Wednesday 30 November 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 4 - ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’

ನನ್ನ ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’

ನನ್ನ ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’, ಸಂವೇದ್ಯದ ಮತ್ತೊಂದು ಸುಂದರ ಗೀತೆ. ಫಾ.ಚಸರಾರವರ ಅತ್ಯಂತ ಭಾವನಾತ್ಮಕ ಗೀತೆಗಳಲ್ಲಿ ಒಂದು. ಮರಿಯಾಪುರದ ಮಹಿಮೆಯಲ್ಲಿನ ಸಂದರ್ಭದ ಹಿನ್ನಲೆಯಿಂದ ಪ್ರತ್ಯೇಕಿಸಿ  ನೋಡಿದಾಗಲೂ ಇದು ಮನಮುಟ್ಟುವಂತ ಗೀತೆ. ಗೀತೆಯ ಮೊದಲ ಸಾಲಿನಲ್ಲೇ ಒಂದು ಸೆಳೆತವಿದೆ. ಸಾಮಾನ್ಯವಾಗಿ ತಪಸ್ಸು ಕಾಲದ ಈ ರೀತಿಯ ಹಾಡುಗಳಲ್ಲಿ, ’ ನಮ್ಮ ಪಾಪಗಳಲಿಂದಲೇ ಯೇಸು ಮರಣ ಹೊಂದಿದರು, ಕೊಲ್ಲಲ್ಪಟ್ಟರು’ ಎಂಬ ಭಾವವಿರುತ್ತದೆ. ಅದು ನಡೆದು ಹೋದ ಅಂದಿನ ಘಟನೆಯ ದಿವ್ಯ ನೆನಪಾಗಿರುತ್ತದೆ.  

ಅದರೆ ಈ ಹಾಡಿನಲ್ಲಿ ಬರುವ ’ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬ ಸಾಲುಗಳು ಯೇಸುವಿನ ಆ ಸಾವನ್ನು, ನೋವನ್ನು ವರ್ತಮಾನಕ್ಕೆ ತಂದು ಇಳಿಸಿ ಬಿಡುತ್ತದೆ. ’ಕ್ರಿಸ್ತ ಇತಿಹಾಸದವನ್ನಲ್ಲ, ನಮ್ಮ ನಿಮ್ಮೊಡನೆ ಇಂದಿಗೂ ಸ್ಪಂದಿಸುತ್ತಿರುವವನು’ ಎಂಬ ಚಸರಾರವರ ಇನ್ನೆಲ್ಲಿಯದೋ ಸಾಲುಗಳು ಇಲ್ಲಿ ಮತ್ತೆ ನೆನಪಿಗೆ ಬರುತ್ತದೆ.

ಕ್ರಿಸ್ತನ ಸಾವು, ನೋವು, ಅದರ ಕಾರಣ ಇತಿಹಾಸದ ದೃಷ್ಟಿಯಿಂದ ನೋಡಿದಾಗ ನಾವು ನಮ್ಮ ಇಂದಿನ ಜವಬ್ದಾರಿಯಿಂದ ಮೆಲ್ಲಗೆ ನುಣಿಚಿಕೊಳ್ಳುವ ಸಾಧ್ಯತೆಯಿದೆ. ಅಂದಿನ ಜನರು, ಪರಿಸ್ಥಿತಿ ಯೇಸುವಿನ ಸಾವಿಗೆ ಕಾರಣ ಎಂಬದು ಆ ನುಣಿಚಿಕೆಯ ಭಾಗವಾಗಿಬಿಡುತ್ತದೆ. ಆದರೆ ಆದೇ ’ ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬುದು ಯೇಸುವಿನ  ಆ ಕೊಲ್ಲುವಿಕೆಯಲ್ಲಿ ನಮ್ಮನೂ ಭಾಗಿಯಾಗಿಸಿ ಬಿಡುತ್ತದೆ, ಅದರಲ್ಲಿ ನಮ್ಮ ಸ್ವಾರ್ಥವನ್ನು ಮುಖ್ಯ ಆರೋಪಿಯನ್ನಾಗಿಸುತ್ತದೆ. ಆ ನಿಟ್ಟಿನಲ್ಲಿ ನೋಡಿದಾಗ ಅದು ಅದ್ಭುತವಾದ  ಆರಂಭಿಕ ಸಾಲುಗಳು.

ಹಾಡಿನ ಬಗ್ಗೆ ಬರೆಯುವ ಮುನ್ನ ಒಂದು ಘಟನೆಯ ಬಗ್ಗೆ ಹೇಳಬೇಕು. ೨೦೧೪ರಲ್ಲಿ ಚಿಗುರು ಬಳಗವು ಬೈಬಲ್ ಚಿತ್ರ ಪ್ರರ್ದಶನವೊಂದನ್ನು ಬೆಟ್ಟದ ಹಲಸೂರಿನಲ್ಲಿ ಆಯೋಜಿಸಿತ್ತು. ಹಳೆಯ  ಒಡಂಬಡಿಕೆಯಿಂದ ಹೊಸ ಒಡಂಬಡಿಕೆಯ ವಿವಿಧ ಘಟನೆಗಳ ಸುಮಾರು ೨೫೦ಕ್ಕೆ ಹೆಚ್ಚು ಚಿತ್ರಗಳನ್ನು ಒಟ್ಟುಗೂಡಿಸಿದ ಸುಮಾರು ೩೦ ಭಿತ್ತಿ ಚಿತ್ರಗಳ ಸಂಗ್ರಹಗಳ ಪ್ರದರ್ಶನವದು. 

ಅಂದು ಹಬ್ಬದ ಪೂಜೆಗೆ ಬಂದಿದ್ದ  ಫಾ.ಚಸರಾ, ಪೂಜೆಯ ನಂತರ ನಮ್ಮ ಪ್ರದರ್ಶನಕ್ಕೂ ಬಂದರು. ಬಂದವರೇ, ಎಲ್ಲಾ ಚಿತ್ರಗಳನ್ನು ಸಾವಕಾಶವಾಗಿ ನೋಡುತ್ತಾ ಬಂದರು. ಪ್ರತಿಯೊಂದನ್ನು ಗಮನಿಸಿದ ನಂತರ ಮತ್ತೆ ಒಂದು ಚಿತ್ರದತ್ತ ಹೋಗಿ ನಿಂತು ನೋಡಿದರು. ನಾವೂ ಸಹಾ ಆ ಚಿತ್ರದತ್ತ ಹೋಗಿ ನಿಂತೆವು. ಅದು ಯೇಸು ಬಂಧನಕ್ಕೆ ಒಳಗಾದ ನಂತರದ ಸುಮಾರು ಐದಾರು ಘಟನೆಯ ಕೊಲಾಜ್ ಚಿತ್ರ. ಯೇಸುವಿಗೆ ಜೂದಾಸ್ ಮುದ್ದಿಡುವುದು, ಸೈನಿಕರ ಛಾಟಿ ಏಟು, ಪೇತ್ರನ ನಿರಾಕರಣೆ, ಕೋಳಿಗಳು, ಯೇಸು ಪೇತ್ರನತ್ತ ನೋಡುತ್ತಿರುವುದು, ಪಿಲಾತ ಯೇಸುವನ್ನು ಜನರ ಮುಂದೆ ನಿಲ್ಲಿಸಿರುವುದು, ಜನ ಕೂಗುತ್ತಿರುವುದು, ರಾಣಿಯ ಬೇಸರ ಎಲ್ಲವೂ ಅದರಲ್ಲಿತ್ತು.

ಆ ಚಿತ್ರವನ್ನು ನೋಡಿದ ಫಾ.ಚಸರಾ ಪ್ರದರ್ಶನದ ಎಲ್ಲಾ ಚಿತ್ರಗಳಲ್ಲಿ ತಮಗೆ ಅತ್ಯಂತ  ಇಷ್ಟವಾದ ಚಿತ್ರ ಅದು ಎಂದು ನಮ್ಮ ಬಳಿ ಹೇಳಿದರು. ನಂತರ ಚಿತ್ರದ ಒಂದೊಂದು ಭಾಗವನ್ನು ನಮಗೆ  ವಿವರಿಸಲಾರಂಭಿಸಿ, ಕೊನೆಗೆ ನಮ್ಮನ್ನು ಅಭಿನಂದಿಸಿದರು. ಆ ಕೊಲಾಜಿಗೆ ಚಿತ್ರಗಳನ್ನು ಆಯ್ಕೆ ಮಾಡಿದ್ದ ನನಗೂ, ಅದನ್ನು ಡಿಸೈನ್ ಮಾಡಿದ್ದ ಬಳಗದ ಜ್ಞಾನ ಪ್ರಕಾಶ್‍ರವರಿಗೆ ಸಹಜವಾಗಿಯೇ ಖುಷಿಯಾಯಿತು. ಯೇಸು ಕ್ರಿಸ್ತನ ಜೀವನದ  ಕೊನೆಯ ಕೆಲವು ಘಂಟೆಗಳ ಕಾಲದ ಘಟನೆಗಳ ಬಗ್ಗೆ ಅವರಿಗೆ ಒಂದು ವಿಶೇಷವಾದ ಭಾವವಿತ್ತು ಎಂಬುದು ಅವರ ಮಾತಿನಲ್ಲಿ ನಮಗೆ ತಿಳಿಯಿತು.

ಕ್ರಿಸ್ತನ ಕೊನೆಯ ಕೆಲವು ಘಂಟೆಗಳು ನಿಜಕ್ಕೂ ಮನಕಲಕುವಂಥದ್ದು. ತಮ್ಮ ಬಹಿರಂಗ ಜೀವನದ ಮೂರು ವರ್ಷಗಳಲ್ಲಿ ಯೇಸು ಅನೇಕ ರೀತಿಯ ವಿರೋಧಗಳನ್ನು ಎದುರಿಸುತ್ತಾರೆ.ಆದರೂ ಸಾವಿನ ಭಯವಿಲ್ಲದೆ ಮುನ್ನುಗ್ಗುತ್ತಾರೆ.  ಆದರೆ ಬಂಧನದ ನಂತರ ಯೇಸುವನ್ನು ಅತ್ಯಂತ ಹೀನವಾಗಿ ನಡೆಸಿಕೊಳ್ಳಲಾಗುತ್ತದೆ. ಒಬ್ಬ  ಮನುಷ್ಯನಿಗೆ  ನೀಡಬಹುದಾದ ಅತ್ಯಂತ ಹೇಯ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಯೇಸು ಅನುಭವಿಸುತ್ತಾರೆ. ಯೇಸುವಿನ ಆ ಪರಿಸ್ಥಿತಿಯನ್ನು ಕಂಡು ಮರುಗುವ ಹಿನ್ನಲೆಯ ಗೀತೆ ’ನನ್ನ ಸ್ವಾರ್ಥ ಮನಸ್ಸಿನ ಈ ಬದುಕು.’

ಹಾಡಿನ ಪಲ್ಲವಿ ಹಾಗೂ ಮೊದಲ ಚರಣ ಕೇಳಿದಾಗಲ್ಲೆಲ್ಲ ನನಗೆ ಪೇತ್ರನ ಚಿತ್ರವೇ ನೆನಪಿಗೆ ಬರುತ್ತದೆ. ಶಿಷ್ಯರ ಕಾಲುಗಳನ್ನು ಯೇಸು ತೊಳೆಯಲು ಬಂದಾಗ, ಮೊದಲ ಪ್ರತಿರೋಧ ಬರುವುದೇ ಪೇತ್ರನಿಂದ. ’ಗುರುವಾಗಿರುವ ನೀವು ನಮ್ಮ ಪಾದ ತೊಳೆಯುವುದೇ’ ಎನ್ನುವ ಪೇತ್ರನ ಭಾವ ಈ ಹಾಡಿನಲ್ಲಿ ಕಾಣಿಸುತ್ತದೆ. ಹಾಗೆ ನೋಡಿದರೆ, ಶಿಷ್ಯರೆಲ್ಲಾ ದಿಕ್ಕಾಪಾಲಾಗಿ ಓಡಿಹೋದ ಮೇಲೆ ಪೇತ್ರ ಮಾತ್ರ ಯೇಸುವನ್ನು ಹಿಂಬಾಲಿಸುತ್ತಾನೆ. ಅದಕ್ಕೂ ಮುಂಚೆ ಗೆತ್ಸೆಮನಿಯಲ್ಲಿ ಸೈನಿಕರಿಗೆ ತಡೆಒಡ್ಡಿ ಒಬ್ಬನ ಕಿವಿ ಕತ್ತರಿಸುತ್ತಾನೆ. ಮುಂದೆ ಯೇಸುವನ್ನು ಮೂರು ಬಾರಿ ನಿರಾಕರಿಸುತ್ತಾನೆ, ಹಾಗೆಂದ ಮರುಕ್ಷಣವೇ  ಪಶ್ಚಾತ್ತಾಪದಿಂದ ಒದ್ದಾಡುತ್ತಾನೆ.

ಈ ಹಿನ್ನಲೆಯಲ್ಲಿ ’ನನ್ನ ಸ್ವಾರ್ಥ ಮನಸ್ಸಿನ ಈ ಬದುಕು’ ಎಂಬ ಸಾಲುಗಳು ಪೇತ್ರನ ಪಶ್ಚಾತ್ತಾಪದ ಸ್ವಗತವೇನೋ ಎಂದು ಹಾಡು ಕೇಳಿದಾಗಲೆಲ್ಲಾಅನಿಸುತ್ತದೆ. ಪೇತ್ರನೊಂದಿಗೆ ಸೇರಿ ನಾವೆಲ್ಲಾ ಹಾಡಿದಂತೆ.  ’ಪ್ರಭುವೇ ನನ್ನ ಓ ಪ್ರಭುವೇ ಏಕೆ ನಿಮ್ಮ ಸೇವೆ’ ಎಂಬ ಸಾಲುಗಳು ಪೇತ್ರನ ಪಾದ ತೊಳೆಯುವಿಕೆಯ ಸಂದರ್ಭದ ಮಾತುಗಳನ್ನು ನೆನಪಿಸುತ್ತದೆ. ಹಾರೋಬೆಲೆಯ ಮಹಿಮೆ ಹಾಗೂ ಪಳ್ಳಿಪಟ್ಟಿಯಲ್ಲಿನ ಮಹಿಮೆ ನಾಟಕದಲ್ಲಿ ಪೇತ್ರ ಯೇಸುವನ್ನು ನಿರಾಕರಿಸಿದ ನಂತರ ದೀರ್ಘವಾದ ದು:ಖಮಯ ಸನ್ನಿವೇಶವಿದೆ, ಹಾಡಿದೆ. ಇಲ್ಲಿ ಈ ಹಾಡಿನಲ್ಲಿ ಪೇತ್ರನಲ್ಲದಿದ್ದರೂ , ಆ ರೀತಿಯ ಭಾವ ಅಡಕವಾಗಿದೆ.

ಇಂದಿಗೂ ಈ ಹಾಡು ಕೇಳಿದಾಗಲೆಲ್ಲಾ ಒಂದು ವಿಷಾದ ಭಾವ ಆವರಿಸಿಕೊಳ್ಳುತ್ತದೆ. ಅದು ಪಶ್ಚಾತ್ತಾಪದ ಸುಳಿ ಮಿಂಚನ್ನು ಹರಿಸುತ್ತದೆ. ನಮ್ಮ ಸ್ವಾರ್ಥದ ಮನಸ್ಸು ಇಂದಿಗೂ ಯೇಸುವನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ ಎಂಬ ಭಾವ ನಿಲ್ಲುತ್ತದೆ.  ಒಂದೇ ಸಾರಿ ಕೊಂದು ಬಿಡುವುದಕ್ಕಿಂತ ಕೊಲ್ಲುತ್ತಲೇ ಇರುವುದು ದೊಡ್ಡ ಹಿಂಸೆ, ಆದರಿಂದಲೇ ’ಕೊಲ್ಲುತ್ತಿದೆ’ ಎಂಬ ಇನ್ನೂ ವರ್ತಮಾನದ ಸಂಗತಿ ನಮ್ಮನು ಎಚ್ಚರಿಸುತ್ತಲೇ ಇರುತ್ತದೆ. ಸಾಯುತ್ತಿರುವ ವ್ಯಕ್ತಿಯ ಬಳಿ ’ಕ್ಷಮಿಸು  ಹಾಗೂ ’ಪರ ಸೇವೆ ಮಾಡಲು ಕಲಿಸು’  ಎನ್ನುವ ಪ್ರಾರ್ಥನೆಯೂ ಇಲ್ಲಿದೆ.

ಧಾರ್ಮಿಕ ಗೀತೆಗಳಿಗೆ ತೀರ ಭಿನ್ನವೆನಿಸುವ ವಾದ್ಯ ಸಂಯೋಜನೆ  ಹಾಡಿಗೆ ಒದಗಿ ಬಂದಿದೆ. ಕ್ರಿಸ್ತನ ಯಾತನೆಯನ್ನು ಕಣ್ಣಿನ ಮುಂದೆ ತರುವಲ್ಲಿ ಹಿನ್ನಲೆ ಸಂಗೀತ ಯಶಸ್ವಿಯಾಗಿದೆ. ಯೇಸುವಿನ ಭಾರವಾದ ಹೆಜ್ಜೆಗಳ ಪ್ರತೀಕವೋ ಎಂಬಂತೆ ತಾಳ ವಾದ್ಯಗಳು ಆಳವಾಗಿ, ಪರಿಣಾಮಕ್ಕಾರಿಯಾಗಿದೆ. ಇದಕ್ಕೆ ಕಳಶವಿಟ್ಟಂತ್ತಿರುವುದು ರಾಜೇಶ್ ಕೃಷ್ಣನ್‍ನವರ ಗಾಯನ.

 ’ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬ ಸಾಲುಗಳು ಮನಸಾಕ್ಷಿಯ ಧ್ವನಿಯಂತೆ, ’ಪ್ರಭುವೇ ನನ್ನ ಕ್ಷಮಿಸು’ ಎನ್ನುವ ಸಾಲುಗಳು ಪಕ್ಕದ ಕಳ್ಳನ ಕ್ಷೀಣ ದನಿಯಂತೆ, ’ಏಕೆ ನಿಮ್ಮ ಸೇವೆ’ ಎಂಬುದು ಪೇತ್ರನ ಅಳುವಂತೆ, ’ಗುರುವು ನೀವು ದಾಸರು ನಾವು’ ಎಂಬುದು ಶಿಷ್ಯರ ಒಕ್ಕೊರಲಿನ ಮಾತಂತೆ, ’ಸ್ವಾರ್ಥ ತೊರೆದು ನೀ ಬಾಳು’ ಎಂಬುದು ನಮ್ಮದೇ ಅಂತರಾಳದಂತೆ, ಹೀಗೆ ವಿವಿಧ ಪಾತ್ರಗಳ ಭಾವ  ಹಾಡಿನಲ್ಲಿ ಕೇಳಿಸುವುದರಲ್ಲಿ ರಾಜೇಶರ ದನಿ ಮೋಡಿ ಮಾಡುತ್ತದೆ. ಆಗಿನ್ನೂ ವೃತ್ತಿನಿರತ ಗಾಯನಕ್ಕೆ ಕಾಲಿಡುತ್ತಿದ್ದ ರಾಜೇಶ್‍ರವರ ಕಂಠದಲ್ಲಿನ ಪಕ್ವತೆ ಎದ್ದು ಕಾಣುತ್ತದೆ.

ಹಾಡು ಮುಗಿದರೂ, ಆರಂಭದಲ್ಲಿನ  ಗಾಯಕಿಯ ಆಲಾಪನೆ ಮನದಲ್ಲಿ ಗುನುಗುಟ್ಟುತ್ತಾ ಸಾಗುತ್ತದೆ. ಹಾಡುಗಳು ಅಮರವಾಗುವುದೇ ಹೀಗೆ.