Sunday 29 November 2009

ಕನ್ನಡ ಎನೆ ಮನ ಕುಣಿಯುವುದು

"ಕನ್ನಡ ಎನೆ ಮನ ಕುಣಿಯುವುದು
ಕನ್ನಡ ಎನೆ ಕಿವಿ ನಿಮಿರುವುದು"
ಇದು ಕುವೆಂಪು ಬರೆದ ಒಂದು ಕಾವ್ಯದ ಪ್ರಸಿದ್ಧ ಸಾಲು. ತಾವು ಪದ್ಯಗಳನ್ನು ಗೀಚುವ ಗೀಳಿಗೆ ಅಂಟಿಕೊಂಡಾಗ, ಇಂಗ್ಲೀಷ್ ನ ವ್ಯಾಮೋಹ ಅವರನ್ನು ಬಹಳವಾಗಿ ಅಪ್ಪಿಕೊಂಡಿತ್ತು. ಅಷ್ಟೆ ಏಕೆ ಮೊದಮೊದಲು ಕವನಗಳನ್ನು ಸಹ ಆಂಗ್ಲದಲ್ಲಿ ಬರೆದರು. ಒಂದು ಕವನ ಸಂಕಲನವಾಗಿ ಹೊರತಂದ್ದಿದರು. ಬಹುಷಃ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದ ನಮ್ಮವರಿಗೆ ಎಲ್ಲೆಲ್ಲೂ ಇಂಗ್ಲೀಷ್ ನ ಭಾಷೆ, ಶೈಲಿ, ಉಡುಪು ಮತ್ತು ಅವರ ಸಂಸ್ಕೃತಿ ಆಕರ್ಷಿಸದೆ ಇದ್ದಿರಲಾರದು. ಇಂತಹ ಸಂದರ್ಭದಲ್ಲಿ ಕುವೆಂಪು ಆಂತಹ ಕುವೆಂಪುರವರಿಗೇ ಆ ಮೋಹ ವ್ಯಾಪಿಸಿತ್ತು ಕೂಡ.
ಕ್ರಮೇಣ ಕನ್ನಡದ ಬಗ್ಗೆ ಇರಬೇಕಾದ ಔನತ್ಯ, ಅಂತಃಕರಣ, ಕಾಳಜಿಯಂತಹ ಒಂದು ಹಿತನುಡಿಯಿಂದ ಮುಂದೆ ಕುವೆಂಪುರವರು ಕನ್ನಡದಲ್ಲಿ ಪ್ರಾರಂಭಿಸಿದ ತಮ್ಮ ಕಾವ್ಯಮಯ ಜೀವನ ಕನ್ನಡಕ್ಕೊಂದು ನೆಲೆಗಟ್ಟು ಕಟ್ಟಿಕೊಡುವಲಿ ಯಶಸ್ವಿಯಾಯಿತು. ಅಷ್ಟೆ ಏಕೆ ಕನ್ನಡವನ್ನು ಉತ್ಕೃಷ್ಟವಾಗಿ ಪ್ರೀತಿಸುವುದು ಅಂದರೆ ಏನು ಅನ್ನುವುದಕ್ಕೆ ಕುವೆಂಪುರವರ ಈ ಮೇಲಿನ ಕಾವ್ಯ ಸಾಲುಗಳು ಸಾಕು.

ಇದು ಕೇವಲ ಗುರುವಿನ ಹಿತನುಡಿಗೆ ಹುಟ್ಟಿದ ಲೇಪನವಲ್ಲ ಅಥವಾ ಕನ್ನಡ ಜನತೆಯಿಂದ ಮೆಚ್ಚುಗೆ ಪಡೆಯುವ ಸಲುವಾಗಿ ಬರೆದದ್ದಲ್ಲ. ತನ್ನ ಆಂತರ್ಯದಿಂದ ಉಕ್ಕಿ ಬರುವ ಕನ್ನಡದ ಮೇಲಿನ ಪ್ರೇಮದ ಸಿರಿ ಆ ಸಾಲುಗಳು. ಆ ಪ್ರೇಮದ ಫಲವೇ ಮುಂದೊಂದು ದಿನ ಕುವೆಂಪು ಎಂದರೆ "ಕನ್ನಡದ ಪ್ರತೀಕ" ಎನ್ನುವಷ್ಟು ನಾಡಿನ ಮನ ಮಿಡಿತಗಳಲ್ಲಿ ಧೃಡವಾಗಿಹೋದರು. ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ತಾವು ನೀಡಿದ ಸೇವೆಯಿಂದಿಡಿದು ಕನ್ನಡಕ್ಕೆ ಪ್ರಥಮ ಭಾರತೀಯ ಜ್ನಾನಪೀಠ ಪ್ರಶಸ್ತಿಯನ್ನು ದಕ್ಕಿಸಿಕೊಡುವವರೆಗೂ ಸಂಪೂರ್ಣ ನಾಡಿಗರಾಗಿ ದುಡಿದರು. ವೈಚಾರಿಕತೆಗೆ ಒತ್ತುಕೊಟ್ಟು ವಿಶ್ವಮಾನವರಾಗಿ ಎಂಬ ಸಂದೇಶವನು ನೀಡಿದ್ದು ಸಹ ಈ ಮಣ್ಣಿನ ಗುಣವನ್ನು ಅವಗಣಿಸಿಕೊಂಡಿದ್ದಾಗಲೇ. ಇಂತಹ ಚಿತ್ತಸಜ್ಜಿತವಾದ ಕನ್ನಡ ಪ್ರೇಮ ಹುಟ್ಟಿದು ಆಕಸ್ಮಿಕವಂತೂ ಖಂಡಿತ ಅಲ್ಲ, ಲಾಭಿಗಾಗಿ ಮತ್ತೂ ಅಲ್ಲ. ರನ್ನತ್ರಯರಿಂದ ಆದಿಯಾಗಿ ಕುಮಾರ ರಾಘವಾಂಕರ, ರಾಜ ವೀರಮಲ್ಲರ, ಅಕ್ಕ, ಸರ್ವ, ಕನಕ ಪುರಂದರದಾಸರುಗಳು ಹಾದುಹೋದ ಇತಿಹಾಸವನ್ನು ಪಠಿಸಿದ್ದರಿಂದ. ಜೊತೆಜೊತೆಯಲಿ ಮಹಾನ್ ಕನಸುಗಾರ ಸರ್ ವಿಶ್ವೇಶ್ವರಯ್ಯ, ಸೈದ್ಧಾಂತಿಕ ರಾಜಕಾರಿಣಿ ನಿಜಲಿಂಗಪ್ಪ, ಸಂಗೀತ ಸಾಮ್ರಾಜ್ನೆ ಗಂಗೂಬಾಯಿ ಹಾನಗಲ್ ನಾಟಕ ಬ್ರಹ್ಮ ಗುಬ್ಬಿವೀರಣ್ಣ ವೀಣೆಶೇಷಣ್ಣರಂತವರ, ಸಹಪಾಠಿಗಳಾದ ಪದಬ್ರಹ್ಮ ಬೇಂದ್ರೆ, ಕನ್ನಡದ ಆಸ್ತಿ ಮಾಸ್ತಿಯರಂತಹವರು ಮಾಡಿದ ಸಾಧನೆಗಳನ್ನು ಅವಲೋಕಿಸುವುದರ ಮೂಲಕ ಕನ್ನಡದ ಕಂಪನ್ನು ಅಸ್ವಾದಿಸಿದರು.


ಮಲೆನಾಡಿನ ಸೊಬಗಿಗೆ ಗಂಧದ ಪರಿಮಳಕ್ಕೆ ಸಹ್ಯಾದ್ರಿಯ ಸಾಲು ಬೆಟ್ಟದ ಶೃಂಗಾರಕ್ಕೆ ಕರಾವಳಿ ತೀರದ ಮೌನಕ್ಕೆ ಮನಸೋತರು. ಪಟ್ಟದಕಲ್ಲು ಐಹೊಳೆ ಅಜಂತ ಎಲ್ಲೊರದ ವಾಸ್ತುಶಿಲ್ಪದಲ್ಲಿನ ಉತ್ತಮಿಕೆ, ಹಂಪಿ ಹಳೆಬೀಡು, ಗೊಮ್ಮಟದಂತ ಅದ್ಭುತ ಕಲಾಕೆತ್ತನೆ, ಗೊಲ್ಗುಂಬಜ್: ಮೈಸೂರು ಅರಮನೆಗಳ ನಿರ್ಮಾಣಗಳನ್ನು ಆಧ್ಯಾತ್ಮಿಸಿದರು. ಮೌರ್ಯ ಕದಂಭಾದಿ, ಹೊಯ್ಸಳ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ನಮ್ಮ ನಾಡಿನ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ಮಾನದಂಡವನ್ನಾಗಿಸಿಕೊಂಡು ಪರಿಶೀಲಿಸಿದರು. ಆಗುಂಬೆ ಜೋಗಿನ ಸಿರಿ ಸಕಲವನ್ನು ಧ್ಯಾನಿಸಿದರು.

ಒಟ್ಟಾರೆ ಕರ್ನಾಟಕದ ಸರ್ವಕಾಲಿಕ ಸಂಸ್ಕೃತಿಯನ್ನು ಮತ್ತು ಶ್ರೀಮಂತಿಕೆಯನ್ನು ಬಿಡಿಬಿಡಿಯಾಗಿ ಅಧ್ಯಯಿನಿಸಿ ಆಕರ್ಷಿತರಾದರು. ಕನ್ನಡಗ್ರಂಥಮಾಲಿಕೆಗಳಲ್ಲಿ ಶ್ಲೋಕ ವಚನಗಳಲಿ ಉಕ್ತಿಗಳಲಿ ಪವಡಿಸಿದರು. ಇದೆಲ್ಲದರ ಪ್ರಭಾವವೇ ಅದೊಂದು ದಿನ ಬರೆದ "ಕನ್ನಡ ಎನೆ ಮನ ಕುಣಿಯುವುದು ಕನ್ನಡ ಎನೆ ಕಿವಿ ನಿಮಿರುವುದು" ಎಂಬ ಅಭಿಮಾನದ ನುಡಿ.

ಆದರೆ ಪ್ರಸ್ತುತ ದಿನಗಳಲಿ ಕನ್ನಡವು ಅವನತಿಯ ದಾರಿ ತುಳಿದಿದೆ ಎಂಬ ಆತಂಕ, ಕಾಳಜಿ ಇರುವ ಮನಗಳನ್ನು ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. ಕಾರಣ ಮಹಾನ್ ಚೇತನ ಕುವೆಂಪುರನ್ನು ಒಳಗೊಂಡು ಇನ್ನೂ ಆನೇಕ ಕರ್ನಾಟಕರತ್ನವರ್ಯರ ಆದರ್ಶಮಯ ಬದುಕನ್ನು ಈಗಿನ ತಾಂತ್ರಿಕ ಪೀಳಿಗೆ ಆಶ್ವಾದಿಸುವುದರಲ್ಲಿ ವಿಫಲವಾಗಿದೆ. ಎಲ್ಲರು ಕುವೆಂಪು, ಡಾ. ರಾಜ್ ಕುಮಾರ್ ಅಗುವುದು ಸಾಧ್ಯವಾಗದೇ ಇರಬಹುದು  ಕನಿಷ್ಟ ಪಕ್ಷ ನಮ್ಮ ತಾಯ್ನೆಲ ತಾಯ್ನಾಡಿನ ಬಗ್ಗೆ ಅಚಲ ವಿಶ್ವಾಸ, ನಿಶ್ಚಲ ಪ್ರೀತಿ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ನಾಡಿನ ಇತಿಹಾಸ ಸಂಸ್ಕೃತಿ ಹೋರಾಟ ಚರಿತ್ರೆಗಳ ಮೇಲೆ ಬೆರಳಾಡಿಸಬೇಕಾಗಿದೆ. ಆಗ ಮಾತ್ರ "ಕನ್ನಡ ಎನೆ ಮನ ಕುಣಿಯುವುದು ಕನ್ನಡ ಎನೆ ಕಿವಿ ನಿಮಿರುವುದು" ಎಂಬ ಸಾಲಿಗೆ ಅರ್ಥಸಿಗುವುದು. ನಮ್ಮ ಕನ್ನಡ ಪ್ರೀತಿಗೆ ಪ್ರತಿಫಲ ದೊರೆಯುವುದು.

-ಸಂತೋಷ್.