Friday 30 September 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 3 - ’ನನ್ನ ತಂದೆಯ ಈ ಆಲಯ’

ಕಳೆದ ಸಂಚಿಕೆಯಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಬಗೆಗಿನ ಬರಹವನ್ನು ಓದಿದ ಒಂದಿಬ್ಬರು ಯುವಮಿತ್ರರು ಬರಹ ಇನ್ನಷ್ಟು ಸರಳವಾಗಿದ್ದರೆ ಓದಲು, ಅರ್ಥ ಮಾಡಿಕೊಳ್ಳಲು ಸುಲಭವಾಗಿರುತ್ತದೆ, ಓದಿಸಿಕೊಂಡು ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಗಳ್ನಕ್ಕು ಸುಮ್ಮನಾದೆ. ಆ ಹಾಡಿನ ಪ್ರತಿ ಸಾಲಿನ ಬಗ್ಗೆ ವಿವರವಾಗಿ ಬರೆದ ಕಾರಣಕ್ಕೆ ಹಾಗೆನಿಸಿತೇನೋ. ಆದರೆ ಎಲ್ಲಾ ಹಾಡುಗಳ ಬಗ್ಗೆ ಅಷ್ಟು ದೀರ್ಘವಾಗಿ, ವಿವರವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ’ಸ್ಪೂರ್ತಿಯಾಗಲಿ ಕ್ರಿಸ್ತ’ ನಿಜಕ್ಕೂ ಒಂದು ಅಪರೂಪದ ಗೀತೆ ಹಾಗೂ ವಿವರವಾದ ಬರಹಕ್ಕೆ ಯೋಗ್ಯವಾದಂತ ಗೀತೆ. ನಿಧಾನವಾಗಿ ಓದಿದಾಗ ಮುಂದೆ ಎಂದಾದರೂ ಆ ಲೇಖನ ಆ ಗೆಳೆಯರಿಗೆ  ಇಷ್ಟವಾಗಬಹುದೇನೋ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಈ ಭಾಗದಲ್ಲಿ ನಾನು ಬರೆಯಲು ಆರಿಸಿಕೊಂಡ ಚಸರಾರವರ ಮುಂದಿನ ಗೀತೆ ’ನನ್ನ ತಂದೆಯ ಈ ಆಲಯ’. ಕಾಕತಾಳೀಯವೆಂಬಂತೆ ಚಸರಾರವರ ಗೀತೆಗಳಲ್ಲಿ ಸಾಹಿತ್ಯಿಕವಾಗಿ, ಸಂಗೀತದ ದೃಷ್ಠಿಯಿಂದ ಅತ್ಯಂತ ಸರಳವಾದ ಗೀತೆ ಇದು ಎಂದೇ ಹೇಳಬಹುದು.  ಸರಳವಾದರೂ ನನ್ನ ಅತ್ಯಂತ ಇಷ್ಟವಾದ ಗೀತೆಗಳಲ್ಲಿ ಇದೂ ಒಂದು. ಏಕೆ ಇಷ್ಟ ಎಂದು ಹೇಳಲು ಕಷ್ಟವಾದರೂ, ಪ್ರಾಯಶ: ಈ ಗೀತೆಗೆ ಇರುವ ಹಿನ್ನಲೆ, ಗೀತೆಯನ್ನು ಕೇಳಿದ ಮೊದಲ ಸಂದರ್ಭ, ಗೀತೆಗೆ ಅಂಟಿಕೊಂಡಿರುವ ದೃಶ್ಯ ಸ್ವರೂಪವೆಲ್ಲವೂ ಇದಕ್ಕೆ ಕಾರಣವೇನೋ.

’ನನ್ನ ತಂದೆಯ ಈ ಆಲಯ’ ಗೀತೆಯನ್ನು ನಾ ಮೊದಲು ಕೇಳಿದ್ದು 1995ರಲ್ಲಿ, ಮರಿಯಾಪುರದ ಮಹಿಮೆಯ ಮೊದಲ ಪ್ರದರ್ಶನದಲ್ಲಿ. ಆ ಮೊದಲ ಪ್ರದರ್ಶನದಲ್ಲಿನ ಬೆಳಕು, ರಂಗ ಸಜ್ಜಿಕೆ, ಧ್ವನಿ ವ್ಯವಸ್ಥೆ, ಜನ ಸಾಗರ ಎಲ್ಲವನ್ನೂ ನೋಡಿ ಮೂಕವಿಸ್ಮಿತನಾಗಿ ಹೋಗಿದ್ದ ನಾನು, ಕನ್ನಡದಲ್ಲಿಯೂ ಇಂತಹ ಕಾರ್ಯಕ್ರಮ ಸಾಧ್ಯವಾಯಿತಲ್ಲ ಎಂಬ ಆಲೋಚನೆಯಿಂದ ರೋಮಾಂಚಿತನಾಗಿದ್ದೆ. 

ಕೇವಲ ಬೆಳಕು, ಥಳಕು, ಜಾತ್ರೆ ಮಾತ್ರವಲ್ಲದೆ ಅಂದು ನನ್ನನ್ನು ಸೆಳೆದದ್ದು ಮಹಿಮೆ ನಾಟಕದ ಅದ್ಭುತವೆನಿಸುವಂತ ಸಾಹಿತ್ಯ, ಸಂಗೀತ ಹಾಗೂ ಹಿನ್ನಲೆ ಸಂಗೀತ. ಮಹಿಮೆಯ ಮೂಲ ಆವೃತ್ತಿ ಏನಿತ್ತೋ ಅದು ಇಂದಿಗೂ world class. ಈ ಮಹಿಮೆಯ ಹಾಡುಗಳನ್ನೊಳಗೊಂಡ ಧ್ವನಿಸುರಳಿಯೇ ’ಸಂವೇದ್ಯ’.

ಕಳೆದ ಸಂಚಿಕೆಯಲ್ಲಿ ನಾವು ಚರ್ಚಿಸಿದ ’ಸ್ಪೂರ್ತಿ’ ಧ್ವನಿಸುರಳಿ ಕನ್ನಡ ಕ್ರೈಸ್ತ ಸಂಗೀತದ ಅತ್ಯುತ್ತಮ ಧ್ವನಿಸುರಳಿಗಳಲ್ಲಿ ಒಂದಾದರೆ, ’ಸಂವೇದ್ಯ’ ಒಂದು ಮಹತ್ವದ ಧ್ವನಿಸುರಳಿ ಎಂದರೆ ತಪ್ಪಾಗಲಾರದು. ’ಸ್ಪೂರ್ತಿ’ ಕನ್ನಡ ಭಕ್ತಿಗೀತೆಗಳ ಒಂದು ಸಿದ್ಧ ಸೂತ್ರಕ್ಕಿಂತ ಭಿನ್ನವಾದ ಸೃಜನಾಶೀಲತೆಯನ್ನು ಒಳಗೊಂಡಿದ್ದರೆ, ’ಸಂವೇದ್ಯ’ ದ ಗೀತೆಗಳು ಇಡೀ ಬೈಬಲ್ ನ ಸಾರವನ್ನು ವಿಶಿಷ್ಠ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದ ಕೃತಿ. 

ಬೈಬಲ್ ಆಧಾರಿತ ಮಹಿಮೆ ನಾಟಕದ ಹಾಡುಗಳು ಎಂದಾಕ್ಷಣ ಒಂದು ರೀತಿಯ ಚೌಕಟ್ಟಿನಲ್ಲಿ ಹಾಡುಗಳನ್ನು ರಚಿಸುವ, ಸಾಹಿತ್ಯವನ್ನು ಮಿತಿಗೊಳಿಸುವ ಅನಿವಾರ್ಯತೆ, ಸೀಮಿತ ಅವಕಾಶ ತಾನಾಗಿಯೇ ಏರ್ಪಡುತ್ತದೆ.  ಆದರೆ ಬೈಬಲ್ ನ ನಾವು ನೀವು ಕೇಳಿದ, ಓದಿದ ಘಟನೆಗಳಿಗೆ ಹೇಗೆ ಹೊಸ ಸ್ಪರ್ಶವನ್ನು ನೀಡಬಹುದು ಎಂಬುದಕ್ಕೆ ’ಸಂವೇದ್ಯ’ದ ಗೀತೆಗಳು ಸಾಕ್ಷಿಯಾಗಿದೆ.

ಯೇಸು ಜೆರುಸಲೇಮ ನಗರದ ಮಹಾದೇವಾಲಯದಲ್ಲಿನ ವರ್ತಕರನ್ನು ಅಲ್ಲಿಂದ ಓಡಿಸುವ ಸಂದರ್ಭದಲ್ಲಿ ’ನನ್ನ ತಂದೆಯ’ ಹಾಡು ಬರುತ್ತದೆ. ’ಸಂವೇದ್ಯ’ ಆರಂಭಿಕ ನಿರೂಪಣೆಯ ಬಗ್ಗೆ ಮತ್ತೆ ಒಂದೆರೆಡು ಮಾತು. ಫಾ.ಚಸರಾರವರ ಧ್ವನಿಯಲ್ಲಿಯೇ ಇರುವ ಈ ನಿರೂಪಣೆಯ ಆರಂಭದಲ್ಲಿ ಸುಂದರವಾದ ಸಾಲುಗಳು ಈ ರೀತಿಯಲ್ಲಿವೆ -
"ಬಿರುಗಾಳಿಯ ಅಬ್ಬರ ತಂಗಾಳಿಗಿಲ್ಲ, ಆದರೆ ಮಾಧುರ್ಯತೆ ಮಿನುಗುವುದೇ ಈ ಮಂದಹಾಸದ ಮೆಲ್ಲುಡಿಯಲ್ಲಿಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು ನವಿರಾಗಿ ತಟ್ಟಿ ತಂಪಾಗಿಸುವ ಈ ಸಂವೇದನೆ ಸೃಷ್ಟಿಯ ಶ್ರೇಷ್ಠತೆಯಷ್ಟೇ ಸೌಮ್ಯ"

ಒಂದು ತಂಗಾಳಿ ಎಷ್ಟು ನವಿರಾಗಿ ನಮ್ಮನ್ನು ತಟ್ಟಬಲ್ಲದು ಎಂಬುದರ ವರ್ಣನೆ ಇಲ್ಲಿದೆ. ಇದಕ್ಕೆ ಇನ್ನಷ್ಟು ವಿವರಣೆ ಬೇಡ. ’ನನ್ನ ತಂದೆಯ ಹಾಡು ಕೇಳಿದಾಗಲೆಲ್ಲಾಈ ಮೇಲಿನ ನಿರೂಪಣೆಯ ಸಾಲುಗಳು ನೆನಪಿಗೆ ಬರುತ್ತದೆ. ಅನೇಕ ವೈವಿಧ್ಯಮಯ, ಸಂಗೀತ ಪ್ರಧಾನ, ಸಾಹಿತ್ಯ ಪೂರ್ಣ, ಭಾವಪೂರ್ಣ ಹಾಡುಗಳ ನಡುವೆಯೂ ಅತ್ಯಂತ ಸರಳ ಗೀತೆಗಳಿಗೆ ತಮ್ಮದೇ ಆದ ನವಿರಾದ ಸೌಂದರ್ಯವಿದೆ.

ಅಂತಹ ಹಾಡುಗಳಲ್ಲಿ ’ನನ್ನ ತಂದೆಯ’ ಒಂದು. ಒಂದು ಮಂದಹಾಸದ ಮೆಲ್ಲುಡಿಯಂಥ ಸ್ವಭಾವ ಈ ಹಾಡಿಗಿದೆ. ಸರಳ ವಾದ್ಯ ಸಂಯೋಜನೆಯಿಂದಾಗಿ ಇಲ್ಲಿ ಮಾಧುರ್ಯ ಮಿನುಗುತ್ತದೆ. ಇಡೀ ಹಾಡು ತನ್ನ ಸೌಮ್ಯತೆಯಿಂದ ನಮ್ಮ ಅಂತರಾಳದ ಭಾವನೆಗಳನ್ನು ತಟ್ಟುತ್ತದೆ. ಸಂವೇದ್ಯ ಧ್ವನಿಸುರಳಿಯನ್ನು ಗಮನವಿಟ್ಟು ಕೇಳಿದಾಗ , ಅಲ್ಲಿನ ಇನ್ನಿತರ ಹಾಡುಗಳಿಗಿರುವಷ್ಟು prelude, ಅಂದರೆ ಗಾಯನಕ್ಕಿಂತ ಮುಂಚೆ ಬರುವ ವಾದ್ಯ ಹಿನ್ನಲೆ ಸಂಗೀತ ಇಲ್ಲಿ ಬಹಳ ಚಿಕ್ಕದಾಗಿದೆ. ಮೊದಲ ಐದು ಸೆಂಕೆಂಡ್ ಗಳಲ್ಲಿಯೇ ಗಾಯನ ಪ್ರಾರಂಭವಾಗುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ಪ್ರಾರಂಭ ವಾಗುವ ಈ ಹಾಡು ’ ಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು...’ ಎಂಬ ನಿರೂಪಣೆಯ ಮೇಲಿನ ಸಾಲುಗಳನ್ನು ನೆನಪಿಸುತ್ತದೆ.

ಮತ್ತಾಯನ ಶುಭ ಸಂದೇಶದ 21: 12-14ರಲ್ಲಿ ಬರುವ ಜೆರುಸಲೇಮ ಮಹಾದೇವಾಲಯದಲ್ಲಿನ ಘಟನೆಯ ಹಿನ್ನಲೆ ಈ ಹಾಡಿಗಿದೆ. ವ್ಯಾಪಾರ ಹಾಗೂ ಹಣ ವಿನಿಮಯಯದ ತಾಣವಾಗಿ ಮಾರ್ಪಟ್ಟ ಮಹಾದೇವಾಲಯವನ್ನು ಕಂಡು ಯೇಸು ಅಕ್ರೋಶಗೊಳ್ಳುತ್ತಾರೆ, ಮರಗುತ್ತಾರೆ ಹಾಗೂ ತಾವೇ ಅವರನ್ನು ಓಡಿಸುತ್ತಾರೆ. ಕೊನೆಯಲ್ಲಿ ತಮ್ಮತನಕ್ಕೆ ಮರಳುತ್ತಾರೆ. ಬೈಬಲ್ ಪಂಡಿತರು ಈ ಘಟನೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ. ಆಗ ಮಹಾದೇವಾಲಯಕ್ಕೆ ಬರುತ್ತಿದ್ದವರು ಬಲಿ ಅರ್ಪಣೆಯನ್ನು ಅನೇಕ ಕಾರಣಗಳಿಂದ ಮಾಡಬೇಕಾಗುತಿತ್ತು. 

ಅದಕ್ಕಾಗಿ ಪ್ರಾಣಿ ಪಕ್ಷಿಗಳ ಮಾರಾಟ ಮಹಾದೇವಾಲಯದ ಒಳಗೂ, ಹೊರಗೂ ಬಹಳ ಜೋರಾಗಿಯೇ ನಡೆಯುತ್ತಿತ್ತು.  ಈ ಮಾರಾಟ ಮಹಾದೇವಾಲಯದ ಹೊರಗಡೆಯಲ್ಲಿಯೂ ನಡೆಯುತ್ತಿದ್ದರೂ, ದೇವಾಲಯದಲ್ಲಿ ಮಾರಾಟವಾಗುತ್ತಿದ್ದ ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳು ಶ್ರೇಷ್ಠ ಎಂಬ ಭಾವನೆಯನ್ನು ದೇವಾಲಯದ ಯಾಜಕರೇ ತೇಲಿಬಿಟ್ಟಿದ್ದರು. ಏಕೆಂದರೆ ದೇವಾಲಯದ ಒಳಗಡೆಯ ವ್ಯಾಪಾರದಲ್ಲಿ ಅವರದೂ ಪಾಲುದಾರಿಕೆ ಇರುತಿತ್ತು. ಮಹಾದೇವಾಲಯದಲ್ಲಿನ ಈ  ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳ ಬೆಲೆ ಹೊರಗಡೆಯದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದ್ದರೂ ಜನ ಅಲ್ಲಿಯೇ ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೊಂದು ರೀತಿಯ ಶೋಷಣೆ, ದಬ್ಬಾಳಿಕೆ.

ಹಾಗೆಯೇ ಮಹಾದೇವಾಲಯಕ್ಕೆ ಜನ ದೂರ ದೂರದ ದೇಶಗಳಿಂದ ಬರುತ್ತಿದ್ದರು. ಸಹಜವಾಗಿಯೇ ಹಣ, ನಾಣ್ಯಗಳು ಬೇರೆಯದಾಗಿರುತ್ತಿತ್ತು. ಈ ಹಣವನ್ನು ಸ್ಥಳೀಯ ಹಣವಾಗಿ ಪರಿವರ್ತಿಸುವ ವಿನಿಮಯ ಕೇಂದ್ರವೂ ಮಹಾದೇವಲಯದಲ್ಲೇ ಇದ್ದೂ ಅದು ಕೂಡ ಸಾಮಾನ್ಯಕ್ಕಿಂತ  ಹೆಚ್ಚಿನ ವಿನಿಮಯ ಶುಲ್ಕವನ್ನು ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ವಸೂಲಿ ಮಾಡುತ್ತಿತ್ತು. ಇದೂ ಕೂಡ ಒಂದು ರೀತಿಯ ಹಗಲು ದರೋಡೆಯೇ. ಇದರಿಂದ ಶೋಷಿತರಾಗುತ್ತಿದ್ದವರು  ಬಡವರು ಹಾಗೂ ದೂರದ ಅಮಾಯಕ ಜನರು. ಯೇಸು ಈ ಶೋಷಣೆ, ದಬ್ಬಾಳಿಕೆಯ ವಿರೋಧಿಯಾಗಿದ್ದರು. ಬಡವರ ಪರವಾದ ಕಾಳಜಿ ಅವರಲ್ಲಿತ್ತು. ಮಹಾದೇವಾಲಯಕ್ಕೆ ಬಂದಾಗ, ಅಲ್ಲಿನ ವ್ಯಾಪಾರ, ಅನಾಚಾರ  ಅವರ ಅಕ್ರೋಶಕ್ಕೆ ಕಾರಣವಾಯಿತು.

ಜೆರಸಲೇಮಿನಲ್ಲಿ ಯೇಸುವಿನ ಬಗ್ಗೆ ಯಾಜಕವರ್ಗಕ್ಕೆ ಸಿಟ್ಟು, ಮತ್ಸರವಿದ್ದೂ ಅವರ ವಿರುದ್ಧ ಕುತಂತ್ರ ನಡೆಯುತ್ತಿದ್ದರೂ, ಯೇಸು ಜೆರುಸಲೇಮ್ ನಗರವನ್ನು, ಮಹಾದೇವಾಲಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದದ್ದನ್ನು, ಆ ನಗರದ ಮುಂದಿನ ದುರ್ಗತಿಗಾಗಿ ದು:ಖಗೊಂಡಿದ್ದನು ನಾವು ಶುಭಸಂದೇಶದಲ್ಲಿ ಕಾಣಬಹುದು. ಆದರಿಂದಲೇ ಮಹಾದೇವಾಲಯದ ಪಾವಿತ್ರತೆ, ಶಾಂತತೆ ಹಾಗೂ ಇತಿಹಾಸ, ಹಾಗೂ ಪ್ರಾರ್ಥನೆಯ ವಾತಾವರಣಕ್ಕೆ ಧಕ್ಕೆ, ಭಂಗ ಬಂದಾಗ ಅವರು ಕೋಪಗೊಳ್ಳುತ್ತಾರೆ. ಯೆರೆಮೀಯಾ ಪ್ರವಾದಿಯ  7:11 ಮಾತುಗಳನ್ನು,  ಯೆಶಾಯ ಪ್ರವಾದಿಯ 56:7ರ ಮಾತುಗಳನ್ನು ಇಲ್ಲಿ ಉಲ್ಲೇಖಿಸುತ್ತಾ ವರ್ತಕರನ್ನು, ವ್ಯಾಪಾರಿಗಳನ್ನು ಓಡಿಸುತ್ತಾರೆ. ಕೊನೆಗೆ ತಮ್ಮ ಬಳಿಗೆ ಬಂದ ಕುಂಟರು, ಕುರುಡರನ್ನು ಸ್ವಸ್ಥಪಡಿಸುತ್ತಾರೆ ಎಂಬ ಮಾತು ಶುಭಸಂದೇಶದಲ್ಲಿದೆ. 

ಈ ಹಿನ್ನಲೆಯಲ್ಲಿ ಈ ಹಾಡನ್ನು ಕೇಳಿದಾಗ ಈ ಇಡೀ ಘಟನೆಯ ಸಾರವನ್ನು ಹಾಡು ಅದ್ಭುತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎಂದು ನನಗನಿಸುತ್ತದೆ. ಯೇಸು ಕೋಪಗೊಂಡು, ನಂತರ  ಶಾಂತ ಚಿತ್ತರಾದ ಮೇಲಿನ ಶಾಂತ ವಾತಾವರಣದ ಸಂದರ್ಭದ ಸಂಕೇತವೋ ಎಂಬಂತೆ ಹಾಡು ಮಧುರವಾಗಿ ಆರಂಭಗೊಳ್ಳುತ್ತದೆ. ತಮ್ಮ ಕೋಪಕ್ಕೆ ಕಾರಣವೇನು, ಮಹಾದೇವಾಲಯದ ಪಾವಿತ್ರ್ಯತೆಯ ಮಹತ್ವವೇನು ಎಂಬುದನ್ನು ಸ್ವತ: ಯೇಸುವೇ ಹೇಳುವಂತೆ ಹಾಡು ಕೇಳಿಸುತ್ತದೆ.

 ’ಶುದ್ಧ ಮನಸ್ಸಿನ ಗುಡಿಯು ದೇವರ ಮಂದಿರವು’ ಎಂಬ ಸಾಲುಗಳು ಅನೇಕ ಅರ್ಥಗಳನ್ನು ನೀಡಬಲ್ಲದು. ದೇವರ ಗುಡಿ, ಮಂದಿರ ಎನ್ನುವುದು ಯಾವುದೇ ಗೊಂದಲವಿಲ್ಲದ ವಾತಾವರಣದಿಂದ ಕೂಡಿರಬೇಕೆಂಬ ಆಶಯ ಇಲ್ಲಿದೆ. ಅಂತೆಯೇ ನಮ್ಮ ಮನಸ್ಸುಗಳು ದೇವರ ಮಂದಿರವಾಗಬೇಕಾದರೆ ಅದು ಶುದ್ಧವಾಗಿರಬೇಕು ಹಾಗೂ ಎಲ್ಲಾ ರೀತಿಯ ಗೊಂದಲ, ಮೋಸ ವಂಚನೆಯ ಲೆಕ್ಕಚಾರಗಳಿಂದ ಮುಕ್ತವಾಗಿರಬೇಕೆಂಬ ಸಂದೇಶವೂ ಇಲ್ಲಿದೆ.

ದೇವಾಲಯವನ್ನು, ದೈವ ಕಾರ್ಯಗಳಿಗೆ  ಸಂಬಂಧಪಟ್ಟ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ  , ತಮ್ಮ ಮೋಸದ ಕಾರ್ಯಗಳನ್ನು ದೇವರ ಹೆಸರಿನಲ್ಲಿ ಮಾಡುವ ಗೋಮುಖವ್ಯಾಘ್ರಗಳನ್ನು ನಾವು ಕಾಣಬಹುದಾಗಿದೆ.  ದೇವಾಲಯವನ್ನು, ದೈವ ಅಧಿಕಾರವನ್ನು ಕಳ್ಳರ ಗುಹೆಯನ್ನಾಗಿ ಮಾಡಿಕೊಂಡ ಜನರು ಯೇಸುವಿನ ಕಾಲದಲ್ಲಿಯೂ, ಇಂದಿನ ಸಮಯದಲ್ಲೂ ಇರುವಾಗ , ಅದೆಲ್ಲವನ್ನು ತ್ಯಜಿಸಿ, ದೇವರ ಮಂದಿರವನ್ನು ಹೃದಯದ ಗುಡಿಯಾಗಿಸಿರಿ ಎಂಬ ಕರೆ ಈ ಹಾಡಿನಲ್ಲಿದೆ. 

ಕೇವಲ ಐದೇ ಸಾಲಿರುವ, 2.30 ನಿಮಿಷದೊಳಗೆ ಮುಗಿದು ಹೋಗುವ ಈ ಗೀತೆ, ಈ ಧ್ವನಿಸುರಳಿಯ ಅತ್ಯಂತ ಮಧುರ ಗೀತೆಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಸಾಧು ಕೋಕಿಲರವರ ವಾದ್ಯ ಸಂಯೋಜನೆ ಈ ಸಾಹಿತ್ಯದ ಭಾವಕ್ಕೆ ಬೇಕಾದ ಮನಸ್ಥಿತಿ,mood ಅನ್ನು ಹಿಡಿದಿಟ್ಟಿದೆ. ಅದಕ್ಕಿಂತ ಮುಖ್ಯವಾಗಿ ಒಂದು ರೀತಿಯ ಮೌನ ಹಾಡಿನಲ್ಲಿ ನಡುವೆ ಇದ್ದಂತೆ ಭಾಸವಾಗುತ್ತದೆ. ಆ ಮೌನ ಇಣುಕಿರುವುದು ಕೆಲವೇ ಪದಗಳ ಸಾಹಿತ್ಯದಿಂದಾಗಿಯೋ ಅಥವಾ ಸಂಯಮದ ವಾದ್ಯ ಸಂಯೋಜನೆಯಿಂದಾಗಿಯೋ ಹೇಳುವುದು ಕಷ್ಟ.  

ಗಾಯನವೂ ಅಷ್ಟೇ ಸುಂದರವಾಗಿ ಮೂಡಿಬಂದಿದೆ.  ಮಹಿಮೆ ನಾಟಕದಲ್ಲಿ ಸಹಾ ಯೇಸುವಿನ ಕೊನೆಯ ದಿನಗಳ ಮನಮುಟ್ಟುವ ದೃಶ್ಯಗಳಲ್ಲಿ ಈ ಹಾಡಿನ ದೃಶ್ಯವೂ ಒಂದು. ಅಂತೆಯೇ ಚಸರಾರವರ ಗೀತೆಗಳಲ್ಲಿ ’ನನ್ನ ತಂದೆಯ’ ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ.  ಇಂದಿಗೂ ನಮ್ಮ ಅನೇಕ ದೇವಾಲಯಗಳಲ್ಲಿ ಪ್ರವೇಶ ಗೀತೆಯಾಗಿ ಈ  ಹಾಡನ್ನು ಹಾಡಲಾಗುತ್ತಿದ್ದು, ಹಾಡಿನ ನಿಜ ಅರ್ಥ ಇಂದಿಗೂ ಪ್ರಸ್ತುತವಾಗಿದೆ.



ಮುಂದೆ, ಇದೇ ಸಂವೇದ್ಯ ಧ್ವನಿಸುರಳಿಯ ಇನ್ನೊಂದೆರೆಡು ಹಾಡುಗಳ ಬಗ್ಗೆ ಬರೆಯಬೇಕಾಗಿದೆ.