Thursday 30 June 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 1 - ಸ್ಪೂರ್ತಿಯಾಗಲಿ ಕ್ರಿಸ್ತ

ನಾನು ಹೇಳಿ ಕೇಳಿ ಫಾ.ಫೆಲಿಕ್ಸ್ ನೊರೋನ್ಹ ಹಾಡುಗಳ ಅಭಿಮಾನಿ. ಬಾಲ್ಯದಲ್ಲಿ ಅವರ ಗೀತೆಗಳನ್ನೇ ಕೇಳುತ್ತಾ ಬೆಳೆದವರು ನಾವೆಲ್ಲಾ. ಅವರ ಗೀತೆಗಳ ಮಾಧುರ್ಯಕ್ಕೆ, ಅವರ ಕಂಠಕ್ಕೆ, ಅವರ ಹಾಡುವ ಶೈಲಿಗೆ  ಮಾರುಹೋಗಿದ್ದ ನಾನು ಇಂದಿಗೂ ಅವರ ಹಾಡನ್ನು ಕೇಳಿದಾಗ ಉಲ್ಲಾಸಿತನಾಗುತ್ತೇನೆ. ಅವರ ಹಾಡುವ ಶೈಲಿಯನ್ನು ಅನುಸರಿಸಲು ಹೋಗಿ ಸೋತಿದ್ದೇನೆ. ಇಡೀ ೮೦ರ ದಶಕದಲ್ಲಿ ನಾವು, ಅಂದರೆ ನನ್ನ ವಯಸ್ಸಿನವರು, ಫಾ.ಫೆಲಿಕ್ಸ್, ಫಾ.ಮರಿಜೋ, ಸರಾ ಡಾಮನಿಕ್, ವಿನ್ಸೆಂಟ್, ಡೇವಿಡ್ ರವರ ಗೀತೆಗಳನ್ನು ಕೇಳುತ್ತಾ  ಹಾಗೂ ಇನ್ನೂ ಹಳೆಯ ಹಾಡುಗಳನ್ನು ಪೂಜೆಗಳಲ್ಲಿ ಹಾಡುತ್ತಾ ಬೆಳೆದವರು.

ಅದಕ್ಕಿಂತ ಮುಂಚೆ ೭೦ ದಶಕದಲ್ಲಿ  ಫಾ.ಫೆಲಿಕ್ಸ್, ಫಾ. ಫಾತಿರಾಜ್, ಫಾ.ಜಯನಾಥನ್ ಒಬ್ಬರಿಗಿಂತ ಒಬ್ಬರು ಅತ್ಯ್ತುತ್ತಮ ಎನ್ನುವಂತ ಹಾಡುಗಳನ್ನು ಕೊಟ್ಟರು ಎಂದು ನಮ್ಮ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಅವೆಲ್ಲಾ ಇಂದಿಗೂ ನಮ್ಮ ಪೂಜೆಗಳಲ್ಲಿ ಜನಪ್ರಿಯ ಗೀತೆಗಳೇ. ಅದಕ್ಕಿಂತ ಮುಂಚಿನ ಹಾಡುಗಳ ರಚನಾಕಾರರ ಪರಿಚಯ ನನಗಷ್ಟಿಲ್ಲ. ಮೊದಲು ಅಮೃತ, ಈಗ ಚೇತನ ಈ ಎಲ್ಲಾ ಗೀತೆಗಳನ್ನು ತನ್ನ ಒಡಲಾಳದಲ್ಲಿಟ್ಟುಕೊಂಡು ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ೮೦ರ ದಶಕದ ಕೊನೆಯಲ್ಲಿ ಬ್ರದರ್ ಚಿನ್ನು ಚೇತನ, ಅಭಿಷೇಕದಂತ ಕ್ಯಾಸೆಟ್ ಮೂಲಕ ಅತ್ತ್ಯುತ್ತಮ ಎನ್ನಬಹುದಾದ ಗೀತೆಗಳಿಂದ ಗಮನಸೆಳೆದರೂ ಅಕಾಲಿಕವಾಗಿ ನಮ್ಮನ್ನು ಅಗಲಿದರು.

ಈ ಎಲ್ಲದರ ನಡುವೆ ಕನ್ನಡ ಕ್ರೈಸ್ತಲೋಕಕ್ಕೆ ಫಾ.ಚಸರಾ ತಂದ ಹೊಳಪು ’ಮಿಂಚಿನಂತೆ ಮಿನುಗಿ ಬಂದ’ ಎಂಬ ಅವರದೇ ಸಾಲನ್ನು ನೆನಪಿಸುತ್ತದೆ. ಕನ್ನಡ ಭಕ್ತಿಗೀತೆಗಳ ಲೋಕಕ್ಕೆ ಫಾ.ಚಸರಾರ ಸಾಹಿತ್ಯ ಸಂಗೀತದ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು. ಕನ್ನಡ ಕ್ರೈಸ್ತ ಸಂಗೀತದ ಅಷ್ಟೂ ಇತಿಹಾಸ, ಸತ್ವವನ್ನು ಹೀರಿಕೊಂಡು, ತಮ್ಮದೇ ಆದ ಹೊಸ ಬಗೆಯ ಸಾಹಿತ್ಯವನ್ನು ಪರಿಚಯಿಸುತ್ತಾ, ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ, ಅಳತೆಗೋಲಾಗಿ ನಿಂತ ಅವರ ಕೊಡುಗೆ ನಿಜಕ್ಕೂ ಅಧ್ಯಯನಕ್ಕೆ ಯೋಗ್ಯವಾಗಿದೆ.

ಅದಿನ್ನೂ ನೆನಪಿದೆ ’ಸ್ಪಂದನ’ ಕ್ಯಾಸೆಟ್ ಬಿಡುಗಡೆ ಆದ ಸಂದರ್ಭ. ಅದೊಂದು ಹಬ್ಬದ ವಾತಾವರಣ. ಸರಾ, ವಿನ್ಸೆಂಟ್, ಡೇವಿಡ್, ಬ್ರದರ್ ಚಿನ್ನುರವರ ಕ್ಯಾಸೆಟ್ ಗಳೂ ಅದೇ ಸಮಯದಲ್ಲಿ ಬಂದಿತ್ತು. ಅದೊಂದು  ಕನ್ನಡ ಭಕ್ತಿ ಗೀತೆಗಳ ಭರ್ಜರಿ ಬೆಳೆಯ ಕಾಲ. ಅಗ ಬಂದ ’ಸ್ಪಂದನ’ವನ್ನು ಕನ್ನಡಿಗರು  ಆತ್ಮೀಯವಾಗಿಯೇ ಬರಮಾಡಿಕೊಂಡರು. ಫಾ.ಐ.ಚಿನ್ನಪ್ಪ ಸುಮಾರು ೩೦ ಕ್ಯಾಸೆಟ್‍ಗಳಿದ್ದ ಬಾಕ್ಸ್ ವೊಂದನ್ನು ನನ್ನ ತಂದೆಗೆ ಕೊಟ್ಟು, " ಚಸರಾ ಸಾಮೇರು ಮಾಡಿರೋ ಕ್ಯಾಸೆಟ್, ಮಾರಿಕೊಡು" ಎಂದು ಹೇಳಿದ್ದು ನನಗಿನ್ನು ನೆನಪಿದೆ.  ಪರಿಚಿತರಿಗೆ ಮಾರುವಷ್ಟು ಮಾರಿ, ಮದುವೆ ಸಮಾರಂಭಗಳಲ್ಲಿ ಕವರಿನ ಜೊತೆಗೆ ಒಂದು ಕ್ಯಾಸೆಟ್‍ನ್ನು ಉಡುಗೊರೆಯಾಗಿ ಕೊಡುತ್ತಿದ್ದರು ನನ್ನ ತಂದೆ.

ಇತ್ತೀಚಿನ ’ಮಾತುಕತೆ’ಯ ಸಂಚಿಕೆಯಲ್ಲಿ ಫಾ.ಕಾಂತರಾಜ್ ರವರು ಫಾ.ಚಸರಾವರ ಆಪ್ತವಲಯದ ಒಬ್ಬರಾಗಿ ಅವರ  ಸಂಗೀತ ಕೃಷಿಯ ಬಗ್ಗೆ ತಾವು ಕಂಡ ಘಟನೆಗಳೊಂದಿಗೆ ಸವಿಸ್ತಾರವಾಗಿ ಬರೆದಿದ್ದು ಬಹಳ ಚನ್ನಾಗಿತ್ತು. ಅದು ಒಂದು ರೀತಿಯ insider view. ಒಬ್ಬ ಸಾಮಾನ್ಯ ಕೇಳುಗನಾಗಿ, ಸಂಗೀತದ ಅಭಿಮಾನಿಯಾಗಿ ಫಾ.ಚಸರಾರವರ  ನನ್ನ ಮೆಚ್ಚಿನ ಕೆಲವು ಗೀತೆಗಳ ಬಗ್ಗೆ ಬರೆಯುವ ಮನಸ್ಸು ನನ್ನದು. ತೀರ ನನ್ನದೇ ಆದ ಕಾರಣಗಳಿಂದ ಇಷ್ಟವಾಗುವ  ಐದಾರು ಹಾಡುಗಳ ಬಗ್ಗೆ ಸಾರ್ವತ್ರಿಕವಾಗಿ ಬರೆಯಬಹುದೇ ಎಂಬ ಗೊಂದಲವಿದ್ದರೂ, ಬರೆಯುತ್ತಾ ಹೋಗಲು ಪ್ರಯತ್ನಿಸುತ್ತೇನೆ. ಸಂಗೀತ ಕುಟುಂಬದ ಹಿನ್ನಲೆಯಿದ್ದರೂ, ನಾನೇನು ಉತ್ತಮ ಸಂಗೀತಗಾರನಲ್ಲ, ಗಾಯಕನಲ್ಲ. ಆದರೆ ಉತ್ತಮ ಕೇಳುಗನಂತೂ ಹೌದು. ಇದೇ ಅನುಭವದಿಂದ ಮಾತ್ರ ಬರೆಯಬಲ್ಲೆ.

ಮೊದಲಿಗೆ,  ನಾನು ಬರೆಯಬೇಕೆಂದಿರುವುದು ’ಸ್ಪೂರ್ತಿ’ ಕ್ಯಾಸೆಟ್ಟಿನ ’ಸ್ಪೂರ್ತಿಯಾಗಲಿ ಕ್ರಿಸ್ತ ಎಂಬ ಗೀತೆ. ೨೦೦ಕ್ಕೂ ಹೆಚ್ಚಿನ ಚಸರಾ ಹಾಡುಗಳಲ್ಲಿ "ನಿಮ್ಮಗ್ಯಾವುದು ಇಷ್ಟ"? ಎಂದು ಕೇಳಿದರೆ, ಉತ್ತರಿಸುವುದು ಕಷ್ಟವೇನೋ. ಆದರೆ ನನಗೆ ಮಾತ್ರ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಸಮಯದಲ್ಲಿ, ಎಲ್ಲೇ ಕೇಳಿದರೂ ಚಸರಾರವರ ನನ್ನ ಮೆಚ್ಚಿನ ಗೀತೆ ’ಸ್ಪೂರ್ತಿಯಾಗಲಿ ಕ್ರಿಸ್ತ’ ಎಂದೇ ಹೇಳುತ್ತೇನೆ. ಈ ಗೀತೆ ನನಗ್ಯಾಕಷ್ಟು ಇಷ್ಟ ಎಂದು ಹೇಳುವುದು ಸ್ವಲ್ಪ ಕಷ್ಟವೇ. ಆದರೂ ಪ್ರಯತ್ನಿಸುತ್ತೇನೆ.

(ಮುಂದುವರಿಯುವುದು)
Read more!