Wednesday 20 September 2017

ಸುರಾಗ್‍


ಕನ್ನಡ ಕ್ರೈಸ್ತ ವಲಯದಲ್ಲಿ ಸಾಂಸ್ಕೃತಿಕವಾಗಿ, ಸಾಹಿತ್ಯ ಸಂಗೀತದಲ್ಲಿ ಹಲವಾರು ಪ್ರತಿಭಾವಂತರು ತೊಡಗಿಸಿಕೊಂಡಿದ್ದರೂ ತೀರ ವೃತ್ತಿಯಾಗಿ ತೊಡಗಿಸಿಕೊಂಡವರು ಹಾಗೂ ಅದರಲ್ಲಿ ಯಶಸ್ಸು ಕಂಡವರು ವಿರಳ. ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ ಕ್ರೈಸ್ತರ ಸಂಖ್ಯೆ ಕಡಿಮೆಯೇ ಎನ್ನಬಹುದು.

ಅಂಥಹ ವಿರಳರಲ್ಲಿ ಸಾಧು ಕೋಕಿಲ ಒಬ್ಬರು. ಸಾಧು ಶೀಲನ್ ಎಂದೇ ೮೦-೯೦ರ ದಶಕದಲ್ಲಿ ತಮ್ಮ ಸಂಗೀತದ ಮೂಲಕ ಕನ್ನಡ ಕ್ರೈಸ್ತ ವಲಯದಲ್ಲಿ ಸುಪ್ರಸಿದ್ಧರಾಗಿದ್ದವರು ಸಾಧು. ಅವರು ವಾದ್ಯ ಸಂಯೋಜಿಸಿದ ಅನೇಕ ಧ್ವನಿಸುರಳಿಗಳು, ಗೀತೆಗಳು ಇಂದಿಗೂ ಕನ್ನಡ ಜನ ಮನಗಳಲ್ಲಿ ಬೆರೆತು ಹೋಗಿದೆ.

ಇಂಥ ಸಾಧು ಶೀಲನ್ ೧೯೯೪ರಲ್ಲಿ ’ಶ್’ ಚಿತ್ರದ ಮೂಲಕ ಸಾಧು ಕೋಕಿಲರಾಗಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ದಾಪುಗಾಲಿಟ್ಟರು. ಚಿತ್ರರಂಗಕ್ಕೆ ಬಂದ ಈ ಎರಡು ದಶಕಗಳಲ್ಲಿ ಸಾಧುರವರ ಸಾಧನೆ ಸಾಮಾನ್ಯವೇನ್ನಲ್ಲ. ಶ್, ಗಂಡುಗಲಿ, ರಕ್ತ ಕಣ್ಣೀರು, H2O, ಟೋನಿ, ಇಂತಿ ನಿನ್ನ ಪ್ರೀತಿಯ, ಎದೆಗಾರಿಕೆ, ಮಾಸ್ತಿ ಗುಡಿ ಮುಂತಾದ ಅನೇಕ ಹಿಟ್ ಚಿತ್ರಗಳ ಸಂಗೀತ ನಿರ್ದೇಶನ ಒಂದು ಕಡೆ. ಮತ್ತೊಂದು ಕಡೆ ನಿರ್ದೇಶನದಲ್ಲೂ ನಿರ್ಮಾಪಕನಾಗಿಯೂ ಸಾಧುರವರ ಸಾಧನೆ ದಾಖಲಾರ್ಹ. ಸಂಗೀತ ನಿರ್ದೇಶನ ಮಾತ್ರವಲ್ಲದೆ, ಹಿನ್ನಲೆ ಸಂಗೀತ, ರೀರೆಕಾರ್ಡಿಂಗ್‍ನಲ್ಲೂ ಸಾಧುರವರದು ದೊಡ್ಡ ಹೆಸರು.

ಆದರೆ ಇಂದು ಇದೆಕ್ಕೆಲ್ಲಾ ಮಿಗಿಲಾಗಿ ಹಾಸ್ಯ ನಟನಾಗಿ ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುವಂಥದು. ಇಂದು ಯಾವುದೇ ಜನಪ್ರಿಯ ನಾಯಕ ನಟನಿಗೆ ಸಿಗುವ ಸಿಳ್ಳೆ, ಚಪ್ಪಾಳೆ, ಕೇಕೆಯ ಸ್ವಾಗತ ಸಾಧು ಕೋಕಿಲ ತೆರೆಯ ಮೇಲೆ ಬಂದಾಗ ಸಿಗುತ್ತದೆ ಎನ್ನುವುದು ಸುಳ್ಳಲ್ಲ.
ಇದರ ನಡುವೆ ಸಾಧುರವರು ಸಂಗೀತ ಕ್ಷೇತ್ರದಲ್ಲೇ ಇನ್ನಷ್ಟು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆನ್ನುವುದು ಅವರ ಅಭಿಮಾನಿಗಳೆಲ್ಲರ ಬೇಡಿಕೆ. ಎಸ್ಪಿ ಬಾಲಸುಬ್ರಮಣಿಯಮ್‍ರಂಥ ದಿಗ್ಗಜರೇ ಈ ಮಾತನ್ನು ಕಾರ್ಯಕ್ರಮವೊಂದರಲ್ಲಿ ಹೇಳಿರುವುದನ್ನು ನಾವು ಕೇಳಿದ್ದೇವೆ.
ಈ ನಿರಾಸೆ, ಕೊರಗನ್ನು ನೀಗಸಲೆಂಬಂತೆ ಅವರ ಮಗ ಸುರಾಗ್ ಈಗ ಸ್ವತಂತ್ರವಾಗಿ ಸಂಗೀತ ನಿರ್ದೇಶನಕ್ಕೆ ಇಳಿದಿದ್ದಾರೆ. ಮಹೇಶ್ ಬಾಬು ನಿರ್ದೇಶನದ, ಚೇತನ್ ಅಭಿನಯದ ’ಅತಿರಥ’ ಚಿತ್ರ ಅವರ ಸಂಗೀತ ನಿರ್ದೇಶನ ಮೊದಲ ಚಿತ್ರವಾಗಿದೆ. ಪುನೀತ್ ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರ ನಡುವೆ ’ಅತಿರಥ’ ಚಿತ್ರದ ಆಡಿಯೋ ಲಾಂಚ್ ಆಗಿದೆ. ಸಾಧು ಕೋಕಿಲ ಮಗನ ಸಂಗೀತ ನಿರ್ದೇಶನ ಎಂಬ ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಸುರಾಗ್ ಮೇಲಿದೆ. ಬಿಡುಗಡೆ ಆದ ಹಾಡುಗಳು ಈಗಾಗಲೇ ಯೂಟ್ಯೂಬ್‍ನಲ್ಲಿ ಸದ್ದು ಮಾಡುತ್ತಿದೆ. ಸುರಾಗ್‍ನ ವಯೋಸಹಜ ಲವಲವಿಕೆ, ಹೊಸತನ, ಪ್ರಯೋಗಾತ್ಮಕ ಮನಸ್ಸು ಚಿತ್ರದ ಹಾಡುಗಳಲ್ಲಿ ಕಾಣುತ್ತದೆ. ಯುವ ಸಂಗೀತ ಪ್ರೇಮಿಗಳನ್ನು ಸೆಳೆಯುವಂತ ರಾಗ ಸಂಯೋಜನೆ ಇಲ್ಲಿರುವುದರಿಂದ ಹಾಡುಗಳು ಯಶಸ್ವಿಯಾಗಬಹುದೆಂಬ ಭರವಸೆ ಇದೆ.

ಈ ಹಿನ್ನಲೆಯಲ್ಲಿ ಮಾತುಕತೆಯ ಪರವಾಗಿ ಸುರಾಗ್‍ನನ್ನು ಭೇಟಿ ಮಾಡಲು ಹೋದಾಗ ಊಟದ ಸಮಯ ಮೀರಿತ್ತು. ಆದರೆ ಹಸಿವಿನ ಪರಿವಿರಲಿಲ್ಲ. ಈಗಲೇ ಹತ್ತಾರು ಮೊಬೈಲು ಕರೆಗಳನ್ನು ಸ್ವೀಕರಿಸುವ ಅನಿವಾರ್ಯತೆಯ ನಡುವೆಯೂ ಬೇಸರದ ಯಾವುದೇ ಸುಳಿವಿರಲಿಲ್ಲ. ದನಿಯಲ್ಲಿ ವಿನಯದ ಅಚ್ಚು. ತುಟಿ ಮೇಲಿನ ನಗುವಿಗೆ ಹಾಗೂ ಮಾತಲ್ಲಿ ಆತ್ಮೀಯತೆಗೆ ಕೊರತೆಯಿಲ್ಲ. ಒಟ್ಟಿನಲ್ಲಿ ಸುಲಭವಾಗಿ ಬೆರೆಯಬಲ್ಲ, ಮಾತಿಗಿಳಿದರೆ ನಿರ್ರಗಳವಾಗಿ ಹರಿಯುವ, ವಯಸ್ಸಿಗೆ ತಕ್ಕ ಧಾರ್ಮಿಕ ಪ್ರಶ್ನೆ-ಗೊಂದಲಗಳಿರುವ, ಸ್ಪಷ್ಟವಾದ ಯೋಚನೆ, ನಿಲುವುಗಳಿರುವ ಯುವಕನಂತೆ ಸುರಾಗ್ ಕಂಡರು.

ಇದೇ ಧಾಟಿಯಲ್ಲಿ ಕೂತು ಮಾತಾಡಿದಾಗ ಹಂಚಿಕೊಂಡ ಕೆಲವು ಸಂಗತಿಗಳು ಹೀಗಿವೆ –

ಪ್ರಶ್ನೆ – ನಮಸ್ಕಾರ ಸುರಾಗ್. ಮೊದಲಿಗೆ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವ ನಿಮಗೆ ಮಾತುಕತೆ ಹಾಗೂ ಕನ್ನಡ ಕ್ರೈಸ್ತರ ಪರವಾಗಿ ಅಭಿನಂದನೆಗಳು.
ಸುರಾಗ್ – ತುಂಬಾ ಥ್ಯಾಂಕ್ಸ್, ನನ್ನ ಮೇಲೆ ಪ್ರೀತಿ ಇಟ್ಟು ಬಂದಿದ್ದಕ್ಕೆ.

ಪ್ರಶ್ನೆ – ಹೇಳಿ  ಸುರಾಗ್, ’ಅತಿರಥ’ದ ಈ ಹೆಜ್ಜೆ ಎಲ್ಲಿಂದ ಪ್ರಾರಂಭವಾಯಿತು ?
ಸುರಾಗ್ – ನಾನು ನಮ್ಮ ತಂದೆಯವರ ಜೊತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೆ. ಇತ್ತೀಚಿನ ’ಮಾಸ್ತಿ ಗುಡಿ’ ಚಿತ್ರಕ್ಕೆ ನಾನು ಸಹಾಯಕನಾಗಿ ಕೆಲಸ ಮಾಡುವಾಗ, ಸ್ಟುಡಿಯೋಗೆ ಬರುತ್ತಿದ್ದ ನಿರ್ದೇಶಕ ಮಹೇಶ್ ಬಾಬು ನನ್ನ ಕೆಲಸ ನೋಡಿದ್ದರು. ಅವರು ನಿರ್ದೇಶಿಸಲಿದ್ದ ’ಅತಿರಥ’ ಚಿತ್ರಕ್ಕೆ ಸಂಗೀತ ನೀಡಲು ನನಗೆ ಅಹ್ವಾನ ಕೊಟ್ಟರು. ಒಪ್ಪಿಕೊಂಡೆ. ಜೊತೆಗೆ ನಿರ್ಮಾಪಕರಾದ ಪ್ರೇಮ್ ಹಿಂದೆ ನಮ್ಮ ಜನಧಾರೆ ತಂಡದಲ್ಲಿದ್ದರಂತೆ. ಹೀಗೆ ಎಲ್ಲವೂ ಕೂಡಿ ಬಂತು.

ಪ್ರಶ್ನೆ – ಸಂತೋಷ, ಆದರೆ ನಿಮಗಿನ್ನು  ೨೨ ವರ್ಷ. ನಿಮಗೆ ಈ ಚಿತ್ರಕ್ಕೆ ಅವಕಾಶ ಬಂದಾಗ ನಾನಿನ್ನು ಚಿಕ್ಕವನು ಎಂಬ ಅಳುಕೇನಾದರೂ ಇತ್ತೇ?
ಸುರಾಗ್ – ಆ ಥರದ ಅಳುಕು ಈಗಲ್ಲ, ಐದು ವರ್ಷದ ಹಿಂದೆ ಇತ್ತು.  ಸುಮಾರು ೫ ವರ್ಷದ ಹಿಂದೆಯೇ ನನಗೆ ನಿರ್ದೇಶಕ ನಾಗಶೇಖರ್ ತಮ್ಮ ’ಗಡಿಯಾರ’ ಎಂಬ  ಚಿತ್ರಕ್ಕೆ ಅವಕಾಶ ನೀಡಿದ್ದರು. ಆಗ ನನಗಿನ್ನು ೧೭. ಆಗ ಸ್ವಲ ಅಳುಕಿತ್ತು. ಆದರೆ ಆ ಚಿತ್ರ ಟೇಕ ಆಫ್ ಆಗಲಿಲ್ಲ. ಈಗ ಅವಕಾಶ ಬಂದಾಗ ಏನೂ ಅನಿಸಲಿಲ್ಲ. ಐ ವಾಸ್ ಕಾನ್‍ಫಿಡೆಂಟ್. ಯಾಕಂದ್ರೆ ಈ ಐದು ವರ್ಷಗಳಲ್ಲಿ ಸಾಕಷ್ಟು ಚಿತ್ರಗಳ ಸಂಗೀತ, ರೀರೆಕಾರ್ಡಿಂಗ್‍ನಲ್ಲಿ ತೊಡಗಿಸಿಕೊಂಡಿದ್ದೇನೆ.

ಪ್ರಶ್ನೆ – ನೀವು ಕಾನ್‍ಫಿಡೆಂಟ್ ಆಗಿದ್ರೂ, ವಯಸ್ಸಿನ ದೃಷ್ಟಿಯಿಂದ ಅನುಭವಿಗಳ, ಹಿರಿಯರ ಮಧ್ಯೆ ಸ್ವಲ್ಪ ತೊಡಕುಗಳ ಅನುಭವ ಆಗಿರಬೇಕಲ್ಲವೇ?
ಸುರಾಗ್ – ಹೌದು, ಒಮ್ಮೊಮ್ಮೆ ಈ ರೀತಿಯ ಸನ್ನಿವೇಶಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ನಾನು ಅದಕ್ಕೆ ಹೊಂದಿಕೊಂಡಿದ್ದೇನೆ, ಏಕೆಂದರೆ ನಾನಿನ್ನು ಚಿಕ್ಕವನು. ಆದರೆ ನಮ್ಮ ವಯಸ್ಸಿಗಿಂತ ನಾವು ವರ್ಕ್ ಮಾಡೋ ರೀತಿ ಆ ರೀತಿಯ ಡೌಟ್‍ಗಳನ್ನು ನಿಧಾನವಾಗಿ ತೆಗೆಸಿಬಿಡುತ್ತದೆ. ಅದರಲ್ಲೂ ನಮ್ಮ ಜೊತೆ  ಕೆಲಸ ಮಾಡೋ ಮ್ಯೂಸಿಷ್ಯನ್ಸ್, ಟೆಕ್ನಿಷಿಯನ್ಸ್‍ರ ವಿಶ್ವಾಸಗಳಿಸಿಕೊಂಡರೆ ನಮ್ಮ ಕೆಲಸ ಸುಲಭವಾಗುತ್ತದೆ. ನನಗೆ ಈ ಚಿತ್ರದಲ್ಲಿ ನಮ್ಮ ನಿರ್ದೇಶಕರ ನಿರ್ಮಾಪಕರ ಸಂಪೂರ್ಣ ಬೆಂಬಲವಿದ್ದಿದ್ದರಿಂದ ಏನೂ ತೊಂದರೆ ಆಗಲಿಲ್ಲ.

ಪ್ರಶ್ನೆ – ನಿಮ್ಮದು ಎರಡೂ ಕಡೆಯಿಂದ ಸಂಗೀತದ ಕುಟುಂಬ. ತಂದೆಯ ಕಡೆ ಹಾಗೂ ತಾಯಿಯ ಕಡೆಯ ಕುಟುಂಬಗಳು ಸಂಗೀತದಲ್ಲೇ ಮುಳುಗಿದೆ, ಆದರೂ ನಿಮ್ಮ ಸಂಗೀತದ ಪಯಣ ಮೊದಲು ಎಲ್ಲಿಂದ ಪ್ರಾರಂಭವಾಯಿತು ಎಂಬ ನೆನಪಿದೆಯೇ?
ಸುರಾಗ್ – ನೀವು ಹೇಳಿದ ಹಾಗೆ ನಮ್ಮದು ಸಂಗೀತಮಯ ಕುಟುಂಬ. ತಂದೆ ಸಂಗೀತದಲ್ಲೇ ಮುಳುಗಿರುತ್ತಿದ್ದರು. ಇತ್ತ ತಾತ, ದೊಡ್ಡಪ್ಪ, ಮಾವ, ಅತ್ತೆಯಂದಿರು ಎಲ್ಲರೂ ಸಂಗೀತದಲ್ಲಿ ತೊಡಗಿಕೊಂಡವರೇ. ಇದಕ್ಕಿಂತ ಮುಖ್ಯವಾಗಿ ನಾವು ಚರ್ಚುಗಳಲ್ಲಿ ಸಾಂಸ್ಕೃತಿಕವಾಗಿ, ಸಂಗೀತದ ವಾತವಾರಣದಲ್ಲಿ ತೊಡಗಿಕೊಂಡು ಬಂದಿರುತ್ತೇವೆ. ಇದೆಲ್ಲವೂ ನನ್ನ ಸಂಗೀತದ ಪಯಣದಲ್ಲಿ ಸಹಕಾರಿಯಾಗಿದೆ. ನಾನು ಎರಡು ಮೂರು ವರ್ಷವಿರುವಾಗಲೇ ನನ್ನ ತಂದೆ ತಾಯಿ ನನಗೆ ಕೀಬೋರ್ಡ್ ಶಿಕ್ಷಣಕ್ಕೆ ಏರ್ಪಾಡು ಮಾಡಿದ್ದರು.

ಪ್ರಶ್ನೆ – ಮುಂದೆ?
ಸುರಾಗ್ – ಮುಂದೆ ನಮ್ಮ ತಂದೆ ಜೊತೆಯಲ್ಲಿ ರೀರೆಕಾರ್ಡಿಂಗ್‍ಗಳಿಗೆ, ಸ್ಟುಡಿಯೋಗೆ ಹೋಗಲು ಪ್ರಾರಂಭಿಸಿದೆ. ಸಂಗೀತ ಸಂಯೋಜನೆ ಪೂರ್ಣವಾಗಿ ಡಿಜಿಟಲ್ ಆದಾಗ ನನಗೆ ಮತ್ತಷ್ಟು ಆಸಕ್ತಿ ಮೂಡಿತು. ಕಂಪ್ಯೂಟರ್ನಲ್ಲಿ ಸಹಾ ಆಸಕ್ತಿ ಇದಿದ್ದರಿಂದ ನಾನೇ  ಕೀ ಬೋರ್ಡ್ ಹಾಗೂ ಕಂಪ್ಯೂಟರ್ ಇಟ್ಟುಕೊಂಡು ಸಂಯೋಜಿಸಲು ಶುರು ಮಾಡಿದೆ. ನಿಧಾನವಾಗಿ ನನ್ನ ಪ್ರಯೋಗಗಳು ನನಗೇ ಇಷ್ಟವಾಗ ತೊಡಗಿತು.   ೧೨ನೇ ತರಗತಿ ಆದ ಮೇಲೆ ಪೂರ್ಣವಾಗಿ ಇದೇ ಕ್ಷೇತ್ರಕ್ಕೆ ಇಳಿದುಬಿಟ್ಟೆ.
ಪ್ರಶ್ನೆ – ಸಂಗೀತದಲ್ಲಿ ಯಾವ ಯಾವ ರೀತಿ ಪ್ರಿಪೇರ್ ಆಗಿದ್ದೀರಿ?
ಸುರಾಗ್ – ನಾನು ವೆಸ್ಟರ್ನ್ ಕ್ಲಾಸಿಕಲ್‍ನಲ್ಲಿ ಪರಿಣಿತಿ ಪಡೆದಿದ್ದೇನೆ. ಜೊತೆಗೆ ಸೌಂಡ್ ಎಂಜನಿಯರಿಂಗ್ ನನಗೆ ಇಷ್ಟ. ಅದರ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದೇನೆ. ಆದರೆ ಕಲಿಯುವುದು ಬಹಳ ಇದೆ. ಜೇಮ್ಸ್ ಅಂತ ಗುರುಗಳೂ ಸೇರಿದಂತೆ ಸುಮಾರು ಜನ ಗುರುಗಳು ನನ್ನನ್ನು ಸಂಗೀತದಲ್ಲಿ ಕೈ ಹಿಡಿದು ನಡೆಸಿದ್ದಾರೆ.

ಪ್ರಶ್ನೆ – ಈಗ ನಿಮ್ಮ ಮುಂದಿರುವ ಸವಾಲುಗಳು?
ಸುರಾಗ್ -  ಇರುವುದು ಏಳೇ ಸ್ವರಗಳಾಗಿರುವುದರಿಂದ ಅವುಗಳನ್ನೇ ಎಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅದು ಸೌಂಡಿಂಗ್‍ಯಿಂದ , ಸೋನಿಕಲಿ ಹೇಗೆ ಕಿವಿಗೆ ಇಂಪಾಗಿ, ಆಕರ್ಷಕವಾಗಿ ಕೇಳೋ ಹಾಗೆ ಮಾಡಬೇಕು ಎನ್ನುವ ಸವಾಲು ನಮ್ಮ ಮುಂದಿದೆ.

ಪ್ರಶ್ನೆ – ನಿಮ್ಮ ಅತಿ ಹತ್ತಿರದ ಸ್ಪೂರ್ತಿ ನಿಮ್ಮ ತಂದೆ. ಅವರನ್ನು ಬಿಟ್ಟರೆ ನಿಮ್ಮನ್ನು ಪ್ರೇರೇಪಿಸಿದಂತ ಸಂಗೀತಗಾರರು ಯಾರು?
ಸುರಾಗ್ – ಮೈಕಲ್ ಜಾಕ್ಸನ್‍ರವರ ಸಂಗೀತ ಹಾಗೂ ಸಂಯೋಜನೆಗಳ ಅಭಿಮಾನಿ ನಾನು. ಇಲ್ಲಿ ಇಳಯರಾಜರವರು ನನಗೆ ಬಹಳ ಇಷ್ಟ. ಒಂದು ಕಡೆ ಮಧುರವಾದ ಟ್ಯೂನ್ ಮತ್ತೊಂದು ಕಡೆ ಅದಕ್ಕೆ ಅವರು ನೀಡುವ ಸೌಂಡಿಂಗ್ ಅದ್ಭುತವಾಗಿರುತ್ತದೆ. ನಮ್ಮ ರಾಗಗಳಿಗೆ ಪಾಶ್ಚಾತ್ಯದ ಸ್ಪರ್ಶ ನೀಡುವುದರಲ್ಲಿ ಅವರದು ಎತ್ತಿದ ಕೈ. ಕನ್ನಡದಲ್ಲಿ ಜಿ.ಕೆ.ವೆಂಕಟೇಶ್‍ರವರ ಹಾಡುಗಳ ನನಗೆ ಬಹಳ ಇಷ್ಟ.

ಪ್ರಶ್ನೆ -  ಮುಂದಿನ ಯೋಜನೆಗಳು
ಸುರಾಗ್ – ಅವಕಾಶಗಳು ಬರುತ್ತಿದೆ. ಆಯ್ಕೆ ನಡೆಯುತ್ತಿದೆ. ನಮ್ಮದೇ ನಿರ್ಮಾಣದ ಚಿತ್ರವೊಂದಕ್ಕೆ ಸಂಗೀತ ನೀಡಲಿದ್ದೇನೆ. ಜಾಗ್ವಾರ್ ಖ್ಯಾತಿಯ ನಿಖಿಲ್ ಅವರೊಂದಿಗೆ ಸೇರಿ ವಿಡಿಯೋ ಆಲ್ಬಂವೊಂದು ಸಿದ್ಧವಾಗುತ್ತಿದೆ.

ಪ್ರಶ್ನೆ – ನಿಮ್ಮ ಇಡೀ ಕುಟುಂಬದೊಡನೆ ನೀವೂ ಚರ್ಚ್ ಚಟುವಟಿಕೆಗಳಲ್ಲಿ ತೊಡಗಿಕೊಂಡವರು, ಇನ್ನೂ ಬ್ಯೂಸಿ ಆಗಲಿದ್ದೀರಿ, ಚರ್ಚ್ ಚಟುವಟಿಕೆಗಳು?
ಸುರಾಗ್ – ನಾನು ನನ್ನ ತಾಯಿಯ ಜೊತೆ ಬರುತ್ತಿದೆ ಎಂಬುದನ್ನು ಬಿಟ್ಟರೆ ಅಷ್ಟೇನು ಸಕ್ರೀಯವಾಗಿರಲಿಲ್ಲ. ನಮ್ಮ ದೇವಾಲಯಕ್ಕೆ ಫಾ.ಚಸರಾ ಬಂದ ಮೇಲೆ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಬೆಳೆಯಿತು. ಅವರ ಧಾರ್ಮಿಕ ಚಿಂತನೆಗಳು ನನಗೆ ಇಷ್ಟವಾಗಿತ್ತು. ಎಷ್ಟೋ ವಿಷಯಗಳ ಬಗ್ಗೆ ಅವರೊಡನೆ ಚರ್ಚೆ ಮಾಡುತ್ತಿದ್ದೆ ಹಾಗೂ ಅದಕ್ಕೆ ಅವರು ಸ್ಪಂದಿಸುತ್ತಿದ್ದರು. ಈಗ ಅವರಿಲ್ಲ.

ಪ್ರಶ್ನೆ – ಕನ್ನಡ ಕ್ರೈಸ್ತ ಸಾಂಸ್ಕೃತಿಕ, ಧಾರ್ಮಿಕ  ಕಾರ್ಯಕ್ರಮಗಳಲ್ಲಿ ನಿಮ್ಮ ಪಾತ್ರವೇನಾದರೂ ನಿರೀಕ್ಷಿಸಬಹುದೇ?
ಈ ಪ್ರಶ್ನೆಯೊಂದಿಗೆ ನಮ್ಮ ಸಂವಾದ ಬೇರೆಯದೇ ತಿರುವುಗಳನ್ನು ಪಡೆಯಿತು. ಈಗ ಪ್ರಶ್ನೆಗಳಿಗೆ ಉತ್ತರಿಸುವ ಸರದಿ ನನ್ನದಾಯಿತು. ಕ್ರೈಸ್ತ ಧರ್ಮ, ಧಾರ್ಮಿಕತೆ, ಅದರ ಸಫಲತೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾದ ಅರ್ಥಪೂರ್ಣ ಚರ್ಚೆಯತ್ತ ಅದು ಹೊರಳಿತು. ಕೊನೆಗೆ, ಮಕ್ಕಳು ಹಾಗೂ ಯುವ ಮನಸ್ಸುಗಳಿಗೆ ಉಪಯೋಗವಾಗುವಂತ ಕಾರ್ಯಕ್ರಮಗಳು ನಮ್ಮಲ್ಲಿ ಬಂದರೆ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸುತ್ತೇನೆ ಎಂಬ ಸುರಾಗರ ಭರವಸೆಯೊಂದೆಗಿ ನಮ್ಮ ಸಂವಾದ ಮುಗಿಯಿತು.

ಸಂವಾದ ಮುಗಿಸಿಕೊಂಡು ಬರುವಾಗ ಭೇಟಿಯಾದ ತಂದೆ ಸಾಧು ಕೋಕಿಲ ಹಾಗೂ ತಾಯಿ ಸೆಲಿನ್ರವರಿಗೆ ಮಗನ ಬಗ್ಗೆ ಸಹಜವಾದ ಹೆಮ್ಮೆ ಸಂತೋಷವಿತ್ತು. ಅದರಲ್ಲೂ ಸಾಧುರವರಲ್ಲಿ ಮಗನ ಬಗ್ಗೆ ಸಾಕ್ಷಷ್ಟು ಭರವಸೆಯಿದೆ. ಈ ಕುಟುಂಬದ ಸಂಗೀತದ ಪಯಣ ಹೀಗೆ ಮುಂದುವರಿಯಲಿ ಹಾಗೂ ಅವರ ಕನಸುಗಳು ನನಸಾಗಲಿ