Monday, 30 January 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 6 - ಬೆಳಕು ಹರಿಯಿತು ಭುವಿಯ ಕಡೆಗೆ

ಸ್ಪೂರ್ತಿ ಎಂಬ ಸೂಪರ್ ಹಿಟ್ ಧ್ವನಿಸುರಳಿಯ ಮತ್ತೊಂದು ಸೂಪರ್ ಹಿಟ್ ಗೀತೆ ’ಬೆಳಕು ಹರಿಯಿತು’ ಗೀತೆ. ಇಡೀ ೯೦ರ ದಶಕದಲ್ಲಿ (೨೦೦೦ ದಶಕದ ಮಧ್ಯದವರೆಗೂ) ಯಾವುದೇ ಕನ್ನಡ ಕ್ರೈಸ್ತ ಗಾಯನ ಸ್ಪರ್ಧೆಯಲ್ಲಿ ಇದು ಖಾಯಂ ಗೀತೆ. ಕೆಲವೊಮ್ಮೆ ಎರಡು ಮೂರು ತಂಡಗಳು ಇದೇ ಹಾಡನ್ನು ಹಾಡಿದ ಉದಾಹರಣೆಯೂ ಇದೆ. ಅದಕ್ಕೆ ಕಾರಣ ಸಾಹಿತ್ಯಕ್ಕಿಂತ ಇದರ ಅತ್ಯಾಕರ್ಷಕವಾದ ಶಾಸ್ತ್ರೀಯ ಮೂಲದ  ಸಂಗೀತ ಎಂದೇ ನನ್ನ ಭಾವನೆ. ಅದರಲ್ಲೂ ಸ್ಪರ್ಧೆಯಲ್ಲಿ ತೀರ್ಪುಗಾರರನ್ನು ಸೆಳೆಯಲು ಬೇಕಾದ  ಸ್ವರಪ್ರಸ್ತಾರ, ಹಿನ್ನಲೆ ಸಂಗೀತ ಹಾಡಲ್ಲಿದೆ. ಮೊದಲ ಸಲ ಕೇಳಿದಾಗಲೇ ಸೆಳೆಯುವಂತ ಗುಣ ಇದುದ್ದರಿಂದ ಕೇಳುಗಾರಾರ, ಹಾಡುಗಾರರ , ಗಾಯನ ವೃಂದಗಳ ಫೇವರೆಟ್ ಹಾಡು ಇದಾಗಿತ್ತು.

ಈ ಹಾಡನ್ನು ಕೇಳಿದಾಗಲೆಲ್ಲಾ ಇದು ಕ್ರಿ‍ಸ್‍ಮಸ್ ಗೀತೆಯೇ ಅಥವಾ ಸಾಧಾರಣ ಕಾಲದ ಗೀತೆಯೇ ಎಂಬ ಪ್ರಶ್ನೆ ಮೂಡುತ್ತದೆ. ಆಳವಾಗಿ ಕೇಳಿದಾಗ ಇದೊಂದು ಸಾರ್ವತ್ರಿಕವಾದ ಗೀತೆಯೇ ಎಂದೆನಿಸುತ್ತದೆ.  ಸಾಧಾರಣ ಕಾಲದಲ್ಲೂ ಹಾಡಬಹುದಾದ ಕ್ರಿಸ್‍ಮಸ್ ಗೀತೆಯೂ ಹೌದು ಅಥವಾ ಕ್ರಿಸ್‍ಮಸ್ ಸಮಯದಲ್ಲಿ ಹಾಡಬಹುದಾದ ಸಾಧಾರಣ ಕಾಲದ ಗೀತೆಯೂ ಹೌದು ಎನ್ನಬಹುದಾದ ವಿಶಿಷ್ಠ ಗೀತೆಯಿದು.

’ಭುವಿಪಾಲಕಂ ಸೃಷ್ಠಿ ಸಮಸ್ತಾಯ ಪೋಷಕಂ ಮನುಕುಲ ಸಮಸ್ತ ಪರಿಪಾಲಕಂ’ ಎಂಬ ಸುಮಧುರ ಶ್ಲೋಕದಿಂದ ಪ್ರಾರಂಭವಾಗುತ್ತದೆ ಈ ಹಾಡು. ಈ ಶ್ಲೋಕವನ್ನು ಕೇಳುತ್ತಿದ್ದಂತೆ 80ರ ದಶಕದಲ್ಲಿ ಕನ್ನಡ ಚಿತ್ರಗಳ, ಅದರಲ್ಲೂ ಡಾ.ರಾಜ್ ಚಿತ್ರಗಳ ಪ್ರಾರಂಭದಲ್ಲಿ ಬರುತ್ತಿದ್ದ ಶ್ಲೋಕಗಳು ನೆನಪಿಗೆ ಬರುತ್ತದೆ. ’ನಮೋ ನಮ: ಯೇಸು ಕ್ರಿಸ್ತ’ ಎಂದು ಶ್ಲೋಕ ಮುಗಿಯುತ್ತಿದ್ದಂತೆ ’ಧೀಂ ಧೀಂತಾ ಧಿರನಾ ಧಿರನಾ’ ಎನ್ನುತ್ತಾ ಹೊಸ ರೂಪ ಪಡೆಯುವ ಗೀತೆ ಕನ್ನಡ ಕ್ರೈಸ್ತ ಸಂಗೀತ ಲೋಕದಲ್ಲಿ,  ಹೊಸ ರೀತಿಯ ಟ್ರೆಂಡ್ ಪ್ರಾರಂಭಿಸಿತು ಎಂದರೆ ತಪ್ಪಾಗಲಾರದೇನೋ. ಇದಕ್ಕೆ ಮುಂಚೆ ಈ ರೀತಿಯ ಹಾಡು, ಶ್ಲೋಕ, ಆಲಾಪನೆ ಬಂದಿರಲಿಲ್ಲವೆಂದಲ್ಲ, 

ಆದರೆ ಯುವ ಜನತೆಯ ಮೇಲೆ ಫಾ.ಚಸರಾರವರ  ಸಾಹಿತ್ಯ ಸಂಗೀತ ಬೀರಿದ್ದ ಪರಿಣಾಮವನ್ನುಈ ಗೀತೆ ಮತ್ತಷ್ಟು ಹೆಚ್ಚಿಸಿತು ಹಾಗೂ ನಂತರದ ಗೀತೆಗಳ ರಚನೆಯಲ್ಲಿ ಶಾಸ್ತ್ರೀಯ ಸಂಗೀತದ ಬಳಕೆ ಮತ್ತಷ್ಟು ಹೆಚ್ಚಾಯಿತು ಎಂದೇ ಹೇಳಬಹುದು. 

ಹಾಡಿನ ಸಾಹಿತ್ಯ ಬಹಳ ಸರಳವಾಗಿದೆ ಎಂದೇ ಹೇಳಬಹುದು. ಆದರೆ ಅಲ್ಲಿ ಮತ್ತೆ ಫಾ.ಚಸರರವರ ಮಾಂತ್ರಿಕ ಸ್ಪರ್ಶ ಪ್ರತಿ ಸಾಲಿನಲ್ಲಿದೆ. ವಿಶಾದದ ನಡುವೆ ಕ್ರಿಸ್ತ ತರುವ ಆನಂದ ಹಾಗೂ ಭರವಸೆಯ ಭಾವಗಳೇ ಸ್ಥಾಯಿ ಭಾವವಾಗಿ ಕೊನೆಗೆ ಉಳಿಯುತ್ತದೆ. ’ಬೆಳಕು ಹರಿಯಿತು ಭುವಿಯ ಕಡೆಗೆ ಮನವು ಅರಳಿತು ಕ್ರಿಸ್ತನೆಡೆಗೆ’ ಎಂಬ ಸಾಲುಗಳಲ್ಲಿ ಕ್ರಿಸ್ತನ ಜನನದ ಮೂಲಕ ಭುವಿಯ ಕಡೆಗೆ ಬೆಳಕು ಹರಿದಿದೆ ಎಂಬ ಭಾವವಿದೆ. ಅಲ್ಲಿಗೆ ಕ್ರಿಸ್ತ ಶಾಂತಿ, ಪ್ರೀತಿ, ಪ್ರೇಮದ ಸೂರ್ಯನಂತೆ ಎಂಬ ಅರ್ಥವೂ ಇದೆ. ಸೂರ್ಯನ ಬೆಳಕಿನಿಂದ ಹೂವುಗಳು ಹೊಸ ಚೈತನ್ಯ ಪಡೆದು ಬೆಳಕಿನತ್ತ ಮುಖ ಮಾಡಿ ಅರಳುವಂತೆ, ನಮ್ಮ ಮನಗಳು ಕ್ರಿಸ್ತನತ್ತ ಅರಳುತ್ತವೆ ಎಂಬ ಕಲ್ಪನೆಯೇ ಎಷ್ಟು ಸುಂದರ.

ಹಾಗೆಯೇ, ಭುವಿಗೆ ಬಂದ ಯೇಸುಕ್ರಿಸ್ತ, ಸುಮ್ಮನೆ ಬರದೆ ನೊಂದ ಜನತೆಗೆ ಶಾಂತಿಯನ್ನು ತಂದ ಎಂಬ ಸಾಲುಗಳಲ್ಲಿ ಕ್ರಿಸ್ತಜಯಂತಿಯ ಭರವಸೆಯ ಸಂದೇಶವಿದೆ. ಅಲ್ಲಿಗೆ ಮನಗಳು ಸಂತಸದಿಂದ ನಲಿಯುತ್ತವೆ ಎಂಬುದರ ಸಂಕೇತವೆಂಬಂತೆ ’ಸಸಸ ಗಗಪಪ ನಿನಿಪ ನಿಪನಿ’ ಎಂಬ ಸ್ವರಗಳು ಸಂತಸದ ಭಾವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

ಬೈಬಲ್ ತಜ್ಞರಾದ ವಿಲ್ಲಿಯಂ ಬಾರ್ಕ್ಲೇ ಪ್ರಕಾರ ಯೇಸು ಕ್ರಿಸ್ತ ತಂದ ಬೆಳಕು ಮೂರು ರೀತಿಯದು. ಒಂದು ಎಲ್ಲಾ ರೀತಿಯ ಗೊಂದಲವನ್ನು ಹೋಗಲಾಡಿಸುವ ಬೆಳಕು, ವಿಶ್ವದ ಅತಿ ಹಳೆಯ ಭಯಗಳಲ್ಲಿ ಒಂದಾದ ಕತ್ತಲೆಯ ಭಯವನ್ನು ಹೋಗಲಾಡಿಸುವ ಬೆಳಕು ಇದೇ.  ಇದು ಕೇವಲ ನೈಸರ್ಗಿಕ ಕತ್ತಲು ಮಾತ್ರವಲ್ಲ. ಎರೆಡು, ಪ್ರಕಟಗೊಳ್ಳುವ ಬೆಳಕು. ಯೇಸುವಿನ ಬೆಳಕಿನಲ್ಲೇ ನಮ್ಮನ್ನೇ ನಾವು ಕಂಡುಕೊಳ್ಳುವ ಬೆಳಕು. 

ಮೂರು, ನಮ್ಮನ್ನು ಮುನ್ನಡೆಸುವ ಬೆಳಕು. ನಮ್ಮನ್ನು ಎಲ್ಲಾ ರೀತಿಯಲ್ಲೂ ಮುನ್ನಡೆಸುತ್ತಾ ಎಲ್ಲವನ್ನು ಸ್ಪಷ್ಟಗೊಳಿಸುವ ಬೆಳಕು. ಈ ಗೀತೆಯ ಚರಣಗಳನ್ನು ಗಮನಿಸಿದಾಗ ವಿಲ್ಲಿಯಂರವರು ಹೇಳಿರುವ ಬೆಳಕಿನ ಅಯಾಮಗಳು ಇಲ್ಲೂ ಕಾಣುತ್ತದೆ. ಇದು ಕಾಕತಾಳೀಯವೋ ಇಲ್ಲವೇ ಫಾ.ಚಸರಾರವರ ಅಧ್ಯಯನದ ಪ್ರತಿರೂಪವೋ ಹೇಳಲಾಗುವುದಿಲ್ಲ. 

ಚರಣಗಳು, ಮೊದಲೇ ಹೇಳಿದಂತೆ ಸರಳ ಆದರೆ ಪದಗಳ ಜಾಣ ಜೋಡಿಕೆಯಿಂದ ಆಳ ಅರ್ಥವಂತಿಕೆ ಪಡೆದುಕೊಳ್ಳುತ್ತಾ ಸಾಗುತ್ತದೆ. ಇರುಳಾದ ಮೇಲೆ ಬೆಳಕು ಇದ್ದೇ ಇರುತ್ತದೆ ಎಂಬುದು ಗೊತ್ತಿದ್ದರೂ ಕೆಲವೊಂದು ಇರುಳುಗಳು ನಿರಂತರವೇನೋ ಎಂಬಷ್ಟು ದೊಡ್ದದಾಗಿ ಭಾಸವಾಗುತ್ತದೆ. ನಿದ್ರೆ ಬರದ ರಾತ್ರಿಗಳೂ ಹಾಗೆಯೇ. ಅಂತಹ ಸಮಯದಲ್ಲಿ ಮಿಂಚಿನಂತೆ ಮಿನುಗುವ ಬೆಳಕನ್ನು ಮನಸ್ಸು ಬೇಡಿಕೊಳ್ಳುತ್ತದೆ. ಅದೇ ರೀತಿ ’ಮಿಂಚು’ ಎನ್ನುವುದು ಕ್ಷಣ ಮಾತ್ರದ ಬೆಳಕಿನ ಭಾಗವಷ್ಟೆ. 

ಆದರೆ ಕ್ರಿಸ್ತನ ಬೆಳಕು ಕೇವಲ ಮಿಂಚಿ ಮರೆಯಾಗುವಂಥದಲ್ಲ, ಅದೊಂದು ಜ್ಯೋತಿ, ಹೃದಯದಲ್ಲಿ ಸ್ಥಾಪಿತವಾದದ್ದು ಎಂಬುದನ್ನು ೮ ಪದಗಳ ಎರಡನೆಯ ಸಾಲು ಹೇಳುತ್ತದೆ. ಸಾಹಿತ್ಯದಲ್ಲಿನ ಸರಳತೆಯ ಆಳದ ಉತ್ತಮ  ಉದಾಹರಣೆ ಇದು. ವಿಲ್ಲಿಯಂ ಬಾರ್ಕ್ಲೇಯ ಚಿಂತನೆಗಳು ಮತ್ತೆ ಎರಡನೆಯ ಚರಣದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಕೊನೆಯಲ್ಲಿನ  ’ನಗುವ ಚಿಮ್ಮಿಸಿ ನಗುತ್ತಾ ಬಂದ’ ಎಂಬ ಸಾಲು ಕ್ರಿಸ್ತನ ಭರವಸೆಯ ಪ್ರತೀಕ.

ಎಂದಿನಂತೆ ಸಾಧುರವರ ಸಂಗೀತ ತಲೆದೂಗುವಂತೆ ಮಾತ್ರವಲ್ಲದೆ ಕುಣಿಸುವಂತೆಯೂ ಮಾಡುತ್ತದೆ. ಅನೇಕ ಕಾರ್ಯಕ್ರಮಗಳಲ್ಲಿ ಈ ಗೀತೆ ಪ್ರಾರಂಭದ  ಗೀತೆಯಾಗಿ, ನೃತ್ಯವಾಗಿ ಬಳಕೆಯಾಗಿದೆ ಎಂಬುದು ಈ ಗೀತೆಯ ಲವಲವಿಕೆಗೆ ಸಾಕ್ಷಿಯಾಗಿದೆ.

ಐದಾರು ವರ್ಷಗಳ ಹಿಂದೆ ನಾವು ಮಾಡಿದ್ದ ಹೊಸ ಸಿ.ಡಿಯೊಂದನ್ನು ಪ್ಯಾಟ್ರಿಕ್ಸ್ ಚರ್ಚನ ಆವರಣದಲ್ಲಿರುವ ಪೌಲ್ಸ್ ಸೆಂಟರ್ ಗೆ ಕೊಡಲು ಹೋಗಿದ್ದೆ. ಅಲ್ಲಿನ ಮಳಿಗೆಯ ಸಿಬ್ಬಂದಿಯೊಬ್ಬರು  ನಮ್ಮ ಸಿ.ಡಿಗಳನ್ನು ತೆಗೆದುಕೊಂಡು ಹೊಸಬರಾದ ನಮಗೆ ಸಲಹೆ ಇತ್ತರು. " ನೀವು ಯಾವುದೇ ಹೊಸ ಸಿ.ಡಿ ಮಾಡುವಾಗ ಚಸರಾರವರು ಮಾಡುವಂತೆ ಒಂದೋ ಎರೆಡೋ ಕ್ಲಾಸಿಕಲ್ ಹಾಡುಗಳನ್ನು ಮಾಡಿ. ಆಗ ಸ್ಕೂಲು ಹಾಗೂ ಇತರ ಸಂಸ್ಥೆಗಳಿಗೆ ತಮ್ಮ ಕಾರ್ಯಕ್ರಮಗಳಿಗೆ ಆ ಕ್ಲಾಸಿಕಲ್ ಹಾಡುಗಳು ಬೇಕಾಗುತ್ತದೆ. ಸಿ.ಡಿ. ತೆಗೆದುಕೊಳ್ಳುತ್ತಾರೆ ಹಾಗೆಯೇ ಇತರ ಹಾಡುಗಳನ್ನೂ ಕೇಳುತ್ತಾರೆ. ಇಂದಿಗೂ ಕನ್ನಡದಲ್ಲಿ ಬೇಡಿಕೆ ಇರುವುದು  ಫಾ.ಚಸರಾ ಹಾಗೂ ಫಾ ಫೆಲಿಕ್ಸ್ ಗೀತೆಗಳಿಗೇ ಎನ್ನುತ್ತಾ, ’ ಬೆಳಕು ಹರಿಯಿತು’ ಹಾಡಿನ ಉದಾಹರಣೆಯನ್ನು ಕೊಟ್ಟರು. ಅಂದಿಗೇ ಸುಮಾರು ೨೦ ವರ್ಷಗಳಷ್ಟು ಹಳೆಯದಾದ ಈ ಹಾಡು ಉದಾಹರಣೆಗೆ ಬಳಕೆಯಾಗಿದ್ದು ಕೇಳಿ ಆಶ್ಚರ್ಯವಾಯಿತು.

ಹಾಡು ರಚನೆಯ ಸಂದರ್ಭದಲ್ಲಿ ಹಾಡು ಪ್ರಸಿದ್ಧವಾಗಲಿ, ನೃತ್ಯಕ್ಕೆ ಬಳಕೆಯಾಗಲಿ, ಮಾರಾಟವಾಗಲಿ ಎಂಬ ಉದ್ದೇಶಕ್ಕಿಂತ ಮನದಾಳದ ಭಾವದ ಅಭಿವ್ಯಕ್ತಿಯಾಗಿ ಸಾಹಿತ್ಯ ಸಂಗೀತಗಳು ಕೂಡಿಕೊಂಡು ಒಂದು ಮಾಧ್ಯಮವಾಗುತ್ತದೆಯಷ್ಟೇ. ಅದರ ಜನಪ್ರಿಯತೆ, ತಲುಪುವಿಕೆ ಎಲ್ಲವೂ ಅದರ ಮುಂದಿನ ಭಾಗವಷ್ಟೆ. ’ಬೆಳಕು ಹರಿಯಿತು’ ಮನದ ಭಾವಕ್ಕೆ ಒದಗಿದ ಉತ್ಕೃಷ್ಟ ಸಾಹಿತ್ಯ ಸಂಗೀತದ ಪ್ರತಿರೂಪವಾಗಿದೆ.

- ಪ್ರಶಾಂತ್ ಇಗ್ನೇಶಿಯಸ್