Saturday 14 May 2022

'ಈಸಬೇಕು, ಈಸಿ ಜಯಸಬೇಕು' - ಪ್ರಶಾಂತ್ ಇಗ್ನೇಷಿಯಸ್



ಒಂದೋ ಎರಡನೆಯ ಕ್ಲಾಸ್ ಇರಬೇಕು. ನಮ್ಮಲ್ಲಿದ್ದ ಬುಕ್ ಗಳಲ್ಲಿ ಪಾಠಗಳ ಜೊತೆ ಅದರ ಚಿತ್ರಗಳೂ ಇರುತ್ತಿತ್ತು. ಹಾಗೆಯೇ ಒಂದು ಇಂಗ್ಲೀಷ್ ಬುಕ್ಕಿನಲ್ಲಿ ಒಂದು ಚಿತ್ರಆ ಕಡೆ ಒಂದು ನೇಣು ಹಗ್ಗ, ಇತ್ತ ಒಬ್ಬ ಪೊಲೀಸ್, ಇನ್ನೊಂದು ಕಡೆ ಒಬ್ಬ ಒಂದು ಹೆಂಗಸಿನ ಕಿವಿ ಕಚ್ಚುತ್ತಿದ್ದ ಚಿತ್ರ ಭಾರಿ ಸೆಳೆಯುತಿತ್ತು. ಕಿವಿಯಿಂದ ರಕ್ತ ಸೋರುತ್ತಿದ್ದ ಆ ಚಿತ್ರ ಭಯಂಕರವಾಗಿದ್ದರೂ ಮನಸ್ಸಿನಲ್ಲಿ ಹಾಗೆಯೇ ಅಚ್ಚೋತ್ತಿದೆ. ಆ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಸಣ್ಣ ವಯಸ್ಸಿನಲ್ಲೇ ಕಳ್ಳತನ ಕಲಿತು ಮುಂದೆ ದೊಡ್ಡ ದರೋಡೆಗಾರನಾದವನು ಮುಂದೆ ಕಾನೂನಿಗೆ ಸಿಕ್ಕಿ  ನೇಣುಗಂಬ ಸೇರುವ ಪ್ರಸಂಗ ಬರುತ್ತದೆ. ಕೊನೆಯ ಆಸೆಯಾಗಿ  ತನ್ನ ತಾಯಿಯನ್ನು ಕರೆಸಿಕೊಳ್ಳುವ ಅವನು, ಕಿವಿಯಲ್ಲಿ ಏನೋ ಹೇಳಬೇಕೆಂಬ ನೆಪದಲ್ಲಿ ತಾಯಿಯ ಕಿವಿಯನ್ನು ಬಲವಾಗಿ ಕಚ್ಚಿ ರಕ್ತ ಬರಿಸುತ್ತಾನೆ. ಕಾರಣ ತಾನು ಹುಡುಗನಿರುವಾಗಲೇ ತನ್ನನು ಸರಿಪಡಿಸಿ, ಸರಿಯಾಗಿ ಬೆಳಸಿ, ಕೆಟ್ಟ ಅಭ್ಯಾಸಕ್ಕೆ ಶಿಕ್ಷಿಸಿದ್ದರೆ, ತಾನು ನೇಣುಗಂಬ ಏರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು


ಬೇಸಿಗೆಯಲ್ಲಿ ಇದೆಲ್ಲಾ ನೆನಪಾಗಲು ಕಾರಣಗಳ ಸರಮಾಲೆ ದೊಡ್ಡದು
. ಕಳೆದ 122 ವರ್ಷಗಳಲ್ಲಿ ಅತ್ಯಂತ ಸುಡುವ ಏಪ್ರಿಲ್ ಈ ವರ್ಷದ್ದು ಎನ್ನುತ್ತಿದೆ ವರದಿಗಳು. ಆಶ್ಚರ್ಯವಿಲ್ಲ ದಾಖಲೆಗಳು ಮುರಿಯುವ ಕಾಲ ಬಂದಿದೆ ಹಾಗೂ ಹವಾಮಾನ  ವೈಪರೀತ್ಯಗಳು ಹೀಗೆ ಮುಂದುವರಿಯಲಿದೆ. ಆದರೆ ಕರೆಂಟು, ಫ್ಯಾನುಗಳು ಇಲ್ಲದ ಕಾಲದಲ್ಲಿ ಬಿಸಿಲನ್ನು ಅಂದಿನ  ಜನರು ಹೇಗೆ ನಿಭಾಯಿಸಿದರು ಎಂಬುದೇ ಕುತೂಹಲದ ಸಂಗತಿ. ಕೆರೆ ಮರ ಗಾಳಿಗಳಿದ್ದವು. ಈಗೆಲ್ಲವೂ ದುರ್ಭರ, ದುಬಾರಿ.     

ಬೆಂಗಳೂರಲ್ಲೂ ಬಿಸಿಲು ಸುಡುತ್ತಿದೆ. ಕಳೆದೆರೆಡು ಬೇಸಿಗೆಗಳು ಕೊರೋನಾಗೆ ಬಲಿಯಾದ ಪರಿಣಾಮ ಈ ವರ್ಷದ ಬೇಸಿಗೆ ರಜಕ್ಕೆ ಜನ ಸಿಡಿದೆದ್ದಿದ್ದಾರೆ. ಈಜುಕೊಳದಲ್ಲೆಲ್ಲಾ ನೀರಿಗಿಂತ ಮಕ್ಕಳದೇ ಕಲರವ. ಮಕ್ಕಳು ನೀರಿಗೆ ಬೀಳುವ ಸದ್ದಿಗಿಂತ ಪೋಷಕರು ಮಕ್ಕಳನ್ನು ಈಜಿನ ಕೋಚಿಂಗ್ ಸೇರಿಸುವ ಗದ್ದಲವೋ ಗದ್ದಲ. ಮನೆಯಲ್ಲಿ ಒಂದು ಸಣ್ಣ ಗ್ಲಾಸ್ ನೀರು ಕೂಡ ಫಿಲ್ಟರ್ ಆಗಬೇಕಿದ್ದರೂ ಇಲ್ಲಿ ಮಾತ್ರ ನೂರಾರು ಜನ ಆಡಿದ ಕೊಳದಲ್ಲೇ  ಯಾವುದೇ ಎಗ್ಗಿಲ್ಲದೆ ಮಕ್ಕಳನ್ನು ಖುಷಿಯಿಂದ ಇಳಿಸುತ್ತಾ ಇರುವುದು ನಿಜಕ್ಕೂ ಸಂತೋಷದ(?) ವಿಷಯ. ಈ ಅದೃಷ್ಟವಿರದ ಗ್ರಾಮಾಂತರ ಮಕ್ಕಳು ಹತ್ತಿರದ ಕೊಳಗಳಲ್ಲಿ ಈಜಲು ಹೋಗಿ ಮುಳುಗಿ ಹೋಗುವುದನ್ನು ಆಗ್ಗಾಗ್ಗೆ ಪತ್ರಿಕೆಗಳಲ್ಲಿ ಕೇಳುತ್ತಿರುತ್ತೇವೆ. ನೆಲ ಮಾತ್ರವಲ್ಲ ನೀರಲ್ಲೂ ಅಸಮಾನತೆ.

ಒಂದಷ್ಟು ಮಕ್ಕಳು ಖುಷಿಯಾಗಿ ನೀರಿಗೆ ಇಳಿದರೆ,  ನೀರಿಗೆ ಚಳಿಗೆ ಹೆದರುವ ಇನ್ನೊಂದಿಷ್ಟು ಮಕ್ಕಳನ್ನು ಪೋಷಕರೇ ಕೋಚ್ ಗಳ ಮೂಲಕ  ಕೊಳಕ್ಕೆ ತಳ್ಳುತ್ತಿದ್ದಾರೆ. 'ಈಸಬೇಕು, ಈಸಿ ಜಯಸಬೇಕು' ಎನ್ನುವುದು ನಿಜಕ್ಕೂ ಇಲ್ಲಿ ಅರ್ಥಪೂರ್ಣ, ಏಕೆಂದರೆ ಇಲ್ಲಿ ಈಜುವುದು ಸವಾಲೇ ಸರಿ, ಅರ್ಧದ ಅಡಿಗೂ ಮತ್ತೊಬ್ಬರು ಸಿಕ್ಕಿ ಕೈಕಾಲು ಆಡಿಸಲೂ ಜಾಗ ಇಲ್ಲದಂಥ ಪರಿಸ್ಥಿತಿಯಲ್ಲಿ 'ಈಸಿ ಜಯಸುವುದು' ಅಷ್ಟು ಈಸಿಯಲ್ಲ.

ಇದೆಲ್ಲವೂ ಒಳ್ಳೆಯದೇ ಅಲ್ಲವೇ? ತಮ್ಮ ಮಕ್ಕಳು ಎಲ್ಲಾ ರೀತಿಯಲ್ಲೂ ಜಯಸಬೇಕು, ಸನ್ನದ್ಧರಾಗಬೇಕು ಎನ್ನುವ ತಂದೆ ತಾಯಿಗಳ ಬಯಕೆ ಸಹಜವಾದುದ್ದೇ. ಅತ್ತ ಕ್ರಿಕೆಟ್ ಕೋಚಿಂಗ್ ಸೆಂಟರ್ ಗಳದ್ದು ಮತ್ತೊಂದು ಸಂಭ್ರಮ. ಅಲ್ಲೆಲ್ಲಾ ಮುಂದೆ ಐಪಿಲ್ ಆಡುವ ಕನಸು ಹೊತ್ತವರ, ಹೆತ್ತವರ ಸಾಲು. ಕ್ರಿಕೆಟ್ ಭಾರತದಲ್ಲಿ ಎಂದಿಗೂ ಜನಪ್ರಿಯ ಕ್ರೀಡೆಯೇ ಬಿಡಿ. 'ಉಳ್ಳವರು ಕೋಚಿಂಗ್ ಗೆ ಹೋಗುವರಯ್ಯ ನಾನೇನ ಮಾಡುವೆ ಬಡವನಯ್ಯಾ, ರೋಡೇ ಗ್ರೌಂಡು, ಗೋಡೆಯೇ ವಿಕೇಟಯ್ಯ' ಎಂಬ ಪರಿಸ್ಥಿತಿ ಈಗಿಲ್ಲ. ನಗರಗಳಲ್ಲಿ ಆದಷ್ಟು ಮಕ್ಕಳು ಕೋಚಿಂಗ್ ಸೇರಿರುತ್ತಾರೆ. ಏಕೆಂದರೆ ಅಲ್ಲಿ ಕ್ರಿಕೆಟ್ ಮಾತ್ರ ಕಲಿಸುವುದಿಲ್ಲ , ಅದು ಮುಂದಿನ ಹೆಜ್ಜೆಗೆ ಕೋಚಿಂಗ್ ರಹದಾರಿ.

ಅದೇ ರೀತಿ ಸ್ಕೇಟಿಂಗ್, ಸಂಗೀತ, ಕರಾಟೆ, ಡ್ಯಾನ್ಸ್ ಇವೆಲ್ಲದರ ಬೇಸಿಗೆ ಶಿಬಿರ, ಕ್ಲಾಸು, ಕ್ಯಾಂಪುಗಳಿಗೆ'ಎಲ್ಲಿಲ್ಲದ ಬೇಡಿಕೆ. ತಮಗೆ ಸಿಗದ ಸೌಲಭ್ಯ, ಅವಕಾಶಗಳು ತಮ್ಮ ಮಕ್ಕಳಿಗಾದರೂ ಸಿಗಲಿ, ಅವಕಾಶ ವಂಚಿತರಾಗದಿರಲಿ ಎಂಬ ಆಸೆ ತಂದೆ ತಾಯಿಯರದು. ಇವೆಲ್ಲವೂ ಮಕ್ಕಳ ಜೀವನದಲ್ಲಿ ಖಂಡಿತ ಉಪಯೋಗಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮುದ್ರ, ನದಿಯಲ್ಲಿ ಈಜದಿದ್ದರೂ ಈಜು ಕಲಿಯುವುದರಿಂದ ನೀರಿನ ಭಯ ದೂರ, ದೇಹಕ್ಕೂ ವ್ಯಾಯಾಮ. ರಣಜಿ, ಐಪಿಲ್ ಆಡದಿದ್ದರೂ ಒಂದು ಕ್ರೀಡೆ ಬಯಸುವ ತಾಂತ್ರಿಕತೆ, ಕಲಾತ್ಮಕತೆ, ಶಿಸ್ತು, ಬದ್ಧತೆ, ಒಂದು ಸ್ಪರ್ಧೆಯ ಸಾಧಕ, ಬಾಧಕಗಳ ಪರಿಚಯವಂತೂ ಆಗುತ್ತದೆ. ಅದು ಜೀವನಕ್ಕೂ ಅನ್ವಯವಾಗುತ್ತದೆ. ಬ್ರೂಸ್ ಲೀಯಂತೆ ದುರಳರನ್ನು ಸದೆ ಬಡಿಯದಿದ್ದರೂ ನಮ್ಮದೇ ದೇಹದ ನಿಷ್ಕ್ರಿಯತೆ, ಸೋಮಾರಿತನದ ವಿರುದ್ಧದ ಹೋರಾಟವನ್ನು ಕರಾಟೆ ಕಲಿಸುತ್ತದೆ. ದೇಹದ ಮೇಲಿನ ಸಮತೋಲನವನ್ನು ಸ್ಕೇಟಿಂಗ್ ಕಲಿಸಿದರೆ, ಸಂಗೀತ ಮನಸ್ಸಿನ ಆಲಾಪನೆಗಳಿಗೆ ಸಾಧನವಾಗುತ್ತದೆ. ನೃತ್ಯ ದೇಹ ಮನಸ್ಸನ್ನು ನಿರಾಳಗೊಳಿಸಿದರೆ, ಇವೆಲ್ಲವೂ ನಮ್ಮದೇ ದೇಹದ ಅಗಾಧ ಸಾಧ್ಯತೆಯ ಪರಿಚಯವನ್ನು ನಮಗೆ ಮಾಡಿಸುತ್ತವೆ.

ಇವೆಲ್ಲವನ್ನೂ ಗಂಭೀರವಾಗಿ ತೆಗದುಕೊಂಡು ಅಭ್ಯಾಸಿಸಿದರೆ, ವೃತ್ತಿಯೇ ಆಗಿ, ಸಂಪಾದನೆಯ, ಶ್ರೀಮಂತಿಕೆಯ ಮೂಲವೂ ಆಗುತ್ತದೆ. ತಮ್ಮ ಮಕ್ಕಳು ಈಗಾಗಲಿ ಎಂಬ ತಂದೆ ತಾಯಿಗಳ ಕನಸಲ್ಲಿ ತಪ್ಪು ಹುಡುಕಲು ಸಾಧ್ಯವೇ?

ಆದರೆ ಎಲ್ಲಿ ಹುಡುಕಿದರೂ ಇಂದಿನ ಮಕ್ಕಳು ನಾಳೆಯ ಒಳ್ಳೆಯ ಪ್ರಜೆಗಳಾಗಲು, ಉತ್ತಮ ನಾಗರೀಕರಾಗಲು, ಅವರಲ್ಲಿ ಉತ್ತಮ ರಾಜಕೀಯ ಪ್ರಜ್ಞೆ ಮೂಡಿಸಲು, ಸಾಮಾಜಿಕವಾಗಿ ಜವಾಬ್ದಾರರನ್ನಾಗಿಸಲು ಯಾವುದೇ ಕ್ಲಾಸು, ಕ್ಯಾಂಪು ಸುಲಭವಾಗಿ ಕಾಣುತ್ತಿಲ್ಲ. ಕಂಡರೂ ಪೋಷಕರು  ಅಲ್ಲಿಗೆ ಮಕ್ಕಳನ್ನು ತುದಿಗಾಲಲ್ಲಿ ನಿಂತು ಸೇರಿಸಲು ಹಾತೊರೆಯುತ್ತಿರುವುದು ಕಾಣುತ್ತಿಲ್ಲ. ತುಂಬು ಕುಟುಂಬಗಳು ಮರೆಯಾಗಿ, ನೆರೆಯವರ ಜೊತೆಗಿನ ಒಡನಾಟಗಳು ಕರಗಿ, ತಂದೆ ತಾಯಿ ಸೇರಿದಂತೆ ಯಾರಿಗೂ ಸಮಯವೇ ಇಲ್ಲದಂತ ಸಮಯದಲ್ಲಿ ನಾವು ಮಕ್ಕಳನ್ನು ಟಿವಿ, ಇಂಟರ್ ನೆಟ್, ಮೊಬೈಲುಗಳ ಸುರ್ಪದಿಗೆ ಒಪ್ಪಿಸಿದ್ದೇವೆ. ಸಮಯ ಮಾಡಿಕೊಂಡು ಕೋಚಿಂಗ್ ಗಳಿಗೆ ಕರೆದುಕೊಂಡು ಹೋಗಿ ಬರುವ ನಡುವೆ 'ಈ ಸಮಾಜಕ್ಕೆ ಅಗತ್ಯವಾಗಿ ಬೇಕಾದ ಮಕ್ಕಳನ್ನು, ಯುವ ಪೀಳಿಗೆಯನ್ನು ಬೆಳೆಸುತ್ತಿದ್ದೇವೆಯೇ? ಎಂಬ ಪ್ರಶ್ನೆ, ಯೋಚನೆ ಯಾಕಾದರೂ ಬರಬೇಕು ಹೇಳಿ?

ದಿನವೂ ಈಜಾಡಲು ಸಾಧ್ಯವಿಲ್ಲ, ಕೊನೆಗೆ ಕ್ರೀಡೆಗಳನ್ನು ವೃತ್ತಿಪರವಾಗಿ ತೆಗದುಕೊಳ್ಳುವವರು ನೂರಕ್ಕೆ ಐದೋ ಹತ್ತೋ ಜನ. ನೃತ್ಯ ಸಂಗೀತಗಳಿಗೆ ಅದರದೇ ಸಮಾರಂಭಗಳು,  ಸಮಯವಿದೆ. ಕರಾಟೆ, ಸ್ಕೇಟಿಂಗ್ ನಮ್ಮ ಹವ್ಯಾಸಗಳು. ಆದರೆ ಇವುಗಳ ಬಗ್ಗೆ ಇಷ್ಟೊಂದು ಯೋಚಿಸುವ ನಾವು ದಿನವೂ ಆಹಾರ, ಗಾಳಿ, ಬೆಳಕಿನಷ್ಟೇ ಮುಖ್ಯವಾಗಬಹುದಾದ ಮಕ್ಕಳ ಮಾನಸಿಕ ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯ, ಪ್ರಬುದ್ಧತೆ, ಪರಸ್ಪರ ಒಡನಾಟ, ಧಾರ್ಮಿಕ ಸಹಿಷ್ಣುತೆ, ಪರಿಸರ ಕಾಳಜಿ, ಸಾಮಾಜಿಕ ಶಿಸ್ತು ಹಾಗೂ ಸಂವಿಧಾನದ ಜ್ಞಾನದ ಬಗ್ಗೆ ತೋರುತ್ತಿರುವ ಅನಾದರ ಅಪಾಯಕ್ಕಾರಿ. ಇವೆಲ್ಲವನ್ನೂ ಮಕ್ಕಳಿಗೆ ಹೇಗೆ ಹೇಳಿಕೊಡುವುದು. ಅವರನ್ನು ಈ ವಿಷಯಗಳಲ್ಲಿ ಹೇಗೆ ತಯಾರು ಮಾಡುವುದು ಎಂಬ ಯೋಜನೆಗಳೇ ನಮಗಿಲ್ಲ.

ಒಂದು ಅಂದಾಜಿನ ಪ್ರಕಾರ 'ಆರ್ಟಿಫಿಷಲ್ ಇಂಟಲಿಜೆನ್ಸ್' ಎಂಬ ತಾಂತ್ರಿಕ ಪ್ರಗತಿಯಿಂದಾಗಿ, ಇಂದು ನಮ್ಮಲ್ಲಿ ಚಾಲ್ತಿಯಲ್ಲಿರುವ  ನೂರಕ್ಕೆ ಅರವತ್ತು ಉದ್ಯೋಗಗಳು ಇನ್ನು ಕೆಲವೇ ವರ್ಷಗಳಲ್ಲಿ ಇರುವುದಿಲ್ಲ. ಪ್ರತಿ ವರ್ಷವೂ ಕಾಲೇಜುಗಳಿಂದ ಹೊರಬರುವ ಲಕ್ಷಾಂತರ ಪದವೀಧರರಲ್ಲಿ ನೂರರಲ್ಲಿ ಅತ್ತ್ಯುತ್ತಮರಾದ ಮೊದಲ ಇಪ್ಪತ್ತೋ ಮೂವತ್ತೋ ಜನಕ್ಕೆ ಮಾತ್ರ ತಮ್ಮ ಇಷ್ಟದ ಕೆಲಸಗಳು ಸಿಗಬಹುದು. ಮಿಕ್ಕವರು ಮಿಕ್ಕ ಕೆಲಸಗಳು ಮಾಡಬೇಕಾಗುತ್ತದೆ. ತಮ್ಮ ಓದಿಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ಅತೃಪ್ತ ಉದ್ಯೋಗಿಗಳ ಸಂಖ್ಯೆ ದೊಡ್ಡದಾಗುವ ಸಂಭವಗಳೇ ಹೆಚ್ಚು. ಇದು ಮುಂದಿನ ಪೀಳಿಗೆಯ ಮಾನಸಿಕ ಸ್ವಾಸ್ಥ್ಯದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು. ಸಾಮಾಜಿಕ ಶಿಸ್ತು, ಬದ್ಧತೆಗಳಿಲ್ಲದೆ ಈಗಾಗಲೇ ಟ್ರಾಫಿಕ್ ಜಾಮ್ ಸೇರಿದಂತೆ ಸಾರ್ವಜನಿಕವಾಗಿ ನಾವು ಅನುಭವಿಸುತ್ತಿರುವ ಅನೇಕ ಕಷ್ಟಗಳು ನಮ್ಮ ಮುಂದೆಯೇ ಇದೆ. ಇನ್ನೂ ಪರಸ್ಪರ ಗೌರವ, ಸಹಿಷ್ಣುತೆಯ ಮಹತ್ವ ತಿಳಿಯದೇ ಹೋದರೇ ಇಂದು ನಾವು ಕಾಣುತ್ತಿರುವ ಧಾರ್ಮಿಕ, ಸಾಮಾಜಿಕ ಸಂಘರ್ಷಗಳು, ಬಿರುಕುಗಳು ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.

ಭ್ರಷ್ಟಾಚಾರದ ಬಗ್ಗೆ ನಾವು ಮಾತಾಡುತ್ತೇವಷ್ಟೇ, ಆದರೆ ಆದೇ ಭ್ರಷ್ಟರೇ ನಮ್ಮ ನಾಯಕರು, ನಮ್ಮ ಆದರ್ಶಗಳಾಗಿರುವುದನ್ನು ನಾವೇ ಒಪ್ಪಿಕೊಂಡಿದ್ದೇವೆ. ನಗರಗಳಲ್ಲಿ ಬಿಡಿ ಒಂದು ಸಾಮಾನ್ಯ ಹಳ್ಳಿಯಲ್ಲೂ ಈಗ ನಾಯಕರಿಲ್ಲ ಮುತ್ಸದ್ಧಿಗಳಿಲ್ಲ. ಇರುವವರೆಲ್ಲಾ ರಾಜಕೀಯ ಧುರೀಣರು, ಹಣ ಅಧಿಕಾರದ ಪ್ರಭಾವಿಗಳು ಹಾಗೂ ತಮ್ಮ ಅಧಿಕಾರದಿಂದ ಮಾತ್ರವೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಲ್ಲವರು. ತಮ್ಮವರಿಗೆ ಮತ ಹಾಕದವರನ್ನು ಗೋಳಾಡಿಸಿ,  ಆಡಿಸಬಲ್ಲವರು ಹಾಗೂ ಅದರಲ್ಲೇ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬಲ್ಲವರು

ಇದೆಲ್ಲವೂ ಒಂದು ಪಿಡುಗು, ಆದರ್ಶವಲ್ಲ ಬದಲಾವಣೆ ಅಗತ್ಯ ಎಂದು ಮಕ್ಕಳಿಗೆ, ಯುವಕರಿಗೆ ಮನದಟ್ಟು ಮಾಡುವ ಪರಿ ಯಾವುದು? ಸಂವಿಧಾನ ಪ್ರಜ್ಞೆ, ನಮ್ಮ ಭಾರತೀಯತೆಯ ಸೊಬಗು, ಸೊಡಗುಗಳ ಬಗ್ಗೆ ಪರಿಚಯವೇ ಇಲ್ಲದೆ ಹೋದರೆ ಅದರ ಸೌಲಭ್ಯ, ರಕ್ಷಣೆಗಳು ದೂರದ ಮಾತೇ.

ಪರಸ್ಪರ ಒಡನಾಟವಿಲ್ಲದ,  ಓದಿನ ಹಂಬಲವಿಲ್ಲದ, ಪರಿಸರ ಕಾಳಜಿಯಿಲ್ಲದ ಸಮಾಜವು ಮುಂದೆ ಅನುಭವಿಸುವ ಕಷ್ಟ ನಷ್ಟಗಳಿಗೆ ನಾವು ಜವಾಬ್ದಾರಲ್ಲವೇ? ಬಿಸಿಲು ಸುಮ್ಮನೆ ಹೆಚ್ಚುತ್ತಿದೆಯೇ? ಮಳೆ ಸಮಯದಲ್ಲಿ ನೀರು ಸುಮ್ಮನೆ ಮನೆಗೆ ನುಗ್ಗುತ್ತಿವೆಯೇ? ನದಿಗಳು ತಮ್ಮಷ್ಟಕ್ಕೆ ತಾವೇ ಕಲುಷಿತಗೊಳ್ಳುತ್ತಿವೆಯೇ?

ಮುಂದಿನ ಜನಾಂಗ ಆ ಕಳ್ಳನಂತೆ ನೇಣಿಗೆ ಹೋಗಲಾರದೇನೋ? ಆದರೆ ನಮ್ಮ ಹಿಂದಿನ ಹಿರಿಯರು ನಮ್ಮನ್ನೇಕೆ ಇನ್ನಷ್ಟು ಪರಿಪಕ್ವವಾಗಿಸಲಿಲ್ಲ, ಪ್ರಭುದ್ಧರಾಗಿಸಲಿಲ್ಲ  ಎಂದು ನಮ್ಮ ಕಿವಿ ಕಚ್ಚಲು ಅವರು ಬರಬಹುದೇನೋ?

ಹೀಗೆ ಮುಂದುವರಿದರೆ ಬೇಸಿಗೆ ಮಾತ್ರವಲ್ಲ ಮುಂದೆ ಎಲ್ಲದರ ಬಿಸಿ ನಮಗೆ ಮುಟ್ಟುತ್ತದೆ. 

ಪ್ರಶಾಂತ್ ಇಗ್ನೇಷಿಯಸ್ 

Tuesday 15 March 2022

ಪುನೀತ್ ಇಲ್ಲದ ಈ ನಾಲ್ಕು ತಿಂಗಳು.... - ಪ್ರಶಾಂತ್ ಇಗ್ನೇಷಿಯಸ್







ದೊಡ್ಡಮಟ್ಟದಲ್ಲಿ ವೈರಲ್ ಆದ ವಿಡಿಯೋ ಅದು
. ಬಸ್ಸೊಂದರ ಮೇಲೊಂದು ಪೋಸ್ಟರ್. ಪೋಸ್ಟರ್ ಮೇಲೆ ಒಂದಷ್ಟು ಧೂಳು. ತನ್ನ ಮನೆಯ ಗೋಡೆಯ ಮೇಲಿನ ಧೂಳೇನೋ ಎಂಬಂತಹ ಕಾಳಜಿಯಿಂದ ಆ ಪೋಸ್ಟರ್ ಅನ್ನು ಒರೆಸುತ್ತಿದ್ದ ಹಣ್ಣು ಹಣ್ಣು ಅಜ್ಜಿ. ಸಾಮಾನ್ಯವಾಗಿ ಅವಸರದಲ್ಲೇ ಇರುವ ಬಸ್ಸಿನ ಡ್ರೈವರ್ ಆ ಅಜ್ಜಿ ಒರೆಸುವುದನ್ನು ನೋಡುತ್ತಾ ನಿಂತಿದ್ದ ವಿಡಿಯೋ ಅದು.  ಆ ಪೊಸ್ಟರ್ ಪುನೀತ್ ರಾಜಕುಮಾರ್ ದು. ಪುನೀತ್ ಅಗಲಿ ಒಂದಷ್ಟು ದಿನಗಳಾಗಿತ್ತಷ್ಟೇ. ಪುನೀತ್ ಸಾವು ಇಡೀ ನಾಡಿಗೆ ತಂದ ಭಾವಸ್ಪಂದನದ ಸಣ್ಣ ಉದಾಹರಣೆಯಷ್ಟೇ ಅದು.  ಪುನೀತ್ ಅಗಲಿ ನಾಲ್ಕೈದು ತಿಂಗಳು ಕಳೆದು ಅವರ ಹುಟ್ಟು ಹಬ್ಬ ಈ ಸಮಯದಲ್ಲಿ ಇಡೀ ಕರ್ನಾಟಕವೇ ಒಂದೇ ಉಸಿರಿನಲ್ಲಿ ಅಂದು ಕೇಳಿದ, ಇಂದಿಗೂ ಕೇಳುತ್ತಿರುವ ಪ್ರಶ್ನೆ ಒಂದೇ “ಈ ಸಾವು ನ್ಯಾಯವೇ?”.

ಸಾಮಾನ್ಯವಾಗಿ ಸಣ್ಣವಯಸ್ಸಿನಲ್ಲಿ ಸತ್ತ ವ್ಯಕ್ತಿಗಳ ಬಗ್ಗೆ ಈ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತದೆ. ವ್ಯಕ್ತಿ ಜನಪ್ರಿಯನಾಗಿದ್ದರೆ ಸುತ್ತಮುತ್ತಲಿನ ಜನಸಮುದಾಯ ನೊಂದುಕೊಳ್ಳುತ್ತದೆ, ವಿಷಾದಿಸುತ್ತದೆ. ಆದರೆ ಇಡೀ ನಾಡೇ ಒಂದು ದೊಡ್ಡ ವಿಷಾದಕ್ಕೆ ತನ್ನನ್ನೇ ದೂಡಿಕೊಂಡು ದಿಗ್ಭ್ರಮೆಯಿಂದ ಹೊರಬಾರದಂತೆ ಪ್ರತಿಕ್ರಿಯಿಸುತ್ತಾ, ಒಂದು ಸಾವನ್ನು ಒಪ್ಪದ ಮನಸ್ಸಿನಿಂದ ಚಡಪಡಿಸುತ್ತಾ ತನ್ನ ಭಾವ ಪ್ರಪಂಚಕ್ಕೆ ಸೇರಿಸಿಕೊಳ್ಳುವುದು ಅಪರೂಪದ ಸಂಗತಿ.

ಜನಪ್ರಿಯ ವ್ಯಕ್ತಿಗಳು ಸಾಧಕರು, ಅದರಲ್ಲೂ ಜನಸೇವೆಯಲ್ಲಿ ಹೆಸರು ಮಾಡಿದವರು ಸತ್ತಾಗ ನಾಡು ಕಂಬನಿ ಮಿಡಿಯುವುದನ್ನು ನಾವು ಕಾಣುತ್ತೇವೆ. ಆ ರೀತಿಯ ಬಹುತೇಕರು ತುಂಬು ಜೀವನ ನಡೆಸಿ ತಮ್ಮ ಇಳಿವಯಸ್ಸಿನಲ್ಲಿ ಅಗಲಿದಾಗ ನೋವಾದರೂ ಭಾವಾಂತರಂಗದಲ್ಲಿ ಸಾವಿನ ಬಗ್ಗೆ ಒಂದು ಮಾನಸಿಕ ಸಿದ್ಧತೆ ಜೊತೆಗೆ ಸಾರ್ಥಕತೆ ಇರುತ್ತದೆ. ಆದರೆ ಪುನೀತ್ ಸಾವನ್ನು ಕರ್ನಾಟಕದ ಜನತೆ ಸುಲಭದಲ್ಲಿ ಅರಗಿಸಿಕೊಳ್ಳಲಿಲ್ಲ ಎಂಬ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ.

ಸುಮಾರು 20 ಲಕ್ಷದಷ್ಟು ಜನ ಅಂದು ಅಂತಿಮ ನಮನ ಸಲ್ಲಿಸಲು ಬಂದರೆ, ಇಂದಿಗೂ ಭಾನುವಾರ ರಜಾ ದಿನಗಳಲ್ಲಿ 20- 30 ಸಾವಿರ ಜನ ಸಮಾಧಿಗೆ ಬರುತ್ತಿರುವುದು ಒಂದು ಸಾಂಸ್ಕೃತಿಕ ಅಚ್ಚರಿಯೇ ಸರಿ. ಪುನೀತ್ ಒಬ್ಬ ಸಿನೆಮಾ ನಟ. ಅದರಲ್ಲೂ ಬೆಳ್ಳಿ ಪರದೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡು ರಂಜಿಸಬಲ್ಲವನಾಗಿದ್ದ ಒಬ್ಬ ಸುಸಂಸ್ಕೃತ ಸಜ್ಜನ ಜನಪ್ರಿಯ ನಟ. ಆದರೆ ಕರ್ನಾಟಕದ ಜನತೆ ಮಾತ್ರವಲ್ಲದೆ ಇಡೀ ದೇಶವೇ ಪುನೀತ್ ಸಾವಿಗೆ ಸ್ಪಂದಿಸಿದ ರೀತಿ ನಟನಾರಂಗದ ಗಡಿಯನ್ನು ಮೀರಿದ್ದು.

ಈ ತೀವ್ರತರವಾದ ಭಾವ ಸ್ಪಂದನಕ್ಕೆ ಕಾರಣವಾದರೂ ಏನು? ಕೇವಲ 46ನೇ ವರ್ಷದಲ್ಲಿ ಅಗಲಿದರೂ ಎಂಬುದೇ? ಇನ್ನುಮುಂದೆ ರಂಜಿಸಲು ಇಲ್ಲವಲ್ಲ ಎಂಬ ಖಾಲಿ ಭಾವವೇ? ಡಾ.ರಾಜ್ ಪುತ್ರನೆಂಬ ಅಭಿಮಾನವೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಇವೆಲ್ಲವೂ ಹೌದು, ಆದರೆ ಇದೆಲ್ಲದಕ್ಕೂ ಮೀರಿದ ಭಾವನಾತ್ಮಕ ಕೊಂಡಿ ಪುನೀತ್ ಹಾಗೂ ಕನ್ನಡ ಜನತೆಯ ನಡುವೆ ಇತ್ತು ಹಾಗೂ ಪುನೀತ್ ಕೆಲವಾರು ವರ್ಷಗಳಲ್ಲಿ ಆ ಕೊಂಡಿಯನ್ನು ಗಟ್ಟಿಗೊಳಿಸುತ್ತಾ ಹೋಗಿದ್ದು ಮಾತ್ರವಲ್ಲದೆ ಅದನ್ನು ವಿಸ್ತರಿಸುತ್ತಾ ಸಾಗಿದ್ದರು. ಅದು ಕರ್ನಾಟಕದ ಉದ್ದಗಲಕ್ಕೂ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿ ಹರಡುವಂತೆ ತಮ್ಮ ವ್ಯಕ್ತಿತ್ವದಿಂದಲೇ ನೋಡಿಕೊಂಡರು. ಅಕ್ಕಪಕ್ಕದ ರಾಜ್ಯಗಳ ಕಥೆ ನಂತರಕ್ಕಿರಲಿ, ಕರ್ನಾಟಕದಲ್ಲಿ ಇದು ಈ ಪರಿ ಬೆಳೆದದ್ದಾದರೂ  ಹೇಗೆ?

ಚಿತ್ರರಂಗದ ಬಾಲನಟರಲ್ಲಿ ಪುನೀತ್ ಹೆಸರು ಮೊದಲ ಸಾಲಿನಲ್ಲಿ ಕಾಣುತ್ತದೆ. ಒಂದಷ್ಟು ಬಾಲನಟರು ಬಂದು, ಹೋಗಿ ಉತ್ತಮವಾಗಿ ನಟಿಸಿದ್ದರೂ ಗಮನಸೆಳೆದಿದ್ದರೂ ಇಲ್ಲಿ ಉಳಿದದ್ದು ಕೆಲವೇ ಮಂದಿ. ಡಾ ರಾಜ್ ಚಿತ್ರಗಳಲ್ಲಿ ಬಾಲನಟನಾಗಿ ಬಂದು ಪುನೀತ್ ಗಮನ ಸೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಬಾಲನಟನಾಗಿ ಕಾಣಿಸಿಕೊಂಡ ಪಾತ್ರಗಳು ಚಿತ್ರದಲ್ಲಿ ತುರುಕಿದಂತೆ ಕಾಣಲಿಲ್ಲ. ಇಲ್ಲಿ ಪಾರ್ವತಮ್ಮ ಹಾಗೂ ಅಂದಿನ ನಿರ್ದೇಶಕರ ಜಾಣ್ಮೆ ಮೆಚ್ಚತಕ್ಕದ್ದೇ. ಗಂಡ-ಹೆಂಡಿರ ಮುನಿಸಿನ ನಡುವಿನ ಮುದ್ದು ಮಗನ ’ವಸಂತ ಗೀತ’ ಪಾತ್ರ, ಕೊಲೆಯೊಂದರ ಪ್ರಮುಖ ಸಾಕ್ಷಿಯಾಗಿ ನಿಲ್ಲುವ ’ಚಲಿಸುವ ಮೋಡಗಳು’, ನತದೃಷ್ಟ ಎಂದು ಕರೆಸಿಕೊಂಡು ಕೊನೆಯಲ್ಲಿ ಸಾವಿರಾರು ಜನರ ಪ್ರಾಣವುಳಿಸುವ ’ಭಾಗ್ಯವಂತ’, ರಾಕ್ಷಸ ತಂದೆಗೆ ಸರಿಸಮನಾಗಿ ನಿಲ್ಲುವ ’ಭಕ್ತ ಪ್ರಹ್ಲಾದ’,  ಪತ್ತೆದಾರಿ ಪೊಲೀಸರಿಗೆ ಸಹಾಯ ಮಾಡುವ ’ಯಾರಿವನು’, ದ್ವಿಪಾತ್ರದ ’ಎರಡು ನಕ್ಷತ್ರಗಳು’ ಹಾಗೂ  ಎಲ್ಲದಕ್ಕೂ ಕಳಶವಿಟ್ಟಂತೆ ಬಡ ಹುಡುಗನ ಪಾತ್ರದಲ್ಲಿ ರಾಷ್ಟ ಪ್ರಶಸ್ತಿ ಪಡೆದ ’ಬೆಟ್ಟದ ಹೂವು’, ಎಲ್ಲವೂ ಪುನೀತ ರನ್ನು ಕನ್ನಡ ಜನರ ಹೃದಯದಲ್ಲಿ ಗಟ್ಟಿಯಾಗಿ ನಿಲ್ಲಿಸಿದ ಚಿತ್ರಗಳು.

 ಈ ಚಿತ್ರಗಳಲ್ಲಿನ ಲವಲವಿಕೆಯ ಅಭಿನಯ ಮಾತ್ರವಲ್ಲದೆ ಸ್ವತ: ಗಾಯನ ಕೂಡ ಪುನೀತ್ ಗೆ ಜನಪ್ರಿಯತೆಯ ಜೊತೆಗೆ ಜನರಲ್ಲಿ ಮೆನೆ ಮಗನ ಸ್ಥಾನ ದೊರಕಿಸಿತು.  ಆ ಸಮಯದಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ಪುನೀತರಂತೆ ಹಾಡಿ ಅಭಿನಯಿಸಬೇಕೆಂಬ ಹಂಬಲ.

 ಬಾಲನಟನ ಅಧ್ಯಾಯ ಮುಗಿದು, ನಾಯಕ ನಟನಾಗುವ ಸಮಯದಲ್ಲಿ ಹೊಸ ನಾಯಕ ನಟರಿಗೆ ಕನ್ನಡ ಚಿತ್ರರಂಗ ಒಂದು ಪೂರಕವಲ್ಲದ ವಾತಾವರಣದಂತಿತ್ತು. ಡಾಕ್ಟರ್ ರಾಜ್ ಸೇರಿದಂತೆ ಹಿರಿಯ ನಟರ ಸಿನಿಮಾಗಳು ಕ್ರಮೇಣ ಕಡಿಮೆಯಾಗ ತೊಡಗಿ, ಗುಣಮಟ್ಟದಲ್ಲಿ ಪರಭಾಷಾ ಚಿತ್ರಗಳ ಮುಂದೆ ಸೊರಗಿ, ಸೃಜನಶೀಲ ನಿರ್ದೇಶಕರ ಕೊರತೆಯ ಸಮಯದಲ್ಲಿ ಪುನೀತರ ಮೊದಲ ಚಿತ್ರ ’ಅಪ್ಪು’ ಚಿತ್ರ ತೆರೆಗೆ ಸಿದ್ದವಾಗಿತ್ತು.   ಪುನೀತ್ ಎಂಬ ಕುತೂಹಲ ನಿರೀಕ್ಷೆ ಇದ್ದರೂ ಕುಟುಂಬ ಸಮೇತ ಚಿತ್ರ ನೋಡುವ ಪರಿಪಾಠ ಕನ್ನಡದ ಮಟ್ಟಿಗೆ ಗಣನೀಯವಾಗಿ ಕಡಿಮೆಯಾಗಿತ್ತು. ಯಾವುದೋ ವ್ಯಾಪಾರ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದು ಮಾತ್ರವಲ್ಲದೆ, ಸಣ್ಣ ವಿವಾದಕ್ಕೂ ಪುನೀತ್ ಗುರಿಯಾಗಿದ್ದರು.

ಆದರೆ ರಾಜ್ ಸಂಸ್ಥೆ ಜನರ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ ಕತೆಯ ಆಯ್ಕೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿದ್ದ ಸಂಸ್ಥೆ ಯುವ ಜನಾಂಗಕ್ಕೆ ಬೇಕಾದ ಪ್ರೇಮಕಥೆಯನ್ನು ಪುನೀತ್ ಮೊದಲ ಚಿತ್ರಕ್ಕೆ ಆಯ್ಕೆ ಮಾಡಿತ್ತು.  ಈ ದೊಡ್ಡಮಟ್ಟದ ನಿರೀಕ್ಷೆಯನ್ನು ಪುನೀತ್ ಮುಟ್ಟಬಲ್ಲರೇ ಎಂಬ ಸಣ್ಣ ಅನುಮಾನದಿಂದಲೇ ಥಿಯೇಟರಿಗೆ ಕಾಲಿಟ್ಟ ಜನಕ್ಕೆ ಆನಂದದ ಅಚ್ಚರಿ ಕಾದಿತ್ತು. ಯುವ ಜನರಿಗೆ ಬೇಕಾದ ಎಲ್ಲವೂ ಚಿತ್ರದಲ್ಲಿತ್ತು. ಅದಕ್ಕಿಂತಲೂ ಮುಖ್ಯವಾಗಿ ರಾಜ್ ಸಂಸ್ಥೆಯಿಂದ ಜನ ನಿರೀಕ್ಷಿಸುತ್ತಿದ್ದ ಕೌಟುಂಬಿಕ ಅಂಶಗಳು ಚಿತ್ರದಲ್ಲಿತ್ತು. ಮಧ್ಯಮ ಕುಟುಂಬಗಳಲ್ಲಿ ಕಾಣಬರುವ ತಾಯಿ-ಮಗನ ಅನುಬಂಧ, ತಂದೆ ಜೊತೆಗಿನ ಸೈದ್ಧಾಂತಿಕ ಮುನಿಸು ಚಿತ್ರದಲ್ಲಿ ಪ್ರೇಮಕಥೆಯ ಜೊತೆ ಜೊತೆಗೆ ಸಾಗಿತ್ತು. ಇದರ ಜೊತೆಗೆ ಪುನೀತ್ ರ ಲವಲವಿಕೆಯ ಅಭಿನಯ, ಫೈಟ್ ಹಾಗೂ ಡ್ಯಾನ್ಸ್ ಯುವಕರನ್ನು, ಮಕ್ಕಳನ್ನು ಕ್ಷಣಮಾತ್ರದಲ್ಲಿ ಆಕರ್ಷಿಸಿತು. ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ಎಂಬ ಖಾತ್ರಿ ಇಡೀ ಕುಟುಂಬವೇ ಚಿತ್ರಮಂದಿರಗಳತ್ತ ಮುಗಿಬೀಳುವಂತೆ ಮಾಡಿತು.

ಅಲ್ಲಿಂದ ಪುನೀತ್ ಹಿಂದಿರುಗಿ ನೋಡಲೇ ಇಲ್ಲ. ಕೌಟಂಬಿಕ ಪ್ರೇಕ್ಷಕ ಪುನೀತ್ ಕೈಬಿಡಲಿಲ್ಲ. ಪುನೀತ್ ಸಹ ತನ್ನ ಪಟ್ಟು ಸಡಿಲಿಸಲಿಲ್ಲ, ಯಶಸ್ಸನ್ನು ತಲೆಗೇರಿಸಿಕೊಳ್ಳಲಿಲ್ಲ. ತನ್ನ ಚಿತ್ರಗಳನ್ನು ಇಡೀ ಕುಟುಂಬವೇ ಬಂದು ನೋಡಲು ಯಾವುದೇ ಅಡ್ಡಿ ಇಲ್ಲದಂತಹ ಚಿತ್ರಕಥೆಗಳನ್ನು ಆಯ್ಕೆ ಮಾಡುವಲ್ಲಿ ಎಚ್ಚರವಹಿಸುತ್ತಾ, ಚಿತ್ರ ನಿರಾಸೆ ಮೂಡಿಸಿದರೂ ತಾನು ನಿರಾಸೆ ಮೂಡಿಸದಂತೆ ಪುನೀತ್ ಗಮನ ಹರಿಸಿದರು. ಡಾ.ರಾಜ್ ಪುತ್ರ, ಸೂಪರ್ ಸ್ಟಾರ್ ಎಂಬುದನ್ನು ನೆಚ್ಚಿಕೊಳ್ಳದೆ ದಿನದ ವ್ಯಾಯಮ, ಕಸರತ್ತು ತಪ್ಪಿಸಲಿಲ್ಲ. ಶ್ರಮ ಹಾಗೂ ಶ್ರದ್ಧೆಯನ್ನು ತೊರೆಯಲಿಲ್ಲ. ಇದರಿಂದಾಗಿ 20 ವರ್ಷ ಕಳೆದರೂ ಚಿತ್ರರಂಗದ ಅತ್ತ್ಯುತ್ತಮ ಫೈಟರ್, ಡ್ಯಾನ್ಸರ್ ಎಂಬ ಪಟ್ಟದ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ತನ್ನತನವನ್ನು ಬಿಟ್ಟು ಕೊಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿನಯ ಹಾಗೂ ತನ್ನ ಸಜ್ಜನಿಕೆಯನ್ನು ಬಿಡಲಿಲ್ಲ.

ಆದರೆ ಪುನೀತ್ ವ್ಯಕ್ತಿತ್ವ ಇಷ್ಟಕ್ಕೇ ಸೀಮಿತವಾಗಲಿಲ್ಲ. ಸೂಪರ್ ಸ್ಟಾರ್ ಗಿರಿ ಬರ ಮಾಡುವ ಎಲ್ಲಾ ಮಿತಿಗಳನ್ನು ಮೀರಿ ಹೊಸತನಕ್ಕೆ ತನ್ನನ್ನು ಒಡ್ಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದರು. ಕನ್ನಡದ ಕೋಟ್ಯಾಧಿಪತಿ ಆ ದಿಸೆಯಲ್ಲಿ ಒಂದು ಯಶಸ್ವಿ ಹೆಜ್ಜೆಯಾದರೆ, ’ಪೃಥ್ವಿ’ ’ಮೈತ್ರಿ’ ಅಂತ ಚಿತ್ರಗಳು ದಿಟ್ಟ ಹೆಜ್ಜೆಗಳಾದವು. ಪಿಆರ್ ಕೆ  ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳನ್ನು ತರುವ ಪ್ರಯತ್ನ ಮಾದರಿ ನಡೆಯಾಗಿತ್ತು.

ಅಷ್ಟೇ ಅಲ್ಲದೆ ಯಾವುದೇ ಇತರ ನಟರು ತಮ್ಮ ಚಿತ್ರಗಳಿಗೆ ಏನಾದರೂ ಪ್ರಮೋ ಬೇಕಾದರೆ ಅಥವಾ ಒಂದು ಹಾಡು ಹಾಡಬೇಕಾದರೆ ಪುನೀತ್ ಸದಾ ಸಿದ್ಧರಾಗಿರುತ್ತಿದ್ದರು. ಹಾಡಿನಿಂದ ಬಂದ ಸಂಭಾವನೆ ತಮ್ಮ ಟ್ರಸ್ಟ್ ಗೆ ಹೋಗುತ್ತಿದ್ದರೂ ಸಂಭಾವನೆಗಿಂತ ಇತರರ ಚಿತ್ರಗಳಿಗೆ  ತಮ್ಮ ಭಾಗವಹಿಸಿಕೆಯಿಂದ ಸಹಾಯವಾಗಲಿ ಎಂಬ ಭಾವನೆ ಹೆಚ್ಚಾಗಿತ್ತು. ಇದರಿಂದ ಅಪಾರವಾದ ಸ್ನೇಹಾವಲಯವನ್ನು ಸಂಪಾದಿಸುತ್ತಾ ಬಂದರು. ಸರ್ಕಾರದ ’ನಂದಿನಿ’ ಸಂಸ್ಥೆಗೆ ಮಾತ್ರವಲ್ಲದೆ, ಮತದಾನದ ಮಹತ್ವವೂ ಸೇರಿದಂತೇ ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು.

ಒಂದೆಡೆ ತಮ್ಮ ಸಂಸ್ಥೆಯಿಂದ ಹತ್ತಾರು ಯುವ ನಿರ್ದೇಶಕರ ಹೊಸ ಪ್ರಾಜೆಕ್ಟುಗಳು,  ಯಾವ ಸ್ಟಾರ್ ನಟನೂ ಸುಲಭವಾಗಿ ಒಪ್ಪಿಕೊಳ್ಳಲಾಗದ ಪ್ರಾಯೋಗಿಕ ಚಿತ್ರಗಳಲ್ಲಿ ಅಭಿನಯಿಸುವ ಇಂಗಿತ, ಮತ್ತೊಂದೆಡೆ ಕರ್ನಾಟಕದ ಕಾಡುಗಳನ್ನು ಜಗತ್ತಿಗೆ ತೋರ ಬಯಸುವ ’ಗಂಧದ ಗುಡಿ’ ಎಂಬ ಸಾಕ್ಷ್ಯಚಿತ್ರ, ಮಲೆ ಮಾದೇಶ್ವರದ ಬಗೆಗಿನ ಒಂದು ವಿಡಿಯೋ ಸಾಂಗ್, ’ನಾ ನಿನ್ನ ಮರೆಯಲಾರೆ’ ಚಿತ್ರದ ರಿಮೇಕ್, ಕನ್ನಡ ಚಿತ್ರರಂಗವನ್ನು ತಾಂತ್ರಿಕವಾಗಿ ವಿಶ್ವಮಟ್ಟದಲ್ಲಿ ಏರಿಸುವಂತ ಚಿತ್ರಗಳು... ಹೀಗೆ ಸಾಲು ಸಾಲು ಕನಸುಗಳನ್ನು ಅರ್ಧಕ್ಕೆ ಬಿಟ್ಟು ಹೋಗಿರುವ ಪುನೀತ್ ಉಳಿಸಿರುವ ವಿಷಾದ ಸುಲಭದಲ್ಲಿ ಅಳಿಸಲಾಗದು. ಇವೆಲ್ಲಕ್ಕೂ ಮೀರಿದ ಸಾಮಾನ್ಯ ಜನರಿಗೆ ಬೇಕಾದ ರಂಜನೆ, ಒಬ್ಬ ಐಕಾನ್, ಒಂದು ಸಂಭ್ರಮ, ಒಂದು ಪ್ರೇರಣೆ ಎಲ್ಲವೂ ಕ್ಷಣಮಾತ್ರದಲ್ಲಿ ಮಾಯವಾಗಿದೆ. ದೊಡ್ಡಮಟ್ಟದಲ್ಲಿ ಅಭಿಮಾನಿಗಳಾಗಿದ್ದ ಮಕ್ಕಳು ಈ ಸಾವು ಎಂದರೆ ಏನು ಎಂದು ತಿಳಿಯದೆ ಗೊಂದಲದಲ್ಲಿವೆ.

ಅಂತೆಯೇ ಪುನೀತ್ ಏನೂ ತೀರ ಸರಳವಾಗಿ ಏನು ಬದುಕಲಿಲ್ಲ. ತಮ್ಮ ಜೀವನಶೈಲಿ, ತಮ್ಮ ನಡೆ ನುಡಿಯಿಂದಲೇ ಒಬ್ಬ ಐಕಾನ್ ಆಗಿ ಕಾಣಿಸಿಕೊಳ್ಳುತ್ತಾ ಹೋದರು. ಐಶಾರಾಮಿ ಜೀವನ ಶೈಲಿ, ಕಾರುಗಳು ತೋರಿಕೆಯಂತಾಗದೆ,  ಶ್ರಮ ಜೀವನ, ಶ್ರದ್ಧೆ ಹಾಗೂ ಶಿಸ್ತಿನ ಜೀವನದ  ಫಲಿತಾಂಶವೆಂಬಂತೆ ಬಿಂಬಿತವಾಯಿತು. ಎಲ್ಲರೊಂದಿಗೆ ಬರೆಯಬಹುದಾದ ಸ್ವಭಾವದಿಂದಾಗಿ ವಿಶಿಷ್ಟವಾದ ಒಂದು ಸ್ಥಾನವನ್ನು ಪುನೀತ್ ಜನಮನದಲ್ಲಿ ಗಳಿಸಿಕೊಳ್ಳುತ್ತ ಸಾಗಿದರು. ಬದುಕಿದ್ದಾಗ ಇದು ಮೇಲ್ಪದರದಲ್ಲಿ ಕಾಣುತ್ತಿದ್ದರೂ  ನಾಡಿನ ಜನರ ಮನಸ್ಸಿನಲ್ಲಿ  ಅವರು ಗಳಿಸಿದ ಸ್ಥಾನ ಅವರ ಅಕಾಲಿಕ ಅಗಲಿಕೆಯಿಂದ ಹೊರಬಂದಿತಷ್ಟೇ.  

ಇದರ ಜೊತೆಗೆ ಅವರ ಕಾಳಜಿ ಹಾಗೂ ಹೃದಯ ವೈಶಾಲ್ಯದ ಕಥೆಗಳು ಒಂದೊಂದೇ ಹೊರ ಬರುತ್ತಾ ಈ ನಾಲ್ಕು ತಿಂಗಳಲ್ಲಿ ಒಂದು ದಂತಕತೆಯಾಗಿ ಬೆಳೆಯುತ್ತಿರುವುದು ಆಶ್ಚರ್ಯವಾಗಿದೆ. ಎಲೆ ಮರೆಯ ಕಾಯಿಯಂತಿದ್ದ ಪುನೀತ್ ದಾನ-ಸಹಾಯ ಹಾಗೂ ಮುಂದಿನ ಕನಸುಗಳ ಕಥೆಗಳು ಜನರ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ.

 ಒಬ್ಬ ವ್ಯಕ್ತಿಯ ಸಾವಿಗೆ ಮನಸ್ಸಿನಲ್ಲಿ ವ್ಯಥೆ ಪಡುವುದು ಸಹಜ, ಆದರೆ ಅಂತಹ ಉಸಿರುಗಟ್ಟುವ ಸಾಲಿನಲ್ಲೂ ಮಕ್ಕಳೊಂದಿಗೆ ನಿಲ್ಲುವುದು, ಬಿಸಿಲು ಚಳಿ ಲೆಕ್ಕಿಸದೆ ಸಮಾಧಿಯನ್ನು ಸಂಧಿಸುವುದು, ಪ್ರತಿ ಹತ್ತು ಇಪ್ಪತ್ತು ಅಡಿಗೆ ಬ್ಯಾನರ್ ಕಟ್ಟಿ ಶ್ರದ್ಧಾಂಜಲಿ ತೋರುವುದು, ಇದೆಲ್ಲವೂ ಯಾವದೋ ಒಂದು ಅನನ್ಯ ಸಾಂಸ್ಕೃತಿಕ ಸಂಗತಿಯಾಗಿ ಬೆಳೆದುಕೊಂಡು ಬಂದಿದೆ. ಮತ್ತೆ ಇದು ಕೇವಲ ಸಿನಿಮಾ ನಟನ ಮೇಲೆ ತೋರುವ ಸಿನಿಮಾ ಪ್ರೀತಿ ಮಾತ್ರದಂತೆ ಕಾಣುತ್ತಿಲ್ಲ.

ರಾಜ್ ಮಗನಾಗಿದ್ದರಿಂದ ಸಿನಿಮಾ, ನಾಯಕ ಪಟ್ಟ ಸುಲಭವಾಗಿ ಸಿಕ್ಕಿತು ಎಂಬ ತಮ್ಮ ಬಗೆಗಿನ ಮಾತಿಗೆ ಎಂದೂ ತಲೆಕೆಡಿಸಿಕೊಳ್ಳದೆ, ಬಂದದ್ದನ್ನು ಉಳಿಸಿಕೊಂಡು, ಬೆಳಿಸಿಕೊಂಡು, ಅದನ್ನು ಹಂಚಿಕೊಂಡು ಬದುಕಿ ಮರೆಯಾದ ಪುನೀತ್ ಅನೇಕ ಪಾಠಗಳನ್ನು ಸಮಾಜಕ್ಕೆ, ಯುವಕರಿಗೆ ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಬಿಟ್ಟು ಹೋಗಿದ್ದಾರೆ. ಇಂದು ಪುನೀತ್ ಸಾವಿಗೆ ದು:ಖಿಸುತ್ತಿರುವವರು, ಅವರನ್ನು ಹೃದಯದಲ್ಲಿ ಇರಿಸಿಕೊಂಡಿರುವವರು, ಅವರ ಸಿನಿಮಾ ಅಭಿಮಾನಿಗಳು ಮಾತ್ರವಲ್ಲ, ಅವರಿಂದ ನೇರವಾಗಿ ಸಹಾಯ ಪಡೆದವರು ಮಾತ್ರವಲ್ಲ, ಅವರ ಒಡನಾಡಿಗಳು ಮಾತ್ರವಲ್ಲ, ಇದಕ್ಕೆ ಹೊರತಾದ ಲಕ್ಷಾಂತರ ಜನ. ಜನರ ಸರಳ ನಿರೀಕ್ಷೆಗಳಿಗೆ ಸ್ಪಂದಿಸುವ,  ಜನ ಸಮುದಾಯದ ಪರವಾಗಿ ನಿಲ್ಲುವ, ಮಿಡಿಯುವವರನ್ನು ಸಾಮಾನ್ಯ ಜನ ತಮ್ಮ ಮನಸ್ಸಿನಲ್ಲಿ  ಎತ್ತರಕ್ಕೆ ಇರಿಸುತ್ತಾರೆ ಎಂಬ ನಿತ್ಯ ಸತ್ಯವನ್ನು ಉಳಿಸಿ ಹೋಗಿರುವ ಪುನೀತ್  ಒಂದರ್ಥದಲ್ಲಿ ಈ ನಾಡಿನ ನಿಜ ಹೀರೋಗಳಲ್ಲಿ ಒಬ್ಬರು.

ಪುನೀತ್ ಅನ್ನು ’ಅಂಬಾಸಿಡರ್ ಆಫ್ ಲವ್ – ಪ್ರೀತಿಯ ರಾಯಭಾರಿ’ ಎಂದು ಕರೆದ ನಟ ಶಿವಾಜಿ ಪ್ರಭುವಿನ ಮಾತು ಎಷ್ಟು ನಿಜವಲ್ಲವೇ

-  ಪ್ರಶಾಂತ್ ಇಗ್ನೇಷಿಯಸ್