Monday 12 February 2024

'ರಿಸ್ಟ್ ಅಶುರ್ಡ್' - GRV ಆತ್ಮ ಚರಿತ್ರೆ - ಸುಂದರ ಕ್ರಿಕೆಟ್ ನೆನಪುಗಳು

'ರಿಸ್ಟ್ ಅಶುರ್ಡ್'




ಕರ್ನಾಟಕದ ಕ್ರಿಕೆಟ್ ಆಟಗಾರ ಜಿ ಆರ್ ವಿಶ್ವನಾಥ್ ರವರ ಆತ್ಮ ಚರಿತೆ 'ರಿಸ್ಟ್ ಅಶುರ್ಡ್' ಕೊನೆಯ ಭಾಗಕ್ಕೆ ಬಂದಿದ್ದೇನೆ. ಒಂದುವರೆ ವರ್ಷದಿಂದ ಸಮಯ ಸಿಕ್ಕಾಗಲ್ಲ ಓದಿಕೊಂಡು ಬಂದ ಪುಸ್ತಕವಿದು. ಪುಸ್ತಕ ಎನ್ನುವುದಕ್ಕಿಂತ ಕಿಂಡಲ್ ಆವೃತ್ತಿ ಅದು. ಕ್ರಿಕೆಟ್ ಪ್ರಿಯರಿಗೆ, ಅದರಲ್ಲೂ ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಇಷ್ಟವಾಗಬಲ್ಲ ಪುಸ್ತಕ. ದುರಾದೃಷ್ಟವೆಂದರೆ ಇದರ ಕನ್ನಡ ಅವತರಣಿಕೆ ಇಲ್ಲ. ಪುಸ್ತಕ ಇಂಗ್ಲಿಷ್‌ನಲ್ಲಿದೆ. 

'ಎಲ್ಲವನ್ನೂ ಸಿದ್ಧಗೊಳಿಸಲಾಗಿದೆ, ಎಲ್ಲವನ್ನು ಸರಿಯಾಗಿ ಯೋಜಿಸಲಾಗಿದೆ, ಚಿಂತೆ ಬೇಡ' ಎಂದು ಅರ್ಥ ಕೊಡುವ ಇಂಗ್ಲಿಷಿನ 'ರೆಸ್ಟ್ ಅಶುರ್ಡ್' ಅನ್ನು 'ರಿಸ್ಟ್ ಅಶುರ್ಡ್' ಎಂದು ಪರಿವರ್ತಿಸಿರುವ ಜಾಣ ಹೆಸರು ಈ ಪುಸ್ತಕದ್ದು. ಜಿಆರ್‌ವಿ ಅವರ ಎರಡು ದೊಡ್ಡ ಹೆಗ್ಗಳಿಕೆಗಳಾದ ಅವರ ಆಟದಲ್ಲಿನ 'ರಿಸ್ಟ್ ವರ್ಕ್' ಹಾಗೂ ಅವರ 'ಆಪತ್ಭಾಂದವ'ದAಥ ಆಟವನ್ನು ಸ್ಫೂರ್ತಿಯಾಗಿಸಿಕೊಂಡಿರುವ ಶೀರ್ಷಿಕೆಯಿದು. 

ತಮ್ಮ ಬಾಲ್ಯದಿಂದ ಹಿಡಿದು ಇಲ್ಲಿಯನವರೆಗೂ ತಮ್ಮ ಕ್ರಿಕೆಟ್ ಜೀವನವನ್ನು ಜಿಆರ್‌ವಿ ಸುಂದರವಾಗಿ ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಬಹುತೇಕ ಕ್ರಿಕೆಟ್ ಸುತ್ತಮುತ್ತಲಿನ ತನ್ನ ಜೀವನವನ್ನೇ ತೆರೆದಿಟ್ಟಿರುವ ಜಿಆರ್‌ವಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾಹಿತಿಗಳನ್ನು ಅಷ್ಟಾಗಿ ಕೊಟ್ಟಿಲ್ಲ. ಅಭಿಮಾನಿಗಳಿಗೆ ಅದು ಬೇಕಾಗೂ ಇಲ್ಲ ಎನಿಸುತ್ತದೆ.  ಎಲ್ಲರಿಗೂ ತಿಳಿದಿರುವಂತೆ ಜಿಆರ್‌ವಿ ತಮ್ಮ ಕಲಾತ್ಮಕ ಆಟಕ್ಕೆ ಹೆಸರಾದವರು. ಇಂದಿನ ಟಿ-ಟ್ವೆಂಟಿ ಯುಗದಲ್ಲಿ ಶಕ್ತಿ ಬಲಪ್ರಯೋಗಗಳು ಬ್ಯಾಟಿಂಗ್ ಅನ್ನು ಗುತ್ತಿಗೆ ಪಡೆದಿದೆ. ಆದರೆ ಅಂದು ಕಲಾತ್ಮಕತೆಗೆ ಎಷ್ಟು ಪ್ರಾಮುಖ್ಯತೆ ಇತ್ತು ಎಂದರೆ ಇಂದಿಗೂ ವಿಶ್ವನಾಥ್ ರವರ ಅನೇಕ ಇನ್ನಿಂಗ್ಸ್ ಗಳನ್ನು ಜನ ಪ್ರೀತಿಯಿಂದ ನೆನೆಯುತ್ತಾರೆ. ತಮ್ಮ ಮಣಿಕಟ್ಟನ್ನು, ಅಂದರೆ ರಿಸ್ಟ್ ವರ್ಕ್ ಬಳಸಿ ಆಡುತ್ತಿದ್ದ ರೀತಿಗೆ ಜಿಆರ್‌ವಿ ಹೆಸರಾದವರು. 

ಈ ರಿಸ್ಟ್ ವರ್ಕ್ ಅನ್ನು ಎಷ್ಟು ಜನ ಗಮನಿಸುತ್ತಾರೋ ಗೊತ್ತಿಲ್ಲ. ಕ್ರಿಕೆಟ್ ಎಷ್ಟು ಪ್ರತಿಭೆ ಆಧಾರಿತವೋ, ಅದು ಅಷ್ಟೇ ತಾಂತ್ರಿಕತೆ, ವೈಜ್ಞಾನಿಕ ಹಾಗೂ ಮಾನಸಿಕ ಆಟವೂ ಹೌದು. ಒಬ್ಬ ಸಚಿನ್, ಧೋನಿ ಅಥವಾ ವಿರಾಟ್ ಹೊಡೆಯುವ ಹೊಡೆತಗಳು ಮಾತ್ರ ಕಾಣುತ್ತದೆ. ಆದರೆ ಹಿಂದಿನ ತಾಂತ್ರಿಕತೆಯ ಬಗ್ಗೆ ಕೆಲವರಿಗೆ ಮಾತ್ರ ಜ್ಞಾನವಿರುತ್ತದೆ. ಆದರೆ ಜಿ ಆರ್ ವಿಶ್ವನಾಥ್ ರವರ ಹೆಗ್ಗಳಿಕೆ ಇರುವುದೇ ಅದರಲ್ಲೇ. ಅವರ ಆಟವನ್ನು ನೋಡಿದವರು ಅವರ ರಿಸ್ಟ್ ವರ್ಕ ಬಗ್ಗೆ, ಅವರ ಬ್ಯಾಟಿಂಗ್ ನ ಸೊಗಸಿನ ಬಗ್ಗೆ ಮಾತಾಡುತ್ತಾ ಅದನ್ನು ಜನಪ್ರಿಯಗೊಳಿಸಿದರು. ೧೪೦-೧೫೦ ಕಿಮೀ ವೇಗದಲ್ಲಿ ಬರುವ ಚೆಂಡನ್ನು ಯಾವುದೇ ಕಷ್ಟವಿಲ್ಲದೆ ಅದರ ವೇಗವನ್ನೇ ಬಳಸಿ ಆಡುವ ಕಲಾವಂತಿಕೆ ಬ್ಯಾಟಿಂಗನಲ್ಲಿದೆ. ಜಿ ಅರ್ ವಿ ಅದರ ಸರದಾರರಾಗಿದ್ದರು.

ಜಿಆರ್‌ವಿ ಅನೇಕ ಹೆಗ್ಗಳಿಕೆಗೆ ಪಾತ್ರರದವರು. ಅವರು ಶತಕ ಹೊಡೆದ ಒಂದೂ ಪಂದ್ಯವನ್ನು ಭಾರತ ಸೋಲಲಿಲ್ಲ ಎಂಬುದು ಒಂದಾದರೆ, ಜಿಆರ್‌ವಿ ಆಟಕ್ಕೆ ಪ್ರತಿಸ್ಪರ್ಧಿಗಳೂ ಅಭಿಮಾನಿಗಳಾಗಿದ್ದರು. ತಮ್ಮ ಕ್ರಿಕೆಟ್ ಜೀವನದುದ್ದಕ್ಕೂ ಜೇಂಟ್ಲ್ ಮೆನ್ ಎಂದೇ ಕರೆಸಿಕೊಂಡವರು. ಇಂಗ್ಲೆಡ್ ವಿರುದ್ಧ ಬಾರಿಸಿದ ಒಂದು ಶತಕದ ನಂತರ, ಇಂಗ್ಲೆಡ್ ನಾಯಕ ಟೋನಿ ಗ್ರೇಗ್ ಜಿಆರ್‌ವಿ ಅವರನ್ನು ಮೈದಾನದಲ್ಲೇ ಮಗುವಿನಂತೆ ಎತ್ತಿ ಜೋಗುಳ ಆಡುವಂತೆ ಆಡಿಸಿದ್ದು ಇತಿಹಾಸ. 

ಕ್ರಿಕೆಟ್ ನಲ್ಲಿ ಕಿಂಗ್ ಎಂತಲೇ ಎನಿಸಿಕೊಂಡ ವಿವಿಯನ್ ರಿಚರ್ಡ್ಸ್, ತಾನು ವಿಶಿ ಆಟದ ಅಭಿಮಾನಿ ಎಂದು ಹೇಳಿದ್ದಾರೆ. ಭಾರತ ತಂಡಕ್ಕೆ ಮಿಂಚಿನAತೆ ಆಗಮಿಸಿ, ವಿಶ್ವ ಕಪ್ ಗೆಲ್ಲುವ ಮೂಲಕ ಭಾರತವನ್ನು ಕ್ರಿಕೆಟ್ ಜಗತ್ತಿನ ನಕ್ಷೆಯಲ್ಲಿ ಇರಿಸಿದ ಕಪಿಲ್ ದೇವ್, ವಿಶ್ವನಾಥ್ ರವರನ್ನು ತಮ್ಮ ಹೀರೊ ಎಂದೇ ಕರೆಯುತ್ತಾರೆ. "ಒಂದು ನಾನು ಅವರ ಆಟದ ಅಭಿಮಾನಿ, ಮತ್ತೊಂದು ನಾನು ಅವರ ವ್ಯಕ್ತಿತ್ವದ ದೊಡ್ಡ ಅಭಿಮಾನಿ. ಅವರಂತೆ ಆಗಲು ಬಹಳ ಪ್ರಯತ್ನಪಟ್ಟೆ ಆದರೆ ಸಾಧ್ಯವಾಗಲಿಲ್ಲ"

ಈ ಪುಸ್ತಕದಲ್ಲಿ ಅವರ ಕ್ರಿಕೆಟ್ ಬದುಕಿನ ಅನೇಕ ಘಟನೆಗಳನ್ನು ಅವರು ಮೆಲಕು ಹಾಕಿದ್ದಾರೆ ತಮ್ಮನ್ನು ಕ್ರಿಕೆಟ್ ಜಗತ್ತು ಏಕೆ ಹೊಗಳುತ್ತದೆ ಎಂಬುದರ ಬಗ್ಗೆ ಹೆಚ್ಚು ಮಾತನಾಡದೆ, ತಮ್ಮ ಕ್ರಿಕೆಟ್ ಅನುಭವವನ್ನು ಹಂಚಿಕೊಳ್ಳುತ್ತಾ ಹೋಗುತ್ತಾರೆ. ಅವುಗಳಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳಿವೆ. ಅದರಲ್ಲಿ ಒಂದು ಜಿಆರ್‌ವಿ ಮಣಿಕಟ್ಟು ಹಾಗೂ ಮುಂಗೈಗೆ ಸಂಬAಧಿಸಿದ್ದು. ಜಿಆರ್‌ವಿ ಆಗಲೇ ಮೈಸೂರು ರಾಜ್ಯಕ್ಕೆ ರಣಜಿ ಪಾದಾರ್ಪಣೆ ಮಾಡಿ ಆಗಿತ್ತು. ಮೊದಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ್ದ ಜಿಆರ್‌ವಿ ಇಡೀ ದೇಶದ ಗಮನವನ್ನು ಸೆಳೆದಿದ್ದರು. ಅಂದಿನ ಭಾರತದ ನಾಯಕರದ ಟೈಗರ್ ಪಟೌಡಿ ಸಹ ವಿಶ್ವನಾಥ್ ಆಟದ ವೈಖರಿಯ ಬಗ್ಗೆ ಕೇಳಿದ್ದರು. ಆಗಿನ್ನು ವಿಶ್ವನಾಥ್ ಭಾರತಕ್ಕೆ ಆಡಿರಲಿಲ್ಲ ಅದೊಂದು ರಣಜಿ ಪಂದ್ಯದಲ್ಲಿ ಮೈಸೂರು ರಣಜಿ ತಂಡ ಹೈದರಾಬಾದ್ ತಂಡವನ್ನು ಎದುರು ಕೊಳ್ಳುತ್ತದೆ. ಆ ತಂಡದಲ್ಲಿ ಟೈಗರ್ ಪಟೌಡಿ ಇರುತ್ತಾರೆ ಪಂದ್ಯದಲ್ಲಿ ಜಿಆರ್‌ವಿ ಆಡಿ 60 ಸುಂದರ ರನ್ನುಗಳನ್ನು ಹೊಡೆಯುತ್ತಾ.ರೆ. 

ಅಲ್ಲಿ ಅವರ ಆಟ ಎಲ್ಲರ ಮನಸ್ಸನ್ನು ಗೆದ್ದರೂ, ಅವರ ಹೊಡೆತಗಳು ಬೌಂಡರಿ ಗೆರೆ ದಾಟುತ್ತಿಲ್ಲ ಅನ್ನುವುದನ್ನು ಪಟೌಡಿ ಗಮನಿಸುತ್ತಾರೆ. ನಂತರ ಬಂದವರೇ “ನಿನ್ನ ಮುಂಗೈಗಳಿಗೆ ಯಾವ ವ್ಯಾಯಾಮಗಳನ್ನು ಮಾಡುತ್ತೀಯಾ?” ಎಂದು ಜಿಆರ್‌ವಿ ಅವರನ್ನು ಕೇಳುತ್ತಾರೆ. “ಯಾವ ವ್ಯಾಯಾಮ ವೂ ಇಲ್ಲ” ಎಂಬ ಉತ್ತರಕ್ಕೆ ಆಶ್ಚರ್ಯಗೊಂಡ ಟೈಗರ್ ಪಟೌಡಿ, “ಅದೇ ಕಾರಣಕ್ಕೆ ನೀನು ಅಷ್ಟು ಸೊಗಸಾಗಿ ಶಾಟುಗಳನ್ನು ಹೊಡೆದರೂ ಅದು ಬೌಂಡರಿ ದಾಟುತ್ತಿಲ್ಲ, ನೀನೇಕೆ ಜಿಮ್ಮಿಗೆ ಹೋಗಬಾರದು?" ಎಂಬ ಸಲಹೆ ಕೊಡುತ್ತಾರೆ. "ಹಾಗಂದರೆ ಏನು?" ಎಂದು ಕೇಳಿದ ಪ್ರಶ್ನೆಗೆ ನಕ್ಕ ಪಟೌಡಿ "ಹಾಗಾದರೆ ಮನೆಗೆ ಹೋದ ಮೇಲೆ ಎರಡು ಬಕೆಟ್ ತುಂಬಾ ನೀರು ತುಂಬಿಸಿಕೊಂಡು, ದಿನವೂ ಅದನ್ನು ಹತ್ತಾರು ಬಾರಿ ಎತ್ತಿ ಇಳಿಸು" ಎನ್ನುತ್ತಾರೆ. 

ಕಿಚಾಯಿಸುವುದರಲ್ಲಿ ಪ್ರಸಿದ್ಧರಾಗಿದ್ದ ಪಟೌಡಿ ಮಾತುಗಳನ್ನು ಜೋಕ್ ಎಂದುಕೊಂಡ ಜಿಆರ್‌ವಿ ಈ ಬಗ್ಗೆ ಗೆಳೆಯ ಪ್ರಸನ್ನರನ್ನು ಕೇಳುತ್ತಾರೆ. "ಟೈಗರ್ ಹೇಳಿದ್ದಾರೆ ಎಂದ ಮೇಲೆ ಅದನ್ನು ಮಾಡು" ಎನ್ನುತ್ತಾರೆ ಪ್ರಸನ್ನ. ಅಂದಿನಿಂದ ಮನೆಯಲ್ಲಿನ ನೀರು ತುಂಬಿದ ಬಕೆಟ್ಟುಗಳೇ ಜಿಆರ್‌ವಿ ಅವರಿಗೆ ಡಂಬಲ್ ಗಳಾದವು. ಇದನ್ನು ಗಂಭೀರವಾಗಿ ತೆಗೆದುಕೊಂಡ ಜಿಆರ್‌ವಿ ದಿನವೂ ಹತ್ತಾರು ಬಾರಿ ಈ ಬಕೆಟ್ ಗಳನ್ನು ಎತ್ತಿ ಇಳಿಸುವ ಅಭ್ಯಾಸ ಮಾಡಿಕೊಂಡು, ಅದನ್ನೇ ವ್ಯಾಯಾಮವಾಗಿಸಿಕೊಳ್ಳುತ್ತಾರೆ. ಅಲ್ಲಿಂದ ಜಿಆರ್‌ವಿ ಬ್ಯಾಟಿಂಗ್ ಮತ್ತೊಂದು ಮಜಲಿಗೆ ಹೋಗುತ್ತದೆ. ಹೊಡೆತಗಳು ಕ್ಷಣಾರ್ಧದಲ್ಲಿ ಬೌಂಡರಿಗಳನ್ನು ದಾಟುತ್ತವೆ. ಅವರಿಗೆ ಮತ್ತಷ್ಟು ರನ್ನುಗಳು ಬರಲು ಸಾಧ್ಯವಾಗುತ್ತದೆ. ಈ ಒಂದು ಸಲಹೆಯನ್ನು ನೀಡಿದ ಟೈಗರ್ ಪಟೌಡಿ ಅವರನ್ನು ಅವರು ಸದಾ ಕಾಲಕ್ಕೂ ನಡೆಯುತ್ತಾರೆ. 

ಟೈಗರ್ ಪಟೌಡಿ ಅವರಿಂದಲೇ ಆಡುವ 11ರಲ್ಲಿ ಸ್ಥಾನ ಪಡೆದು, 1969ರಲ್ಲಿ ಆಸ್ಟ್ರೇಲಿಯ ವಿರುದ್ಧ ಕಾನ್ಪುರದಲ್ಲಿ ಮೊದಲ ಟೆಸ್ಟ್ ಹಾಡುವ ಅವಕಾಶ ಸಿಗುತ್ತದೆ. ಈ ಮೊದಲ ಪಂದ್ಯದಲ್ಲಿ ಎಲ್ಲರ ನಿರೀಕ್ಷೆ ಜಿಆರ್‌ವಿ ಮೇಲೆ ಇರುವಾಗ ದುರಾದೃಷ್ಟವಶಾತ್ ಮೊದಲ ಇನಿಂಗ್ಸ್ ನಲ್ಲಿ ಅವರು ಸೊನ್ನೆಗೆ ಔಟಾಗುತ್ತಾರೆ. ಮುಂದೆ ಎರಡು ದಿನ ನಿದ್ದೆ ಮಾಡಲಾಗದೆ, ಅದೇ ಚಿಂತೆಯಲ್ಲಿ ಇದ್ದ ಜಿಆರ್‌ವಿಗೆ ಮತ್ತೊಮ್ಮೆ ಎರಡನೇ ಇನ್ನಿಂಗ್ಸ್ ನಲ್ಲಿ ಅವಕಾಶ ದೊರಕುತ್ತದೆ. 

ತಮ್ಮ ಬ್ಯಾಟಿಂಗ್ ಸರಿದಿಗಾಗಿ ಚಿಂತಾಕ್ರಾಂತರಾಗಿ ಕುಳಿತು ಕಾಯುತ್ತಿರುವಾಗ, ಹೆಗಲ ಮೇಲೆ ಕೈಯೊಂದು ಇಟ್ಟಂತಾಗುತ್ತದೆ. ತಿರುಗಿ ನೋಡಿದಾಗ ಅದು ಟೈಗರ್ ಪಟೌಡಿ. "ಚಿಂತೆ ಮಾಡಬೇಡ ಈ ಇನಿಂಗ್ಸ್ ನಲ್ಲಿ ನೀನು ಶತಕ ಹೊಡೆಯುವೆ" ಎಂಬ ಟೈಗರ್ ಪಟೌಡಿ ಮಾತು ಅವರಿಗೆ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಕೆಲವೇ ನಿಮಿಷದಲ್ಲಿ ಅಂಗಳದ ಮಧ್ಯದಲ್ಲಿ ಹೋಗಿ ಹಾಡುವ ಅವಕಾಶ ಸಿಗುತ್ತದೆ. 

ಮುಂದಿನದು ಇತಿಹಾಸ, ಶತಕ ದಾಖಲಿಸಿದ ಜಿ ಆರ್ ವಿಶ್ವನಾಥ್ ಅಂದು ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಮೊದಲ ಪಂದ್ಯದಲ್ಲೇ ಶತಕ ಹೊಡೆದ ಕೆಲವೇ ಕೆಲವು ಜನರ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಸುಮಾರು 6,000 ಅಂತರಾಷ್ಟ್ರೀಯ ರನ್ನುಗಳನ್ನು ಗಳಿಸಿದ ಜಿಆರ್‌ವಿ ರವರಿಗೆ ಬಹುತೇಕ ರನ್ನುಗಳು ಬಂದದ್ದು ತಮ್ಮ ರಿಸ್ಟ್ ವರ್ಕ್ ಗಳ ಮೂಲಕವೇ. ಅದೇ ಅವರಿಗೆ ಕೆಲವೊಮ್ಮೆ ಮುಳುವಾದರೂ ತಮಗೆ ಹೆಚ್ಚು ರನ್ನ್ ತಂದು ಕೊಟ್ಟ ಅದನ್ನು ಅವರು ಕೊನೆಯ ತನಕ ಬಿಡಲಿಲ್ಲ. 
ರಾಜ ಗಾಂಭೀರ್ಯದ ಅಂದಿನ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ, ಸ್ನೇಹಶೀಲರಾಗಿದ್ದರೂ ಮೌನಿ. ಕೆಲವೇ ಕೆಲವೇ ಗೆಳೆಯರೊಂದಿಗೆ ಸಲುಗೆಯಿಂದ ಬೆರೆಯುತ್ತಿದ್ದ ಅವರು ಜಿಆರ್‌ವಿ ಅವರನ್ನು ಒಂದು ಬಾರಿ ಸುಮಾರು 15 ದಿನಗಳ ಕಾಲ ಊಟಿಯಲ್ಲಿನ ತಮ್ಮ ಬಂಗಲೆಗೆ ಕರೆದುಕೊಂಡು ಹೋಗಿ ರಜ ದಿನಗಳನ್ನು ಕಳೆದಿದ್ದನ್ನು ಜಿಆರ್‌ವಿ ನೆನೆಯುತ್ತಾರೆ. ಪಟೌಡಿ ಅವರೊಂದಿಗೆ 3 ದಿನ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದಾಗ ಜಿ ಅರ್ ವಿ ಅವರ ತಂದೆ ಹೇಳಿದ್ದು " ಅವರು ರಾಜ ಮನೆತನದವರು, ಸರಿಯಾಗಿ ನಡೆದುಕೋ". 3 ದಿನದ ಪ್ರವಾಸ 15 ದಿನಗಳಾಗುತ್ತವೆ. ಅಂತಹ ಇಷ್ಟವಾಗುವ ವ್ಯಕ್ತಿತ್ವ ಜಿ ಅರ ವಿ ಅವರದು. ಅಲ್ಲಿ ಮೊದಲ ಬಾರಿಗೆ ಶರ್ಮಿಳಾ ಠಾಗೋರ್, ರಾಜೇಶ್ ಖನ್ನ ಮುಂತಾದವರ ಸ್ನೇಹವಾಗಿದ್ದನ್ನೂ ನೆನೆಯುತ್ತಾರೆ. 

ಇದೇ ರೀತಿಯ ಘಟನೆಗಳನ್ನು ಜಿಆರ್‌ವಿ ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾ ಸಾಗುತ್ತಾರೆ. ತಮ್ಮ ಕ್ರಿಕೆಟ್ ಜೀವನದ ಮಧ್ಯದಲ್ಲಿ ತಾವೇ ಎಷ್ಟೇ ಪ್ರಯತ್ನ ಪಟ್ಟರು ರನ್ನುಗಳು ಬರದೇ ಕಾಡತೊಡಗುತ್ತದೆ. ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರೂ ಪರಿಹಾರ ಸಿಗದು. ಹೀಗಿರುವಾಗ ಹಿರಿಯ ಕ್ರಿಕೆಟಿಗ ಪಾಲಿಗರ್ ಉಮ್ರಿಗರ್ ರವರನ್ನು ಭೇಟಿಯಾದ ಜಿಆರ್‌ವಿ ತಮ್ಮ ಸಮಸ್ಯೆಯನ್ನು ಅವರ ಬಳಿ ಹೇಳುತ್ತಾರೆ. "ಬ್ಯಾಟಿಂಗ್ ಮಾಡುವ ಮುನ್ನ ಏನು ಮಾಡುತ್ತೀಯಾ?" ಎಂದು ಆ ಹಿರಿಯ ಕ್ರಿಕೆಟಿಗ ಕೇಳುತ್ತಾರೆ. 'ಪೆವೆಲಿಯನ್ ನಲ್ಲಿ ಕೂತು ಪ್ರತಿಯೊಂದು ಬಾಲನ್ನು ನೋಡುತ್ತೇನೆ, ಬೌಲರ್ ಏನು ಮಾಡುತ್ತಾರೆ, ಬ್ಯಾಟರ್ ಏನು ಮಾಡುತ್ತಾರೆ ಎಂಬುದನ್ನು ಗಮನಿಸುತ್ತಾ ಇರುತ್ತೇನೆ" ಎನ್ನುತ್ತಾರೆ ಜಿ ಆರ್ ವಿ.

"ನಿನ್ನ ಸಮಸ್ಯೆಯಿರುವುದು ಅಲ್ಲೇ, ಪಂದ್ಯದಲ್ಲಿ ಇಷ್ಟು ತೀವ್ರವಾಗಿ ತೊಡಗಿಕೊಂಡರೆ, ನೀನು ಬ್ಯಾಟಿಂಗ್ ಹೋಗುವ ಮುನ್ನವೇ ಮಾನಸಿಕವಾಗಿ ಸುಸ್ತಾಗಿರುತ್ತೀಯ, ಅಂಗಳಕ್ಕೆ ಹೋಗುವ ಮುನ್ನವೇ ನೀನು ದಣಿವಾಗಿದ್ದರೆ ರನ್ನುಗಳು ಎಲ್ಲಿ ಬರುತ್ತವೆ? ಆಗಾಗ ಡ್ರೆಸಿಂಗ್ ರೂಮಿಗೆ ಹೋಗಿ ಒಂದಷ್ಟು ಲಘು ವ್ಯಾಯಾಮ, ಕಣ್ಣಿನ ವ್ಯಾಯಾಮ ಮಾಡು" ಎನ್ನುತ್ತಾರೆ. ಹಾಗೆಯೇ ಮಾಡಿದ ವಿಶ್ವನಾಥ್ ರವರ ಬ್ಯಾಟಿಂದ ಮತ್ತೆ ರನ್ನುಗಳು ಹರಿಯುತ್ತವೆ. 

ಹೊಡೆದ 6000 ರನ್ನುಗಳಿಗಿಂತ ಜಿಆರ್‌ವಿ ಆ ರನ್ನುಗಳಿಗೆ ಗಳಿಸಿದ ಪ್ರೀತಿ ಅಪಾರ. 1974 ರಲ್ಲಿ ಮುಂಬೈನ ವೆಸ್ಟ್ ಇಂಡೀಸ್ ಎದುರಿನ ಅವರ ಔಟಾಗದ 97 ರನ್ನುಗಳ ಆಟಕ್ಕೆ ಪ್ರತಿಷ್ಠಿತ ವಿಸ್ಡನ್ ಸಂಸ್ಥೆಯು ಶತಮಾನದ ಅತಿ ಶ್ರೇಷ್ಠ ಇನ್ನಿಂಗ್ಸ್ ಗಳ ಪಟ್ಟಿಯಲ್ಲಿ 38ನೇಯ ಸ್ಥಾನ ನೀಡಿದೆ. ಅದಕ್ಕಿಂತ ದೊಡ್ಡ ಹೆಗ್ಗಳಿಕೆ ಎಂದರೆ ಇಡೀ ಪಟ್ಟಿಯಲ್ಲಿ, ನೂರಕ್ಕಿಂತ ಕಡಿಮೆ ರನ್ನು ಇರುವ ಎರಡೇ ಎರಡು ಇನಿಂಗ್ಸ್ ಗಳಲ್ಲಿ ಇದು ಒಂದು. 

ಹಾಗೆಯೇ ಈ ಇನ್ನಿಂಗ್ಸ್ ನ ತಮ್ಮ ಪ್ರತಿಯೊಂದು ಹೊಡೆತಕ್ಕೂ ಇಂಡೀಸ್ ಆಟಗಾರರೇ ಚಪ್ಪಾಳೆ ತಟ್ಟುತ್ತಿದ್ದದ್ದು ತಮಗೆ ಕೇಳಿಸುತಿತ್ತು ಎಂದು ಅವರು ನೆನೆಯುತ್ತಾರೆ. ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಭಯಾನಕ ದಾಳಿಗೆ ನೀಡಿದ ಪ್ರತಿರೋಧ ಕಂಡ ಆಸ್ಟ್ರೇಲಿಯ ಬೌಲರ್ ಒಬ್ಬ "ಯು ಆರ್ ಎ ಮ್ಯಾನ್ ಆಫ್ ಸ್ಟೀಲ್" ಅನ್ನುತ್ತಾನೆ. ಮತ್ತಲ್ಲದೆ ಏನು? ಹೇಳಿ ಕೇಳಿ ಉಕ್ಕಿನ ಪಟ್ಟಣ ಭದ್ರಾವತಿಯವನಲ್ಲವೇ ಎಂದು ನೆನೆಯುತ್ತಾರೆ ಜಿ ಆರ್ ವಿ. 

ಟೈಗರ್ ಪಟೌಡಿ, ಬೇಡಿ ಪ್ರಸನ್ನ, ಚಂದ್ರಶೇಖರ್, ಗವಾಸ್ಕಾರ್, ವಾಡೇಕರ್, ದಿಲಿಪ್ ದೋಶಿ, ಮುಂತಾದ ದಿಗ್ಗಜರೊಂದಿಗೆ ಆಡಿದರೂ, ತಮ್ಮ ಆಟ ಹಾಗೂ ವ್ಯಕ್ತಿತ್ವದಿಂದ ತಮ್ಮದೇ ಹೆಸರು ಮಾಡಿದ ಜಿಆರ್‌ವಿ ಕರ್ನಾಟಕಕ್ಕೆ 'ಜಂಟಲ್ ಜಂಟಲ್ ಮೆನ್ ಕ್ರಿಕೆಟರ್ಸ್' ಎಂಬ ಬಿರುದು ತಂದುಕೊಟ್ಟವರು. ಇಂದಿಗೂ ಈ ಪರಂಪರೆ ಉಳಿಸಿಕೊಳ್ಳುವ ಒತ್ತಡ ಕರ್ನಾಟಕದ ಪ್ರತಿ ಆಟಗಾರನ ಮೇಲಿದೆ. 

ಮುಂಬೈ ತಂಡವನ್ನು ಮೊದಲ ಬಾರಿಗೆ ಮಣಿಸಿ ಕರ್ನಾಟಕಕ್ಕೆ ರಣಜಿ ಟ್ರೋಫಿ ತಂದ ಬಗ್ಗೆಯೇ ಒಂದೀಡೀ ಅಧ್ಯಾಯವಿದೆ. ಒಟ್ಟಿನಲ್ಲಿ ಓದುತ್ತಾ ಸಾಗುತ್ತಿದ್ದಂತೆ ಕ್ರಿಕೆಟಿನ ಒಳನೋಟಗಳು ಮಾತ್ರವಲ್ಲದೆ, ಒಬ್ಬ ಸಜ್ಜನ ಆಟಗಾರನ ಜೀವನದ ವಿವಿಧ ಆಯಾಮಗಳನ್ನು ಈ ಪುಸ್ತಕ ತೆರೆದಿಡುತ್ತದೆ.

No comments:

Post a Comment