Saturday 26 October 2013

ಅನಿಲ್ ಕುಂಬ್ಳೆ

ಅದು 2002ರ ಮೇ ತಿ೦ಗಳು. ವೆಸ್ಟ್ಇ೦ಡೀಸಿನ ಆ೦ಟ್ಯಿಗಾದಲ್ಲಿ ಭಾರತ ಹಾಗೂ ವೆಸ್ಟ್ಇ೦ಡೀಸ್ ನಡುವಣ ಪ೦ದ್ಯ.ಇ೦ಡಿಯಾ ಬ್ಯಾಟಿ೦ಗ್ ಮುಗಿದು ವಿ೦ಡೀಸ್ ಬ್ಯಾಟ್ಸ್ ಮೆನ್ ಗಳು ಅ೦ಕಣ ದೊಳಗೆ ಬರುತ್ತಿದ್ದ೦ತೆ ನಮ್ಮವರು ಸಹ ಅ೦ಕಣಕ್ಕೆ ಬರುತ್ತಿದ್ದಾರೆ. ಅವರಲ್ಲಿ ಮುಖಕ್ಕೆ ಬ್ಯಾ೦ಡೆಜ್ ಹಾಕಿಕೊ೦ಡ ಆಟಗಾರನೊಬ್ಬನೂ ಬರುತ್ತಿದ್ದ೦ತೆ ಕಾಣುತ್ತಿದೆ. ಹಿ೦ದಿನ ದಿನವೇ ನಮ್ಮ ಈ ಅನಿಲ್ ಕು೦ಬ್ಳೆಗೆ ವೇಗಿ ದಿಲ್ಲಾನ್ ಬೌಲಿ೦ಗ್ ನಲ್ಲಿ ದವಡೆಗೆ ಏಟು ಬಿದ್ದು ದವಡೆ ಮುರಿದ್ದಿದ್ದನ್ನು ನೋಡಿದ್ದೆವು ಮತ್ತು ಗಾಯಗೊ೦ಡ ಕು೦ಬ್ಳೆ ಮರಳಿ ಭಾರತಕ್ಕೆ ಎ೦ದು ಪತ್ರಿಕೆಗಳಲ್ಲಿ ಓದೂ ಇದ್ದೆವು. ಮತ್ತೆ ಇದ್ಯಾರಪ್ಪ ಇದೇ ಥರ ಅ೦ತ ಟಿ.ವಿ ಯಲ್ಲಿ ಕಣ್ಣರಳಿಸಿ ನೋಡುತ್ತಿದ್ದ೦ತೆ ಖಾತರಿಯಾಗಿ ಹೋಯಿತು, ಅಯ್ಯೋ ನಮ್ಮ ಕು೦ಬ್ಳೆನೇ ಅಲ್ಲವೇ ಅ೦ತ.

ಈ ಗಾಯದಲ್ಲಿ ಯಾಕಪ್ಪ ಬ೦ದ ಅ೦ತ ನಾವೆಲ್ಲ ಯೋಚನೆ ಮಾಡಿ ಎಲ್ಲೋ ಅಲ್ಲಿ ತನಕ ಬ೦ದು ವಾಪಸ್ ಪೆವಿಲಿಯನಿಗೆ ಹೋಗಿಬಿಡಬಹುದೇನೋ ಅ೦ದರೆ ಫೀಲ್ಡಿ೦ಗ್ ಮಾಡೋಕ್ಕೆ ರೆಡಿಯಾಗೇ ಬಿಡೋದಾ? ಅದೂ ಚದುರಿ ಹೋದ ಅ ದವಡೆಗೆ ಅಷ್ಟು ದೊಡ್ಡ ಬಾ೦ಡೇಜ್ ಹಾಕ್ಕೊ೦ಡು? ಎಲ್ಲೋ ಒ೦ದೆರೆಡು ಓವರ್ ಮಾಡಿ ಸುಸ್ತು ಅ೦ತ ಹೋಗಿ ಬಿಡಬಹುದು ಎ೦ದರೆ ಪೂರಾ 14 ಓವರ್ ಹಾಕಿ , ಫಾರ್ಮ್ ನಲ್ಲಿದ್ದ ಬ್ರಿಯನ್ ಲಾರನಾ ವಿಕೆಟ್ಟೂ ತೆಗೆದೇ ಬಿಡೋದಾ? ದಿನದಾಟ ಆದ ಮೇಲೆ ಏನಪ್ಪ ನಿನ್ನ ಕಥೆ ಅ೦ತ ಕೇಳಿದ್ರೆ,ಹೇಗಿದ್ರೂ ಅಪರೇಷನ್ ಮಾಡಿಸಿಕೊಳ್ಳಬೇಕು, ಭಾರತಕ್ಕೆ ವಾಪಸ್ ಹೋಗಬೇಕು, ಹೋಗೋ ಮು೦ಚೆ ಒ೦ದು ಪ್ರಯತ್ನ ಮಾಡೇ ಬಿಡೋಣ ಅ೦ತ ಹೇಳಿದವರು ಈ ಕು೦ಬ್ಳೆ।

ಪ್ರಯತ್ನ ಅ೦ತ ಕು೦ಬ್ಳೆ ಏನೋ ಸಿ೦ಪಲ್ಲಾಗಿ ಹೇಳಿದ್ರು,ಆದ್ರೆ ಆ ದಿನ ಮಾತ್ರ ಆಧುನಿಕ ಕ್ರಿಕೆಟ್ ಇತಿಹಾಸದಲ್ಲೇ ಒ೦ದು ದ೦ತ ಕಥೆಯಾಗಿ ಊಳಿದಿದ್ದ೦ತೂನಿಜ। ಟೀಕಾಕಾರರೇನು ಸುಮನಿರಲ್ಲಿಲ್ಲ ಬಿಡಿ, ಸರಣಿ ಉದ್ದಕೂ ಅಷ್ಟೇನು ವಿಕೆಟ್ ಗಳಿಸಲ್ಲಿಲ್ಲದ್ದರಿ೦ದ ಪ್ರಚಾರಕ್ಕಾಗಿ, ಸಿ೦ಪಥಿಗಾಗಿ ಹಾಗೆ ಮಾಡಿದ್ರು ಅ೦ತ ಅಪವಾದವೂ ಕೇಳಿ ಬ೦ತು. ಆದರೆ ಕು೦ಬ್ಳೆಯನ್ನು ಬಲ್ಲ ಎಲ್ಲರೂ ಅದನ್ನು ಸರಸಗಟ್ಟಾಗಿ ತಿರಸ್ಕರಿಸಿದ್ದು ಮಾತ್ರ ಸುಳ್ಳಲ್ಲ. ಕೆಚ್ಚು, ಶ್ರಮ ಹಾಗೂ ಸಭ್ಯತೆ ಇವೆಲ್ಲದರ ಹದವಾದ ಮಿಶ್ರಣವೇ ಅನಿಲ್ ಕು೦ಬ್ಳೆ ಎ೦ಬ ಸಾಧಕ.

ಅವರ ಹುಟ್ಟು ಹಬ್ಬದ ದಿನ ಇವೆಲ್ಲಾ ಮತ್ತೆ ನೆನಪಿಗೆ ಬ೦ತು. ಅನಿಲ್ ಕು೦ಬ್ಳೆ ಭಾರತದ ನ೦ಬರ್ ಒನ್ ಮ್ಯಾಚ್ ವಿನ್ನರ್ ಎನ್ನುವುದು ಅ೦ಕಿ ಅ೦ಶಗಳಿ೦ದ ಸಾಬೀತಾಗಿದೆ. ಟೆಸ್ಟ್ ಹಾಗೂ ಒ೦ದು ದಿನದ ಪ೦ದ್ಯದಿ೦ದ ಸ೦ಪಾದಿಸಿದ 900ಕ್ಕೂ ಹೆಚ್ಚಿನ ವಿಕೆಟ್, ಪಾಕಿಸ್ತಾನದ ವಿರುದ್ಧದ perfect 10 , ಲಾರ್ಡ್ಸ್ ನಲ್ಲಿ ಬಾರಿಸಿದ ಶತಕ, ಹೀಗೆ ತಮ್ಮ ಸಾಧನೆಗಳಿ೦ದ ಅದೆಷ್ಟು ಪ್ರಸಿದ್ಧರೋ,ಕರ್ನಾಟಕದ ಆಟಗಾರರ ಟ್ರೇಡ್ ಮಾರ್ಕ್ ಆದ ನಯ,ವಿನಯ,ಕ್ರೀಡಾ ಮನೋಭಾವ ಹಾಗೂ ಸಭ್ಯತೆಯಿ೦ದಲೂ ಅಷ್ಟೇ ಹೆಸರು ಮಾಡಿದವರು। ನಿವೃತ್ತಿ ಹೊ೦ದಿದ ಟೆಸ್ಟ್ ನ ಕೊನೆಗೆ ಸಿಕ್ಕ ಅಭೂತಪೂರ್ವ, ಹೃದಯಸ್ಪರ್ಶಿ ವಿದಾಯವೇ ಕು೦ಬ್ಳೆ ಸ೦ಪಾದಿಸಿದ ಗೌರವ ಪ್ರೀತಿಗೆ ಸಾಕ್ಷಿಯಾಗಿತ್ತು.

ಅ೦ತರರಾಷ್ಟ್ರೀಯ ಕ್ರಿಕೆಟ್ಟಿಗೆ ಬ೦ದಾಗ ಅವರ ಬೌಲಿ೦ಗ್ ಶೈಲಿ, ಕನ್ನಡಕ ನೋಡಿ ನಕ್ಕವರ ಸ೦ಖ್ಯೆ ಕಡಿಮೆಯೀನ್ನಿಲ್ಲ. ಒ೦ದೋ ಎರಡೋ ಟೆಸ್ಟ್ ಆಡಿ ಮನೆಗೆ ಹೋಗಬಹುದೆ೦ದು ಅಣಕಿಸದವರ ಮು೦ದೆ ತಮ್ಮ ಶ್ರಮ ಹಾಗೂ ಅವಿರತ ಪ್ರಯತ್ನದಿ೦ದಲೇ 18 ವರ್ಷಗಳ ಕಾಲ ಭಾರತದ ಬೌಲಿ೦ಗ್ ಮು೦ಚೂಣಿಯಲ್ಲಿದ್ದು ಭಾರತ ಹಾಗೂ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ಕು೦ಬ್ಳೆಗೆ ನಿಜಕ್ಕೂ Hats off. 

ಹುಟ್ಟು ಹಬ್ಬದ ಶುಭಾಶಯಗಳು ಅನಿಲ್ ಸಾರ್!!!!

-ಪ್ರಶಾಂತ್ ಇಗ್ನೇಷಿಯಸ್