Monday, 20 November 2017

ರಾಜ್ಯೋತ್ಸವ - ನೆನಪುಗಳನ್ನು ಬೆಚ್ಚಗೆ ಬಚ್ಚಿಟ್ಟುಕೊಳ್ಳೋಣ.

ಮತ್ತೊಂದು ಕನ್ನಡ ರಾಜ್ಯೋತ್ಸವ. ಮೊದಲಂತೆ ರಸ್ತೆಗಳಲ್ಲಿ ಸಮಾರಂಭಗಳು ಈಗಿಲ್ಲ. ಗಣೇಶ, ಅಣ್ಣಮ್ಮ ಉತ್ಸವಗಳೇ ಕಮ್ಮಿಯಾಗುತ್ತಾ ಬಂದಿರುವಾಗ ಇದರಲ್ಲಿ ಆಶ್ಚರ್ಯವಿಲ್ಲ.ಇತ್ತೀಚೆಗೆ ಹಬ್ಬಗಳ ಸಂಭ್ರಮ ಖಾಸಗಿಯಾಗುತ್ತಾ ಬರುತ್ತಿದೆ. ಹಿಂದಿನ ಸಾರ್ವಜನಿಕ ಪಾಲ್ಗೊಳ್ಳುವಿಕೆ ಈಗಿಲ್ಲ. ಮೊನ್ನೆಯ ದೀಪಾವಳಿ ಬಹಳ ಸಪ್ಪೆಯೇ.

ವರ್ಷಗಳ ಹಿಂದೆ ಬೆಂಗಳೂರಿನ ಸಂಪಗಿರಾಮನಗರದಲ್ಲಿರುವಾಗ ಆಯುಧ ಪೂಜೆಯ ದಿನ ಗೆಳೆಯರೆಲ್ಲಾ ಓಡಿ ಬಂದು ಕಂಠೀರವ ಕ್ರೀಡಾಂಗಣದ ಮುಂದಿನ ಮೆಟ್ಟಿಲುಗಳ ಬಂದು ನಿಲ್ಲುತ್ತಿದ್ದೆವು. ಪೂಜೆಯಿಂದ ವಿಧ ವಿಧವಾಗಿ ಅಲಂಕಾರಗೊಂಡ ಬಸ್ಸು ಲಾರಿಗಳ ಸಾಲುಗಳನ್ನು ನೋಡುವುದೇ ಕೆಲಸ. ಆಗಿನ್ನು ಟಿ.ವಿಗಳಲ್ಲಿ  ಚಾನಲ್ಲುಗಳ ಭರಾಟೆ ನಮ್ಮ ಸಮಯವನ್ನು ತಿಂದು ಹಾಕುತ್ತಿರಲಿಲ್ಲ. ಇಂಥಾ ಸಣ್ಣ ಪುಟ್ಟ ಸಂತೋಷಗಳೇ ಮೃಷ್ಟಾನ್ನ. ಚಕ್ರಕ್ಕೆ ಬಲೂನ್ ಕಟ್ಟಿಕೊಂಡ ಸೈಕಲ್ಲು ಮಾಡುತ್ತಿದ್ದ ಶಬ್ದ ಮಾಲಿನ್ಯಕ್ಕೆ ಯಾರೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ.

ನವೆಂಬರ್ ೧ ಬಂತೆಂದರೆ ಮತ್ತೊಂದು ಸಂಭ್ರಮ. ಸಂಜೆಯಾಗುತ್ತಿದ್ದಂತೆ ಮನೆ ಮಂದಿಯೆಲ್ಲಾ ಸಿಂಗರಿಸಿಕೊಂಡು , ಒಂದಷ್ಟು ಮುರುಕು ತಿಂಡಿಗಳೊಡನೆ ಬಂದು ನಿಲ್ಲುತ್ತಿದ್ದದ್ದು ಕಾರ್ಪರೇಷನ್ ಸರ್ಕಲ್‍ನ ಬಳಿ. ವಾಟಾಳ್ ನಾಗರಾಜ್, ಜಿ.ನಾರಾಯಣ್ ಕುಮಾರ್‌ರವರ ಸಂಘಟನೆಗಳು ಕಬ್ಬನ್ ಪಾರ್ಕಿನಿಂದಲೋ, ಮೈಸೂರ್ ಬ್ಯಾಂಕ್ ವೃತ್ತದಿಂದಲೋ ಹೊರಡಿಸಿಕೊಂಡು ಬರುತ್ತಿದ್ದ ವರ್ಣರಂಜಿತ ಮೆರವಣಿಗೆಗೆ ಜನರೆಲ್ಲಾ ಪುಳಕಗೊಳ್ಳುತ್ತಿದ್ದರು. ಕರ್ನಾಟಕದ ಸಾಂಸ್ಕೃತಿಕ  ಸ್ತಬ್ಧ ಚಿತ್ರಗಳು, ವಿವಿಧ ವೇಷಧಾರಿಗಳು, ಡೊಳ್ಳು ಕುಣಿತ, ಹತ್ತು ಹದಿನೈದು ಅಡಿಗಳ ಗೊಂಬೆಧಾರಿಗಳು, ಕನ್ನಡದ ಹಾಡುಗಳ ನಡುವೆ ನಡೆಯುತ್ತಿದ್ದರೆ, ಜನರ ಹರ್ಷೋದ್ಗಾರ ಕಬ್ಬನ್ ಪಾರ್ಕಿನ ತಂಗಾಳಿಗೆ ಸೆಡ್ಡು ಹೊಡೆದಂತಿರುತ್ತಿದ್ದವು.

ಕಾರ್ಪೋರೇಷನ್ ದಾಟಿ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಜನಜಂಗುಳಿ ಮಾರ್ಥಾಸ್ ಆಸ್ಪತ್ರೆ ಎದುರಿನ ಬನ್ನಪ್ಪ ಪಾರ್ಕಿನಲ್ಲಿ ಜಮಾಯಿಸುತ್ತಿತ್ತು. ಮುಂದೆ ಇಡೀ ನವೆಂಬರ್ ಆ ಪಾರ್ಕಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ. ಪ್ರತಿ ಸಂಜೆಯೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ. ಅದೇನಾಯಿತೋ, ಇವೆಲ್ಲದರ ಆಕರ್ಷಣೆ ಕಮ್ಮಿಯಾಗುತ್ತಾ ಬಂದಿದೆ. ಬನ್ನಪ್ಪ ಪಾರ್ಕಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆಯೇ ಗೊತ್ತಿಲ್ಲ.

ನಂತರದ ವರ್ಷಗಳಲ್ಲಿ  ರಾಜ್ಯೋತ್ಸವದ ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರದ ವತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ಸೇರುತ್ತಿದ್ದದ್ದು ಇನ್ನೂ ನೆನಪಿದೆ. ಕಂಠೀರವದ ಆ ಒರಟು ಸಿಮೆಂಟು ಮೆಟ್ಟಿಲ್ಲುಗಳು ತುಂಬೆಲ್ಲಾ ಬಿಳಿಯ ಬಣ್ಣದ ಸಮವಸ್ತ್ರ ಹಾಕಿಕೊಂಡು ಕುಳಿತ ವಿದ್ಯಾರ್ಥಿಗಳ ಸಾಲು ಮನಮೋಹಕ ದೃಶ್ಯವಾಗಿರುತಿತ್ತು. ಮೆಟ್ಟಿಲ ಇನ್ನೊಂದು ಬದಿಯ ಹುಲುಸಾದ ಹುಲ್ಲಿನ ಇಳಿಜಾರಿನ ಮೇಲೆ ಉರುಳಾಡುತ್ತಿದ್ದ ನೆನಪೂ ಆ ಹುಲ್ಲಿನಷ್ಟೇ ಹಚ್ಚ ಹಸಿರು. ಕೀಡಾಂಗಣದ ವೇದಿಕೆಯ ಮೇಲೆ  ಹೂವಿನ ಮಳೆ ಸುರಿಸಲು ಬರುತ್ತಿದ್ದ ಹೆಲಿಕಾಫ್ಟರ್ ಮಾಡುತ್ತಿದ್ದ ಸದ್ದಿಗೆ ಇಡೀ ಸಂಪಂಗಿರಾಮನಗರ, ಕಬ್ಬನ್ ಪೇಟೆ ಸುತ್ತಮುತ್ತಲಿನ ಜನರ ಚಿತ್ತವೆಲ್ಲಾ ಆಕಾಶದೆಡೆಯೇ.

ಅದೇ ಕಾರ್ಪರೇಷನ್ ಬಳಿಯ ಪಲ್ಲವಿ ಚಿತ್ರ ಮಂದಿರ ಒಂದು ಕಾಲದಲ್ಲಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತಿತ್ತು. ಅದೇನಾಯಿತೋ ನಂತರ ಅದರ ಚಿತ್ತ ಪರಭಾಷೆ ಚಿತ್ರಗಳತ್ತ ಹರಿಯಿತು. ಅದೊಂದು ವರ್ಷ ನವೆಂಬರ್ ತಿಂಗಳಲ್ಲಿ ಹಾದು ಹೋಗುವಾಗ ನೋಡಿದ ದೃಶ್ಯ ಇನ್ನೂ ನೆನಪಿದೆ.  ರಸ್ತೆಗೆ ಮುಖ ಮಾಡಿಕೊಂಡಿದ್ದ ಚಿತ್ರಮಂದಿರದ ಸುಂದರ ಗಾಜಿನ ಕಿಟಕಿಯ ಮೇಲೆಲ್ಲಾ ಒಂದು ಸಣ್ಣ ಕಲ್ಲಿನಷ್ಟು ಗಾತ್ರದ ತೂತುಗಳು, ಕನ್ನಡದ ಗುರುತು ಎಂಬಂತೆ. ನಮಗೋ ಖುಷಿ. ಮುಂದಿನ ವರ್ಷದಿಂದ ನವೆಂಬರ್ ಮೊದಲ ವಾರ ತಪ್ಪದೆ ಕನ್ನಡದ್ದೇ ಯಾವುದಾದರೊಂದು ಚಿತ್ರ ನಡೆಯುತಿತ್ತು. ಗಾಜುಗಳ ಭದ್ರತೆಗಾಗಿ.

ನವೆಂಬರ್  ಬಂತೆಂದರೆ ನನ್ನ ಕಸಿನ್ ಜಾನ್ ಹಾಗೂ ನನ್ನ ಗಮನವೆಲ್ಲಾ ಪ್ರಜಾವಾಣಿಯ ’ನಗರದಲ್ಲಿ ಇಂದು’ ಕಾಲಮ್ಮಿನತ್ತವೇ. ಭಾನುವಾರಗಳು ಎಲ್ಲೆಲ್ಲಿ ರಾಜ್ಯೋತ್ಸವದ ಕಾರ್ಯಕ್ರಮವೋ ಅಲ್ಲೆಲ್ಲಾ ನಮ್ಮ ಹಾಜರಿ ಕಡ್ಡಾಯ. ಸಿನಿಮಾ ನಟರು ಬರುವ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ. ನಂತರ ಸಾಹಿತಿ, ಇನ್ನಿತರರು. ೯೦ರ ದಶಕದಲ್ಲಿ ಹಲಸೂರಿನಲ್ಲಿ ಕನ್ನಡ ಸೋಮು ಅಧ್ಯಕ್ಷತೆಯಲ್ಲಿ ಆಡಂಬರದ ರಾಜ್ಯೋತ್ಸವ ನಡೆಯುತಿತ್ತು. ಅಲ್ಲಿಗೂ ತಪ್ಪದೇ ಇರುತಿತ್ತು ನಮ್ಮ ಹಾಜರಿ. ಮುಖ್ಯ ಆಕರ್ಷಣೆ ಸಿನಿಮಾ ನಟರು ಹಾಗೂ ಅದ್ಭುತವೆನಿಸುವಂತ ಆರ್ಕೇಷ್ಟ್ರಾ.

ಹಾಗೆಯೇ ಒಂದಷ್ಟು ವರ್ಷಗಳ ಕಾಲ ಕನ್ನಡ ಚಿತ್ರ ಕಲಾವಿದರ ಸಂಘವು ಡಾ.ರಾಜ್ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತಿತ್ತು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕಲಾವಿದರೆಲ್ಲ ಸೇರಿ ಒಂದಿಬ್ಬರು ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವದು. ನಮಂಥ ಪೀಚು ಪಡ್ಡೆ ಹುಡುಗರನ್ನು ಯಾರು ಒಳಗೆ ಬಿಟ್ಟಾರು? ಆದರೂ ಒಂದೆರೆಡು ಗಂಟೆ ಅಲ್ಲೇ ನಿಂತು ವಾಚ್‍ಮೆನ್‍ನನ್ನು ಆಸೆಯಗಣ್ಣಿನಿಂದ ನೋಡುತ್ತಾ, ಏನೂ ಮಾಡಿದರೂ ಅವನು ಇನ್ನೂ ಒಳಗೆ ಬಿಡುವುದಿಲ್ಲ ಎಂದು ಖಾತರಿಯಾದಾಗ ಅಲ್ಲಿಂದ ಹೊರಡುತ್ತಿದ್ದೆವು. ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದ ಕಾರ್ಯಕ್ರಮ. ಇಂದಿಗೂ ಆ ಕಾರ್ಯಕ್ರಮ ನಮಂಥ ಸಾಮಾನ್ಯರಿಗೆ ಗಗನಕುಸುಮವೇ.

ಇನ್ನೂ ಎಲ್ಲಾ ಬಡಾವಣೆಗಳ ಪ್ರಮಖ ಸ್ಥಳಗಳಲ್ಲಿ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಹಾಡುಗಳದ್ದೇ ದರ್ಬಾರು. ’ಜೇನಿನ ಹೊಳೆಯೋ’ , ’ಕರುನಾಡ ತಾಯಿ ಸದಾ ಚಿನ್ಪಯಿ’, ಲಾಲಲಲಾ ಲಲಾಲಾ ಎಂದು ಪ್ರಾರಂಭವಾಗುವ ’ಇದೇ ನಾಡು ಇದೇ ಭಾಷೆ’ ಹಾಡುಗಳು ದಿನಪೂರ್ತಿ ಕಂಬದ ಮೇಲಿನ ಹಾರ್ನ್‍ಗಳಲ್ಲಿ ಮೊಳಗುತ್ತಿದ್ದವು. ಇನ್ನೂ ದೂರದರ್ಶನದ ಚಿತ್ರಮಂಜರಿಯಲ್ಲಿ ’ ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು’ ಎನ್ನುತ್ತಾ ಸಾಗುವ ಸುದರ್ಶನ್‍ರ ದರ್ಶನ.

ಇಂದಿಗೂ ಉದ್ಯೋಗದ, ಓದಿನ  ಅನೇಕ ಸಣ್ಣ  ವಿಷಯಗಳನ್ನು ನೆನಪಿಟ್ಟುಕೊಳ್ಳಲು ಪರದಾಡುವ ನನಗೆ ರಾಜ್ಯೋತ್ಸವ ಎಂದಾಕ್ಷಣ ಬಂದ ಸವಿಸ್ತಾರ ನೆನಪುಗಳು ಅದೆಷ್ಟೋ? ಮನಸ್ಸಿಗೆ ಹತ್ತಿರವಾದುದ್ದನು ಜೋಪಾನವಾಗಿ ಎತ್ತಿಟ್ಟು, ಬೇಕಾದಗ ಕೊಡುತ್ತಾ, ಮೆತ್ತೆಲ್ಲವನ್ನು ಕಾಲದ ಕಸದ ಬುಟ್ಟಿಗೆ ಎಸೆಯುವ ಮಹಾ ಚಾಣಕ್ಯ ಈ ’ನೆನಪೆಂಬ ಮಹಾಶಯ’

ಕೇಬಲ್ ಟಿ.ವಿ ಬಂದು ಈ ಎಲ್ಲಾ ಸಂಭ್ರಮಗಳನ್ನು ಕಸಿದುಕೊಂಡಿತೇ ಎಂಬ ಯೋಚನೆ ಸುಳಿದರೂ, ಕಾಲಕ್ಕೆ ತಕ್ಕಂತೆ ಬದಲಾಗುವ ಅನಿವಾರ್ಯಕ್ಕೆ ನಾವೆಲ್ಲಾ  ಒಗ್ಗಿಕೊಳ್ಳಬೇಕಾಗಿದೆ. ಬದಲಾಗದೆ ಉಳಿಯಬೇಕಾಗಿರುವುದು ಕನ್ನಡ ಬಗೆಗಿನ ಪ್ರೀತಿ . ಕನ್ನಡದ ಯುವ ಮನಸ್ಸುಗಳು ಈ ನೆನಪುಗಳನ್ನು ಸದಾ ಜೀವಂತವಾಗಿಸಿಕೊಂಡರೆ ಮಾತ್ರ ತಮ್ಮದೇ ಆದ ಇನಷ್ಟು ನೆನಪುಗಳನ್ನು ಈ ಮಣ್ಣಲ್ಲಿ ಉಳಿಸಬಲ್ಲರು. 

ಪ್ರತಿ ರಾಜ್ಯೋತ್ಸವದ ಸಮಯದಲ್ಲಿ ಮೂಡುವ ಮತ್ತೊಂದು ಪ್ರಶ್ನೆ ಎಂದರೆ ನಮ್ಮ ಚರ್ಚ್‍ಗಳಲ್ಲಿನ ನಮ್ಮ ಕನ್ನಡದ ಪರಿಸ್ಥಿತಿ ಬಗ್ಗೆ. ನಮ್ಮದೇ ಚರ್ಚ್‍ಗಳಲ್ಲಿ ಕನ್ನಡವೆಂಬುದು ಪ್ರೀತಿಯ, ಆಡಳಿತದ, ಪ್ರಧಾನವಾದ ಭಾಷೆ ಆಗಿದೆಯೇ? ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಉತ್ತರಿಸುವ, ಕನ್ನಡವನ್ನು ಎತ್ತರಿಸುವ ಸೌಜನ್ಯ, ಪ್ರೀತಿಯ ಕೊರತೆಯಿಂದಾಗಿ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.


ಕನ್ನಡದ ಯುವ ಮನಸ್ಸುಗಳ ಕನ್ನಡವನ್ನು ಅರಳಿಸುತ್ತಾರೆ ಎಂಬ  ಭರವಸೆಯಲ್ಲೇ ನೆನಪುಗಳನ್ನು ಬೆಚ್ಚಗೆ ಬಚ್ಚಿಟ್ಟುಕೊಳ್ಳೋಣ.

Wednesday, 1 November 2017

ಕನ್ನಡವೆಂದರೆ......

ಕನ್ನಡವೆಂದರೆ.....

ನನ್ನ ಪಾಲಿಗೊಂದು
ಕನವರಿಕೆ
ಮುಗಿಯದ
ಕನವರಿಕೆ....

ಕನ್ನಡವೆಂದರೆ.....
ಮನದೊಳಗಿನ
ಚಿರ ಚಟುವಟಿಕೆ
ನಿಲ್ಲದ
ಚಡಪಡಿಕೆ.


ಕನ್ನಡವೆಂದರೆ.....
ತಂಗಾಳಿಯ
ಬೀಸಣಿಕೆ
ಮಿತಿಯಿಲ್ಲದ
ಹೃದಯವಂತಿಕೆ.

ಕನ್ನಡವೆಂದರೆ.....
ನನ್ನೀಭಾವಗಳ
ವೇದಿಕೆ
ನನ್ನೊಳಗಿನ
ಅಳಿಯದ ನಂಬಿಕೆ….

ಕನ್ನಡವೆಂಬುದು.....
ಆಗದಿರಲಿ
ಮರೀಚಿಕೆ
ಎಲ್ಲರೆದೆಯಲ್ಲಿ
ಉಳಿಯಲಿ
ಕನ್ನಡದ
ಕನವರಿಕೆ..... ಕನವರಿಕೆ