Tuesday 20 March 2018

“ ಚಿಕ್ಕ ಮಕ್ಕಳಂತಾಗದಿದ್ದರೆ ಮುಂದಿನ ತರಗತಿಯನ್ನು ಪ್ರವೇಶಿಸಲಾರಿರಿ”

ಇದು ಪರೀಕ್ಷೆಗಳ ಕಾಲ. ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಓದುವ ಮಕ್ಕಳಿರುವ ಮನೆಗಳೊಮ್ಮೆನೋಡಬೇಕು. ಅದರಲ್ಲೂ ಐ.ಸಿ.ಎಸ್ಸಿ. ಅಥವಾ ಸಿಬಿಸಿ ಸಿಲಬಸ್ ಇರುವ ಮಕ್ಕಳ ಮನೆಗಳ ಪರಿಸ್ಥಿತಿಯಂತೂ ಮತ್ತಷ್ಟು ಗಂಭೀರ. ಬಾಗಿಲ ಬಳಿಯೇ ’ಓದತ್ತಿರುವ ಮಕ್ಕಳಿದ್ದಾರೆ ಎಚ್ಚರಿಕೆ’ ಎಂಬ ಬೋರ್ಡು ಇರದ ವಾತಾವರಣ. ಒಂದೋ ಸ್ಮಶಾನ ಮೌನ ಅಥವಾ ರಣಕಹಳೆ. ಪರೀಕ್ಷೆ ಬರುತ್ತಿರುವ ಮಕ್ಕಳಿಗೊಂದು ಗುಡ್ ಲಕ್.

ಪ್ರೊ.ಕೃಷ್ಣೇಗೌಡರು ಒಂದು ಹಾಸ್ಯ ಘಟನೆ ಹೇಳುತ್ತಿರುತ್ತಾರೆ. ಯಾವುದೋ ಒಂದು ಮನೆಗೆ ಹೋದಾಗ, ಅಲ್ಲಿ ಎಲ್ಲರೂ ಪಿಸುಮಾತಲ್ಲೇ ಮಾತನಾಡುತ್ತಿದ್ದಾರೆ. “ಯಾಕೆ?” ಎಂದು ಕೇಳುತ್ತಾರೆ ಗೌಡರು. “ ಮಗನ ಎಕ್ಸಾಂ ನಡೀತ್ತಿದೆ” ಬರುತ್ತದೆ ಉತ್ತರ. “ಯಾವ ಕ್ಲಾಸು?”...... “ಯೂ ಕೆ ಜಿ” ಬಂತು ಉತ್ತರ. ಇದು ಇಂದಿನ ಪರಿಸ್ಥಿತಿ.

ಅದೇ ಕೃಷ್ಣೇಗೌಡರು ತಮ್ಮ ಹರಟೆ ಕಾರ್ಯಕ್ರಮಗಳಲ್ಲಿ ಮತ್ತೊಂದು ಪ್ರಸಂಗವನ್ನು ಹೇಳುವುದನ್ನು ಅವರ ಮಾತಿನಲ್ಲೇ ಕೇಳಬೇಕು. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜನಗಣತಿಗೆ ಹೋಗಿ “ಯಜಮಾನ್ರೇ ಎಷ್ಟು ಮಕ್ಕಳು” ಎಂದು ಕೇಳಿದರೆ, ಯಜಮಾನ್ರು ಆಗ ಎಣಿಸುತ್ತಿದ್ದರಂತೆ ಬೆರಳುಗಳಲ್ಲಿ. ಆಗ ಹೆಂಡತಿ ಬಾಗಿಲ ಬಳಿ ಬಂದು ಮರೆತು ಹೋಗಿದ್ದ ಇನ್ನೊಂದೆರಡು ಮಕ್ಕಳ ಹೆಸರನ್ನು ನೆನಪಿಸಿದ ಮೇಲೆ  “ಹಾ.. ಹೌದು ಹೌದು ಬರ್ಕೋಳ್ಳಿ “ ಎನ್ನುತ್ತಿದ್ದರಂತೆ.

ಗಂಗಾವತಿ ಪ್ರಾಣೇಶ್‍ ತಮ್ಮ ಅನುಭವವನ್ನು ಅಷ್ಟೇ ಚೆನ್ನಾಗಿ ಹೇಳುತ್ತಾರೆ. ಅವರು ಓದುವಾಗ ಶಾಲೆಗೆ ಚೆಡ್ಡಿ ಹಾಕಿಕೊಳ್ಳದೆ ಬರುತ್ತಿದ್ದ ಹುಡುಗನ ತಂದೆಯನ್ನು ಮೇಷ್ಟ್ರು ಕರೆದು “ ಮಕ್ಕಳಿಗೆ ಶಾಲೆಗೆ ಕಳಿಸ್ವಾಗ ಚೆಡ್ಡಿಯಾದ್ರೂ ಹಾಕಿ ಕಳಿಸ್‍ಬಾರದೇನ್ರೀ?” ಎಂದರೆ, “ಹೇ..ಬಿಡಿ ಸಾ... ಚಡ್ಡಿ ಎಲ್ಲಾ ಹಾಕಿ ಕಳ್ಸೋಕೆ ಇದೇನ್ ಜಾತ್ರೇನೇ, ಊರ್ ಹಬ್ಬನೇ?” ಅಂದ್ರಂತೆ. ಅದು ಅಂದಿನ ಪರಿಸ್ಥಿತಿ. 

ಇದೆಲ್ಲಾ ತಮಾಷೆಯಾಗಿ ಕಾಣಬಹುದು,  ಅದರೆ ಆ ಕಾಲದ ಸಾಮಾಜಿಕ, ಶೈಕ್ಷಣಿಕ, ಕೌಟಂಬಿಕ ವ್ಯವಸ್ಥೆಯ ಕನ್ನಡಿಯೂ ಹೌದು. ಕೂಡು ಕುಟುಂಬ, ನಿಕಟ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆದ ಮಕ್ಕಳಿಗೆ ತಮ್ಮದೇ ತಂದೆ ತಾಯಿಯರ, ಪೋಷಕರ ಆರೈಕೆ, ವಿಶೇಷವಾದ ಕಾಳಜಿ ಸಿಗುತ್ತಿರಲಿಲ್ಲ. 
ಬೇಕಾಗಿಯೂ ಇರಲಿಲ್ಲವೇನೋ, ತಾಯಿಯ ಮಮಕಾರ ಬಿಟ್ಟರೆ. ಆದರೂ ಆ ಮಕ್ಕಳೆಲ್ಲಾ ಸಮಾಜದ ಆಶಯಗಳಿಗೆ ವಿಮುಖವಾಗಿಯೇನು ಬೆಳೆಯಲಿಲ್ಲ. ಮಾನವೀಯ ಮೌಲ್ಯಗಳಿಗೆ ಕೊರತೆಯಾಗಲಿಲ್ಲ. ಅದೇ ಚೆಡ್ಡಿ ಇಲ್ಲದ ಎಷ್ಟೋ ಮಕ್ಕಳೇ ನಾಡಿನ, ದೇಶದ ಸಾಧಕರಾಗಿ ಬೆಳೆದಿದ್ದಾರೆ.

ಹಾಗೆಂದು ಈ ಕಾಲದ ಶಿಕ್ಷಣ, ವ್ಯವಸ್ಥೆಯ ಬಗ್ಗೆ ದೂರುತ್ತಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತು ಒಡ್ಡುತ್ತಿರುವ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ ಸಮಯ ಸಂಯಮ ಇಲ್ಲ. ಪರಿಸ್ಥಿತಿಗೆ ಒಗ್ಗಿಕೊಳ್ಳಲೇ ಬೇಕು. ಬೇರೆ ಬೇರೆ ಕಾಲಘಟ್ಟಗಳ ಪರಿಸ್ಥಿತಿ ಸಾಮಾಜಿಕ ವಾತವರಣಗಳನ್ನು ಹೋಲಿಸುವುದು ಸರಿಯಲ್ಲದಿದ್ದರೂ ಕೆಲವೊಮ್ಮೆ ಅನಿವಾರ್ಯವು, ರಂಜನೀಯವೂ ಆಗುತ್ತದೆ.
ಈಗ ನೋಡಿ, ಸಂಜೆಯಾದರೂ ಮನೆಯ ಗೃಹಿಣಿ, ಮಹಾಲಕ್ಷ್ಮಿ ಕೂದಲು ಕೆದರಿಕೊಂಡು ಮುದುರಿದ ನೈಟಿಯಲ್ಲೇ ಇದ್ದಾರೆ ಎಂದರೆ ಮನೆಯಲ್ಲಿ ಮಕ್ಕಳ ಪರೀಕ್ಷೆಯೆಂದೇ ಅರ್ಥ ಮಾಡಿಕೊಳ್ಳಬೇಕು. ಟಿ.ವಿ ಹಾಕಲೂ ಆಗದೆ ಸರಿಯಾದ ಸಿಗ್ನಲ್ ಇಲ್ಲದ ಮೊಬೈಲು ಫೋನನ್ನು ಹೆಬ್ಬರಳಲ್ಲಿ ತೀಡುತ್ತಿರುವವನೇ ತಂದೆ.  ಓದಿದ ಪೇಪರನ್ನೇ ತಿರವುತ್ತಿರುವವರೇ ತಾತ. ಅಜ್ಜಿಗೆ ಸೀರಿಯಲ್ ಚಿಂತೆಯಾದರೆ, ಮೊಮ್ಮಕ್ಕಳಿಗ ಮುಗಿಯದ ಪೋರ್ಷನ್ ಕಂತೆ.

ಬಭ್ರುವಾಹನದಲ್ಲಿ “18 ದಿನಗಳು ನಡೆದ ಕುರುಕ್ಷೇತ್ರ ಯುದ್ಧವನ್ನು ನಾನು ಒಂದೇ ದಿನದಲ್ಲಿ ಮುಗಿಸುತ್ತಿದ್ದೆ” ಎಂದು ಡಾ.ರಾಜ್‍ಕುಮಾರ್ ಮತ್ತೊಬ್ಬ ಡಾ.ರಾಜ್‍ಕುಮಾರ್‍ ಗೆ ಹೇಳುತ್ತಾರೆ. ಇಂದು ಒಂದು ವಾರದಲ್ಲಿ ಮುಗಿಯಬಹುದಾದ ಪ್ರೈಮರಿ ಪರೀಕ್ಷೆಗಳು ಒಂದು ತಿಂಗಳು ನಡೆಯುತ್ತದೆ. ಮಾರಲ್ ಸೈನ್ಸ್ ಗೂ ಎರಡು ದಿನದ ಸ್ಟಡಿ ಹಾಲಿಡೇ. ಪರೀಕ್ಷೆ ಮುಗಿಯುವವರೆಗೂ ಮನೆಯವರಿಗೆಲ್ಲಾ ಬಾಣಗಳ ಮೇಲೆ ಮಲಗಿದ್ದ ಭೀಷ್ಮನ ಪರಿಸ್ಥಿತಿ. ಮಕ್ಕಳದೋ ಚಕ್ರವ್ಯೂಹವ ಹೊಕ್ಕು ಹೊರಬರಲಾಗದ ಅಭಿಮನ್ಯುವಿನ ಗೋಳು. ಟೀಚರುಗಳ ಮೇಲೆ ಒತ್ತಡವೆಂಬ ಭೀಮನ ಗದ್ಢಾ ಪ್ರಹಾರ. ಪಕ್ಷಿಯ ಕಣ್ಣು ಮಾತ್ರ ಕಾಣಿಸಿದ ಅರ್ಜುನನ ಏಕಾಗ್ರತೆ ಇರುವ ಮಕ್ಕಳೋ ಗೆದ್ದುಕೊಂಡರು, ಇಲ್ಲವೇ ಯುದ್ಧದಲ್ಲಿ ಸರಿಯಾದ ಸಮಯಕ್ಕೆ ರಥದ ಚಕ್ರ ಸಿಲುಕಿ ಒದ್ದಾಡಿದ ಕರ್ಣನ ಪಾಡೇ ಗತಿ.

ಒಟ್ಟಿನಲ್ಲಿ ಈ ಪರೀಕ್ಷೆಗಳು ಮಕ್ಕಳಿಗೆ ಮಾತ್ರವಲ್ಲ, ಅದು ತಂದೆ ತಾಯಿಯರಿಗೂ. ಕೆಲವೊಮ್ಮೆ ಅಜ್ಜಿ ತಾತಂದರಿಗೂ. ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಪ್ರಾಜೆಕ್ಟ್ ವರ್ಕ್ ಅನ್ನು ಕುಟುಂಬದ ಎಲ್ಲರೂ ಸೇರಿ ಮಾಡದಿದ್ದರೆ ಅದು ಪೂರ್ಣಗೊಳ್ಳುವುದಿಲ್ಲ. ಕುಟುಂಬ ಎಷ್ಟು ಒಗ್ಗಟ್ಟಾಗಿದೆ, ಅನೋನ್ಯವಾಗಿದೆ ಎಂಬುದರ ಮೇಲೆ ಪ್ರಾಜೆಕ್ಟ್ ವರ್ಕ್‍ನ ಗುಣಮಟ್ಟ ನಿಂತಿರುತ್ತದೆ. ಎಷ್ಟೋ ಸಮಯ ಮಕ್ಕಳಿಗೆ ತಮ್ಮ ಪೊಷಕರು ಮಾಡುತ್ತಿರುವ ತಮ್ಮ ಪ್ರಾಜೆಕ್ಟ್ ಯಾವುದೆಂದೂ ಗೊತ್ತಿರುವುದಿಲ್ಲ.

ಪರೀಕ್ಷೆಗಳೇ ಇಲ್ಲದ ಶಾಲೆಗಳೂ ಇವೆಯಂತೆ ಅದು ಶುಭ ಸಮಾಚಾರ. ಅಂತಹ ಶಾಲೆಗಳನ್ನು ಹುಡುಕಿ ಹೊರಟು ಫೀಸ್ ನೋಡಿದರೆ? ಅದು ಪರೀಕ್ಷೆಗಳಿಗಿಂತ ದೊಡ್ಡ ಅಗ್ನಿ ಪರೀಕ್ಷೆ. ಆ ಫೀಸ್‍ಗಿಂತ ಮಕ್ಕಳು ಪರೀಕ್ಷೆ ಬರೆದು ಒದ್ದಾಡುವುದೇ ಲೇಸು ಅನಿಸುವುದುಂಟು. ಗೆಳೆಯನೊಬ್ಬ ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲೇ ಶಿಕ್ಷಣ ಕೊಡಿಸುವ ಪಣ ತೊಟ್ಟಿದ್ದ. ಹೇಗೆ ನಡೆಯುತ್ತಿದೆ ಮಕ್ಕಳ ಓದು ಎಂದು ಕೇಳೋಣವೆಂದರೆ ಮೊಬೈಲ್, ಫೇಸ್ ಬುಕ್ ಬಳಸುವುದಿಲ್ಲ ಎಂಬ ಮತ್ತೊಂದು ಪಣತೊಟ್ಟು ನಾಟ್ ರೀಚಬಲ್ ಆಗಿದ್ದಾನೆ.

ಮೊದಲೆಲ್ಲಾ ಬೇಸಿಗೆ ರಜವೆಂಬುದೇ ಒಂದು ಪುಳಕ. ಬೆಂಗಳೂರಿನ ಮಕ್ಕಳಿಗೆ ರಜವೊಂದೇ ಗೊತ್ತಿದ್ದು, ಬೇಸಿಗೆ ಅಷ್ಟಾಗಿ ತಟ್ಟುತ್ತಿರಲಿಲ್ಲ. ಈಗ ಫೆಬ್ರವರಿಗೇ ನೆತ್ತಿಯ ಸೂರ್ಯ ಬೇಸಿಗೆಯ ರುಚಿ ತೋರುತ್ತಿದ್ದಾನೆ. ಕೆಲವು ಶಾಲೆಗಳು ಮೇ ನಲ್ಲೇ ಪುನರಾರಂಭವಂತೆ ಅದರಲ್ಲೂ ಹತ್ತನೆಯ ತರಗತಿ ಮಕ್ಕಳಿಗೆ. ಬೇಸಿಗೆ ಯಾವುದು, ರಜೆ ಯಾವುದು, ಆರಂಭ-ಅಂತ್ಯ ಎಲ್ಲವೂ ಅಯೋಮಯ.

ಇನ್ನೂ ಈಗಾಗಲೇ ಅಡ್ಮಿಷನ್‍ಗಳು ಮುಗಿದಿದೆ. ಮುಂದಿನ ಶೈಕ್ಷಣಿಕ  ವರ್ಷಕ್ಕೆ ತಂದೆ ತಾಯಿಯರು ಈಗಲೇ ರೆಡಿಯಾಗಬೇಕು. ನರ್ಸರಿ ಫೀಸ್ ಕಟ್ಟಲು ಎಜುಕೇಶನ್ ಲೋನ್ ತೆಗೆದುಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಮುಂದಿನ ವರ್ಷದ ಸಿಲಬಸ್ ನೋಡಿ, ಅದನ್ನು ಮನೆಯಲ್ಲಿ ಹೇಳಿಕೊಡಲು ತಾವೇ ಚಿಕ್ಕ ಮಕ್ಕಳಾಗಿ ತಯಾರಾಗಬೇಕು. ಅದಕ್ಕೆ ಹೇಳಿದ್ದು “ ಚಿಕ್ಕ ಮಕ್ಕಳಂತಾಗದಿದ್ದರೆ ಮುಂದಿನ ತರಗತಿಯನ್ನು ಪ್ರವೇಶಿಸಲಾರಿರಿ”.


-ಪ್ರಶಾಂತ್ ಇಗ್ನೇಶಿಯಸ್

ಮಾತುಕತೆ ಪತ್ರಿಕೆಯಲ್ಲಿ ಪ್ರಕಟವಾದ ಬರಹ