Tuesday 28 February 2017

ನನ್ನ ಮೆಚ್ಚಿನ ಫಾ.ಚಸರಾ ಗೀತೆಗಳು - ಭಾಗ 7 - "ಎಲ್ಲೋ ಒಂದು ಲೋಕವಿದೆ ನಮ್ಮ ಮುಂದಿನ ಬದುಕು ಅಲ್ಲಿದೆ"

ನನ್ನ ಮೆಚ್ಚಿನ ಫಾ.ಚಸರಾ ಗೀತೆಗಳು - ಭಾಗ 7

ಫಾ.ಚಸರಾರವರ "ಎಲ್ಲೋ ಒಂದು ಲೋಕವಿದೆ ನಮ್ಮ ಮುಂದಿನ ಬದುಕು ಅಲ್ಲಿದೆ" ಗೀತೆಯ ಜನಪ್ರಿಯತೆಯ ಬಗ್ಗೆ ನಾನು ಹೆಚ್ಚು ಹೇಳುವಂತಾದೇನಿಲ್ಲ. ಆದರೆ ಅವರ ಗೀತೆಗಳಲ್ಲಿ ಅತ್ಯಂತ ಭಾವಪೂರ್ಣ ಗೀತೆಗಳಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

ಹಾಗೇ ನೋಡಿದರೆ ಮೇಲ್ನೋಟಕ್ಕೆ ಈ ಗೀತೆ ಒಂದು ವಿಷಾದ ಗೀತೆಯಂತೆ ಕಂಡು ಬಂದರೂ, ಭರವಸೆಯ ಪ್ರತೀಕದ ಗೀತೆಯಂದೇ ಹೇಳಬಹುದು. ಈ ಲೋಕದ ಎಲ್ಲವೂ, ಎಲ್ಲರೂ ನಮ್ಮ ಕೈ ಬಿಟ್ಟರೂ, ದೇವರೊಬ್ಬರಿದ್ದರೆ ಸಾಕು ಎಂಬ ಆಶಯ ಒಂದು ಕಡೆ ಇದೆ. ಆದರೆ ಗೀತೆಯ ಪ್ರಮುಖ ಭಾವವೆಂದರೆ ಈ ಲೋಕ, ಈ ಲೋಕದ ಜಂಜಾಟವೆಲ್ಲವೂ ಮುಂದಿನ ಲೋಕದ ಅಗಾಧತೆಯ ಮುಂದೆ ಕ್ಷಣಿಕ ಎಂಬುದು. ಈ ಅಗಾಧತೆ ಇರುವುದು ಕೇವಲ ಗಾತ್ರ, ಸಮಯದ ಅಳತೆಗೋಲಿನಲ್ಲಲ್ಲ , ಆದರೆ ಅಲ್ಲಿನ ಮೌಲ್ಯಗಳಲ್ಲಿ. ದ್ವೇಷ-ರೋಷ, ಸ್ವಾರ್ಥ-ಮೋಸಗಳ ಸಣ್ಣತನಗಳನ್ನು ಮೀರಿದ ಅಗಾಧ ಪ್ರೀತಿಯ ಲೋಕ ಅದು ಎಂಬುದನ್ನು ಕೇವಲ ಎರಡು ಆರಂಭಿಕ ಸಾಲುಗಳಲ್ಲಿ ಅದ್ಭುತವಾಗಿ ಹಿಡಿದಿಡುತ್ತದೆ ಗೀತೆ.

ಗೀತೆಯಲ್ಲಿ ಫಾ.ಚಸರಾರ ಸಾಹಿತ್ಯ  ಎಂದಿನಂತೆ ಸರಳವಾದರೂ ಗಾಢ ಹಾಗೂ ಆಳ. ತಮ್ಮದೇ ಅನುಭವವೇನೋ ಎಂದು ಪ್ರತಿ ಕೇಳುಗನಿಗೂ ಅನ್ನಿಸುವಷ್ಟು ಆತ್ಮೀಯ. ಸಂಗೀತ ಹಾಗೂ ರಾಗ ಸಂಯೋಜನೆ ಪ್ರವೀಣ್ ಸ್ಟೀಫನ್ ದತ್ತ್ ರವರದಾಗಿದ್ದೂ, ಅಚ್ಚರಿ ಎಂಬಂತೆ ಅವರದೇ ದನಿ ಗೀತೆಗೆ ಲಭಿಸಿದೆ. ಈ ರೀತಿಯ ಅಚ್ಚರಿಗಳನ್ನು ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರದ ಹಾಡುಗಳಲ್ಲಿ ನೀಡುತ್ತಿದ್ದದ್ದನ್ನು  ನಾವು ಗಮನಿಸಬಹುದು. ನಿಜಕ್ಕೂ ಸ್ಟೀಫನ್ ರವರ ಗಾಯನದಿಂದ ಈ ಗೀತೆಗೆ, ಸಂಗೀತ ಸಂಯೋಜನೆಗೆ, ಅದರಲ್ಲೂ ಗೀತೆಯ ಆಶಯ ಹಾಗೂ ಭಾವಕ್ಕೆ ಸಿಗಬೇಕಾದ ಮೌಲ್ಯ ಸಿಕ್ಕಿದೆ ಎಂದೇ ಹೇಳಬಹುದು. ಹಾಡಿನಲ್ಲಿ ಬಳಕೆಯಾಗಿರುವ ವಾದ್ಯ ಸಂಯೋಜನೆ, ವಾದ್ಯಗಳು, ಕೋರಸ್ ಎಲ್ಲವೂ ಕೇಳುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿದೆ. ಫಾ.ಚಸರಾರವರ ಸಾಹಿತ್ಯ ಅವರದೇ ಸ್ವಗತವೇನೋ ಎನಿಸುವಷ್ಟು ಗಾಢ.

ಮೊದಲ ಚರಣದಲ್ಲಿ ಬರುವ ’ಅದೊಂದು ದೂರ ಪಯಣ’ ’ಅದೊಂದು ಕತ್ತಲ ದಾರಿ’ ಎಂಬ ಸಾಲುಗಳು, ಜೀವನದಲ್ಲಿ ಪ್ರತಿಯೊಬ್ಬರು ಎದುರಿಸುವ ಸವಾಲು, ನಡೆಸುವ ಹೋರಾಟದ ಪ್ರತೀಕದಂತಿದೆ. ದಾರಿಯ ಗುರಿ ಸೇರದೇ ಇದ್ದರೂ, ಸೋತರೂ ದೇವರೊಬ್ಬರಿದ್ದರೆ ಸಾಕು ಎಂಬ ಭಾವಕ್ಕೆ ನಿಲ್ಲದೆ, ದೇವರು ಸ್ಪರ್ಷಕ್ಕೆ ಸಿಗುವಷ್ಟು ಹತ್ತಿರವಿರಬೇಕು ಎಂಬ ಕಳಕಳಿಯ ಪ್ರಾರ್ಥನೆ ಇದೆ.   ಇನ್ನೂ ಎರಡನೆಯ ಚರಣದಲ್ಲಿನ ಸಾಲುಗಳು ಕಳೆದುಕೊಂಡ, ಕಳಚಿಕೊಂಡ ಗೆಳತನಕ್ಕೆ ಮರುಗುತ್ತಾ, ಆ ಗಾಯಕ್ಕೆ ದೈವ ಸಾಂತ್ವನದ ಲೇಪನವನ್ನು ಕೇಳಿಕೊಳ್ಳುತ್ತದೆ. ’ದೇವ ಬಾರ ನನ್ನ ಕರೆದೊಯ್ಯ ಬಾರ’ ಎಂಬುವಲ್ಲಿ ಸ್ಟೀಫನ್ ರವರ ಗಾಯನ ಮನಕಲಕ್ಕುವಂತಿದೆ.

ಈ ರೀತಿಯ ಹಾಡುಗಳ ಹುಟ್ಟು, ಹಿಂದಿನ ಸ್ಪೂರ್ತಿ, ಸಿದ್ಧತೆಗಳ ಬಗ್ಗೆ ನನಗದೂಂದು ತೀರದ ಕುತೂಹಲ.  ಇನ್ನೂ ಅನೇಕರದೂ ಇರಬಹುದು. ಇದೇ ಕುತೂಹಲದಿಂದ  ಗೀತೆಯಲ್ಲಿ ಪೂರ್ಣವಾಗಿ ಭಾಗಿಯಾಗಿದ್ದ ಸ್ಟೀಫನ್‍ರವರನ್ನು ಗೀತಯ ಬಗ್ಗೆ ಸಂಪರ್ಕಿಸಿದಾಗ, ಅನೇಕ ಆಸಕ್ತಿಕರ ವಿಷಯಗಳು ಹೊರಬಂದವು. ಅದನ್ನೇ ಸಂದರ್ಶನದ ರೂಪದಲ್ಲಿ ನಿಮ್ಮ ಮುಂದೆ ಇಡುವ ಪ್ರಯತ್ನ ಇಲ್ಲಿದೆ.

ಪ್ರಶ್ನೆ : ಈ ಗೀತೆಯ ಬಗ್ಗೆ ನಿಮ್ಮ ಹಾಗೂ ಫಾ.ಚಸರಾರವರ ಮೊದಲ ಮಾತುಕತೆಯ ನೆನಪುಗಳನ್ನು ಹೇಳಬಲ್ಲಿರಾ?

ಸ್ಟೀಫನ್ ದತ್ತ್ : 2002ರಲ್ಲಿ ಫಾ ಚಸರಾ ಈ ಗೀತಯೆನ್ನು ಒಳಗೊಂಡ ಧ್ವನಿಸುರಳಿಯ ಬಗ್ಗೆ  ನನ್ನನ್ನು ಸಂಪರ್ಕಿಸಿದರು. ಸಾಮಾನ್ಯವಾಗಿ ಹಾಡುಗಳ ಹಿನ್ನಲೆ ಸಂಗೀತವನ್ನು ನಾನು ಮನೆಯಲ್ಲೇ ಸಂಯೋಜಿಸುತ್ತೇನೆ. ಇದರಿಂದ ಸ್ಟುಡಿಯೋ ಸಮಯ ಉಳಿತಾಯವಾಗುತ್ತದೆ. ಫಾ.ಚಸರಾರವರ ಗೀತೆಗಳಿಗೆ ಸಂಯೋಜನೆ ಮಾಡುವಾಗಲೆಲ್ಲಾ ಅವರ ಜೊತೆ ಅಧ್ಯಾತ್ಮಿಕ ಹಾಗೂ ತತ್ವದ ವಿಷಯದಲ್ಲಿ ಸುಂದರವಾದ ಮಾತುಕತೆ ನಡೆಯುತ್ತಿತ್ತು.

ಪ್ರಶ್ನೆ : ಈ ಗೀತೆಯ ಸಂಯೋಜನೆ ಹೇಗೆ ಪ್ರಾರಂಭವಾಯಿತು?

ಸ್ಟೀಫನ್ ದತ್ತ್ : ಫಾದರ್ ರವರ ಅತ್ಯಂತ ಸುಂದರ ರಚನೆಗಳಿಗೆ ಸಂಗೀತ ಸಂಯೋಜನೆ ಮಾಡುವ ಸದವಕಾಶ ನನಗೆ ದೊರಕಿದೆ. ಅವರ ಅನೇಕ ಗೀತೆಗಳು ನನ್ನ ಅಚ್ಚುಮೆಚ್ಚಿನದವು. ಅದರಲ್ಲೂ ’ತಂದೆಯು ನೀನೇ, ತಾಯಿಯು ನೀನೇ’, ’ನೀನೆ ನೀನೆ’, ’ಎಲ್ಲೋ ಒಂದು ಲೋಕವಿದೆ’ ನನ್ನ ಮೆಚ್ಚಿನವು. ಸಾಮಾನ್ಯವಾಗಿ ಫಾ.ಚಸರಾ ಮೊದಲೆರೆಡು ಸಾಲುಗಳಿಗೆ ರಾಗ ರಚನೆ ಮಾಡುತ್ತಿದ್ದರು. ನಾನು ಮುಂದಿನದನ್ನು ಸಂಯೋಜಿಸಿ ಗೀತೆಯನ್ನು ಪೂರ್ಣಗೊಳಿಸುತ್ತಿದ್ದೆ. ಈ ಧ್ವನಿಸುರಳಿಯ ರಾಗ  ಸಂಯೋಜನೆ ಮಾಡುತ್ತಿದ್ದಾಗ, ಈ ಗೀತೆಯ ಅಶಯವೇನಿರಬಹುದು ಎಂಬ ಆಲೋಚನೆ ನನ್ನಲ್ಲಿತ್ತು. ಫಾ.ಚಸರಾ ಒಂದು ಕಾಗದದ ಮೇಲೆ ಗೀತೆಯ ಮೊದಲೆರೆಡು ಸಾಲುಗಳನ್ನು ಬರೆದುಕೊಟ್ಟರು. ಅದರಲ್ಲಿ ’ಎಲ್ಲೋ ಒಂದು ಲೋಕವಿದೆ ನನ್ನ ಮುಂದಿನ ಜನುಮ ಅಲ್ಲಿದೆ’ ಎಂಬ ಸಾಲುಗಳಿತ್ತು. ನಾನು ಅವರನ್ನು ನೋಡಿ, " ಈ ಹಾಡಿಗೆ ಈ ವಿಷಯವೇಕೆ ಫಾದರ್, ಸಾಹಿತ್ಯ ತುಂಬಾ ಆಳ ಹಾಗೂ ವಯ್ಯಕ್ತಿಕವಾದಂತಿದೆ"ಎಂದೆ.

ಅದಕ್ಕವರು "ಸ್ಟೀ, ವ್ಯವಸ್ಥೆಯೊಂದಿಗಿನ ಈ ಹೋರಾಟದಿಂದ ದಣಿದು ಹೋಗಿದ್ದೇನೆ. ಇದು ಸಾಕಾಗಿದೆ. ಇನ್ನೆಷ್ಟು ವರ್ಷಗಳು ಹೀಗೆ  ನಾನು ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರಬೇಕಾಗಿದೆಯೋ? ಆದರೆ ಈ ದೀರ್ಘ ಸಂಘರ್ಷ ಜೀವನದ ನಂತರ ಕೇವಲ ಪ್ರೀತಿ ಶಾಂತಿ  ಮಾತ್ರವೇ ಇರುವ ಸ್ಥಳವೊಂದನ್ನು ನಾನು ಕಂಡುಕೊಳ್ಳುತ್ತೇನೆ ಎಂಬುದೇ ನನ್ನಗಿರುವ ಭರವಸೆ" ಎಂದರು. ಏನು ಹೇಳಬೇಕೆಂದು ನನಗೆ ತೋಚದೆ ರಾಗ ಸಂಯೋಜನೆಯನ್ನು ಪ್ರಾರಂಭಿಸಿದೆ.

ಪ್ರಶ್ನೆ: ಗೀತೆಯ ಬಗ್ಗೆ ಏನೆಲ್ಲಾ ಮಾತುಕತೆ, ರೂಪುರೇಷೆಗಳು ನಡೆಯಿತು? ಒಂದು ಜನಪ್ರಿಯ, ಅತ್ತ್ಯತ್ತಮ ಗೀತೆಯ ಹಿಂದಿನ ’ thought process' ಏನಿರುತ್ತದೆ ಎಂಬುದು ಈ ಪ್ರಶ್ನೆಯ ಆಶಯ.

ಸ್ಟೀಫನ್ ದತ್ತ್ : ಈ ಗೀತೆಗೆ ಬೇಕಾಗಬಹುದಾದ ಹಿನ್ನಲೆ ಸಂಗೀತದ ಬಗ್ಗೆ ನಾವಿಬ್ಬರು ಚರ್ಚಿಸಿದೆವು. ಯಾವ ವಾದ್ಯಗಳನ್ನೆಲ್ಲಾ ಬಳಸಬಹುದು, ಬಳಸಬೇಕು ಎಂಬುದು ಚರ್ಚೆಯಾಯಿತು. ಗೀತೆಯ ಗಾಢತೆ, ಅಧ್ಯಾತ್ಮಿಕತೆ ಹಾಗೂ ಭಾವ ತೀವ್ರತೆಯನ್ನು ಎತ್ತಿ ಹಿಡಿಯುಂತ ಸಂಗೀತವಿರಬೇಕೆಂಬುದು ಇಬ್ಬರ ಅಭಿಪ್ರಾಯವಾಗಿತ್ತು.  ಅದೇ ಕಾರಣದಿಂದ ಗೀತೆಯ ಆರಂಭದಲ್ಲಿ ವಯಲೀನ್ ಸೋಲೋ ಹಾಗೂ ಚರಣಗಳ ನಡುವೆ ಕೋರಸ್  ಬಳಸಿದೆ. ಫಾ.ಚಸರಾರವರಿಗೆ ಈ ಸೋಲೋ ವಾದ್ಯಗಳ ಬಳಕೆ ಬಹಳ ಇಷ್ಟವಾಗುತ್ತಿತ್ತು. ಹಿನ್ನಲೆ ಸಂಗೀತದಲ್ಲಿ ಒಂದೊಂದೇ ವಾದ್ಯವನ್ನು ಬಳಸಿ ಕಾಡುವ ಗುಣವುಳ್ಳ ಸಂಗೀತ ರಚನೆಯತ್ತ ಅವರಿಗೆ ಒಲವಿತ್ತು. ದೇವಾಲಯಗಳಲ್ಲಿ, ಗಾನ ವೃಂದಗಳಲ್ಲಿ ಕೀಬೋರ್ಡ್ ಸುಲಭವಾಗಿ ನುಡಿಸಲು ಸಾಧ್ಯವಾಗುವಂತ ರಾಗ ಸಂಯೋಜನೆಯನ್ನು ಮಾಡಲು ನನ್ನನ್ನು ಒತ್ತಾಯಿಸುತ್ತಿದ್ದರು.

ಪ್ರಶ್ನೆ: ಈ ಹಾಡನ್ನು ನೀವೇ ಹಾಡಬೇಕೆಂದು ನಿರ್ಧಾರವಾಗಿದ್ದು ಹೇಗೆ?ಏಕೆ?

ಸ್ಟೀಫನ್ ದತ್ತ್ : ಇದನ್ನು ನಿರ್ಧರಿಸಿದವರು ಫಾ.ಚಸರಾ ಹಾಗೂ ರೀಟಾ ರೀನಿ. ಗೀತೆಯ ಸಂಯೋಜನೆ ಮಾಡುವಾಗ ನಾನು ಇದನ್ನು ಭಾವ ಪೂರ್ಣವಾಗಿ ಹಾಡುತ್ತಿದ್ದದ್ದನ್ನು ನೋಡಿ ಇವರಿಬ್ಬರು ಈ ನಿರ್ಧಾರಕ್ಕೆ ಬಂದರೇನೋ. ಹಾಡಿಗೆ ಅದರ ಭಾವಕ್ಕೆ, ಆಶಯಕ್ಕೆ, ನನ್ನ ಗಾಯನದ ಶೈಲಿಯಿಂದ ನ್ಯಾಯ ಸಿಗಬಹುದೆಂದು ಅವರಿಗೆ ಅನಿಸಿರಬೇಕು.

ಪ್ರಶ್ನೆ: ಈ ಹಾಡಿನ ರೆಕಾರ್ಡಿಂಗ್ ಆದ ನಂತರ ಬಂದ ಪ್ರತಿಕ್ರಿಯೆ ಹೇಗಿತ್ತು?

ಸ್ಟೀಫನ್ ದತ್ತ್ : ಈ ಗೀತೆಯನ್ನು ಆಗ ಅರವಿಂದ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದೆವು. ಸಂಜೆ ಸುಮಾರು 7 ಗಂಟೆಗೆ ನಾನು ಈ ಗೀತೆಯನ್ನು ಹಾಡಲು ಪ್ರಾರಂಭಿಸಿದೆ. ಗೀತೆಯನ್ನು ರೆಕಾರ್ಡ್ ಮಾಡಿದ ನಂತರ ಸ್ಟುಡಿಯೋದಲ್ಲೇ ನಾವೆಲ್ಲಾ ಸೇರಿಕೊಂಡು ಸುಮಾರು ನಾಲ್ಕೈದು ಸಲ ಹಾಡನ್ನು ಕೇಳಿದೆವು. ಫಾ.ಚಸರಾ ಹಾಗೂ ರೀನಿಯವರಿಗೆ ಹಾಡು ಬಹಳ ಇಷ್ಟವಾಯಿತು. ಫಾ.ಚಸರಾ ನನ್ನ ಬಳಿ "ಸ್ಟೀ, ಬಹಳ ಉತ್ತಮವಾದ ಸಂಯೋಜನೆ, ಇದು ನಿಜಕ್ಕೂ ಬಹಳ ಜನಪ್ರಿಯವಾಗುತ್ತದೆ" ಎಂದರು. ನಾನು ಫಾ.ಚಸರಾರವರಿಗೆ ಇದು ಅವರ ಅತ್ತ್ಯುತ್ತಮ ಸಾಹಿತ್ಯದಲ್ಲಿ ಒಂದು ಎಂದು ಹೇಳಿದೆ. ಸಿಡಿ ಬಿಡುಗಡೆಯಾದ ನಂತರ ಒಂದು ದಿನ ಫಾದರ್ ನನಗೆ ಫೋನ್ ಮಾಡಿದರು. "ಸ್ಟೀ, ಈ ಹಾಡು ಎಲ್ಲರಿಗೂ ಇಷ್ಟವಾಗಿದೆ. ನಮ್ಮ ಧರ್ಮಕೇಂದ್ರದ ಅನೇಕರು 'ಈ ಹಾಡನ್ನು ಕೇಳುವಾಗ ಅತ್ತುಕೊಂಡೆವು' ಎಂದು ನನ್ನ ಬಳಿ ಹೇಳಿದರು. ಈ ಹಾಡು ಅನೇಕರ ಹೃದಯಗಳನ್ನು ಮುಟ್ಟಿದೆ ಎನ್ನುವುದು ನಿಜಕ್ಕೂ ಒಳ್ಳೆಯ ಸೂಚನೆ" ಎಂದರು. ಆಗ ಫಾದರ್ ತುಮಕೂರಿನಲ್ಲಿದ್ದರು.

ಪ್ರಶ್ನೆ : ಈ ಹಾಡಿನ ಬಗ್ಗೆ ನಿಮ್ಮ ವ್ಯಯಕ್ತಿಕ ಅಭಿಪ್ರಾಯವೇನು?

ಸ್ಟೀಫನ್ ದತ್ತ್ : ಫಾ.ಚಸರಾರವರ ನನ್ನ ಅತ್ಯಂತ ಮೆಚ್ಚಿನ ಗೀತೆಗಳಲ್ಲಿ ಇದು ಒಂದು. ಸಾಹಿತ್ಯದಲ್ಲಿನ ಆಳ ಹಾಗೂ ಗಾಢತೆ ಇದಕ್ಕೆ ಕಾರಣ. ಈ ಗೀತೆಯಲ್ಲಿ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ನಿಜಕ್ಕೂ ಸತ್ಯ. ಈ ರೀತಿಯ ಸಾಹಿತ್ಯ ಏಕೆ ಬರೆದರು ಎಂದು ಅನೇಕ ಸಲ ಯೋಚಿಸಿದ್ದೇನೆ. ಆ ಹಾಡು ಕೇಳಿದಾಗಲ್ಲೆಲ್ಲಾ ನನ್ನಲೊಂದು ಹೊಸ ಚೈತನ್ಯ ಹಾಗೂ ಭರವಸೆ ಮೂಡುತ್ತದೆ. ಇದೇ ಅನುಭವ ಕೇಳುಗರಿಗೆಲ್ಲಾ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ. ಇಷ್ಟು ಬೇಗ ಚಸರಾ ನಮ್ಮನ್ನು ಅಗಲಿ ಅವರಿಗಿಷ್ಟವಾದ ’ಆ ಲೋಕಕ್ಕೆ’ ಹೊರಟು ಬಿಡುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಈ ಗೀತೆ ಕೇಳಿದಾಗಲೆಲ್ಲಾ ನಾನು ಕಣ್ಣೀರಾಗುತ್ತೇನೆ. ಆ ಹಾಡಿಗೆ ಪಾಶ್ಚಿಮಾತ್ಯ ಶೈಲಿಯ Orchestral music ಮಾಡಿ ಅದಕ್ಕೊಂದು ವಿಡಿಯೋ ಮಾಡಬೇಕೆಂಬ ಯೋಜನೆ ನನ್ನದು. ಆದಷ್ಟು  ಬೇಗ ಕಾರ್ಯರೂಪಕ್ಕೆ ತರುವ ಭರವಸೆಯಲ್ಲಿದ್ದೇನೆ.

ಇದಿಷ್ಟು ನಮ್ಮ ಪ್ರಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಸ್ಟೀಫನ್ ದತ್ತರವರು ಈ ಹಾಡಿನ ಬಗ್ಗೆ ಹಂಚಿಕೊಂಡ ಅನುಭವ. ಇದನ್ನು ಓದಿ ಮತ್ತೊಮ್ಮೆ ಹಾಡನ್ನು ಕೇಳಿದಾಗ, ಸ್ಟೀಫನ್ ರವರು ಹಂಚಿಕೊಂಡಿರುವ ವಿವರಗಳೆಲ್ಲಾ ವಿಸ್ತಾರವಾಗಿ ಅರ್ಥವಾಗುತ್ತದೆ. ಅದಕ್ಕೂ ಮಿಗಿಲಾಗಿ ಹಾಡನ್ನು ಒಮ್ಮೆ ಒಳ್ಳೆಯ ಹೆಡ್ ಫೋನ್ ಹಾಕಿ ಯಾವುದೇ ಅಡಚಣೆ ಇಲ್ಲದೆ ಕೇಳಿ ನೋಡಿ. ಸಾಹಿತ್ಯ ಹಾಗೂ ವಾದ್ಯ ಸಂಯೋಜನೆಯಲ್ಲಿನ ಮಾಧುರ್ಯತೆ ಹೃದಯ ತುಂಬಿಕೊಳ್ಳುತ್ತದೆ.  

- ಪ್ರಶಾಂತ್ ಇಗ್ನೇಶಿಯಸ್ 


ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 6 -  ಪ್ರಶಾಂತ್ ಇಗ್ನೇಶಿಯಸ್