Thursday 30 March 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 8 - ’ಅಗೋ ನೋಡಿ ಅಗೋ ನೋಡಿ ಸಾಗುತ್ತಿಹರು ಕ್ರಿಸ್ತರು’

ಸಂವೇದ್ಯ ಧ್ವನಿಸುರಳಿಯ ’ಅಗೋ ನೋಡಿ ಅಗೋ ನೋಡಿ ಸಾಗುತ್ತಿಹರು ಕ್ರಿಸ್ತರು’ ಮತ್ತೊಂದು ಸುಂದರ ಗೀತೆ. ಕ್ರಿಸ್ತನ  ಕೊನೆಯ ಪಯಣದ ದೃಶ್ಯಗಳಂತೂ ಚಿತ್ರದ ಹೈಲೈಟಾಗಿ ಮೂಡಿ ಬಂದಿದೆ. ಯೇಸು ಬಂಧನಕೊಳ್ಳಗಾಗಿ ಶಿಲುಬೆಯನ್ನು ಹೊತ್ತುಕೊಂಡು ಹೋಗುವುದನ್ನು ಹೇಳುವ ಹಾಡಿನ ರೂಪ. ಜೆರುಸಲೇಮ್ ನಗರಕ್ಕೆ ಯೇಸುವನ್ನು ಹುಡುಕಿಕೊಂಡು ಬಂದ ಹೊಸಬನೊಬ್ಬ ಅಲ್ಲಿನ ಸ್ಥಳೀಯನನ್ನು  "ಯೇಸು ಎಲ್ಲಿ"? ಎಂದು ಕೇಳಿದರೆ, ಎಲ್ಲವನ್ನೂ ಬಲ್ಲ ಮತ್ತೊಬ್ಬ  ಕ್ರಿಸ್ತನನ್ನು ತೋರಿಸಿಕೊಂಡು ಹೇಳುವಂತಿದೆ ಈ ಹಾಡು.

೧೯೫೯ರಲ್ಲಿ ಬಿಡುಗಡೆಯಾದ ಬೆನ್‍ಹರ್ ಚಿತ್ರದಲ್ಲಿ ಇದೇ ರೀತಿಯ ದೃಶ್ಯ ಚಿತ್ರದ ಕೊನೆಯ ಭಾಗದಲ್ಲಿ ಬರುತ್ತದೆ. ಅದು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸುವ ದೃಶ್ಯಗಳು.  ಯೇಸುವಿನ ಕಾಲಘಟ್ಟದವನೇ ಆದ ಬೆನ್‍ಹರ್ ನ ಕಥೆಯಾದ ಈ ಚಿತ್ರದಲ್ಲಿ ಯೇಸು ಕ್ರಿಸ್ತ  ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.  ಕಥಾನಾಯಕ ಬೆನ್‍ಹರ್ ತನ್ನ ವಿರೋಧಿಗಳ ಸಂಚಿಗೆ ಬಲಿಯಾಗಿ, ತನ್ನ ದೇಶದಿಂದ ದೂರವಾಗುವ ಸಂದರ್ಭ ಬಂದಿರುತ್ತದೆ.  ಮತ್ತೆ ಮರಳಿ ಬರುವಷ್ಟರಲ್ಲಿ ತಾಯಿ ಹಾಗೂ ತಂಗಿ ಕುಷ್ಠ ರೋಗದಿಂದ ಬಳಲುತ್ತಿರುತ್ತಾರೆ.  ನಜರೇತಿನ ಯೇಸು ಕುಷ್ಠ ರೋಗದವರನ್ನು ಗುಣಪಡಿಸುತ್ತಾರೆ ಎಂದು ಬೆನ್‍ಹರ್ ನ ಹೆಂಡತಿ ಹೇಳುತ್ತಾಳೆ. ಇದೇ ನಂಬಿಕೆಯಿಂದ ಯೇಸುವನ್ನು ಕಾಣುವ ತವಕದಲ್ಲಿ ಇಡೀ ಕುಟುಂಬ ಜೆರುಸಲೇಮ್ ನಗರಕ್ಕೆ ಬರುತ್ತದೆ. 

ಇಡೀ ಜೆರುಸಲೇಮ್ ನಗರದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದೆ. ಅದೇ ದಿನ ಯೇಸುವಿನ ಬಂಧನವಾಗಿ, ಪಿಲಾತನ ತೀರ್ಪಿನ ಪ್ರಕಾರ ಯೇಸುವನ್ನು ಕಪಾಲ ಬೆಟ್ಟಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.  ಎಲ್ಲರೂ ಕ್ರಿಸ್ತನನ್ನು ಶಿಲುಬೆಗೇರಿಸುವ ಸ್ಥಳದಲ್ಲಿ ಸೇರಿದ್ದಾರೆ.  ಬಿಕ್ಷೆ ಬೇಡುವವನೊಬ್ಬ ಜನರೆಲ್ಲಾ ಯೇಸುವಿನ ವಿಚಾರಣೆಯನ್ನು ನೋಡಲು ಹೋಗಿದ್ದರೆ ಎಂದು ಹೇಳುತ್ತಾನೆ. ’ಅಗೋ ನೋಡಿ’ ಗೀತೆಯ ಸಂದರ್ಭವೂ ಅಂತಹುದೇ. 

ಯೇಸು ಭಾರವಾದ ಶಿಲುಬೆಯನ್ನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಬೆನ್‍ಹರ್ ‍ನ ಕುಟುಂಬ ಯೇಸುವನ್ನು ನೋಡುತ್ತದೆ. ಬಹಳ ಸಂಭಾಷಣೆಗಳಿಲ್ಲದ ಈ ದೀರ್ಘ ದೃಶ್ಯಗಳಲ್ಲಿ ಹಿನ್ನಲೆ ಸಂಗೀತ ಹಾಗೂ ಶಬ್ದಗ್ರಹಣೆ ಅದ್ಭುತವಾಗಿದೆ. ೬೦ ವರ್ಷಗಳು ಕಳೆದರೂ ಈ ಚಿತ್ರದ ಹಿನ್ನಲೆ ಸಂಗೀತ ಇನ್ನೂ ಜನಪ್ರಿಯವಾಗಿದೆ. ಈ ದೃಶ್ಯಗಳಿಗೇನಾದರೂ ಕನ್ನಡದ ಯಾವುದಾದರೂ ಹಾಡು ಬಳಸಬಹುದೇನೋ ಎನ್ನಬಹುದಾದರೆ, ಅದು ’ಅಗೋ ನೋಡಿ’ ಗೀತೆ ಎನ್ನಬಹುದು. ’ಆಗೋ ನೋಡಿ’ ಯ ವಾದ್ಯ ಸಂಯೋಜನೆಗೂ ಆ ದೃಶ್ಯಗಳ ಹಿನ್ನಲೆ ಸಂಗೀತಕ್ಕೂ ಒಂದು ರೀತಿಯ ಸಾಮ್ಯತೆಯೂ ಇದೆ.

ಮರಿಯಾಪುರಾ ಮಹಿಮೆ ನಾಟಕದಲ್ಲಿ ಬಳಕೆಯಾದ ಗೀತೆಯಾದುದರಿಂದ ಈ ಗೀತೆಗೆ ಒಂದು ನಾಟಕೀಯತೆಯ, ಮೆಲೋಡ್ರಾಮದ ಸ್ಪರ್ಷವಿದೆ. ಶಿಲುಬೆಯನ್ನು ಹೊತ್ತು ಕೊಂಡು ಹೋಗುತ್ತಿರುವ ಕ್ರಿಸ್ತನ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಒತ್ತಿ ಹೇಳುವಂತೆ ಇದೆ ಈ ಗೀತೆ. ಹಾಗೇ ನೋಡಿದರೆ ಕ್ರಿಸ್ತನ ಇಡೀ ಜೀವನವೇ ಶಿಲುಬೆಯತ್ತ ಪಯಣವೇ ಎನ್ನಬಹುದು. ಅನ್ಯಾಯದ, ದಬ್ಬಾಳಿಕೆಯ ವಿರುದ್ಧ ಧ್ವನಿಯಾದಾಗಲೇ ಸಾವು ಖಚಿತವಾದರೂ ಎಡಬಿಡದೆ ನೊಂದವರ ಪರ ದನಿಗೂಡಿಸಿದವರು ಯೇಸು. ಆ ನಿಟ್ಟಿನಲ್ಲಿ ನೋಡಿದರೆ ಕ್ರಿಸ್ತ ಮೊದಲಿನಿಂದಲೂ ಶಿಲುಬೆಯತ್ತ ಸಾಗಿದವರೇ, ತಮ್ಮ ಶಿಷ್ಯರಿಗೂ, ಹಿಂಬಾಲಕರಿಗೂ ಶಿಲುಬೆಯನ್ನು ಹೊರಲು ಕರೆಕೊಟ್ಟವರು ಅವರು.

ಹೀಗೆ ಕೊನೆಯ ಯೇಸುವಿನ  ಕೊನೆಯ ಪಯಣವನ್ನು ತೋರಿಸುತ್ತಾ ಸಾಗುವ ಗೀತೆ ಮೊದಲೇ ಹೇಳಿದಂತೆ ಯೇಸುವಿನ ಬಳಲಿಕೆಯನ್ನು ಒತ್ತಿ ಹೇಳುತ್ತದೆ. ಈ ಬಳಲಿಕೆ ಕಾರಣಗಳನ್ನು ಪಲ್ಲವಿಯಲ್ಲಿನ ಸಾಹಿತ್ಯವೇ ಹೇಳುತ್ತದೆ. ದಣಿದ ದೇಹಕ್ಕಿಂತ ಯೇಸುವಿನ ನೊಂದ ಮನಸ್ಸು ಹಾಗೂ ಬೆಂದ ಹೃದಯವೇ ಆ ಬಳಲಿಕೆಗೆ ಕಾರಣವೇನೋ.

ಇನ್ನೂ ಚರಣದಲ್ಲಿ ಹೇಗೆ ಸ್ವಂತ ಜನರೇ ಯೇಸುವಿಗೆ ಮುಳುವಾದರು ಎಂಬುದನ್ನು ಹೇಳುತ್ತದೆ. ಮುತ್ತಿಟ್ಟು ತೋರಿಸಿಕೊಟ್ಟ ಶಿಷ್ಯ, ನಾನರಿಯೇ ಎಂದು ನಿರಾಕರಿಸಿದ  ಮತ್ತೊಬ್ಬ ಆಪ್ತ ಶಿಷ್ಯ, ಬಂಧನಕ್ಕೊಳಗಾಗುತ್ತಿದ್ದಂತೆ ದಿಕ್ಕಾಪಾಲಾಗಿ ಹೋದ ಇನ್ನಿರರು, ಬರಬ್ಬಾಸನನ್ನು ಬಿಟ್ಟು ಬಿಡಿ ಎಂದ ಜನರು ಎಲ್ಲರೂ ಇದರಲ್ಲಿ ಭಾಗಿಗಳೇ. ಅಷ್ಟು ಮಾತ್ರವಲ್ಲದೆ ಬೋಧನೆ ಕೇಳಿದ, ಅದ್ಭುತಗಳಿಂದ ಉಪಯೋಗ ಪಡೆದ ಜನರು ಸಹಾ ಯಾವುದೇ ರೀತಿಯ ಸಹಾಯಕ್ಕೆ ಬಾರದೇ ಹೋದರು. 

ಇದಲ್ಲವೂ ಯಾವುದೇ ವ್ಯಕ್ತಿಯನ್ನು ವಿಚಲಿತರನ್ನಾಗಿ ಮಾಡಬಹುದು. ಯೇಸು ಸಹಾ ಇದಕ್ಕೆ ಹೊರತಾಗಿರಲಿಲ್ಲ ಎಂಬ ಸಂದೇಶ ಇಲ್ಲಿದೆ. ಇಲ್ಲಿ ಮತ್ತೊಮ್ಮೆ ಅತ್ಯಂತ ಪರಿಣಾಮಕ್ಕಾರಿಯಾದ ರೂಪಕವನ್ನು ಬಳಸಲಾಗಿದೆ. ನೆರಳು, ಫಲ ನೀಡಬೇಕಾದ ಮನೆಯ ಬಳ್ಳಿ, ಕೊರಳ ಸುತ್ತಿಕೊಳ್ಳುವ ಅದೂ ತಪ್ಪಿಸಿಕೊಳ್ಳಲಾಗದ ವಿಷದ ಪಾಶವಾಗುವ ರೂಪಕ, ಜನರ ಮೋಸದ ಘೋರತೆಯನ್ನು ಸೂಚಿಸುತ್ತದೆ.

ಎರಡನೆಯ ಚರಣ ಮತ್ತಷ್ಟು ಆಳವಾಗಿದೆ.  ಸ್ವರ್ಗದಿಂದ ಭೂಮಿಗೆ ಬಂದ ಅರಸನು ಭೂಮಿಗೆ ಸ್ವರ್ಗದ ಸ್ಪರ್ಷವನ್ನು ನೀಡಬಹುದಿತ್ತೇನೋ. ಆದರೆ ಮನುಜರ ಸ್ವಾರ್ಥದಿಂದ ನರಕವನ್ನು ನೋಡುವಂತಾಯಿತು. ಸ್ವರ್ಗದ ವರವನ್ನು ನೀಡಬಹುದಾದವರೇ ಘೋರ ಮರಣದ ಶಾಪವನ್ನು ಪಡೆದರು. ಪ್ರೀತಿ ಕ್ಷಮೆಯನ್ನು ಪಡೆದ ಜನರು ಪ್ರೀತಿಯನ್ನು ಹಂಚುವ ಬದಲು, ಕ್ಷಮಾಗುಣವನ್ನು ಹೊಂದುವ ಬದಲು ಕಟುಕಾರದ ದ್ವಂದ್ವಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಮಹಿಮೆಯಲ್ಲಿ ಈ ಹಾಡು ಒಂದು ರೀತಿಯ ಶಿಲುಬೆ ಹಾದಿ. ಯೇಸುವಿನ ಯಾತನೆಯನ್ನು ಬಹಳ ಪರಿಣಾಮಕ್ಕಾರಿಯಾಗಿ ತೋರಿಸಲು ಬಳಕೆಯಾಗಿರುವ ಈ ಹಾಡು ನಿಜಕ್ಕೂ ನೋಡುಗರ ಮನವನ್ನು ಕಾಡುತ್ತದೆ. ಸಾಹಿತ್ಯ ಸಂಗೀತ ದೃಶ್ಯ ರೂಪಗಳ ಸಮರ್ಥ ಸಂಗಮಕ್ಕೆ ಉದಾಹರಣೆಯಾಗಿದೆ ಈ ಹಾಡು.

- ಪ್ರಶಾಂತ್ ಇಗ್ನೇಶಿಯಸ್