Monday 14 December 2015

ಆಡಿಯೋ ಅನಿಸಿಕೆ - ಮಾಸ್ಟರ್‍ಪೀಸ್


ಈ ಡಿಸೆಂಬರ್ ನಿಜಕ್ಕೂ ಕನ್ನಡ ಚಿತ್ರರಂಗ ಕಾತುರದಿಂದ ನೋಡುತ್ತಿರುವ ತಿಂಗಳಾಗಿದೆ. ಅನೇಕ ದೊಡ್ಡ ಚಿತ್ರಗಳು ಬಿಡುಗಡೆಗೆ ಕಾದಿವೆ. ಅದರಲ್ಲಿ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರ ಕೂಡಾ ಒಂದು. ಕಳೆದ ವರ್ಷ ಬಿಡುಗಡೆಗೊಂಡು ಅಪಾರ ಯಶಸ್ಸು ಪಡೆದ 'ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ' ಚಿತ್ರದ ಗುಂಗಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಅಂತಹ ಯಶಸ್ಸು ಪಡೆದ ಚಿತ್ರದ ನಾಯಕನ ಮುಂದಿನ ಚಿತ್ರ ಎಂದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸಹಜವೇ. ಅದರಲ್ಲೂ ಮಂಜು ಮಾಂಡವ್ಯರಂತಹ ಬರಹಗಾರ, ನಿರ್ದೇಶನದ ಕುರ್ಚಿಯಲ್ಲಿ ಕೂತಾಗ ಚಿತ್ರದ ಅಭಿರುಚಿಯ ಬಗ್ಗೆಯೂ ಭರವಸೆ ಮೂಡುತ್ತದೆ.  ಇವುಗಳ ನಡುವೆ ಚಿತ್ರದ ಹಾಡುಗಳು ಬಿಡುಗಡೆಗೊಂಡು ಜನರನ್ನು ತಲುಪಿವೆ. ಮತ್ತೊಮ್ಮೆ ಹರಿಕೃಷ್ಣ, ಯಶ್ ಚಿತ್ರದ ಹಾಡುಗಳ ಸಾರಥ್ಯವಹಿಸಿಕೊಂಡಿದ್ದಾರೆ.

ಅಣ್ಣಂಗ್ ಗೆ ಲವ್ ಆಗಿದೆ 
ಹಾಡಿರುವವರು : ಯಶ್, ಚಿಕ್ಕಣ್ಣ 
ಸಾಹಿತ್ಯ : ಮಂಜು ಮಾಂಡವ್ಯ
ರಾಮಾಚಾರಿ ಚಿತ್ರದಲ್ಲಿ ಹಾಡಿದ ಹಾಡು ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದಕ್ಕೋ ಏನೋ, ಯಶ್‍ಗೆ ಮತ್ತೆ ಹಾಡೋಕೆ ಲವ್ ಆದಂಗಿದೆ. ಮಂಜುರವರ ಸಾಹಿತ್ಯದಲ್ಲಿ ಕನ್ನಡ ಪದಗಳ ಜೊತೆ ಇಂಗ್ಲಿಷ್ ಪದಗಳು ಪೈಪೋಟಿಗೆ ಬಿದ್ದು ಗೆದ್ದಿವೆ. ಸಾಹಿತ್ಯದ ಮೇಲೆ ಹರಿಕೃಷ್ಣರವರ ಸಂಗೀತವೂ ಅಬ್ಬರಿಸಿದೆ. ಇವುಗಳ ನಡುವೆ ಯಶ್ ಮತ್ತು ಚಿಕ್ಕಣ್ಣ ಗಾಯನ ಬಂದು ಹೋಗುತ್ತಿದೆ. ಚಿಕ್ಕಣ್ಣ ಅಭಿನಯದತ್ತ ಗಮನಕೊಟ್ಟರೆ ಒಳ್ಳೆಯದು ಅನ್ನೋದು ಸಲಹೆ. ನೂರಾರು ಸಹ ಕಲಾವಿದರನ್ನು ಬಳಸಿಕೊಂಡು ಅಭಿಮಾನಿಗಳಿಗೆ ಭರ್ಜರಿ ನೃತ್ಯದ ರಸದೌತಣ ನೀಡುವ ಮುನ್ಸೂಚನೆ ಈ ಹಾಡಿನ ಮೂಲಕ ಕಾಣುತ್ತಿದೆ.

ಐ ಕಾಂಟ್ ವೇಟ್ ಬೇಬಿ 
ಹಾಡಿರುವವರು : ಟಿಪ್ಪು, ಇಂದು ನಾಗರಾಜ್ 
ಸಾಹಿತ್ಯ : ನರ್ತನ್ 
ನೃತ್ಯಕ್ಕೆ ಹೇಳಿ ಮಾಡಿಸಿದ ಸಂಗೀತಕ್ಕೆ ನರ್ತನ್ ರವರ ಕನ್ನಡ ಸಾಹಿತ್ಯವಿದೆ, ಜೊತೆಗೆ ಇಂಗ್ಲಿಷ್ ಪದಗಳೂ ಸರಿಸಮಾನವಾಗಿವೆ. ಟಿಪ್ಪು ಇಂತಹ ಗಾಯನದಲ್ಲಿ ಎತ್ತಿದ ಕೈ. ಇಂದು ನಾಗರಾಜ್ ಕೂಡಾ ಹಿಂದೆ ಬಿದ್ದಿಲ್ಲ. ಇಷ್ಟು ಬಿಟ್ಟರೆ ಅಂತಹ ವಿಶೇಷತೆ ಏನೂ ಇಲ್ಲ.

KD ನಂ. 1 
ಹಾಡಿರುವವರು : ಟಿಪ್ಪು, ಸಂಗೀತ ರವೀಂದ್ರನಾಥ್ 
ಸಾಹಿತ್ಯ : ಮಂಜು ಮಾಂಡವ್ಯ
ನಾ ಅಲೆಕ್ಸಾಂಡರಾ.. ನಾ ನಿನ್ನ ಲವರಾ.. ಎಂಬ ಸಾಲುಗಳಿರುವ ಸಾಹಿತ್ಯದ ಹಾಡು. ಸಾಮಾನ್ಯ ಸಾಹಿತ್ಯದ ನಡುವೆ ಹರಿಕೃಷ್ಣರ ಎಂದಿನ ಬೀಟ್ಸ್. ಕೋರಸ್ ಎಲ್ಲವೂ ಇದೆ. ಟಿಪ್ಪು ಮತ್ತು ಸಂಗೀತ ಇಬ್ಬರ ಧ್ವನಿಯಲ್ಲೂ ಲವಲವಿಕೆ ಇದೆ. ಸಾಹಿತ್ಯ ಕೇಳುವಂತಹ ಸಂಯಮದ ಸಂಗೀತವಿದೆ. ಕೇ..ಡಿ ನಂ ಒನ್ ಎಂಬ ಕೋರಸ್ ಇಡೀ ಗೀತೆಯನ್ನು ತುಂಬಿಕೊಂಡಿದೆ

ಜಾಗೋರೆ.. ಜಾಗೋರೆ 
ಹಾಡಿರುವವರು : ಕುನಾಲ್ ಗಾಂಜಾವಾಲ 
ಸಾಹಿತ್ಯ : ಗೌಸ್ ಪೀರ್ 
ಮಲಗಿರುವ ಸಿಂಹದಂತಹ ವೀರನನ್ನು ಹೋರಾಟಕ್ಕೆ ಕರೆ ನೀಡುವ ಆಶಯದ ಈ ಗೀತೆ ಚಿತ್ರದ ಇತರ ಗೀತೆಗಳಿಗಿಂತ ಭಿನ್ನವಾಗಿದೆ. ಕುನಾಲ್ ರವರ ಗಾಯನ ಹಾಗೂ ಹರಿಕೃಷ್ಣರ ಸಂಗೀತದಲ್ಲಿ ರಭಸವಿದೆ. ಗೌಸ್ ಪೀರ್ ಆವರ ಸಾಹಿತ್ಯದಲ್ಲಿ ಗಾಂಭೀರ್ಯವಿದ್ದು, ಚಿತ್ರದಲ್ಲಿ ಮತ್ತು ಕಥೆಯಲ್ಲಿ ಈ ಹಾಡಿನ ಪಾತ್ರವೇನು ಎಂದು ಕೆರಳಿಸಿರುವ ಗೀತೆ.

ಅಟೆನ್ಸನ್ ಪ್ಲೀಸ್ 
ಹಾಡಿರುವವರು : ರಂಜಿತ್, ರಾಹುಲ್ ನಂಬಿಯಾರ್, ನವೀನ್ ಮಾಧವ್ 
ಸಾಹಿತ್ಯ : ನರ್ತನ್
ನರ್ತನ್ ಅವರ ಸಾಹಿತ್ಯದ ಪ್ರತಿ ಪದವೂ ನಾಯಕನ ಗುಣಗಾನದಿಂದ ತುಂಬಿ ಹೋಗಿದೆ. ಗೀತೆ ಮುಂದುವರಿಯುತ್ತಿದ್ದಂತೇ, ಗುಣಗಾನಕ್ಕಿಂತ ಎದುರಾಳಿಗೆ ಎಚ್ಚರಿಕೆ ನೀಡುತ್ತಾ "Attention Please" ಎನ್ನುತ್ತದೆ ಗೀತೆ. ಹರಿಕೃಷ್ಣರ ಸಂಗೀತದಲ್ಲಿ ಈ ರೀತಿಯ ಗೀತೆಗೆ ಬೇಕಾದ ಶಕ್ತಿಯಿದೆ. ರಂಜಿತ್, ರಾಹುಲ್, ನವೀನ್ ಸುಂದರವಾಗಿ ಹಾಡಿ ಮೆರುಗು ತಂದಿದ್ದಾರೆ.

- ಪ್ರಶಾಂತ್ ಇಗ್ನೇಷಿಯಸ್

http://kannada.filmibeat.com/music/audio-review-of-yash-starer-manju-mandavya-directed-master-piece-020261.html

Monday 27 April 2015

ಆಡಿಯೋ ಅನಿಸಿಕೆ - ವಜ್ರಕಾಯ

’ಭಜರಂಗಿ’ಯ ಭರ್ಜರಿ ಜೋಡಿ ಮತ್ತೆ ಒಂದಾಗಿ ಬರುತ್ತಿದೆ.  ಶಿವಣ್ಣನ ಪ್ರತಿಭೆ, ಹುರಿಗೊಳಿಸಿದ ದೇಹ ಎಲ್ಲವನ್ನು ಭರ್ಜರಿಯಾಗಿ ತೆರೆಯ ಮೇಲೆ ಅನಾವರಣಗೊಳಿಸಿದ ನಿರ್ದೇಶಕ ಹರ್ಷ, ವಜ್ರಕಾಯದಲ್ಲೂ ಅದೇ ಜಾದೂ ಮುಂದುವರಿಸುತ್ತಾರೆಯೇ ಎಂದು ಕಾತುರದಲ್ಲಿದೆ ಚಿತ್ರರಂಗ. ಚಿತ್ರದ ಟ್ರೈಲರ್ ಹಾಗೂ ಸ್ಥಿರ ಚಿತ್ರಗಳು ಸಕ್ಕತ್ತಾಗಿಯೇ ಮೂಡಿ ಬಂದಿದೆ. ನಿರ್ದೇಶಕನೇ ನೃತ್ಯ ಸಂಯೋಜಕನಾದಾಗ ಅಥವಾ ನೃತ್ಯ ಸಂಯೋಜಕನೇ ಚಿತ್ರದ ನಿರ್ದೇಶಕನಾಗಿರುವಾಗ ಚಿತ್ರದ ಹಾಡುಗಳಿಗೆ ವಿಶೇಷವಾದ ಮೆರಗು ಒದಗಿ ಬರುತ್ತದೆ. ಅಲ್ಲದೆ ಹಾಡುಗಳಲ್ಲಿಯೂ ವಿಶೇಷತೆ ಇರುತ್ತದೆ ಎಂಬ ಕುತೂಹಲ ಇರುತ್ತದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯರ ನಿರ್ದೇಶನದ ಹಾಡುಗಳು ಹೇಗಿವೆ ನೋಡೋಣವೇ?

ವಜ್ರಕಾಯ
ಗಾಯನ - ಶಂಕರ್ ಮಹಾದೇವನ್ 
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಶಂಕರ್ ಮಹಾದೇವನ್ ಹಾಗೂ ನಾಗೇಂದ್ರ ಪ್ರಸಾದ್ ಒಟ್ಟಾಗಿ ಸೇರಿದೊಡನೆ ಒಂದು ಶಕ್ತಿಶಾಲಿ ಹಾಡು ಸಿದ್ಧವಾದಂತೆಯೇ. ಅರ್ಜುನ್ ಜನ್ಯರ ಭರ್ಜರಿ ಸಂಗೀತಕ್ಕೆ, ಸಾಹಿತ್ಯ ಗಾಯನವೆಲ್ಲವೂ ರಭಸದಿಂದಲೇ ಕೂಡಿಕೊಂಡು ಬಂದಿದೆ. ತೆರೆಯ ಮೇಲೆ ನೃತ್ಯವೂ ಅದೇ ರೀತಿಯಲ್ಲಿ ಇರುವುದರಲ್ಲಿ ಸಂಶಯವಿಲ್ಲ. ಅಬ್ಬರದ ನಡುವೆ ಕೇಳಿಸಿಕೊಂಡು ಹೋಗುವ ಗೀತೆ. 

ನೋ ಪ್ರಾಬ್ಲಮ್
ಗಾಯನ - ಧನುಷ್ 
ಸಾಹಿತ್ಯ - ಮೋಹನ್ ಕುಮಾರ್
ಕೊಲವೇರಿ ಹಾಡಿನಿಂದ ಗಾಯಕನಾಗಿಯೂ ಹೆಸರು ಮಾಡಿದ ತಮಿಳಿನ ಧನುಷ್ ಹಾಡಿರುವ ಗೀತೆ. ಅವರ ಕಂಚಿನ ಕಂಠಕ್ಕೆ ತಕ್ಕುದ್ದಾದ ಸಂಗೀತ ಒದಗಿ ಬಂದಿದ್ದೂ, ಸಾಹಿತ್ಯವೂ ಲವಲವಿಕೆಯಿಂದ ಇರುವುದರಿಂದ ಇಷ್ಟವಾಗುವ ಗೀತೆ. ಸರಳವಾದ ವಾದ್ಯ ಸಂಯೋಜನೆ ಇಷ್ಟವಾಗುತ್ತದೆ. ಮೋಹನ್ ಕುಮಾರರ ಸಾಹಿತ್ಯ ಯುವ ರಸಿಕರನ್ನು ಮೆಚ್ಚಿಸುವಂತಿದೆ. ಎಲ್ಲಕ್ಕಿಂತ ಮಿಗಿಲಾಗಿ ಧನುಷ್ ರ ಕನ್ನಡ ಉಚ್ಛರಣೆ ಹಾಗೂ ಸ್ಪಷ್ಟತೆ ಈಗಿನ ಎಷ್ಟೋ ಪರಭಾಷಾ ಗಾಯಕರಿಗಿಂತ ಚೆನ್ನಾಗಿದೆ. ಕೇಳುತ್ತಾ ಕೇಳುತ್ತಾ ಇಷ್ಟವಾಗುವಂತ ಸಂಗೀತವನ್ನು ಅರ್ಜುನ ನೀಡಿದ್ದಾರೆ.

ಕಂದಮ್ಮ ಮುದ್ದಮ್ಮ
ಗಾಯನ - ಕಾರ್ತಿಕ್ 
ಸಾಹಿತ್ಯ - ಕೆ ಕಲ್ಯಾಣ್ 
ಕಲ್ಯಾಣ್ ರ  ಸಾಹಿತ್ಯ ಎಂದೆಡೊನೆ ಒಂದು ನಿರೀಕ್ಷೆ ಕನ್ನಡ ಚಿತ್ರ ರಸಿಕರಲ್ಲಿ ಇದ್ದೇ ಇದೆ. ಕಲ್ಯಾಣ್ ನಿರಾಸೆ ಮೂಡಿಸುವುದಿಲ್ಲ. ಸಂಗೀತ ಕೂಡ ಮಾಧುರ್ಯದ ಗಡಿ ದಾಟದೆ ಇಷ್ಟವಾಗುತ್ತದೆ. ನಡುವೆ ಬರುವ ಕೋರಸ್ ವಿಭಿನ್ನವಾಗಿದೆ. ಕೊಳಲಿನ ಧ್ವನಿ ನೆನಪಿನಲುಳಿಯುತ್ತದೆ. ಕಾರ್ತಿಕರ ಗಾಯನ ಎಂದಿನಂತೆ ಇದೆಯಷ್ಟೆ.  ಉತ್ತಮವಾದ ಗೀತೆ.

ತುಕತು ಗಡಬಡ
ಗಾಯನ - ಶರಣ್ ಹಾಗೂ ಸುನಿತಾ  
ಸಾಹಿತ್ಯ - ಯೋಗಾನಂದ ಮುದ್ದನ್

ಶರಣ್ ಗಾಯನದ ಹಾಡೆಂಬ ಉತ್ಸಾಹಕ್ಕೆ ಭರಪೂರವಾದ ಹಿಂದಿಯ ಸಾಹಿತ್ಯ ತಣ್ಣೀರೆರೆಚುತ್ತದೆ. ಯೋಗಾನಂದರವರ ಸಾಹಿತ್ಯದಲ್ಲಿ ಕನ್ನಡ ಪದಗಳು ಸಮಾಧಾನಕರ ಬಹುಮಾನದಂತೆ ಅಲ್ಲಲ್ಲಿ ಕೇಳ ಸಿಗುತ್ತದೆ. ಕನ್ನಡ ಹಾಡೊಂದರಲ್ಲಿ ಅಷ್ಟು ಪರಭಾಷಾ ಸಾಹಿತ್ಯದ ಅವಶ್ಯಕತೆ ಚಿತ್ರದ ಸನ್ನಿವೇಶದಲ್ಲಿ ನಿಜಕ್ಕೂ ಇದೆಯೇ ಎಂಬುದನ್ನು ಪರದೆ ಮೇಲೆಯೇ ನೋಡಬೇಕು. ಹರ್ಷರವರ ನೃತ್ಯ ಸಂಯೋಜನೆಗೆ ಒಳ್ಳೆಯ ಅವಕಾಶವಿರುವ ಸಂಗೀತ, ವಾದ್ಯ ಸಂಯೋಜನೆ ಇದೆ. 

ಉಸಿರೆ 
ಗಾಯನ - ಸಂತೋಷ್   
ಸಾಹಿತ್ಯ - ಕೆ ಕಲ್ಯಾಣ್

ಬಹುಶ: ಚಿತ್ರದ ಅತ್ಯುತ್ತಮ ಗೀತೆ. ಒಳ್ಳೆಯ ಸಾಹಿತ್ಯಕ್ಕೆ, ಉತ್ತಮವಾದ ಸಂಗೀತ, ಗಾಯನ ಎಲ್ಲವೂ ಮಿಳಿತಗೊಂಡು ಉತ್ತಮವಾಗಿ ಕೇಳಿಸಿಕೊಂಡು ಹೋಗುವ ಗೀತೆ. ತಾಯಿಯನ್ನು ಕಾಣುವ ಕಾತುರದಲ್ಲಿ ಹೊರಟ ನಾಯಕನ ಸದಾಶಯ ಸಾಹಿತ್ಯದಲ್ಲಿ ಇದ್ದರೆ, ಅದರ ಉತ್ಸಾಹ ಗಾಯನದಲ್ಲಿ ಇದೆ. ಈ ಹಾಡಿನಲ್ಲೂ ಅರ್ಜುನ್ ಜನ್ಯ ಮಾಧುರ್ಯದಿಂದ, ಸಂಯಮದಿಂದ ಗಮನ ಸೆಳೆಯುತ್ತಾರೆ. 

ವಜ್ರಕಾಯ ಥೀಮ್
ಮೆಲುದನಿಯ ಕೋರಸ್ ನಿಂದ ಆರಂಭವಾಗಿ ಅಬ್ಬರದಿಂದ ಕೊನೆಗೊಳ್ಳುವ ಥೀಮ್ ಸಾಂಗ್ ಎಂದಿನ ಥೀಮ್ ಗೀತೆಗಳಂತೆಯೇ ಇದ್ದೂ, ಅದಕ್ಕೆ ಬೇಕಾದ ಅದಕ್ಕೆ ಬೇಕಾದ ರಭಸವೂ ಸಂಗೀತದಲ್ಲಿದೆ.

-ಪ್ರಶಾಂತ್ ಇಗ್ನೇಷಿಯಸ್

ಆಡಿಯೋ ಅನಿಸಿಕೆ - ರನ್ನ

ವಿಕ್ಟರಿ, ಅಧ್ಯಕ್ಷದಂಥ ಯಶಸ್ವಿ ಚಿತ್ರಗಳನ್ನು ಕೊಟ್ಟ  ನಂದ ಕಿಶೋರ್ ಈ ಬಾರಿ ಸೂಪರ್ ಸ್ಟಾರ್ ಸುದೀಪ್ ರವರ ಜೊತೆ ರನ್ನದ ಮೂಲಕ ತೆರೆಗೆ ಅಪ್ಪಳಿಸಲು ತಯಾರಾಗಿ ಬರುತ್ತಿದ್ದಾರೆ. ಬಹು ದಿನಗಳ ನಂತರ ಬರುತ್ತಿರುವ ಕಿಚ್ಚ ಸುದೀಪ್ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳ ಕಾತರ ನಿರೀಕ್ಷೆ ಸಹಾ ಮುಗಿಲು ಮುಟ್ಟಿದೆ. ಚಿತ್ರದ ಟೀಸರ್, ಟ್ರೈಲರ್ ಗಳು ಈ ನಿರೀಕ್ಷಯನ್ನು ದ್ವಿಗುಣಗೊಳಿಸಿರುವ ಬೆನ್ನಲ್ಲೇ ಹಾಡುಗಳು ಚಿತ್ರ ರಸಿಕರ ಮುಂದಿದೆ. ಹರಿಕೃಷ್ಣರ ಸಾರಥ್ಯದ ಹಾಡುಗಳು ಹೇಗಿವೆ ಎಂದು ನೋಡೋಣ -

ಬಬ್ಬರ್ ಶೇರ್
ಗಾಯನ - ಶ್ರೀ ದೇವಿ ಪ್ರಸಾದ್
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಉತ್ತಮವಾದ ಕನ್ನಡ ಸಾಹಿತ್ಯದೊಂದಿಗೆ ಆರಂಭವಾಗುವ ಗೀತೆ ಇದ್ದಕ್ಕಿದ್ದಂತೆ ಹಿಂದಿಗೆ ಹೊರಳಿ ಇಂಗ್ಲಿಷ್ ಪದಗಳ ನಡುವೆ ಸಾಗುವುದು ನಿರಾಸೆ ಮೂಡಿಸಿದರೂ, ಉತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆ ಗೀತೆಯನ್ನು ಎತ್ತಿ ಹಿಡಿಯುತ್ತದೆ.ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ನಾಯಕ ಗುಣಗಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ.


ಸೀರೆಲಿ ಹುಡುಗೀನ 
ಗಾಯನ - ವಿಜಯ್ ಪ್ರಕಾಶ್  
ಸಾಹಿತ್ಯ - ಯೋಗರಾಜ್ ಭಟ್
ಸರಳ ಸುಮಧುರ ಸಂಗೀತ ಸಂಯೋಜನೆ ಇರುವ ಗೀತೆ, ಖುದ್ದು ಸುದೀಪರೇ ಹಾಡಿದಾರೇನೋ ಎನ್ನುವಷ್ಟು ಮಟ್ಟಿಗೆ ವಿಜಯ್ ಪ್ರಕಾಶರ ಧ್ವನಿ ಹೊಂದಿಕೆಯಾಗಿದೆ. ಯೋಗರಾಜ್ ಭಟ್ಟರ ಸಾಹಿತ್ಯವನ್ನು ಹೇಗೆ ಹಾಡಿದರೆ ಚೆಂದ ಎಂಬುದನ್ನು ಕರಗತ ಮಾಡಿಕೊಂಡಿರುವ ವಿಜಯ್ ಸೊಗಸಾಗಿ ಹಾಡಿದ್ದಾರೆ. ಭಟ್ಟರ ಸಾಹಿತ್ಯ ಎಂದಿನಂತೆ ಇದೆ.

ತಿಥಲಿ  ತಿಥಲಿ 
ಗಾಯನ - ಟಿಪ್ಪು, ಸಂಗೀತ ರವೀಂದ್ರನಾಥ್ 
ಸಾಹಿತ್ಯ - ಕೆ ಕಲ್ಯಾಣ್ 
ಟಿಪ್ಪು ಹಾಗೂ ಸಂಗೀತರವರು ಹಾಡಿರುವ ಈ ಗೀತೆ ಆರಕ್ಕೇರದೆ ಮೂರಕ್ಕಿಳಿಯದಂತಿದೆ. ಕಲ್ಯಾಣರ ಸಾಹಿತ್ಯವೂ ಬದಲಾದ ಇಂದಿನ ಹವಾಗುಣಕ್ಕೆ ಹೊಂದಿಕೊಂಡಂತಿದೆ.ಸಾಧಾರಣ ಯುಗಳ ಗೀತೆಯಾಗಿದ್ದೂ ತೆರೆಯ ಮೇಲೆ ಹೇಗೆ ಇರಬಹುದು ಎಂದು ಕಾದು ನೋಡ ಬೇಕಾಗಿದೆ.

What to do? 
ಗಾಯನ - ವಿಜಯ್ ಪ್ರಕಾಶ್  
ಸಾಹಿತ್ಯ - ಯೋಗರಾಜ್ ಭಟ್
ಹರಿ, ವಿಜಯ್ ಹಾಗೂ ಭಟ್ಟರ ಸಮಾಗಮದ ಮತ್ತೊಂದು ಗೀತೆ. ಗುಂಡು ಹಾಕುತ್ತಾ, ಹುಡುಗೀರ ಬಗೆಗಿನ ಹುಡುಗರ  ವಿರಹದ ಗೀತೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನೃತ್ಯಕ್ಕೆ, ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಗೀತೆ.

ಜಗದೋದ್ಧಾರನ
ಗಾಯನ - ಕಾರ್ತಿಕ್ , ವಾಣಿ ಹರಿಕೃಷ್ಣ 
ಸಾಹಿತ್ಯ - ಪುರಂದರ ದಾಸರು 
ಪುರಂದರ ದಾಸರ ಪ್ರಸಿದ್ಧ ಗೀತೆಗಳಲ್ಲಿ ಒಂದಾದ, ಮೈ ಆಟೋಗ್ರಾಫ್ ಚಿತ್ರದಲ್ಲಿ ಬಳಕೆಯಾದ ಗೀತೆ ಮತ್ತೆ ಇಲ್ಲಿ ಕೇಳ ಸಿಗುತ್ತದೆ. ಈ ಬಾರಿ ಕಾರ್ತಿಕ್ ಹಾಗೂ ವಾಣಿ ಹರಿ ಕೃಷ್ಣರ ಧ್ವನಿಯಲ್ಲಿ ಮೂಡಿ ಬಂದಿರುವ ಗೀತೆ ಹಿಂದಿಗಿಂತಲೂ ಹೆಚ್ಚು ಆಪ್ತವಾಗುತ್ತದೆ. ಚಿತ್ರದಲ್ಲಿ ಹೇಗೆ ಎಲ್ಲಿ ಮೂಡಿ ಬಂದಿರಬಹುದೆಂಬ ಕುತೂಹಲ ಮೂಡಿಸುತ್ತದೆ.

ರನ್ನ ಥೀಮ್ 
ಕೊನೆಯಲ್ಲಿ ಬರುವ ರನ್ನ ಥೀಮ್ ಹರಿ ಕೃಷ್ಣರ ಹಳೆಯ ಥೀಮ್ ಗೀತೆಗಳನ್ನು ನೆನಪಿಸುತ್ತದೆ. ನಾಯಕನ ಎಂಟ್ರಿ ಅಥವಾ ಅವನ ಕಾರ್ಯ ವೈಖರಿಯನ್ನು ಪರಿಚಯಿಸುವ ಎಂದಿನ ಥೀಮ್ ಗೀತೆಗಳಂತೆ ಇಲ್ಲಿಯೂ ಲವಲವಿಕೆ ಇದೆ.

-ಪ್ರಶಾಂತ್ ಇಗ್ನೇಷಿಯಸ್

Thursday 5 March 2015

ಈ ಸಂಭಾಷಣೆ….ಇದು ಮೊಬೈಲುಗಳ ಸಂಭಾಷಣೆ

(ಸುಮಾರು ರಾತ್ರಿ 2ರ  ಸಮಯ. ಮನೆಯೊಂದರಲ್ಲಿ ಎಲ್ಲರೂ ಮಲಗಿದ್ದಾರೆ. ಆಗ ಮನೆಯ ಮೊಬೈಲ್ ಗಳೆಲ್ಲಾ ಸಭೆ ಸೇರಿವೆ, ಎಲ್ಲಾ ಮೊಬೈಲುಗಳ ಮುಖವೂ (Display) ಸೊರಗಿ ಹೋಗಿವೆ. ನಿದ್ದೆ ಇಲ್ಲದೆ ಬಾಡಿ ಹೋದ ಮುಖದ ತುಂಬೆಲ್ಲಾ ಗೀರು, ಏಟು.. ರಾತ್ರಿ ಆಗಿರೋದರಿಂದ ಕೈ ಕೋಳದಂತೆ ಪ್ರತಿ ಮೊಬೈಲ್ ಗೂ chargerಗಳ ವೈಯರನ್ನು ನೇತು ಹಾಕಲಾಗಿದೆ. ಆದರೂ ಹೇಗೋ ಸಮಯ ಮಾಡಿಕೊಂಡು ಕಷ್ಟ ಸುಖ ಹಂಚಿಕೊಳ್ಳುತ್ತಿವೆ ಮೊಬೈಲುಗಳು.....)

ಸ್ಮಾರ್ಟ್ ಫೋನ್ 1: 
ಏನಪ್ಪ ತುಂಬಾ Tired ಆದಂಗಿದೆ....

ಸ್ಮಾರ್ಟ್ ಫೋನ್ 2:
Tired ಏನ್ ಬಂತು.....ಸಾಯೋದೊಂದು ಬಾಕಿ, ಆಗಲಪ್ಪ ಈ ಕಷ್ಟ ತಡೆಯೋಕೆ ಆಗೊಲ್ಲ......

ಸ್ಮಾರ್ಟ್ ಫೋನ್ 1:
ಅದು ಸರಿ ಅನ್ನು, ನಮ್ಮೆಲ್ಲರದೂ ಅದೇ ಪಾಡು.  ಸ್ವಲ್ಪ ಆದ್ರು ಮನಷತ್ವ ಬೇಡ್ವ ಈ ಮನುಷ್ಯರಿಗೆ?
                                   
ನಾರ್ಮಲ್ ಫೋನ್ :
ಸ್ವಲ್ಪ ಮೆತ್ತಗೆ ಮಾತಾಡಪ್ಪ, ನಿದ್ದೇಲ್ಲಿ ಇದ್ದು ಮತ್ತೆ ನಮ್ಮನ್ನ ಇಟ್ಕೊಂಡು ಒತ್ತಕ್ಕೆ ಶುರು ಮಾಡ್ತಾರೆ

ಸ್ಮಾರ್ಟ್ ಫೋನ್ 1:
ಹೌದಪ್ಪ, ಎದ್ದ್ ತಕ್ಷಣ first ಮುಟ್ಟ್ ನೋಡ್ಕೊಳೋದೆ ನಮ್ಮನ್ನ!!!

ಸ್ಮಾರ್ಟ್ ಫೋನ್ 2: 
ನನಗಂತೂ ಜ್ವರ ಬಂದಂಗೆ ಹಾಗಿದೆ, ಮಾತಾಡಿ ಮಾತಾಡಿ ನಮ್ಮ್ ಹಿಂದೆ ಎಲ್ಲಾ ಬಿಸಿ ಮಾಡಿಬಿಡ್ತಾರೆ. ಸ್ವಲ್ಪ ತಣ್ಣಗೆ ಮಾಡ್ಕೊಳೋಣ ಅಂದ್ರೆ ರಾತ್ರಿ ಎಲ್ಲಾ charger ಬೇರೇ ಹಾಕಿರ್ತಾರೆ....

ನಾರ್ಮಲ್ ಫೋನ್:         
ಥೂ ಇವರ ಬೆರೆಳ್ ಸವದೋಗಾ.....

ಸ್ಮಾರ್ಟ್ ಫೋನ್ 1:
ಹೂ.. ಸವ್ದೋಗುತ್ತೆ…ನಮ್ಮ screen ಸವ್ದೋಗುತ್ತೆ ಅಷ್ಟೆ… factoryಇಂದ ಬಂದಾಗ ಹೇಗಿದ್ದೆ  ನಾನು , ಇವರ ಕೈ ಸೇರಿ ಹೆಂಗಾಗಿದ್ದೀನಿ ನೋಡು ನಾರ್ಮಲ್ ಫೋನ್ ನಾನು ಅಷ್ಟೇ, ಬಂದಾಗ ಎಷ್ಟು ಚೆನ್ನಾಗಿದ್ದೆ, ಈಗ ಮೈ ಮೇಲಿನ ನಂಬರೆಲ್ಲಾ ಅಳ್ಸೋಗಿದೆ

ಸ್ಮಾರ್ಟ್ ಫೋನ್ 2:

ಲೇ ನೀನು ಮಾಮೂಲಿ ಫೋನು,  ನಿನಗೇ ಅಷ್ಟು ಕಷ್ಟ ಇರೋವಾಗ , ಸ್ಮಾರ್ಟ್ ಫೋನ್ ನಮಗೆ ಹೆಂಗೆ ಆಗಬೇಡ?

ಸ್ಮಾರ್ಟ್ ಫೋನ್ 1:      

ಅದೇ ಮತ್ತೆ.. ನಿನ್ನ ಬರೀ ಫೋನು ಮೆಸ್ಸೇಜ್ ಗೇ ಉಪಯೋಗಿಸ್ತಾರೆ, ನಮ್ನ ಯಾವ್ ಯಾವ್ದಕ್ಕೆ ಉಪಯೋಗಿಸ್ತಾರೆ ಅಂತೆ ಈ ಬಾಯಲ್ಲಿ ಹೇಳೋಕೆ ಆಗೊಲ್ಲ ಬಿಡು

ನಾರ್ಮಲ್ ಫೋನ್ : 

ಆಹಾ     ನನ್ನ್ ಮಕ್ಳಾ … ಮೊದಲು ಬಂದಾಗ ನಮ್ನ ನೋಡಿ ರೇಗಿಸ್ತಿದ್ರಿ.. ನೀವೇ ದೊಡ್ಡು ಸ್ಮಾರ್ಟ್ ಅಂತಾ ..ಈಗ ಅನುಭವಿಸಿ

ಸ್ಮಾರ್ಟ್ ಫೋನ್ 2:    

ಹೌದಪ್ಪ ಏನ್ ಮಾಡೋದು, ನೀವುಗಳು ಮಾತ್ರ ಇದ್ದಾಗ ಫೋನು, ಮೆಸ್ಸೇಜು ಸ್ವಲ್ಪ ಹಾಡು ಇದಕ್ಕೆ ಮಾತ್ರ ಮೊಬೈಲ್ ಗಳನ್ನ ಉಪಯೋಗಿಸ್ತಿದ್ರು, ಕಂಪನಿಗಳು ನಮ್ಮನ್ನ ತಯಾರು ಮಾಡೋಕೆ ಶುರು ಆದ್ಮೇಲೆ ಆಯ್ತು ನೋಡಪ್ಪ….

ಸ್ಮಾರ್ಟ್ ಫೋನ್ 1: 

ಈ ವಾಟ್ಸ್ ಆಪ್ಪ್ ಬಂದ ಮೇಲಂತೂ ನಮ್ಮ ಪಾಡು ಯಾಕೆ ಹೇಳ್ತೀಯಾ. ರಾತ್ರಿ ಹಗಲು ಬಿಡದೆ ನಮ್ಮ ಮುಖ ತಿವಿತ್ತಾರೆ.

ಸ್ಮಾರ್ಟ್ ಫೋನ್ 2:      

ಮೊದಲು ಮೆಸೇಜ್ ಮಾಡೋವಾಗ ಭಯ ಭೀತಿ ಇತ್ತು ಬಿಲ್ಲು ಜಾಸ್ತಿ ಬರುತ್ತೆ ಅಂತಾ, ಈಗ ನೋಡ್ರಪ್ಪ ಭಯನೂ ಇಲ್ಲ , ಭೀತಿನೂ ಇಲ್ಲ. ಸಮಯ ಸಂದರ್ಭ ಅಂತೂ ಇಲ್ವೇ ಇಲ್ಲ ನಾರ್ಮಲ್ ಫೋನ್ ಯಾವಾಗ್ ನೋಡಿದ್ರೂ ಕುಟ್ಟ್ತಾ ಇರೋದೇ ಕೆಲ್ಸ

ಸ್ಮಾರ್ಟ್ ಫೋನ್ 1:

ಸರಿ ಯಾವ್ದಾದ್ರೂ ಒಳ್ಳೆ ವಿಚಾರ ಮಾತಾಡಿದ್ರೆ ಅಂತೂ ಪರವಾಗಿಲ್ಲ, ಬರೀ ಕೆಲ್ಸಕ್ಕೆ ಬಾರದೆ  ಇರೋದೆ….

ಸ್ಮಾರ್ಟ್ ಫೋನ್ 1:

ಆಗೇನಿಲ್ಲ , ನಿಜಕ್ಕೂ ಒಳ್ಳೆ ಕೆಲ್ಸಗಳಿಗೂ ಉಪಯೋಗ ಮಾಡ್ಕೊಬಹುದು ನಮ್ಮನ್ನ, ಆದರೆ ಮಂಗನ ಕೈಗೆ ಸಿಕ್ಕ ಮಾಣಿಕ್ಯ ಆಗೋಗಿದ್ದೀವಿ ನಾವು

ನಾರ್ಮಲ್ ಫೋನ್ :

ನೀವು ಬಂದ ಮೇಲೆ ಸಾಮಾನ್ಯ ಫೋನಾದ ನಮಗಂತೂ ಮರ್ಯಾದೆನೇ ಇಲ್ಲ ಬಿಡು. ಅಯ್ಯೋ ಮೊನ್ನೆ ಒಂದು ಹುಡುಗಿ         ನನ್ನ ನೋಡಿ ಇದರಲ್ಲಿ ಕಲರಿಲ್ಲ, ಫೇಸ್ ಬುಕ್ ಇಲ್ಲ, ವಾಟ್ಸ್ಅಪ್ಪ್ ಇಲ್ಲ, ಇದೂ ಒಂದು ಫೋನಾ ಅಂತಾಳೆ…ಕಾಲ್ ಮಾಡೋದು ಬಿಟ್ಟು ಎಲ್ಲಾ ಬೇಕು ಅವಳಿಗೆ ಫೋನಲ್ಲಿ

ಸ್ಮಾರ್ಟ್ ಫೋನ್ 1:

ಇನ್ನು ಸ್ವಲ್ಪ ದಿನ ಬಿಟ್ರೆ, ಇದರಲ್ಲಿ ಬಟ್ಟೆ ಒಗಿಬಹುದಾ? ಮಸಾಲೆ ಅರಿಬಹುದಾ ಅಂತನೂ ಕೇಳ್ತವೆ

ಸ್ಮಾರ್ಟ್ ಫೋನ್ 2:

ಹುಡುಗ್ರುದಂತೂ ಇನ್ನೂ ಮೋಸಪ್ಪ, ಈ ಗಾಡೀಲಿ ಹೋಗೊವಾಗ ಕೆನ್ನೆ, ಭುಜ ಮಧ್ಯೆ ನಮ್ಮನ್ನಾಕ್ಕೊಂಡು ಮಾತಾಡ್ಕೊಂಡು ಹೋಗ್ತಾವೆ




ಸ್ಮಾರ್ಟ್ ಫೋನ್ 1:

ಸರಿಯಾಗಿ ಮುಖ ತೊಳ್ದಿರಲ್ಲಾ, ಗಡ್ಡ ಶೇವ್ ಮಾಡ್ಕೊಂಡಿರಲ್ಲ…ಥೂ..ನಮ್ಮ ಸ್ಪೀಕರ್ ಒಳೆಗೆಲ್ಲಾ ಸಣ್ಣ ಸಣ್ಣ ಕೂದಲು…..

ಸ್ಮಾರ್ಟ್ ಫೋನ್ 2:

ಮೊನ್ನೆ ಹಿಂಗೇ ಕತ್ತು ವಾಲ್ಸ್ ಕೊಂಡು ಹೋಗಿ ಯಾರೋ   ರೋಡಲ್ಲಿ ನಡ್ಕೊಂಡು ಹೋಗ್ತಿರೋರಿಗೆ ಗುದ್ದ್ ಬಿಟ್ಟ ನಮ್ಮ ಓನರ್ರು. ಗುದ್ದಿದ್ದ ಆ ಯಮ್ಮನೂ ಫೋನಲ್ಲಿ ಮಾತಾಡ್ಕೊಂಡು ಹೋಗ್ತಿದ್ಲು, ಒಂದು ನಿಮಿಷ ಅಂತಾ ಫೋನಲ್ಲಿ ಹೇಳಿ ಇವನಿಗೆ ಬಾಯಿಗೆ ಬಂದಂಗೆ ಬೈದು ಮತ್ತೆ ಮಾತಾಡ್  ಕೊಂಡು ಹೋದ್ಲು. ಪೋಲಿಸ್ ಬಂದು “ಎಲ್ಲಾ ಈ ಹಾಳಾದ್ ಫೋನಿಂದ” ಅಂತ ನನ್ನ ಬೈದ
       
ಸ್ಮಾರ್ಟ್ ಫೋನ್ 1:
ಇವರು ಮಾಡೋ ತಪ್ಪಿಗೆ ನಾವು ಬೈಸ್ಕೋಬೇಕು

ಸ್ಮಾರ್ಟ್ ಫೋನ್ 2:
ಆಹಾ ನನ್ನ ಓನರ್ರು ಇದ್ದಾಳಲ್ಲ ಹುಡುಗಿ, ಅವರಪ್ಪ ಇವಳ ಹುಟ್ಟು ಹಬ್ಬಕ್ಕೆ ಅಂತಾ ನನ್ನ ತಕ್ಕೊಟ್ರು.  ಅವಳ ಇನ್ನೊಂದು ಹುಟ್ಟು ಹಬ್ಬ ನಾನು ನೋಡಲ್ಲ ಬಿಡು.. ಹಂಗೆ ಮಾಡಾಕಿದ್ದಾಳೆ ನನ್ನ.

ಸ್ಮಾರ್ಟ್ ಫೋನ್ 1:
ಅದೇನು ಮಾತಾಡ್ತಾರೋ…ದಿನ ಎಲ್ಲಾ ಜೊತೆಗೆ ಇರ್ತಾರೆ, ಆ ಕಡೆ ಹೋಗ್ತಾ ಇದ್ದಂಗೆ ಮತ್ತೆ                                          ಶುರು ಮಾಡ್ಕೋತಾರೆ ಊಟ ಆಯ್ತಾ, ನಿದ್ದೆ ಆಯ್ತಾ ಅಂತ. ಕಿವಿ ಕಚ್ಚ್ ಬಿಡ್ಬೇಕು ಅನ್ಸುತ್ತೆ.

ಸ್ಮಾರ್ಟ್ ಫೋನ್ 2:
ಈ ಹಾಡುಗಳನ್ನ ಕೇಳೋದ್ ಬೇರೆ …ಆ ಹಾಡುಗಳನ್ನ ಜೋರಾಗಿ ಹಾಕಿ ಹಾಕಿ ನನ್ನ ಸ್ಪೇರ್ ಪಾರ್ಟ್ಸ್ ಎಲ್ಲಾ ಹಾಳಾಗ್ ಹೋಗಿದೆ.

ಸ್ಮಾರ್ಟ್ ಫೋನ್ 1:
ನಮ್ದೂ ಅದೇ ಗೋಳಪ್ಪ. ಮೊನ್ನೆ ಹಾಡ್ ಹಾಕ್ಕೊಂಡು ಹಂಗೆ ನಡ್ಕೊಂಡು ಹೋಗ್ತಿದ್ದ ನಮ್ಮ್ ಯಜಮಾನ. ಮುಂದೆ ಮೋರಿ ಕಲ್ಲು ತೆಗೆದಿದ್ರು. ಜನ ಎಲ್ಲಾ ಕೂಗ್ತಿದ್ರು ’ಮೋರಿ ಮೋರಿ’ ಅಂತಾ, ಹಂಗೆ ಡ್ಯಾನ್ಸ್ ಮಾಡ್ಕೊಂಡು ಬಿದ್ದೇ ಬಿಟ್ಟ ಮೋರಿಗೆ. ಸಂತೋಷ ಏನೂಂದ್ರೆ ಬಿದ್ದು ಮೈ ಕೈ ಎಲ್ಲಾ ರಕ್ತ ಬಂದ್ರೂ, “ನನ್ನ್ ಫೋನ್ ಎಲ್ಲಿ ಎಲ್ಲಿ “ ಅಂತ ನನ್ನ ಬಗ್ಗೆ ಕೇಳ್ತಿದ್ದ

ನಾರ್ಮಲ್ ಫೋನ್ :
ನಾನಿದಿದ್ರೆ ಕೇಳ್ತಾ ಇರಲಿಲ್ಲ ಪಾಪಿಗಳು, ನಾರ್ಮಲ್ ಫೋನ್ ಬಿಡು ಅಂತ ಮೋರಿಲೇ ಬಿಟ್ಟು ಬರ್‍ತಿದ್ರು.

ಸ್ಮಾರ್ಟ್ ಫೋನ್ 1:
ನಿಂದೆ ಸ್ವಲ್ಪ ಆರಾಮ್ ಬಿಡಪ್ಪ.. ನಮಷ್ಟು ಕೆಲ್ಸ ಇಲ್ಲ.

ನಾರ್ಮಲ್ ಫೋನ್:
ಏನ್ ಆರಾಮು? ನಮ್ಮಂತವರನ್ನೆಲ್ಲಾ ಈ ವಯಸ್ಸಾದವರಿಗೆ ಕೊಟ್ಟು ಬಿಟ್ಟಿರ್‍ತಾರೆ. ಅವರು ನಮ್ಮ ನಂಬರ್ ಗಳನ್ನು  ಒತ್ತದ್ದು ನೋಡಬೇಕು ನೀನು. ಒಳಗೆ ಇರೋ circuit ಎಲ್ಲಾ ಕೈಗೆ ಬರಬೇಕು ಹಂಗೆ ಒತ್ತುತ್ತಾರೆ. ಸೈಲಂಟ್ ಮೋಡಲ್ಲಿ ಇಡೋಕೆ ಬರೋಲ್ಲ, ಒಂದು ಫೋನು ಬಂದ್ರೆ ಸಾಕು ಇಡೀ ಏರಿಯಾಗೆ ಕೇಳಿಸ್ ಬೇಕು. ಮೊನ್ನೆ ನಮ್ಮ ಬಾಸು ನನ್ನ ಯಾವ್ದೋ ಭಾಷಣಕ್ಕೆ ಕರ್ಕೊಂಡು ಹೋಗಿದ್ದ. ಮನೆಯಿಂದ ದೊಡ್ಡ ಬಾಸ್, ಅವರ ಹೆಂಡ್ತಿ ಫೋನ್ ಬಂತು ನೋಡು, ಎಲ್ಲಾ ನನ್ನ ಬಯ್ಯೋಕೆ ಶುರು ಮಾಡಿದ್ರು, ಬಿಸಾಕ್ರಿ ಫೋನು ಅಂತಾ.. “ಮುಚ್ರಯ್ಯ ಸಾಕು ಅನಿಸ್ತು” ಯಾಕೆ ಅಂತ ಸುಮ್ನೆ ಆದೆ. ಇನ್ಮೇಲೆ ಯಾವ್ದಾದ್ರು important ಕಾಲ್ ಬರಲಿ, ನಾನೇ dead ಆಗ್ ಬಿಡ್ತೀನಿ.

ಸ್ಮಾರ್ಟ್ ಫೋನ್ 1:
ನಿನಗೆ ದೊಡ್ಡೋರಾ ಕಾಟ, ನಮ್ಗೆ ಮಕ್ಕಳ ಕಾಟ ಬೇರೆ. ನಮ್ಮ ಯಜಮಾನ office ಯಿಂದ ಬರ್‍ತಾ ಇದ್ದ ಹಾಗೆ ಫೋನ್ ಎತ್ತಿ ಮಕ್ಕಳಿಗೆ ಕೊಡ್ತಾನಪ್ಪ. ಅವು ಮಕ್ಕಳೇನಯ್ಯಾ? ರಾಕ್ಷಸರು ..ಥೂ... ನನಗ್ ಬೇಕು ನನಗ್ ಬೇಕು ಅಂತಾ ಕಿತ್ಲಾಡ್ತವೆ. ಮೊನ್ನೆ ಹಂಗೆ ಜಗಳ ಆಡ್ಕೊಂಡ್ ಆಡ್ಕೊಂಡು ಮನೆ ಸೊಪ್ಪು ಸಾರಲ್ಲಿ ನನ್ನ ಬೀಳಿಸ್ ಬಿಟ್ವು. ಥೂ ಮೈಯೆಲ್ಲಾ ಸೊಪ್ಪು. ಕೋಪ ಬಂದು ಕೆಲ್ಸ ಮಾಡೋದೆ ನಿಲ್ಲಿಸ್ ಬಿಟ್ಟೆ. ಅಮೇಲೆ ರಿಪೇರಿ ಮಾಡಿಸ್ದ ನನ್ನ..

ಸ್ಮಾರ್ಟ್ ಫೋನ್ 2:
ಹೌದಪ್ಪ, ನಮ್ಮ್ ಒಳಗೆ ಇರೋ ಗೇಮ್ಸೆಲ್ಲಾ ಗೊತ್ತು ಅವಕ್ಕೆ. ಮನೆಯಿಂದ ಹೊರಕ್ಕೆ ಹೋಗೊಲ್ಲ, ಯಾವಾಗ್ಳೂ ನಮ್ಮನ್ನ ಹಾಕ್ಕೊಂಡು ಉಜ್ಜ್ ತಿರೋದೆ…. ಸರಿಯಾಗಿ ಆಡೋಲ್ಲ ಆಮೇಲೆ ಗೇಮಲ್ಲಿ ಸೋತ್ರೆ.. ಅಪ್ಪ ಮೊಬೈಲ್ ಚೆನ್ನಾಗಿಲ್ಲ ಬೇರೆ ತಗೋ ಅನ್ನೋದು

ಸ್ಮಾರ್ಟ್ ಫೋನ್ 1:
ಗೇಮ್ಸ್ ಆಡೋಕೆ ಬಿಟ್ರೆನೇ ಊಟ ಮಾಡೋದು. ನಮ್ಮನ್ನ ಇಟ್ಕೋಂಡ್ ಊಟ ಮಾಡೋದು. ಒಂದೊಂದ್ ಸಲ ಅನ್ನ ನೀರು ಎಲ್ಲಾ ನನ್ನೊಳಗೆ ಹೋಗಿ ಬಿಡುತ್ತಪ್ಪ. ನಾರ್ಮಲ್ ಫೋನ್ ನಮಗೂ ರೆಸ್ಟ್ ಬೇಡ್ವಾ, ನಾವೇನ್ charge ಅಗೋದು ಬೇಡ್ವಾ? ಒಂದು ಸಲ ತಗೊಂಡ್ ಮೇಲೆ ಪೂರ್ತಿ ಇವರ ಗುಲಾಮ್ರಾ?

ಸ್ಮಾರ್ಟ್ ಫೋನ್ 1:
ನಾವ್ ಇವರಿಗೆಲ್ಲಿ ಗುಲಾಮ್ರು? ಇವ್ರು ನಮ್ಮ ಗುಲಾಮ್ರು, ಮಾಡೋ ಕೆಲ್ಸ ಎಲ್ಲ ಬಿಟ್ಟು ನಮ್ಮ್ ಹಿಂದೆನೇ ಬಿದಿರ್‍ತಾರೆ

ಸ್ಮಾರ್ಟ್ ಫೋನ್ 2:
ಈಗಂತೂ, ಪಿಚ್ಚರ್ರು, ಗ್ಯಾಸ್, ಬ್ಯಾಂಕು, ಲೈಟು ಬಿಲ್ಲು ಎಲ್ಲದಕ್ಕೂ ನಾವೇ ಬೇಕು ನಾರ್ಮಲ್ ಫೋನ್ ಏನ್ ನಮ್ಮನ್ನ ಬಿಟ್ರೆ ಜೀವನನೇ ಇಲ್ಲ ಅನ್ನೋ ಹಾಗೆ. ಮಧ್ಯೆದಲ್ಲಿ ಕರೆನ್ಸಿ ಮುಗ್ದೋಬೇಕು ಅವಾಗ ಇವರ ಮುಖ ನೋಡ್ಬೇಕು..

ಸ್ಮಾರ್ಟ್ ಫೋನ್ 1:
ನಮ್ಮನ್ನ charge ಮಾಡೋವಾಗ್ಲೂ ಏನಪ್ಪ ಇವರ ಗೋಳು,ಆವಗ್ಲೂ ಮಾತಾಡ್ ಬೇಕಾ? ನಾರ್ಮಲ್ ಫೋನ್ ಅದಕ್ಕೆ ನಮ್ಮವನೊಬ್ಬ ಮೊನ್ನೆ ಒಳ್ಳೆ ಕೆಲ್ಸ ಮಾಡಿದ್ದಾನೆ. Charge ಮಾಡ್ಕೋಂಡು ಮಾತಾಡ್ತಿನಂತೆ ಒಬ್ಬ, ಕೆನ್ನೆಗೆ ಸರಿಯಾಗಿ ಕರೆಂಟ್ ಹೊಡಿಯೋ ಹಾಗೇ ಮಾಡಿದ್ದಾನೆ.. ಸುಟ್ಟೋಯ್ತೋಂತೆ ಮುಖ

ಸ್ಮಾರ್ಟ್ ಫೋನ್ 1:
ಏನೋಪ್ಪ ಜಗತ್ತು ಎಷ್ಟು ಚೆನ್ನಾಗಿದೆ, ನೋಡ್ರೋ ಅಂದ್ರೆ ನೋಡಲ್ಲ, ಎಲ್ಲಾ ಫೋಟೋನೇ ಹಿಡಿಬೇಕು. ನನ್ನೊಳಗಂತೂ ಅದೆಷ್ಟು ಫೋಟೊಗಳು ತುಂಬಿಸಿದ್ದಾರೆ ಅಂದ್ರೆ ನಾನು ಎಷ್ಟು ಭಾರ ಇದ್ದೀನೋ ನನಗೆ ಗೊತ್ತಿಲ್ಲ

ಸ್ಮಾರ್ಟ್ ಫೋನ್ 2:
ಅದರಲ್ಲಿ ಈ Selfieಗಳು ಬೇರೆ. ಎಲ್ಲಿ ಹೋದ್ರೂ ಎಲ್ಲರಿಗೂ ಗೊತ್ತಾಗ್ ಬೇಕಲ್ಲಾ?angle angle ನಲ್ಲಿ ಹಿಡಿಯೋದು ಆ ಫೇಸ್ ಬುಕ್ಕಿಗೆ ಹಾಕೋದು. ಈಗೀಗ ನಾವು ಕನ್ನಡಿ ಬೇರೆ ಆಗೋಗಿದ್ದೀವಿ. ವಿಡಿಯೋ ಆನ್ ಮಾಡ್ಕೋಳೋದು ಮೇಕಪ್ಪ್ ಮಾಡ್ಕೋಳೊದು. ಸರಿ ಹೋಯ್ತು.

ಸ್ಮಾರ್ಟ್ ಫೋನ್ 1:
ಹಿಂಗೆ ಮಾಡ್ಕೊಳ್ಳೋವಾಗ್ಲೇ ನನ್ನ ಯಾರೋ ಕದ್ದು ಮಾರಿಕೊಂಡಿದ್ದು, ಈಗ ನಾನು ಇರೋದು ಮೂರನೇ ಬಾಸ್ ಹತ್ರ.

ನಾರ್ಮಲ್ ಫೋನ್ ಹೋಗ್ಲಿ ಬಿಡ್ರಪ್ಪ, ಯಾರತ್ರ ಹೇಳ್ಕೊಳಣ್ಣ ನಮ್ಮ problem. ನಂದಂತೂ ಮುಗಿತಾ ಬಂತು ಜೀವನ, ಇನ್ನೊಂದು ಎರಡು ನಂಬರ್ ಅಳಿಸೋದ್ರೆ , ನೆಮ್ಮದಿಯಿಂದ ಕಣ್ಣ್ ಮುಚ್ಚ್ಕೋತ್ತೀನಿ.

ಸ್ಮಾರ್ಟ್ ಫೋನ್ 2:   
ಆಯ್ಯೋ ನಮ್ದುನೂ ಅಷ್ಟೇ ಬಾರಪ್ಪ.ಮೊದಲಿನ ಥರ ನಾಲ್ಕೈದು ವರ್ಷ ಎಲ್ಲಾ ಬರೋಲ್ಲ ನಾವು. ಬರೋವಾಗ್ಲೇ ಕಂಪನಿಯವರು ಹೇಳಿ ಕಳ್ಸಿದ್ದಾರೆ ಎರಡು ವರ್ಷ ಆದ್ ಮೇಲೆ ನಾಟಕಗಳು ಶುರು ಮಾಡ್ಕೊಳ್ಳಿ ಅಂತಾ

ಸ್ಮಾರ್ಟ್ ಫೋನ್ 1: 
ನನಗೂ ಅಷ್ಟೆ.ಅದಕ್ಕೆ ನಾನು ಒಳ್ಳೆ ಟೈಮ್ ನೋಡ್ಕೊಂಡು ಸ್ವಿಚ್ಚ್ ಆಫ್ ಆಗೋದು, ನೆಟ್ ವರ್ಕ್ ಕೆಡಿಸ್ಕೊಳ್ಳೋದು ಎಲ್ಲಾ ಮಾಡ್ತಿನಿ. ಅವರಿಗೇ ಬೇಜಾರ್ ಆಗಿ ನಮಗೆ ಮುಕ್ತಿ ಕೊಡ್ಲಿ ಅಂತ ನಾರ್ಮಲ್ ಫೋನ್ ನಮಗೇನೋ ಮುಕ್ತಿ ಬಿಡು, ಪಾಪ ಅವರ ಕತೆ ಹೇಳು, ನಮ್ಮಿಂದ ಯಾವಾಗ ಅವರಿಗೆ ಮುಕ್ತಿ?

ಸ್ಮಾರ್ಟ್ ಫೋನ್ 2: 
ನಮ್ಮನ್ನ ಪಕ್ಕಕ್ಕಿಟ್ಟು, ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡು ಕಣ್ಣ್ ಮುಂದೆ ಇರೋ ಪ್ರಕೃತಿ ಪರಿಸರ, ಜನ, ಪ್ರಾಣಿ ವಾತವಾರಣ ಎಲ್ಲಾ ಪ್ರೀತಿಸಿ  ಮನುಷತ್ವ ಕಾಪಾಡ್ ಕೊಂಡ್ರೆ ಉಳಿತ್ತಾರೆ. Selfieಗಳನ್ನ ಕ್ಲಿಕ್ ಮಾಡ್ಕೋಂಡು selfish ಆಗಿ ಮುಂದುವರಿದರೆ ನಮ್ಮ ಥರನೇ ಯಂತ್ರಗಳಾಗ್ತಾರೆ ಅಷ್ಟೆ. ಎಲ್ಲಾ ಅವರ ಕೈಲೇ ಇದೆ.

ಸ್ಮಾರ್ಟ್ ಫೋನ್ 1: 
ಸರಿ .. ಬನ್ರಪ್ಪ ಬೆಳಗಾಯ್ತು ಇನ್ನೂ ಶುರು ನಮ್ಮ ವನವಾಸ…….ದಿನಾ ಎಲ್ಲಾ ಏನೇನು ಕಾದಿದ್ಯೋ?

-ಪ್ರಶಾಂತ್ ಇಗ್ನೇಶಿಯಸ್

Friday 13 February 2015

ವಿಶ್ವಕಪ್ ಕ್ರಿಕೆಟ್ ಹಾಗೂ ಭಾರತ

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರಿಕೆಟ್ ವಿಶ್ವ ಕಪ್ ಬಂದಿದೆ. ಕ್ರಿಕೆಟ್ ಹುಚ್ಚಿನ ಭಾರತದ ಜನರ ದಿನಚರಿ ಕ್ರಿಕೆಟ್ ಮ್ಯಾಚಿನ ವೇಳಾಪಟ್ಟಿಗೆ ಅನುಗುಣವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ಒಂದೆರೆಡು ತಿಂಗಳು ಈ ರೀತಿಯ ಮಾತುಗಳನ್ನು ಕೇಳಬಹುದು :

 ತಂದೆ: ಹೇ ಏನೋ ಇನ್ನೂ ಮಲಗಿದ್ದಿಯಾ, ನಡಿ ನಡಿ ದೇವಸ್ಥಾನಕ್ಕೆ ಹೋಗಿ ಬರೋಣ, ಜವಬ್ದಾರಿ ಇಲ್ಲ, ದೇವರು ದಿಂಡರು ಭಯ ಭಕ್ತಿ ಇಲ್ಲ
ಮಗ : ಅಯ್ಯೋ ಹೋಗಪ್ಪ ನಾನು ದೇವಸ್ಥಾನಕ್ಕೆ ಸಾಯಂಕಾಲ ಹೋಗೀನಿ, ಇವತ್ತು ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಇದೆ
ತಂದೆ : ಹೌದ??? ಸರಿ ನಾನೂ ಸಾಯಂಕಾಲನೇ ಹೋಗ್ತಿನಿ ಬಿಡು..ದೇವಸ್ಥಾನ ರಾತ್ರಿ ತನಕ ತೆಗ್ದಿರುತ್ತೆ

ತಾಯಿ ಮಗಳಿಗೆ : ಅದೇನು ಓದ್ಕೋಬೇಕೋ ಎಲ್ಲಾ ಇವತ್ತೇ ಓದ್ಕೋ ನಾಳೆ ಮ್ಯಾಚ್ ಇದೆ. ಅದಿದ್ರೆ ಬುಕ್ಕ್ ಮುಟ್ಟೋಲ್ಲ ನೀನು.

ಗಂಡ ಹೆಂಡತಿಗೆ : ಅದೇನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲಿ ಟೀವಿ ನೋಡ್ತಿಯೋ ಗೊತ್ತಿಲ್ಲಮ್ಯಾಚ್ ಬಿಟ್ಟು ನಾನು ಬೇರೆ ಚಾನೆಲ್ಲ್ , ಸೀರಿಯಲ್ ಹಾಕೊಲ್ಲ
ಹೆಂಡತಿ ಗಂಡನಿಗೆ : ನೀವು ಅದೇನು ಮಾಡ್ತೀರೋ ಗೊತ್ತಿಲ್ಲ, ಎಲ್ಲಿ ತಿಂತಿರೋ ಗೊತ್ತಿಲ್ಲ, ನಾನೂ ಮ್ಯಾಚ್ ನೋಡ್ಕೊಂಡ್, ಉಪ್ಪಿಟ್ಟು ಬಿಟ್ಟು ಬೇರೆ ಅಡುಗೆ ಮಾಡೊಲ್ಲ

ವೃದ್ಧ ಹೆಂಡತಿ : ರೀ ನೋಡ್ರಿ ನಿಮ್ಮ ಫೋನ್ ಹೊಡ್ಕೊತ್ತಿದೆ, ಮಗ ಅಮೆರಿಕಾ ಇಂದ ಫೋನ್ ಮಾಡಿದ್ದಾನೆ
ವೃದ್ಧ ಗಂಡ   : ಅಯ್ಯೋ ಇರ್‍ಲಿ ಇರೆ, ಒಳ್ಳೆ Power Play ನಡಿವಾಗ್ಲೇ ಯಾವಾಗ್ಲೂ ಫೋನ್ ಮಾಡ್ತಾನೆ, ಅಪ್ಪ ಮಲ್ಗಿದ್ದಾರೆ ಅಂತ ಹೇಳ್ಬಿಡೆ.

ಪಕ್ಕದ ಮನೆಯವರು : ರೀ ಸುಜಾತ , ನೋಡ್ರಿ ನಿಮ್ಮ ಪಾಪು ಮಣ್ಣಲ್ಲಿ ಆಟ ಆಡ್ತಿದೆ, ಮೈಯೆಲ್ಲಾ ಮಣ್ಣ್ ಮಾಡ್ಕೊಂಡಿದೆ
ಸುಜಾತ : ಅಯ್ಯೋ ಆಡ್ಲಿ ಬಿಡ್ರಿ, ನೀರು ಕಾಯ್ಸೋಕ್ಕೆ ಇಟ್ಟಿದ್ದೀನಿ, last 5 overs ನೋಡ್ಕೊಂಡು ಸ್ನಾನ ಮಾಡಿಸ್ತೀನಿ. ಮಕ್ಕಳಿಗೆ ಮಣ್ಣ್ ಒಳ್ಳೆದೇ.

ಇವೆಲ್ಲಾ ತಮಾಷೆ ಅನಿಸಿದರೂ ಭಾರತದ ಮಟ್ಟಿಗೆ ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಕ್ರಿಕೆಟ್ ಆಡುವುದು ಕೆಲವೇ ದೇಶಗಳು ಮಾತ್ರ ಎನ್ನುವುದು ನಿಜವಾದರೂ ಕಳೆದ ವರ್ಷಗಳಲ್ಲಿ ಅದು ಪಡೆದಿರುವ ಜನಪ್ರಿಯತೆ ಅಗಾಧ. ನೂರಾರು ದೇಶಗಳಲ್ಲಿ ಕ್ರಿಕೆಟ್ ಹುಚ್ಚು ಈಗಾಗಲೇ ಹರಡಿ ನಿಂತಿದೆ. ಇನ್ನೂ ಭಾರತಕ್ಕೂ ಕ್ರಿಕೆಟ್ಟಿಗೂ ದಶಕಗಳ ನಂಟಿದ್ದರೂ ಕಳೆದ 30  ವರ್ಷಗಳಲ್ಲಿ ಅದು ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುತ್ತದೆ.

ಅದು 1983ರ ಜೂನ್ 25 ರ ಭಾನುವಾರ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯ. ಭಾರತ ಫೈನಲಿಗೆ ಬಂದಿರುವುದೇ ಅಚ್ಚರಿ, ಅದೃಷ್ಟ ಎಂಬ ಹಿಯಾಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ತನ್ನಗಿಂತ ಬಲಿಷ್ಠವಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಭಾರತ ಫೈನಲ್ ತಲುಪಿತ್ತು. ಎದುರಾಳಿಯಾಗಿದ್ದು ಆ ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್. ಸೋಲ್ಲಿಲ್ಲದ ಸರದಾರರಂತೆ ಮೆರೆಯುತ್ತಿದ್ದ ವಿಂಡೀಸ್ ಆಗಾಗಲೇ ಹಿಂದಿನ ಎರಡೂ ವಿಶ್ವಕಪ್ಪನ್ನು ಗೆದ್ದು ಮೂರನೆಯದತ್ತ ದಾಪುಗಾಲಿಕ್ಕಿತ್ತು. ಎಲ್ಲರೂ ಭಾರತ ಧೂಳಿಪಟವಾಗುತ್ತದೆ ಎಂದು ನಿರೀಕ್ಷಿಸಿದಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 183ಕ್ಕೆ ಔಟಾಗಿತ್ತು.


ಇದನ್ನು ಬೆನ್ನೆತ್ತಿ, ಕೇವಲ 27 ಚೆಂಡುಗಳಲ್ಲಿ 33 ರನು ಚಚ್ಚಿದ್ದ ಅಂದಿನ ಮಿಂಚಿನ ಬ್ಯಾಟ್ಸ್ ಮೆನ್ ವಿವಿಯನ್ ರಿಚರ್ಡ್ಸ್ ಸಿಕ್ಸರ್ ಹೊಡೆಯುವ ಭರದಲ್ಲಿ ಗಾಳಿಯಲ್ಲಿ ಎತ್ತಿದ್ದ ಚೆಂಡು ಮೇಲೆ ಸಾಗುತ್ತಿದ್ದಂತೆ ಎಲ್ಲರ ಕಣ್ಣು ಬೌಂಡರಿಯತ್ತ. ಆದರೆ ನೆಲದ ಮೇಲೆ ಸುಮಾರು 30 ಮೀಟರಿನಷ್ಟು ದೂರ ಚೆಂಡಿನ ಮೇಲೆಯೇ ಕಣ್ಣಿಟ್ಟು ಹಿಂದೆ ಹಿಂದೆ ಓಡಿ ಬರುತ್ತಿದ್ದದ್ದು ಭಾರತದ ನಾಯಕ ಕಪಿಲ್ ದೇವ್. ಅತನೊಬ್ಬ ಅದ್ಭುತ ಫೀಲ್ಡರ್. ಚೆಂಡು ಬೌಂಡರಿ ದಾಟದೇ ಸುರಕ್ಷಿತವಾಗಿ ಕಪಿಲ್ ಕೈ ಸೇರಿತು. ಕ್ರೀಡಾಂಗಣದಲ್ಲಿ ಮಿಶ್ರ ಪ್ರತಿಕ್ರಿಯೆ. ವಿಂಡೀಸ್ ನ  ಪ್ರೇಕ್ಷಕರ ಮುಖದಲ್ಲಿ ದಿಗ್ಭ್ರಮೆ, ಭಾರತದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾ, ಮೈದಾನದೊಳಗೆ ನುಗ್ಗಿ , ಸಿಕ್ಕ ಸಿಕ್ಕವರನ್ನು ಅಪ್ಪಿ ಮುದ್ದಾಡಿದರು.  ತಟಸ್ಥ ಅಭಿಮಾನಿಗಳ ಮನದಲ್ಲಿ ಕಾತರ.
ಮುಂದೆ ಭಾರತ ಪಂದ್ಯ ಗೆದ್ದೇ ಬಿಡುತ್ತದೆ. ಇತಿಹಾಸವೊಂದು ನಿರ್ಮಾಣವಾಗಿ, ಮುಂದೆ ಕ್ರಿಕೆಟ್ ಜಗತ್ತಿನಲ್ಲಾದ ಅನೇಕ ಚಾರಿತ್ರಿಕ
ಬದಲಾವಣೆಗಳಿಗೆ ಈ ಗೆಲುವು ಮುನ್ನುಡಿಯಾಗುತ್ತದೆ. ಮೊದಲೇ ಕ್ರಿಕೆಟ್ ಹುಚ್ಚಿದ್ದ ದೇಶದ ಗಲ್ಲಿ ಗಲ್ಲಿಯಲ್ಲೂ ಆಟಗಾರರು ಹುಟ್ಟಿಕೊಳ್ಳುತ್ತಾರೆ. ಟಿ.ವಿ ಪ್ರೇಕ್ಷಕ ವೃಂದ ದುಪ್ಪಟ್ಟಲ್ಲ ಹತ್ತರಷ್ಟಾಗುತ್ತದೆ.

ಭಾರತ್ದ ಈ ಜಯಭೇರಿ ಅನೇಕ ಬದಲಾವಣೆಗಳನ್ನು ತಂದಿತು. ಇಂಗ್ಲೆಂಡ್ ಬಿಟ್ಟು ಎಂದೂ ಹೊರಗೆ ನಡೆಯದ ವಿಶ್ವಕಪ್ 1987ರಲ್ಲಿ ಭಾರತದ ಉಪಖಂಡದಲ್ಲಿ ನಡೆಯುತ್ತದೆ. ಭಾರತ, ಶ್ರೀಲಂಕಾ, ಪಾಕಿಸ್ತಾನದಲ್ಲಿ ನಡೆದ ಆ ಟೊರ್ನಿ ದೊಡ್ಡ ಮಟ್ಟದ ಯಶಸ್ಸು ಪಡೆದು ಈ ವಿಶ್ವ ಮಟ್ಟದ ಸರಣಿಗಳು ಆಸ್ಟ್ರೇಲಿಯಾ, ಇಂಗ್ಲೆಂಡ್ ಗೆ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಅಳಿಸಿ ಹಾಕುತ್ತದೆ. ಒಂದು ದಿನದ ಕ್ರಿಕೆಟ್ಟಿನಲ್ಲಿ ವೆಸ್ಟ್ ಇಂಡೀಸ್ ನ ಆಧಿಪತ್ಯವನ್ನು ಅಳಿಸಿದ ಭಾರತ, ಕ್ರಿಕೆಟ್ ಆಡಳಿತದಲ್ಲೂ ತಾವು ಸಮರ್ಥರು ಎಂಬುದನ್ನು ಸಾಬೀತು ಪಡಿಸುತ್ತದೆ.

ಮುಂದೆ ಕೇಬಲ್ ಹಾಗೂ ಸ್ಯಾಟಲೈಟ್ ಟಿ.ವಿ ಬಂದ ಮೇಲಂತೂ ಟಿ.ವಿ ಪ್ರೇಕ್ಷಕರಿಂದಾಗಿ ಭಾರತ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗುತ್ತದೆ. ಇಂದು ವಿಶ್ವ ಕ್ರಿಕೆಟ್ ಮೇಲೆ ಭಾರತದ ಪ್ರಭಾವ ಎಷ್ಟಿದೆ ಎಂದರೆ, ಭಾರತ ಕ್ರಿಕೆಟ್ ಪ್ರೇಕ್ಷಕರ ಮೇಲೆಯೇ ಒಂದು ಇಡೀ ಟೋರ್ನಿ ಅವಲಂಬಿತವಾಗಿದೆ. ವಿಶ್ವ ಕ್ರಿಕೆಟ್ ಅನ್ನು ನಡೆಸುತ್ತಿರುವ ಐ.ಸಿ.ಸಿ ಯ ಆದಾಯದಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಪಾಲು ಭಾರತದ ಪ್ರಾಯೋಜಕರಿಂದಲೇ ಬರುತ್ತಿದ್ದೂ, ಭಾರತ ತಂಡದ ಭಾಗವಹಿಸುವಿಕೆಯ ಮೇಲೆ ಅದು ನಿಂತಿದೆ. 2007ರಲ್ಲಿ ಲೀಗ್ ಹಂತದಲ್ಲೇ ಭಾರತ ಸೋತು ಮರಳಿದ ಮೇಲೆ, ವಿಶ್ವಕಪ್ ನ ಮುಂದಿನ ಪಂದ್ಯಗಳು ತನ್ನ ಕಳೆಯನ್ನೇ ಕಳೆದುಕೊಂಡಿದ್ದು ಮಾತ್ರವಲ್ಲದೆ ಟಿ.ವಿ ಪ್ರಾಯೋಜಕರ ನಿರುತ್ಸಾಹವನ್ನು ವಿಶ್ವ ಕ್ರಿಕೆಟ್ ಪ್ರಿಯರು ಮರೆತಿರಲಾರರು.

ಇದು ವ್ಯವಹಾರದ ಮಾತಾದರೆ, ವಿಶ್ವಕಪ್ ಅಂಗಳದ ಆಟದಲ್ಲಿ ಸಹಾ ಭಾರತದ್ದು ಮಿಂಚಿನ ಸಾಧನೆಯೇ. ವೆಸ್ಟ್ ಇಂಡೀಸ್ ನ ಪಾರಪತ್ಯ ಮುರಿದಂತೆ, ಹಿಂದಿನ ಮೂರು ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಗಲೋಟವನ್ನು ಕಳೆದ ವಿಶ್ವಕಪ್ಪಿನ ಕ್ವಾಟರ್ ಫೈನಲ್ಲಿನಲ್ಲಿ ತಡೆದದ್ದು ಸಹಾ ಭಾರತವೇ. ತನ್ನದೇ ನೆಲದಲ್ಲಿ ವಿಶ್ವಕಪ್ ಗೆದ್ದ ಏಕಮೇವ ದೇಶ ಭಾರತ. ಅಷ್ಟು ಮಾತ್ರವಲ್ಲದೆ ಭಾರತದ ಸಚಿನ್ ತೆಂಡೂಲ್ಕರ್ ರದು ವಿಶ್ವಕಪ್ಪಿನಲ್ಲಿ ಅಚ್ಚರಿಯ ಸಾಧನೆ. ಅತಿ ಹೆಚ್ಚು ರನ್ನು, ಅತಿ ಹೆಚ್ಚು ಶತಕ, ಅತಿ ಹೆಚ್ಚು ಅರ್ಧ ಶತಕ, ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ, ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ನ್ ಹೀಗೆ ಸಾಗುತ್ತದೆ ಸಚಿನ್ ಸಾಧನೆ. ಆದರಿಂದಲೇ ಈ ವರ್ಷವೂ ಸೇರಿದಂತೆ ಸಚಿನ್ ವಿಶ್ವಕಪ್ಪಿನ ರಾಯಭಾರಿಯಾಗಿ ಸತತವಾಗಿ ಎರಡನೆಯ ಬಾರಿ ಆಯ್ಕೆಯಾಗಿದ್ದಾರೆ. ಇನ್ನೂ ಭಾರತದ ಸೆಹ್ವಾಗ್, ಯುವರಾಜ್, ಗಂಗೂಲಿ, ಡ್ರಾವಿಡ್, ದೋನಿ ಯಾವಾಗಲೂ ಕ್ರಿಕೆಟ್ ಪ್ರಿಯರ ಅಚ್ಚು ಮೆಚ್ಚಿನ ಆಟಗಾರರು ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಬಾರಿ ವಿರಾಟ್ ಕೊಹ್ಲಿ ವಿಶ್ವವು ಅತ್ಯಂತ ಭರವಸೆಯಿಂದ ನೋಡುತ್ತಿರುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಈ ಬಾರಿಯ ವಿಶ್ವಕಪ್ಪ್ ನಿಜಕ್ಕೂ ಅತ್ಯಂತ ಸ್ಪರ್ಧಾತ್ಮಕವಾದ ಸರಣಿಯಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ತಂಡಗಳಲ್ಲಿಯೂ ಪ್ರತಿಭಾವಂತ ಯುವ ಆಟಗಾರರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ತುದಿಗಾಲಿನಲ್ಲಿ ಇದ್ದಾರೆ. ತನ್ನದೇ ನೆಲದಲ್ಲಿ ಆಡುತ್ತಿರುವ ಅಸ್ಟ್ರೇಲಿಯಾ, ಯುವ ತಂಡವಾದ ನ್ಯೂಜಿಲೆಂಡ್ ಬಲಿಷ್ಠ ತಂಡಗಳೆನಿಸಿಕೊಂಡರೂ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನವನ್ನು ಎಂದಿಗೂ ಸ್ಪರ್ಧೆಯಿಂದ ಹಿಂದೆಗೆಯುವಂತಿಲ್ಲ. ವೆಸ್ಟ್ ಇಂಡೀಸ್ ಕೂಡ ಉತ್ತಮವಾದ ತಂಡವೇ. ಆಸ್ಟ್ರೇಲಿಯಾದ ಪುಟಿದೇಳುವ ಪಿಚ್ ಗಳಲ್ಲಿ ತಂಡಗಳು ಹೇಗೆ ತಮ್ಮನ್ನೇ ಒಗ್ಗಿಸಿಕೊಂಡು ಆಡುತ್ತವೆ ಎನ್ನುವುದರ ಮೇಲೆ ಅವುಗಳ ಯಶಸ್ಸು ಇದೆ.

ಒಟ್ಟಿನಲ್ಲಿ ಮುಂದಿನ ಒಂದು ತಿಂಗಳು ಕ್ರಿಕೆಟ್ ಹಬ್ಬ. ಈ ನಡುವೆ ನಮ್ಮ ವಿದ್ಯಾರ್ಥಿಗಳ ಪರೀಕ್ಷೆಯೂ ಬರುತ್ತದೆ. ಪೋಷಕರಿಗೆ, ಶಾಲೆಯ ಶಿಕ್ಷಕರಿಗೆ ಇದು ಇಕ್ಕಟಿನ ಪರಿಸ್ಥಿತಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ.

ಕೊನೆಯಲ್ಲಿ, ಈ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ನಮ್ಮ ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿಗೆ ವಿಶೇಷವಾಗಿ ಹಾರೈಸೋಣ. ಅವರು ಸಹಾ ತಮ್ಮ ತಂದೆ ರೋಜರ್ ಬಿನ್ನಿಯವರ ರೀತಿಯಲ್ಲಿಯೇ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಆ ಸರಣಿಯಲ್ಲಿ ರೋಜರ್ ಬಿನ್ನಿಯವರೇ ಅತ್ಯಂತ ಯಶಸ್ವಿ ಬೌಲರ್ ಎಂಬುದನ್ನು ಮರೆಯಲು ಸಾಧ್ಯವೇ?


-ಪ್ರಶಾಂತ್ ಇಗ್ನೇಶಿಯಸ್