Saturday 20 January 2018

ಬೆಚ್ಚಿ ಬಿದ್ದ ಗುಬ್ಬಚ್ಚಿಗಳು ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ.

80, 90ರ ದಶಕದ ಭಾನುವಾರಗಳಲ್ಲಿ ಜೆ.ಸಿ.ರಸ್ತೆಯ ಸಂತ ತೆರೇಸಮ್ಮನವರ ದೇವಾಲಯದ ಬೆಳಿಗ್ಗೆಗಳು ಒಂದು ಸಾಮಾನ್ಯ ದೃಶ್ಯಕ್ಕೆ ಸಾಕ್ಷಿಯಾಗಿರುತಿತ್ತು. ಪ್ರಾಯಶ: ೭೦ರ ದಶಕದಲ್ಲಿ ಕೂಡ. ಕಡು ಕಪ್ಪು ಮೈ ಬಣ್ಣದ, ಬಿಳಿ ಶರ್ಟಿನ ಎತ್ತರದ, ದೃಢಕಾಯದ ವ್ಯಕ್ತಿಯೊಬ್ಬರು ದೇವಾಲಯದ ಒಳಗೆ ಬರುತ್ತಿದ್ದರು.

ಪೂಜೆ ಪ್ರಾರಂಭವಾಗುವ ಅರ್ಧ ಗಂಟೆಯ ಮುಂಚೆಯೇ ಕೈಯಲೊಂದು ಬ್ಯಾಗಿಡಿದು ಗಾನ ವೃಂದದ ಬಳಿಯ ಮರದ ಕುರ್ಚಿಯ ಮೇಲೆ ಬಂದು ಕೂರುತ್ತಿದ್ದರು. ಬ್ಯಾಗ್ ತೆರೆದು ಅಣಿಯಾದರೆಂದರೆ ಮುಂದಿನದೆಲ್ಲಾ ಒಂದು ರೋಚ ದೃಶ್ಯಬ್ಯಾಗಿನಿಂದ ಜಾದುಗಾರನಂತೆ ಒಂದೊಂದೇ ಸಾಸರ್ ಗಳು ಮುಂದಿನ ವಿಶಾಲ ಬೆಂಚಿನ ಮೇಲೆ ಜೋಡಣೆಯಾಗುತಿತ್ತು. ಬಿಳಿ ಬಣ್ಣದ ಸಾಸರ್ಗಳ ಮೇಲೆ ನೀಲಿ, ಕೆಂಪು ಹೀಗೆ ಬಣ್ಣ ಬಣ್ಣದ ಸಣ್ಣ ಡಿಸೈನ್ಗಳು. ಕೆಲವೊಂದು ಸಾಸರ್ ಗಳ ಮೇಲಿನ ತುದಿಗಳು ಒಂದಷ್ಟು ಗಾಯವಾದಂತೆ ಮುರಿದಿರುತ್ತಿದ್ದವು. ಆದರೂ ಸುಂದರ ಸಾಸರ್ ಗಳವು. ಸಾಸರ್ ಗಳ ಒಳಗೆ ನೀರಿನ ಕರೆ ಅಂದರೆ ಮಾರ್ಕ್. ಬಾವಿಗಳಲ್ಲಿನ ಒಳಗಿನ ಅಂಚಿನ ಕಲ್ಲುಗಳ ಮೇಲಿನ ಕಲೆಗಳಂತೆ.

ನಂತರ ಒಂದು ನೀರು ತುಂಬಿದ ಪ್ಲಾಸ್ಟಿಕ್ ಡಬ್ಬದಿಂದ ಒಂದೊಂದು ಸಾಸರ್ಗೂ ಆ ಅನುಭವಿ ಕೈಗಳಿಂದ ಅಳತೆಯಂತೆ ನೀರು. ಒಳಗಿದ್ದ ಕಲೆಗಳೂ ಆ ಅಳತೆಗೆ ಸಹಾಯ ಮಾಡುತ್ತಿದ್ದವು. ನೋಡುತ್ತಿದ್ದಂತೆ ಎಲ್ಲಾ ಸಾಸರ್ ಗಳು ತಮ್ಮ ಪಾಲಿನ ಪಂಚಾಮೃತದಂತೆ ಇಷ್ಟಿಷ್ಟೇ ತುಂಬಿಕೊಳ್ಳುತ್ತಿದ್ದವು. ನಡು ನಡುವೆ ತಮ್ಮ ಮುಂದೆ ಹಾದು ಹೋಗುವವರತ್ತ ಒಂದು ಸುಂದರ ಮುಗುಳ್ನಗೆ. ಹಲ್ಲುಗಳು ಹಳಸಿಯಾದರೂ ನಗು ಮಾತ್ರ ನಿಷ್ಕಲ್ಮಶ.


ನಂತರ ಎರಡು ಸಣ್ಣ ಕೋಲುಗಳು ಪ್ರತ್ಯಕ್ಷ. ಕೋಲುಗಳ ಮೇಲಿನ ತುದಿ ಸವೆದು ಹೋಗಿ ನುಣುಪೋ ನುಣುಪು. ಈಗ ನಿಜವಾದ ಜಾದು ಶುರು. ಒಂದು ಸಾಸರ್ ನ ನೆತ್ತಿಯ ಮೇಲೆ ಈ ಕೋಲಿನ ನುಣುಪಿನಿಂದ ಸಣ್ಣಗೆ ಕುಟ್ಟಿದಾಗ ಹೊರಡುತ್ತಿದ್ದ ಶಬ್ದವನ್ನು  ವರ್ಣಿಸಲು ಅಸಾಧ್ಯಶಿಲುಬೆ ಹಾದಿಯ ಹನ್ನೆರಡನೆಯ ಸ್ಥಳದ ಪಠದ ಹಿಂದೆ ಬೆಚ್ಚಗೆ ಕೂತು ಚಿಲಿಪಿಲಿ ಎನ್ನುತ್ತಿದ್ದ ಗುಬ್ಬಚ್ಚಿಗಳು ಶಬ್ದ ಎಚ್ಚರಿಕೆಯ ಘಂಟೆಯೇನೋ ಎಂಬಂತೆ ಪಟಪಟನೆ ಹಾರಿ ಹತ್ತನೇ ಸ್ಥಳಕ್ಕೆ ತಮ್ಮ ಜಾಗ ಬದಲಾಯಿಸಿಕೊಳ್ಳುತ್ತಿದ್ದವು
ಗೆಳೆಯರ ಯೋಜನೆ, ಫೋನ್ ನಂಬರ್ ಕೊಟ್ಟು ಒಂದಷ್ಟು ಮಾತಾಡಿ ಬಂದೆ. ಒಂದೆರೆಡು ವರ್ಷಗಳ ನಂತರ ನಮ್ಮ ಚಿಗುರು ಬಳಗದಿಂದ ರವೀಂದ್ರ ಕಲಾಕ್ಷೇತ್ರದಲ್ಲೊಂದು ಕಾರ್ಯಕ್ರಮ. ಅವರನ್ನು ಆ ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕೆಂದು ನಿರ್ಧರಿಸಿ ಅವರನ್ನು ಆಹ್ವಾನಿಸುವ ಜವಬ್ದಾರಿಯನ್ನುಗೆಳೆಯರು ಮತ್ತೆ ನನಗೆ ವಹಿಸಿದರು.

ಮತ್ತೊಮ್ಮೆ ಸಾಸರ್ ಗೆ ಒಂದು ಸಣ್ಣ ಏಟು. ಏಟಿಗೆ ಸಾಸರ್ ನಿಂದ ’ಸ’...ಎಂಬ ಸ್ವರ ಕೇಳುತ್ತದೆ. ಆ ಅನುಭವಿ ಕಿವಿಗೆ ಅದು ಸರಿ ಎನಿಸುತ್ತದೆ. ಮುಂದೆ ಮತ್ತೊಂದು ಸಾಸರ್ ಗೆ ಏಟು. ರಿ’.... ಎಂದು ಸ್ವರ ಹೊರಟರೂ, ಸ್ವಲ್ಪ ಶೃತಿ ಮೇಲಿದೆ ಎಂದಾಕ್ಷಣ ಸ್ವಲ್ಪ ನೀರನ್ನು ಅ ಸಾಸರ್ ನಿಂದ ತೆಗೆದು ಪ್ಲಾಸ್ಟಿಕ್ ಡಬ್ಬಕ್ಕೆ.

ಪ್ಲಾಸ್ಟಿಕ್ ಡಬ್ಬದ ನೀರಲ್ಲಿ ಎಲ್ಲಾ ಸ್ವರಗಳು. ಅದೇ ರೀತಿ ಎಲ್ಲಾ ನೋಟ್ ಗಳು, ಅದರ ಶಾರ್ಪ್, ಫ್ಲಾಟ್ ಗಳನ್ನು ಪರೀಕ್ಷಿಸುತ್ತಾ ಎಲ್ಲಿ ನೀರು ಬೇಕೋ ಅಲ್ಲಿ ಹಾಕಿ, ಎಲ್ಲಿ ಬೇಡವೋ ಅಲ್ಲಿಂದ ತೆಗೆಯುವ ಪರಿಯನ್ನು ನಮ್ಮ ಜಲ ವಿವಾದ ನ್ಯಾಯ ಮಂಡಳಿಗಳು ನೋಡಬೇಕಿತ್ತು.

ಮುಂದೆ ಎಲ್ಲಾ ಸಾಸರ್ ಗಳಿಂದ ಹೊರಡುವ ಸ್ವರಗಳು ಲೆಗ್ ಹಾರ್ಮೋನಿಯಂನ ಶೃತಿಯೊಂದಿಗೆ ಹೊಂದಿಸುವ ಕಾಯಕ. ನಡುವೆ ಅಡಚಣೆ ಮಾಡುವ ತಬಲಾ ಶೇಖರಣ್ಣ ಕಡೆಗೆ ತಮಿಳಿನಲ್ಲಿ ಸಣ್ಣ ಗದರಿಕೆ. ಇದೆಲ್ಲಾ ಹತ್ತು ನಿಮಿಷದ ಕೆಲಸ. ಇನ್ನೂ ಪೂಜೆಗೆ, ಹಾಡಿಗೆ ಸಿದ್ಧ. ಹಾಡು ಪ್ರಾರಂಭವಾಗಿ ಗಾಯನದೊಂದಿಗೆ ಇದರ ನಾದ ಸೇರಿದಾಗ ಅದೊಂಡು ಸುಂದರ ಸಂಗೀತ ಸಂಭ್ರಮ. ಹಾರ್ಮೋನಿಯಂ ಮೇಲೆ ರಾಯಪ್ಪಣ್ಣ, ನಂತರ ಜೋಸೆಪಣ್ಣ, ತಬಲ ಶೇಖರಣ್ಣ, ಪಿಟೀಲು ಮಾಣಿಕ್ಯಂ ಸೇರಿದರೆ ಅ ಭಾನುವಾರ ಮುಂಜಾನೆಗೆ ’ಹರುಷನ ಹೊನಲು ಹರಿದ’ ಅನುಭವ.

ಇದು ಅಂದಿನ ತೆರೇಸಮ್ಮನವರ ದೇವಾಲಯದ ಭಾನುವಾರದ ಪೂಜೆಗಳಲ್ಲಿನ ’ಜಲತರಂಗದ’ ಕಥೆ. ಇಂದಿಗೂ ಈ ವಾದ್ಯವನ್ನು, ಜೊತೆಗಿನ ಹಾರ್ಮೋನಿಯಂ, ತಬಲ, ಪಿಟೀಲಿನ ಮೋಡಿಯನ್ನು, ಭಕ್ತಿ ಸಿಂಚನವನ್ನು ಜನ ನೆನೆಯುತ್ತಾರೆ. ಜನರಷ್ಟೇ ಪ್ರೀತಿಯಿಂದ ಅಂದಿನ ಗುರುಗಳು, ಅಂದು ಬ್ರದರ್ ಗಳಾಗಿದ್ದ ಇಂದಿನ ಹಿರಿಯ ಗುರುಗಳೂ ನೆನೆಯುತ್ತಾರೆ.

ಸಿಸ್ಟರ್ ಜೆಸಿಂತ, ಫಾದರ್ ಫೆಲಿಕ್ಸ್, ಫಾದರ್ ಚಸರಾ, ಫಾದರ್ ಫಾತಿರಾಜ್ ಆದಿಯಾಗಿ ಅನೇಕರು ಇಲ್ಲಿನ ಕೊಯರ್ ಮಾಸ್ಟರ್ ಗಳೇ. ೭೦-೮೦ರ ದಶಕದಲ್ಲಿ ಸಂತ ತೆರೇಸಮ್ಮನವರ ದೇವಾಲಯ ಕನ್ನಡ ಕ್ರೈಸ್ತರ ಸಾಂಸ್ಕೃತಿಕ ಕೇಂದ್ರವಾಗಿ ಕಂಗೊಳಿಸಿದರಲ್ಲಿ ಈ ’ಜಲತರಂಗದ’ ಕೊಡುಗೆ ಅಪಾರ.

ಮುಂದೆ ನಾವು ಯುವಕರೆಲ್ಲಾ ಸೇರಿಕೊಂಡು ಕೀಬೋರ್ಡ್ ಗಳ ಮೋಡಿಗೆ ಸಿಲುಕುವವರೆಗೂ ವಾದ್ಯಗಳದ್ದೇ ಪಾರಪತ್ಯ. ಆದರೆ ಬದಲಾವಣೆ ಜಗದ ನಿಯಮ ಎಂಬುದನ್ನು ಎಲ್ಲರಿಗಿಂತ ಮೊದಲು ಅರಿತು ಬದಲಾವಣೆಯನ್ನು ಸ್ವಾಗತಿಸಿದವರೂ ಜಲತರಂಗದ ದಾಸಣ್ಣನವರೇ೨೦೦೦ರ ಹೊತ್ತಿಗೆ ಪಿಟೀಲು ಮಾಣಿಕ್ಯಂ ಇನ್ನಿಲ್ಲವಾಗಿದ್ದರು. ತಬಲ ಶೇಖರಣ್ಣ ರೇಗುತ್ತಿದ್ದರು. ಸೈಕಲ್ ಬಿಟ್ಟು ಬಸ್ಸಿನಲ್ಲಿ ಬರಲು ಪ್ರಾರಂಭಿಸಿದ ದಾಸ್ರದ್ದು ಮಾತ್ರ ಅದೇ ಮುಗುಳ್ನಗೆ. ಅವರ ಜಲತರಂಗದಲ್ಲಿ ಅದೇ ಮಾಧುರ್ಯದ ಮೋಡಿ. ಅದೇ ದಶಕದ ಮಧ್ಯ ಭಾಗದ ಅದೊಂದು ಭಾನುವಾರ ಪೂಜೆ ಮುಗಿದ ನಂತರ ತಮ್ಮ ಬ್ಯಾಗನ್ನು ಹೊತ್ತು ನಡೆದ ದಾಸಣ್ಣ ಮತ್ತೆ ಬರಲಿಲ್ಲ. ನಾವು ಎಂದಿನಂತೆ ಗೌರವದಿಂದಲೇ ಕಾಯುತ್ತಿದ್ದೆವು.

ಹಿರಿಯ ಗೆಳೆಯರೊಬ್ಬರು ಅವರಿಂದ ಯುವಕರಿಗೆ ಜಲತರಂಗ ಕಲಿಸುವ ಆಸೆಯಿಂದ ಅವರನ್ನು ಹುಡುಕುವ ಜವಬ್ದಾರಿಯನ್ನು ನನಗೆ ವಹಿಸಿದರು. ಡೇವಿಸ್ ರೋಡಿನ ಬಳಿ ಅವರ ಮನೆಯಿತ್ತು ಎಂಬುದು ಗೊತ್ತಿತ್ತು, ಅದರೆ ಮನೆ ಗೊತ್ತಿರಲಿಲ್ಲ. ಕ್ರಿಸ್ಮಸ್ ಸಮಯವಾದರಿಂದ ಸ್ಟಾರ್ ಕಟ್ಟಿದ ಮನೆಗಳಿಗೆಲ್ಲಾ ಹೋಗಿ ಕೇಳಿದೆ. ಎಂಟತ್ತು ಮನೆಗಳು ತಾಕಿದ ಮೇಲೆ ಯಾರೋ ಅವರ ಮನೆ ತೋರಿಸಿದರು. ಮನೆಯ ಮುಂದೆ ಸ್ಟಾರ್ ಇರಲಿಲ್ಲ. ನಮ್ಮ ಪಾಲಿನ ಸೂಪರ್ ಸ್ಟಾರ್ ಒಳಗಿದ್ದರು. ಅದೇ ನಗು.


ಬಾರಿ ಮನೆ ಗೊತ್ತಿತ್ತು, ಹುಡುಕಲಿಲ್ಲ. ಒಳಗೆ ಹೋದರೆ ಅವರಿಲ್ಲ. ಅವರು ಬದುಕಿಗೆ ವಿದಾಯ ಹೇಳಿ ಮೂರು ತಿಂಗಳಾಯಿತು ಎಂಬ ಮಾಹಿತಿ ಅವರ ಮನೆಯವರಿಂದ ತಿಳಿದು ಬಂತು. ಅವರು ಜಲತರಂಗವನ್ನು ಶೃತಿಗೊಳಿಸುತ್ತಿದ್ದ ದೃಶ್ಯ ಒಮ್ಮೆ ಮನಸ್ಸಿನಲ್ಲಿ ಮಿಂಚಿ ಮರೆಯಾಯಿತು. ಭಾರವಾದ ಹೆಜ್ಜೆಯಿಂದ ಅಲ್ಲಿಂದ ಹೊರಟೆ, ಹಿಂದಿನ ವರ್ಷವೇ ಸನ್ಮಾನಿಸಬಹುದಾಗಿತ್ತು’ ಅಂದುಕೊಳ್ಳುತ್ತಾ.....

ಈಗ ಯಮಹಾ ಕೀಬೋರ್ಡ್ ಗಳೇ ಎಲ್ಲಾ ತರಂಗಗಳನ್ನು ಎಬ್ಬಿಸುತ್ತಿವೆ. ಬೆಚ್ಚಿ ಬಿದ್ದ ಗುಬ್ಬಚ್ಚಿಗಳು ಮಾತ್ರ ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ.

Saturday 13 January 2018

ಬೆನ್‍ಹರ್ - ಒಮ್ಮೆ ಬಿಡುವು ಮಾಡಿಕೊಂಡು ನೋಡಿ

 ಹಾಲಿವುಡ್‍ನಲ್ಲಿ ಬೈಬಲ್ ಅಧಾರಿತ ಅನೇಕ ಚಿತ್ರಗಳು ಬಂದಿವೆ. ಕಥಾವಸ್ತು, ವೈಭವಯುತ ನಿರ್ಮಾಣಗಳಿಂದ ಜನಮನ ಸೆಳೆದಂತ ಈ ಚಿತ್ರಗಳಲ್ಲಿ ಟೆನ್ ಕಮ್ಯಾಂಡಮೆಂಟ್ಸ್  ಹಾಗೂ ಬೆನ್‍ಹರ್ ಪ್ರಮುಖವಾದವು. ವಿಮೋಚನಾಕಾಂಡದ ಇಸ್ರಯೇಲರ ದಾಸ್ಯ, ಬಿಡುಗಡೆ, ಹತ್ತು ಆಜ್ಞೆಗಳು ಹಾಗೂ ವಾಗ್ದಾತ್ತ ನಾಡಿನತ್ತ ಪಯಣದ ಕಥೆ ಟೆನ್ ಕಮ್ಯಾಂಡಮೆಂಟ್ಸ್ನದು. ಬೆನ್‍ಹರ್ ಯೇಸುಕ್ರಿಸ್ತನ ಸಮಕಾಲೀನ ಶ್ರೀಮಂತ ಯೆಹೂದ್ಯ ಕುಟುಂಬದ ಯುವಕನೊಬ್ಬನ ಕಥಾನಕ.


ಹಿನ್ನಲೆ ಹಾಗೂ ಪ್ರೇರಣೆ - 1959ರಲಿ ಬಿಡುಗಡೆಯಾದ ಈ ಚಿತ್ರಕ್ಕೆ 1880ರಲ್ಲಿ ಪ್ರಕಟವಾದ ಲ್ಯೂ ವಾಲೆಸನ ’ಬೆನಹರ್ : ದಿ ಟೇಲ್ ಆಫ್ ದಿ ಕ್ರೈಸ್ಟ್’ ಎಂಬ ಕಾದಂಬರಿಯೇ ಸ್ಪೂರ್ತಿ. 1925ರಲ್ಲಿ ಇದೇ ಕಥಾವಸ್ತುವಿನ ಕಪ್ಪು ಬಿಳುಪಿನ ಮೂಕಿ ಚಿತ್ರವೊಂದು ಬಿಡುಗಡೆಯಾಗಿತ್ತು.  ಇದೊಂದು ಕಾಲ್ಪಾನಿಕ ಕಥೆಯಾದರೂ ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ ಪರಿಸ್ಥಿತಿ, ವಾತಾವರಣದ ಮೇಲೆ ಬೆಳಕನ್ನು ಚೆಲ್ಲುತ್ತದೆ. 

ಟ್ರೈಲರ್ ನೋಡಿ ಅಂದಿನ ರೋಮನ್ ಚಕ್ರಾಧಿಪತ್ಯ, ರಾಜಾಡಳಿತದ ಕ್ರೌರ್ಯ, ಅದರ ವಿರುದ್ಧದ ಯೆಹೂದ್ಯರ ಅಸಹನೆ, ದಂಗೆಯೇಳುವ ಹಂಬಲ, ಸಾಮಾನ್ಯ ಜನರ ಅಸಹಾಯಕತೆ, ನೊಂದವರ, ಸೆರೆವಾಸಿಗಳ , ಕುಷ್ಠ ರೋಗಿಗಳ  ದುರ್ಬರ ಜೀವನವೆಲ್ಲವನ್ನು ಬಹಳ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಬೈಬಲ್ ಅಭ್ಯಸಿಸುವವರಿಗೆ ಈ ಚಿತ್ರ ಅನೇಕ ಒಳನೋಟಗಳನ್ನು ನೀಡುತ್ತದೆಕ್ರಿಸ್ತ, ಆತನ ಬೋಧನೆ, ಮರಣ ಅಂದಿನ ಪರಿಸ್ಥಿಯಲ್ಲಿ ಮಾಡಿದ ಪರಿಣಾಮಗಳು ಸಹಾ ಚಿತ್ರದ ಪ್ರಮುಖ ಭಾಗವಾಗಿದೆ. ತನ್ನ ಜನರ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಬೆನ್‍ಹರ್ ಹಾಗೂ ಅದೇ ಕಾಲಘಟ್ಟದಲ್ಲಿ ಜೀವಿಸಿದ ಕ್ರಿಸ್ತನ ಬದುಕುಗಳು ಕೆಲವೇ ಮೈಲುಗಳ ಅಂತರದಲ್ಲಿ ಸಮನಾಂತರವಾಗಿ ಚಿತ್ರದಲ್ಲಿ ಸಾಗುತ್ತಿರುತ್ತದೆ.

ಕಥಾವಸ್ತು – ಬೆನ್‍ಹರ್ ಹಾಗೂ ಮೆಸ್ಸಾಲ ಎಂಬ ಇಬ್ಬರು ಬಾಲ್ಯದ ಗೆಳೆಯರು ಬೆಳೆದಂತೆ ರಾಜಕೀಯ ಕಾರಣಗಳಿಗಾಗಿ ಶತ್ರುಗಳಾಗುತ್ತಾರೆ.  ಬೆನ್‍ಹರ್ ನದು ತನ್ನ ಜನರ ಬಿಡುಗಡೆಯತ್ತ ಚಿತ್ತವಾದರೆ, ಮೆಸ್ಸಾಲನದು ರಾಜಕೀಯ ಅಧಿಕಾರದ ಮನಸ್ಸು. ಒಂದು ಹಂತದಲ್ಲಿ ಎಲ್ಲವನ್ನು ಕಳೆದುಕೊಳ್ಳುವ ಬೆನ್‍ಹರ್ ಮುಂದೆ ಮೆಸ್ಸಾಲನನ್ನು ರಥದ ಸ್ಪರ್ಧೆಯಲ್ಲಿ ಸೋಲಿಸುತ್ತಾನೆ. ಮುಂದಿನ ಅವರಿಬ್ಬರ ಜೀವನ ಏನಾಯಿತು ಎಂಬುದೇ ಉಳಿದ ಕಥೆ. ಇಲ್ಲಿ ಕ್ರಿಸ್ತನ ಪಾತ್ರವೇನು ಎಂಬುದೂ ಮನಮುಟ್ಟುವ ಸಂಗತಿಯೇ.

ನಿರ್ಮಾಣ ಹಾಗೂ ತಾಂತ್ರಿಕತೆ – ಬೆನ್‍ಹರ್ ಎಲ್ಲಾ ರೀತಿಯಲ್ಲೂ ಒಂದು ಪರಿಪೂರ್ಣ ಚಿತ್ರ. ಚಲನಚಿತ್ರ ಮಾಧ್ಯಮವನ್ನು ಅಭ್ಯಾಸಿಸುವವರಿಗೆ ಒಳ್ಳೆಯ ಸಂಶೋಧನಾ ವಸ್ತು. 6 ದಶಕಗಳು ಕಳೆದರೂ ಇಂದಿಗೂ ಚಿತ್ರದ ಅನೇಕ ದೃಶ್ಯಗಳು ಚಲನ ಚಿತ್ರ ಜಗತ್ತಿನಲ್ಲಿ ಹಾಗೂ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಚಿರ ನೂತನವಾಗಿ ಉಳಿದುಕೊಂಡಿದೆ. ಪರದೆಯ ಮೇಲಿನ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದರೆ, ಚಿತ್ರದ ನಿರ್ಮಾಣವೇ ಒಂದು ದೊಡ್ಡ ಪವಾಡ.
ವಿಖ್ಯಾತ ರಥದ ಸ್ಪರ್ಧೆ
ವೈಭವಪೋತ ಸೆಟ್‍ಗಳು ಹಿಂದಿನ ಜೆರುಸಲೇಮನ್ನು ಮತ್ತೆ ಪುನರ್ ನಿರ್ಮಿಸಿದೆ. 10000 ಕ್ಕಿಂತ ಹೆಚ್ಚಿನ ಜನ ನಟರು, ಸಹ ನಟರು , ತಂತ್ರಜ್ಞರು ಚಿತ್ರೀಕರಣದಲ್ಲಿ ಭಾಗಿಯಾದರು. ದಿನಕ್ಕೆ12 ರಿಂದ 14 ಗಂಟೆಗಳು ಸುಮಾರು 6 ತಿಂಗಳ ಕಾಲ ನಡೆದ ಚಿತ್ರದ ನಿರ್ಮಾಣಕ್ಕೆ ವೆಚ್ಚವಾದದ್ದು 1.5 ಕೋಟಿ ಡಾಲರ್. ಇಂದಿನ ಕಾಲಕ್ಕೆ ಅದು ಅದೆಷ್ಟು ಸಾವಿರ ಕೋಟಿ ಡಾಲರೋ. ಚಿತ್ರದ ನಿರ್ಮಾಣ, ಯೋಜನೆ, ಚಿತ್ರೀಕರಣಗಳ ಬಗ್ಗೆ ಬರೆದರೆ ಅದೇ ಒಂದು ದೊಡ್ಡ ಲೇಖನವಾಗಬಹುದು.

ಸಂಗೀತ - ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಚಿತ್ರದ ಸಂಗೀತ. ಮಿಕಲೋಸ್ ರೋಸ್ ಸಂಯೋಜಿಸಿದ ಚಿತ್ರದ ಹಿನ್ನಲೆ ಸಂಗೀತದ ಧ್ವನಿಸುರಳಿ 6 ದಶಕಗಳ ನಂತರವೂ ಜನಪ್ರಿಯತೆ, ಬೇಡಿಕೆಯನ್ನು ಉಳಿಸಿಕೊಂಡಿದೆ.

ದಂತಕಥೆಯಾದ ದೃಶ್ಯಗಳು
- ರೋಮನ್ ರಾಜ್ಯಪಾಲನ ಜೆರುಸಲೇಮಿನ ಪ್ರವೇಶ, ಬೆನ್‍ಹರ್ ಹಾಗೂ ಮೆಸ್ಸಲಾನ ಸಂಭಾಷಣೆಗಳು, ಹಡಗಿನಲ್ಲಿ ಬೆನ್‍ಹರ್ ನ  ಗುಲಾಮಗಿರಿ, ಬಹಿಷ್ಕೃತಗೊಂಡ ಕುಷ್ಠರೋಗಿಗಳ ಕಣಿವೆಯ ದೃಶ್ಯಗೆಳೆಲ್ಲಾ 2000 ವರ್ಷಗಳ ಹಿಂದಿನ ಜೆರುಸಲೇಮನ್ನು ಕಣ್ಣಿನ ಮುಂದೆ ತರುತ್ತದೆಅದರಲ್ಲೂ ಕ್ರಿಸ್ತ ಹಾಗೂ ಬೆನಹರ್ ನ ನಜರೇತಿನ ಮುಖಾಮುಖಿ, ರಥದ ಓಟದ ಸ್ಪರ್ಧೆ. ಕೊನೆಗೆ ಕ್ರಿಸ್ತನ ಕೊನೆಯ ಘಳಿಗೆಯ ದೃಶ್ಯಗಳು ಚಿತ್ರವನ್ನು ಅತ್ಯ್ತುತ್ತಮ ಚಿತ್ರಗಳ ಸಾಲಿನಲ್ಲಿ ನಿಲ್ಲಿಸುತ್ತದೆ.

ನಾಯಕ ಚಾರ್ಲ್ಟನ್ ಹೆಸ್ಟನ್
ಗಲ್ಲಾಪೆಟ್ಟಿಗೆ ಹಾಗೂ ಪ್ರಶಸ್ತಿಗಳು – ಚಿತ್ರದ ನಿರ್ದೇಶಕ ವಿಲ್ಲಿಯಂ ವೈಲರ್ ಹಾಗೂ ನಿರ್ಮಾಣ ತಂಡದ ಶ್ರಮ ಹಾಗೂ ಕೌಶಲ್ಯ ವ್ಯರ್ಥವಾಗಲಿಲ್ಲ. ಪರದೆಯ ಮೇಲೆ ಅದ್ಭುತ ಕಲಾಕೃತಿಯಾಗಿ ಮೂಡಿ ಬಂದ ಚಿತ್ರ ಹತ್ತು ಪಟ್ಟು ಲಾಭವನ್ನು ಗಲ್ಲಾಪೆಟ್ಟಿಗೆಯಲ್ಲಿ ತಂದುಕೊಟ್ಟಿತ್ತು. ಟೈಟಾನಿಕ್ ಚಿತ್ರ ಬರುವ ತನಕ ದಾಖಲೆಯಾಗಿದ್ದ 11 ಆಸ್ಕರ್ ಪ್ರಶಸ್ತಿಯನ್ನು ಅದು ಬಾಚಿಕೊಂಡಿತು. ಟೆನ್ ಕಮ್ಯಾಂಡ್‍ಮೆಂಟ್ಸ್ ಚಿತ್ರದಲ್ಲಿ ಮೋಶೆಯ ಪಾತ್ರವಹಿಸಿದ್ದ ಚಾರ್ಲ್ಟನ್ ಹೆಸ್ಟನ್  ಇಲ್ಲಿ ಬೆನ್‍ಹರ್ ಆಗಿ ಕಾಣಿಸಿಕೊಂಡು ಜನಪದ ನಾಯಕನಾಗಿ ಹೋದ.

ಚಿತ್ರದ ನಾಲ್ಕೈದು ದೃಶ್ಯಗಳಲ್ಲಿ ಮಾತ್ರ ಬರುವ ಕ್ರಿಸ್ತನ ಪಾತ್ರಧಾರಿಯ ಮುಖವನ್ನು ತೋರದೆ ನಿರ್ದೇಶಕರು ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ಹಿನ್ನಲೆಯಲ್ಲಿ ಉಳಿದರೂ ಹೋಗುವ ಕ್ರಿಸ್ತನ ಪಾತ್ರ ಚಿತ್ರದ ಮೇಲೆ ಬೀರುವ ಪರಿಣಾಮ ಅದೆಷ್ಟು ಅಗಾಧವೆಂದರೆ ’ಕಾಣದಿದ್ದರೂ ಕ್ರಿಸ್ತನೇ ನಮ್ಮ ಜೀವನಾಡಿ’ ಎಂಬ ಸಂದೇಶವನ್ನು ಚಿತ್ರ ತೇಲಿ ಬಿಡುತ್ತದೆ. ಸುಮಾರು 3 ಗಂಟೆಗಳಷ್ಟು ದೀರ್ಘವಾದ ಚಿತ್ರವನ್ನು ಒಮ್ಮೆ ಬಿಡುವು ಮಾಡಿಕೊಂಡು ನೋಡಿ. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.