Friday 30 June 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 11 - ಕ್ಲಾಸಿಕಲ್ ಗೀತೆಗಳು

ಫಾ.ಚಸರಾರವರ ಗೀತೆಗಳಲ್ಲಿ ಆರಂಭದ ಕ್ಲಾಸಿಕಲ್ ಗೀತೆಗಳದ್ದೇ ಒಂದು ರೀತಿಯ ಮೆರಗು. ಈ ಕ್ಲಾಸಿಕಲ್ಲ್ ಗೀತೆಗಳಿಗೆ ಕನ್ನಡದಲ್ಲಿ ಏನು ಕರೆಯಬೇಕೋ ತಿಳಿಯುತ್ತಿಲ್ಲ. ಚಸರಾರವರ ಪ್ರತಿ ಧ್ವನಿಸುರಳಿಯಲ್ಲೂ ಈ ರೀತಿಯ ಕ್ಲಾಸಿಕಲ್ ಗೀತೆಗಳು ಇರಲೇಬೇಕೇನೋ ಎಂಬಷ್ಟು ನಂಟು.

ಈ ರೀತಿಯ ಗೀತೆಗಳ ಸಾಲೂ ಚಿಕ್ಕದೇನಲ್ಲ. ’ಓಂ ಘಂಟಾನಾದಂ’, ’ಸ್ಪೂರ್ತಿಯಾಗಲಿ ಕ್ರಿಸ್ತ’, ’ಬೆಳಕು ಹರಿಯಿತು’ ’ಜನತೆಯ ಬದುಕಿನ’ ಮುಂತಾದ ಗೀತೆಗಳು, ಒಂದಕ್ಕಿಂತ ಒಂದು ಶ್ರೇಷ್ಟ ಗೀತೆಗಳು ಅವರ ಬತ್ತಳಿಕೆಯಿಂದ ಮೂಡಿ ಬಂದಿದೆ. ಇವು ಜನಪ್ರಿಯ ಗೀತೆಗಳೂ ಹೌದು.

ಎಷ್ಟು ಜನಪ್ರಿಯವೆಂದರೆ ಕಳೆದ 2 ದಶಕಗಳಲ್ಲಿ ಯಾವುದೇ ಗಾನಸ್ಪರ್ಧೆ ನಡೆದರು ಅಲ್ಲಿ ಸುಮಾರು ಗೀತೆಗಳು ಚಸರಾರವರ ಈ ಕ್ಲಾಸಿಕಲ್ ಗೀತೆಗಳೇ ಆಗಿರುತ್ತಿದ್ದವು. ಇನ್ನಾವುದೇ ಕ್ರೈಸ್ತ ಕಾರ್ಯಕ್ರಮಗಳಾಗಲಿ ಅಥವಾ ಕ್ರೈಸ್ತ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ಇವೇ ಗೀತೆಗಳು ಪ್ರಾರ್ಥನಾ ಗೀತೆಗಳಾಗಿರುತ್ತಿದ್ದವು. ಸ್ಪಂದನ ಧ್ವನಿಸುರಳಿಯ ’ಓಂ ಘಂಟಾನಾದಂ’ ಗೀತೆಯಿಂದ ಪ್ರಾರಂಭವಾದ ಈ ಗೀತೆಗಳ ಅನುಬಂಧ ಇತ್ತೀಚಿನ ಧ್ವನಿಸುರಳಿಗಳವರೆಗೂ ಅವಿರತವಾಗಿ ಮುಂದುವರಿದಿತ್ತು. ಈ ಸಂಚಿಕೆಯಲ್ಲಿ ನನ್ನ ಕೆಲವು ಮಚ್ಚಿನ ಗೀತೆಗಳ ಬಗ್ಗೆ ಮೆಲಕು ಹಾಕೋಣ. 

ಸ್ಪಂದನ ಧ್ವನಿಸುರಳಿಯ ’ಓಂ ಘಂಟಾನಾದಂ.. ಪ್ರೀತಿಯ ಸ್ವಾಮಿಗೆ ನೂತನ ಆಲಯ ’ ಫಾ.ಚಸರಾರವರ ಅತ್ತ್ಯುತ್ತಮ ಹಾಡುಗಳಲ್ಲಿ ಒಂದು ಎನ್ನಬಹುದು. ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಇಂದಿಗೂ ಇಂದೇ ಬಂದ ಹಾಡೇನೋ ಎಂಬಷ್ಟು ತಾಜಾ. ಸತ್ಯ, ನ್ಯಾಯ, ಶಾಂತಿಯ ಮಂತ್ರಗಳು ಈ ಹಾಡಿನ ಮೂಲ ಬಿಂದು. ’ಸತ್ಯ’ ಎಂಬ ಪದ ಈ ಹಾಡಿನಲ್ಲಿ ೯ ಬಾರಿ ಇಲ್ಲಿ ಬಳಕೆಯಾಗಿದೆ ಎಂಬುದು ಮಾಹಿತಿಗಷ್ಟೆ.

ಇನ್ನೂ ’ಸ್ಪೂರ್ತಿಯಾಗಲಿ ಕ್ರಿಸ್ತ’ದ ಬಗ್ಗೆ ಈಗಾಗಲೇ ವಿಸ್ತೃತವಾಗಿ ಬರೆದಾಗಿದೆ. ಈ ಗೀತೆ ಕೇವಲ ಚಸರಾರವರ ಗೀತೆಗಳಲ್ಲಿ ಮಾತ್ರವಲ್ಲದೆ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳಲ್ಲಿ ಅತ್ತ್ಯುತ್ತಮ ಗೀತೆಗಳಲ್ಲಿ ಒಂದು. ’ಬೆಳಕು ಹರಿಯತು ಭುವಿಯ ಕಡೆಗೆ’ ಎಂದಿನಂತೆ ಸುಮಧುರ ಶ್ಲೋಕದಿಂದ ಆರಂಭವಾಗಿ ನಿಧಾನವಾಗಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ’ಬೆಳಕಿನ ಮೂಲದತ್ತ’ ಸಾಗುತ್ತದೆ. ಬಿ.ಆರ್.ಛಾಯರವರ ಗಾಯನ ಮಧುರ ಅನುಭೂತಿಯನ್ನು ನೀಡುತ್ತದೆ. ಸುಮಾರು ಒಂದುವರೆ ದಶಕಗಳ ಕಾಲ ’ಬೆಳಕು ಹರಿಯಿತು’ಯಿಲ್ಲದ ಕನ್ನಡ ಗಾಯನ ಸ್ಪರ್ಧೆ ಇಲ್ಲವೇ ಇಲ್ಲ.

ಚಸರಾರವರ ಗೀತೆಗಳ ಬಗ್ಗೆ ಬರೆಯುವಾಗ ’ಸ್ಮೃತಿ’ ಧ್ವನಿಸುರಳಿಯ ’ದೇವಾ ನನ್ನ ಮೊರೆಯ ಕೇಳು’ ಬಗ್ಗೆ ಉಲ್ಲೇಖಿಸದಿದ್ದರೆ, ಬರಹ ಅಪೂರ್ಣ. ಪ್ರಮುಖ ಗಾಯನದ ಜೊತೆ ಕೋರಸ್ ಹೇಗೆ ಬಳಕೆಯಾಗಬಹುದು, ಬಳಕೆಯಾಗಬೇಕು ಎನ್ನುವುದಕ್ಕೆ ಈ ಗೀತೆ ಉದಾಹರಣೆ. ಚರಣದಲ್ಲಿ “ದೇವಾ ಬಾರೆಯಾ ..ಕ್ರಿಸ್ತ ಬಾರೆಯ’ ಯ ನಡುವೆ ಬರುವ ’ಓಂ ನಮೋ ನಮ:’ ಎಂಬ ಗಾಯನ ಹಾಗೂ ಕೋರಸ್ ನ ಜುಗಲ್ ಬಂಧಿ ಅತ್ಯಂತ ಸುಂದರ.

’ಇಹದ ಬಂಧನ ಮುಗಿವ ಮೊದಲೇ ಜೀವ ಹದಗೊಳಿಸು’ ಎಂಬ ಸಾಲುಗಳು ಚಸರಾರವರ ಕೊನೆಯ ದಿನಗಳನ್ನು ನೆನಪಿಸುತ್ತದೆ. ’ಅಲ್ಲು ಸಲ್ಲಲ್ಲು ಇಲ್ಲೂ ಸಲ್ಲುವ ರೂಪ ಅನುಗೊಳಿಸು’ ಎನ್ನುವುದು ಅವರ ಇಡೀ ಜೀವನಕ್ಕೆ ಅನ್ವರ್ಥವಾಗಿದೆ. ಅವರ ಈ ಟ್ರೇಡ್ ಮಾರ್ಕ್ ಸಾಲುಗಳಲ್ಲಿ ಗಾಯನ ಅತಿ ಮಧುರ. ಹಾಡು ಮುಗಿದ ಮೇಲೂ ’ಓ ನಮೋ ನಮ:’ದ ಗುನುಗು ಸುಲಭದಲ್ಲಿ ಮರೆಯಾಗುವುದಿಲ್ಲ.
ಸಮಿಶ್ರ ಧ್ವನಿಸುರಳಿಯ ’ಜೀವನ ಸಂಸ್ಕರಿಸೋ’ ಮತ್ತೊಂದು ಸುಂದರ ಗೀತೆ. ರಾಜೇಶರ ಉತ್ತಮ ಗಾಯನ ಗೀತೆಯನ್ನು ಎತ್ತರಕ್ಕೇರಿಸುತ್ತದೆ. ಆರಂಭದ ಶ್ಲೋಕ ಒಂದಷ್ಟು ದೀರ್ಘವಾಗಿಯೇ ಇದೆ. ಪಲ್ಲವಿ ಹಾಗೂ ಚರಣದ ನಡುವಿನ ವಾದ್ಯ ಸಂಯೋಜನೆ ವಿಭಿನ್ನವಾಗಿ ಮನಸೆಳೆಯುತ್ತದೆ. ಸಾಹಿತ್ಯ ಎಂದಿನಂತೆ ಸೂಪರ್. 

ಹಾಗೆಯೇ ಸಂಭಾವ್ಯದ ’ಸಾಗರದಲೆಗೆ ಸೆಲೆಗಳ ಬರವೇ’ ಕೂಡ ಅತ್ಯಂತ ಮಧುರ ಗೀತೆ. ಆರಂಭದಲ್ಲಿನ ಶ್ಲೋಕ ಹಾಗೂ ಸ್ವರಾಲಾಪನೆಗಳಲ್ಲೇ ಕೇಳುಗ ಸಂಗೀತದಲ್ಲಿ ತೇಲಿ ಹೋಗುವಂತ ರಾಗ ಸ್ವರ ಸಂಯೋಜನೆ ಇಲ್ಲಿದೆ. ಶ್ಲೋಕ ಹಾಗೂ ಸ್ವರಗಳು ಅದೆಷ್ಟು ದೀರ್ಘವಾಗಿದೆ ಎಂದರೆ ಹಾಡಿನ ಆರಂಭದ ಪಲ್ಲವಿ ಶುರುವಾಗುವುದೇ ಎರಡುವರೆ ನಿಮಿಷದ ನಂತರ.

’ಸಾಗರದಲೆಗೆ ಸೆಲೆಗಳ ಬರವೇ? ಕೇಳು ನೀ ಮನವೇ ವರಗಳು ಸಿಗವೇ’ ಎಂಬ ಆರಂಭಿಕ ಸಾಲುಗಳೇ ಸುಂದರ. ಹಂಸಲೇಖರ ಒಂದು ಗೀತೆಯಲ್ಲಿ ’ ಸಾಗರವೇ ಸಾಗರವೇ..ದಣಿವೇ ಇಲ್ಲ ನಿನ್ನ ಅಲೆಗೆ’ ಎಂಬ ಸಾಲುಗಳು ಇಲ್ಲಿ ನನಪಾಗುತ್ತವೆ. ’ಈ ಭುವಿಯ ಅಣು ಅಣುಗೆ ಸೌಹಾರ್ದ ತಾ’ ಎನ್ನುವಂತ ಅದ್ಭುತ ಸಾಲುಗಳು ಇಲ್ಲಿವೆ.


ಹನಿ ಧ್ವನಿ ಸುರಳಿಯ ’ಸರ್ವೇಶ್ವರನೇ ಸೃಷ್ಟಿಯು ನಿನ್ನದೇ’ ಗೀತೆ ಫಾ.ಫೆಲಿಕ್ಸ್ ರವರ ಗೀತೆಗಳಲ್ಲಿನ ಆರ್. ಎನ್. ಜಯಗೋಪಲ್ ರವರ ಸಾಹಿತ್ಯವನ್ನು ನೆನಪಿಸುತ್ತದೆ. ಆರಂಭಿಕ ಶ್ಲೋಕ, ಸ್ವರಗಳು, ಅಲಾಪನೆ, ಕೋರಸ್ ಗಳ ಸುಂದರ ಸಮ್ಮಿಲ್ಲನದ ಚಸರಾರವರ ಗೀತೆಗಳ ಪರಂಪರೆಯ ಮುಂದುವರಿಕೆಯನ್ನು ಸಾಂಗತ್ಯದ ’ಆ ಸ್ವರ್ಗಕ್ಕೆ ಈ ಭೂಮಿಗೆ’ ಯಲ್ಲಿ ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ ಅವರ ಗೀತೆಗಳಲ್ಲಿ ಅತ್ತ್ಯುತ್ತಮ ಎನ್ನಬಹುದಾದ ಗೀತೆ. ಮತ್ತೆ ದೀರ್ಘವಾದ, ಅತ್ಯಂತ ಸುಮಧುರ ಶ್ಲೋಕದಿಂದ ಆರಂಭವಾಗಿ, ಸ್ವರಗಳಲ್ಲಿ ಮುಂದುವರಿಯುವ ಈ ಗೀತೆ ರಾಜೇಶರ ಸುಶ್ರಾವ್ಯ ಗಾಯನದಿಂದ ಆಪ್ತವಾಗುತ್ತದೆ.


ಇಲ್ಲಿ ಚಸರಾರವರ ಸಾಹಿತ್ಯ ಅವರ ಇತರ ಹಳೆಯ ಗೀತೆಗಳ ಸಾಹಿತ್ಯಕ್ಕಿಂತ ಸಂಪೂರ್ಣ ಭಿನ್ನ. ಇಲ್ಲಿ ಅವರ ಸಾಹಿತ್ಯ ಹೊಸ ಮಜಲುಗಳನ್ನು ಮುಟ್ಟಿದೆ. ಸ್ಟೀವನ್‍ರವರ ವಾದ್ಯ ಸಂಯೋಜನೆ ಉತ್ತಮವಾಗಿ ಮೂಡಿ ಬಂದಿದೆ. ಋತುಬಿಂದು, ಋತು ಸಿಂಧು, ಒಳ ಬಂಧ ನೀ ಎಂಬಂಥ ಪದಗಳು ಬಳಕೆಯಾಗಿರುವ ಸಂದರ್ಭಗಳು ಚಿಂತನಾರ್ಹ.   

ಈ ಮೇಲಿನ ಹಾಡುಗಳು ಕೆಲವು ಉದಾಹರಣೆಗಳಷ್ಟೇ. ಇನ್ನೂ ಅನೇಕ ಗೀತೆಗಳಿವೆ. ಚಸರಾರವರು ಹೊಸಪದಗಳ ಪ್ರಯೋಗ ಮಾಡಿದಾಗ, ಇವು ಚಿತ್ರ ಗೀತೆಗಳಂತಿವೆ, ದೇವಾಲಯಗಳಲ್ಲಿ ಹಾಡಲು ಮುಜುಗುರ ಎಂಬಂಥ ಮಾತುಗಳಿದ್ದವು. ಆದರೆ ಮೇಲೆ ಉದಹರಿಸಿದ ಗೀತೆಗಳು ಯಾವುದೇ ಗಾಂಭಿರ್ಯಭರಿತ ಸಾಹಿತ್ಯಕ್ಕೆ ಕಮ್ಮಿಯಿಲ್ಲ. ಸಂಗೀತ ಹಾಗೂ ವಾದ್ಯ ಸಂಯೋಜನೆ ಕೂಡ ಉತ್ಕೃಷ್ಟ ಮಟ್ಟದ್ದೇ.

ಪ್ರಾರಂಭದಲ್ಲೇ ’ಸ್ಪೂರ್ತಿಯಾಗಲಿ ಕ್ರಿಸ್ತ’ ಎಂಬಂಥ ಗೀತೆಗಳ ಸಾಹಿತ್ಯ ಉನ್ನತ ಮಟ್ಟದಲ್ಲಿದ್ದರೂ, ವರ್ಷಗಳು ಕಳೆದಂತೆ ಸಾಹಿತ್ಯ ಮತ್ತಷ್ಟು ಪಕ್ವಗೊಳ್ಳುತ್ತಲೇ ಸಾಗುತ್ತಿತ್ತು. ಅದಕ್ಕೆ ’ಆ ಸ್ವರ್ಗಕ್ಕೆ ಈ ಭೂಮಿಗೆ’ ಗೀತೆ ಉತ್ತಮ ಉದಾಹರಣೆಯಾಗಿದೆ. ಅವರ ಇತ್ತೀಚಿನ ಸಾಹಿತ್ಯದ ’ಅಮ್ಮನ ಮಡಿಲು’ ಧ್ವನಿ ಸುರಳಿಯಲ್ಲಿನ ಕೆಲವು ಹಾಡುಗಳ ಸಾಲುಗಳಲ್ಲಿ ವಚನ ಸಾಹಿತ್ಯದ ಚಿಂತನೆಗಳು ಮೇಲ್ಪದರದಲ್ಲಿ ಕಾಣಸಿಗುತ್ತವೆ.

ಚಸರಾರವರ ಮೇಲಿನ ಗೀತೆಗಳ ದೊಡ್ಡ ಹೆಗ್ಗಳಿಕೆ ಇರುವುದು ಅವುಗಳ ಸಾಹಿತ್ಯ, ಸಂಗೀತದ ಗುಣಮಟ್ಟ ಹಾಗೂ ಪ್ರಯೋಗಶೀಲತೆಯಲ್ಲಿ ಮಾತ್ರವಲ್ಲ. ಅದಕ್ಕೆ ಮೀರಿದ, ಜನ ಸಾಮಾನ್ಯರನ್ನು ಅವು ಸ್ಪರ್ಷಿಸಿದ ಬಗೆಯಲ್ಲಿ. ಈ ಹಾಡುಗಳು ಪಂಡಿತರ ಎತ್ತರದ ಗೋಪುರಗಳಲ್ಲಿ ಉಳಿಯದೆ ಜನ ಸಾಮಾನ್ಯರ ಎದೆಯಲ್ಲಿ ಗುನುಗಿಸಿಕೊಂಡ ಗೀತೆಗಳಾದವು.

ಈ ಮಾತು ಏಕೆ ಹೇಳಬೇಕೆಂದರೆ, ಈ ಹಾಡುಗಳು ಸುಲಭದಲ್ಲಿ ಹಾಡುವಂಥದೇನ್ನಲ್ಲ. ಸ್ವಲ್ಪ ಮಟ್ಟಿಗಿನ ಪ್ರಯತ್ನ, ಅಭ್ಯಾಸ, ಶ್ರಮ ಎಲ್ಲವೂ ಬೇಕಾಗಿದ್ದ ಈ ಹಾಡುಗಳನ್ನು ಕನ್ನಡ ಜನತೆ ಪ್ರೀತಿಯಿಂದಲೇ ಅಪ್ಪಿಕೊಂಡಿತು. ಒಂದು ಹಾಡು ಭಾವಾಂತರಂಗದಲ್ಲಿ ಹುಟ್ಟಿ ಕೇಳುಗನ ಕಿವಿ ತಲುಪಿ ಹೃದಯ ತುಂಬಿಕೊಳ್ಳುವ ಒಂದು ಸಂಪೂರ್ಣ ವೃತ್ತದ ಪರಿಪೂರ್ಣತೆಯನ್ನು, ಈ ಹಾಡುಗಳು ಪಡೆದುಕೊಂಡವು.  

- ಪ್ರಶಾಂತ್ ಇಗ್ನೇಶಿಯಸ್