Friday 13 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಕೊನೆಯ ಭಾಗ

ಇಲ್ಲಿನ ವಾಣಿಜ್ಯೋದ್ಯಮಕ್ಕೆ, ವ್ಯಾಪರಕ್ಕೆ ಬರುವ ಅನ್ಯ ರಾಜ್ಯದವರಿಗೆ, ವಿದೇಶಿ ಸಂಸ್ಥೆಗಳಿಗೆ ಇಲ್ಲಿನ ನಾಡು, ನುಡಿಯ ಬಗ್ಗೆ ಯಾವುದೇ ರೀತಿಯ ಕಾಳಜಿ, ಪ್ರೀತಿಯಂತೂ ಇರಲು ಸಾಧ್ಯವಿಲ್ಲ. ಇಲ್ಲಿನ ಜನರಿಗೇ ಇಲ್ಲವೆಂದ ಮೇಲೆ ಅವರಿಗೆಲ್ಲಿಂದ ಬರಬೇಕು? ಮಾನವ ಸಂಪನ್ಮೂಲವೂ ಒಳಗೊಂಡಂತೆ ಇಲ್ಲಿನ ಎಲ್ಲಾ ಸಂಪತ್ತು, ಸಂಪನ್ಮೂಲ ಹಾಗೂ ಸೌಲಭ್ಯಗಳನನ್ನು ಬಳಸಿಕೊಂಡು ತಮ್ಮ ವ್ಯಾಪರವನ್ನು ನಡೆಸುತ್ತಾರೆ. ಆಗ ಸಾಮರ್ಥ್ಯ, ಪ್ರತಿಭೆ ಹೆಸರಲ್ಲಿ ಬೇರೆ ರಾಜ್ಯದ ಜನರೂ ಬರುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

ಆದರೆ ಅವರಿಗೆ ಮಣೆ ಹಾಕುವ ಬರದಲ್ಲಿ ಇಲ್ಲಿನ ಜನರರಿಗೆ ಸಿಗಬೇಕಾದ ಸೌಲಭ್ಯಗಳು,ಸವಲತ್ತುಗಳು ಹಂಚಿ ಹೋಗಿ,ಇಲ್ಲಿನ ಜನರ ಕಷ್ಟ,ಅವಶ್ಯಕತೆಗಳಿಗಂತೂ ಯಾವುದೇ ಸ್ಪಂದನವಿರುವುದಿಲ್ಲ. ಉದ್ಯಮವನ್ನು, ಬಂಡವಾಳವನ್ನು ಸ್ವಾಗತಿಸುವ ಭರದಲ್ಲಿ ಸರ್ಕಾರಗಳಿಗೆ ಇಲ್ಲಿನ ಜನರಿಗೆ ಆದ್ಯತೆ ಕೊಡುವುದಿರಲಿ, ಅವರ ಕಷ್ಟಗಳೂ ಅರ್ಥವಾಗುವ ಸಂಭವಗಳು ಕಡಿಮೆ.

ಉದ್ಯೋಗವಕಾಶಗಳು ಸಿಗುತ್ತವೆ ಎಂಬ ನೆಪವಿದ್ದರೂ,ಅದರಲ್ಲಿ ಸ್ಥಳೀಯರ ಉದ್ಧಾರ ಎಷ್ಟು ಆಯಿತು ಎಂಬ ಲೆಕ್ಕಚಾರ,ಆಸಕ್ತಿ ಯಾರಿಗುಂಟು? ಈ ಸಂಸ್ಥಗಳಿಗೆ ತಮ್ಮ ಭೂಮಿಯನ್ನು ಮಾರಿ ಅಥವಾ ಕಳೆದುಕೊಂಡ ಒಬ್ಬ ಸಾಮನ್ಯ, ಕೆಲವೇ ವರ್ಷಗಳಲ್ಲಿ ಇರುವ ಎಲ್ಲಾ ಹಣವನ್ನು ಕಳೆದುಕೊಂಡು ಅದೇ ಸಂಸ್ಥೆಯ ಸಣ್ಣ ಉದ್ಯೋಗದಲ್ಲಿ ನಿರತನಾಗಿರುವ ಉದಾಹರಣೆಗಳನ್ನು ಕಾಣಬಹುದು. ಅದು ಅವನದೇ ಸ್ವಯಂಕೃತ ಅಪರಾಧವಾದರೂ ಅದರಲ್ಲಿ ವ್ಯವಸ್ಥೆಯ ಪಾಲನ್ನೂ ಅಲ್ಲಗಳೆಯುವಂತಿಲ್ಲ.


ಇದೆಲ್ಲಾದರ ಹಿನ್ನಲೆಯಲ್ಲಿ ಒಂದು ಸಾತ್ವಿಕವಾದ ಹೋರಾಟದ ಅವಶ್ಯಕತೆ ಖಂಡಿತವಿದೆ. ಅದನ್ನು ಹೋರಾತ ಎನ್ನುವದಕ್ಕಿಂದ ಜಾಗೃತಿ ಎಂದರೆ ಒಳಿತೇನೋ.ರೈತನನ್ನು ಕಷ್ಟದಿಂದ ಎಬ್ಬಿಸಿ ಸ್ವಾವಲಂಬಿಯಾಗಿ ಮಾಡಬೇಕಾದ ಕೃಷಿ ಹೋರಾಟವಾಗಬೇಕಾಗಿದೆ. ಅಂತೆಯೇ ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ, ಅಂಥವರ ಉದ್ಯೋಗ ಅವಕಾಶಗಳು ವೃದ್ಧಿಸುವುದು, ಬೌದ್ದಿಕ ಜೀವನ ಮಟ್ಟವನ್ನು ಸುಧಾರಿಸುವ ಸ್ಥಳೀಯ ಸಾಹಿತ್ಯ,ಕಲೆಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವಂತ ಕಾರ್ಯಗಳು ಆಗಬೇಕಾಗಿದೆ.

ಇವೆಲ್ಲಾವೂ ಸರ್ಕಾರ, ಕನ್ನಡ ಪರ ಸಂಘಟನೆಗಳ ಹಾಗೂ ಇತರ ಸಂಸ್ಥೆಗಳ ಮೂಲಕವೇ ಆಗಲಿ ಎಂದು ಬಯಸುವುದು ತಪ್ಪಾಗುತ್ತದೆ. ನೆಮ್ಮೆಲ್ಲರ ಮನ ಮನೆಗಳಿಂದ ಈ ಸಣ್ಣ ರೂಪದ ಕಾರ್ಯಗಳು ಪ್ರಾರಂಭವಾದರೆ ಕನ್ನಡಪರ ಹೋರಾಡುವ ಸಂಘಟನೆಗಳಿಗೆ ಆನೆಯ ಬಲ ದೊರಕಿದಂತಾಗುತ್ತದೆ, ಆಗ ಹೋರಾಟಕ್ಕೆ ಬೌದ್ಢಿಕವಾದ, ಸಾತ್ವಿಕವಾದ, ನ್ಯಾಯಯುತವಾದ ಹಕ್ಕಿನ ರೂಪ ದೊರಕಿ ಸಂಘರ್ಷ, ತೋಳ್ಬಲದ, ಹಿಂಸೆಯ ಪ್ರದರ್ಶನದ ಸಾಧ್ಯತೆಯನ್ನು ತಪ್ಪಿಸುತ್ತದೆ. ಜನ ಮೆಚ್ಚುಗೆಯ
ಹೋರಾಟವಾಗುತ್ತದೆ. ಹಾಗೆ ಆಗಲಿ ಎಂಬುದೇ ಹಾರೈಕೆ.


-ಪ್ರಶಾಂತ್

No comments:

Post a Comment