Friday 13 February 2015

ವಿಶ್ವಕಪ್ ಕ್ರಿಕೆಟ್ ಹಾಗೂ ಭಾರತ

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರಿಕೆಟ್ ವಿಶ್ವ ಕಪ್ ಬಂದಿದೆ. ಕ್ರಿಕೆಟ್ ಹುಚ್ಚಿನ ಭಾರತದ ಜನರ ದಿನಚರಿ ಕ್ರಿಕೆಟ್ ಮ್ಯಾಚಿನ ವೇಳಾಪಟ್ಟಿಗೆ ಅನುಗುಣವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ಒಂದೆರೆಡು ತಿಂಗಳು ಈ ರೀತಿಯ ಮಾತುಗಳನ್ನು ಕೇಳಬಹುದು :

 ತಂದೆ: ಹೇ ಏನೋ ಇನ್ನೂ ಮಲಗಿದ್ದಿಯಾ, ನಡಿ ನಡಿ ದೇವಸ್ಥಾನಕ್ಕೆ ಹೋಗಿ ಬರೋಣ, ಜವಬ್ದಾರಿ ಇಲ್ಲ, ದೇವರು ದಿಂಡರು ಭಯ ಭಕ್ತಿ ಇಲ್ಲ
ಮಗ : ಅಯ್ಯೋ ಹೋಗಪ್ಪ ನಾನು ದೇವಸ್ಥಾನಕ್ಕೆ ಸಾಯಂಕಾಲ ಹೋಗೀನಿ, ಇವತ್ತು ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಇದೆ
ತಂದೆ : ಹೌದ??? ಸರಿ ನಾನೂ ಸಾಯಂಕಾಲನೇ ಹೋಗ್ತಿನಿ ಬಿಡು..ದೇವಸ್ಥಾನ ರಾತ್ರಿ ತನಕ ತೆಗ್ದಿರುತ್ತೆ

ತಾಯಿ ಮಗಳಿಗೆ : ಅದೇನು ಓದ್ಕೋಬೇಕೋ ಎಲ್ಲಾ ಇವತ್ತೇ ಓದ್ಕೋ ನಾಳೆ ಮ್ಯಾಚ್ ಇದೆ. ಅದಿದ್ರೆ ಬುಕ್ಕ್ ಮುಟ್ಟೋಲ್ಲ ನೀನು.

ಗಂಡ ಹೆಂಡತಿಗೆ : ಅದೇನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲಿ ಟೀವಿ ನೋಡ್ತಿಯೋ ಗೊತ್ತಿಲ್ಲಮ್ಯಾಚ್ ಬಿಟ್ಟು ನಾನು ಬೇರೆ ಚಾನೆಲ್ಲ್ , ಸೀರಿಯಲ್ ಹಾಕೊಲ್ಲ
ಹೆಂಡತಿ ಗಂಡನಿಗೆ : ನೀವು ಅದೇನು ಮಾಡ್ತೀರೋ ಗೊತ್ತಿಲ್ಲ, ಎಲ್ಲಿ ತಿಂತಿರೋ ಗೊತ್ತಿಲ್ಲ, ನಾನೂ ಮ್ಯಾಚ್ ನೋಡ್ಕೊಂಡ್, ಉಪ್ಪಿಟ್ಟು ಬಿಟ್ಟು ಬೇರೆ ಅಡುಗೆ ಮಾಡೊಲ್ಲ

ವೃದ್ಧ ಹೆಂಡತಿ : ರೀ ನೋಡ್ರಿ ನಿಮ್ಮ ಫೋನ್ ಹೊಡ್ಕೊತ್ತಿದೆ, ಮಗ ಅಮೆರಿಕಾ ಇಂದ ಫೋನ್ ಮಾಡಿದ್ದಾನೆ
ವೃದ್ಧ ಗಂಡ   : ಅಯ್ಯೋ ಇರ್‍ಲಿ ಇರೆ, ಒಳ್ಳೆ Power Play ನಡಿವಾಗ್ಲೇ ಯಾವಾಗ್ಲೂ ಫೋನ್ ಮಾಡ್ತಾನೆ, ಅಪ್ಪ ಮಲ್ಗಿದ್ದಾರೆ ಅಂತ ಹೇಳ್ಬಿಡೆ.

ಪಕ್ಕದ ಮನೆಯವರು : ರೀ ಸುಜಾತ , ನೋಡ್ರಿ ನಿಮ್ಮ ಪಾಪು ಮಣ್ಣಲ್ಲಿ ಆಟ ಆಡ್ತಿದೆ, ಮೈಯೆಲ್ಲಾ ಮಣ್ಣ್ ಮಾಡ್ಕೊಂಡಿದೆ
ಸುಜಾತ : ಅಯ್ಯೋ ಆಡ್ಲಿ ಬಿಡ್ರಿ, ನೀರು ಕಾಯ್ಸೋಕ್ಕೆ ಇಟ್ಟಿದ್ದೀನಿ, last 5 overs ನೋಡ್ಕೊಂಡು ಸ್ನಾನ ಮಾಡಿಸ್ತೀನಿ. ಮಕ್ಕಳಿಗೆ ಮಣ್ಣ್ ಒಳ್ಳೆದೇ.

ಇವೆಲ್ಲಾ ತಮಾಷೆ ಅನಿಸಿದರೂ ಭಾರತದ ಮಟ್ಟಿಗೆ ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಕ್ರಿಕೆಟ್ ಆಡುವುದು ಕೆಲವೇ ದೇಶಗಳು ಮಾತ್ರ ಎನ್ನುವುದು ನಿಜವಾದರೂ ಕಳೆದ ವರ್ಷಗಳಲ್ಲಿ ಅದು ಪಡೆದಿರುವ ಜನಪ್ರಿಯತೆ ಅಗಾಧ. ನೂರಾರು ದೇಶಗಳಲ್ಲಿ ಕ್ರಿಕೆಟ್ ಹುಚ್ಚು ಈಗಾಗಲೇ ಹರಡಿ ನಿಂತಿದೆ. ಇನ್ನೂ ಭಾರತಕ್ಕೂ ಕ್ರಿಕೆಟ್ಟಿಗೂ ದಶಕಗಳ ನಂಟಿದ್ದರೂ ಕಳೆದ 30  ವರ್ಷಗಳಲ್ಲಿ ಅದು ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುತ್ತದೆ.

ಅದು 1983ರ ಜೂನ್ 25 ರ ಭಾನುವಾರ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯ. ಭಾರತ ಫೈನಲಿಗೆ ಬಂದಿರುವುದೇ ಅಚ್ಚರಿ, ಅದೃಷ್ಟ ಎಂಬ ಹಿಯಾಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ತನ್ನಗಿಂತ ಬಲಿಷ್ಠವಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಭಾರತ ಫೈನಲ್ ತಲುಪಿತ್ತು. ಎದುರಾಳಿಯಾಗಿದ್ದು ಆ ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್. ಸೋಲ್ಲಿಲ್ಲದ ಸರದಾರರಂತೆ ಮೆರೆಯುತ್ತಿದ್ದ ವಿಂಡೀಸ್ ಆಗಾಗಲೇ ಹಿಂದಿನ ಎರಡೂ ವಿಶ್ವಕಪ್ಪನ್ನು ಗೆದ್ದು ಮೂರನೆಯದತ್ತ ದಾಪುಗಾಲಿಕ್ಕಿತ್ತು. ಎಲ್ಲರೂ ಭಾರತ ಧೂಳಿಪಟವಾಗುತ್ತದೆ ಎಂದು ನಿರೀಕ್ಷಿಸಿದಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 183ಕ್ಕೆ ಔಟಾಗಿತ್ತು.


ಇದನ್ನು ಬೆನ್ನೆತ್ತಿ, ಕೇವಲ 27 ಚೆಂಡುಗಳಲ್ಲಿ 33 ರನು ಚಚ್ಚಿದ್ದ ಅಂದಿನ ಮಿಂಚಿನ ಬ್ಯಾಟ್ಸ್ ಮೆನ್ ವಿವಿಯನ್ ರಿಚರ್ಡ್ಸ್ ಸಿಕ್ಸರ್ ಹೊಡೆಯುವ ಭರದಲ್ಲಿ ಗಾಳಿಯಲ್ಲಿ ಎತ್ತಿದ್ದ ಚೆಂಡು ಮೇಲೆ ಸಾಗುತ್ತಿದ್ದಂತೆ ಎಲ್ಲರ ಕಣ್ಣು ಬೌಂಡರಿಯತ್ತ. ಆದರೆ ನೆಲದ ಮೇಲೆ ಸುಮಾರು 30 ಮೀಟರಿನಷ್ಟು ದೂರ ಚೆಂಡಿನ ಮೇಲೆಯೇ ಕಣ್ಣಿಟ್ಟು ಹಿಂದೆ ಹಿಂದೆ ಓಡಿ ಬರುತ್ತಿದ್ದದ್ದು ಭಾರತದ ನಾಯಕ ಕಪಿಲ್ ದೇವ್. ಅತನೊಬ್ಬ ಅದ್ಭುತ ಫೀಲ್ಡರ್. ಚೆಂಡು ಬೌಂಡರಿ ದಾಟದೇ ಸುರಕ್ಷಿತವಾಗಿ ಕಪಿಲ್ ಕೈ ಸೇರಿತು. ಕ್ರೀಡಾಂಗಣದಲ್ಲಿ ಮಿಶ್ರ ಪ್ರತಿಕ್ರಿಯೆ. ವಿಂಡೀಸ್ ನ  ಪ್ರೇಕ್ಷಕರ ಮುಖದಲ್ಲಿ ದಿಗ್ಭ್ರಮೆ, ಭಾರತದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾ, ಮೈದಾನದೊಳಗೆ ನುಗ್ಗಿ , ಸಿಕ್ಕ ಸಿಕ್ಕವರನ್ನು ಅಪ್ಪಿ ಮುದ್ದಾಡಿದರು.  ತಟಸ್ಥ ಅಭಿಮಾನಿಗಳ ಮನದಲ್ಲಿ ಕಾತರ.
ಮುಂದೆ ಭಾರತ ಪಂದ್ಯ ಗೆದ್ದೇ ಬಿಡುತ್ತದೆ. ಇತಿಹಾಸವೊಂದು ನಿರ್ಮಾಣವಾಗಿ, ಮುಂದೆ ಕ್ರಿಕೆಟ್ ಜಗತ್ತಿನಲ್ಲಾದ ಅನೇಕ ಚಾರಿತ್ರಿಕ
ಬದಲಾವಣೆಗಳಿಗೆ ಈ ಗೆಲುವು ಮುನ್ನುಡಿಯಾಗುತ್ತದೆ. ಮೊದಲೇ ಕ್ರಿಕೆಟ್ ಹುಚ್ಚಿದ್ದ ದೇಶದ ಗಲ್ಲಿ ಗಲ್ಲಿಯಲ್ಲೂ ಆಟಗಾರರು ಹುಟ್ಟಿಕೊಳ್ಳುತ್ತಾರೆ. ಟಿ.ವಿ ಪ್ರೇಕ್ಷಕ ವೃಂದ ದುಪ್ಪಟ್ಟಲ್ಲ ಹತ್ತರಷ್ಟಾಗುತ್ತದೆ.

ಭಾರತ್ದ ಈ ಜಯಭೇರಿ ಅನೇಕ ಬದಲಾವಣೆಗಳನ್ನು ತಂದಿತು. ಇಂಗ್ಲೆಂಡ್ ಬಿಟ್ಟು ಎಂದೂ ಹೊರಗೆ ನಡೆಯದ ವಿಶ್ವಕಪ್ 1987ರಲ್ಲಿ ಭಾರತದ ಉಪಖಂಡದಲ್ಲಿ ನಡೆಯುತ್ತದೆ. ಭಾರತ, ಶ್ರೀಲಂಕಾ, ಪಾಕಿಸ್ತಾನದಲ್ಲಿ ನಡೆದ ಆ ಟೊರ್ನಿ ದೊಡ್ಡ ಮಟ್ಟದ ಯಶಸ್ಸು ಪಡೆದು ಈ ವಿಶ್ವ ಮಟ್ಟದ ಸರಣಿಗಳು ಆಸ್ಟ್ರೇಲಿಯಾ, ಇಂಗ್ಲೆಂಡ್ ಗೆ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಅಳಿಸಿ ಹಾಕುತ್ತದೆ. ಒಂದು ದಿನದ ಕ್ರಿಕೆಟ್ಟಿನಲ್ಲಿ ವೆಸ್ಟ್ ಇಂಡೀಸ್ ನ ಆಧಿಪತ್ಯವನ್ನು ಅಳಿಸಿದ ಭಾರತ, ಕ್ರಿಕೆಟ್ ಆಡಳಿತದಲ್ಲೂ ತಾವು ಸಮರ್ಥರು ಎಂಬುದನ್ನು ಸಾಬೀತು ಪಡಿಸುತ್ತದೆ.

ಮುಂದೆ ಕೇಬಲ್ ಹಾಗೂ ಸ್ಯಾಟಲೈಟ್ ಟಿ.ವಿ ಬಂದ ಮೇಲಂತೂ ಟಿ.ವಿ ಪ್ರೇಕ್ಷಕರಿಂದಾಗಿ ಭಾರತ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗುತ್ತದೆ. ಇಂದು ವಿಶ್ವ ಕ್ರಿಕೆಟ್ ಮೇಲೆ ಭಾರತದ ಪ್ರಭಾವ ಎಷ್ಟಿದೆ ಎಂದರೆ, ಭಾರತ ಕ್ರಿಕೆಟ್ ಪ್ರೇಕ್ಷಕರ ಮೇಲೆಯೇ ಒಂದು ಇಡೀ ಟೋರ್ನಿ ಅವಲಂಬಿತವಾಗಿದೆ. ವಿಶ್ವ ಕ್ರಿಕೆಟ್ ಅನ್ನು ನಡೆಸುತ್ತಿರುವ ಐ.ಸಿ.ಸಿ ಯ ಆದಾಯದಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಪಾಲು ಭಾರತದ ಪ್ರಾಯೋಜಕರಿಂದಲೇ ಬರುತ್ತಿದ್ದೂ, ಭಾರತ ತಂಡದ ಭಾಗವಹಿಸುವಿಕೆಯ ಮೇಲೆ ಅದು ನಿಂತಿದೆ. 2007ರಲ್ಲಿ ಲೀಗ್ ಹಂತದಲ್ಲೇ ಭಾರತ ಸೋತು ಮರಳಿದ ಮೇಲೆ, ವಿಶ್ವಕಪ್ ನ ಮುಂದಿನ ಪಂದ್ಯಗಳು ತನ್ನ ಕಳೆಯನ್ನೇ ಕಳೆದುಕೊಂಡಿದ್ದು ಮಾತ್ರವಲ್ಲದೆ ಟಿ.ವಿ ಪ್ರಾಯೋಜಕರ ನಿರುತ್ಸಾಹವನ್ನು ವಿಶ್ವ ಕ್ರಿಕೆಟ್ ಪ್ರಿಯರು ಮರೆತಿರಲಾರರು.

ಇದು ವ್ಯವಹಾರದ ಮಾತಾದರೆ, ವಿಶ್ವಕಪ್ ಅಂಗಳದ ಆಟದಲ್ಲಿ ಸಹಾ ಭಾರತದ್ದು ಮಿಂಚಿನ ಸಾಧನೆಯೇ. ವೆಸ್ಟ್ ಇಂಡೀಸ್ ನ ಪಾರಪತ್ಯ ಮುರಿದಂತೆ, ಹಿಂದಿನ ಮೂರು ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಗಲೋಟವನ್ನು ಕಳೆದ ವಿಶ್ವಕಪ್ಪಿನ ಕ್ವಾಟರ್ ಫೈನಲ್ಲಿನಲ್ಲಿ ತಡೆದದ್ದು ಸಹಾ ಭಾರತವೇ. ತನ್ನದೇ ನೆಲದಲ್ಲಿ ವಿಶ್ವಕಪ್ ಗೆದ್ದ ಏಕಮೇವ ದೇಶ ಭಾರತ. ಅಷ್ಟು ಮಾತ್ರವಲ್ಲದೆ ಭಾರತದ ಸಚಿನ್ ತೆಂಡೂಲ್ಕರ್ ರದು ವಿಶ್ವಕಪ್ಪಿನಲ್ಲಿ ಅಚ್ಚರಿಯ ಸಾಧನೆ. ಅತಿ ಹೆಚ್ಚು ರನ್ನು, ಅತಿ ಹೆಚ್ಚು ಶತಕ, ಅತಿ ಹೆಚ್ಚು ಅರ್ಧ ಶತಕ, ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ, ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ನ್ ಹೀಗೆ ಸಾಗುತ್ತದೆ ಸಚಿನ್ ಸಾಧನೆ. ಆದರಿಂದಲೇ ಈ ವರ್ಷವೂ ಸೇರಿದಂತೆ ಸಚಿನ್ ವಿಶ್ವಕಪ್ಪಿನ ರಾಯಭಾರಿಯಾಗಿ ಸತತವಾಗಿ ಎರಡನೆಯ ಬಾರಿ ಆಯ್ಕೆಯಾಗಿದ್ದಾರೆ. ಇನ್ನೂ ಭಾರತದ ಸೆಹ್ವಾಗ್, ಯುವರಾಜ್, ಗಂಗೂಲಿ, ಡ್ರಾವಿಡ್, ದೋನಿ ಯಾವಾಗಲೂ ಕ್ರಿಕೆಟ್ ಪ್ರಿಯರ ಅಚ್ಚು ಮೆಚ್ಚಿನ ಆಟಗಾರರು ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಬಾರಿ ವಿರಾಟ್ ಕೊಹ್ಲಿ ವಿಶ್ವವು ಅತ್ಯಂತ ಭರವಸೆಯಿಂದ ನೋಡುತ್ತಿರುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಈ ಬಾರಿಯ ವಿಶ್ವಕಪ್ಪ್ ನಿಜಕ್ಕೂ ಅತ್ಯಂತ ಸ್ಪರ್ಧಾತ್ಮಕವಾದ ಸರಣಿಯಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ತಂಡಗಳಲ್ಲಿಯೂ ಪ್ರತಿಭಾವಂತ ಯುವ ಆಟಗಾರರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ತುದಿಗಾಲಿನಲ್ಲಿ ಇದ್ದಾರೆ. ತನ್ನದೇ ನೆಲದಲ್ಲಿ ಆಡುತ್ತಿರುವ ಅಸ್ಟ್ರೇಲಿಯಾ, ಯುವ ತಂಡವಾದ ನ್ಯೂಜಿಲೆಂಡ್ ಬಲಿಷ್ಠ ತಂಡಗಳೆನಿಸಿಕೊಂಡರೂ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನವನ್ನು ಎಂದಿಗೂ ಸ್ಪರ್ಧೆಯಿಂದ ಹಿಂದೆಗೆಯುವಂತಿಲ್ಲ. ವೆಸ್ಟ್ ಇಂಡೀಸ್ ಕೂಡ ಉತ್ತಮವಾದ ತಂಡವೇ. ಆಸ್ಟ್ರೇಲಿಯಾದ ಪುಟಿದೇಳುವ ಪಿಚ್ ಗಳಲ್ಲಿ ತಂಡಗಳು ಹೇಗೆ ತಮ್ಮನ್ನೇ ಒಗ್ಗಿಸಿಕೊಂಡು ಆಡುತ್ತವೆ ಎನ್ನುವುದರ ಮೇಲೆ ಅವುಗಳ ಯಶಸ್ಸು ಇದೆ.

ಒಟ್ಟಿನಲ್ಲಿ ಮುಂದಿನ ಒಂದು ತಿಂಗಳು ಕ್ರಿಕೆಟ್ ಹಬ್ಬ. ಈ ನಡುವೆ ನಮ್ಮ ವಿದ್ಯಾರ್ಥಿಗಳ ಪರೀಕ್ಷೆಯೂ ಬರುತ್ತದೆ. ಪೋಷಕರಿಗೆ, ಶಾಲೆಯ ಶಿಕ್ಷಕರಿಗೆ ಇದು ಇಕ್ಕಟಿನ ಪರಿಸ್ಥಿತಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ.

ಕೊನೆಯಲ್ಲಿ, ಈ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ನಮ್ಮ ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿಗೆ ವಿಶೇಷವಾಗಿ ಹಾರೈಸೋಣ. ಅವರು ಸಹಾ ತಮ್ಮ ತಂದೆ ರೋಜರ್ ಬಿನ್ನಿಯವರ ರೀತಿಯಲ್ಲಿಯೇ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಆ ಸರಣಿಯಲ್ಲಿ ರೋಜರ್ ಬಿನ್ನಿಯವರೇ ಅತ್ಯಂತ ಯಶಸ್ವಿ ಬೌಲರ್ ಎಂಬುದನ್ನು ಮರೆಯಲು ಸಾಧ್ಯವೇ?


-ಪ್ರಶಾಂತ್ ಇಗ್ನೇಶಿಯಸ್