Wednesday 9 March 2011

ಅವರ ಸಾಧನೆಯ ಹಿಂದೆ ಕನ್ನಡದ ಭಾವ ಇತ್ತೆ ಎನ್ನುವುದೊಂದೇ ಪ್ರಶ್ನೆ!

ಇನ್ಫೋಸೀಸ್ ಎಂಬ ಸಾಫ್ಟ್‌ವೇರ್ ದೈತ್ಯ ಇಂದಿಗೂ ಅಚ್ಚರಿಯೇ. ಕೇವಲ ವ್ಯವಹಾರ/ ವ್ಯಾಪಾರ / ವಾಹಿವಾಟುವಾಗಿರದೆ, ಶಿಸ್ತು, ಸಂಕಲ್ಪ, ಸೌಹಾರ್ಧತೆ ಮತ್ತು ದಿಟ್ಟ ಪರಿಶ್ರಮದ ಫಲ ಇನ್‌ಫೋಸೀಸ್. ಮಾಹಿತಿ ತಂತ್ರಜ್ಞಾನದ ಜಾಗತಿಕ ಅಂಕಣದಲ್ಲಿ ಸ್ಪರ್ಧೆಗೆ ಎದೆ ಏರಿಸಿ ಸಾಧಿಸಿ ಸಾವರಿಸಿಕೊಂಡು ನಿಂತ ಬಹು ದೊಡ್ಡ ಸಂಸ್ಥೆ. ಇದರ ಹುಟ್ಟು -ಒಬ್ಬ ಹುಟ್ಟು ಹಟವಾದಿ ಎನ್ ಆರ್ ನಾರಾಯಣಮೂರ್ತಿಯಿಂದ ಆದದ್ದು ಮತ್ತು ಇವರು ಕನ್ನಡಿಗರು. 
ಆನೇಕಾನೇಕ ದೇಶಗಳಲಿ ಮಾಹಿತಿ ತಂತ್ರಜ್ಞಾನ ಎಂಬುದು ಆದಾಗಲೇ ಬೆಳೆದು ಕವಲೊಡೆದು ಆ ದೇಶಗಳ ಆರ್ಥಿಕತೆಗೆ ನೆರಳಾಗಿತ್ತು. ಆದರೆ ಇತ್ತ ಭಾರತದಲ್ಲಿ "ಜಾಗತಿಕರಣ"ವೆಂಬುದೇನೆಂದೆ ಪರಿಚಯವಿರದ ಕಾಲದಲ್ಲಿ "ಹೊರಗುತ್ತಿಗೆ"ಗೆ (outsourcing) ನಮ್ಮ ನೆಲವನ್ನು ಸಿದ್ಧ ಮಾಡಿಟ್ಟೂಕೊಂಡಿದ್ದರು ಶ್ರೀ ನಾರಾಯಣಮೂರ್ತಿರವರು. ಸಾಫ್ಟ್‌ವೇರ್ ತಂತ್ರಜ್ಞಾನವನ್ನು ತೊಡೆಮೇಲೆ (Laptop) ಇಟ್ಟು ಪೋಷಿಸಿದರು. IT ಜಗತ್ತಿನ ಭೂಪಟದಲಿ ಇಂದು ಬೆಂಗಳೂರು ಒಂದು ದೊಡ್ಡ ಬಿಂದು (ಕೇಂದ್ರ). ಇದು ನಿಜಕ್ಕೂ ನಮ್ಮವರು ಹೆಮ್ಮೆಪಡುವಂತಹ ವಿಷಯವೇ ಸರಿ. ಮಾತ್ರವಲ್ಲ ಈ ಬೆಳವಣಿಗೆ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ. ಇದಕ್ಕೆಲ್ಲ ಕಾರಣಿಭೂತರು ಶ್ರೀ ನಾರಾಯಣಮೂರ್ತಿರವರು ಎಂದು ಮತ್ತೊಮ್ಮೆ ತಿಳಿಯಪಡಿಸಲು ಇಚ್ಛಿಸುತೇನಾದರೂ ಇಂಥ ಸಾಧನೆಯ ಹಿಂದೆ ಅವರಿಗೆ ಕಿಂಚಿತ್ತಾದರೂ ಕನ್ನಡತನದ ಭಾವವಿತ್ತೆ ಎಂಬುವುದೊಂದೇ ಪ್ರಶ್ನೆ!.
ಆ ಸಾಧಕನ ಗೆಲುವಿನಲ್ಲಿ ಎಲ್ಲೂ ನಮ್ಮ ನೆಲ ನಮ್ಮ ಜನ ನಮ್ಮ ಭಾಷೆ ಅನ್ನುವ ಸಣ್ಣ ಸೆಳವು ಇರಲ್ಲಿಲ್ಲ..........:).  
ಮೊದಲನೆಯದಾಗಿ ನಮ್ಮ ನೆಲ : ಇನ್‌ಫೋಸೀಸ್ ಕಛೇರಿಯನ್ನು ಮೊದಲು ಪ್ರಾರಂಭಿಸಿದ್ದು ಪುಣೆಯಲ್ಲಿ. ಆಗ ಕಂಪನಿಯ ಮೊದಲ client ಆಗಿ ಮೈಕೋ -ಬೆಂಗಳೂರು ಆಯ್ಕೆಯಾದ ಕಾರಣಕ್ಕೆ ಕಂಪನಿಯ ಕಛೇರಿಯನ್ನು ಬೆಂಗಳೂರಿಗೆ ವರ್ಗಾಯಿಸುತ್ತಾರೆ ಇನ್ಫಿ ನಾಣಿ. ಇಲ್ಲಿ ತವರಿನ ಬಗ್ಗೆ ಇರಬಹುದಾದ ಯಾವ ವಾತ್ಸಲ್ಯವೂ ಕಾಣುವುದಿಲ್ಲ.  
ನಮ್ಮ ಜನ : ಇನ್ನೂ ಬೆಂಗಳೂರಿನಲ್ಲೇ ತನ್ನ ಸಾಮ್ರಾಜ್ಯವನ್ನು (head quarters) ವಿಸ್ತರಿಕೊಂಡ ಇನ್‌ಫೋಸೀಸ್ ಸಂಸ್ಥೆಯಲ್ಲಿ, ಕನ್ನಡಿಗರು ಭಾಷವಾರು ಶೇಕಡ ಹೆಚ್ಚು ಇರಬಹುದೆಂದು ಭಾವಿಸೋಣ. ಅದರಲ್ಲೂ 25% ಮಾತ್ರ. ಆದರೆ ಅದು ಸ್ಥಳೀಯರು ತನ್ನ ನೆಲದಲ್ಲೇ ಉದ್ಯೋಗ ಬೇಕು ಎಂದು ಕೆಲಸ ಅರಸಿ ಪಡೆದಿರಬಹುದಾದದ್ದು, ಇದು ಸರ್ವೇಸಾಮಾನ್ಯ. ಇಲ್ಲಿ ನಮ್ಮವರು ಎನ್ನುವ ಪ್ರೀತಿ ಎಲ್ಲಿದೆ?  
ನಮ್ಮ ಭಾಷೆ : ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದ ಕವಿ ಕುವೆಂಪು ಕನ್ನಡದ ಕಟ್ಟಾಳುವಾಗಿದ್ದರು. ನಾರಾಯಣಮೂರ್ತಿಯವರು ಕನ್ನಡವನ್ನು ಮೂಟೆಕಟ್ಟಿ ಮೂಲೆಗಿಟ್ಟೂಬಿಟ್ಟರು. ಜಾಗತಿಕ ವಲಯದಲ್ಲಿ ಕನ್ನಡದಿಂದ ಏನೇನು ಮಾಡಲು ಸಾಧ್ಯವಿಲ್ಲ ಎಂದು ಬಿಟ್ಟರು. ಕಡೆಯಪಕ್ಷ ತಾನು ಕರ್ನಾಟಕ ಮಾತೆಯ ಕೂಸು, ಭಾರತ ಜನನಿ ನನ್ನ ಅವ್ವ ಎಂದು ಅಲ್ಲಿ ಇಲ್ಲಿ ಹೇಳಿಕೊಂಡಿದ್ದರೂ ಸಾಕಿತ್ತು ಹೊತ್ತ ತಾಯಿಗೆ ಸಂತೋಷವಾಗುತ್ತಿತು.  
ಕರ್ನಾಟಕ ಸರ್ಕಾರ ಸರಿಯಾದ ಸೌಲಭ್ಯ ಕಲ್ಪಿಸಿಕೊಡದಿದ್ದರೆ ನಮ್ಮ ಸಾಮ್ರಾಜ್ಯವನ್ನು ಇನ್ನೆಲಿಗೋ ವರ್ಗಾಯಿಸಿಬಿಡುತ್ತೇನೆ ಎಂದು ಗುಟುರಿದ್ದರು ಒಮ್ಮೆ. ಇಲ್ಲೆಲಿದೆ ಕನ್ನಡ ನೆಲದ ಮೇಲಿನ ಕಾಳಜಿ?. 
ಇಷ್ಟಾದರೂ 25 ವರ್ಷಗಳ ನಂತರ ನಡೆಯುತಿರುವ ವಿಶ್ವ ಕನ್ನಡ ಸಮ್ಮೇಳನ ಮಹೋತ್ಸವವನ್ನು ನಿಮ್ಮಿಂದ ಉದ್ಘಾಟಿಸಲು ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಅವರ ಔದಾರ್ಯಕ್ಕೆ ಮನ್ನಣೆ ಕೊಟ್ಟು, ಮುಂದಾದರು ಕನ್ನಡಿಗರಾಗಿ ಎಂದು ನಿಮ್ಮಲಿ ನಮ್ಮ ಕಳಕಳಿ. 

- ಸಂತೋಷ್ ಇಗ್ನೇಷಿಯಸ್