Thursday 18 September 2014

ವಿಷ್ಣು

ವಿಷ್ಣುರವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ......

ಹೊನಲು.net ಬಳಗದ ಗೆಳೆಯರು ಕನ್ನಡದ ಬರಹಗಳನ್ನು ಆದಷ್ಟು ನುಡಿ ಮಾತಿಗೆ ಹತ್ತಿರವೆನ್ನುವಂತೆ ಹೊರತರಬೇಕೆನ್ನುವ ಪ್ರಯತ್ನದಲ್ಲಿ ಆದಷ್ಟು ಕನ್ನಡದ ಪದಗಳನ್ನೇ ಹಾಗೂ ಅಲ್ಪ, ಮಹಾ ಪ್ರಾಣದ ತೊಡಕನ್ನು ನಿವಾರಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ಪ್ರಕಟವಾದ ಲೇಖನವಾದ್ದರಿಂದ ಓದುವಾಗ ಒಂದಷ್ಟು ಬದಲಾವಣೆಯನ್ನು ಇಲ್ಲಿ ಕಾಣಬಹುದಾಗಿದೆ


ಕಲಾವಿದರಿಗೆ ಸಾವಿಲ್ಲ. ಅವರ ಸಾದನೆ, ಕಲಾಕ್ರುತಿಗಳು ಅವರನ್ನು ಸದಾ ಜೀವಂತವಾಗಿಡುತ್ತದೆ ಎಂಬುದು ಸಾಮಾನ್ಯ ಮಾತು. ಅದು ನಿಜವೂ ಕೂಡ. ಆದರೆ ಕೆಲವು ಕಲಾವಿದರು ತಮ್ಮ ಸಾದನೆ, ಸೋಲು, ಗೆಲುವು, ಪ್ರಸಿದ್ದಿ ಎಲ್ಲವನ್ನೂ ಮೀರಿ ಜನಮನದಲ್ಲಿ ನಿಂತಿರುತ್ತಾರೆ. ಅಂತವರ ಸಾವು, ಇಲ್ಲದಿರಿವಿಕೆಯನ್ನು ಅರಗಿಸಿಕೊಳ್ಳುವುದು ಕಶ್ಟ. ಸಾಮಾನ್ಯ ಜನರ ಮನಸ್ಸುಗಳನ್ನು ತಟ್ಟುವ ಅಂತವರ ಅಗಲಿಕೆ ಎಂದಿಗೂ ನೋವಿನ ಸಂಗತಿಯೇ. ಇನ್ನಶ್ಟು ದಿನ ಇರಬೇಕಾಗಿತ್ತು ಎಂಬ ಬಾವ ಮನಸ್ಸಿನ ಬಾಗಿಲಲ್ಲಿ ಉಳಿದು, ಅವರ ಮೆಲಕು ಹಾಕುತ್ತಿರುತ್ತದೆ.

ಕನ್ನಡ ಮನಸ್ಸುಗಳಲ್ಲಿ ಅಂತಹ ಬಾವ ಉಳಿಸಿ ಹೋದವರು ವಿಶ್ಣುವರ‍್ದನ್. ಇಂದು (ಸೆಪ್ಟಂಬರ್ 18) ಅವರ ಹುಟ್ಟು ಹಬ್ಬ. ಅವರು ಹೋಗಿ ವರ‍್ಶಗಳೇ ಕಳೆದರೂ, ಆ ಬಾವ ಇನ್ನೂ ಇರುವುದೇ ಅವರ ದೊಡ್ಡಸ್ತಿಕೆ. ಏಕೆಂದರೆ ವಿಶ್ಣು ತಮ್ಮೆಲ್ಲಾ ಸಾದನೆಯ ನಡುವೆಯೂ ಆಪ್ತವಾಗಿರುವುದನ್ನು ಉಳಿಸಿಕೊಂಡವರು. ವಿಶ್ಣು ಅವರ ಆ ಮುದ್ದು ಮುಕ ವಯಸ್ಸಾದಂತೆ ಪಡೆದುಕೊಂಡ ಸಂತ ಕಳೆ, ಅವರ ಆಕರ‍್ಶಕ ನಗು ಪಡೆದುಕೊಂಡ ಮಗುವಿನ ಮುಗ್ದತೆ, ವ್ಯಕ್ತಿತ್ವ ಕಂಡುಕೊಂಡ ಗನತೆ ಎಲ್ಲವೂ ಮರೆಯಲಾಗದ್ದು. ಅವರಲ್ಲಿನ ತುಂಟತನ ಮಾತ್ರ ಕೊನೆಯ ವರ‍್ಶಗಳಲ್ಲಿ ಕಾಣೆಯಾದದ್ದು ಸ್ವಲ್ಪ ಬೇಸರದ ಸಂಗತಿಯೇ. ಇನ್ನಶ್ಟು ಮನತಣಿಸುವ ಪಾತ್ರಗಳಿಗೆ ಕಾಯುತ್ತಿದ್ದ ನಮ್ಮೆಲ್ಲರನ್ನು ಬಿಟ್ಟು, ನಡುವೆಯೇ ಕಣ್ಮರೆಯಾಗಿದ್ದು ಅದಕ್ಕಿಂತ ಬೇಸರದ ಸಂಗತಿ.

ಇಂದಿಗೂ ನನಗೆ ನಾಗರಹಾವು ಚಿತ್ರದ ಅನೇಕ ರೂಪಕಗಳು ಮನಸ್ಸಿನಿಂದ ಮರೆಯಾಗುವುದೇ ಇಲ್ಲ. ನಿಜಕ್ಕೂ ಅದು ವಿಶ್ಣು ಅವರಿಗಿಂತ ಪುಟ್ಟಣ್ಣರ ಮಾಂತ್ರಿಕ ಸ್ಪರ್‍ಶದ ಚಿತ್ರ. ಅದರಲ್ಲಿನ ಸುಂದರ ಗೀತೆಗಳ ನಡುವೆ ಎರಡು ಗೀತೆಗಳು ವಿಶ್ಣುರವರ ಮುಂದಿನ ಚಿತ್ರ ಬದುಕಿನ ಪ್ರತೀಕದಂತಿತ್ತು. ’ಹಾವಿನ ದ್ವೇಶ ಹನ್ನೆರೆಡು ವರುಶ’ ಗೀತೆಯ ’ಟಣ್ ಟಣ್ ಟಣ್ ಟಣ್ ಟಣ್ ಟಣ್ ಟಡಂಡಾಣ್’ ಎಂಬ ವಾದ್ಯ ಸಂಗೀತ, ಚಿತ್ರದುರ‍್ಗದ ಕೋಟೆ, ಆ ಕೆಂಪು ಮಣ್ಣು, ಸರಸರನೆ ಸರಿದು ಮರೆಯಾಗುವ ಹಾವು, ಎಲ್ಲವೂ ಮನಸ್ಸಿನಲ್ಲಿ ನಿಚ್ಚಳ. ಆದರೆ ಅದರ ನಡುವೆಯೇ ಎದ್ದು ಕಾಣುವುದು ವಿಶ್ಣು ಅವರ ಆ ಆತ್ಮವಿಶ್ವಾಸದ ನಡೆ ಹಾಗೂ ಬಿರುಸು. ಆ ಬಿರುಸೇ ಮುಂದಿನ ’ಸಾಹಸ ಸಿಂಹ’ ಬಿರುದಿಗೆ ಮುನ್ನುಡಿಯಾಯಿತು. ಅದೇ ರೀತಿ “ಬಾರೇ ಬಾರೇ ಚಂದದ ಚೆಲುವಿನ ತಾರೆ” ಯಲ್ಲಿನ ಅವರ ಸೌಮ್ಯ ನಡೆ, ನವಿರು ಮುಕ ಬಾವ ಎಲ್ಲವೂ ಅವರ ಮುಂದಿನ ಪ್ರೇಮ ಕತಾನಾಯಕನ ಪಾತ್ರಗಳ ದಿಕ್ಸೂಚಿಯಾಯಿತು. ಹೀಗೆ ಮೊದಲ ಚಿತ್ರದಲ್ಲೇ ಅವರು ಮೂಡಿಸಿದ ಬರವಸೆ ಅಪಾರ. ಅದು ನಿಜವಾಯಿತಾದರೂ “ಇನ್ನೂ ಬೇಕು” ಎಂಬುದನ್ನೂ ಉಳಿಸಿತು.

60, 70 ಹಾಗು 80ರ ದಶಕ ಕನ್ನಡ ಚಿತ್ರರಂಗದ ಸುವರ‍್ಣ ಯುಗ. ಡಾ.ರಾಜ್ ಮೊದಲಾಗಿ ದೇಶದಲ್ಲೇ ಆತ್ತ್ಯುತ್ತಮ ಅನ್ನುವಂತ ನಟರು, ನಿರ‍್ದೇಶಕರು, ಸಾಹಿತಿಗಳು, ತಂತ್ರಜ್ನರು, ನಿರ‍್ಮಾಪಕರು ಕನ್ನಡ ಚಿತ್ರರಂಗವನ್ನು ಬೆಳಗಿದರು. ಕನ್ನಡ ಚಿತ್ರರಂಗದ ಸೌಬಾಗ್ಯವೋ, ಚಿತ್ರ ರಸಿಕರ ಅದ್ರುಶ್ಟವೋ ವಿಶ್ಣು ಅವರು ಕೂಡ ಅದೇ ಕಾಲದಲ್ಲಿ ನಮಗೆ ಸಿಕ್ಕರು. ಪಳಗಿದ ನಿರ‍್ದೇಶಕರ ಕೈಯಲ್ಲಿ ಅರಳಿದರು, ಬೆಳೆದರು ಹಾಗೂ ಆತ್ತ್ಯುತ್ತಮ ಚಿತ್ರಗಳಲ್ಲಿ ತೊಡಗಿಸಿಕೊಂಡರು. ಒಂದು ಚಿತ್ರವನ್ನು ತಮ್ಮದೇ ಹೆಗಲಿನ ಮೇಲೆ ಎತ್ತಿಕೊಂಡು ಸಾಗುವ ಸಾಮರ್‍ತ್ಯವೂ ಅವರಿಗಿತ್ತು. ಅದು ಸಾಮಾನ್ಯದ ವಿಶಯವೇನಲ್ಲ. ಕನ್ನಡ ಚಿತ್ರ ರಸಿಕರು ಕೂಡ ಅವರನ್ನು ಪ್ರೀತಿಯಿಂದ ಒಪ್ಪಿ ಅಪ್ಪಿಕೊಂಡರು. ಸದಬಿರುಚಿಯ ನವಿರು ಚಿತ್ರಗಳು ಬಂದವು.

ದ್ವಾರಕೀಶ್ ರ ಜೊತೆಗಿನ ಅವರ ಗೆಳೆತನ ಕನ್ನಡಕ್ಕೆ ಒಂದಶ್ಟು ಹೊಸ ಬಗೆಯ ಚಿತ್ರಗಳನ್ನು ನೀಡಿತು. ಆ ಗೆಳೆತನ ಕಂಡ ಏಳು ಬೀಳುಗಳು ಚಿತ್ರರಂಗದಲ್ಲಿನ ಸಂಬಂದಗಳ ಹಾವು ಏಣಿಯಾಟಕ್ಕೆ ಸಾಕ್ಶಿಯಾದರೆ, ಅಂಬಿ ವಿಶ್ಣು ನಡುವಿನ ಗೆಳೆತನ, ಗೆಳೆತನವೆನ್ನುವುದು ಎಲ್ಲವನ್ನೂ ಮೀರಿದ ಬಂದನ ಎಂಬುದನ್ನು ನಿರೂಪಿಸಿತು. ಕೊನೆಯ ವರ್‍ಶಗಳಲ್ಲಿ ಪಾತ್ರಗಳ ಆಯ್ಕೆಯಲ್ಲಿ ವಿಶ್ಣು ಮತ್ತಶ್ಟು ಕಾಳಜಿ ವಹಿಸಬೇಕಾಗಿತ್ತೇನೋ ಎಂದೆನಿಸಿದರೂ, ಅದು ಬಹುತೇಕ ಹಿರಿಯ ನಟರ ಬಗ್ಗೆಯೂ ಅನ್ನಬಹುದಾದ ಮಾತು. ನಮ್ಮ ಹಿರಿಯ, ಪಳಗಿದ ನಟರುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಿನಿಮಾದಲ್ಲಿನ ವ್ಯವಸ್ತೆಯ ಕೊರತೆ, ಚಿತ್ರರಂಗವನ್ನು ಇತ್ತೀಚಿನ ವರ‍್ಶಗಳಲ್ಲಿ ಕಾಡುತ್ತಿರುವುದು ಅದಕ್ಕೆ ದೊಡ್ಡ ಕಾರಣ. ಆದರೂ ಅತ್ತ್ಯುತ್ತಮ ಎನ್ನುವಂತ ಚಿತ್ರಗಳ ದೊಡ್ಡ ಸಾಲನ್ನೇ ವಿಶ್ಣು ನಮ್ಮ ಮುಂದೆ ಬಿಟ್ಟು ಹೋಗಿದ್ದಾರೆ. ’ವಂಶವ್ರುಕ್ಶ’, ’ನಾಗರಹಾವು’ ನಿಂದ ಬೆಳೆದು, ಹೊಸತನದ ’ಹೊಂಬಿಸಿಲಿ’ನಲ್ಲಿ ಕಂಗೊಳಿಸುತ್ತಾ, ’ನಾಗರಹೊಳೆ’ಯಂತ ಉತ್ತಮ ಚಿತ್ರಗಳ ಕಾಡೊಳಗೆ ನುಗ್ಗಿ ’ಸಾಹಸ ಸಿಂಹ’ನಾಗಿ ಬೆಳೆದವರು ಅವರು. ಚಿತ್ರ ರಸಿಕರ ಪ್ರೀತಿಯ ’ಬಂದನ’ದಲ್ಲಿ ’ಕೈದಿ’ಯಾಗಿ ಹಲವಾರು ಸದಬಿರುಚಿಯ ಚಿತ್ರಗಳಿಗೆ ’ಸುಪ್ರಬಾತ’ ಹಾಡಿ, ಆ ಚಿತ್ರಗಳ ’ಮುತ್ತಿನಹಾರ’ವನ್ನು ಕನ್ನಡ ಚಿತ್ರರಂಗಕ್ಕೆ ತೊಡಿಸಿದವರು.

ಜೀವನದುದ್ದಕ್ಕೂ ಅನೇಕ ’ಸಂಗರ‍್ಶ’ಗಳಲ್ಲಿ ನೊಂದರೂ ’ಕರ‍್ಣ’ನ ಸಹನೆಯಿಂದ, ’ಹಾಲು ಸಕ್ಕರೆ’ ಯಂತ ನಗುವಿನಿಂದ ’ಹಾಲುಂಡ ತವರಿಗೆ’ ಒಳ್ಳೆಯದನ್ನೇ ಬಯಸಿದವರು. ಬೆಳೆದಂತೆಲ್ಲಾ ಗರ‍್ಜಿಸುವುದಕ್ಕಿಂತ ’ಲಾಲಿ’ಯ ಕೋಮಲತೆಯನ್ನು ನೆಚ್ಚಿಕೊಂಡು, ’ಯಜಮಾನ’ನಾಗುವುದಕ್ಕಿಂತ ’ಆಪ್ತಮಿತ್ರ’ನಾಗಿ ಉಳಿದವರು. ಕೊನೆಗೆ ಸಾದನೆ, ಪ್ರಸಿದ್ದಿಗಿಂತ ಅದ್ಯಾತ್ಮಿಕತೆಯನ್ನೇ ’ಆಪ್ತ ರಕ್ಶಕನಾಗಿ’ ಆರಿಸಿಕೊಂಡ ವಿಶ್ಣುರವರ ಚಿತ್ರ ಜೀವನವು, ಎಲ್ಲಾ ಬಣ್ಣಗಳಿಂದ ಕೂಡಿದ ಸುಂದರ ಕಾಮನಬಿಲ್ಲು. ಮಳೆ ಬಿಸಿಲುಗಳ ಸಮ ಸಂಗಮದ ಪ್ರತೀಕ.

ಕೆಲವು ದಿನಗಳ ಹಿಂದೆ ಯಾವುದೋ ವಾಹಿನಿಯಲ್ಲಿ ವಿಶ್ಣು ಸಮಾದಿಯ ಬಗ್ಗೆ ನಡೆಯುತ್ತಿದ್ದ ಚರ‍್ಚೆಯನ್ನು ನೋಡಿ ಅನಿಸಿದ್ದು – ಇಡೀ ದೇಶವೇ ತಿರುಗಿ ನೋಡುವಂತ ಚಿತ್ರಗಳನ್ನು ನೀಡಿ, ಕನ್ನಡ ಚಿತ್ರರಂಗದ ಶ್ರೀಮಂತ ಇತಿಹಾಸವನ್ನು ಪರಿಚಯಿಸುತ್ತಾ, ನೆನಪಿಸುತ್ತಾ, ಆ ಇತಿಹಾಸದಲ್ಲಿನ ವಿಶ್ಣುರವರಂತವರ ದೊಡ್ಡ ಪಾತ್ರವನ್ನು ತೋರಿಸಿಕೊಡುವತ್ತಾ ಕ್ರಿಯಾಶೀಲರಾಗಬೇಕಾಗಿದೆ ನಮ್ಮ ಚಿತ್ರರಂಗ. ಇದಕ್ಕಿಂತ ದೊಡ್ಡ ಶ್ರದ್ದಾಂಜಲಿ, ಸ್ತಾವರಗಳನ್ನು ಮುಗ್ದ ಮನಸ್ಸಿನ ವಿಶ್ಣು ಕೇಳುತ್ತಿರಲಿಲ್ಲವೇನೋ. ವಿಶ್ಣುವರ‍್ದನರ ಈ ಹುಟ್ಟು ಹಬ್ಬ, ಅವರಂತ ಅನೇಕ ಕಲಾವಿದರ ಬೆಳವಣಿಗೆಗೆ ಸ್ಪೂರ‍್ತಿಯಾಗಿಲಿ, ಕನ್ನಡ ಚಿತ್ರರಂಗದ ಮರುಹುಟ್ಟಿನ ಕನಸಿನತ್ತ ಒಂದು ಹೆಜ್ಜೆಯಾಗಲಿ.!