Wednesday 20 February 2019

ದೇವರ ಸಂಕೇತ

ಕೇಳಿದನೊಬ್ಬ ದೇವರ ಸಂಕೇತವನ್ನು -
ಚಿತ್ತಾರದೊಡನೆ ಬಂದ ಸೂರ್ಯ ಮುಂಜಾನೆ 
ಮುಳುಗಿದ ಸಂಜೆ ಅದೇ ಬಣ್ಣಗಳೊಡನೆ 
ಹೊಳೆದವಾ ತಾರೆಗಳು ಬೆಳಕಿನ ಚಪ್ಪರದಡಿ 
ಹುಲ್ಲಿನ ದಾಹ ನೀಗಿಸಿತು ಮುತ್ತಿನಿಬ್ಬನಿ 
ಮಳೆಯಿಂದ ಬೆಳೆಯು ಬಳ್ಳಿಯಿಂದ ಗೊಂಚಲು 
ಹುಡುಕುತ್ತಲೇ ಇರುವನು ಇನ್ನೂ ದೇವರ ಸಂಕೇತವನ್ನು

Wednesday 13 February 2019

ಸಂಬಂಧಗಳು

ಮನೆಯ ಹಿರಿಯರೊಬ್ಬರು ತಮ್ಮ ಕೊನೆಯ ದಿನಗಳಲ್ಲಿಇದ್ದರು. ಇನ್ನು ಕೆಲವೇ ದಿನಗಳು ಅಥವಾ ಗಂಟೆಗಳು ಮಾತ್ರ ಉಳಿಯಬಹುದು ಎಂದು ಡಾಕ್ಟರ್ ಹೇಳಿದ್ದರು.  ಹಿರಿಯರಿಗೂ ತಾವಿನ್ನು ಉಳಿಯುವುದಿಲ್ಲ ಎಂಬುದು ಗೊತ್ತಿತ್ತು. ಆದರೆ ಇನ್ನೂ ಸ್ಪಷ್ಟವಾಗಿಯೇ ಉಸಿರಾಡುತ್ತಿದ್ದರು. ಪಂಚೇದ್ರಿಯಗಳು ಇನ್ನೂ ಕೆಲಸ ಮಾಡುತ್ತಿದ್ದವು.

ಇತ್ತ, ಅವರ ಮೂರು ಜನ ಮಕ್ಕಳು ಪಕ್ಕದ ರೂಮಿನಲ್ಲಿ ತಮ್ಮ ಕೆಲಸ ಶುರು ಮಾಡಿಕೊಂಡರು. ’ದೇಹ’ವನ್ನು ಹೇಗೆ ರವಾನಿಸುವುದು ಎಂಬ ಲೆಕ್ಕಚಾರಗಳು ನಡೆಯುತ್ತಿದ್ದವು. ಒಬ್ಬ ಮಗ “ ದೇಹವನ್ನು ಮನೆಯಿಂದ ದೇವಾಲಯಕ್ಕೆ ಹಾಗೂ ನಂತರ ಅಲ್ಲಿಂದ ಸಮಾಧಿಗೆ ಸಾಗಿಸಲು ಒಳ್ಳೆಯ ವಾಹನದ ವ್ಯವಸ್ಥೆ ಮಾಡೋಣ. ಎಲ್ಲರೂ ಸಮಾಧಿಗೆ ಬರಲು ಅನುಕೂಲವಾಗುವಂತೆ  ಒಂದು ಬಸ್ ಸಹ ಮಾಡೋಣ” ಎಂದ.

ಇನ್ನೊಬ್ಬ ಮಗಳು ಇದಕ್ಕೆಲ್ಲಾ ನನಗೆ ಗೊತ್ತಿರುವ ಒಬ್ಬರು ಇದ್ದಾರೆ, ಅವರ ಮೂಲಕ ನಮಗೆ ಒಂದಷ್ಟು ಡಿಸ್ಕೌಂಟ್ ಸಿಗುತ್ತದೆ.  ಬಸ್  ಏಕೆ, ಟೆಂಪೋ ಸಾಕು, ಜನ ಬರಲಿಲ್ಲ ಎಂದರೆ ಬಸ್ ವ್ಯರ್ಥವಾಗುತ್ತದೆ” ಎಂದಳು. ಅದಕ್ಕೆ ಮೂರನೆಯವನು ಪ್ರೀತಿ ಇದ್ದರೆ ಜನರು ತಾವಾಗೇ ಹೇಗಾದರು ಬರುತ್ತಾರೆ, ನಾವೇಕೆ ವಾಹನ ಅರೆಂಜ್ ಮಾಡಬೇಕು? ಬರುವವರು ಬರಲಿ ಬಿಡಿ. ಇನ್ನೂ ಅಪ್ಪನ ದೇಹ ಬೇಕಾದರೆ ನನ್ನ ಕಾರಿನಲ್ಲಿಯೇ ಸಾಗಿಸಬಹುದು ಆಮೇಲೆ ಕಾರು ತೊಳೆದರೆ ಆಯ್ತು” ಎಂದ. ಅದಕ್ಕೆ ಒಬ್ಬ ವಾಹನ ಮಾಡೋಣ ಎಂದರೆ, ಮಗಳು ತಾನು ಹೇಳಿದ ಕಡೆಯೇ ಆಗಲಿ ಎನ್ನುತ್ತಾ ಅವರಲ್ಲೇ ಭಿನ್ನಮತ ಶುರುವಾಯಿತು.

ಪಕ್ಕದ ರೂಮಿನಲ್ಲಿ ತಂದೆಗೆ ಎಲ್ಲ ಕೇಳಿಸುತ್ತಿತ್ತು. ಮಕ್ಕಳನ್ನು ಕರೆದು ಹೇಳಿದರು ನನ್ನ ಬಟ್ಟೆ ಹಾಗೂ ವಾಕಿಂಗ್ ಸ್ಟಿಕ್ ಕೊಟ್ಟು ಬಿಡ್ರಪ್ಪ, ದೇವಾಲಯದ ತನಕ ನಾನೇ ಹೇಗೋ ನಡೆದುಕೊಂಡು ಬಂದು ಬಿಡುತ್ತೇನೆ ಆಮೇಲಿನ ವ್ಯವಸ್ಥೆ ನೀವು ಮಾಡಿಕೊಳ್ಳಿ”.  

ಇಂದು ಬಹುತೇಕ ಸಂಬಂಧಗಳು ನಡೆಯುತ್ತಿರುವುದು ರೀತಿಯ ಲೆಕ್ಕಾಚಾರಗಳಲ್ಲೇ. ಮೇಲಿನ ಪ್ರಸಂಗ ಕೇವಲ ಹಾಸ್ಯಕ್ಕಾಗಿ ಹಾಗೂ ಒಂದಷ್ಟು ಉತ್ಪ್ರೇಕ್ಷೆಯಿಂದ ಕೂಡಿದ್ದರೂ ಎಲ್ಲೋ ಒಂದು ಕಡೆ ನಮ್ಮ ಜೀವನದಲ್ಲಿ ಒಂದಷ್ಟು ಸಾಮ್ಯತೆಗಳನ್ನು ಕಾಣಬಹುದು.          

ಸಾವಿನ ಮನೆಯಲ್ಲಿನ ಮೇಲಿನ ಪ್ರಸಂಗದಲ್ಲಿನ  ಮಕ್ಕಳ ಕಠೋರತೆ, ನಿರ್ದಯತೆ ನಮ್ಮದಾಗಿಲ್ಲಬಹುದು. ಆದರೆ ಸಂಬಂಧಗಳನ್ನು ನಿಭಾಯಿಸುವಲ್ಲಿ ನಮ್ಮ ಲೆಕ್ಕಾಚಾರಗಳು, ನಮ್ಮ ಆರ್ಥಿಕತೆಗಳು, ಸಮಯದ ಅಭಾವ, ನಮ್ಮ ಅಹಂ, ನಮ್ಮ ಸೋಮಾರಿತನ, ನಮ್ಮ ದೌರ್ಬಲ್ಯಗಳು ಖಂಡಿತವಾಗಿಯೂ ತೊಡಕಾಗಿರುವುದು ಸತ್ಯ.

ನಿರುದ್ಯೋಗ, ಬಡತನ, ಆರ್ಥಿಕ ಮುಗ್ಗಟ್ಟುಗಳು ಒಂದಷ್ಟು ದಶಕಗಳ ಹಿಂದೆ ನಮ್ಮ ಸಮಾಜವನ್ನು ನಮ್ಮ ಕುಟುಂಬಗಳನ್ನು ನಮ್ಮ ದೈನಂದಿನ ಜೀವನವನ್ನು ಕಾಡಿದ್ದು ನಿಜ. ಆದರೆ ಅವು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿಯೂ ಸಹಾಯಕವಾಗಿದ್ದವು. ಸಮಾನ ದುಃಖಿಗಳು ಮಾನಸಿಕವಾಗಿ ಒಟ್ಟಾಗಿ ಕಲೆಯುತ್ತಿದ್ದರು, ಬೆರೆಯುತ್ತಿದ್ದರು.

ಇಂದು ನಿರುದ್ಯೋಗ ಅಂತಹ ದೊಡ್ಡ ಸಮಸ್ಯೆಯೇನಲ್ಲ. ಬೆಂಗಳೂರಿನಂಥ ನಗರದಲ್ಲಿ ಉದ್ಯೋಗಗಳು ಲಕ್ಷಾಂತರವಿದೆ. ಸಂಬಳವೂ ಲಕ್ಷ ಲಕ್ಷ. ಮೂಲಭೂತವಾದ ಬಡತನ, ಆರ್ಥಿಕ ಮುಗ್ಗಟ್ಟು ಇಲ್ಲ . ತಂದೆ ತಾಯಿಗಳಿಗೆ ತಮ್ಮ ಮಕ್ಕಳು ತಮ್ಮಂತೆ ಬಡತನದಲ್ಲಿ ಇಲ್ಲ ಎಂಬ ಸಮಾಧಾನ ನೆಮ್ಮದಿ ಇದೆ.

ಆದರೆ ಸಂಬಂಧಗಳಿಗೆ ಸಮಯ, ಮನಸ್ಸಿನಲ್ಲಿ ಜಾಗ ಪೂರಕವಾದ ವಾತಾವರಣ ನಿಧಾನವಾಗಿ ಕರಗುತ್ತಿರುವುದು ನಮ್ಮ ಅರಿವಿಗೆ ಬರುತ್ತಿಲ್ಲ. ಬಂದರೂ ಸುಧಾರಿತ ಜೀವನಮಟ್ಟ ನಮ್ಮನ್ನು ಜಾಣ ಕುರುಡರನ್ನಾಗಿಸುತ್ತಿದೆ. ನಂಟಿಗಿಂತ ನಾವು ಮಾಡುತ್ತಿರುವ, ಮಾಡಬೇಕಾಗಿರುವ ಗಂಟು ಮುಖ್ಯವಾಗುತ್ತಿದೆ.

ಗಂಟಿನ ಬಗ್ಗೆ ಗುರುರಾಜುಲು ನಾಯ್ಡು ಅವರ ಹರಿಕಥೆಯೊಂದರಲ್ಲಿ ಒಂದು ಸುಂದರ ಪ್ರಸಂಗವಿದೆ ವಯಸ್ಸಾದ ಅಜ್ಜಿಗೆ ಗಂಡನಿಲ್ಲ. ಇಬ್ಬರು ಗಂಡುಮಕ್ಕಳು ಸೊಸೆಯಂದಿರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಜೀವನ ಬೇಸರವಾಗಿ ಆಶ್ರಮ ಸೇರಿಕೊಳ್ಳಲು ಒಬ್ಬ ಗುರುವಿನ ಬಳಿ ಅಜ್ಜಿ ಹೋಗುತ್ತಾರೆ. ಗುರು ಇಬ್ಬರು ಮಕ್ಕಳಿರುವಾಗ ಆಶ್ರಮವೇಕೆ ಸೇರಬೇಕು” ಎಂದು ಹೇಳಿ ಅಲ್ಲಿಯೇ ಬಳಿಯಲ್ಲಿದ್ದ ಒಂದಷ್ಟು ಮಣ್ಣಿನ ದೀಪಗಳನ್ನು ಹೊಡೆದು ಕೊಡುತ್ತಾರೆ. ಅವುಗಳನ್ನು ಕಟ್ಟಿ ಗಂಟು ಮಾಡಿ ಸೀರೆಗೆ ಕಟ್ಟಿಕೊ ಎಂದು ಸಲಹೆ ನೀಡುತ್ತಾರೆ. ಮಕ್ಕಳ ಮನೆಗೆ ಹೋದಾಗ ಬಂದಾಗ ಅದರ ಮೇಲೆ ಕೈಯಾಡಿಸುತ್ತಾ ಇರು, ಶಬ್ದ ಮಾಡುತ್ತಿರು ಸಹಾ ಎಂದು ಹೇಳುತ್ತಾರೆ. ಮನೆಗೆ ಹೋದಾಗ ಅಜ್ಜಿ ಇದನ್ನೆಲ್ಲಾ ಚಾಚು ತಪ್ಪದೆ ಮಾಡುತ್ತಾರೆ ಇದನ್ನು ಕಂಡ ಮಕ್ಕಳು, ಸೊಸೆಯಂದಿರು ಅಜ್ಜಿ ಒಂದಷ್ಟು ಬಂಗಾರ ಇಟ್ಟುಕೊಂಡಿದ್ದಾರೆ, ಚೆನ್ನಾಗಿ ನೋಡಿಕೊಂಡರೆ ನಮಗೆ ಕೊಡುತ್ತಾರೆ ಎಂದುಕೊಳ್ಳುತ್ತಾ. ಅಂದಿನಿಂದ ಇಬ್ಬರು ಮಕ್ಕಳು ಸೊಸೆಯರು ಪೈಪೋಟಿಗೆ ಬಿದ್ದಂತೆ ಅಜ್ಜಿಯನ್ನು ಉಪಚರಿಸುತ್ತಾರೆ.
ಮುಂದೆ ಅಜ್ಜಿ ಸತ್ತಾಗ ಏನಾಗುತ್ತದೆ ಎಂಬುದು ಇನ್ನೂ ತಮಾಷೆಯ ಸಂಗತಿ. ಇದನ್ನು ಮತ್ತೆ ಹಾಸ್ಯಕ್ಕಾಗಿ ನಾಯ್ಡು ಅವರು ಬಳಸಿಕೊಂಡರೂ ಮಾನವ ಸಂಬಂಧಗಳ ಮೂಲ ಸ್ವರೂಪ ಬದಲಾಗುತ್ತಿರುವ ಬಗ್ಗೆ ಬೆಳಕು ಚೆಲ್ಲುತ್ತಾರೆ.

ಇಂದು ಸಂಬಂಧಗಳು ಹಣದಿಂದ ಮಾತ್ರ ಸಡಿಲವಾಗುತ್ತಿಲ್ಲ. ನಮ್ಮ ಆಧುನಿಕ ಜೀವನ ಶೈಲಿಗೆ ಸಂಬಂಧಿಸಿದ ಅನೇಕ ಆಯಾಮಗಳು  ಇದಕ್ಕೆ ಕಾರಣವಾಗಿವೆ. ಟಿ.ವಿ ಪ್ರಾರಂಭವಾದಾಗ ಕೇವಲ ಕೆಲವೇ ಗಂಟೆಗಳಿದ್ದ ಕಾರ್ಯಕ್ರಮಗಳು ಕೇಬಲ್ ಟಿವಿಯಿಂದ ದಿನವೆಲ್ಲಾ ವಿಸ್ತಾರವಾಯಿತು.  ಇದರಿಂದ ಕೌಟುಂಬಿಕ ಸ್ನೇಹ ಸಮಯಗಳು ಹಂಚಿ ನೀರಾದವುಕನಿಷ್ಟ ಜೊತೆಗಾರಿಕೆಯ ವೀಕ್ಷಣೆಯಾದರೂ ಇದ್ದ ಈ ಸಮಯವನ್ನೂ ಕಸಿದುಕೊಂಡಿದ್ದು ಮೊಬೈಲ್ ಹಾಗೂ ಆಪ್ ಗಳು. ಇದರಿಂದ ಪ್ರತಿಯೊಬ್ಬರ ಸಮಯವು ಖಾಸಗಿಯಾಗಿ ವೈಯಕ್ತಿಕವಾಗಿ ಮಾರ್ಪಟ್ಟುಗೊಂಡು ಸಂಬಂಧಗಳು ನಿಂತ ನೀರಾದವು.

ಇದರಲ್ಲಿ ತಾಂತ್ರಿಕತೆ, ಯಂತ್ರಗಳು ಅವಿಷ್ಕಾರಗಳನ್ನು ದೂರಿ ಪ್ರಯೋಜನವಿಲ್ಲ. ನಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅದನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆಯುವುದು ನಮ್ಮ ವಿವೇಚನೆ ವಿವೇಕಕ್ಕೆ ಬಿಟ್ಟಿದ್ದು. ಆದರೆ ವಿವೇಕ ವಿವೇಚನೆ ಗಳೆಲ್ಲವೂ ಈಗ ದೂರದ ಬುತ್ತಿಯಾಗಿದೆ.

ದಿನದ ಸಮಯವೆಲ್ಲ ನುಂಗುವ ಉದ್ಯೋಗ ಅನಿವಾರ್ಯ. ಅದರಿಂದ ಬರುವ ಸಾವಿರ, ಲಕ್ಷಗಳ ಸಂಬಳ ಇನ್ನೂ ಅನಿವಾರ್ಯ, ಅವಶ್ಯ. ಅವುಗಳ ನಡುವೆ ಸಿಗುವ ಸಮಯದಲ್ಲಿ ಮೊಬೈಲ್, ಟಿವಿ, ರ್ಚು, ಮೋಜುಗಳೆಲ್ಲವೂ ಮನಸ್ಸಿಗೆ ಸಾಂತ್ವನ. ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಳ್ಳುವ ಪೋಸ್ಟ್ ಗಳಿಂದ ಸಾಮಾಜಿಕ ಮನ್ನಣೆ. ಇವುಗಳ ನಡುವೆ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ ಎಂಬುದೇ ಪ್ರಶ್ನೆ.

ದಂಡಿಯಾಗಿ ಸಿಗುತ್ತಿದ್ದ ನೀರು, ಮರ, ಗಾಳಿಯನ್ನು, ಪರಿಸರವನ್ನು ಉಪೇಕ್ಷಿಸಿದ ಫಲವನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಏಪ್ರಿಲ್ ನಿಂದ ನೀರಿಲ್ಲ. ದೆಹಲಿ ವಾಸಿಸಲು ಯೋಗ್ಯವಾಗಿ ಉಳಿದಿಲ್ಲ ಎನ್ನುತ್ತಿದೆ ಕೋರ್ಟ್. ಬೆಂಗಳೂರು ಸಹ ನಿಟ್ಟಿನಲ್ಲಿ ದೂರವೇನಿಲ್ಲ.  ಇದಕ್ಕೆಲ್ಲ ಪರಿಹಾರವೇನು ವುದು ಮೇಲುನೋಟಕ್ಕೆ ಕಷ್ಟ ಎಂಬಂತೆ ಕಂಡರೂ ತೀರ ಕಷ್ಟವೇನಲ್ಲ

ಇಂತಹುದರಲ್ಲಿ ಸಂಬಂಧಗಳನ್ನು ಉಪೇಕ್ಷಿಸಿದರೆ ಪರಿಸರದ ರೀತಿಯ ಕೆಟ್ಟ ಪರಿಣಾಮಗಳನ್ನು ಸಂಬಂಧಗಳಲ್ಲಿ ಸಹಾ ನಾವು ಅನುಭವಿಸಬೇಕಾಗುತ್ತದೆ. ಪ್ರತಿಯೊಂದು ಧರ್ಮವು, ಪ್ರೀತಿ, ಸಹನೆ ಸಾರುತ್ತದೆ. ನಿನ್ನನ್ನು ನೀನು ಪ್ರೀತಿಸುವಂತೆ ಪರರನ್ನು ಪ್ರೀತಿಸು’ ಎಂಬ ಯೇಸುವಿನ ವಾಕ್ಯ ಎರಡು ಸಾವಿರ ವರ್ಷಗಳಲ್ಲಿ ಪ್ರಸ್ತುತವಾಗಿ ನಿಂತಿರುವುದು ಸಂಬಂಧಗಳ ಮೌಲ್ಯ ದಿಂದಲೇ. ಪ್ರತಿ ಮನಸ್ಸಿನಲ್ಲಿ ಪ್ರತಿ ಮನೆಯಲ್ಲಿ ಪರಸ್ಪರ ಮಾನವೀಯ ಸಂಬಂಧಗಳು ತಮ್ಮ ಅರ್ಥಗಳನ್ನು ಹುಡುಕುತ್ತಾ, ಬೆಳೆಯುತ್ತಾ ಸಾಗಿದರೆ  ಸಂಬಂಧಗಳ ಪುನಶ್ಚೇತನ ಸಾಧ್ಯ. ಹೀಗಾದಾಗ ನಮ್ಮನ್ನು ಕಾಡುತ್ತಿರುವ ಒಬ್ಬಂಟಿತನ, ಅನಾಥ ಪ್ರಜ್ಞೆ ಅಥವಾ ಹತಾಶ ಭಾವ ಕಡಿಮೆಯಾಗುತ್ತ ತಾಂತ್ರಿಕ ಆವಿಷ್ಕಾರಗಳನ್ನು ಮೀರಿ ಬೆಳೆಯುವಂತಹ ಸಾಧನಗಳಾಗುವುದರಲ್ಲಿ ಅನುಮಾನವಿಲ್ಲ.
Read more!