ಜನಿಸಿದ್ದು 1961ರ ಏಪ್ರಿಲ್ 25ರಂದು. ಕೊಳ್ಳೇಗಾಲ ತಾಲೂಕಿನ ಪ್ರಕಾಶ್ ಪಾಳ್ಯ ಹುಟ್ಟಿದ ಊರು. ತಂದೆ ಮುತ್ತುಸ್ವಾಮಿ ಹಾಗೂ ತಾಯಿ ಪ್ರೆಸಿಲಮ್ಮ ದಂಪತಿಗಳ ನಾಲ್ಕನೆಯ ಮಗನಾಗಿ ಜನಿಸಿದ ಅವರು ಮೈಸೂರಿನ ಫಿಲೋಮಿನಾಸ್ ನಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು. ಮುಂದೆ ಕಮನಹಳ್ಳಿಯಲ್ಲಿದ್ದ ತಮ್ಮ ಅಣ್ಣಂದಿರಾದ ಸೆಲ್ವರಾಜ್ ಹಾಗೂ ಪ್ರಕಾಶ್ ರವರೊಂದಿಗೆ ಇದ್ದ ಚಿನ್ನು, ನಂತರ ಕಮ್ಮನಹಳ್ಳಿ ಧರ್ಮಕೇಂದ್ರಕ್ಕೆ ಬಂದ ಫಾ.ತೋಮಸ್ ರವರ ಬಳಿ ದೇವಾಲಯದ ಕಾರ್ಯಗಳಲ್ಲಿ ಸಹಾಯಕರಾಗಿದ್ದರು. ಅವರ ಮಾರ್ಗದರ್ಶನದಲ್ಲೇ ಮೈಸೂರಿನ ಮೈನರ್ ಸೆಮನರಿಗೆ ಸಹ ಸೇರಿದರು. ಸೆಮಿನರಿಯಲ್ಲಿ ಸಾಂಸ್ಕೃತಿಕವಾಗಿ ತೊಡಗಿಕೊಂಡು ಬಂದು ಸಂಗೀತ ಕೃಷಿಯಲ್ಲಿ ಬೆಳೆದು ಬಂದರು.         

ಪ್ರತಿ ತಪಸ್ಸು ಕಾಲದಲ್ಲಿ ಅವರೇ ರಚಿಸಿ ಹಾಡಿರುವ ಶಿರ ಬಾಗಿಹೆ’ ’ಕರೆ ಚಾಚಿಹೆ’, ನಾ ಕಂಡೆ ಶಿಲುಬೆಯಲ್ಲಿ’ ಹಾಡು ನೆನಪಿಗೆ ಬರುತ್ತದೆ.’ಮೃತ್ಯುಂಜಯ’ ಕ್ಯಾಸೆಟ್ಟಿನ ಅವರ ಹಾಡುಗಳು ಇಂದಿಗೂ ಪಾಸ್ಕ ಕಾಲದಲ್ಲಿ ಚಾಲ್ತಿಯಲ್ಲಿವೆ. ’ರಟ್ಟಾಗದ ಗುಟ್ಟಿಲ್ಲ ಕೇಳೋ ಮನುಜ’, ’ಪ್ರೀತಿಸು ನೀ ಮಾನವ’, ’ಕಾದಿದೆ ಹೃದಯವು ಜೀವ ಜಲಕ್ಕೆ’, ಸತ್ಯ ಪ್ರೀತಿ ತ್ಯಾಗ ಪ್ರೇಮವು’, ’ಬಂದೆನು ಇಂದು ತಂದೆಯ ನೆನೆದು’ ’ಮಾತೆಯೆ ಮರಿಯೇ ಮೋಕ್ಷ ರಾಣಿಯೇ’ ಹಾಡುಗಳು ಇಂದಿಗೂ ಹೊಸತೆನಿಸುತ್ತದೆ.

ಏಪ್ರಿಲ್ ಅವರ ಹುಟ್ಟು ಹಾಗೂ ಸಾವು ಎರಡೂ ಸಂಭವಿಸಿದ ತಿಂಗಳು. ಸರಿಯಾಗಿ 30 ವರ್ಷಗಳ ಹಿಂದೆ ಮರೆಯಾದ ಗಾನವೇ ಮೈತಳೆದಂಥ ಜೀವವೊಂದಕ್ಕೆ ಅವರ ಹಾಡುಗಳ ನೆನಪಿನ ಮೂಲಕವೇ ಒಂದು ಸಣ್ಣ ಶ್ರದ್ಧಾಂಜಲಿ ಸಲ್ಲಿಸುವ ಬಯಕೆ ಇಷ್ಟು ದೊಡ್ಡ ಲೇಖನವಾಗಿದೆ. ಈ ಬಯಕೆಗೆ ಮಾಹಿತಿಗಳನ್ನು ಒದಗಿಸಿ ಸಹಾಯ ಮಾಡಿದ ಫಾ.ವಿಲ್ಲಿಯಂ ಪ್ಯಾಟ್ರಿಕ್, ಚಿನ್ನು ಸೋದರರಾದ ಶ್ರೀ.ಸೆಲ್ವರಾಜ್, ಶ್ರೀ.ಲೂಕಾಸ್ ರವರಿಗೆ ನಾನು ಅಭಾರಿ.

ಇಷ್ಟು ವರ್ಷಗಳಲ್ಲಿ ಅವರ ಒಂದು ಸಣ್ಣ ಫೋಟೋ ಕೂಡ ನೋಡದೆ ಅವರ ಹಾಡುಗಳು, ಅವರ ಉತ್ಸಾಹಭರಿತ ಕಂಠವನ್ನು ಮೆಚ್ಚುತ್ತಾ ಬಂದ ನನಗೆ ಈ ಒಂದು ಬರಹ ವಿಷಾದದ ಭಾರವನ್ನು ತುಸು ಇಳಿಸಿಕೊಂಡ ಅನುಭವ.  ಪ್ರಕಟಿಸಲು ಸರಿಯಾದ  ಫೋಟೊಗಳೂ ಇರದಂಥ ಸಂದರ್ಭದಲ್ಲಿ ಇವರ ಹಾಡುಗಳೇ ಇವರ ನೆನಪುಗಳನ್ನು ಜೀವಂತವಾಗಿಸಿವೆ.