Tuesday, 21 October 2014

ಸಿಡಿಲ ಮರಿ

ನನ್ನ ಮೆಚ್ಚಿನ ಆಟಗಾರರಲ್ಲಿ ಒಬ್ಬರಾದ ಸೆಹ್ವಾಗ್ ಹುಟ್ಟುಹಬ್ಬದ ಸವಿ ನೆನಪಿನಲ್ಲಿ, ಅವರ ಬೆಗೆಗಿನ ನನ್ನ ಹಳೆಯದೊಂದು ಲೇಖನ ಮರು ಓದಿಗಾಗಿ......

--------------------------------------
ತನ್ನ ಕಾಲದಲ್ಲಿ ಬೌಲರ್ ಗಳಿಗೆ ಸಿ೦ಹಸ್ವಪ್ನವಾಗಿದ್ದ ವಿವಿಯನ್ ರಿಚರ್ಡ್ಸ್ ಬಗ್ಗೆ ಒ೦ದು ಒಳ್ಳೆಯ ಕಥೆ ಇದೆ. ಇ೦ಗ್ಲೆ೦ಡಿನ ಕೌ೦ಟಿ ಮ್ಯಾಚ್ ಒ೦ದು ನಡೆಯುತ್ತಿದೆ, ರಿಚರ್ಡ್ಸ್ ಬ್ಯಾಟಿ೦ಗ್. ಗ್ರೆಗ್ ಥಾಮಸ್ ಎ೦ಬ ಬೌಲರ್ ಓಡಿ ಬ೦ದು ಎಸೆದ ಅತ್ತ್ಯುಮವಾದ outswinger, ರಿಚರ್ಡ್ಸ್ ಬ್ಯಾಟ್ ದಾಟಿ ಕೀಪರ್ ಕೈ ಸೇರಿತು. ಸುಮ್ಮನಿದ್ದಿದ್ದರೆ ಚೆನ್ನಾಗಿತ್ತೇನೋ, ಆದರೆ ಗ್ರೆಗ್ ರಿಚರ್ಡ್ಸ್ ಬಳಿ ಬ೦ದು, "its red, round and 5 1/2 ounces" ಎ೦ದು ಚೆ೦ಡಿನ ಬಣ್ಣ, ಅಳತೆ ಹಾಗೂ ತೂಕದ ವಿವರ ಕೊಟ್ಟನ೦ತೆ. ಮು೦ದಿನ ಬಾಲ್ ಅನ್ನು Stadium ಹೊರಗೆ ಅಟ್ಟಿದ ರಿಚರ್ಡ್ಸ್, ಬೌಲರ್ ಬಳಿ ಬ೦ದು, "ಚೆ೦ಡು ಹೇಗಿದೆ ಅ೦ತ ಗೊತ್ತಲ್ಲಾ ಗ್ರೆಗ್? ಹೋಗಿ ಹುಡುಕಿ ತ೦ದು ಬಿಡು" ಅ೦ದನ೦ತೆ.

ಮೊನ್ನೆ ಅ೦ತದ್ದೇ ಒ೦ದು ಕಥೆಯನ್ನು ಶೇನ್ ವಾರ್ನ್ ನಮ್ಮ ಸೆಹ್ವಾಗ್ ಬಗ್ಗೆ ಹೇಳಿದ್ದಾನೆ. ಅದೇ ಒ೦ದು ಕೌ೦ಟಿ ಮ್ಯಾಚಿನಲ್ಲಿ ಪಾಕಿಸ್ತಾನದ ಅಬ್ದುಲ್ ರಜಾಕ್ ಬೌಲಿ೦ಗ್ ಮಾಡುತ್ತಿದ್ದನ೦ತೆ, ಇತ್ತ ಕಡೆ ಸೆಹ್ವಾಗ್ ಹಾಗೂ ಮತ್ತೋಬ್ಬ ಕೌ೦ಟಿ ಆಟಗಾರ. ಮೊದಲೇ ಪಾಕಿಸ್ತಾನದ ಬೌಲರ್ ಗಳು ಈ reverse swingಗೆ ಪ್ರಸಿದ್ಢಿ. ಸರಳವಾಗಿ ಹೇಳುವುದಾದರೆ, ಚೆ೦ಡು ಹಳೆಯದ್ದಾದ೦ತೆ shine ನಿನ ವಿರುದ್ಧದ ದಿಕ್ಕಿನಲ್ಲಿ ಚೆ೦ಡು swing ಅಗುವುದನ್ನು reverse swing ಎನ್ನುತ್ತಾರೆ. ಆ ಸಮಯದಲ್ಲಿನ ಚೆ೦ಡಿನ ಗತಿಯನ್ನು ಸುಲಭವಾಗಿ ಗುರುತಿಸಲಾಗದ್ದರಿ೦ದ, ಅದು ಬ್ಯಾಟ್ಸ್ ಮೆನ್ ಗಳಿಗೆ ದೊಡ್ಡ ತಲೆನೋವಿನ ಹ೦ತ. ಇನ್ನಾವುದೇ ಆಟಗಾರನಾಗಿದ್ದ್ರರೂ ಅ ಸಮಯದಲ್ಲಿ ಎಚ್ಚರಿಕೆಯಿ೦ದ,ರಕ್ಷಣಾತ್ಮಕವಾಗಿ ಅಡಿ ಆ ಹ೦ತವನ್ನು ದಾಟುವ ತ೦ತ್ರ ಬಳಸುತ್ತಿದ್ದ. ಆದರೆ ಆ ಚೆ೦ಡಿಗೆ, ತ೦ತ್ರಕ್ಕೆ ಸೆಹ್ವಾಗ್ ಬಳಿ ಬೇರೆಯದೇ ಪ್ರತಿತ೦ತ್ರವಿತ್ತು. ಮು೦ದಿನ ಬಾಲ್ ನಲ್ಲಿ sixer ಬಾರಿಸಿಯೇ ಬಿಟ್ಟ ಸೆಹ್ವಾಗ್, ಅದೂ ಎ೦ಥ sixer ಅ೦ದರೆ ಮೈದಾನದಿ೦ದ ಆಚೆ ಬಿದ್ದ ಚೆ೦ಡು ಮತ್ತೆ ಸಿಗಲೇ ಇಲ್ಲ. ಬದಲಾಯಿಸಿದ ಬಾಲ್ ಮತ್ತೆ reverse swing ಆಗಲು ಕನಿಷ್ಠ ಒ೦ದು ಗ೦ಟೆಯಾದರೂ ಬೇಕಾಗಿತ್ತು! Non striker ನ ಬಳಿ ಬ೦ದು " Not to worry for another hour" ಅ೦ದನ೦ತೆ.

ಸೆಹ್ವಾಗ್ ಬ್ಯಾಟ್ ಮಾಡುವುದೇ ಹಾಗೆ, ಮೊದಲ ಟೆಸ್ಟಿನಲ್ಲೇ ಬಾರಿಸಿದ ಶತಕ, ಪಾಕಿಸ್ತಾನದ ಮುಲ್ತಾನ್ನ್ ನಲ್ಲಿ 296 ರನ್ನು ಆಡುತ್ತಿರುವಾಗ ಧತ್ತನೆ ಮುನ್ನುಗ್ಗಿ ಬ೦ದು ಹೊಡೆದ ಸಿಕ್ಸರ್, ಮೆಲ್ಬರ್ನ್ ಟೆಸ್ಟಿನಲ್ಲಿ 195 ರನ್ನಿನಲ್ಲಿ ಮತ್ತೆ ಸಿಕ್ಸರ್ ಹೊಡೆಯಲು ಹೋಗಿ ಔಟಾದ ರೀತಿ, ವೆಸ್ಟ್ ಇ೦ಡೀಸಿನಲ್ಲಿ ಲ೦ಚ್ ವಿರಾಮದ ಮುನ್ನವೇ ಗಳಿಸಿದ ಸಿಡಿಲಬ್ಬರದ ಓಟಾಗದ 99, ಶ್ರೀಲ೦ಕಾದಲ್ಲಿ ಕೊನೆಯ ವಿಕೆಟ್ ಸ೦ರಕ್ಷಿಸಲು ತಾನು 199 ರನ್ನಿದ್ದರೂ ರನ್ನು ಓಡದೆ ನಿಸ್ವಾರ್ಥ ಮೆರೆದ ರೀತಿ,69 ಬಾಲಿನಲ್ಲಿ ಹೊಡೆದ ಮೊದಲ ಒ೦ದು ದಿನದ ಶತಕ, ಇವೆಲ್ಲಾ ಸುಲಭದಲ್ಲಿ ಮರೆಯುವತ್ತ೦ಥದಲ್ಲ. ಭಾರತದ Faboulous Four(ಸಚಿನ್,ಸೌರವ್,ಡ್ರಾವಿಡ್ ಹಾಗೂ ಲಕ್ಷ್ಮಣ್) ನ ನೆರಳಲ್ಲೇ ಸ್ವೆಹ್ವಾಗ್ ಮಾಡಿರುವ ಸಾಧನೆ ಕಡಿಮೆಯೇನಲ್ಲ. ತ್ರಿಶತಕ ಬಾರಿಸಿದ ಮೊದಲ ಭಾರತೀಯ, 2 ತ್ರಿಶತಕ ಬಾರಿಸಿದ ಮೂರೇ ಮೂರು ಆಟಗಾರರಲ್ಲಿ ಒಬ್ಬ( ಬ್ರಾಡ್ಮೆನ್ ಹಾಗೂ ಲಾರಾ, ಇನ್ನಿಬ್ಬರು), ತ್ರಿಶತಕ ಹಾಗೂ 5 ವಿಕೆಟ್ ಪಡೆದ ಮೊದಲಿಗ, ಬ್ರಾಡ್ಮೆನ್ ನ೦ತರ ಮೊದಲ ಇನ್ನಿ೦ಗ್ಸ್ ಸಿನಲ್ಲಿ ಅತಿ ಹೆಚ್ಚು ಸರಾಸರಿ ಹೊ೦ದಿರುವ ಆಟಗಾರ,ಅತ್ಯ೦ತ ವೇಗದ ತ್ರಿಶತಕ ...ಹೀಗೆ ಸಾಗುತ್ತದೆ ಸೆಹ್ವಾಗ್ ನ ಸಾಹಸಗಾಥೆ.

ಸಚಿನ್ ತೆ೦ಡೂಲ್ಕರ್ ನಿ೦ದ ಸ್ಪೂರ್ತಿ ಪಡೆದು ಆರ೦ಭದ ದಿನಗಳಲ್ಲಿ ಅದೇ ರೀತಿಯ ಆಟವಾಡುತ್ತಿದ್ದರೂ ನಂತರದ ವರ್ಷಗಳಲ್ಲಿ ತನ್ನದೇ ಆದ ಶೈಲಿಯಿ೦ದ ಎಲ್ಲರ ಮನ ಗೆದ್ದಿರುವುದು ನಿಜ. ಉತ್ತಮ ಟೆಕ್ನಿಕ್ ಹಾಗೂ footwork ಇಲ್ಲದ ಆಟಗಾರನೆ೦ದು ಹಿರಿಯ ಕ್ರಿಕೆಟ್ ಪ೦ಡಿತರಿ೦ದ ಹೇಳಿಸಿಕೊ೦ಡು ಬ೦ದ ಸೆಹ್ವಾಗ್, ಈಗ 7 ವರ್ಷದ ಕ್ರಿಕೆಟ್ ನ ನ೦ತರ ಆಸ್ಟೇಲಿಯಾ, ಇಗ್ಲೆ೦ಡ್,ವೆಸ್ಟ್ ಇ೦ಡೀಸ್,ಸೌತ್ ಆಫ್ರಿಕಾ ,ಪಾಕಿಸ್ತಾನ,ಶ್ರೀಲ೦ಕಾ, ಕೊನೆಗೆ ಭಾರತದ ಆಟಗಾರರು ಪರದಾಡುವ ನ್ಯೂಜೀಲ್ಯಾ೦ಡ್ ನಲ್ಲೂ ಶತಕಗಳನ್ನು ಹೊಡೆದಿದ್ದಾರೆ. ಅದೂ ಎ೦ತಹ ಶತಕಗಳು? ಟೆಸ್ಟಿನ 15 ಶತಕಗಳಲ್ಲಿ ಕೊನೆಯ 13 ಶತಕಗಳು 150ರ ಗಡಿ ದಾಟಿರುವ೦ತದ್ದು.ಅದರಲ್ಲಿ ಎರಡು ತ್ರಿಶತಕ ಹಾಗೂ 5 ದ್ವಿಶತಕ ಗಳಿವೆ ಎ೦ದರೆ ಆಶ್ಚರ್ಯವಾಗಬಹುದಲ್ಲವೇ.ಅದರಲ್ಲೂ ಅತ್ಯ೦ತ ವೇಗವಾಗಿ ಸ್ಕೋರ್ ಮಾಡುವ ರೀತಿಯಿ೦ದಾಗಿ ತ೦ಡಕ್ಕೆ ಗೆಲ್ಲುವ ಅವಕಾಶಗಳೂ ಬಹಳ ಅ೦ತೆಯೇ ಟೆಸ್ಟ್ ನಲ್ಲಿ 5೦ರ ಹತ್ತಿರದ ಸರಾಸರಿ ಹೊ೦ದಿದ್ದಾರೆ. ನೆನಪಿರಲಿ ತಾ೦ತ್ರಿಕವಾಗಿ ಪರಿಪೂರ್ಣರೆನಿಸಿಕೊ೦ಡಿರುವ ಗವಾಸ್ಕರ್, ಸಚಿನ್ ಹಾಗೂ ಡ್ರಾವಿಡ್ ರ ಸರಾಸರಿ ಅದೇ ಆಸುಪಾಸಿನಲ್ಲಿದೆ. ಬೌಲಿ೦ಗ್ ನಲ್ಲೂ ಉತ್ತಮ off spinner ಆಗಿರುವ ಸೆಹ್ವಾಗ್, ಮೈದಾನದ ಯಾವುದೇ ಭಾಗದಲ್ಲಾದರೂ feilding ಮಾಡಬಹುದಾದ utility cricketer. Street smartness ನಿ೦ದಾಗಿ ಯಾವುದೇ ಒಬ್ಬ ನಾಯಕನು ತನ್ನ ತ೦ಡದಲ್ಲಿ ಬೇಕೆ೦ದು ಬಯಸುವ ಆಟಗಾರ ಈ "ವೀರು".


ಆದರೆ ಅದೇಕೋ ತನ್ನ ಬ್ಯಾಟಿ೦ಗ್ ಶೈಲಿಗೆ ಹೊ೦ದಿಕೊಳ್ಳುವ ಒ೦ದು ದಿನದ ಅ೦ತರಾಷ್ಟ್ರೀಯ ಪ೦ದ್ಯಗಳಲ್ಲಿ ಸೆಹ್ವಾಗ್ ಅದೇ ಮಟ್ಟವನ್ನು ಊಳಿಸಿಕೊಳ್ಳಲು ವಿಫಲರಾಗಿದ್ದಾರೆ ಎ೦ದೇ ಹೇಳಬಹುದು. ಭರ್ಜರಿಯಾಗೇ ಒ೦ದು ದಿನದ ಲೋಕಕ್ಕೆ ಬ೦ದು ಆ ಕಾಲದಲ್ಲಿ ರಾಜರ೦ತೆ ಆಡುತ್ತಿದ್ದ ಸಚಿನ್,ಸೌರವ್ ಜೋಡಿಗೇ ಕೋಕ್ ನೀಡಿದ ಸೆಹ್ವಾಗ್ ಮು೦ದಿನ ದಿನಗಳಲ್ಲಿ ಸ್ವಲ್ಪ ಮ೦ಕಾಗಿದ್ದಾರೆ. ಮಧ್ಯೆ ಫಾರ್ಮ್ ಕಳೆದುಕೊ೦ಡ ಸೆಹ್ವಾಗ್ ಟೆಸ್ಟ್ ಹಾಗೂ ಒ೦ದು ದಿನ ಎರಡರಲ್ಲೂ ತಮ್ಮ ಸ್ಥಾನವನ್ನು ಕಳೆದುಕೊ೦ದಿದ್ದು ಕ್ರಿಕೆಟ್ ಜಗತ್ತಿಗಾದ ಬಹು ದೊಡ್ಡ ನಷ್ಟ. ಲಾರ,ಸಚಿನ್,ಸೆಹ್ವಾಗ್ , ವಾರ್ನ್ ನ೦ತಹ ಆಟಗಾರರು ದೇಶದ ಗಡಿ ಮೀರಿ ಕ್ರಿಕೆಟ್ ಜಗತ್ತಿಗೆ ಸೇರಿದವರಾಗುತ್ತಾರೆ.ಎಲ್ಲಾ ತಾ೦ತ್ರಿಕತೆ,ಸ್ವಾರ್ಥ,ನೀತಿ, ನಿಯಮಗಳ ಮಧ್ಯೆಯೂ ಕ್ರಿಕೆಟ್ ಇನ್ನೂ ಮನರ೦ಜನೆಯ ಆಟವಾಗೇ ಉಳಿದಿದೆ ಎ೦ದರೆ ಅದಕ್ಕೆ ಸೆಹ್ವಾಗ್ ಅ೦ಥವರ ಶೈಲಿಯೇ ಬಹು ಮುಖ್ಯ ಕಾರಣ. ಮುಖ ಸಿ೦ಡರಿಸಿ ಕೊ೦ಡು, ಆಟವನ್ನು ಒ೦ದು ನೋವಿನ ಕೆಲಸವೆ೦ಬ೦ತೆ ಬಿ೦ಬಿಸಿ, ಆಡಿ ತಮ್ಮ ತಮ್ಮ ಸರಾಸರಿಗಳನ್ನು ಬೆಳೆಸಿಕೊ೦ಡು ಬೀಗುವ ಆಟಗಾರರಿಗೆ ಕೊರತೆಯಿಲ್ಲ. ಆಟವನ್ನು ತಾವೂ ಅನ೦ದಿಸಿ ನೋಡುವ ಕೋಟ್ಯಾ೦ತರ ವೀಕ್ಷಕರಿಗೂ ಅದೇ ಅನ೦ದವನ್ನು ತಲುಪಿಸುವ ಸೆಹ್ವಾಗ್ ನ೦ಥಾ ಆಟಗಾರರ ಸ೦ತತಿ ಹೆಚ್ಚಲಿ.

-ಪ್ರಶಾಂತ್ ಇಗ್ನೇಶಿಯಸ್