Wednesday 9 April 2014

ದಾಹ

ಅದೊಂದು ದಿನ.....

ಅದೊಂದು ಸಣ್ಣ ಊರು. ಸುಡುತ್ತಿರುವ ಬಿಸಿಲು ಹಾಗೂ ಧೂಳಿನಿಂದಾಗಿ ಊರು ಮರುಭೂಮಿಯಂತೆ ಭಾಸವಾಗುತ್ತಿದೆ. ತಮ್ಮ ಕೆಲಸ ಕಾರ್ಯಗಳಲ್ಲಿ ನಿರುತರಾಗಿರುವ ಜನರ ನಡುವೆ ಕುದುರೆಗಳ ಹೆಜ್ಜೆಯ ಸದ್ದು, ಸೈನಿಕರ ಗದರಿಕೆಯ ಶಬ್ದ ಸಣ್ಣದಾಗಿ ಕೇಳಿ ಬರುತ್ತದೆ. ನೋಡು ನೋಡುತ್ತಿದ್ದಂತೆ ಹತ್ತಾರು ಸೈನಿಕರು, ಅವರ ಕುದುರೆಗಳು ಈ ಸಣ್ಣ ಊರನ್ನು ಪ್ರವೇಶಿಸುತ್ತವೆ. ಇದೆಲ್ಲಾ ಸಾಮಾನ್ಯವೆಂಬಂತೆ ಜನ ನೋಡುತ್ತಿದ್ದಾರೆ. ಕೆಲವರು ಎದ್ದು ನೀರು ತರಲು ಹೋಗುತ್ತಿದ್ದಾರೆ. ಸೈನಿಕರ ಹಿಂದೆಯೇ, ಒಬ್ಬರಿಗೊಬ್ಬರು ಸರಪಣಿಗಳಿಂದ ಬಂಧಿಸಲ್ಪಟ್ಟ ಇಪ್ಪತ್ತಕ್ಕೂ ಹೆಚ್ಚು ಖೈದಿಗಳು ನಡೆಯಲಾರದೆ ನಡೆದು ಬರುತ್ತಾರೆ. ಗುಲಾಮಿಗಿರಿಗೋ ಅಥವಾ ರಾಜ್ಯದ ಯಾವುದೋ ಶ್ರಮದ ಕೆಲಸಕ್ಕೋ ಇವರೆನ್ನೆಲ್ಲಾ ಇನ್ನೊಂದೆಡೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬೆಂಕಿಯಂತೆ ಸುಡುತ್ತಿರುವ ಬಿಸಿಲಿನಲ್ಲಿ ನಡೆದುಕೊಂಡು ಬಂದ ದಣಿವು, ನೀರಿಗಾಗಿ ಹಾಹಾಕಾರ, ಸ್ವಲ್ಪ ಹೊತ್ತು ನಿಂತರೆ ಸಾಕು ಎಂಬಂತ ಭಾವ ಅವರ ಮುಖದಲ್ಲಿ, ಸೋತು ಹೋದ ಹೆಜ್ಜೆಗಳಲ್ಲಿ ಕಾಣಿಸುತ್ತಿದೆ. 

ಈ ಖೈದಿಗಳ ಗುಂಪಿನ ನಡುವೆಯೇ ಎದ್ದು ಕಾಣುವಂತೆ  ಎತ್ತರ ಆಕರ್ಷಕ ಮೈಕಟ್ಟು ಒಬ್ಬ ಖೈದಿಯದು. ರಾಜ ಕಳೆಯಿರುವ ಮುಖದಲ್ಲಿ ದಿಟ್ಟ ನಿಲುವಿದ್ದರೂ ಅವೆಲ್ಲವೂ ದಣಿವಲ್ಲಿ ಸೊರಗಿ ಹೋಗಿದೆ. ಇತ್ತ ಮರದ ಕೆಲಸ ಮಾಡುತ್ತಿರುವ ಬಡಗಿಯೊಬ್ಬನ ಮನೆಯ ಮುಂದೆ ಈ ಸೈನಿಕ, ಖೈದಿಗಳ ಗುಂಪು ಸಾಗುತ್ತಿದಂತೆ ಆ ಬಡಗಿಯು ತನ್ನ ಕೆಲಸಕ್ಕೆ ಒಂದು ವಿರಾಮ ಕೊಟ್ಟು ಇವೆಲ್ಲವನ್ನು ನೋಡುತ್ತಾ ಬಾಗಿಲ ಬಳಿ ಬಂದು ನಿಲ್ಲುತ್ತಾನೆ. ಸೈನಿಕರು ಮತ್ತು ಅವರ ಕುದುರೆಗಳಿಗೂ ಅದು ಅಲ್ಪ ವಿರಾಮ . ಅಲ್ಲಿನ ಜನ ಹೋಗಿ ನೀರುಗಳನ್ನು ತಂದು ಸೈನಿಕರಿಗೂ, ಅವರ ಕುದುರೆಗಳಿಗೆ ಕೊಡುತ್ತಾರೆ. ಅವರದಾದ ಬಳಿಕ ಖೈದಿಗಳ ಸರದಿ. ತಂದಿತ್ತ ನೀರನ್ನು ಕುಡಿಯಲು ಅವರು ಹಾತೊರೆಯುವ ದೃಶ್ಯ ಎಂತಹವರ ಮನಸ್ಸನ್ನೂ ಕಲಕದೆ ಇರದು. ಒಂದೊಂದು ಹನಿಯೂ ಅಮೃತ. ಕೊಟ್ಟ ಪಾತ್ರೆಯಲ್ಲಿ ಒಂದು ಹನಿಯೂ ಬಿಡದಂತೆ ಖೈದಿಗಳು ಕುಡಿಯುತ್ತಿರುವಾಗ, ಯಾರೋ ಬಂದು ಆ ಎತ್ತರದ ಖೈದಿಗೂ ಒಂದು ನೀರುಳ್ಳ ಪಾತ್ರೆ ಕೊಡುತ್ತಾನೆ. ಒಂದೆರೆಡು ಬೊಗಸೆಯಷ್ಟು ನೀರು ಹಿಡಿಯಬಹುದಾದ ಚಿಪ್ಪಿನ ಪಾತ್ರೆ. ಇನ್ನೇನು ನೀರನ್ನು ಬಾಯಿಗೆ ಇಳಿಸಿಕೊಳ್ಳಬೇಕು, ನೀರು ನಾಲಿಗೆಗೆ ಸೋಕಿ, ಅಮೃತದಂತ ರುಚಿ ತಾಕಬೇಕೆನ್ನುವಷ್ಟರಲ್ಲಿ ಅದೆಲ್ಲಿಂದಲೋ ಬಂದ ಸೈನ್ಯಾಧಿಕಾರಿ ಆ ಪಾತ್ರೆಯನ್ನು ಕಸಿದುಕೊಳ್ಳುತ್ತಾನೆ. "ಇವನಿಗೆ ಮಾತ್ರ ಯಾರೂ ನೀರು ಕೊಡುವಂತಿಲ್ಲ" ಎನ್ನುತ್ತಾ ಆ ನೀರನ್ನು ತಾನೇ ಗಟಗಟ ಕುಡಿಯ ತೊಡುಗುತ್ತಾನೆ. ದಿಕ್ಕೆ ತೋಚದಂತಾದ ಖೈದಿ, ಸೈನಿಕ ಕುಡಿಯುತ್ತಿರುವಾಗ ಸೋರುತ್ತಿರುವ ಹನಿಯನ್ನಾದರೂ ಕುಡಿಯಲು ಪ್ರಯತ್ನಿಸುತ್ತಾನೆ. ಉಹೂಂ... ಸೈನಿಕ ಅದೂ ಸಿಗದಂತೆ ಅವನ್ನನು ತಳ್ಳಿ ಬಿಡುತ್ತಾನೆ. ಅಂತಹ ದಿಟ್ಟ ನಿಲುವಿನ ನಡುವೆಯೂ ಆ ಖೈದಿಗೆ ಆಕಾಶವೇ ಬಿದ್ದಂತಾಗಿ ಅಳು ಒತ್ತರಿಸಿ ಬಂದು, ಗೋಳಾಡಲೂ ಶಕ್ತಿಯಿಲ್ಲದೆ, ಭೂಮಿಯೇ ಬಾಯಿ ತೆರೆದು ತನ್ನನ್ನು ನುಂಗಬಾರದೆ ಎಂಬಂತೆ ನೆಲಕ್ಕೆ 
ಬೀಳುತ್ತಾನೆ. 

ಮುಂದೆ ಸಣ್ಣ ನೆರಳೊಂದು ಅವನ ಮೈ ಮೇಲೆ ಬೀಳುತ್ತದೆ. ನೆಲದಲ್ಲಿ ಬಿದ್ದ ಆ ಖೈದಿಯ ತಲೆಯನ್ನು ಕೈಯೊಂದು ಪ್ರೀತಿಯಿಂದ ನೇವರಿಸುತ್ತದೆ. ಅವನ ಮುಖದ ಬಳಿ ನೀರಿನ ಸಣ್ಣ ಪಾತ್ರೆಯನ್ನು ಒಡ್ಡಿದಾಗ, ಮೃಷ್ಟಾನ್ನವೇ ಸಿಕ್ಕಿತ್ತೇನೋ ಎಂಬಂತೆ ಎಚ್ಚರಗೊಂಡ ಖೈದಿ ತ್ವರೆಯಿಂದ ನೀರು ಕುಡಿಯಲಾರಂಭಿಸುತ್ತಾನೆ. ನೀರು ತಂದಿತ್ತ ಕೈ ಅವನ ತಲೆಯನ್ನು ಪ್ರೀತಿಯಿಂದ ನೇವರಿಸುತ್ತಾ ನಿಧಾನವಾಗಿ ಕುಡಿ ಎನ್ನುವಂತೆ ಅವನನ್ನು ಉಪಚರಿಸುತ್ತದೆ. ಶತಮಾನಗಳ ದಾಹವೇನೋ ಎಂಬಂತೆ  ಆ ಖೈದಿ ನೀರನ್ನು ಕುಡಿಯುತ್ತಿರುವುದನ್ನು  ನೋಡಿದ ಸೈನ್ಯಾಧಿಕಾರಿ ಕೋಪದಿಂದ ಕುದಿಯುತ್ತಾ, ನೀರು ಕೊಡಬೇಡವೆಂದರೂ ಕೊಟ್ಟವರಾರು ಎಂದು ಆರ್ಭಟಿಸುತ್ತಾ ಮುಂದೆ ಬರುತ್ತಾನೆ. ಅಷ್ಟರಲ್ಲಿ ನೀರು ತಂದಿತ್ತ ಆ ವ್ಯಕ್ತಿ ನಿಧಾನವಾಗಿ ಎದ್ದು ನಿಲ್ಲುತ್ತಾನೆ. ನೀರು ಕೊಟ್ಟವನು ನಾನೇ ಎಂಬಂತ ದಿಟ್ಟ ಭಂಗಿಯದು. ಊರಲ್ಲಿ ಮರದ ಕೆಲಸ ಮಾಡುತ್ತಿದ್ದ ಅ ಬಡಗಿಯೇ ಆ ವ್ಯಕ್ತಿ. ಆರ್ಭಟಿಸುತ್ತಾ ಬಂದ ಅಧಿಕಾರಿ ಬಡಗಿಯನ್ನು ನೋಡಿದ್ದೆ, ಯಾಕೋ ಏನೂ ಮಾತನಾಡಲಾಗದೆ ಸುಮ್ಮನಾಗುತ್ತಾನೆ. ಮಾತ್ರವಲ್ಲದೆ ಬಡಗಿಯ ನೋಟವನ್ನು ಎದುರಿಸಲಾಗದೆ ಮೊದಲು ತಲೆ ತಗ್ಗಿಸಿ ನಂತರ ಹಾಗೇ ಮತ್ತೊಂದು ಕಡೆಗೆ ಮುಖ ಮರೆಸುತ್ತಾನೆ. ಯಾವುದೋ ತಪ್ಪಿಗೆ ಸಿಕ್ಕಿಕೊಂಡಂತ, ನಾಚಿಕೆಯ ಭಾವದಿಂದ ಅಲ್ಲಿ ನಿಲ್ಲಲಾಗದೆ ಪಕ್ಕಕ್ಕೆ ಸರಿಯುತ್ತಾನೆ . ಇತ್ತ ನೀರು ಕುಡಿದ ಖೈದಿ ಮಾತ್ರ ಹೊಸ ಜೀವ ಬಂದಂತೆ ಸಂತೋಷದಿಂದ ಬಡಗಿಯನ್ನು ಮೌನವಾಗಿ ವಂದಿಸುತ್ತಾ ಆತನ ಪಾದದ ಬಳಿ ಮಿಸುಕಾಡುತ್ತಿದ್ದಂತೆ,ಇನ್ನೂ ಅಲ್ಲಿ ನಿಲ್ಲಲ್ಲು ಸಾಧ್ಯವೇ ಇಲ್ಲವೆಂಬಂತೆ ಸೈನ್ಯಾಧಿಕಾರಿ ಅಲ್ಲಿಂದ ಎಲ್ಲರನ್ನು ಹೊರಡಿಸುತ್ತಾನೆ. ಖೈದಿಯ ಮುಖ ಮಾತ್ರ ತನಗೆ ಹೊಸ ಜೀವ ಕೊಟ್ಟ ಬಡಗಿಯನ್ನೇ ದಿಟ್ಟಿಸುತ್ತಿರುತ್ತದೆ. ಒಂದೆರೆಡು ಕ್ಷಣ ಒಬ್ಬರನೊಬ್ಬರು ನೋಡಿಕೊಳ್ಳುತ್ತಾರೆ. ಇತ್ತ ತನ್ನನ್ನು ಎಳೆದುಕೊಂಡು ಹೋಗುತ್ತಿದ್ದರೂ ಆ ಖೈದಿ ದೂರದ ತನಕ ಆತನನ್ನೇ ದಿಟ್ಟಿಸುತ್ತಾ ಮುಂದೆ ಸಾಗುತ್ತಾನೆ......



ಇದು ’ಬೆನ್ ಹರ್’ ಎಂಬ ಅತ್ಯಂತ ಜನಪ್ರಿಯ ಇಂಗ್ಲಿಷ್ ಚಿತ್ರದ ಒಂದು ತುಣುಕು. ಯೇಸು ಕ್ರಿಸ್ತನ ಸಮಕಾಲಿನಲ್ಲಿ ನಡೆಯುವ ಕಥೆಯ ಈ ಚಿತ್ರದ ಕಥಾನಾಯಕ ಬೆನ್ ಹರ್. ಅವನೇ ಆ ಖೈದಿ. ರೋಮನ್ ಸಾಮ್ರಾಜ್ಯದ ವಿರುದ್ಧ ಬಂಡಾಯ ಎದ್ದ  ಪರಿಣಾಮವಾಗಿ ತನ್ನ ಬಾಲ್ಯ ಗೆಳೆಯನಿಂದಲೇ, ದೇಶ ಭ್ರಷ್ಟನೆಂಬ ಸುಳ್ಳು ಹಣೆಪಟ್ಟಿಯೊಂದಿಗೆ ಜೀತದಾಳಾಗಿ ಸಾಗುವ ಸಂದರ್ಭದಲ್ಲಿ ನಡೆಯುವುದು ಮೇಲಿನ ಘಟನೆ. ಪ್ರೀತಿಯಿಂದ ನೀರು ನೀಡುವ ಬಡಗಿಯೇ ಯೇಸು ಕ್ರಿಸ್ತ ಎಂದು ಚಿತ್ರದಲ್ಲಿ ಪರೋಕ್ಷವಾಗಿ ತೋರಿಸಲಾಗಿದೆ. ಇದು ಬೆನ್ ಹರ್ ಎಂಬುವವನ ಕಥೆಯಾದರೂ ಇಡೀ ಚಿತ್ರದಲ್ಲಿ ಅಲ್ಲಲ್ಲಿ ಯೇಸು ಪಾತ್ರಧಾರಿ ಬರುತ್ತಾನೆ. ಅದರೂ ಯೇಸುವನ್ನು ಎಲ್ಲಿಯೂ ನೇರವಾಗಿ ತೋರಿಸದೆ ನಿರ್ದೇಶಕ ವಿಲ್ಲಿಯಂ ವೈಲರ್ ಜಾಣ್ಮೆ ಮರೆಯುತ್ತಾನೆ. 1956ರಲ್ಲಿ  ಬಿಡುಗಡೆಯಾದ ಈ ಚಿತ್ರ ಅತ್ತ್ಯುತ್ತಮವಾಗಿ ಮೂಡಿ ಬಂದು ಇಡೀ ವಿಶ್ವದಲ್ಲಿ ಜನಪ್ರಿಯವಾದರೂ, ಮೇಲಿನ ದೃಶ್ಯ ಮೂಡಿ ಬಂದಿರುವ ರೀತಿ  ಮಾತ್ರ ಮನೋಜ್ಞವಾಗಿದೆ. ಯೇಸು ಕ್ರಿಸ್ತನ  ಕೌಟಂಬಿಕ ಹಿನ್ನಲೆ, ಮಾನವೀಯತೆ, ಅಂತಕರಣ, ದಿಟ್ಟತನ , ಅನ್ಯಾಯದ ವಿರುದ್ಧದ ಧ್ವನಿ, ಅತನನ್ನು ಕಂಡರೆ ಅಧಿಕಾರ ವರ್ಗಕಿದ್ದ ಭಯ ಎಲ್ಲವೂ ಕೇವಲ ಮೂರು ನಾಲ್ಕು ನಿಮಿಷದ ಮೆಲಿನ ದೃಶ್ಯದಲ್ಲಿ  ಸುಂದರವಾಗಿ ಅನಾವರಣಗೊಂಡಿದೆ.ಹೆಚ್ಚಿನ ಮಾತಿಲ್ಲದೆ ಕೇವಲ ಭಾವಾಭಿನಯದಲ್ಲೇ ಎಲ್ಲವನ್ನು ಹೇಳಿರುವ ಪರಿ ಅಮೋಘ. ಯೇಸು ಕ್ರಿಸ್ತನ ಕೊನೆಯ ಘಳಿಗೆಗಳನ್ನು ಸಹಾ ಚಿತ್ರದಲ್ಲಿ ಮನಸ್ಸು ಮುಟ್ಟುವಂತೆ ಚಿತ್ರಿಸಲಾಗಿದೆ. ಸಮಯ ಅವಕಾಶ ಸಿಕ್ಕಾಗ ಒಮ್ಮೆ ನೋಡಲೇ  ಬೇಕಾದ ಚಿತ್ರವಿದು.

- ಪ್ರಶಾಂತ್ ಇಗ್ನೇಶಿಯಸ್