Sunday 30 April 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 9 - ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ

ಫಾ.ಚಸರಾ ಅನೇಕ ಹಾಡುಗಳಲ್ಲಿ ’ಬೆಳಕಿನ’ ಪ್ರಸ್ತಾಪವಿದೆ ಅಥಾವ ಹಾಡಿನ ಮೂಲ ದ್ರವ್ಯ ’ಬೆಳಕು’ ಆಗಿದೆ.  ಅದಕ್ಕೆ ಮತ್ತೊಂದು ಉದಾಹರಣೆ. ’ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’ ಎಂಬ ಗೀತೆ. ಸಾಕ್ಷಿ ಧ್ವನಿ ಸುರಳಿಯ ಈ ಗೀತೆ ಸಾಮಾನ್ಯ ಎನ್ನಿಸಿದರೂ ಎಂದಿನಂತೆ ಫಾ.ಚಸರಾರ ಸಾಹಿತ್ಯ ಮನ ಸೆಳೆಯುತ್ತದೆ.

ಕೆಲವು ವರ್ಷಗಳ ಹಿಂದೆ ಸಮಾನ ಮನಸ್ಕ ಗೆಳೆಯರನ್ನೆಲ್ಲಾ ಒಂದು ಕಾರ್ಯಕ್ರಮದಲ್ಲಿ ಸೇರಿಸಿ ಖುದ್ದು ಚಸರಾರವರೇ ಎಲ್ಲರನ್ನೂ ಸಭೆಗೆ ಪರಿಚಯಿಸುತ್ತಿದ್ದರು. ಆ ಸಮಯದಲ್ಲಿ ಜನಧಾರೆಯ ಲಿಲ್ಲಿ ತೆರೇಸರವರನ್ನು ಪರಿಚಯಿಸುತ್ತಾ ಅವರು ಬರೆದ ’ಎಲ್ಲವೂ ಶೂನ್ಯವಿಲ್ಲಿ ನಿಮ್ಮ ವಾಕ್ಯ ಧ್ಯಾನ ಹೊರತು’ ಹಾಡು  ಹಾಗೂ ಹಾಡಿನ ಸಾಹಿತ್ಯ ತಮಗೆ ಬಹಳ ಇಷ್ಟ ಎಂದು ಫಾ.ಚಸರಾರವರು ಹೇಳಿದ ನೆನಪು ಇನ್ನೂ ಇದೆ. ’ಬದುಕು, ಮನಸ್ಸಿನ ಶೂನ್ಯತೆ ಹಾಗೂ ಆ ಶೂನ್ಯತೆಗೆ ಕ್ರಿಸ್ತನೇ ಮದ್ದು’ ಎಂಬ ಭಾವವನ್ನು ’ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’ ಹಾಡಿನಲ್ಲೂ ನಾವು ಕಾಣಬಹುದು.

ಕನ್ನಡ ಕ್ರೈಸ್ತ ಭಕ್ತಿ ಗೀತೆಗಳ ಭಂಡಾರ ಶ್ರೀಮಂತವಾದದ್ದೇ. ಐದಾರು ದಶಕಗಳಲ್ಲಿ ಬಂದಿರುವ ಜನಪ್ರಿಯ ಹಾಡುಗಳ ಸಾಲು ದೊಡ್ಡದಾಗಿಯೇ ಇವೆ. ಇವುಗಳ ನಡುವೆ ಫಾ.ಚಸರಾ ಕ್ರೈಸ್ತ ಭಕ್ತಿಗಳ ಸಾಹಿತ್ಯದಲ್ಲಿ ತಂದ ನವೀನತೆ ಎಲ್ಲರಿಗೂ ತಿಳಿದದ್ದೇ. ಸಾಂಪ್ರದಾಯಿಕ ಶೈಲಿಗೆ ಭಿನ್ನವಾದ ಹೊಸ ರೀತಿಯ ಪದಗಳು, ಸಾಹಿತ್ಯ, ರಚನೆಗಳನ್ನು ಅಭೂತಪೂರ್ವವಾಗಿ ಸ್ವಾಗತಿಸಿ, ಮೆಚ್ಚಿ, ಬಳಸಿದ್ದು  ಯುವ ಮನಸ್ಸುಗಳೇ. ಈ ಹಿನ್ನಲೆಯಲ್ಲಿ ನೋಡಿದಾಗ ಫಾ.ಚಸರಾರವರ ಹಾಡುಗಳು ಕೇವಲ ಆಕರ್ಷಕ ಪದಗಳ, ಅದಕ್ಕೊಪ್ಪುವ ಮಧುರ ಸಂಗೀತದ, ಜನರ ಭಾವನೆಗಳ ಸಂಗಮ ಮಾತ್ರವಲ್ಲ. ಆಳವಾದ, ಗಂಭೀರವಾದ ದೈವ ಶಾಸ್ತ್ರದ ಸ್ಪರ್ಷ ಅವರ ಸಾಹಿತ್ಯದಲ್ಲಿ ಇದೆ. ಇದಕ್ಕೆ ಉದಾಹರಣೆ ಎಂದರೆ ’ ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’.

ಯೊವಾನ್ನಾರ ಶುಭ ಸಂದೇಶದ 8:12ರಲ್ಲಿ ಯೇಸು ಸ್ವಾಮಿ "ನಾನೇ ಜಗಜ್ಜ್ಯೊತಿ ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಈ ಹಿನ್ನಲೆಯಲ್ಲಿ ’ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’ ಎನ್ನುವ ಸಾಲು ಬಹಳ ಅರ್ಥಗರ್ಭಿತವಾಗಿ ಕಾಣುತ್ತದೆ. ’ಜಗಜ್ಜ್ಯೋತಿಯಾಗಿರುವ ಯೇಸುವೇ , ಈ ಜಗಕ್ಕೆ ಬೆಳಕ್ಕಾಗಿ ಬಾ’ ಎನ್ನುವುದು ಒಂದು ಸಾಮಾನ್ಯ ಕರೆಯಂತೆ ಕಂಡರೂ ’ಇಲ್ಲಿ ಬೆಳಕಿಲ್ಲ ನೀನಿಲ್ಲದೆ’ ಎಂಬ ಆ ’ಬೆಳಕಾಗಿ ಬಾ’ ಎನ್ನುವ ಕರೆಗೆ  ದೊಡ್ಡ ಅರ್ಥವನ್ನು ನೀಡುತ್ತದೆ. ಈ ಮೂಲಕ ನಾವು ಕತ್ತಲಲ್ಲಿ ನಡೆಯದಂತೆ ಮಾಡು ಹಾಗೂ ನಿನ್ನನ್ನು ಹಿಂಬಾಲಿಸುವಂತೆ ಮಾಡು ಎನ್ನುವ ಪ್ರಾರ್ಥನೆ ಇದೆ. ಈ ಸಾಲುಗಳು ಶುಭಸಂದೇಶದಿಂದ ಪ್ರೇರಿತವಾದುದು ಎಂದುಕೊಂಡರೂ ಮುಂದಿನ ಸಾಲುಗಳು ಫಾ.ಚಸರಾರವರ ಬತ್ತಳಿಕೆಯದು ಎಂದರೆ ತಪ್ಪಾಗಲಾರದು. ಹಗಲೆಂಬುದು  ಬೆಳಕಿನ ಪ್ರತೀಕವಾದರೂ ’ಏಕಾಂತ’ ಎಂಬುದು ಕತ್ತಲಯಷ್ಟೇ ಖಿನ್ನತೆ ತರಬಲ್ಲದು. ತನಗೆ ಯಾರೂ ಇಲ್ಲವೆಂಬ ಒಂಟಿತನ, ಅನಾಥ ಪ್ರಜ್ಞೆ, ನೋವು ಕತ್ತಲಯಷ್ಟೇ ಭೀಕರವಾಗಿರಬಲ್ಲದು. ಗುರಿಯಿಲ್ಲದ, ಮಾರ್ಗ ಕಾಣದ ಕತ್ತಲ್ಲಲ್ಲಿರುವ ಜಗಕ್ಕೆ ಬೆಳಕ್ಕಾಗಿ ಬಾ ಎನ್ನು ವ ಸಾರ್ವತ್ರಿಕ ಬೇಡಿಕೆಯೊಂದಿಗೆ , ಬೆಳಕಲ್ಲಿ ಇದ್ದರೂ ಏಕಾಂತದಿಂದ ಬಳಲುವ ಮನಕ್ಕೆ ಜೊತೆಗಾರನಾಗಿ ಬಾ ಎನ್ನುವ ವ್ಯಯಕ್ತಿಕ ಪ್ರಾರ್ಥನೆಯನ್ನು ಮೊದಲೆರೆಡು  ಸಾಲುಗಳಲ್ಲಿ ಕಾಣಬಹುದು.ಏಕಾಂತದ ಮನಕ್ಕೆ ಪ್ರತಿ ಕ್ಷಣವೂ ಯುಗವಾಗಿ ಕಾಣುತ್ತದೆ. ಹೊತ್ತು ಹೋಗದ ಈ ಭಾರವಾದ , ದೀರ್ಘ ಕ್ಷಣಗಳನ್ನು ನೀನು ಜೊತೆಗಿದ್ದು ಹಗುರಗೊಳಿಸು ಎಂಬ  ಬೇಡಿಕೆಯೊಂದಿಗೆ ಪಲ್ಲವಿ ಮುಗಿಯುತ್ತದೆ.

ಚರಣದಲ್ಲಿ ’ನೀನಿರದ ಮನೆಯಲ್ಲಿ ನಾನ್ಯಾರೋ’ ಎಂಬ ಸಾಲುಗಳಲ್ಲಿ ಮನೆಯೆಂಬುದು ನಮ್ಮ ಮನಸ್ಸಿನ ರೂಪಕವಾಗಿ ಬಳಕೆಯಾಗಿದೆ. ಈ ಮನಸ್ಸಲ್ಲಿ ನೀನಿಲ್ಲದಿದ್ದರೆ ’ನನ್ನ’ ಅಸ್ತಿತ್ವವೇ ಇಲ್ಲ ಎಂಬುದನ್ನು ಹೇಳಲಾಗಿದೆ. ಇಲ್ಲಿ ’ಮನೆ’ ಎಂದರೆ  ಈ ಲೋಕವೂ ಆಗಬಹುದೇ? ಎಂಬ ಪ್ರಶ್ನೆಯೂ ಕಾಡುತ್ತದೆ. ದೇವನಿಲ್ಲದ ಈ ಜಗತ್ತಲ್ಲಿ ನಾನ್ಯಾರು? ಅಂತಹ ಜಗತ್ತು ನನಗ್ಯಾಕೆ ಎಂಬ ಅರ್ಥವೇ? ’ನಡೆಯಲ್ಲಿ ನುಡಿಯಲ್ಲಿ ದೇವನಿಲ್ಲದೆ ಬಹಿರಂಗ ಚೆಲುವೇತಕೋ’ ಎಂಬ ಸಾಲುಗಳಲ್ಲಿ ಆತ್ಮ ವಿಮರ್ಶೆಯಿದೆ. ಮುಂದೆ ಅದಕ್ಕೆ ಉತ್ತರವಾಗಿ ’ ನನ್ನಲ್ಲಿ ಸಾಕಾರವಾಗು’ ಎಂಬ ಬೇಡಿಕೆ ಇದೆ. ’ಆಕಾರ ನಾನು ಸಾಕಾರ ನೀನು’ ಎಂಬುದು ನಮ್ಮಲ್ಲಿ ಸುಕಾರ್ಯಗಳನ್ನು ಮಾಡಿಸುವ ’ಪವಿತ್ರಾತ್ಮರ’ ಬಗೆಗಿನ ಉಲ್ಲೇಖವೂ ಆಗಬಹುದು.

ಮುಂದಿನ ಚರಣದಲ್ಲಿ ಮತ್ತಷ್ಟು ದೈನ್ಯ ಬೇಡಿಕೆಗಳಿವೆ. ’ನನ್ನ ಅಂತರಂಗವನ್ನು ತುಂಬಿಕೋ’ ಎಂಬುದು ಒಂದಾದರೆ, ’ಎಲ್ಲವನ್ನೂ ನೋಡುವ ನನ್ನ ಕಣ್ಣುಗಳಿಗೆ ನೀನು ಕಾಣದೆ ಹೋದರೆ,ಮಾತುಗಳು ಅರ್ಥ ಕಳೆದುಕೊಳ್ಳುತ್ತದೆ, ಆದರಿಂದ ನನ್ನ ಕಣ್ಣುಗಳಲ್ಲಿ ಸೇರಿಕೋ’ ಎಂಬ ಮಾತಿದೆ. ಇಲ್ಲಿ ಕಣ್ಣೆಂದರೆ ಅದು ಹೃದಯವೂ ಆಗಬಹುದು. ’ ನಿನ್ನ ಸಾಧನೆಗಳಿಗೆ ನಾನು ಸಾಧನವಾಗುವ ಈ ಸುಂದರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸು’ ಎನ್ನುತ್ತಾ ಹಾಡು ಮುಕ್ತಾಯಗೊಳ್ಳುತ್ತದೆ.

ಹಾಡು ಪ್ರತಿ ಹಂತದಲ್ಲೂ ’ದೇವನಿಲ್ಲದೆ,  ಆತನ ಪ್ರೀತಿ, ಬೆಳಕಿಲ್ಲದೆ ತಾನು ಏನೂ ಅಲ್ಲ, ತನ್ನಲ್ಲಿ ಏನೂ ಇಲ್ಲ’ ಎಂಬ ದೀನತೆಯನ್ನು ಪ್ರತಿಪಾದಿಸುತ್ತದೆ. ಮನಸ್ಸಿನ, ಬದುಕಿನ, ನಡೆ ನುಡಿಯಲ್ಲಿನ ಟೊಳ್ಳುತನ, ಖಾಲಿತನ, ಶೂನ್ಯತೆಯನ್ನು ವಿಮರ್ಶಿಸುತ್ತಾ ಅದಕ್ಕೆ ತಕ್ಕ ಉತ್ತರವನ್ನು ಕಂಡುಕೊಳ್ಳುತ್ತಾ, ಸಹಾಯ ಬೇಡುತ್ತಾ, ಸಮಾಧಾನಗೊಳ್ಳುತ್ತಾ ಸಾಗುವ ಪಯಣದಂತಿದೆ ಈ ಹಾಡು. ಈ ಹಾಡಿನಲ್ಲಿ ನನಗೆ ಕಾಣಿಸಿದ ವಿಶೇಷತೆ ರಾಗ ಸಂಯೋಜನೆಯಲ್ಲಿದೆ. ಚರಣದ ಸಾಹಿತ್ಯದಲ್ಲಿ ಬರುವ ಪ್ರಶ್ನೆಗಳು ಎತ್ತರದ ಸ್ವರಗಳಲ್ಲಿ, ಅಂದರೆ ಸಂಗೀತದ  ಹೈಯರ್ ನೋಟ್ಸ್ ಗಳಲ್ಲಿದ್ದು, ಅದಕ್ಕೆ ಉತ್ತರ ಸಮಾಧಾನದ ಸಾಹಿತ್ಯ ಲೋವರ್ ನೋಟ್ಸ್ ಗಳಲ್ಲಿದೆ. ಇದು ಪ್ರಜ್ಞಾಪೂರ್ವಕಾವಾಗಿ ರಚಿತವಾದದ್ದೇ ? ಗೊತ್ತಿಲ್ಲ.

ಬಹಳ ಇಂಪಾದ ಆಲಾಪನೆಯೊಂದಿಗೆ ಪ್ರಾರಂಭವಾಗುವ ಹಾಡು, ಕೊನೆಯವರೆಗೂ ಅದೇ ಮಾಧುರ್ಯವನ್ನು ಉಳಿಸಿಕೊಳ್ಳುತ್ತದೆ. ಪಲ್ಲವಿ ಚರಣದ ನಡುವಿನ ಇಂಟರ್‍ ಲ್ಯೂಡ್ , ಅದರಲ್ಲೂ ವಯಲೀನ್ ಬಹಳ ಸುಂದರವಾಗಿ ಬಳಕೆಯಾಗಿದೆ. ಗಾಯನ ಉತ್ತಮವಾಗಿದ್ದರೂ ಕೊನೆಗೆ ಫಾ.ಚಸರಾರವರ ಸಾಹಿತ್ಯದ್ದೇ ಮೇಲುಗೈ.

- ಪ್ರಶಾಂತ್ ಇಗ್ನೇಶಿಯಸ್