Saturday 29 December 2018

ನೀವೂ ನೋಡಿ - ಜೊಯ್ ನೋಯೆಲ್ - ಭಾಗ 2

ಈ ಹಿನ್ನೆಲೆಯಲ್ಲಿ ಡಿಸೆಂಬರ್ 24ರ ರಾತ್ರಿ ಆದ ಘಟನೆಯನ್ನು ಆಧರಿಸಿ ನಿರ್ಮಾಣಗೊಂಡ ಚಿತ್ರವಿದು. ಈ ಚಿತ್ರದಲ್ಲಿ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ 6 ಪ್ರಮುಖ ಪಾತ್ರಧಾರಿಗಳ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ. ಲೆಫ್ಟಿನೆಂಟ್ ಗಾರ್ಡನ್, ಲೆಫ್ಟಿನೆಂಟ್ ಆಡಿಬೋರ್ಡ್, ಲೆಫ್ಟಿನೆಂಟ್ ಹಾರ್ಸ್ ಮೇಯರ್ ಹಾಗೂ ಅವರನ್ನು ರಂಜಿಸಲು ಬಂದ ಜರ್ಮನಿಯ ಇಬ್ಬರು ಪ್ರಖ್ಯಾತ ಸಂಗೀತಗಾರರಾದ ಸ್ಪ್ರಿಂಕ್ ಹಾಗೂ ಆತನ ಪ್ರೇಯಸಿ ಆನರವರ ಪಾತ್ರವೇ ಇಲ್ಲಿ ಪ್ರಮುಖ ಭೂಮಿಕೆ.

ಕ್ರಿಸ್ಮಸ್ ಸಮಯದಲ್ಲಿ ಸೈನಿಕ ಪಡೆಗೆ ತಮ್ಮ ಗಾಯನದ ಮೂಲಕ  ಹಾರೈಸುವುದು ಸ್ಪ್ರಿಂಕ್ ಹಾಗೂ ಆನಾರ ಉದ್ದೇಶ. ಈ ಉದ್ದೇಶದಿಂದ ಬಂದ ಸ್ಪ್ರಿಂಕ್ ಕ್ರಿಸ್ಮಸ್ನ ಹಿಂದಿನ ದಿನ ಅಂದರೆ ಕ್ರಿಸ್ಮಸ್ ಈವ್ನಂದು ಯುದ್ಧ ಭೂಮಿಗೆ ಬರುತ್ತಾರೆ.  ಆ ಸಮಯದಲ್ಲಿ ಸ್ಪ್ರಿಂಕ್  ಕ್ರಿಸ್ಮಸ್‍ನ ಪ್ರಸಿದ್ಧ ಗೀತೆಯಾದ ’ಸೈಲೆಂಟ್ ನೈಟ್’ ಹಾಡಲು ತೊಡಗುತ್ತಾನೆ.
ಇದು ಜರ್ಮನಿಯ ಶಿಬಿರದಲ್ಲಿ ಮಾತ್ರವಲ್ಲದೆ ವಿರೊಧೀ ಪಡೆಗಳ ಶಿಬಿರದಲ್ಲೂ ಒಂದು ರೀತಿಯ ಸಂಚಲನವನ್ನು ಉಂಟು ಮಾಡುತ್ತದೆ. ಕೇವಲ ಮದ್ದು ಗುಂಡುಗಳ ವಾಸನೆ, ಆಕ್ರಂದನ ಬೇಸರದ ಗೂಡಾಗಿದ್ದ ಕಂದಕದಿಂದ ಕ್ರಿಸ್‍ಮಸ್ ಸಂದೇಶ ಹೊರ ಹೊಮ್ಮುತ್ತದೆ.

ಜರ್ಮನ್ ಸೈನಿಕರು ಸಹಾ ಪುಟ್ಟ ಪುಟ್ಟ ಕ್ರಿಸ್ಮಸ್ ಟ್ರೀ ಗಳನ್ನು ಮಾಡಿ ಅದನ್ನು ಕಂದಕದ ಮೇಲಿನ ಯುದ್ಧಭೂಮಿಯ ನೆಲದ ಮೇಲೆ ಇಡಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಕ್ರಿಸ್ಮಸ್‍ನ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತದೆ. ಇದನ್ನು ನೋಡಿ ಏನು ಮಾಡುವುದೆಂದು ತಿಳಿಯದೇ ಫ್ರೆಂಚ್  ಮಿತ್ರ ಪಡೆಗಳ ಶಿಬಿರದಲ್ಲಿ ಒಂದು ರೀತಿಯ ಗೊಂದಲ ಆವರಿಸುತ್ತದೆ. ಆದರೆ ಅವರ ಮನದಲ್ಲೂ ಸಹಾ ಕ್ರಿಸಮಸ್‍ನ ಸುಂದರ ಭಾವಗಳು ಚಿಗುರುತ್ತವೆ.

ಇತ್ತ ಸ್ಪ್ರಿಂಕ್ ತನ್ನ ’ಸೈಲೆಂಟ್ ನೈಟಿನ’ ಹಾಡನ್ನು ಮುಂದುವರಿಸುತ್ತಾನೆ. ವಿರೋಧಿ ಪಾಳಯದಲ್ಲಿನ ಸ್ಕಾಟ್ ಸೈನಿಕರಲ್ಲಿ ಒಬ್ಬ ತನ್ನ ಬಳಿಯಿದ್ದ ಬ್ಯಾಗ್ ಪೈಪರ್ ವಾದನದಿಂದ   ಸಣ್ಣದಾಗಿ ನುಡಿಸಲು ಪ್ರಾರಂಭಿಸುತ್ತಾನೆ. ಹಾಡಿಗೆ ಬ್ಯಾಗ ಪೈಪರ್ ವಾದನ ದನಿಗೂಡಿಸುತ್ತದೆ. ಆ ಸ್ಪೂರ್ತಿ, ಉತ್ತೇಜನ ಇಡೀ  ಸೈನಿಕ ಪಡೆಗೆ ಹರಡುತ್ತದೆ.
ಎರಡೂ ಕಡೆಯ ಪಡೆಯ ಸೈನಿಕರಲ್ಲಿ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ.  ಹೊತ್ತಿನಲ್ಲಿ ಒಂದು ಅನಿರೀಕ್ಷಿತವಾದ  ಘಟಯುತ್ತದೆ. ಸ್ಪ್ರಿಂಕ್ ಹಾಡುತ್ತಾ ಹಾಡುತ್ತಾ  ಕಂದಕದಿಂದ  ಮೆಲ್ಲಗೆ ಮೆಟ್ಟಿಲುಗಳನ್ನು ಹತ್ತುತ್ತಾ ಯುದ್ಧ ಭೂಮಿಯ ನೆಲದ ಮೇಲೆ ನಿಂತು ಹಾಡಲು ಪ್ರಾರಂಭಿಸುತ್ತಾನೆ.

ಜರ್ಮನಿಯ ಪಡೆಯ ಲೆಫ್ಟಿನೆಂಟ್ ಇದನ್ನು ವಿರೋಧಿಸಿದರೂ ಗಮನಕೊಡದೆ  ಆತ   ವಿರೋಧಿ ಪಡೆಯುತ್ತ ಹೆಜ್ಜೆ ಹಾಕುತ್ತಾನೆ. ಇತ್ತ ಗನ್ನುಗಳನ್ನು ಇಟ್ಟುಕೊಂಡು ನೋಡುತ್ತಿದ್ದ ಮಿತ್ರ ಪಡೆಯ ಸೈನಿಕರು ಏನೂ ಮಾಡಲು ತೋಚದೆ ನಿಲ್ಲುತ್ತಾರೆ.ಹಾಡು ಮುಂದುವರಿಯುತ್ತಿದ್ದಂತೆಯೇ ಮದ್ದು ಗುಂಡುಗಳು ನೆಲಕ್ಕೆ ಉರುಳಿ ಮಾನವ ಹೃದಯಗಳು ಸೈನಿಕರ ರೂಪದಲ್ಲಿ ಕಂದಕದಿಂದ ಮೇಲೆ ಬಂದು ಯುದ್ಧ ಭೂಮಿಯ ನೆತ್ತರಿನ ನಡುವೆ ಸ್ನೇಹದ ಹಸ್ತವನ್ನು ಚಾಚುತ್ತದೆ. ಸ್ಪ್ರಿಂಕ್ ತನ್ನ ಗಾಯನವನ್ನು ಮುಗಿಸಿದ್ದೇ ತಡ ವಿರೋಧಿ  ಪಾಳಯದಿಂದ ಚಪ್ಪಾಳೆ ಹಾಗೂ ಕೇಕೆಯ ರೂಪದಲ್ಲಿ ಅಭಿನಂದನೆಯ ಮಹಾಪೂರ ಹರಿದು ಬರುತ್ತದೆ.

ಅಲ್ಲಿಗೆ ಒಬ್ಬೊಬ್ಬರೇ ಸೈನಿಕರು ಎರಡು ಪಡೆಗಳ ನಡುವಿನ ಯಾರಿಗೂ ಸೇರದ ’ನೋ ಮ್ಯಾನ್ ಲ್ಯಾಂಡಿ’ನ ಕಡೆ ಹೆಜ್ಜೆ ಹಾಕುತ್ತಾರೆ ಅಲ್ಲಿಗೆ ಕ್ರಿಸ್ಮಸ್‍ನ ಶಾಂತಿ ಪ್ರೀತಿಯ ಸಂದೇಶ ಭೀಕರ ಯುದ್ಧಭೂಮಿಯಲ್ಲಿ ತನ್ನದೇ ಆದ ರೀತಿಯಲ್ಲಿ ಸಾಕಾರಗೊಳ್ಳುತ್ತದೆ.
ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರವನ್ನು ನೋಡಿಯೇ ಸವಿಯಬೇಕು. ಮನೋಜ್ಞವಾಗಿ ಮೂಡಿಬಂದಿರುವ ಚಿತ್ರ ಯುದ್ಧದ ಭೀಕರತೆಯನ್ನು ಮಾನವನ ಅಂತರಾಳದಲ್ಲಿ ಶಾಂತಿಯ ಹಾತೊರೆಯುವಿಕೆ,  ಗುಂಪಿನಲ್ಲಿದ್ದರೂ ಕಾಡುವ ಏಕಾಂಗಿತನ, ಪ್ರೀತಿಗಾಗಿಯ ಹಂಬಲವನ್ನು ತೆರೆಯ ಮೇಲೆ ತೆರೆದಿರುತ್ತದೆ.

ಅಂತೆಯೇ ನಾಯಕರುಗಳ ಸ್ವಾರ್ಥದಲ್ಲಿ ಬಲಿಪಶುವಾಗುವ ಸಾಮಾನ್ಯ ಜನರ ತಲ್ಲಣ, 
ಸೈನಿಕರ ನೋವು, ಅವರ ಕುಟುಂಬದವರ ಕಾತುರ, ಕೊನೆಗೆ ಜಗತ್ತಿನ ಎಲ್ಲಾ ಜನರ ಬಗೆಗಿನ ಕಾಳಜಿ ಅನುಕಂಪವನ್ನು ಚಿತ್ರ ನಿಧಾನವಾಗಿ ತೆರೆದಿರುತ್ತದೆ. ಆದ್ದರಿಂದಲೇ ಚಿತ್ರ ನೋಡಲೇಬೇಕಾದ ಚಿತ್ರಗಳ ಸಾಲಿನಲ್ಲಿ ಖಂಡಿತವಾಗಿಯೂ ನಿಲ್ಲುತ್ತದೆ. ಅದರಲ್ಲೂ  ಕ್ರಿಸ್ಮಸ್ ಸಮಯದಲ್ಲಿ ಚಿತ್ರ ಮತ್ತಷ್ಟು ಆಪ್ತವಾಗುತ್ತದೆ

ನೀವೂ ನೋಡಿ - ಜೊಯ್ ನೋಯೆಲ್ - ಭಾಗ 1

1914  ಮಹಾಯುದ್ಧದ ಸಮಯದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾದ ಚಿತ್ರವೇ ’ಜೊಯ್ ನೋಯೆಲ್’ ಅಥವಾ ’ಮೆರ್ರಿ ಕ್ರಿಸ್ಮಸ್’. ಕ್ರಿಸ್ಟಿಯನ್ ಕ್ಯಾರಿಯನ್ ಎಂಬ ಫ್ರೆಂಚ್ ನಿರ್ದೇಶಕ ನಿರ್ದೇಶಿಸಿದ ಈ ಚಿತ್ರ ಅತ್ಯುತ್ತಮ ವಿದೇಶಿ ಚಿತ್ರವೆಂದು  ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. 2005ರ ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ, ಎಲ್ಲರ ಮೆಚ್ಚುಯನ್ನೂ  ಗಳಿಸಿತ್ತು. ಕೇವಲ ಎರಡು ಕೋಟಿ ಅಮೆರಿಕನ್ ಡಾಲರ್ ‍ಗಳಲ್ಲಿ ನಿರ್ಮಾಣಗೊಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಚಿತ್ರ ನೋಡಿದವರೆಲ್ಲರೂ ಅತ್ಯುತ್ತಮ ಚಿತ್ರವೆಂದು ಇದನ್ನು ಹೊಗಳುತ್ತಾರೆ. 

ಮೊದಲೇ ತಿಳಿಸಿದಂತೆ ಇದು ಸತ್ಯ ಘಟನೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈ ರೀತಿಯ ಘಟನೆಗಳನ್ನು ಬೆಳ್ಳಿ ತೆರೆಗೆ ತರುವಾಗ ಒಬ್ಬ ನಿರ್ದೇಶಕ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರವನ್ನು ಯಾವ ದೃಷ್ಟಿಕೋನದಲ್ಲಿ ಹೇಗೆ ತೆರೆಯ ಮೇಲೆ ತರಬೇಕೆಂಬ ಅಂಶ ಒಂದು ದೊಡ್ಡ ಸವಾಲಾಗುತ್ತದೆ. ಇಲ್ಲಿ ನಿರ್ದೇಶಕ ಅದನ್ನು ನಿವಾರಿಸಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರ ಅನುಭವಗಳ ಮೂಲಕ ತೆರೆದಿಡುವ ಪ್ರಯತ್ನವನ್ನು ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾರೆ.        

ಚಿತ್ರದ ಬಗ್ಗೆ ಬರೆಯುವ ಮುನ್ನ ಈ ಚಿತ್ರದ ಮೂಲ ವಸ್ತುವಿನ ಹಿನ್ನಲೆಯನ್ನು ಬರೆಯಬೇಕಾಗುತ್ತದೆ. 1914ರಲ್ಲಿ ಇಡೀ ವಿಶ್ವವನ್ನೇ ಕರಾಳತೆಯತ್ತ ದೂಡಿದ ಮೊದಲನೆಯ ಮಹಾ ಯುದ್ಧವು ತನ್ನ ಉತ್ತುಂಗದ ಸ್ಥಿತಿಯಲ್ಲಿರುವಾಗ, ಎಲ್ಲೆಡೆ ದ್ವೇಷ ರೋಷ ಹಾಗೂ ಕಹಿ ಭಾವಗಳೇ ತಾಂಡವವಾಡುತ್ತಿರುತ್ತದೆ. ರಾಜಕೀಯ ಕಾರಣಗಳಿಂದ ಆರಂಭಗೊಂಡ ಈ ಮಹಾಯುದ್ಧದಲ್ಲಿ ಹೆಚ್ಚು ವ್ಯಯಕ್ತಿಕ ಹಾನಿಗೊಳಗಾದವರು ಯುದ್ಧಭೂಮಿಯಲ್ಲಿ ಹೋರಾಡಿದ ಸೈನಿಕರು.

ಜರ್ಮನಿ ಹಾಗೂ ಮಿತ್ರ ದೇಶಗಳ ನಡುವಿನ ಈ ಮಹಾ ಸಮರ ಎರಡೂ ಕಡೆಗಳಲ್ಲಿ ಅಪಾರ ಸಾವು ನೋವನ್ನು ತಂದಿರುತ್ತದೆ. ಆದರೂ ನಾಯಕರುಗಳ ಮನಸು ಕರಗದೆ ಸಮರ ಮುಂದುವರಿಯುತ್ತದೆ. ಬೆಲ್ಜಿಯಂ ಮೂಲಕ ಫ್ರೆಂಚ್ ನೆಲದ ಮೇಲೆ  ಆಕ್ರಮಣ ಮಾಡಿಕೊಂಡು ಬಂದ ಜರ್ಮನ್ ಸೈನ್ಯವನ್ನು ಫ್ರೆಂಚ್ ಹಾಗೂ ಬ್ರಿಟಿಷ್ ಪಡೆ ಯಶಸ್ವಿಯಾಗಿ ತಡೆದು ನಿಲ್ಲಿಸುತ್ತದೆ. ಎರಡು ಕಡೆಯ ಪಡೆಗಳು ಜಗ್ಗದೆ ತಮ್ಮ ಪಟ್ಟುಗಳನ್ನು ಸಡಲಿಸದ ಕಾರಣ ಯುದ್ಧ ಯಾವುದೇ ರೀತಿಯ ಪ್ರಗತಿ ಕಾಣದೇ ಒಂದು ಹಂತದಲ್ಲಿ ನಿಂತ ನೀರಂತೆ ಆಗುತ್ತದೆ.

ಎರಡು ಪಡೆಗಳು ಮೇಲುಗೈ ಸಾಧಿಸಲು ಸಾಧ್ಯವಾಗದೆ ಆಕ್ರಮಣವನ್ನು ಬಿಟ್ಟು ತಮ್ಮ ನೆಲೆಯನ್ನು ಕಾಪಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿ ಒಂದು ರೀತಿ  ಸ್ತಬ್ಧವಾದ ಸ್ಥಿತಿಯಲ್ಲಿರುತ್ತಾರೆ. ಆದರೂ ಎಚ್ಚರದ ಸ್ಥಿತಿಯಲ್ಲಿ ಎರಡೂ ಪಡೆಗಳು ತಮ್ಮ ನೆಲೆಯನ್ನು ಕಾಯುತ್ತಿರುತ್ತದೆ. ಯುದ್ಧ ಭೂಮಿಯಲ್ಲಿನ ದೊಡ್ಡ ಕಂದಕಗಳಲ್ಲಿ ನೆಲೆಸುವ ಪಡೆಗಳ ಸೈನಿಕರು ಒಂದು ರೀತಿಯ ತಾತ್ಕಾಲಿಕ ವಿಶ್ರಾಂತಿಗೆ ಮೊರೆಹೋಗುತ್ತಾರೆ. ಕಂದಕಗಳಲ್ಲಿ ತಾತ್ಕಾಲಿಕ ಗೋಡೆಗಳ ಹಿಂದೆ ಇದ್ದ ಎರಡು ಕಡೆಯ ಸೈನಿಕರು ಒಮೊಮ್ಮೆ ಬರುವ ಆಹಾರ ಪದಾರ್ಥಗಳನ್ನು ಪಡೆಯುವ ಸಮಯದಲ್ಲಿ ಒಂದು ಕಡೆ ಸೇರುತ್ತಾರೆ. ಒಂದಷ್ಟು ಮಟ್ಟಿಗೆ ಪರಿಚಯ ಮಾಡಿಕೊಂಡು ಪರಸ್ಪರ ವಿಷಯಗಳನ್ನು ವಿನಿಮಯವೂ ಮಾಡಿಕೊಳ್ಳುತ್ತಾರೆ ಆದರೆ ಯುದ್ಧ ನೀತಿ ಮಾತ್ರ ಕಠೋರ ನಿರ್ದಯವಾಗಿರುವುದರಿಂದ ತಮ್ಮ ಮೂಲಕ್ಕೆ ಮರಳುತ್ತಾರೆ.

ಹೀಗೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಗೆ ತಲುಪಿದ ಸಮರದ ಈ ಸಮಯದಲ್ಲಿ ಸಂಧಾನದ ಮಾತುಕತೆಗಳು ನಡೆಯುತ್ತವೆ. ಈ ರೀತಿಯ ಶಾಂತಿ ಸಂಧಾನದ ಮಾತುಕತೆಗಳು ಯಾವುದೇ ಪ್ರಯೋಜನಕ್ಕೆ ಬಾರದೆ ವಿಫಲವಾಗುತ್ತವೆ. ಅಂದಿನ ಪೋಪ್ ಬೆನೆಡಿಕ್ಟ್ XV ಕೂಡ ಪಡೆಗಳ ನಡುವಿನ ಶಾಂತಿಗೆ ಪ್ರಯತ್ನಿಸುತ್ತಾರೆ. ಕೊನೆಯ ಪಕ್ಷ ಬಾನಿನಲ್ಲಿ ದೇವದೂತರು ಹಾಡುವ ಕ್ರಿಸ್ಮಸ್ ಹಿಂದಿನ ಸಂಜೆಯಾದರೂ ಗುಂಡು ಮದ್ದುಗಳ ಶಬ್ದವಿಲ್ಲದೆ ಶಾಂತಿ ಇರಲಿ ಎಂದು ಅವರು ಕೇಳಿಕೊಂಡರೂ ಮಿಲಿಟರಿ ಮತ್ತು ರಾಜಕೀಯ ನಾಯಕರುಅದಕ್ಕೆ ಮನಸು ಕಿವಿಗೊಡದೆ ಕಠಿಣ ನಿಲುವನ್ನು ತೋರಿಸುತ್ತಾರೆ.   

ಈ ನಡುವೆ ಸೈನಿಕರು ಮಾತ್ರ ತೀರ ಆಕ್ರಮಣಶೀಲರಾಗದೆ ತಕ್ಕಮಟ್ಟಿಗಿನ ಮಾನವೀಯತೆ ಮೆರೆಯುತ್ತಾ, ಸಾಗುತ್ತಾ ತಮ್ಮ ಕುಟುಂಬಗಳನ್ನು ನೆನೆಯುತ್ತ ಕಾಲ ಕಳೆಯುತ್ತಾರೆ. ಅಲ್ಲಿ ಒಂದು ಅನಧಿಕೃತವಾದ ಸಂಧಾನವೆಂಬಂತೆ ಪ್ರತಿ ಸಂಜೆ ಸೈನಿಕರು ಸ್ವಯಂ ಯುದ್ಧ ವಿರಾಮ ಘೋಷಿಸಿಕೊಂಡು ಸತ್ತ ಸೈನಿಕರ ಸಂಸ್ಕಾರ ಹಾಗೂ ಗಾಯಾಳುಗಳನ್ನು ತಮ್ಮ ಶಿಬಿರಗಳಿಗೆ ತೆಗೆದುಕೊಂಡು ಹೋಗುವ ಶಾಂತಿಯ ಹೆಜ್ಜೆಗಳನ್ನು ಹಿಡಿಯುತ್ತಾರೆ.

ಹಾಗೆ ಶಾಂತಿಯ ಪ್ರಕ್ರಿಯೆ ಗೊತ್ತಿಲ್ಲದೆ ನಡೆದಿರುತ್ತದೆ. ಇದರ ಜೊತೆಗೆ ಸಂಗೀತವೂ ಸಹ ಈ ಪ್ರಕ್ರಿಯೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಂಜೆಯಲ್ಲಿ ಸೈನಿಕರು ತಮ್ಮ ನೋವು ದಣಿವನ್ನು ಮರೆಯಲು ತಮ್ಮದೇ ಆದ ರೀತಿಯಲ್ಲಿ ಹಾಡುತ್ತಾ ಕೇಕೆ ಹಾಕುತ್ತಾ, ಕೆಲವು ಸಲ ವಿರೋಧಿ ಸೈನಿಕರ ಕಾಲೆಳೆಯುತ್ತಾ ಹಾಡುಗಳನ್ನು ಹಾಡುತ್ತಿರುತ್ತಾರೆ.       

Read more!




Thursday 20 December 2018

ರೆಬಲ್ ಸ್ಟಾರ್ ನ ಅಂತರಂಗ

ಕಳೆದ ತಿಂಗಳು ಅಂಬರೀಶ್ ಕೂಡ ಕಣ್ಮರೆಯಾದರು. ಈ ವರ್ಷದ ಅವರ ಹುಟ್ಟುಹಬ್ಬದಲ್ಲಿ ಮುತ್ತಿಕೊಂಡ ಪತ್ರಕರ್ತರ ಒಂದೊಂದೇ ಪ್ರಶ್ನೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರವನ್ನು ಅಂಬಿ ಬಿಸಾಕುತ್ತಿದ್ದರು. ಪತ್ರಕರ್ತರೊಬ್ಬರು ಆ ದಿನದ ಅವರ ಕಾರ್ಯಕ್ರಮದ ಬಗ್ಗೆ ಕೇಳುತ್ತಾರೆ. ಆಗ ಅಂಬರೀಶ್ “ಗಂಟೆಗೆ ಕಲಾವಿದರ ಸಂಘದ ಕಾರ್ಯಕ್ರಮ ಅಲ್ಲಿ ಗಂಟೆ ಇದ್ದು ಬರುತ್ತೇನೆ” ಎನ್ನುತ್ತಾರೆ. ಅದಕ್ಕೆ ತಟ್ಟಕ್ಕನೆ ಪತ್ರಕರ್ತನೊಬ್ಬ “ಆಮೇಲೆ?” ಅನ್ನುತ್ತಾನೆ. ಅದಕ್ಕೆ ಅಂಬರೀಶ್ ತಮ್ಮದೇ ಆದ ಶೈಲಿಯಲ್ಲಿ “ನಿನ್ಗ್ ಯಾಕ್ ಅವೆಲ್ಲಾ...” ಎನ್ನುತ್ತಾ ಇವ್ಯಾವವೋ ಇಷ್ಟ ಇಷ್ಟ್ ಇದಾವೆ, ಬಿಡೋದಿಲ್ಲ ಅಂತವೇ” ಎನ್ನುತ್ತಾ ಕೋಪದ ಜೊತೆ  ಒಂದು ಹುಸಿ ನಗೆ ಬೀರುತ್ತಾರೆ. ಇಡೀ ಗುಂಪು ಗೊಳ್ಳೆನ್ನುತ್ತದೆ. ಇದು ಅಂಬರೀಶ್ ಇದ್ದ ರೀತಿ.

ವೃತ್ತಿಜೀವನದ ಸಾಧ್ಯತೆಗಳನ್ನು ಮೀರಿದ ಪ್ರೀತಿ ಅಭಿಮಾನವನ್ನು ಸಂಪಾದಿಸಿದ್ದಕ್ಕೆ ಅಂಬರೀಶ್ ದೊಡ್ಡ ಉದಾಹರಣೆ. ಜನಪ್ರಿಯ ನಾಯಕ ನಟನೆಂಬ ಚೌಕಟ್ಟು ಮೀರಿ ಅಂಬರೀಶ್ ಬೆಳೆದು ಬಂದ ರೀತಿ ಆಶ್ಚರ್ಯಕರವಾದದ್ದು. ಅಂಬರೀಷ್     ರವರಲ್ಲಿನ ಪೂರ್ಣ ಪ್ರಮಾಣದ ಕಲಾವಿದ ಅನಾವರಣ ಗೊಂಡಿದ್ದು ಪುಟ್ಟಣ್ಣನವರ ಚಿತ್ರಗಳಲ್ಲಿ. ರಂಗನಾಯಕಿ ಚಿತ್ರದಲ್ಲಿನ ಅಂಬರೀಶ್ ನಟನೆಯ ಪ್ರೌಢಿಮೆಯನ್ನು ಮುಂದಿನ ನಿರ್ದೇಶಕರು ಬಳಸಿಕೊಂಡದ್ದು ಕಡಿಮೆಯೇ. ಪಂಚ್ ಲೈನ್  ಗಳಿಂದಲೇ ಪ್ರಸಿದ್ಧಿ ಪಡೆದಿದ್ದ ಅಂಬರೀಶ್ ರವರಿಗೆ ಶುಭಮಂಗಳ ದಲ್ಲಿ ಪುಟ್ಟಣ್ಣ ನೀಡಿದ್ದು ಮೂಗನ ಪಾತ್ರ. ಅದರಲ್ಲೂ ಅಂಬರೀಷ್ ಗೆದ್ದರು.      
ಇನ್ನೂ ರೆಬಲ್ ಪಾತ್ರಗಳಿಗೆ ನಿರ್ದೇಶಕರು ಅವರನ್ನು ಬ್ರಾಂಡ್ ಮಾಡಿದರೂ ಒಲವಿನ ಉಡುಗೊರೆಹೃದಯ ಹಾಡಿತುಏಳು ಸುತ್ತಿನ ಕೋಟೆಮಣ್ಣಿನ ದೋಣಿ ಮುಂತಾದ ಚಿತ್ರಗಳಲ್ಲಿನ ಸಾಫ್ಟ್ ಪಾತ್ರಗಳಲ್ಲಿ ಅಂಬರೀಶ್ ತಮ್ಮ ಛಾಪು ಮೂಡಿಸಿದರು. ಅಂತಚಕ್ರವ್ಯೂಹ ಗಜೇಂದ್ರ ಎಲ್ಲವೂ ಅವರನ್ನು ಯಶಸ್ವಿ ನಾಯಕನ ಪಟ್ಟಕ್ಕೆ ಏರಿಸಿದವು
ಚಿತ್ರ ಜಗತ್ತಿನ ಆಚೆಗೂ ಅಂಬರೀಶ್ ಹೆಸರು ಮಾಡಿದ್ದು ಅವರ ನೇರವಂತಿಕೆಯಿಂದಲೇ. ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದ  ರೀತಿ ಇನ್ಯಾರದೋ ಬಾಯಿಂದ ಬಂದಿದ್ದರೆ ಅದೆಷ್ಟು ವಿವಾದಗಳ ಆಗುತ್ತಿದ್ದವೋ. 
ಇನ್ನು ಅಂಬರೀಷ್ ಬಗೆಗಿನ ದಂತಕಥೆಗಳು ಹಲವಾರು. ಇನ್ನು ಮುಂದೆ ಎಲ್ಲರ ಬಳಿ ಸಂಭಾವಿತವಾಗಿಯೇ ಮಾತನಾಡಬೇಕು ಎಂದು ಗೆಳೆಯರು ಸಲಹೆ ಮಾಡಿದರಂತೆ. ಅಂತೆಯೇ ಫೋನ್ ಮಾಡಿದ ಅಭಿಮಾನಿಗೆ ನಿಧಾನವಾಗಿ ಗೌರವದಿಂದ “ಹೇಳಪ್ಪ" ಎಂದು ಉತ್ತರ ನೀಡಿದರೆ, ಅವನು ನಂಬದೆ “ಆಯ್ತು ಹೇಳಲೇ, ನಿನ್ನ್.... ಎಂದಾಗಲೇ ಆತ “ನಮಸ್ಕಾರ ಕಣ್ಣಣ್ಣೋ” ಎಂದ ಘಟನೆಯು ಹಲವಾರು ರೂಪಗಳನ್ನು ಪಡೆದುಕೊಂಡು ಹರಿದಾಡುತ್ತಿದೆ. ಅಂತೆಯೇ ಒಡಹುಟ್ಟಿದವರು ಚಿತ್ರೀಕರಣದ ಸಮಯದಲ್ಲಿ ಹಲವಾರು ವರ್ಷಗಳಿಂದ ಗುರುವಾರದಂದು ಮಾಂಸಹಾರ ಮಾಡದ ರಾಜಕುಮಾರ್ ರವರಿಗೆ ಗುರುವಾರದಂದೇ  ಪ್ರೀತಿಯಿಂದ ಒತ್ತಾಯ ಮಾಡಿ ಮಾಂಸದ ಊಟ ಬಡಿಸಿದ ಕಥೆಯೂ ಪ್ರಚಲಿತ.
ಅಂಬರೀಶ್ ಬದುಕಿದ ರೀತಿ ಅಪರೂಪದ್ದು. ಆ ರೀತಿ ಬದುಕಿ, ದಕ್ಕಿಸಿಕೊಳ್ಳುವುದು ಅಂಬರೀಶ್ ಯಿಂದ ಮಾತ್ರ ಸಾಧ್ಯ. ಅದು ಅನುಕರಣೀಯವಲ್ಲ ಆದರೆ ಅವರ ಹೃದಯವಂತಿಕೆ, ಪ್ರೀತಿ, ನಗು ಎಲ್ಲವೂ ನಿಜಕ್ಕೂ ಆತ್ಮೀಯ. ಆದ್ದರಿಂದಲೇ ಈ ನಾಡಿನಲ್ಲಿ ’ಏನ್ ಬುಲ್ ಬುಲ್, ಮಾತಾಡಕ್ಕಿಲ್ವಾ’ ಎಂಬ  ಆ ಡೈಲಾಗ್ ನಷ್ಟೇ ಅಂಬರೀಷ್ ಕೂಡ ಅಮರ

ಡಾಕ್ಟರ್ ಲೀಲಾವತಿ ದಾಸ್ - ಧ್ಯಾನಸಕ್ತ ಮುಗುಳ್ನಗೆಯ ಮೂರ್ತಿ

ಡಾಕ್ಟರ್ ಲೀಲಾವತಿ ದಾಸ್ ಯಾವುದೇ ಸದ್ದಿಲ್ಲದೆ ಹೊರಟ್ಟಿದ್ದಾರೆ. “ನೋಡ್ತಿರಿ ನಾನು ಒಂದು ದಿನ ಹಾಗೆ ಹೊರಟು ಬಿಡುತ್ತೇನೆ” ಎಂದು ತಮ್ಮ ತಂಗಿಯ ಬಳಿ ಹೇಳಿದ್ದರಂತೆ. ಒಂದಂತು ನಿಜ, ಅವರು ಸುಮ್ಮನಂತೂ ಹೋಗಿಲ್ಲ, ಒಂದು ಸಾರ್ಥಕವಾದ ಜೀವನವನ್ನು ಬದುಕಿ ಸಂತೋಷದಿಂದಲೇ ತೆರಳಿದ್ದಾರೆ. ಒಂದಷ್ಟು ಬರವಣಿಗೆ ಇನ್ನೂ ಉಳಿದಿತ್ತೇನೋ. ಏಕೆಂದರೆ  ಭೇಟಿ ಮಾಡಿದಾಗಲೆಲ್ಲಾ ಟೈಪ್ ಮಾಡಿದ ಬರವಣಿಗೆ ಅವರ ಕಂಪ್ಯೂಟರ್ ಮೇಲೆ ಕಾಣುತ್ತಿತ್ತು. ಯಾವುದಾದರೂ ಒಂದು ಪುಸ್ತಕ ತೆರೆದಿಟ್ಟ ಸ್ಥಿತಿಯಲ್ಲೇ ಟೇಬಲ್ ಮೇಲೆ ಇರುತ್ತಿತ್ತು ಇತ್ತೀಚಿಗೆ ಪ್ರಕಟಗೊಂಡಿದ್ದ ಲೇಖನವೊಂದು ಫೈಲ್ ಸೇರಲು ಹಾತೊರೆಯುತ್ತಿತ್ತು. ಚೇರಿನ ಮೇಲೆ ಧ್ಯಾನಸಕ್ತ ಮುಗುಳ್ನಗೆಯ ಮೂರ್ತಿ ಸದಾ ಕಾಣುತ್ತಿತ್ತು.

ಇವೆಲ್ಲದರ ನಡುವೆಯೇ ಮಾತಿಗೆ ಕೂತರೆ ಅದೇ ಬತ್ತದ ಉತ್ಸಾಹ, ಮಾಸದ ಮುಗುಳ್ನಗೆ, ಆಳವಾದ ವಿವರಗಳು ಹಾಗೂ ಮುಗಿಯದ ಆತ್ಮೀಯತೆ. ಈ ಸ್ಥಿತಿಯಲ್ಲಿ ಅವರನ್ನು ಕಂಡಾಗಲೆಲ್ಲಾ ಒಂದು ಆಶ್ಚರ್ಯ. ’ಎಲ್ಲಿಂದ ಹೊತ್ತು ತರುತ್ತಾರೆ ಈ ಜೀವನೋತ್ಸಾಹವನ್ನು’ ಎಂದು. “ಈ ರೀತಿ ದಿನಪೂರ್ತಿ ಕುರ್ಚಿಯಲ್ಲಿ ಕುಳಿತುಕೊಂಡು ಬರೆಯುವಾಗ ಬೆನ್ನು ನೋವು  ಬರುವುದಿಲ್ಲವೇ” ಎಂದು ಒಮ್ಮೆ ಕೇಳಿದೆ. “ನೋವು ಬಂದಾಗ ರೆಸ್ಟ್ ಮಾಡುತ್ತೇನೆ” ಎಂದರು. ಪರಿಹಾರ ಇಷ್ಟು ಸುಲಭವೇ ಎಂದುಕೊಂಡೆ.

ಒಂದಷ್ಟು ವರ್ಷಗಳ ಹಿಂದೆ ಪವಿತ್ರ ಗುರುವಾರದ ಬಗ್ಗೆ ಪ್ರಜಾವಾಣಿಯಲ್ಲಿ ಲೇಖನ ಬರೆಯಲು ಆರಂಭಿಸಿದ್ದೆ. ಆಗ ನಮ್ಮ ಸಿ ಎಸ್ ಐನವರು ಪವಿತ್ರ ಗುರುವಾರವನ್ನು ಹೇಗೆ ಆಚರಿಸುತ್ತಾರೆ ಎಂಬ ಪ್ರಶ್ನೆ ಮೂಡಿತು. ನನ್ನ ಅನೇಕ ಗೆಳೆಯರಿದ್ದರೂ ಲೀಲಾವತಿ ಅವರನ್ನು ಕೇಳೋಣ ಎಂದುಕೊಂಡು ಫೋನ್ ಮಾಡಿದೆ. ಅದೇ ಅವರೊಟ್ಟಿಗಿನ ನನ್ನ ಮೊದಲ ಸಂವಾದ. ವಿವರಗಳನ್ನು ಹೇಳಿದ ಬಳಿಕ “ಆಚರಣೆಗಳ ಬಗ್ಗೆ ಏಕೆ ಬರೀತಿಯಪ್ಪ? ಯೇಸುವಿನ ಆ ಕಾರ್ಯದ ಹಿಂದಿನ ಅರ್ಥ, ಸದ್ದುದೇಶದ ಬಗ್ಗೆ ಬರಿ ಸಾಕು” ಎಂದರು. ನನಗೂ ಅದು ಸರಿಯೆನಿಸಿತು. 

ಮುಂದೆ ನಮ್ಮ ಕಾರ್ಯಕ್ರಮಗಳಿಗೆಲ್ಲಾ ಆಹ್ವಾನ ಕೊಡುತ್ತಿದ್ದೆ. ಕರೆದ ಕಾರ್ಯಕ್ರಮಗಳಿಗೆ ಬಂದರು. ಒಂದು ಕಾರ್ಯಕ್ರಮದಲ್ಲಿ ಅವರನ್ನೂ, ಸಿಸ್ಟರ್ ಜಸಿಂತಾರವರನ್ನು ಒಟ್ಟಿಗೆ ಸನ್ಮಾನಿಸಿದ ನೆನಪು. ಮೊನ್ನೆಯ ’ಅಂಜೆನು’ ಕಾರ್ಯಕ್ರಮಕ್ಕೂ ಕರೆಯಲು ಹೋದಾಗ ಬಹಳ ಹೊತ್ತು ಮಾತನಾಡಿಸಿದರು. ಕಾರ್ಯಕ್ರಮಕ್ಕೂ ಬಂದು ಕೂತು ಮಧ್ಯೆ ಎದ್ದು ಹೋದರಂತೆ. ಪೂರ್ತಿ ಕಾರ್ಯಕ್ರಮಕ್ಕೆ ಇರಲಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು. ಆ ವಯಸ್ಸಿನಲ್ಲೂ ಆಟೋದಲ್ಲಿ ಬಂದು ಹೋದ ಅವರ ಬದ್ಧತೆ, ಪ್ರೀತಿಗೆ ಬೆಲೆಯುಂಟೇ?. 

2
ವರ್ಷಗಳ ಹಿಂದೆ ನಮ್ಮ ದೇವಾಲಯದಲ್ಲಿನ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು, 2 ಮಹಡಿ ಹತ್ತಿ ಬಂದಿದ್ದು ಕಷ್ಟವಾಯಿತೇ ಎಂದು ಕೇಳಿದರೆ, “ಮೊದಲ ಮಹಡಿಯಲ್ಲಿನ ದೇವಾಲಯದ ಪೀಠ ಚೆನ್ನಾಗಿದೆ” ಎನ್ನಬೇಕೆ?

ವೈದ್ಯಕೀಯ ಪದವಿಯಲ್ಲಿ ಸ್ವರ್ಣ ಪದಕ ಹಾಗೂ ತಮ್ಮ ಧೀರ್ಘ ವರ್ಷಗಳ ಕಾಲದ ವೃತ್ತಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದು ಅವರ ಹೆಗ್ಗಳಿಕೆ ಗಳಲ್ಲಿ ಒಂದು. ನಿಜವಾದ ಸೇವಾಭಾವದಿಂದ ಯಾರೂ ಇಚ್ಛಿಸದ ಸ್ಥಳಗಳಲ್ಲಿಯೇ ಹೆಚ್ಚಾಗಿ ಸೇವೆ ಮಾಡಿದ್ದರು ಎಂಬ ಮಾಹಿತಿಯೇ ಅವರ ಬಗ್ಗೆ ಧನ್ಯತೆಯನ್ನು ಮೂಡಿಸುತ್ತದೆ.       

ಕನ್ನಡ ಕ್ರೈಸ್ತರಾದ ನಾವು ಅವರನ್ನು ಮತ್ತಷ್ಟು ಧನ್ಯತೆಯಿಂದ ನೆನಸಿಕೊಳ್ಳಬೇಕಾಗಿದೆ. ಅದಕ್ಕೆ ಮೊದಲ ಪ್ರಮುಖ ಕಾರಣ ಬೈಬಲ್ ಭಾಷಾಂತರದಲ್ಲಿನ ತೊಡಗುವಿಕೆ. ಅಂತೆಯೇ ಅನೇಕ ಬೈಬಲ್ ಆಧಾರಿತ ಲೇಖನಗಳು ಮಹಿಳಾ ದೃಷ್ಟಿಕೋನದ ಬರವಣಿಗೆಗಳು ಅಪರೂಪವಾದದ್ದು.       

ಎಲ್ಲಾ ಸಾಧನೆಗಳ ನಡುವೆ ನೆನಪಿನಲ್ಲಿ ಉಳಿಯುವಂತದ್ದು ಅವರ ಸ್ವಭಾವ ಹಾಗೂ ಶ್ರಮ- ಶ್ರದ್ಧೆ. 88ರ ಹರೆಯದಲ್ಲೂ ತೋರುತ್ತಿದ್ದ ಬದ್ಧತೆ ನಿಜಕ್ಕೂ ಅನುಕರಣೀಯ. ಕಳೆದ ವರ್ಷ ಅವರು ಬರೆಯುತ್ತಿದ್ದ ಸಿರಿಧಾನ್ಯದ ಬಗ್ಗೆಗಿನ ಪುಸ್ತಕಕ್ಕೆ ಅದರ ಬಗ್ಗೆ ಆಸಕ್ತಿ ಇದ್ದ ನನ್ನ ಹೆಂಡತಿಯಿಂದ ಒಂದಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದರು. ಪುಸ್ತಕ ಬಿಡುಗಡೆಯಾದಾಗ ಕರೆ ಮಾಡಿ ಅದರ ಪ್ರತಿಗಳನ್ನು ಕೊಟ್ಟಿದ್ದರು. ತಮ್ಮ ಅಪಾರ ಜ್ಞಾನದ ನಡುವೆ ಮಾಹಿತಿಗಳು ಎಲ್ಲಿಂದ ಬಂದರೂ ಸ್ವೀಕರಿಸುವ ವಿನಯ ಅವರಲ್ಲಿತ್ತು.        

ಹೀಗೆ ಎಷ್ಟೋ ಕೆಲಸಗಳು ಬಾಕಿ ಉಳಿದು ಬಿಡುತ್ತವೆ. “ಅಂಜೆನು ಕಾರ್ಯಕ್ರಮದ ಮಧ್ಯೆ ಹೊರಟೆ ಆದ್ದರಿಂದ ಸಿಡಿ ಬಂದರೆ ಮತ್ತೆ ನೋಡೋಣ ಎಂದಿದ್ದರು” ಇನ್ನೆಲ್ಲಿ ನೋಡುವುದು? ಅಂತೆಯೇ ತಾವು ನಿರ್ಮಿಸಿದ್ದ ಧ್ವನಿಸುರುಳಿ ಒಂದರ ಕೊನೆಯ ಕ್ಯಾಸೆಟ್ಟನ್ನು ನನಗೆ ಕೊಟ್ಟು ಸಮಯ ಸಿಕ್ಕಾಗ ಸಿಡಿ ಗೆ ಕನ್ವರ್ಟ್ ಮಾಡಿಕೊಡು ಎಂದಿದ್ದರು. ಅದೂ ಹಾಗೆಯೇ ಉಳಿದಿದೆ.

ಯಾವುದೂ ನಿಂತ ನೀರಲ್ಲ. ಯಾರದೂ ಭರಿಸಲಾಗದ ನಷ್ಟವಿಲ್ಲದೆ ಇರಬಹುದು. ಆದರೆ ಶಿಕ್ಷಣ, ಜ್ಞಾನ, ಸೇವೆ, ಸಾಹಿತ್ಯ ಬುದ್ಧಿಮತ್ತೆ, ಹೃದಯವಂತಿಕೆ, ಅರಿವಿನ ಆಳ, ಬದ್ಧತೆ ಎಲ್ಲವೂ ಒಬ್ಬರಲ್ಲೇ ಕಾಣುವುದು ತುಸು ಕಷ್ಟವೇ. ಅಂತಹ ಸ್ವಭಾವಗಳ ಆಗರವಾಗಿದ್ದ ಡಾಕ್ಟರ್ ಲೀಲಾವತಿ ದೇವದಾಸ್ ರವರ ಆಗಲಿಕ್ಕೆ ನಿಜಕ್ಕೂ ತುಂಬಲಾರದ ನಷ್ಟವೇ.
Read more!

Thursday 13 December 2018

ನನ್ನ ಚೈನಾ ಪ್ರವಾಸ – ಭಾಗ 11/2

ವಿಶ್ವವೇ ಒಂದು ಪುಸ್ತಕ, ಲೋಕ ಸಂಚಾರ ಮಾಡದಿರುವವನು ಕೇವಲ ಒಂದು ಪುಟ ಮಾತ್ರ ಓದಿದಂತೆ’ ಎಂದಿದ್ದಾರೆ ಸಂತ ಅಗಸ್ಟೀನ್. ಅವರು ಹೇಳೋ ಲೆಕ್ಕದಲ್ಲಿ ನೋಡಿದರೆ ನಾನು ಒಂದು ವಾಕ್ಯ ಕೂಡ ಓದಿಲ್ಲದಂತೆ. ಕಡೆ ಚೆನ್ನೈ, ಆ ಕಡೆ ಬಾಂಬೆ, ಇನ್ನೊಂದು ಕಡೆ ಕೇರಳ ಕೂಡ ದಾಟಿಲ್ಲ ನನ್ನ ಲೋಕಲ್ ಪಾಸ್‍ಪೋರ್ಟ್.      
.
ಹಾಗೆ ನೋಡಿದರೆ, ನನ್ನ ಹಲವು ಯುವ ಗೆಳೆಯರು ಪ್ರವಾಸಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅಗಸ್ಟಿನರ ಮಾತಿನ ಲೆಕ್ಕದಲ್ಲಿ ಪ್ರತಿ ವರ್ಷ ಒಂದೊಂದೇ ಪುಟ ತುಂಬುತ್ತಿರುತ್ತಾರೆ. ಯಾವ ಊರಿನಲ್ಲಿ ಯಾವ ಹೋಟೇಲ್ ಎಷ್ಟಕ್ಕೆ ಸಿಗುತ್ತದೆ? ಯಾವ ಪ್ಲೈಟ್ ಯಾವಾಗ ಬುಕ್ ಮಾಡಬೇಕು? ಎಂಬುದನ್ನು ಕೆಲಸದ ನಡುವೆ ಯಾವಾಗ ಎಬ್ಬಿಸಿ ಕೇಳಿದರೂ, ಚಂದನದಲ್ಲಿ ಹೇಳಿದಂತೆ ’ಥಟ್’ ಎಂದು ಹೇಳುತ್ತಾರೆ, ಆಯ್ಕೆಗಳೊಂದಿಗೆ.
ಅವರಿಗೆಲ್ಲಾನಾನು ಅಷ್ಟೇನೂ ಪ್ರವಾಸಗಳನ್ನು ಮಾಡಿಲ್ಲ, ದೇಶಗಳನ್ನು ನೋಡಿಲ್ಲ ಎಂಬುದು ನನಗಿಂತ ದೊಡ್ಡ ವ್ಯಥೆ. ನನ್ನ ಲೇಖನಗಳನ್ನು ಓದುವ ಅವರು ಮೆಟ್ರೋಲಿ ಹಂಗ್ ಹೋಗಿ ಹಿಂಗೆ ಬಂದಿದ್ದನೇ ಒಳ್ಳೆ ಯುರೋಪ್ ಪ್ರವಾಸ ಕಥನ ಬಿಲ್ಡಪ್ ಕೊಟ್ಟು ಬರೀತೀರಾ, ಇನ್ನೂ ನಿಜಕ್ಕೂ ಯೂರೋಪ್ ಗೆ ಹೋದರೆ ಹೆಂಗೆ ಸಾರ್? ಎಂದು ಕಾಲು ಎಳೆಯುತ್ತಾರೆ. “ಕಾಲ ಬರುತ್ತೆ ಬಿಡಿ” ಅಂದುಕೊಂಡೆ ಕಾಲ ತಳ್ಕೊಂಡು, ಕಾಲನ್ನು ಎಳ್ಕೊಂಡು ಇಲ್ಲಿಯವರೆಗೂ ಬಂದಿದ್ದೇನೆ.
ಬುಲೆಟ್‍ನಲ್ಲಿ ಲೇಹ್ ಲಡಾಕ್ ಟ್ರಿಪ್‍ಗೆ ಹೋಗೋಣ ಬನ್ನಿ ಎಂದು ಕೇಳಿದಾಗಲೆಲ್ಲಾ ಬರುವ  ವರ್ಷ, ಬರುವ  ವರ್ಷ” ಅಂತ ಹೇಳಿರುವ ವರ್ಷ ಇನ್ನೂ ಬಂದೇ ಇಲ್ಲ. ಕೊನೆಗೆ ಇತ್ತ ಕನಕಪುರದ ಗಡಿ ಕೂಡ ದಾಟದೆ ನನ್ನ ಬುಲೆಟ್ ತನ್ನ ಏಳನೆಯ ವರ್ಷಕ್ಕೆ ಟೈರ್ ಇಟ್ಟಿದೆ (ಕಾಲು ಇಟ್ಟಿದೆ ಎನ್ನುವುದರ ವಾಹನಾರ್ಥಕ ಪದ).
ನನ್ನ ಯುವ ಮಿತ್ರರ ಪ್ರಾರ್ಥನೆಯೋ, ಹಾರೈಕೆಯೋ ಚೈನಾ ದೇಶದ ಕುನ್‍ಮಿಂಗ್ ನಗರಕ್ಕೆ ಕಾರ್ಯ ನಿಮಿತ್ತ ಹೋಗುವ ಅವಕಾಶ ಇತ್ತೀಚೆಗೆ ಸಿಕ್ಕಿತು. ಅವಕಾಶ ಇನ್ನೇನು ಕೈ ತಪ್ಪಿತ್ತು ಎನ್ನುವಷ್ಟರಲ್ಲಿ ಸದ್ಯ ಬಾಯಿಗೆ ಬಂದು ಬಿಟ್ಟಿತ್ತು.  ಇದಕ್ಕೆ ಮುಂಚೆ ನಮ್ಮ ಚಿಗುರು ಬಳಗದ ಅಂಜೆನು ಕಾರ್ಯಕ್ರಮದ ಸಾಧ್ಯತೆ, ಸಿದ್ಧತೆ, ಬದ್ಧತೆ, ಆದ್ಯತೆ, ಚಿಂತೆ ಎಲ್ಲವೂ ಇದ್ದುದರಿಂದ,  ಚೆಡ್ಡಿ, ಬನಿಯನ್ , ಸಾಕ್ಸ್‍ ಗಳನ್ನು  ಪ್ಯಾಕ್ ಮಾಡುಲು  ಶುರು ಮಾಡಿದ ನಂತರವೇ ಮೊದಲ ಪ್ರವಾಸದ ಕಾತುರ, ರೋಮಾಂಚನಗಳು ಆರಂಭವಾದದ್ದು.      

‘Where ever you go, go with all your heart’
ಎಂದ ಕನಫ್ಯೂಶಿಸ್‍ನ ಮಾತು ಎದೆ ತುಂಬಿಕೊಂಡು, ಅದೇ ಗುಂಗಿನಲ್ಲಿ ಎಲ್ಲಿ ಪಾಸ್‍ಪೋರ್ಟ್ ಮರೆತು ಬಿಡುತ್ತೇನೋ ಎಂಬ ಆತಂಕವು ವಿಮಾನದ ಮೆಟ್ಟಿಲು ಹತ್ತುವ ತನಕ ಇದ್ದೇ ಇತ್ತು. ‘What ever you do, be careful with your Passport’ ಎಂದ              ನಮ್ಮ ಆಫೀಸಿನ ಅಡ್ಮಿನ್ ಮಾತನ್ನು heartನಲ್ಲಿ by heart  ಮಾಡಿಕೊಂಡಿದ್ದೆ, ಕನಫ್ಯೂಶಿಸ್‍ನ ಕ್ಷಮೆ ಕೋರುತ್ತಾ.     

ಪಾಸ್‍ಪೋರ್ಟ್ದೇ ಒಂದು ಕಥೆ. ನಾನಿನ್ನೂ ಚಿಕ್ಕವನಿದ್ದಾಗ, I mean ವಯಸ್ಸಿನಲ್ಲಿ  ಚಿಕ್ಕವನಿದ್ದಾಗ, ಮನೆ ಮುಂದೆ ಯಾರೋ ಕಣಿ ಹೇಳುವವಳು ಬಂದಿದ್ದಳು. ನನ್ನನು ನೋಡಿದ್ದೇ ಕ್ಷಣ, “ ಹಾಲಕ್ಕಿ ನುಡಿತ್ತೈತೆ ಹಾಲಕ್ಕಿ, ಈ ಹುಡುಗನ ನಸೀಬು ದೊಡ್ಡದೈತ್ತಿ. ಆಕಾಶದಾಗ ವಿಮಾನದಾಗ ದೇಶ ದೇಶ ಸುತ್ತು ಯೋಗ ಐತ್ರಿ” ಎಂದು ಹೇಳಿ ಒಂದು ಇಡಿ ಬದಲು, ಎರಡು ಡಿ ಅಕ್ಕಿ, ತೆಂಗಿನಕಾಯಿ, ಬೆಲ್ಲ ಎಲ್ಲ ತೆಗೆದುಕೊಂಡು ಹೋಗಿದ್ದಳು. ಅದೇನು ಅಂತ ಭವಿಷ್ಯ ಹೇಳಿದಳೋ, ನಮ್ಮ ಮನೆಯಲ್ಲಿ ಎಲ್ಲರೂ ಫಾರಿನ್ ಟ್ರಿಪ್ಪಿಗೆ ಹೋಗಿ ಬಂದರೂ, ನಾನು ಮಾತ್ರ ಶಿವಾಜಿನಗರ ಟೂ ದೊಮ್ಮಲೂರು ನಡುವಿನ ಡಬಲ್ ಡೆಕ್ಕರ್‍ ಬಸ್ಸಿನ  ಮಹಡಿ ಮೀರಿ ಮೇಲೆ ಏರಲಿಲ್ಲ. ಸ್ಟಾಪ್ ಬಂದಾಗ ಕೆಳಗಂತೂ ಇಳಿದೆ.

2009
ರಲ್ಲಿ ಮಾಡಿದ್ದ ಪಾಸ್‍ಪೋರ್ಟ್‍ನಲ್ಲಿ ಒಂದು ಸಣ್ಣ ಕಲೆಯೂ ಕೂಡ ಬೀಳದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೆ. ನನ್ನ ಕೆಲವು ಗೆಳೆಯರು ವರ್ಷದಲ್ಲಿ ಒಂದು ಕೆಮೆಸ್ಟ್ರಿ ನೋಟ್ ಬುಕ್ ಮುಗಿಸಿ ಇನ್ನೊಂದು ಹೊಸ ಬುಕ್ ಪ್ರಾರಂಭಿಸಿದಂತೆ, ಪಾಸ್‍ಪೋರ್ಟ್  ತುಂಬಾ ವೀಸಾಗಳನ್ನು ಗುದ್ದಿಸಿಕೊಂಡು ಮುನ್ನಡೆಯುತ್ತಿದ್ದರು. ಮೊನ್ನೆ ಚೈನಾಕ್ಕೆ ವಿಸಾ ಮಾಡಿಸಲು ಕೊಟ್ಟಾಗ ಗೊತ್ತಾಗಿದ್ದು, ಕನಿಷ್ಠ 6 ತಿಂಗಳು ವ್ಯಾಲಿಡಿಟಿ ಇಲ್ಲದಿದ್ದರೆ ವಿಸಾ ಸಿಗೋಲ್ಲ ಎಂದು. ನನ್ನ ಪಾಸ್‍ಪೋರ್ಟ್ ಮಾರ್ಚಿನಲ್ಲಿ ಎಕ್ಸ್ಪೈರ್ ಆಗಲು ತುದಿಗಾಲಿನಲ್ಲಿ ನಿಂತಿತ್ತು.
ಇನ್ನೂ ವಿಸಾ ಸಿಗುವುದಿಲ್ಲ ಎಂದಾಗಲೂ ದುಃಖ ಆಗಲಿಲ್ಲ, ’ಅಂಜೆನು’ವಿನ ಸಿದ್ಧತೆ ಬದ್ಧತೆ ಇದ್ದೇ ಇತ್ತಲ್ಲ. ಆದರೂ ಪಾಸ್‍ಪೋರ್ಟ್ ರಿನಿವಲ್ ಮಾಡಿಸಲು ಬೆಂಗಳೂರಿನಲ್ಲಿ ಮೂಲ ಬೆಂಗಳೂರಿಗನಾದ ನನಗೆ ಅಪಾಯಿಂಟ್‍ಮೆಂಟ್ ಸಿಗದೆ,  ಹುಬ್ಬಳ್ಳಿಗೆ ಹೋಗಿ ಅಪ್ಲೈ ಮಾಡಿದೆ. ರಾಣಿ ಚೆನ್ನಮ್ಮ ಸರ್ಕಲ್ಲಿನ ಬಳಿ ಮೀನು ಊಟ ಮಾಡಿ, ಬಸ್ ಸ್ಟ್ಯಾಂಡ್ ಬಳಿ  20 ದಿನಗಳ ವ್ಯಾಲಿಡಿಟಿ ಇರುವ ಮಿಶ್ರ ಪೇಡ ತೆಗೆದುಕೊಂಡ ಭಾಗ್ಯದ ಮುಂದೆ ವಿಸಾ ಬರುತ್ತೋ ಇಲ್ಲವೋ ಎಂಬುದು ಪಕ್ಕಕ್ಕೆ ಸರಿದು, ಧಾರವಾಡದಲ್ಲಿ ವರಕವಿ ಬೇಂದ್ರೆ ಮನೆ ನೋಡಿದ ತೃಪ್ತಿ ಪ್ರಧಾನವಾಯಿತು.

ಹುಬ್ಬಳ್ಳಿ ಪಾಸ್‍ಪೋರ್ಟ್ ಕಛೇರಿಯ ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ  ಅಚ್ಚರಿ ಎಂಬಂತೆ ನಾಲ್ಕು ದಿನದಲ್ಲಿ ಪಾಸ್‍ಪೋರ್ಟ್ ಬಂದು, 10 ದಿನದಲ್ಲಿ ವಿಸಾ ಸಿಕ್ಕೇ ಬಿಟ್ಟಿತು. ಅದೆಷ್ಟೇ ಪ್ರಯತ್ನಪಟ್ಟರೂ ಆನಂದಭಾಷ್ಪ ಮಾತ್ರ ಬರದೇ ಹೋಯಿತು. 

ಇನ್ನು ಚೈನಾಗೆ ಹೊರಡುವ ದಿನವೂ ಆಫೀಸಿನಿಂದ ಹಿಂದಿರುಗಿದಾಗ ಸಮಯ ಐದು ಮೂವತ್ತು. ಮನಸ್ಸಲ್ಲಿ ಎಂಥದೋ ಭಾರ. ನನ್ನೆಲ್ಲಾ ಅಗತ್ಯತೆ, ಅನಿವಾರ್ಯತೆ ಅಭದ್ರತೆಯನ್ನು ಚೆನ್ನಾಗಿ ಬಲ್ಲ ಮನೆಯವರು ಎಲ್ಲವನ್ನೂ ಪ್ಯಾಕ್ ಮಾಡಿಟ್ಟಿದ್ದರು. ಹೋಗಿ ತಲೆ ಕೂದಲು ಕಟಿಂಗ್ ಮಾಡಿಸಿಕೊಂಡು ಬಂದರೂ ಅದೇ ಭಾರ. ಇನ್ನು ಹೊರಡುವ ಮುನ್ನ ಬ್ಯಾಗ್ ತೂಕ ಹಾಕಿ ನೋಡಿ ಏರ್‍ಲೈನ್‍ರವರು ವಿಧಿಸಿದ ಮಿತಿಗಿಂತ 15 ಕೆಜಿ ಕಡಿಮೆ ಇದೆ ಎಂದು ತಿಳಿದ ಮೇಲೆಯೇ ಮನಸ್ಸು ಒಂದಷ್ಟು ಹಗುರವಾಗಿದ್ದು.    

ಟ್ರಾಫಿಕ್ಕಿನ ಭಯದಿಂದಾಗಿ ಒಂದಷ್ಟು ಬೇಗನೇ ಓಲಾ ಹಿಡಿದು ವಿಮಾನ ನಿಲ್ದಾಣಕ್ಕೆ ಹೊರಟೆ. ಎಲ್ಲಾ ಟ್ರಾಫಿಕ್ ನಡುವೆಯೂ ಕೇವಲ 50 ನಿಮಿಷದಲ್ಲಿ ಏರ್ಪೋಟ್ ತಲುಪಿಸಿದ ಓಲಾ ಡ್ರೈವರ್ ನನ್ನ ಕಣ್ಣಿಗೆ  ಒಬ್ಬ ಪೈಲೆಟ್‍ನಂತೆ ಗೋಚರಿಸಿದ. ಮಿಕ್ಕ ಚಿಲ್ಲರೆ ಇಟ್ಟುಕೊಳ್ಳಲು ಹೇಳಿದಾಗ ಮಾತ್ರ ವಿಮಾನದ ಏರ್ ಹೋಸ್ಟಸ್‍ನಂತೆ ಸುಂದರ ನಗೆ ನಕ್ಕ.   

ಚೆಕ್ಕಿಂಗ್‍ನಲ್ಲಿ ಒಟ್ಟು ಮೂರು ಬಾರಿ ಸೆಕ್ಯೂರಿಟಿ ಕ್ಲಿಯರೆನ್ಸ್ ಫೇಲ್ ಆದೆ. ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಬೇಕು ಎಂದು ಹೇಳಿದ ಮೇಲೂ, ಒಮ್ಮೆ ಐದು ರೂಪಾಯಿಯ ನಾಣ್ಯ, ಇನ್ನೊಮ್ಮೆ ಜಪಸರ, ಮಗದೊಮ್ಮೆ ಸಣ್ಣ ಕೀ ಪ್ಯಾಂಟಿನಲ್ಲಿ ಸಿಕ್ಕಿ ಮರಳಿ ಯತ್ನವ ಮಾಡು ಎಂಬಂತೆ ಸ್ಟ್ರಿಕ್ಟ್ ಆಫೀಸರ್ ನನ್ನನ್ನು ಮತ್ತೆ ಮತ್ತೆ ವಾಪಸ್ ಕಳುಹಿಸಿದ. ’ಪೆಹಲಾ ಬಾರ್ ಹೇ ಕ್ಯಾ’ ಎಂಬ ಅವನ ಕರ್ಕಶ ಪ್ರಶ್ನೆಗೆ ನಾನು “ಹಾ” ಅಂದದ್ದು ಹಿಂದಿಯಲ್ಲೋ ಕನ್ನಡದಲ್ಲಿ ನನಗೇ ಕನ್ಫ್ಯೂಷನ್.

579 ಪದಗಳ ನಂತರವೂ ಚೈನಾ ಪ್ರವಾಸದ ಈ ಕಥನ ಬೆಂಗಳೂರು ವಿಮಾನ ನಿಲ್ದಾಣ ದಾಟದೆ ಇರುವುದು ಓದುಗಾರದ ನಿಮ್ಮ ದೌರ್ಭಾಗ್ಯ. ಬಲಗಾಲಿಟ್ಟು ವಿಮಾನದೊಳಗೆ ಹೋದಾಗಿನಿಂದ ಹಿಡಿದು ಎಡಗಾಲಿನ ಮೇಲೆ ಭಾರವಾದ ಸೂಟ್ ಕೇಸ್ ಬಿದ್ದ ಸಂಪೂರ್ಣ ಕಥಾನಕವನ್ನು ಮುಂದಿನ ಭಾಗದಲ್ಲಿ ಖಂಡಿತ ಮುಗಿಸುವೆ. ನಿಹೌ, 你好.