Wednesday 3 August 2011

ಸ್ವಾತಂತ್ರ್ಯ ನಡಿಗೆಗೆ ಆದರ್ಶ ಹೆಜ್ಜೆಗಳ ಸಾರಥ್ಯ..!


              ಸುಮಾರು ಎರಡು ಸಾವಿರಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶಕ್ಕೆ ಈಗ 63 ನೇ ಸ್ವಾತಂತ್ರ್ಯೋತ್ಸವ. ಇದು ಯಾವ ರೀತಿಯಲ್ಲಿ ತಾಳೆ ಆದೀತು!? ದ್ವಾಪರಯುಗದ ಪುರಾಣಗಳು ನಡೆದಿರುವ ಭರತಖಂಡದಲ್ಲಿ. ಹರಪ್ಪ-ಮಹೇಂಜೋಧಾರೋ ನಾಗರಿಕತೆ ಇದ್ದ ಸಿಂಧೂಬಯಲಿನಲ್ಲಿ. ಭೂಖಂಡದಲ್ಲಿ ಅತೀಹೆಚ್ಚು ದೇವಾನುದೇವತೆಗಳಿರುವ ತವರೂರಿನಲ್ಲಿ, ಈ ಸ್ವಾತಂತ್ರ್ಯದ ಕಹಳೆ ಊದಿದ್ದು ಯಾವ ಉದ್ದೇಶಕ್ಕಾಗಿ? ಅಷ್ಟಕ್ಕೂ ಈ ಸ್ವಾತಂತ್ರ್ಯ ಅಂದರೇ ಏನು? ಎಂಬ ಗೊಜಲುಗೊಜಲು ಪ್ರಶ್ನೆಗಳಿಗೆ  ಇತಿಹಾಸ ಓದಿಕೊಂಡಿರುವ ಒಬ್ಬ ವಿಧ್ಯಾರ್ಥಿಯಿಂದ ವಿವರವಾದ ಉತ್ತರ ಸಿಗಬಹುದು!. ಆದರೆ, ಇಲ್ಲಿ "ಸ್ವಾತಂತ್ರ್ಯ" ದ ಆಂತರ್ಯ ಅಧ್ಯಯನವಾಗಬೇಕಾಗಿದೆ. ಅದು ಯಾವುದೆ ವಿಶ್ವವಿದ್ಯಾಲಯದಿಂದಾಗಲಿ, ವಿಧ್ಯಾಸಂಸ್ಥೆಗಳಿಂದಾಗಲಿ ಅಲ್ಲ. ಅದಕ್ಕೆ ಬದಲು ನಮ್ಮೊಳಗೆ, ನಮ್ಮ ನಡುವೆ, ನಮ್ಮ ವೃತ್ತಿಯಲ್ಲಿ, ನಮ್ಮಕ್ರಿಯೆಗಳಲ್ಲಿ, ನಮ್ಮಭಾವನೆಗಳಲ್ಲಿ, ಮನೆಗಳಲ್ಲಿ, ಊರಿನಲ್ಲಿ, ನಮ್ಮನ್ನಾಳುವ ನಾಯಕರುಗಳಲ್ಲಿ ಈ ಸ್ವಾತಂತ್ರ್ಯದ ಅರ್ಥ ಹುಡುಕಬೇಕಾಗಿದೆ. ಬಂಧಿತರಿಗೆ ಬಿಡುಗಡೆ, ಬಂಧನದಿಂದ ಮುಕ್ತಿ ಇಂತಹ ಹಲವು ಉಕ್ತಿಗಳು ಈ ಸ್ವಾತಂತ್ರ್ಯಕ್ಕೆ ಅರ್ಥಕೊಡಬಲ್ಲವಾದರು, ಇಲ್ಲಿ ನಾವು ಅರ್ಥೈಸಿಕೊಳ್ಳಬೇಕಾಗಿರುವುದೇ ಬೇರೆ!. ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥ ಹುಡುಕುತ್ತಾ ಹೋದರೆ ಈ ರಾಜಕೀಯ ನೆಲೆಗಟ್ಟಿನಲ್ಲಿ, ಸಾಮಾಜಿಕ ನೆಲೆಗಟ್ಟಿನಲ್ಲಿ ಮಾತ್ರವಲ್ಲ ಅಧ್ಯಾತ್ಮಿಕ ನೆಲೆಗಟ್ಟಿನಲ್ಲೂ ತನ್ನ ಗಾತ್ರ ಹೆಚ್ಚಿಸಿಕೊಂಡಿರುವುದ್ದನು ನೋಡಬಹುದು.
 
          ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ  ಮಹನೀಯರನ್ನೆ ವಿಶ್ಲೇಷಿಸಿ ನೋಡುವುದಾದರೆ ಅವರಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಮಹಾತ್ಮ ಗಾಂಧೀಜಿ. ಎಲ್ಲರ ಗುರಿ ಒಂದೇ ಆಗಿತ್ತು.  ಅದು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವುದು, ಆದರೆ ಅದಕ್ಕೂ ಮೊದಲು ಕೆಲವು ಸಿದ್ದಾಂತಗಳನ್ನು ರೂಢಿಸಿಕೊಂಡು ಶಿಸ್ತು, ಶ್ರಮ, ಸಂಯಮ, ಪ್ರಾಮಾಣಿಕತೆ  ಮತ್ತು ಸ್ವಾವಲಂಬನೆಯಂತಹ ಮೌಲ್ಯಧಾರಿತ ಮಾರ್ಗದಿಂದ ದೇಶದ ಬಿಡುಗಡೆಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದವರು ಮಾತ್ರ ಕೇವಲ ಗಾಂಧೀಜಿ.
 
        ಇವರೊಬ್ಬ ದಿಟ್ಟ ಹೊರಟಗಾರ, ತಮ್ಮ ಹೋರಾಟದ ಅವಿಭಾಜ್ಯವಾಗಿ, ಸತ್ಯ, ನಿಷ್ಟೆ, ಅಹಿಂಸೆಯಂತಹ ಸದ್ಗುಣಗಳಿಗೆ ತಮ್ಮಲ್ಲಿ ಜಾಗಮಾಡಿಕೊಟ್ಟರು. ಅಂದರೆ ಸುಳ್ಳುಕಟ್ಟುಪಾಡುಗಳಿಂದ ಸತ್ಯಕ್ಕೆ ಸ್ವಾತಂತ್ರ್ಯ, ಒತ್ತಡ, ಸ್ವಾರ್ಥಗಳಿಂದ, ಪ್ರಾಮಾಣಿಕತೆಗೆ ಸ್ವಾತಂತ್ರ್ಯ, ಕೌರ್ಯ, ಮತ್ಸರಗಳಿಂದ, ಶಾಂತಿಗೆ ಸ್ವಾತಂತ್ರ್ಯಗಳಿಸಿಕೊಂಡರು. ಇಂತಹ ಗುಣಗಳಿಂದ ದಿಟ್ಟತನ ಬೆಳೆಸಿಕೊಂಡರು. ಇಂಥ ಗುಣಗಳನ್ನೊಂದಿರುವ ನಾಯಕನಿದ್ದರೆ ಯಾವ ಕುತಂತ್ರಿಗಳು ತಾನೆ ಎದುರು ನಿಲ್ಲಲು ಸಾಧ್ಯ. ಒಂದು ಯುದ್ಧವನ್ನು ಕತ್ತಿ ಕಠಾರಿ, ಬಾಂಬು ಬಂಧೂಕುಗಳಿಲ್ಲದೇ ಗೆದ್ದು ಬಂದ ಏಕೈಕ ವ್ಯಕ್ತಿ ಗಾಂಧೀಜಿ. ಅದು ಸಾಧ್ಯಾವಾದದ್ದು ತನ್ನೊಳಗೆ ಆದ ಸ್ವಾತಂತ್ರ್ಯದಿಂದ.  ಈ ದೇಶದ ಸಾತಂತ್ರ್ಯೋತ್ಸವ   ಸಂಭ್ರಮದ ಜೊತೆಗೆ, ಆ ಎಲ್ಲ ಆದರ್ಶ ಗುಣಗಳಿಗೂ ನಮ್ಮೊಳಗೆ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟರೆ ಅದು ನಿಜ ಅರ್ಥದಲ್ಲಿ ಸ್ವಾತಂತ್ರ್ಯ...!
ಯೇಸು ಸಹ ತನ್ನ ಗತಕಾಲದಲ್ಲಿ ಇದೆ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದರು. ಕೇವಲ ಸಮಾಜದ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ತಮ್ಮ ಜೀವನವನ್ನು ಬಂಧಿಸಿಕೊಂಡಿದ್ದ ಜನರಿಗೆ, ಈ ಸಂಕುಚಿತ ಬದುಕಿನಿಂದ ಹೊರಬನ್ನಿ ಎಂದು ಕರೆನೀಡಿದರು. ಅಜ್ಞಾನ ಶಾಪವಲ್ಲ ಅದು ನಿಮ್ಮ ಮುಗ್ಧತನವನ್ನು ಮುಚ್ಚಿಕೊಂಡಿರುವ ಕರಿ ಕಂಬಳಿ. ಬರಿ ಕಣ್ಣಿಗೆ ಕಾಣದ ಸ್ವಾತಂತ್ರ್ಯ ಬದುಕನ್ನು ಜ್ಞಾನ ಎಂಬ ದೀವಿಗೆ ಸಹಾಯದಿಂದ ನೋಡಿ ಎಂದು ಸಾರಿದರು.
 
ಇನ್ನೇನು ಬರುವ ಸ್ವಾತಂತ್ರ್ಯ ದಿನಾಚರಣೆಯ ರಜೆಗಾಗಿ ಕಾಯುತಿದ್ದೇವೆ. ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ಅದನು ಗಳಿಸಿಕೊಳ್ಳಲ್ಲು ಬಳಕೆಯಾದ ಮೌಲ್ಯಗಳನ್ನು ನಮ್ಮೊಳಗೆ ಆಚರಿಸೋಣ ಹಾಗೂ ಅಳವಡಿಸಿಕೊಳ್ಳೋಣ.

-ಸಂತೋಷ್ ಇಗ್ನೇಷಿಯಸ್
Read more!