Tuesday 18 February 2014

ಆಡಿಯೋ ಅನಿಸಿಕೆ : ಉಳಿದವರು ಕಂಡಂತೆ

ತಮ್ಮ ಮೊದಲ ಚಿತ್ರದಿಂದಲೂ ಭರವಸೆ ಮೂಡಿಸಿದ್ದ ರಕ್ಷಿತ್ ಶೆಟ್ಟಿ, ’ಸಿಂಪಲಾಗಿ...’ ಯಿಂದ ಏರಿದ ಎತ್ತರ ಅಷ್ಟೇನು ಸಿಂಪಲ್ಲಲ್ಲ. ಈ ನಡುವೆ ನಿರ್ದೇಶಕರಾಗಿ ಹೊಸ ಚಿತ್ರವನ್ನು ಪ್ರಕಟಿಸಿದಾಗ, ಅದ್ಭುತವೆನಿಸುವಂತ ಟ್ರೈಲರ್ ಬಿಡುಗಡೆ ಮಾಡಿದಾಗ, ’ಸಿಂಪಲ’ನ್ನು ಕಾಣದಿದ್ದ ಅಳಿದುಳಿದವರೂ "ಉಳಿದವರು ಕಂಡಂತೆ’ಯತ್ತ ಈಗ ಮುಖ ಮಾಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯಾಗಿದೆ, ಹೇಗಿದೆ ಎನ್ನುವುದಕ್ಕಿಂತ ಹೀಗೂ ಇರಬಹುದು ಎಂಬಂತೆ ವಿಭಿನ್ನವಾಗಿದೆ ಹಾಡುಗಳು. "ಕಣ್ಣು ನಿನ್ನದಾದರೇನು ನೋಡೋದು ಬೇರೆಯವರನ್ನು, ನೋಡೋದು ಬೇರೆಯವರಾದರೇನು? ಅಲ್ಲಿ ಹುಡ್ಕು ನೀನು ನಿನ್ನತನವನ್ನು" ಎಂಬ ಅರ್ಥದ ಸಾಲುಗಳು ಚಿತ್ರದ ಗೀತೆಯೊಂದರಲ್ಲಿದೆ. ಅಂತೆಯೇ ಚಿತ್ರದ ಹಾಡುಗಳಿಗೆ ತನ್ನದೇ ಆದ ’ತನ’ವಿದೆ.ಅಲ್ಲಿ ತಾಜತನವಿದೆ, ಹೊಸತನವಿದೆ, ದಕ್ಷಿಣ ಕನ್ನಡತನವಿದೆ, ರಕ್ಷಿತನವಿದೆ, ಹೊಸ ಸಂಗೀತ ನಿರ್ದೇಶಕ ಅಜನೀಶರ ತನವಿದೆ, ಹಾಡಿದ ಎಲ್ಲಾ ಗಾಯಕರು ತಮ್ಮ ತನವನ್ನು ಹಾಡುಗಳಲ್ಲಿ ಅಚ್ಚೊತ್ತಿದ್ದಾರೆ. ಹೇಗಿದೆ ಹಾಡುಗಳು ಕೇಳಿ :


ಥೀಮ್ ಆಫ್ ಉಳಿದವರು : ಚಿತ್ರದ ಥೀಮ್ ಸಂಗೀತ ಎಂಬ ಹಣೆಪಟ್ಟಿಯ  ಹಿನ್ನಲೆ ಸಂಗೀತದ  ಈ ಟ್ರ್ಯಾಕ್ ನ ಸಂಗೀತ ಉತ್ತಮವಾಗಿದ್ದೂ, ಮೀನುಗಾರರ,ಹಡಗು ಕಾರ್ಮಿಕರ, ಸಮುದ್ರಯಾನದ ಹಿನ್ನಲೆ ಧ್ವನಿ, ಯಾವುದೋ ಘಟನೆ, ಕಥೆಯನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ಮೆಲ್ಲಗೆ ಬಿಚ್ಚುತ್ತಾ ಹೋಗುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ವಾದ್ಯ ಸಂಯೋಜನೆ.

ಸಮಯದ ತಿರುವು : ಸಿ. ಅರ್.ಬಾಬಿಯವರ ಮಾದಕ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಯ ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತವೂ ಅಷ್ಟೇ ಮಾದಕವಾಗಿದೆ. Knock Knock ಎನ್ನುತ್ತ ಹೃದಯದ ಬಾಗಿಲನ್ನು ತಟ್ಟುತ್ತಲೇ ಮುಗಿದು ಹೋಗುವ ಸುಂದರ ಗೀತೆಗೆ ಮನೋಜವ ಗಲಗಲಿ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಇದ್ದೂ ಇಲ್ಲದಂತಿದೆ.

ರಿಚ್ಚೀಸ್ ಥೀಮ್ : ಮತ್ತೊಂದು  ಹಿನ್ನಲೆ ಸಂಗೀತದ  ಟ್ರ್ಯಾಕ್. ನಡುನಡುವೆ ಮಾತು, ನಗು ಕೇಕೆ,ಎಲ್ಲವೂ ಇದೆ. ಸಂಗೀತ ಏನಿದು ಹೀಗಿದೆ ಎಂದು ನಕ್ಕಿರೋ ಜೋಕೆ!!! ರಪ್ಪನೆ ಕೇಳಿ ಬರುತ್ತದೆ ಏನೋ ಬೋ* ಮಕ್ಳಾ ನಗ್ತೀರಾ? ಶೂಟ್  ಮಾಡಬೇಕಾ?  ಎಂಬ ಉದ್ಘಾರ.

ಹುಲಿವೇಷ : ಈ ಟ್ರ್ಯಾಕ್ ಕೇಳುತ್ತಾ ಕೇಳುತ್ತಾ ನಮ್ಮ ಹಳ್ಳಿ ಜಾತ್ರೆ, ತೇರು, ಮೆರವಣಿಗೆಗಳಲ್ಲಿನ ಬ್ಯಾಂಡ್ ಸೆಟ್ ನೆನಪಿಗೆ ಬರಲಿಲ್ಲವೆಂದರೆ ಕೇಳಿ. ಕ್ಲಾಸ್ ಗುಂಗಿನಲ್ಲೇ ಆರಂಭವಾಗಿ ’ಬಾ ಬಾರೋ ರಣಧೀರ ಹಾಡಿನ ಸಂಗೀತದಿಂದ ಪಕ್ಕಾ ಮಾಸ್ ಗೆ ತಿರುಗಿ ಅಲ್ಲೇ ಮೆರೆದಾಡುತ್ತದೆ. ತಮಟೆ, ಜಲ್ ಜಲ್  ಸದ್ದಂತೂ ಬಾಲ್ಯ  ದಿನಗಳ ನೆನಪತ್ತ  ಕರೆದುಕೊಂಡು ಹೋಗುತ್ತದೆ. ಕೂತ್ತಲ್ಲೇ  ಹುಲಿವೇಷದ  ಒಂದೆರೆಡು steps ಹಾಕುವಂತೆ ಮಾಡುತ್ತದೆ ಈ ಟ್ರ್ಯಾಕ್. ಕೇವಲ ಹಿನ್ನಲೆ ಸಂಗೀತದಲ್ಲೂ ಇಷ್ಟೊಂದು ತುಂಟತನವೇ?

ಕಣ್ಣಾಮುಚ್ಚೆ : ಥೀಮ್ ಸಾಂಗುಗಳ ಭರಾಟೆಯಿಂಡ ಕೇಳುಗರನ್ನು ಮಾಧುರ್ಯದ ಲೋಕಕ್ಕೆ ತಂದು ನಿಲ್ಲಿಸುವ ಗೀತೆಗೆ ಸುನಿಯವರ ಸಾಹಿತ್ಯವಿದೆ. ಶಂಕರ್ ಮಹಾದೇವನ್ ಗೆ ಸಾಟಿಯಾಗಿ ವಾಣಿ ಧ್ವನಿಗೂಡಿಸಿದ್ದಾರೆ.ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತದಲ್ಲಿ ಸಂಗೀತ ನಿರ್ದೇಶಕ ತೋರಿರುವ ಸಂಯಮ ಅದ್ಭುತ. ಉತ್ತಮ ಸಾಹಿತ್ಯ, ಅದ್ಭುತ ಗಾಯನದ ನಡುವೆ ಅಜನೀಶ್ ತಮ್ಮ ಸಂಗೀತದಿ೦ದ ಎತ್ತರದಲ್ಲಿ ನಿಲ್ಲುತ್ತಾರೆ.

ಮಳೆ ಮರೆತು : ಅಜನೀಶ್ ತಮ್ಮ ವಾದ್ಯ ಸಂಯೋಜನೆಯಿಂದ ಬೆರಗುಗೊಳಿಸಿದರೆ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಮೋಡಿ ಮಾಡುತ್ತದೆ. ಉತ್ತಮ ರಾಗಕ್ಕೆ ಒಳ್ಳೆಯ ಸಾಹಿತ್ಯ ದೊರಕಿ ವಿಜಯ್ ಪ್ರಕಾಶರ ಧ್ವನಿ ಸಿಕ್ಕ ಮೇಲೆ ಕೇಳಬೇಕೇ? ವಿಜಯ್ ಸಂದರ್ಭಕ್ಕೆ ತಕ್ಕಂತೆ ತಮ್ಮ ಧ್ವನಿಯನ್ನು ಬದಲಾಯಿಸಿಕೊಂಡು ಹಾಡಿದಂತೆ ಭಾಸವಾಗುವುದು ಒಂದು ಉತ್ತಮ ಬೆಳವಣಿಗೆ.

ಘಾಟಿಯ ಇಳಿದು : ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ, ಮಣ್ಣಿನ ವಾಸನೆ ಎಲ್ಲವೂ ಒಟ್ಟಾಗಿ ಉತ್ತಮವಾಗಿ ಜೊತೆಗೂಡಿ ಬಂದಾಗ ಒಂದು ಗೀತೆ ಏನಾಗಬಹುದೋ, ಇಲ್ಲಿ ಅದೇ ಆಗಿದೆ. ಹೆಚ್ಚಿಗೆ ಬರೆಯಲು ಏನಿಲ್ಲ. ಕೇಳಿ ಆನಂದಿಸಬೇಕಷ್ಟೇ. ರಕ್ಷಿತ್ ರ ಭರವಸೆಯ ಸಾಹಿತ್ಯದ ನಡುವೆ ಬರುವ ತುಳು ಮಾತುಗಳು ಗೀತೆಗೆ ಮೆರಗು ತಂದುಕೊಟ್ಟಿದೆ. ಹಾಡಿನ ವಿಡಿಯೋ ನೋಡಿ

ಪೇಪರ್: ಅಜನೀಶ್ ಲೋಕನಾಥರ ಉತ್ತಮವಾದ ಸಂಗೀತವನ್ನು ಮೀರಿ ನಿಲ್ಲುವಂತೆ ಮೋಡಿ ಮಾಡುವುದು ಗಾಯನ ಹಾಗೂ ರಕ್ಷಿತರ  ತುಂಟ ಸಾಹಿತ್ಯ. 'ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಕಟ್ಟಲಿ ಬಡವನಯ್ಯಾ? ಎನುತ್ತಲೇ ಗೀತೆ ಅನೇಕ ಅರ್ಥಗಳನ್ನು ಕಟ್ಟಿಕೊಡುತ್ತದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ವಿಭಿನ್ನ  

ಕಾಕಿಗ್ ಬಣ್ಣ ಕಾಂತ :  ಗೀತೆ ಕೇಳುತ್ತಾ ಕೇಳುತ್ತಾ ಯಾರಿಗೆ ಹೆಚ್ಚು ಮಾರ್ಕ್ಸ್, ಯಾರಿಗೆ ಹೆಚ್ಚು ಅಭಿನಂದನೆ ಸಲ್ಲಬೇಕು ಎಂಬ ಗೊಂದಲ ಮೂಡದಿದ್ದರೆ ಕೇಳಿ. ರಕ್ಷಿತ್ ರ ಸಾಹಿತ್ಯದ ಒಂದೊಂದು ಪದಕ್ಕೂ ಶ್ರೇಯಾ ಘೋಶಾಲ್ ಎಂಬ ಅದ್ಘುತ ಪ್ರತಿಭೆ ತಂದು ಕೊಟ್ಟಿರುವ ಜೀವ,ಮೆರುಗು, ಬಣ್ಣಕ್ಕೆ ಎಲ್ಲೂ ಭಂಗ ಬರದಂತೆ ಸೈಡಲ್ಲಿದ್ದುಕೊಂಡು ಮಜಾ ತೆಗೆದುಕೊಂಡಿರುವ ಅಜನೀಶರ ಸಂಗೀತ ಖುಷಿ ಕೊಡುತ್ತದೆ. ಕೊನೆಗೆ ಶ್ರೇಯಾಗೆ hats off  ಹೇಳುತ್ತದೆ ಮನಸ್ಸು.  ಈ ಹಾಡನ್ನು ನೋಡಿ

The Final Countdown: ಮೊದಲೇ ಹೇಳಿದಂತೆ ಇಲ್ಲಿನ ಪ್ರತಿಯೊಂದು ಹಿನ್ನಲೆ ಸಂಗೀತವೂ, ಪ್ರತಿಯೊಂದು ಟ್ರ್ಯಾಕ್ಕೂ ಯಾವುದೋ ಒಂದು ಕಥೆಯನ್ನೋ ಘಟನೆಯನ್ನೋ ತೀವ್ರವಾಗಿ ಹೇಳುತ್ತಾ ಹೋಗುತ್ತದೆ. ಈ ಟ್ರ್ಯಾಕ್ ಸಂಗೀತವೂ ಅದರಿಂದ ಹೊರತಾಗಿಲ್ಲ. ನಿರ್ದೇಶಕ ರಕ್ಷಿತ್ ಸಂಗೀತದಲ್ಲೇ ಕಥೆಯನ್ನು ಮುನ್ನಡೆಸುವ ನಿರ್ಧಾರ ಮಾಡಿದಂತಿದೆ.

ಉಳಿದವರು ಕಂಡಂತೆ : ಎಲ್ಲಾ ಗೀತೆಗಳ ನಂತರ ಉಳಿದುಕೊಂಡಂತೆ ಬರುವ ಈ ಗೀತೆಗೆ ಸುನಿಯವರ ಸಾಹಿತ್ಯ ಸಕ್ಕತ್ತಾಗಿಯೇ ಒದಗಿ ಬಂದಿದೆ.ಮಿಕ್ಕೆಲ್ಲಾ ಗೀತೆಗಳಲ್ಲಿ ಇನ್ನೇನಾದರೂ ಉಳಿದುಕೊಂಡಿದ್ದರೆ ತಗ್ಗೊಳ್ಳಿ ಎಂಬಂತಿದೆ ಈ ಗೀತೆ. ಸ್ವತ: ಅಜನೀಶ್ ಲೋಕನಾಥ್ ರ ಧ್ವನಿ ಭಿನ್ನವಾಗಿದ್ದೂ ಗೀತೆಗೆ ಪೂರಕವಾಗಿದೆ.

ಉಳಿದವರು ಕಂಡಂತೆ ಟೈಟಲ್ ಟ್ರ್ಯಾಕ್ : "ಡೀಸಲ್ ಗಾಡಿ ಪೆಟ್ರೋಲ್ ಅಲ್ಲಿ ಓಡೊಲ್ವಂತೆ : ಟ್ರೈ ಮಾಡಿ ನೋಡೋಕೆ ಇವರಿಗೇನು ಧಾಡಿಯಂತೆ" ಎಂಬ ಯೋಗರಾಜ ಭಟ್ಟರ ಸಾಲು ಈ ಗೀತೆಗೆ ಹೇಳಿ ಮಾಡಿಸಿದಂತಿದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲದರಲ್ಲೂ ತುಂಟತನ, ಹೊಸತನ ಬೆರೆಸಿ ಟ್ರೈ ಮಾಡಿ ನೋಡಲಾಗಿದೆ ಹಾಗೂ ಅದರಿಂದಲೇ ಇಷ್ಟವೂ ಆಗುತ್ತದೆ.  A Fitting finish to the album.

http://kannada.oneindia.in/movies/music/audio-review-of-kannada-movie-ulidavaru-kandante-081825.html

-ಪ್ರಶಾಂತ್ ಇಗ್ನೇಷಿಯಸ್