Wednesday 16 June 2010

ತಮಸ್ಸು - ಕಾಡುವ ಚಿತ್ರ



ಇತ್ತೀಚೆಗೆ ತಾನೇ ’ಪೃಥ್ವಿ’ ಚಿತ್ರ್ರದಿಂದ ಕಂಡ ಭರವಸೆಯ ಬೆಳಕು ’ತಮಸ್ಸು’ವಿನಲ್ಲಿ ಮತ್ತಷ್ಟು ಪ್ರಕಾಶಮಾನವಾಗಿದೆ ಎಂದೇ ಹೇಳಬಹುದು.’ನಾನು ನನ್ನ ಕನಸು’ ನೋಡಿ ಇಂಥಹ ಕನಸುಗಳು ಇನ್ನಷ್ಟು ಬೀಳಲಿ ಎಂದು ಬಯಸುತ್ತಿದ್ದವರಿಗೆ ’ತಮಸ್ಸು’ ಎಂಬುದು ಒಂದು ಸ್ವಾಗತಾರ್ಹ ನನಸಾಗಿದೆ. ಇದೇನು ಅತ್ತ್ಯುತ್ತಮ ಚಿತ್ರವಿಲ್ಲದಿರಬಹುದು. ಅಲ್ಲಲ್ಲಿ ತನ್ನ ನಿಧಾನಗತಿಯಿಂದಾಗಿ flow ಕಳೆದ ಅನುಭವ ಕೊಡಬಹುದು, ಕೆಲವು ಸೂಕ್ಷ್ಮ ಸಂಗತಿಗಳನ್ನು ದಾಖಲಿಸುವಲ್ಲಿ ವಿಫಲವಾಗಿರಬಹುದಾದರೂ ಇದೊಂದು ವಿಭಿನ್ನವಾದ ಪ್ರಯತ್ನ ಹಾಗೂ ಕನ್ನಡದ ಮಟ್ಟಿಗೆ ನೆನಪಿನಲ್ಲಿ ಉಳಿಯುವಂಥ  ಚಿತ್ರವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಚಿತ್ರದ ಕಥಾವಸ್ತು,concept  ಹಾಗೂ ಅಗ್ನಿ ಶ್ರೀಧರ್ ರವರ ಚಿಂತನೆಯೇ ಚಿತ್ರದ ದೊಡ್ಡ plus point. ಅದನ್ನು ಸಮರ್ಥವಾಗಿ ತೆರೆಗೆ ತರುವಲ್ಲಿ ಚಿತ್ರದ ಇತರ ವಿಭಾಗಗಳು ಶ್ರೀಧರ್ ರವರ ಕೈ ಜೋಡಿಸಿರುವ ರೀತಿ ಶ್ಲಾಘನೀಯ. ಚೊಚ್ಚಲ ಪ್ರಯತ್ನದಲ್ಲೇ ಶ್ರೀಧರ್ ತಾವೊಬ್ಬ ಸಮರ್ಥ ನಿರ್ದೇಶಕನಾಗುವ ಎಲ್ಲಾ ಲಕ್ಷಣಗಳನ್ನೂ ತೋರಿದ್ದಾರೆ. ಅವರದೇ ತಂಡದ ನಿರ್ಮಾಣಗಳಲ್ಲಿನ ತೊಡಗಿಸುವಿಕೆ ಹಾಗೂ ಅವರ ಅಪಾರವಾದ ಓದು ಅವರ ನಿರ್ದೇಶನಕ್ಕೆ ಸಹಾಯ ಮಾಡಿದೆ ಎಂದರೆ ತಪ್ಪಾಗಲಾರದೇನೋ. ಹಿಂದು-ಮುಸ್ಲಿಂ ಗಲಭೆಗಳ ಹಿನ್ನಲೆಯ ಕಥಾವಸ್ತುವಿದ್ದರೂ ನಿರ್ದೇಶಕರು ತೋರಿರುವ ಸಂಯಮ ಹಾಗೂ ವಿವಾದಾತೀತವಾದ ಕಸುಬುದಾರಿಕೆ ಮೆಚ್ಚತಕ್ಕದು.

ಇನ್ನೂ ಅಭಿನಯದ ವಿಭಾಗ ಚಿತ್ರವನ್ನು ಮತ್ತೊಂದು ಹಂತಕ್ಕೆ ಏರಿಸಿರುವುದು ಸ್ಪಷ್ಟವಾಗುತ್ತದೆ. ಪದ್ಮಪ್ರಿಯ, ಲೋಹಿತಾಶ್ವ, ಶೋಭರಾಜ್, ನಾಗರಾಜ್ ಮೂರ್ತಿ,ಆಸಿಫ್ ಮುಂತಾದವರ ಅಭಿನಯ ನಿಜಕ್ಕೂ top class.ನಾಜರ್ ತಮ್ಮ ಮೌನದಲ್ಲೇ ಮನ ಗೆಲ್ಲುತ್ತಾರೆ. ಇವೆಲ್ಲಕ್ಕೂ ಕಳವವಿಟ್ಟಂತ ಅಭಿನಯ ಶಿವಣ್ಣನದು. ಪ್ರಾರಂಭದ ಶೀರ್ಷಿಕೆಯಲ್ಲಿ ಬರುವ ’ಮಹಾನ್ ಕಲಾವಿದ’ ಎಂಬ ಬಿರುದನ್ನು ಸಮರ್ಥಿಸಲೋ ಎಂಬಂಥ ಅಭಿನಯ ನೀಡಿರುವ ಶಿವಣ್ಣ, ಎ.ಸಿ.ಪಿ. ಶಂಕರ್ ಆಗಿ ರೌದ್ರ, ಕ್ರೌರ್ಯ, ಸರಸ, ಪಶ್ಚಾತ್ತಾಪ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಅದರಲ್ಲೂ ನಾಜರ್ ಮನೆಯ ಕಿಟಕಿಯ ಸರಳುಗಳ ಹಿಂದೆ ಸುದೀರ್ಘವಾದ ಸಂಭಾಷಣೆಯಲ್ಲಿನ ಅಭಿನಯ, ಅವರು ನಟನೆಯಲ್ಲಿ ಬೆಳೆದು ನಿಂತಿರುವ ಪರಿಗೆ ಸಾಕ್ಷಿಯಾಗಿದೆ. ಈ ಚಿತ್ರದಿಂದ ಶಿವಣ್ಣನ ಮುಂದಿನ ದಿನಗಳೆಡೆಗಿನ ಜವಬ್ದಾರಿ ಮತ್ತಷ್ಟು ಹೆಚ್ಚಿದೆ.

ಚಿತ್ರದ ಹಾಡು ಹಾಗೂ ಹಿನ್ನಲೆ ಸಂಗೀತ ಉತ್ತಮವಾಗಿದ್ದೂ ನಿರ್ದೇಶಕ ಸಂದೀಪ್ ಚೌಟ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಆದರೆ ವಿರಾಮದ ನಂತರದ ಒಂದೆರೆಡು ಹಾಡು ಚಿತ್ರದ ಓಟವನ್ನು ಕುಂಠಿತಗೊಳಿಸುತ್ತದೆ ಎಂಬುದೂ ಅಷ್ಟೇ ನಿಜ. ಶೀರ್ಷಿಕೆ ಗೀತೆ ಹಾಗೂ ಅದರ ಚಿತ್ರಣವಂತೂ ಅದ್ಭುತ.ಸಂಭಾಷಣೆ ಶ್ರೀಧರ್ ರವರದೇ ಆಗಿರುವುದರಿಂದ ಚಿತ್ರದ ಒಟ್ಟು ಪರಿಕಲ್ಪನೆಗೆ ತಕ್ಕದಾಗಿದ್ದು, ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಛಾಯಾಗ್ರಹಣ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು ಎನಿಸಿದರೂ ಕೊರತೆಯಂತೂ ಕಾಣುವುದಿಲ್ಲ.

ಒಟ್ಟಿನಲ್ಲಿ ಒಂದು ಉತ್ತಮವಾದ ಚಿತ್ರವನ್ನು ಕೊಡುವಲ್ಲಿ ಚಿತ್ರಕ್ಕೆ ಸಂಬಂಧಪಟ್ಟ ಎಲ್ಲರ ಶ್ರಮ ಹಾಗೂ ಪ್ರೀತಿ ’ತಮಸ್ಸು’ವಿನಲ್ಲಿ ಎದ್ದು ಕಾಣುತ್ತದೆ ಎಂದರೆ ತಪ್ಪಾಗಲಾರದು ಹಾಗೂ ಅದಕ್ಕೆ ಅವರೆಲ್ಲರೂ ಅಭಿನಂದನೆಗೆ ಆರ್ಹರು.