Sunday 5 September 2010

ಹಸಿವು

ಪ್ರೀತಿಯ ಅನು


ಹಸಿವಿಗೆ ಅನೇಕ ಮುಖಗಳಿವೆ... ಅದರ ಒಂದು ಮುಖ ಈ ಕಥೆಯಲ್ಲಿ ಕಾಣಬಹುದು...

ವಿಶ್ವಕಪ್ ಕ್ರಿಕೆಟ್ನ ಗಾಳಿ ಭಾರತದ ಮೂಲೆ ಮೂಲೆಗಳಿಗೆ ಬೀಸಿ, ತೊಟ್ಟಲಿನಿಂದ ಆಗತಾನೆ ಹೊರಬಂದ ಪೋರನ ಕೈಯಲ್ಲಿ ಕೂಡ ಬ್ಯಾಟ್ ಇರುವಂತೆ ಮೋಡಿ ಮಾಡಿ “Cricket is our religion, Sachin is our God”, ಎಂಬ ವಾಕ್ಯ ಎಲ್ಲೆಲ್ಲೂ ರಾರಾಜಿಸುವಂತೆ ಮಾಡಿತ್ತು. ಅದೇ ಸಮಯಕ್ಕೆ ಭಾರತದ ಕ್ರಿಕೆಟ್ ತಂಡವು ಪಾಕಿಸ್ಥಾನದ ಕ್ರಿಕೆಟ್ ತಂಡವು ಪಾಕಿಸ್ಥಾನದ ಕ್ರಿಕೆಟ್ ತಂಡದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ, ಅದರ ವಿರುದ್ಧ ಗೆಲುವು ಸಾಧಿಸಿ ವಿಶ್ವಕಪ್ ಗೆದ್ದಷ್ಟೇ ಖುಶಿಯಲ್ಲಿತ್ತು ಯಾವ ತಂಡಕ್ಕಾದರೂ ಸೋಲಲಿ ನಮ್ಮ ಭಾರತ, ಆದರೆ ಪಾಕಿಸ್ತಾನದ ತಂಡಕ್ಕೆ ಮಣ್ಣು ಮುಕ್ಕಿಸಿದರೆ ಸಾಕು ಎನ್ನುವವರ ಬಾಯಿಗಳಿಗೆ ಈ ಗೆಲುವು ಆಹಾರವಾಗಿತ್ತು. ನನ್ನ ಹುಟ್ಟೂರಿಗೂ ಈ ಬಿಸಿ ತಾಗದೆ ಇರಲಿಲ್ಲ. ಊರಿನಲ್ಲಿ ಪ್ರತಿವರ್ಷನಡೆದು ಬಂದಂತೆ ಈ ಬಾರಿಯೂ ಒಂದು ಕ್ರಿಕೆಟ್ ಟೂರ್ನಮೆಂಟ್ ಪ್ರಾರಂಭವಾಗಿ, ಆಗಾಗಲೇ ಮೂರು ಪಂದ್ಯಗಳು ಮುಗಿದಿದ್ದವು. ಆ ಟೂರ್ನಮೆಂಟ್ನ ನಿಯಮದಂತೆ ಯಾವುದೇ ತಂಡ ಸೆಮಿಪೈನಲಿಗೆ ಅರ್ಹತೆ ಪಡೆಯಬೇಕಾದರೆ ಆಡುವ ಒಟ್ಟು ಮೂರು ಪದ್ಯಗಳಲ್ಲಿ ಎರಡು ಪದ್ಯಗಳ ಗೆಲುವು ಕಡ್ಡಾಯವಾಗಿತ್ತು.ನನ್ನ ಹುಟ್ಟೂರಿನ ತಂಡದವರು ಚೊಚ್ಚಲ ಪಂದ್ಯದಲ್ಲೇ ಸೋಲನ್ನನುಭವಿಸಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿ ಮಾಡು ಇಲ್ಲವೇ ಮಡಿ ಎಂಬ ಸಿದ್ದಾಂತಕ್ಕೆ ಬದ್ದರಾಗಿ ಗೆಲುವಿಗೆ ಕತ್ತನು ಕೊಯ್ದಿಡಲು ಸಿದ್ದರಿತುವಂತೆ ಕಣಕ್ಕಿಳಿದರು. ಈ ಎರಡನೆಯ ಪಂದ್ಯವನ್ನು ನಮ್ಮ ಊರಿನ ತಂಡದವರು ಪಕ್ಕದ ಹಳ್ಳಿಯ ವಿರುದ್ಧ ಆಡಬೇಕಾಗಿದ್ದುದು ಇನ್ನೊಂದು ವಿಪರ್ಯಾಸದ ಸಂಗತಿಯಾಗಿತ್ತು. ಇದಕ್ಕೆ ಮೂಲ ಕಾರಣ ಈ ಹಳ್ಳಿಗಳ ನಡುವೆ ಇದ್ದ ಹಾವು ಮುಂಗಿಸಿಯಂತಹ ಸಂಬಂಧ. ಸದಾ ಈ ಹಳಿಗಳ ನಡುವೆ ಘರ್ಷಣೆ ತಿಕ್ಕಾಟಗಳು ನಡೆಯುತ್ತಿದ್ದವು. ಈ ಕಾರಣಕ್ಕಾಗಿ ನನ್ನ ಹುಟ್ಟೂರನ್ನು ಭಾರತಕ್ಕೆ ಹೋಲಿಸಿ ಪಕ್ಕದ ಹಳ್ಳಿಯನ್ನು ಪಾಕಿಸ್ತಾನಕ್ಕೆ ಹೋಲಿಸುವ ವಾಡಿಕೆ ಜನರಲ್ಲಿ ಬೆಳೆದಿತ್ತು. ಈ ಎಲ್ಲಾ ಕಾರಣಗಳಿಂದ ಈ ಪ್ರಸ್ತುತ ಪಂದ್ಯ ಊರಿನ ಒಣ ಪ್ರತಿಷ್ಠೆಯನ್ನು ಉಳಿಸುವ ಪೈಪೋಟಿಯ ಪಂದ್ಯವಾಗಿತ್ತು.

ನನ್ನ ಹೂಟ್ಟೂರಿನ ತಂಡದ ನಾಯಕ ರಾಜು ಟಾಸು ಗೆದ್ದು ಫಿಲ್ಡಿಂಗ್ ಆರಿಸಿಕೊಂಡು ತೊಡೆ ತಟ್ಟಿ ಭೀಮನನ್ನು ಗದಾಯುದ್ಧಕ್ಕಾಗಿ ಅಹ್ವಾನಿಸಿದ ದುರ್ಯೋಧನನಂತೆ ಎದೆ ತಟ್ಟಿ ಮೈದಾನದಲ್ಲಿ ನಿಂತಿದ್ದನು.ಈ ಪಂದ್ಯದ ನಿರ್ಣಾಯಕನಾಗಿ ನಾನು ಮೂರು ವಿಕೆಟ್ಗಳ ನಡುವೆ ಕಣ್ಣರಳಿಸಿಕೊಂಡು ನಿಂತಿದ್ದೆ. ಪಾಕಿಸ್ಥಾನದ ಹೆಸರನ್ನು ಪಡೆದಿದ್ದ ಪಕ್ಕದ ಹಳ್ಳಿಯ ತಂಡ ೧೫ ನಿರ್ಧಿಷ್ಟ ಓವರ್ ಗಳಲ್ಲಿ ೭೯ ಓಟಗಳನ್ನು ಸಂಪಾದಿಸಿ ೮೦ ರನ್ನುಗಳನ್ನು ಮಾಡುವಂತೆ ನಮ್ಮ ಊರಿನ ತಂಡಕ್ಕೆ ಸವಾಲು ಎಸೆದಿತ್ತು. ಪದ್ಯ ನಡೆಯುವಾಗ ಜನರ ಕೂಗಾಟ ಮುಗಿಲು ಮುಟ್ಟಿತ್ತಿತ್ತು. ಈ ಪದ್ಯದ ಪ್ರೇಕ್ಷಕರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಒಂಟಿ ಕಾಲುಗಳಲ್ಲಿ ನಿಂತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ನಮ್ಮ ತಂಡದವರೂ ಕೂಡ ತೋಳಿನ ತೀಟೆ ತೀರಿಸಲು ಹತ್ತು ಓವರ್ ಗಳ್ಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೫೦ ರನ್ ಗಳನ್ನು ಪಡೆದು, ಇನ್ನುಳಿದ ೫ ಓವರ್ಗಳಲ್ಲಿ ೩೦ ರನ್ಗಳನ್ನು ಮಾಡಬೇಕಾದ ಒತ್ತಡದ ಪರಿಸ್ಥಿಯಲ್ಲಿತ್ತು. ಇದರಿಂದ ಪಂದ್ಯವು ಇನಷ್ಟು ರೋಮಾಂಚಕವಾಗಿ ಜನರ ಕೂದಲು ನೆಟ್ಟಗೆ ನಿಲ್ಲುವಂತೆ ಮಾಡಿತ್ತು ಒಂದು ಮಾತಿನಲ್ಲಿ ಹೇಳಬೇಕಾದರೆ ನಮ್ಮ ತಂಡ ಜಾತಕ ಪಕ್ಷಿಯಂತೆ ಹಸಿದು ಕಾದಿತ್ತು.

ನನ್ನಲ್ಲೂ ನನ್ನ ಊರಿನ ತಂಡದವರು ಗೆಲ್ಲಬೇಕೆಂಬ ಆಸೆ ಹುಟ್ಟಿತಾದರೂ ನಿರ್ಣಾಯಕನಾಗಿ ಇನ್ನೊಬ್ಬರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯಲ್ಲ ಎಂದು ನನ್ನ ಮನಸ್ಸು ಪಿಸುಗುಟ್ಟಿತ್ತು.ಆದರೆ ಗೆಲುವಿನ ಹಸಿವು ಕಾಳ್ಗಿಚ್ಚಿನಂತೆ ವ್ಯಾಪಿಸಿ ನನ್ನ ಮನಸ್ಸನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿತ್ತು. ನಮ್ಮೂರಿನ ತಂಡದವರು ೧೪ ಓವರ್ ಗಳಲ್ಲಿ ೭೫ ರನ್ ಗಳನ್ನು ಸಂಪಾದಿಸಿ ಇನ್ನುಳಿದ ಒಂದು ಓವರ್ ನಲ್ಲಿ ೫ ರನ್ ಗಳನ್ನು ಮಾಡಬೇಕಾದ ಪರಿಸ್ಥಿತಿ ಕುತ್ತಿಗೆಗೆ ಬಂದಿತ್ತು.
ನನ್ನಲ್ಲಿದ್ದ ಗೆಲುವಿನ ಹಸಿವು ಬೆನ್ನು ಹತ್ತಿದ ಬೇತಾಳನಂತೆ ಬಾಯ್ತೆರೆದು ನನ್ನ ಮನಸ್ಸನ್ನು ಗೊಂದಲಕ್ಕೆ ಸಿಲುಕಿಸಿತ್ತು. ಗೆದ್ದ ನಂತರ ಸಂಭವಿಸುವ ಘಟನೆಗಳನ್ನು ಮನಸ್ಸು ತೆರೆ ತೆರೆಯಾಗಿ ಕಣ್ಣ ಮುಂದೆ ಬಿಚ್ಚಿಸತೊಡಗಿತ್ತು. ವಿಜೇತ ನಾಯಕನ ಮೆರವಣಿಗೆ, ಜಯಘೋಷದ ಅಬ್ಬರ,ಊರ ಪ್ರತಿಷ್ಠೆ ಎಲ್ಲವೂ ಕ್ಷಣಮಾತ್ರದಲ್ಲಿ ನನ್ನನ್ನು ಮೋಡಿ ಮಾಡಿ ಕಲ್ಪನಾ ಲೋಕದಲ್ಲಿ ಮೈ ಮೆರೆಸಿ ಗೆಲುವಿನ ಹಸಿವಿನ ತೀವ್ರತೆಯನ್ನು ಹೆಚ್ಚಿಸಿತು. ಹೀಗೆ ಕಟ್ಟಿಕೊಂಡ ಆಸೆಗಳು ಹೊತ್ತುಕೊಂಡ ಕನಸುಗಳು ನನ್ನ ಮನಸ್ಸನ್ನು ಕಲುಕಿ, ನನ್ನ ಊರಿನ ತಂಡದವರನ್ನು ಗೆಲ್ಲಿಸುವ ಅಮಲಿನಲ್ಲಿರಿಸಿತ್ತು.

ಕಿವಿ ಕಿವುಡಾಗುವಂತಹ ಚಪ್ಪಾಳೆಗಳ, ಕೂಗಾಟಗಳ ಮಧ್ಯೆ ಪಂದ್ಯ ಮುಂದುವರೆಯಿತು. ನಮ್ಮೂರಿನ ತಂಡದವರು ೭೮ ರನ್ನುಗಳನ್ನು ಮಾಡಿ ಕೇವಲ ಒಂದು ಎಸೆತದಲ್ಲಿ ಎರಡೂ ರನ್ನುಗಳನ್ನು ಮಾಡಬೇಕಾದ ಸ್ಥಿತಿ ಕುತ್ತಿಗೆಗೆ ಬಂದಿತು. ಛೇ ಒಂದು ಎಸೆತದಲ್ಲಿ ನನ್ನ ಊರಿನ ತಂಡದವರು ಎರಡು ರನ್ ಮಾಡುವುದು ಆಕಾಶಕ್ಕೆ ಏಣಿ ಹಾಕುವಂತೆ ಎಂದು ಮನಸ್ಸು ಹೇಳತೊಡಗಿತ್ತು. ೬ನೇ ಎಸೆತ ಮಾಡುವ ಮುನ್ನವೇ ನೋ ಬಾಲ್ ಕೊಡಲು ನಿರ್ಧರಿಸಿದೆ.

ವಿರುದ್ಧ ತಂಡದವರು ಗುಂಪು ಕಟ್ತಿ ಏನೋ ಗೆಲ್ಲುವ ತಂತ್ರ ಮಾಡುತ್ತಿದ್ದರು. ನನ್ನ ಹುಟ್ಟೂರಿನ ತಂಡದ ಬ್ಯಾಟ್ ಮಾಡುತ್ತಿದ್ದ ಆಟಗಾರ ಸ್ವಲ್ಪ ಟೆನ್ಸ್ ಆಗಿದ್ದರೂ, ಎರಡು ರನ್ ಗಳಿಸುವ ಧೈರ್ಯ ಮತ್ತು ಅತ್ಮವಿಶ್ವಾಸ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ನನ್ನ ಎದೆ ಭಾರವಾಗಿ , ಗೆಲುವು ಎಲ್ಲಿ ನಮ್ಮ ತಂಡದವರ ಕೈ ಜಾರುತ್ತದೆಯೋ ಎಂಬ ಭಯ, ಅತಂಕ, ಅಪನಂಬಿಕೆ ನನ್ನ ಎದೆಯನ್ನು ಕೊರೆಯುತ್ತಿತ್ತು. ನನ್ನ ಗೆಲುವಿನ ಹಸಿವು ನನ್ನನ್ನು ತಪ್ಪು ದಾರಿಗೆ ಎಳೆದೊಯ್ಯುತ್ತಿದ್ದರೂ ನಾನು ಅದನ್ನು ತಪ್ಪೆಂದು ಭಾವಿಸಲಿಲ್ಲ. ಪ್ರೇಕ್ಷಕರೆಲ್ಲಾ ಪಿಟಿಕ್ ಅನ್ನದೆ ತಮ್ಮ ತಮ್ಮ ಕೈಗಳನ್ನು ಹಿಸುಕಿಕೊಳ್ಳುತ್ತಿದ್ದರು.ಪಕ್ಕದ ಹಳ್ಳಿಯ ತಂಡದವರೆಲ್ಲಾ ಚಾಣಾಕ್ಷರಂತೆ ಕೊನೆಯ ಚೆಂಡಿನ ಬಗ್ಗೆ ತಂತ್ರ ಹೂಡುತ್ತಿರಬೇಕಾದರೆ ನಾನು ಮೌನವಾಗಿ ‘ಏ ಮೂರ್ಖರೇ, ನಾನು ಈಗ ನೋಬಾಲ್ ಕೊಟ್ಟು ನನ್ನ ತಂಡದವರನ್ನು ಗೆಲ್ಲಿಸಲು ನಿರ್ಣಯಿಸಿರುವಾಗ ನಿಮ್ಮದೇನು ತಂತ್ರ?' ಎಂದು ನನಗೆ ಹೇಳಿಕೊಂಡೆ.

ಕೊನೆಯ ಬಾಲ್ ಹಾಕುವ ಮುನ್ನ ಎದುರು ತಂಡದ ನಾಯಕ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ.ಆ ನೋಟ ಸಾಧಾರಣ ನೋಟವಾಗಿರಲಿಲ್ಲ. ಅದು ನನ್ನ ಹೃದಯದ ಸ್ವಾರ್ಥವೆಂಬ ಜ್ವಾಲಾಮುಖಿಯನ್ನು ಸ್ಫೋಟಿಸುವಂತಹ ಸಾಮರ್ಥ್ಯ ಹೊಂದಿತ್ತು. ತಕ್ಷಣ ಮನಸ್ಸು ಬೇರೊಂದು ಸಮಸ್ಯೆಯ ಬಲೆಗೆ ಸಿಲುಕಿ ಮೀನಿನಂತೆ ಒದ್ದಾಡುತ್ತಿತ್ತು. ಛೇ ಗೆಲುವಿನ ಹಸಿವಿಗಾಗಿ ಮೌಲ್ಯಗಳನ್ನು ಬಲಿಕೊಡುವುದೇ?॒ ನನ್ನ ಹಸಿವನ್ನು ನಿವಾರಿಸಲು ಇನ್ನೊಬ್ಬರ ಹೊಟ್ಟೆಗೆ ಕಲ್ಲು ಹಾಕುವುದೇ..? ಇದು ತಪ್ಪು.. ಎಂದು ಕೂಗಿ ಹೇಳತೊಡಗಿತ್ತು. ಮನಸ್ಸು ಸರಿ ತಪ್ಪುಗಳ ಘರ್ಷಣೆ, ತಿಕ್ಕಾಟದಲ್ಲಿ ಒಂದು ಮಹಾಭಾರತವೇ ಆಗಿ ರೋಸಿ ಹೋಗಿತ್ತು

“ದೇವರೇ, ನಾನು ಕೊನೆಯ ಬಾಲನ್ನು ನೋ ಬಾಲ್ ಎಂದು ಹೇಳಲೇ... ಬೇಡವೇ. . .” ಎಂಬ ಸಮಸ್ಯೆಯ ಬಿರುಗಾಳಿಗೆ ಸಿಕ್ಕಿ ತಬ್ಬಿಬ್ಬಾಗಿ ಏನೂ ತೋಚದೆ ಗ್ರಹಣ ಬಡಿದಂತವನಾದೆ

ಪಕ್ಕದ ಹಳ್ಳಿಯ ಬೌಲರ್ ಬಲ ತುದಿಯಿಂದ ಕೊನೆಯ ಚೆಂಡನ್ನು ಹಾಕಲು ಓಡಿ ಬರುತ್ತಿದ್ದಂತೆ, ನಾನು ಅವನನ್ನು ನೋಡಿದೆ. ನನ್ನ ಹೃದಯದ ಬಡಿತ ಹೆಚ್ಚಾಯಿತು. . . ಚೆಂಡನ್ನು ಹಾಕಿದಾಕ್ಷಣ... ನಾನು. . . ನನ್ನ ಆತ್ಮಸಾಕ್ಷಿಯಂತೆ ನಡೆದುಕೊಂಡೆ. ನನ್ನ ಊರಿನ ತಂಡದವನು ಒಂದು ರನ್ ಮಾಡಿ ಪಂದ್ಯವನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿದ. . . ನನ್ನಲ್ಲಿ ಒಂದು ರೀತಿಯ ಶಾಂತಿ ಸಂತೂಷ ತೃಪ್ತಿ ನೆಲೆಸಿತು ಪ್ರೇಕ್ಷಕರಲ್ಲಿ ಮಿಶ್ರ ಭಾವನೆ ರೂಪುಗೊಂಡಿತ್ತು. ಆಟಗಾರರು ಅತೃಪ್ತಿಯಿಂದ ಹೆಜ್ಜೆಹಾಕಿದರು

ತಕ್ಷಣ ನನ್ನ ಮನಸ್ಸು ಹೇಳಿತು “ಹಸಿವು.. ಈ ಹಸಿವು ಯಾವ ರೀತಿಯದೇ ಇರಲಿ ನಮ್ಮನ್ನು ಏನೆಲ್ಲಾ ಮಾಡಿಸುತ್ತದೆ. ಹಣ ಆಸ್ತಿಯ ಹಸಿವು ಕೊಲೆ ಸುಲಿಗೆ ಮಾಡಿಸುತ್ತದೆ... ಗೌರವ ಪ್ರತಿಷ್ಟೆಯ ಹಸಿವು ಇನ್ನೊಬ್ಬರನ್ನು ತುಳಿದು ಬಿಡುತ್ತದೆ. ಕಾಮದ ಹಸಿವು ಎಷ್ಟೋ ಹೆಂಗಳೆಯರನ್ನು ಹಿಂಸಿಸುತ್ತದೆಯಲ್ಲಾ ಹೀಗೆ ಹಸಿವು. . . ಹಸಿವು.. .. ”
ಜೋವಿ