Wednesday, 21 November 2012

ಮಕ್ಕಳಿರಲವ್ವ ಮನದ ತುಂಬಾ.....ಮೊದಲೆಲ್ಲಾ ನಮಗೆ ಗೊತ್ತಿದ್ದು ಈ ಮಕ್ಕಳ ದಿನಾಚರಣೆಯೊಂದೇ,Children's day. ಅದು ಬಿಟ್ಟರೆ ಕಾರ್ಮಿಕರ ದಿನ. ಈಗಂತೂ ವಿವಿಧ ಡೇ ಗಳದ್ದೇ ಭರಾಟೆ.ಮೆಲ್ಲಗೆ ಬಂದ ವ್ಯಾಲೆಂಟೆನ್ಸ್ ಡೇ ಜೊತೆಗೆ, ಮದರ್ಸ್ ಡೇ, ನಂತರ ಫಾದರ್ಸ್ ಡೇ, ಫ್ರೆಂಡ್ ಶಿಪ್ ಡೇ ಇತ್ಯಾದಿಗಳು ಬಂದು ಈ ಚಿಲ್ದ್ ರ್ನ್ಸ್ ಡೇ ಯಾಕೋ ಸ್ವಲ್ಪ ಕಳೆಗುಂದಿದಂತೆ ಕಾಣುತ್ತಿದೆ. ಎಲ್ಲಾ ಡೇಗಳೂ ತನ್ನದೇ ಆದ ವಾಣಿಜ್ಯ,ವ್ಯಾಪಾರದ ನೆಲೆಯಲ್ಲಿ ಬೆಳೆದು ನಿಂತಿದೆ. ಆ ದಿನಗಳಂದು ಉಡುಗೊರೆಗಳು, ಗ್ರೀಟಿಂಗ್ ಕಾರ್ಡುಗಳು ಮಾರಾಟದ ಅಂಗಡಿ, ಮಳಿಗೆಗಳಲ್ಲಿ ಕಂಗೊಳಿಸ ತೊಡಗಿದರೆ, ಹೋಟೆಲ್ ಗಳು ಪೈಪೋಟಿಯ ಮೇಲೆ ವಿಶೇಷ ತಿನಿಸುಗಳನ್ನು ತಯಾರು ಮಾಡಿ, ತಾಯಂದಿರ ದಿನದಂದು ತಾಯಿಯೊಡನೆ ಬಂದರೆ ರಿಯಾಯಿತಿ, ವ್ಯಾಲೆಂಟೆನ್ಸ್ ದಿನದಂದು ಜೋಡಿಯಾಗಿ ಬಂದರೆ ಉಡುಗೊರೆ ಹೀಗೆ ಅನೇಕ ಸರ್ಕಸ್ ಗಳನ್ನು ಮಾಡುತ್ತಾ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತವೆ, ವ್ಯಾಲೆಂಟೆನ್ಸ್ ದಿನದ ಸಡಗರವಂತೂ ಹೇಳತಿರದು. 

ಈಗ ವಾಣಿಜ್ಯ ವ್ಯಾಪರೀಕರಣ ಮಕ್ಕಳನ್ನು ಬಿಟ್ಟಿಲ್ಲ. ಇಂದು ನಮ್ಮ ನಿಮ್ಮ ನಡುವಿನ ಮಕ್ಕಳು ಕೇವಲ ಮುದ್ದು ಬೊಂಬೆಗಳಲ್ಲ, ಮಾತಿನ ಗಿಳಿಗಳಲ್ಲ, ಮುಗ್ದತೆಯ ಪ್ರತಿಬಿಂಬ ಮಾತ್ರವಲ್ಲ. ಅವು ಸಾವಿರಾರು ಕೋಟಿಗಳನ್ನು ತರಬಲ್ಲ ಗ್ರಾಹಕರು. ಒಂದು ವಾಣಿಜ್ಯ ಸಂಸ್ಥಯ ಅಂಕಿ ಅಂಶಗಳ ಅಂದಾಜಿನ ಪ್ರಕಾರ 2015 ರ ವೇಳೆಗೆ ಭಾರತದ ಮಕ್ಕಳ ಆಟಿಕೆಗಳ ಒಟ್ಟು ವ್ಯಾಪರದ ಮೊತ್ತ  13,000 ಕೋಟಿಗಳನ್ನು ದಾಟುವ ಸಂಭವವಿದೆಯಂತೆ. ಸಂಭವವಲ್ಲ ಖಂಡಿತ ಎಂದು ವಾಣಿಜ್ಯ ತಜ್ಞರು ಖಚಿತ ಪಡಿಸುತ್ತಾರೆ. ಅಂದರೆ ನಾವು ನೀವು ಸಣ್ಣ ಪುಟ್ಟ ಅಂಗಡಿ, ಶಾಪಿಂಗ್ ಮಾಲ್ ಗಳಲ್ಲಿ ಕಾಣುವ ಒಂದು ಸಣ್ಣ ಕಾರಿನಿಂದ ಹಿಡಿದು ಬೆಲೆ ಬಾಳುವ ಆಟದ ಸಾಮಾನುಗಳ ಒಟ್ಟು ವ್ಯವಹಾರವನ್ನು ಈಗ ಸಾವಿರ ಕೋಟಿಗಳ ಲೆಕ್ಕದಲ್ಲಿ ಏಣಿಸಲಾಗುತ್ತಿದೆ, ಭಾರತದಂಥ ಅಪಾರ ಜನ ಸಂಖ್ಯೆಯ ದೇಶದಲ್ಲಿ ಇದು ದೊಡ್ಡ ವಿಷಯವೇನ್ನಲ್ಲ ಎನಿಸಿದರೂ, ಈ ಉದ್ಯಮದ ಬೃಹತ್ ಸ್ವರೂಪವನ್ನು ಕಂಡಾಗ ಇನ್ನು ಮುಂದೆ ಇದೆಲ್ಲಾ ಮಕ್ಕಳಾಟ ಎನ್ನಲ್ಲು ಸಾಧ್ಯವಿಲ್ಲ. ಇಂದು ಯಾವುದೇ ಒಂದು ಉದ್ಯಮ ತನ್ನ ಗ್ರಾಹಕರನ್ನು ಸೆಳೆಯುವ ತನ್ನ ಕಾರ್ಯ ತಂತ್ರದಲ್ಲಿ ಬಹಳವಾಗಿ ಯೋಚಿಸುವುದು ಇದೇ ಮಕ್ಕಳ ಬಗ್ಗೆ. ಯುವ ಜನರದ್ದು ಇನ್ನೂ ಒಂದು ಹೆಜ್ಜೆ ಮುಂದೆ. ನಮ್ಮ ಟಿ.ವಿ.ಗಳ ಮುಂದೆ ಒಂದಷ್ಟು ಸಮಯ ಕಳೆದರೆ ಅದರಲ್ಲಿನ ಬಹುತೇಕ ಜಾಹಿರಾತುಗಳು ಇವರಿಬ್ಬರ ಮೇಲೇ ಕೇಂದ್ರೀಕೃತವಗಿರುತ್ತದೆ. ಮಕ್ಕಳ ಆಟಿಕೆಗಳಂಥ ಸಾಮಾನ್ಯ ವಸ್ತುವಿನ ಉದ್ಯಮ ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣವೇನೆಂದು ವಿಶ್ಲೇಷಿಸುತ್ತ ಹೊರಟಾಗ ಕೆಲವು ಆಸಕ್ತಿಕರ ವಿಷಯಗಳು ಕಾಣಸಿಗುತ್ತವೆ. 

ಮೊದಲನೆಯದಾಗಿ ಹೆಚ್ಚಿತ್ತಿರುವ ಕೊಳ್ಳುವ ಸಾಮರ್ಥ್ಯ.ಕೆಲವೇ ವರ್ಷಗಳ ಹಿಂದೆ ಒಂದು ಮಗು ಜಾತ್ರೆಯಲ್ಲೂ, ದೇವಾಲಯದ ಮುಂದೆಯೋ ಸಿಗುವ ಬಲ್ಲೂನ್ನು, ಆ ಬಣ್ಣ ಬಣ್ಣ ಕನ್ನಡಿ, ಪ್ಲಾಸ್ಟಿಕ್ ಆಟದ ಸಾಮನುಗಳನ್ನು ತನ್ನ ತಂದೆ ತಾಯಿಯಿಂದ ತೆಗೆಸಿಕೊಳ್ಳಲು ಅದೆಷ್ಟು ಕಷ್ಟ ಪಡಬೇಕಾಗುತ್ತಿತ್ತೋ? ಮಗು ಅತ್ತು ಕರೆದು ಹಠ ಹಿಡಿದ ಮೇಲೆ, ತಂದೆಯೋ ತಾಯಿಯೋ ಹೋಗಿ ತೂಗಿ ಅಳೆದು, ಚೌಕಾಸಿ ಮಾಡಿ ಅವನ್ನು ಖರೀದಿಸುತ್ತಿದ್ದದ್ದು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತದೆ. ಹಾಗೆಯೇ ಮಗು ಸಹ ಒಮ್ಮೆ ತೆಗೆದು ಕೊಂಡಿದ್ದನ್ನು ಜೋಪಾನ ಮಾಡುವ ಪ್ರಯತ್ನವೂ ಮಾಡುತ್ತಿತ್ತು. ಆದರೆ ಇಂದು ತಂದೆ ತಾಯಿ ಇಬ್ಬರೂ ದುಡಿಯುವ,ಒಳ್ಳೆ ಸಂಬಳ ಪಡೆಯುವ, ಪಡೆದದ್ದನ್ನು ತಮಗಾಗಿ ಉದಾರವಾಗಿ ಖರ್ಚು ಮಾಡುವ ಪರಿಸ್ಥಿತಿ ಇದೆ. ಈ ಹೆಚ್ಚಿದ ಕೊಂಡುಕೊಳ್ಳುವ ಸಾಮರ್ಥ್ಯದ ದೊಡ್ಡ ಪರಿಣಾಮ ಮಕ್ಕಳ ಆಟಿಕೆಗಳ ಮಾರುಕಟ್ಟೆಯ ಮೇಲೆಯೂ ಆಗಿದೆ ಎಂಬುದು ತಜ್ಞರ ಅಭಿಪ್ರಾಯ., ಕುಟುಂಬದ ಆರ್ಥಿಕ ಶಕ್ತಿ ಹೆಚ್ಹಾದಂತೆಲ್ಲಾ ಬೇಕೋ ಬೇಡವೋ, ಆದರೆ ಕೊಳ್ಳುವ ಮನೋಭಾವ ಹೆಚ್ಚಾಗುತ್ತಿದೆ.ಅಂತೆಯೇ ಮತ್ತೊಂದು ಪ್ರಮುಖ ವಿಷಯವೆಂದರೆ ಈ ಅಧುನಿಕ ಜೀವನ ಶೈಲಿಯಲ್ಲಿನ ಸಮಯದ ಕೊರತೆ, ಈಗಿನ ದುಡಿಯುವ ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯುವುದೇ ಒಂದು ದೊಡ್ಡ ವಿಷಯವಾಗಿದೆ. ಪ್ರಯತ್ನದ ಪಟ್ಟರೂ ಉದ್ಯೋಗದ ಸಮಯ, ಒತ್ತಡದ ನಡುವೆ ಸಮಯ ಸಿಗದ, ಸಿಕ್ಕರೂ ಮಕ್ಕಳೊಡನೆ ಬೆರೆಯಲು ಸಹನೆಯಿಲ್ಲದ ಪರಿಸ್ಥಿತಿ ಹಲವಾರು ಪೋಷಕರದು. ಈ ಒಂದು ಕೊರತೆ, ಧರ್ಮ ಸಂಕಟವನ್ನು ಹೆಚ್ಚಿನ ಆಧುನಿಕ ಪೋಷಕರು  ಅನುಭವಿಸುತ್ತಿರುವ ವರದಿಗಳು ಇವೆ. ಈ ಕೊರತೆ, ಸಂಕಟವನ್ನು ಮೀರುಲು ಮಕ್ಕಳು ಕೇಳಿದ್ದನ್ನು ತೆಗೆಸಿಕೊಳ್ಳುವ ಮನೋಭಾವವೂ ಹೆಚ್ಹಾಗುತ್ತಿದೆ. ಈ ರೀತಿಯಾದರೂ ತಮ್ಮ ಮಕ್ಕಳನ್ನು ತಾವು ಪ್ರೀತಿಸಿತ್ತಿದ್ದೇವೆಂಬ ಭಾವ, ಸಮಾಧಾನ ಪೋಷಕರದು. ಉದ್ಯೋಗ, ಒತ್ತಡ, ಟ್ರಾಫಿಕ್ಕು, ಜನ ಜಂಗುಳಿಗಳು ಮತ್ತಷ್ಟು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದರ ಪರಿಣಾಮ ಆಟಿಕೆ ಉದ್ಯಮ ಬೆಳವಣಿಗೆಯಲ್ಲಿ ಸಹಾಯಕವಾಗಿರುವುದು ಯಾರ ಅದೃಷ್ಟವೋ ಯಾರ ದುರಾದೃಷ್ಟವೋ ತಿಳಿಯದು. 

ಚಂದಮಾಮ, ಜಾನಪದ ಕಥೆಗಳು ಹಾಗೂ ಇನ್ನಿತರ ಚಂದದ ಆಟಗಳ ಜಾಗದಲ್ಲಿ  ಬೆನ್ ಟೆನ್, ಸ್ಪೈಡರ್ ಮ್ಯಾನ್, ದೋರೆಮ್ಯಾನ್ ಇತ್ಯಾದಿಗಳು ಬಂದು ಕೂತಿವೆ. ಅಷ್ಟು ಮಾತ್ರವಲ್ಲದೆ ಅವಕ್ಕೆ ಸಂಬಂಧಿಸಿದ ವಸ್ತುಗಳು ಮಾರುಕಟ್ಟೆಯಲ್ಲಿ ಬಂದು ನಮ್ಮ ಮನೆಗಳನ್ನು, ಮಕ್ಕಳ ಮನಗಳನ್ನು ಆಕ್ರಮಿಸಿಕೊಂಡಿವೆ. ಕಡೆಗೆ ಕ್ರೀಡೆ, ಸಂಗೀತ ನೃತ್ಯಗಳ ಸ್ವರೂಪವೂ ಬದಲಾಗಿ, ಅವೆಲ್ಲವೂ ಮನಸ್ಸಿನ ಅಥವಾ ವ್ಯಕ್ತಿತ್ವದ ವಿಕಸನ, ಮನೋರಂಜನೆಗಿಂತ ಜನಪ್ರಿಯತೆ, ಹಣ ಮಾಡುವ ಮೆಟ್ಟಿಲುಗಳಾಗಿವೆ. ಈ ರೀತಿಯ ಅನೇಕ ಸಾಮಾಜಿಕ, ಆರ್ಥಿಕ ಕಾರಣಗಳು ನಮ್ಮ ಮನೆಗಳನ್ನು ತಾಕುತ್ತಿದ್ದು, ಮಕ್ಕಳು ಸಹಾ ಅದರ ಭಾಗವಾಗಿ, ಅದರ ಸಾಧನಗಳಾಗುತ್ತಿರುವುದು ಬದಲಾಗುತ್ತಿರುವ ಪರಿಸ್ಥಿತೆಗೆ ಸಾಕ್ಷಿಯಾಗಿದೆ.ಇಂದು ಒಂದು ಮಗು ಶಾಲೆಗೆ ಹೋಗುವ ಮುನ್ನವೇ ಒತ್ತಡದ ಸುಳಿಯಲ್ಲಿ ಬಂಧಿಯಾಗಿರುತ್ತದೆ. ಶಾಲೆಯಲ್ಲಿ ಕಲಿಯಬೇಕಾದುದನ್ನು ಮೊದಲೇ ಕಲಿತ್ತಿದ್ದರೆ ಮಾತ್ರ ಅದಕ್ಕೆ ಶಾಲೆಯಲ್ಲಿ ಸ್ಥಾನ. ಇನ್ನೂ ಆಡುವ ವಯಸ್ಸು ಎಂಬುದನ್ನು ಈಗ 3 ವರ್ಷದ ಮಗುವ ಬಗ್ಗೆಯೂ ಹೇಳುವಂತಿಲ್ಲ.  ಈಗದು ಓದುವ ವಯಸ್ಸು. ಮುಂದೆ ಇಂಜನೀಯರೋ,ಡಾಕ್ಟರೋ, ಲಕ್ಷ ಸಂಪಾದಿಸುವ ಅಧಿಕಾರಿಯಾಗಬೇಕೆಂದರೆ ಈಗಿನಿಂದಲೇ ತಯಾರಿ ಅಗತ್ಯ ಎನ್ನುವ ಕಾಲ.

ಇಂದು ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಐನ್ ಸ್ಟೈನ್ ಹಾಗೂ ಇತರ ಬುದ್ಧಿವಂತರಂತೆ ಬುದ್ಧಿವಂತರಾಗಬೇಕು, ಜನಪ್ರಿಯರಾಗಬೇಕು ಎಂಬ ಇಚ್ಛೆ. ತಪ್ಪೇನಿಲ್ಲ, ಆದರೆ ಅದೇ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ರ ಮಾತು, ಜೀವನ ಮೇಲ್ಪಂಕ್ತಿಯಾಗುವುದಿಲ್ಲ “If you want your children to be intelligent, read them fairy tales. If you want them to be more intelligent, read them more fairy tales”, "ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದು ನಿಮ್ಮ ಇಚ್ಛೆಯಾದರೆ ಅವರಿಗಾಗಿ ಕಿನ್ನರ ಕಥೆಗಳನ್ನು ಓದಿರಿ, ಇನ್ನೂ ಹೆಚ್ಚು ಬುದ್ಧಿವಂತರಾಗಬೇಕೆಂದರೆ ಅವರಿಗಾಗಿ ಇನ್ನೂ ಹೆಚ್ಚಿನ ಕಿನ್ನರ ಮಕ್ಕಳ ಕಥೆಗಳನ್ನು ಓದಿರಿ" ಎನ್ನುತ್ತಾರೆ ಅದೇ ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್. ಈ ಒಂದು ಮಾತಿನಲ್ಲಿ ಅನೇಕ ಅರ್ಥಗಳನ್ನು ನಾವು ಕಾಣಬಹುದಾಗಿದೆ. ಒಂದು ಮಗು ಬುದ್ಧಿವಂತನಾಗಿ ಬೆಳೆಯಬೇಕಾದರೆ, ಅದರಲ್ಲಿ ಅದರ ಬಾಲ್ಯ ಜೀವನ, ಕುಟುಂಬ ಪರಿಸರ, ಅದರ ಯೋಚನಾ ಸಾಮರ್ಥ್ಯ, ಕ್ರಿಯಾಶೀಲತೆ ಎಲ್ಲವೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಒಂದು ಕಥೆ ಹೇಳುವ, ಕೇಳುವ ಕ್ರಿಯೆಗೆ ಅದರದೇ ಆದ ಸೊಗಸಿದೆ.ಒಬ್ಬ ಪೋಷಕ ಒಂದು ಮಗುವಿಗೆ ಕಥೆ ಹೇಳುತ್ತಾನೆ ಅಂದರೆ ಅಲ್ಲಿ ಅದಕ್ಕಾಗಿ ಸಮಯ ಇಟ್ಟ ಹಾಗೆ ಆಗುತ್ತದೆ. ಮಗು ಹಾಗೂ ಪೋಷಕರ ಮಧ್ಯೆಯೊಂದು ಅವಿನಾಭಾವ ಸಂಬಂಧ ಏರ್ಪಡುತ್ತದೆ. ಈ ಸಂಬಂಧ ಎಳೆಯ ಮನಗಳ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಹಾಗೆಯೇ ಕಥೆ ಕೇಳುವ ಸಮಯದಲ್ಲಿ ಮಗು ತನ್ನದೇ ಆದ ಭಾವ ಪ್ರಪಂಚದಲ್ಲಿ ತೇಲಾಡುತ್ತಾ ತನ್ನದೇ ಆದ ಲೋಕವನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ, ಅದರ ಯೋಚನೆ ಮಾಡುವ ಶಕ್ತಿಯೂ ದೊಡ್ಡದಾಗುತಾ ಹೋಗುತ್ತದೆ. ಕಥೆಯಲ್ಲಿನ ಪಾತ್ರಗಳೊಂದಿಗೆ ಅದರ ವ್ಯಕ್ತಿತ್ವಕ್ಕೂ ಒಂದು ಸ್ಪಷ್ಟತೆ ದೊರಕುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಮಗುವಿನ ಕ್ರಿಯಾಶೀಲತೆ ಹೆಚ್ಹಾಗುತ್ತದೆ. ಈ ದಂತ ಕಥೆಗಳಲ್ಲಿ ಕಾಣ ಸಿಗುವ ಅಡೆ ತಡೆಗಳು, ಅದನ್ನು ಜಯಿಸುವ ಪರಿ ಇವೆಲ್ಲವೂ ಮಗುವಿನ ತೊಡಕುಗಳನ್ನು ಮೀರುವ ಶಕ್ತಿ ಹಾಗೂ ಯೋಚನಾ ಸಾಮರ್ಥ್ಯವನ್ನು ವೃದ್ಧಿಗೊಳಿಸುತ್ತದೆ, ಅದರಲ್ಲೂ ಈ ರೀತಿಯ ಕಥೆಗಳಲ್ಲಿ ಹೆಚ್ಚಾಗಿ ಅದ್ಭುತಗಳು ನಡೆಯುವ ಸನ್ನಿವೇಶಗಳೂ ಬರುತ್ತವೆ.ಜೀವನದಲ್ಲಿ ಅದ್ಭುತಗಳು ನಡೆಯುತ್ತವೆ ಎಂಬ ನಂಬಿಕೆಯೇ ಅನೇಕ ಸಕರಾತ್ಮಕ ಕ್ರಿಯೆಗಳಿಗೆ ನಾಂದಿಯಾಗಬಲ್ಲವು. 

ಈ ಎಲ್ಲಾ ಕಾರಣಗಳಿಂದಾಗಿಯೇ ಮಕ್ಕಳಿಗೆ ಕಥೆ ಹೇಳುವುದು ನಿಜಕ್ಕೂ ಒಂದು ಉತ್ತಮ ಕ್ರಿಯೆ. ಹಾಗೆಯೇ ಕಥೆ ಹೇಳುವವರೂ ಸಹಾ ಕಥೆ ಹೇಳುತ್ತಾ ಮತ್ತೆ ಮಕ್ಕಳಾಂತಾಗುವ ಸಾಧ್ಯತೆಯೂ ಇದೆ. ಅದರಿಂದಲೇ ಪ್ರತಿಯೊಬ್ಬ ಪೋಷಕನು ಮಕ್ಕಳಿಗೆ ಕಥೆ ಹೇಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎನ್ನುವುದು ಮನಶಾಸ್ತ್ರ ಪರಿಣಿತರ ಅಭಿಪ್ರಾಯ. ಸುಂದರವಾದ ಕಥೆಗಳುಕ್ರಿಯಾಶೀಲ ಮಕ್ಕಳನ್ನು ಸೃಷ್ಟಿ ಮಾಡಬಲ್ಲದು. ಸೃಜನಾತ್ಮಕವಾದ ಮಕ್ಕಳು ವಿಜ್ಞಾನ ಮಾತ್ರವಲ್ಲದೆ ತಮ್ಮದೇ ಆದ ರಂಗದಲ್ಲಿ ಐನ್ ಸ್ಟೈನ್ ಗಳಾಗಬಹುದು. ಇವೆಲ್ಲದೆಲ್ಲದರ ನಡುವೆಯೂ ನಮ್ಮ ಮಕ್ಕಳು ಮುಗ್ದತೆ, ಅಮಾಯಕತೆಯನ್ನು ಉಳಿಸಿಕೊಳ್ಳಲಿ, ಅಧುನಿಕತೆಯನ್ನು ಅನುಭವಿಸುತ್ತಲೇ ತಮ್ಮ ಪೋಷಕರ ಮೂಲಕ ಮೂಲ ಬೇರುಗಳನ್ನು ಉಳಿಸಿಕೊಳ್ಳಲಿ, ಅವರ ನಗುವನ್ನು ಅಶಾಂತಿಯಿಂದ ಬಳಲುತ್ತಿರುವ ವಿಶ್ವಕ್ಕೆ ಹಂಚಲಿ, ವಿಶ್ವವೇ ಮಕ್ಕಳಂತಾಗಲಿ ಎಂಬದೇ ಹಾರೈಕೆ, ಸೃಜನಾತ್ಮಕತೆ, ಕ್ರಿಯಾ ಶೀಲತೆ ಜೀವಂತೆಕೆಯ ಸಂಕೇತ. ಮಕ್ಕಳ ಕಲರವ ಸಹಾ ಜೀವಂತಿಕೆಯ ಪ್ರತಿಬಿಂಬ. 

ಮಕ್ಕಳಿರಲವ್ವ ಮನೆ ತುಂಬಾ ಎಂಬ ಗಾದೆ ಈ ಕಾಲದಲ್ಲಿ ಅಸಾಧ್ಯವೆನಿಸದರೆ ಮಕ್ಕಳಿರಲವ್ವ ಮನದ ತುಂಬಾ ಎಂಬುದಾದರೂ ಸಾಧ್ಯವಾಗಲಿ.

- ಪ್ರಶಾಂತ್ ಇಗ್ನೇಷಿಯಸ್

Wednesday, 14 November 2012

ನವೆಂಬರ್ ವಿಶೇಷ

ಬರೆಯುವ ಲೇಖಕ ಗೆಳೆಯರನ್ನೆಲ್ಲಾ ವಿನಂತಿಸಿ ಕನ್ನಡ ರಾಜ್ಯೋತ್ಸವದ ಸಂಚಿಕೆ ಮಾಡೋಣ ಎನಿಸಿ ಈ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇನ್ನೂ ಓದಿ ಎಂದು ಕೆಲವು ಗೆಳೆಯರಿಗೆ  ದಂಬಾಲು ಬೀಳುವ ಸಮಯ. ಕನ್ನಡ  ರಾಜ್ಯೋತ್ಸವ ಮುಗಿದು ಈಗಾಗಲೇ ಸುಮಾರು ದಿನಗಳಾದರಿಂದ 'ನವೆಂಬರ್ ವಿಶೇಷ' ಎಂದು ಕರೆದುಕೊಂಡಿದ್ದೇವೆ. ಉದ್ಯೋಗ ಹಾಗೂ ಇತರ ಆದ್ಯತೆಗಳ ಮಧ್ಯೆ ಬರೆಯುವುದೇ ವಿಶೇಷ ಸಂಗತಿಯಾಗಿರುವಾಗ ’ನವೆಂಬರ್ ವಿಶೇಷ’ ಎನ್ನುವುದರಲ್ಲಿ ವಿಶೇಷತೆ ಇದೆ.  ಗೆಳೆಯರು ಲೇಖನಗಳನ್ನು ಕೊಟ್ಟಿದ್ದಾರೆ, ಮತ್ತೆ ಕೆಲವರು ಬರುವ ವರ್ಷ ಕೊಡುವ ಭರವಸೆ ಕೊಟ್ಟಿದ್ದಾರೆ. ಬರುವ ವರ್ಷವೇ ಮಾಡೋಣ ಎಂಬ ಆಲೋಚನೆ ಬಂತು, ಆದರೆ ಈ ವರ್ಷ ಕೊಟ್ಟವರು ಮತ್ತೆ ಬರುವ ವರ್ಷ ಲೇಖನ ಕೊಡುವ ಬಗ್ಗೆ ನಂಬಿಕೆ ಇರುವುದರಿಂದ, ಬರುವ ವರ್ಷ ಒತ್ತಡ ಹೆಚ್ಚಾಗಿ ಮತ್ತೊಂದು ವರ್ಷಕ್ಕೆ ಮುಂದೂಡಲ್ಪಡುವ ಭಯದಿಂದ ಈಗಲೇ ನೀರಿಗಿಳಿಯುತ್ತಿದ್ದೇವೆ. 

ಚಂದದ ಬರಹಗಳನ್ನು ಕೊಟ್ಟ ಮಿತ್ರವೃಂದಕ್ಕೆ ನನ್ನ ನಮನಗಳು. ಬಹಳ ಉತ್ತಮವಾಗಿದೆ ಓದಿಕೊಳ್ಳಿ ಎಂದು ಹೇಳಲು ಧೈರ್ಯ ಬರುತ್ತಿಲ್ಲ. ಹಾಗೇ ಹೇಳಿದರೆ ಮುಂದಿನ ದಿನಗಳಲ್ಲಿ ಓದುಗರು ಸಿಗದೇ ಹೋಗಬಹುದು. ನೀವೇ ಓದಿ ನಿರ್ಧಾರ ಮಾಡಿಕೊಳ್ಳಿ ಎನ್ನೋಣ ಎಂದರೆ ಲೇಖನಗಳನ್ನು ಕೊಟ್ಟ ಲೇಖಕರು ಇನ್ನು ಮುಂದೆ ನೀವೇ ಬರೆದುಕೊಳ್ಳಿ ಎನ್ನುವರೋ ಎಂಬ ಸಣ್ಣ ಅಂಜಿಕೆ. ಈ ಭಯ ಅಂಜಿಕೆಗಳ ನಡುವಿನ ಸ್ವರಚಿತ್ತಾರದ ಈ ಪ್ರಯತ್ನಕ್ಕೆ ನಿಮ್ಮದೊಂದು ಉತ್ತೇಜನ ಇರಲಿ.ನಡುವೆ ಎಫ್.ಎಂ.ನಂದಗಾವ್ ಹಾಗೂ ಮರಿಜೋಸೆಫ್ ರಂತಹ ಪ್ರಬುದ್ಧರ ಕಥೆ, ಲೇಖನಗಳಿವೆ. ಅಷ್ಟರ ಮಟ್ಟಿಗಾದರೂ ನಾವು ಸೇಫ್. ಕೆಲವು ಚಿತ್ರಗಳನ್ನು ಪ್ರತೀಕ್ ನ ಬತ್ತಳಿಕೆಯಿಂದ ಬಳಸಿಕೊಳ್ಲಲಾಗಿದೆ. ಕಮೆಂಟ್ ಬಾಕ್ಸ್ ಕಡೆ ಒಮ್ಮೆ ಕೈಯಾಡಿಸಿ ಬನ್ನಿ.  ಇನ್ನೂ ಉತ್ತಮವಾದ ಪ್ರಯತ್ನ ಮುಂದೆ ನಮ್ಮಿಂದಾಗುತ್ತದೆ ಎಂಬ ಭರವಸೆ ನಮ್ಮದು. 

ಓದಿ ಕೊಳ್ಳಿ ಸ್ವರ ಚಿತ್ತಾರದ ನಮ್ಮ ಕನ್ನಡ ರಾಜ್ಯೋತ್ಸವದ.... ಅಲ್ಲಲ್ಲ ನವೆಂಬರ್ ವಿಶೇಷ ಸಂಚಿಕೆ. ಮುಂದೆ ’ಕ್ರಿಸ್ ಮಸ್ ವಿಶೇಷ ಸಂಚಿಕೆ’ ತರುವ ಉದ್ದೇಶವಿದ್ದು, ಯುಗಾದಿ ಹಬ್ಬಕೆ ಮೊದಲು ಹೊರತರವ ಅಶ್ವಾಸನೆ ನಮ್ಮದು.


ನಮಸ್ಕಾರ.

ಸ್ವರಚಿತ್ತಾರದ ಪರವಾಗಿ
ಪ್ರಶಾಂತ್

ಪರಿವಿಡಿ

ಆಗಲೇ ಸೀತಾಪಹರಣ ಆಗಿಬಿಟ್ಟಿದೆ - ಎಫ್.ಎಂ.ನಂದಗಾವ್
ತಾಯ್ನುಡಿ - ಮರಿ ಜೋಸೆಫ್
ಕನ್ನಡ ಯಾರು ಓದುತ್ತಾರೆ ಬಿಡ್ರಿ - ಪ್ರಶಾಂತ್ ಇಗ್ನೇಷಿಯಸ್
ವಿಮೋಚನೆ - ಜೋವಿ
ಕ್ರಿಕೆಟ್ ಹಾಗೂ ನವೆಂಬರ್ 15 - ಸವ್ಯಸಾಚಿ

ಹಾವೊಂದು ಬಳಿ ಬಂದು.......

ಆ ದಿನ ಕೆಲಸ ಮುಗಿಸಿ ಮನೆಗೆ ಬಂದಾಗ, ಜೀವ ಅರ್ಧವಾಗಿತ್ತು!
ಬಾಗಿಲ ಬಳಿ ಬರುತ್ತಲೇ ಹೆಂಡತಿಯಾದವಳು, ಸ್ವಲ್ಪ ಇರಿ.ಯಾಕೋ ಪೀಠಿಕೆಯೇ ಸರಿಹೋಗುತ್ತಿಲ್ಲ..
ಈ ಮೊದಲೇ ಹೆಂಡತಿಯಾದವಳು, ನಾನು ಬಾಗಿಲ ಬಳಿ ಬರುತ್ತಲೇ, “ರೀ ಅಲ್ಲಿ. ಅದು.. ಇ ಎಂದು ಏನೊ ಬಡಬಡಿಸಲು ಶುರುಮಾಡಿದಳು. ಮುಖದಲ್ಲಿ ಸ್ವಲ್ಪ ಭಯ, ಆತಂಕ ಇತ್ತು. ನಾನು, “ಆ ದರಿದ್ರ ಸೀರಿಯಲ್ ನೋಡಬೇಡ ಅಂದ್ರೆ ಕೇಳ್ತೀಯಾ, ಹೇಳು?” ಎಂದೆ. ಆಕೆ, “ಅದಲ್ಲಾ ರೀ, ಇವತ್ತು ಮನೇಲಿ ಇಷ್ಟುದ್ದ, ಇಷ್ಟು ದಪ್ಪದ ಒಂದು ಭಯಾನಕ ಹುಳ ನೋಡಿದೆ” ಎಂದು ತನ್ನ ಕೈ ಕಣ್ಣುಗಳನ್ನು ಬಳಸಿ, ಅಭಿವ್ಯಕ್ತಿಸಿದ್ದನ್ನು ನೋಡಿಯೇ ನಾನು ಇನ್ನರ್ಧ ಇಳಿದುಹೋದೆ. ಹಾವು ಗೀವೇನಾದರೂ ಮನೆಯೊಳಗೆ ಹೊಕ್ಕಿತೆ? ??
ನನಗೆ ಚಿಂತೆಗಿಟ್ಟುಕೊಂಡಿತು.

ಈ ಹಾವಿಗೂ, ನನಗೂ ಅಷ್ಟಾಗಿ ಆಗಿಬರುವುದಿಲ್ಲ. ನಮ್ಮ ಮಾವ ತೀರಿಕೊಂಡಿದ್ದು ಈ ಹಾವು ಕಚ್ಚಿಯೇ! ನಮ್ಮ ಅಜ್ಜ ಕೂಡ ಮನೆಗೆ ಬಂದ ಹಾವನ್ನು ಸಾಯಿಸಿ,  ಹಾವಿನ ದ್ವೇಷಕ್ಕೆ ಬಲಿಯಾದವರೇ!  ಈಗಲೂ ಒಂದು ಅನಾಮಿಕ ಹಾವು, ನಮ್ಮ ಮನೆಯ ಸಮೀಪ ಆಗಾಗ ಕಾಣಿಸಿಕೊಳ್ಳುತ್ತಾ, ಮಾಯವಾಗುತ್ತಾ, ದ್ವೇಷದ ಎಪಿಸೋಡ್ ನ್ನು ಮುಂದುವರಿಸುತ್ತಿರುವಂತೆ ನನಗೆ ಭಾಸವಾಗಿದ್ದಿದೆ. ನನಗೋ ’ಹಾವು-ಏಣಿ’ ಆಟದ ಪುಟ ಕಂಡರೇ ಭಯ! ಒಂದೊಮ್ಮೆ, ದಾರಿಯಲ್ಲಿ ನನ್ನ ಸೈಕಲ್ಲಿನ ಚಕ್ರಕ್ಕೆ ಹಾವು ಸಿಕ್ಕಾಕಿಕೊಂಡು, ನಾನು ಭಯವಾಗಿ ಜೋರು ಪೆಡಲು ತುಳಿದಾಗ, ಅದು ತಿರುತಿರುತಿರುಗಿ ಹಿಂದೆ ತಿರುಗಿ.. ಕಾಣದಾಗಿ.ಮಾಯಾವಾಗಿ. ನಾನೂ ಅನಾಯಾಸವಾಗಿ, ಹಾವಿನ ’ಕಚ್ಚುಪಟ್ಟಿ’ಗೆ ಸೇರಿಕೊಂಡಿರುವುದು ನೆನಪಾಗಿ ಭಯ ಹೆಚ್ಚಾಯಿತು. ಆದರೆ ನಾನಿರುವುದು ಎರಡನೆಯ ಮಹಡಿಯಲ್ಲಿ. ಸಾಮಾನ್ಯ ಹಾವೊಂದು, ಗೋಡೆಯ ಮೇಲೆ ಹಾರುತ್ತಾ ಅಲ್ಲಿಯವರೆಗೂ ಬರುವುದು ಅಸಾಧ್ಯ ಎಂಬ ಅಂಶ ಸ್ವಲ್ಪ ಸಮಾಧಾನ ತಂದಿತು. ಆದರೇನು? ಎರಡನೆಯ ಮಹಡಿಯವರೆಗೂ, ರತ್ನಗಂಬಳಿಯಂತೆ  ಸಲೀಸಾದ ಮೆಟ್ಟಿಲುಗಳಿವೆಯಲ್ಲಾ?  ರಾಜಗಾಂಭೀರ್ಯದಿಂದೆಂಬಂತೆ ಹತ್ತಿ ಬಂದಿರಲೂ ಸಾಕು!
ಸರಿ, ಹಾಗೆ ಬರುವಾಗ, ಬಾಗಿಲು ತೆರೆದಿರಬೇಕಲ್ಲಾ? ಅದಕ್ಕೇನು? ಸೀರಿಯಲ್ಲು ಓಡುವಾಗ, ಹೆಣ್ಮಕ್ಕಳಿಗೆ ಗಂಡನೇ ಕಾಣುವುದಿಲ್ಲ. ಇನ್ನು ಈ ಹಾವೇನು ಮಹಾ! ಹಾವು ಬಂದ ಮನೆಯೊಳಗೆ ನಾನೂ ಬಲಗಾಲಿಟ್ಟು ಬಂದು ಕುಳಿತೆ. ಏನು ಮಾಡುವುದು ಎಂದು ಯೋಚಿಸುವ ಮೊದಲೇ ನೀರು ಕುಡಿಯಬೇಕೆನಿಸಿತು. ನೀರು ಕುಡಿಯುತ್ತಿರುವಾಗ, ನಾನು ಕುಳಿತಿರುವ ಜಾಗದಲ್ಲೇನಾದರೂ ಹಾವು ಸೇರಿಕೊಂಡಿದ್ದರೆ ಗತಿಯೇನು? ಅನ್ನಿಸಿ ಛಕ್ಕನೆ ಎದ್ದು ನಿಂತೆ.  ಕಚ್ಚಿದರೆ ಅನ್ಯಾಯದ ಸಾವಾಗುತ್ತದಲ್ಲಾ!
ಅಕೆ, ’ಏನಾಯಿತು’ ಎಂದಳು. ಏನಿಲ್ಲ.. ಈ ಹುಳ ಎಂದೆಯಲ್ಲಾ? ಎಲ್ಲಿ ಹೋಯಿತು ಏನಾದರೂ ನೋಡಿದೆಯಾ? - ಕೇಳಿದೆ.
ಅದಾ? ಅದೋ. ಈ ಮಂಚದ ಒಳಗೆಲ್ಲೋ ಸೇರಿಕೊಂಡಿರಬೇಕು.. ಇಲ್ಲೇ ನೋಡಿದ್ದು ನೋಡಿ..  ಎಂದದ್ದು ಸ್ವಲ್ಪ ಸಮಾಧಾನವಾದರೂ, ಹಾವೂ ಕೂಡ ಹಸಿವು, ನೀರಡಿಕೆ, ಸಂಜೆಯ ವಾಕಿಂಗ್ ಹವ್ಯಾಸ ಉಳ್ಳದ್ದೇ. ಈಗ ಎಲ್ಲಿ ಅಡ್ಡಾಡುತ್ತಿದೆಯೋ ಬಲ್ಲವರಾರು?


ರಾತ್ರಿಯಾಗಿತ್ತು. ಹಸಿವು ಬೇರೆ! ಭಯದ ವಾತಾವರಣದಲ್ಲಿ ಬಾತ್ ರೂಮಿಗೆ ಹೋಗಿಬರಲು ಭಯ. ನನ್ನ ದುರಾದೃಷ್ಟಕ್ಕೆ, ನೇರ ಕಮೋಡ್ ನಿಂದ ಜಿಗಿದರೆ ಪಾಡೇನು? ಅದು ಇನ್ನೂ ಘೋರ ಅನ್ಯಾಯದ ಸಾವು!

ಸದ್ಯಕ್ಕೆ ಅಪೇಕ್ಷೆಗಳನ್ನೆಲ್ಲಾ ಅದುಮಿಟ್ಟುಕೊಂಡು, ಹಾವು ಹಿಡಿಯುವುದೆಂದು ತೀರ್ಮಾನಿಸಿದೆ. ಮೊದಲು ಮನೆಯನ್ನೆಲ್ಲಾ ಕಣ್ಣಲ್ಲೇ ಒಮ್ಮೆ ಜಾಲಾಡಿ, ಮಂಚಕ್ಕೆ ಮುಹೂರ್ತ ಇಟ್ಟೆ. ಕರೆಂಟ್ ಇತ್ತು, ಆದರೂ ಧೈರ್ಯಕ್ಕೆ ಇರಲಿ ಎಂದು ಒಂದು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಹೊರಟೆ. ಇನ್ನೊಂದು ಕೈ ಇತ್ತಲ್ಲಾ.? ಅರ್ಧಾಂಗಿಯನ್ನು ಕರೆದೆ. ಆಕೆ ಬರಲೊಲ್ಲೆ ಎಂದು ತಲೆಯಾಡಿಸಿದಳು. “..ಏಕಾಂಗಿ.ಸಂಚಾರಿ” ಹಾಡು ದಾರಿಹೋಕನ ಮೊಬೈಲಿನೊಳಗಿನಿಂದ ಸರಿದು ಹೋದದ್ದು ಕೇಳಿತು.  ಮೆಲ್ಲಮೆಲ್ಲಗೆ ಹೆಜ್ಜೆ ಇಡುತ್ತಾ. ಸದ್ದು ಮಾಡದೇ..ಮಂಚದ ಬಳಿ ಬಂದೆ. ಯಾಕೆಂದರೆ, ’ಹಾವಿಗೆ ಕಿವಿ ತುಂಬಾ ಸೂಕ್ಷ್ಮ. ಎಷ್ಟು ದೂರದಲ್ಲಿದ್ದರೂ ಗುರುತಿಸುವ ಶಕ್ತಿ ಈ ಹಾವಿಗಿದೆ! ಎಂಬ ವಿಷಯವನ್ನು ವನಜಾ ಮಿಸ್ ಮತ್ತೊಮ್ಮೆ ಕಿವಿಯಲ್ಲಿ ಉಸುರಿದರು. ಈ ಹಾವು ಮಂಚದ ಬಳಿ ಬರುವುದಕ್ಕೆ ಕಾರಣವಾದರೂ ಏನು? ನಾವುಗಳು ನಿದ್ರೆಯಲ್ಲಿರುವಾಗ ಹಾಗೆಯೇ ಚಿರನಿದ್ರೆಗೆ ಜಾರಿಸಿಬಿಡಲು ಅನುಕೂಲವಾಗುತ್ತದೆಯೆಂದೆ? ಅಡಗಿ ಅಟ್ಯಾಕ್ ಮಾಡಲು ಪ್ರಸ್ತದ ಸ್ಥಳವೇ ಪ್ರಶಸ್ತ ಎಂದೆ?
ಕೋಲೊಂದನ್ನು ಎತ್ತಿಕೊಂಡೆ. ಈಗ ಸಂಪೂರ್ಣ ಶಸ್ತ್ರಸನ್ನದ್ಧನಾದಂತೆ ಅನ್ನಿಸಿತು. ಆದರೆ ಈ ಕೋಲಿಗೆ ಮೂರು ವರುಷದ ನನ್ನ ಮಗಳೇ ಹೆದರುವುದಿಲ್ಲ. ಇನ್ನು ಹನ್ನೆರಡು ವರುಷಗಳವರೆಗೂ ದ್ವೇಷ ಸಾಧಿಸುವ ಮಹಾನ್ ಹಾವು ಹೆದರೀತೆ? ಆದರೆ ಮನುಷ್ಯಮಾತ್ರದವನಾದ ನಾನೇನು ಮಾಡಲಿ? ಕೋಲಿಲ್ಲದಿದ್ದರೆ ಎದೆಯೊಳು ತಣ್ಣಗೆ ಮಲಗಿರುವ ಧೈರ್ಯವನ್ನೇಗೆ ಬಡಿದೆಬ್ಬಿಸಲಿ?

ಏನಾದರೂ ಸಿಕ್ಕಿತೆ..ಹೇಳಿ.ನನಗೆ ನಿದ್ರೆ ಬರ್ತಾ ಇದೆ. ಎಂಬ ಮಾತು ಅವಳಲ್ಲದೆ ಇನ್ಯಾರು ತಾನೆ ಹೇಳಲು ಸಾಧ್ಯ?
ಇರು ಮಾರಾಯ್ತಿ.. ಈಗಷ್ಟೆ ಸರಿಅದು ಹೇಗಿತ್ತು ಅಂತಾದರೂ ಹೇಳ್ತೀಯಾ” ಕೋಲು ನೆಲಕ್ಕೂರುತ್ತಾ ಕೇಳಿದೆ.
ಭಯಾನಕವಾಗಿ ಇತ್ತು ಕಣ್ರಿ. ಕಪ್ಪು ಅಂದ್ರೆ ಅಷ್ಟು ಕಪ್ಪು. ನಿಮಗಿಂಥ .. ಮೊದಲಿಗೆ ಬೆಡ್ ಶೀಟು, ತಲೆದಿಂಬುಗಳನ್ನು ಕೋಲಿನಿಂದ ಸರಿಸುತ್ತಾ, ಒಳಗೆಲ್ಲಾದರೂ ಸೇರಿಕೊಂಡಿದೆಯೇನೊ ಎಂದು ಪರಿಶೀಲಿಸಿದೆ. ಅಂಥದ್ದೇನೂ ಕಾಣಲಿಲ್ಲ. ಹಾಗೆ ಚೂರು ಸರಿದು,ಮಂಚವನ್ನು ಅಲ್ಲಾಡಿಸಿ, ತಕ್ಷಣ ನಿಂತಿದ್ದ ಸ್ಥಳಕ್ಕೇ ವಾಪಾಸು ಬಂದು ನಿಂತೆ. ಯಾಕೆಂದರೆ ನಾನು ಅಲುಗಾಡಿಸುವವರೆಗೂ ಪ್ರಶಾಂತವಾಗಿ ಕಾದಿದ್ದು, ಆಮೇಲೆ ಗಬಕ್ಕನೆ ಬಾಯಿ ಹಾಕಿದರೆ ? ಸದ್ಯ. ಯಾವ ಸದ್ದೂ ಕೇಳಲಿಲ್ಲ.
ಈಗ ಸ್ವಲ್ಪ ಧೈರ್ಯ ಬಂದ ಹಾಗೆ ಆಯಿತು. ಬೆಡ್ ಶೀಟು, ಕಂಬಳಿಗಳನ್ನು ಝಾಡಿಸಿದೆ. ಯಮಗಾತ್ರದ ಬೆಡ್ಡನ್ನು, ಪಾಪ ಒಬ್ಬನೇ ಎತ್ತಿ ಗೋಡೆಗೆ ಒರಗಿ ನಿಲ್ಲಿಸಿದೆ. ಅದು ಪ್ರಿಯತಮೆಯನ್ನು ಅಗಲಿದ ಪ್ರಿಯಕರನ ಹಾಗೆ ನನಗೆ ಕಂಡು, ನನ್ನ ಕಲ್ಪನೆಗೆ ಬರ ಬಂದಿರಬೇಕು ಅನಿಸಿತು. ಇರಲಿ. ಮೊಳಕಾಲೂರಿ, ತಲೆಯನ್ನು ಸಾಧ್ಯವಾದಷ್ಟು ಬಗ್ಗಿಸಿ, ಕಣ್ಣುಗುಡ್ಡೆ ಹಿಗ್ಗಿಸಿ ಮಂಚದ ಅಡಿಗೆ ಟಾರ್ಚು ಬಿಟ್ಟೆ.

ಒಂದೇಟಿಗೆ ಎಂಥದ್ದೂ ಕಾಣಲಿಲ್ಲ. ಹಾವು ಹಾಗೆಯೇ! ನನ್ನ ಪಕ್ಕದಲ್ಲೇ ಇದ್ದರೂ, ನನ್ನ ಗೆಳೆಯರಿಗೆ ಕಂಡರೂ, ’ಇಲ್ಲಿ..ಇಲ್ಲಿ.. ಎಂದು ಅವರು ಅರಚುವವರೆಗೂ, ನನ್ನ ಅರಿವಿಗೆ ಬರದ್ದು ನನ್ನ ಅನುಭವಕ್ಕೆ ಬಂದಿದೆ. ಇದೂ ಕೂಡ ಹಾಗೇ ಇರಬಹುದೆ? ಮತ್ತೊಮ್ಮೆ ಸೂಕ್ಷವಾಗಿ ಟಾರ್ಚು ಹರಿದಾಡಿಸಿದೆ. ಯಾವ ಹಾವೂ ಕಾಣಲಿಲ್ಲ. ಆದರೆ ಬೆಳಕಿಗೆ ನನ್ನ ಬಲಕ್ಕೆ ಏನೋ ಸಣ್ಣಗೆ ಸರಿದಂತಾಯಿತು. ಟಾರ್ಚು ಕೀಲಿಸಿ ನೋಡಿದೆ. ಒಂದು ನನ್ನ ಮಗಳ ಅಂಗೈಯಷ್ಟಗಲದ ಒಂದು ಜಿರಲೆ! ಪೊರಕೆ ತಂದವನೇ ಹೀಗೆ ಒಂದೇ ಏಟು.!
ಲೇ ಇವಳೇ ಇಲ್ನೋಡು.ಎಂದು ಕರೆದೆ.
ಅರೆನಿದ್ರೆಯಲ್ಲಿ ಎದ್ದುಬಂದ ಇವಳು, “ ಇದೇ ಇರ್ಬೇಕು ಕಣ್ರಿ..ಇದರ ಮನೆ ಮುಚ್ಚ ಆದ್ರೆ ಆವಾಗ್ಲೆ ಇನ್ನೂ ಸ್ವಲ್ಪ ದಪ್ಪ ಗಿಪ್ಪ ಇದ್ದಂಗಿತ್ತು
ಎಂದದ್ದು ಕೇಳಿ ಅಲ್ಲೇ ಕುಸಿದು ಕುಳಿತೆ. ಹಾವಾದರೂ ಬಂದು ನನ್ನನ್ನು ಕಚ್ಚಬಾರದೇ ಅನಿಸಿತು.

-ಯಜಮಾನ್ ಫ್ರಾನ್ಸಿಸ್, ಬೇಗೂರಿನಿಂದ.

ಆಗಲೇ ಸೀತಾಪಹರಣ ಆಗಿಬಿಟ್ಟಿದೆ


’ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ,ಕುಟ್ಟಾ ಕುಟ್ಟಾ, ಕೊಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ’ ಈ ಪರಿಯ ತಾಳ ಬದ್ಧದ ಕುಟ್ಟುವ ಶಬ್ದವನ್ನು ಎಲ್ಲಿ ಕೇಳಬಹುದು?ಎಲ್ಲಿ?ಹೇಗೆ?ಅಂತೀರಾ?

ಸಾಂಪ್ರಾದಾಯಿಕ ಚಿನಿವಾರ ಪೇಟೆಯಲ್ಲಿ ಈ ತಾಳ ಬದ್ಧ ಕುಟ್ಟುವ ಶಬ್ದವನ್ನು ನಾವು ಕೇಳುತ್ತೇವೆ. ಅಲ್ಲಿನ ಕುಶಲಕರ್ಮಿಗಳು ಪುಟಾಣಿ ಅಗ್ಗಿಷ್ಟಿಕೆಗೆ ಕೊಳಲಿಗಿಂತ ತೆಳುವಾದ ಸಣ್ಣ ಊದು ಕೊಳವೆಗಳಿಂದ ಊದುತ್ತಾ, ಅದರಲ್ಲಿನ ಕೆಂಡದಲ್ಲಿ ಬಂಗಾರದ ಗಟ್ಟಿಯನ್ನು ಚಿಮ್ಮಟದಿಂದ ಹಿಡಿದು ಬಿಸಿ ಮಾಡಿ ಅಡಿಗಲ್ಲಿನ ಮೇಲಿಟ್ಟು ಸಣ್ಣ ಸುತ್ತಿಗೆಯಿಂದ ಬಡಿಯುತ್ತಿರುತ್ತಾರೆ. ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ,ಕುಟ್ಟಾ ಕುಟ್ಟಾ, ಕೊಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ ಆ ಬಡಿತದ ಶಬ್ದ ರೂಪ. ಹಿಂದೆ,ಅರಸುಗಳ ಕಾಲದಲ್ಲಿ ಬಂಗಾರದ ನಾಣ್ಯಗಳು ಚಲಾವಣೆಯಲ್ಲಿದ್ದಾಗ, ರಾಜರು, ಅರಸರು. ಸಾಮ್ರಾಟರು, ಚಿನಿವಾರರು ತಮ್ಮ ಟಂಕಸಾಲೆಗಳಲ್ಲಿ ನಾಣ್ಯಗಳನ್ನು ತಯಾರಿಸಲು ನಿಯಮಿಸಿಕೊಳ್ಳುತ್ತಿದ್ದರು.ಅವರಿಗೆ ವರ್ಷಕೊಮ್ಮೆ ವೇತನ ನೀಡಲಾಗುತ್ತಿತ್ತು. ಅವರು ಕೆಲವೊಮ್ಮೆ ಶಾಸನಗಳನ್ನು, ತಾಮ್ರಪತ್ರಗಳನ್ನು ಬರೆಯುತ್ತಿದ್ದರು. ಹಳದಿ ಲೋಹ ಬಂಗಾರ, ಬಂಗಾರದ ಒಡವೆ ಯಾರಿಗೆ ಬೇಡ? ಎಲ್ಲರೂ ಈ ಹಳದಿ ಲೋಹದ ಮೋಹದ ಮೋಡಿಗೆ ಒಳಗಾದವರೇ. ಎಲ್ಲರೂ ಬಂಗಾರ. ಬಂಗಾರದ ಒಡವೆಗೆ ಆಶೆ ಪಡುವವರೆ. 

ಚಿನಿವಾರ ಪೇಟೆಯಲ್ಲಿ ಬಂಗಾರ, ಬಂಗಾರದ,ಬೆಳ್ಳಿಯ ಒಡವೆಗಳನ್ನು ಮಾರಲಾಗುತ್ತದೆ. ಬಂಗಾರ, ಬೆಳ್ಳಿಗಳ ಜೊತೆಗೆ ವಜ್ರ, ಮುತ್ತು, ರತ್ನ, ಮಣಿಗಳನ್ನು ಅಳವಡಿಸಿ ಸೂಕ್ಷ್ಮ ಕುಸರಿ ಕೆಲಸ ಮಾಡಿ ಅಭರಣಗಳನ್ನು ತಯಾರಿಸುವವರನ್ನು ಪತ್ತಾರರು, ಅರ್ಕಸಾಲಿಗಳು, ಶೀಲವಂತರು, ಸರಾಫ್‌ರು, ಚಿನಿವಾರರು, ಸೋನಾರರು, ಅಚಾರಿಗಳು ಎಂದು ಕರೆಯುತ್ತಾರೆ. ಈ ಚಿನಿವಾರರನ್ನು ಅಕ್ಕಸಾಲಿಗರು ಎಂದೂ ಕರೆಯುತ್ತಾರೆ. ಇಲ್ಲಿ, ಅಕ್ಕಸಾಲಿಗರು ಎಂದರೆ, ಅವರು ಅಕ್ಕನಿಂದ ಸಾಲ ಪಡೆದವರು ಅಥವಾ ಅಕ್ಕನಿಗೆ ಸಾಲ ಕೊಟ್ಟವರು ಇರಬೇಕು ಎಂಬ ಸಂಶಯ ಮೂಡಿದರೆ ಅದಕ್ಕೆ ಅಶ್ಚರ್ಯಪಡಬೇಕಿಲ್ಲ. ಅಕ್ಕಸಾಲಿಗರು ಎಂದೂ ಅಕ್ಕನಿಂದ ಸಾಲ ಪಡೆದವರಲ್ಲ. ಅಕ್ಕನಿಗೆ ಸಾಲ ಕೊಟ್ಟವರಲ್ಲ. ಆದರೆ ಅಕ್ಕಂದಿರ ಬಂಗಾರವನ್ನು ಕದ್ದಿರಬಹುದೋ ಏನೋ? ಏಕೆಂದರೆ, ಅಕ್ಕಸಾಲಿಗನಿಗಿಂತ ಕಳ್ಳನಿಲ್ಲ, ಮಕ್ಕೆ ಗದ್ದೆಗಿಂತ ಬೆಳೆ ಇಲ್ಲ, ಆಚಾರಿ ಮಾತು ಆಚೆಗೊಂದು ಈಚೆಗೊಂದು, ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡ ಎಂಬ ಗಾದೆ ಮಾತುಗಳು ಜನಮಾನಸದಲ್ಲಿ ಪ್ರಚಲಿತದಲ್ಲಿವೆ. ಅಕ್ಕಸಾಲಿಗ ಅಕ್ಕನ ಚಿನ್ನ ಕದ್ದ ಬಗೆಗಿನ ಒಂದು ಹಾಸ್ಯ ಪ್ರಧಾನವಾದ ಪುಟಾಣಿ ಜಾನಪದೆ ಕತೆ ನಮ್ಮ ನೆರೆಯ ಆಂಧ್ರಪ್ರದೇಶದ ಜನಪದರಲ್ಲಿ ಪ್ರಚಲಿತದಲ್ಲಿದೆ. 

ರಾಮಚಂದಪುರ  ಎಂಬ ಊರಿತ್ತು. ಆ ಊರಲ್ಲಿ ಒಂದು ಚಿನಿವಾರ ಎಂಬ ಕುಟುಂಬ ನೆಲೆಸಿತ್ತು. ಆ ಚಿನಿವಾರ ಕುಟುಂಬದ ಮನೆತನ ಆ ನಾಡಿನಲ್ಲೆಲ್ಲಾ  ಪ್ರಸಿದ್ಧಿ ಪಡೆದಿತ್ತು. ತುಂಬಾ ಹಿಂದೆ ಕಾಕತಿಯರು ಮತ್ತು ನಂತರದ ವಿಜಯನಗರ ಅರಸ ಕಾಲದಿಂದಲೂ ಅವರದು ಆ ಸೀಮೆಯಲ್ಲಿ ಚಿನಿವಾರ ಮನೆತನವೆಂದು ಹೆಸರುವಾಸಿಯಾಗಿತ್ತು. ಓಲೆ, ಮೂಗುತಿ, ಪದಕ, ಅಡ್ಡಿಕೆ, ಲೋಲಾಕು, ವಂಕಿ, ಡಾಬು, ಕಾಲುಗೆಜ್ಜೆ, ಕಾಸಿನಸರ, ಉಂಗುರ, ಬಳೆ, ಮಾಂಗಲ್ಯ, ಕಾಲುಂಗುರ ಹೀಗೆ ಬಗೆಬಗೆಯ ಆಭರಣಗಳನ್ನು ವಿವಿಧ ನಮೂನೆಗಳಲ್ಲಿ ತಯಾರಿಸುತ್ತಿದ್ದ ಆ ಮನೆತನದಲ್ಲಿ ದಶರಥನೆಂಬ ಚಿನಿವಾರನಿದ್ದ. ಚಿನಿವಾರ ದಶರಥನಿಗೆ ಇಬ್ಬರು ಮಕ್ಕಳಿದ್ದರು .ಇಬ್ಬರೇನು ಆತನಿಗೆ ಒಟ್ಟು ಹತ್ತು ಜನ ಮಕ್ಕಳಿದ್ದರು. ಅದರಲ್ಲಿ ಆರು ಮಂದಿ ಗಂಡು ಮಕ್ಕಳಿದ್ದರೆ, ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಆದರೆ ಅವನ ದುರಾದೃಷ್ಟ, ಎಂಟು ಜನ ಮಕ್ಕಳು ಕಾಯಿಲೆ ಕಸಾಯಿ ಬಂದು ತೀರಿಕೊಂಡರು, ಆಗ ಮನೆಯಲ್ಲಿ ಒಂದು ಹೆಣ್ಣು ಮಗು ಮತ್ತು ಇನ್ನೊಂದು ಗಂಡು ಮಗು ಮಾತ್ರ ಉಳಿದವು. ದಶರಥ ದಂಪತಿ ಅವೆರೆಡೂ ಮಕ್ಕಳನ್ನು ತಮ್ಮ ಕಣ್ಣುಗಳೆಂದು ತಿಳಿದು ಅಕ್ಕರೆಯಿಂದ ಬೆಳೆಸಿದ್ದರು. ಹತ್ತು ಹೆತ್ತು, ಎರಡು ಮಕ್ಕಳ ಸುಖ ಕಾಣುತ್ತಿದ್ದ ಆತನ ಹೆಂಡತಿ, ಪತಿಗೆ ತಕ್ಕ ಹೆಂಡತಿಯಾಗಿದ್ದಳು. ಹಿರಿಯ ಮಗಳಿಗೆ  ಸುಹಾಸಿನಿ ಎಂದು ಹೆಸರಿಟ್ಟಿದ್ದರೂ, ಎಲ್ಲರೂ ಪ್ರೀತಿಯಿಂದ, ಸೀತೆ,ಸೀತೆ ಎಂದೇ ಕರೆಯುತ್ತಿದ್ದರು. ಕಿರಿಯ ಮಗನ ಹೆಸರು ರಾಮು. ಆತ ತಂದೆಯ ಜೊತೆಯಲ್ಲೇ ಕುಳಿತು ಚಿನಿವಾರಿಕೆಯಲ್ಲಿ ನೈಪುಣ್ಯತೆ ಗಳಿಸಿದ್ದ. ಯುಕ್ತ ಕಾಲದಲ್ಲಿ ಅಕ್ಕನಿಗೆ ಸಮೀಪದ ಲಕ್ಷ್ಮೀಪುರಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹಬ್ಬ ಹರಿದಿನಗಳಲ್ಲಿ ಬಂದು, ಹೋಗಿ ಮಾಡುತ್ತಿದ್ದ ಅಕ್ಕ ಸುಹಾಸಿನಿಯ ಗಂಡ, ಪಾಳೆಗಾರನೊಬ್ಬನ ಆಸ್ಥಾನದಲ್ಲಿ ಕರುಣಿಕನಾಗಿದ್ದ. ಇತ್ತ ರಾಮುವೂ ಹರೆಯಕ್ಕೆ ಕಾಲಿಡಲು ಆವನಿಗೂ ಚಿನಿವಾರ ದಶರಥ ಮದುವೆ ಮಾಡಿದ. ತಮ್ಮ ರಾಮುವಿಗೂ, ಅಕ್ಕ ಸುಹಾಸಿನಿಗೂ ಮಕ್ಕಳಾದವು ದಶರಥನ ಮನೆ ನಂದಗೋಕುಲವಾಗಿತ್ತು.

ಅಷ್ಟರಲ್ಲಿ ದಶರಥನಿಗೆ ವಯಸ್ಸಾಗಿ ವಯೋಸಹಜವಾಗಿ ಕಣ್ಣು ಅಷ್ಟು ಸರಿಯಾಗಿ ಕಾಣದಾಗಿತ್ತು. ಚಿನಿವಾರಿಕೆಯ ಎಲ್ಲಾ ಜವಬ್ದಾರಿಯನ್ನು ಮಗ ರಾಮುವಿಗೆ ಒಪ್ಪಿಸಿ ರಾಮಾ ಕೃಷ್ಣಾ ಎನ್ನುತ್ತಾ ಆತ ಕಾಲ ಕಳೆಯತೊಡಗಿದ್ದ. ಕಾಲ ಎಂದೂ ನಿಲ್ಲದಲ್ಲ. ಸುಹಾಸಿನಿಯ ಮಗಳು ವಯಸ್ಸಿಗೆ ಬಂದಿದ್ದಳು. ಅವಳಿಗೆ ಮದುವೆ ಮಾಡುವ ತುರಾತುರಿಯಲ್ಲಿದ್ದ ಸುಹಾಸಿನಿಯು, ಕರುಣಿಕನಾಗಿದ್ದ ತನ್ನ ಗಂಡನ ಕೆಲಸ ಮೆಚ್ಚಿ ಅವನಿಗೆ ಪಾಳೆಗರ ಕೊಟ್ಟಿದ್ದ ಬಂಗಾರದ ಕೈ ಕಡಗ ಮುರಿಸಿ ಮಗಳಿಗೆ ಓಲೆ, ಮೂಗುತಿ,ಮಾಂಗಲ್ಯಸರ, ಬಳೆ, ಉಂಗುರ, ಪದಕ ಮಾಡಿಸಲು ನಿರ್ಧರಿಸಿದಳು. ಗಂಡನ ಕೈ ಕಡಗವನ್ನು ಹಿಡಿದುಕೊಂಡು ತವರು ಮನೆಗೆ ಬಂದ ಸುಹಾಸಿನಿ, ತಮ್ಮನಿಗೆ ಕೈ ಕಡಗವನ್ನು ಕೊಟ್ಟಳು. ಅದನ್ನು ಕೆಡಸಿ, ಮಗಳಿಗೆ ಓಲೆ, ಮೂಗುತಿ, ಮಾಂಗಲ್ಯಸರ, ಬಳೆ, ಉಂಗುರ, ಪದಕ ಮಾಡುವಂತೆ ಕೋರಿದಳು. ಆದಷ್ಟು ಬೇಗ ಮಾಡಿಕೊಡುವಂತೆ ಅವನ್ನು ಒಪ್ಪಿಸಿದಳು.

ಮುಂದುವರಿಯುತ್ತದೆ . . . . . . .

 - ಎಫ್.ಎಂ.ನಂದಗಾವ್

ಆಗಲೇ ಸೀತಾಪಹರಣ ಆಗಿಬಿಟ್ಟಿದೆ - ಮುಂದುವರಿದ ಭಾಗ

(ಮುಂದುವರಿದ ಭಾಗ)

ರಾಮುವಿಗೆ ಅದು ಮದುವೆ ಹಂಗಾಮು. ಊರವರ ಮತ್ತು ಹತ್ತಿರದ ಪರವೂರುಗಳ ಕಾಯಂ ಗಿರಾಕಿಗಳ ಕೊಟ್ಟ ಆಭರಣಗಳ ತಯಾರಿಕೆಯ ಕೆಲಸವನ್ನು ರಾಮು ಒಪ್ಪಿಕೊಂಡಿದ್ದ. ಮೊದಲು ಬೇರೆಯರ ಅಭರಣಗಳನ್ನು ಮಾಡಿಕೊಟ್ಟ ನಂತರ, ಇನ್ನು ಹದಿನೈದು ಹದಿನಾರು ದಿನಗಳ ನಂತರ ನೀನು ಕೊಟ್ಟ ಬಂಗಾರದ ಕೈ ಕಡಗ ಕೆಡೆಸಿ ನಿನ್ನ ಮಗಳ ಆಭರಣಗಳನ್ನು ಮಾಡಿಕೊಡುವೆ ಎಂದು ರಾಮು ಅಕ್ಕನಿಗೆ ತಿಳಿಸಿದ್ದ. ಹದಿನೈದು ದಿನಗಳು ಕಳೆದವು. ಮತ್ತೆ ಹದಿನೈದು ದಿನಗಳು ಗತಿಸಿ 
ಒಂದು ತಿಂಗಳಾದರೂ ತಮ್ಮ ರಾಮುವಿನಿಂದ ಯಾವ ಸುದ್ದಿಯೂ ಬರಲಿಲ್ಲ. ಒಂದು ದಿನ ಸುಹಾಸಿನಿ ಗಂಡನನ್ನು ತವರು ಮನೆಗೆ ಕಳುಹಿಸಿದಳು. ರಾಮಚಂದಪುರಕ್ಕೆ ಗಂಡನನ್ನು ಕಳುಹಿಸುವ ಮೊದಲು, ನಿಮ್ಮ ಮಾವನ ಮನೆಯಲ್ಲಿ ಪಟ್ಟಾಗಿ ಕುಳಿತು, 
ಅಭರಣಗಳನ್ನು ಮಾಡಿಕೊಂಡೇ ಬನ್ನಿ ಎಂದು ತಾಕೀತು ಮಾಡಿದ್ದಳು. ಪಾಳೇಗಾರನನ್ನು ಹೇಗೋ ಒಪ್ಪಿಸಿ ನಾಲ್ಕು ದಿನ ರಜೆ ಹಾಕಿದ ಸುಹಾಸಿನಿಯ ಗಂಡ ರಾಮಚಂದ್ರಪುರದ ಮಾವನ ಮನೆಗೆ ಬಂದ. ರಾಮುವಿಗೆ ಮೈ ತುಂಬಾ ಕೆಲಸ. 
ಕೆಲಸದಲ್ಲೇ ಮುಳುಗಿದ್ದ ರಾಮು, ಊರವರ ಮತ್ತು ಹತ್ತಿರದ ಪರವೂರುಗಳ ಕಾಯಂ ಗಿರಾಕಿಗಳ ಅಭರಣಗಳನ್ನು ಮಾಡುವುದರಲ್ಲೇ ಹೆಚ್ಚು ಸಮಯ ಕಳೆದಿದ್ದ. ಅವನಿಗೆ ಅಕ್ಕ ಕೊಟ್ಟಿದ್ದ ಬಂಗಾರದ ಕೈ ಕಡಗ ಮತ್ತು ಅದನ್ನು ಮುರಿದು ಅವಳ ಮಗಳಿಗೆ ಅಭರಣಗಳನ್ನು ಮಾಡಿಕೊಡಬೇಕೆಂಬ ಸಂಗತಿ ಮರೆತೇ ಹೋಗಿತ್ತು. ಭಾವ ಮನೆಯ ಬಾಗಿಲಿಗೆ ಬಂದಾಗಲೇ ಅವನಿಗೆ ಭಾವನ ಕೈ ಕಡಗದ ನೆನಪಿಗೆ ಬಂದಿತು. ಅದರಲ್ಲೇ ತನ್ನ ಸೋದರ ಸೊಸೆ, ಅಕ್ಕನ ಮಗಳಿಗೆ ಅಭರಣಗಳನ್ನು ಮಾಡಬೇಕೆಂಬುದನ್ನು ಮರೆತದ್ದಕ್ಕಾಗಿ ಅಯ್ಯೋ ನನ್ನ ಮರೆವೆ? ಎಂದು ಕೊಳ್ಳುತ್ತಾ ಹಣೆ ಬಡಿದುಕೊಂಡ. ಸರಿ ಭಾವ, ಒಂದರೆಡು ದಿನ ನಮ್ಮಲ್ಲೇ ಇರು. ಅಭರಣಗಳನ್ನು ಮಾಡಿಕೊಡುವೆ ಎಂದು ಭಾವನಿಗೆ ಹೇಳಿದ. ನಂತರ ತಕ್ಷಣ ಕೈಯಲ್ಲಿದ್ದ ಕೆಲಸವನ್ನು  ಬದಿಗಿಟ್ಟು, ಭಾವನ ಕೈ ಕಡಗವನ್ನು ಕರಗಿಸಿ ಅಭರಣಗಳನ್ನು ಮಾಡಲು ಸಿದ್ಧತೆ ಮಾಡಿಕೊಂಡ. ಸಾಮಾನ್ಯವಾಗಿ ಸಾಂಪ್ರದಾಯಿಕವಾದ ಸರಾಫ್ ಕಟ್ಟೆ ಅಂದರೆ ಚಿನಿವಾರರ ಪೇಟೆಯಲ್ಲಿ ಮುಂದೆ ಅಂಗಡಿಯಿದ್ದರೆ, ಹಿಂದೆ ಅಯಾ ಚಿನಿವಾರರ ಅಂಗಡಿಗಳ ಮಾಲೀಕರ ಮನೆಗಳಿರುತ್ತದೆ.

ಕಣ್ಣು ಅಷ್ಟು ಸರಿಯಾಗಿ ಕಾಣದಿದ್ದರೂ , ಅಂಗಡಿಯಲ್ಲಿನ ಮತ್ತು ಮನೆಯಲ್ಲಿನ ವಿದ್ಯಾಮಾನಗಳನ್ನು ದಶರಥ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ದಶರಥನಿಗೆ ಅಳಿಯ ಮನೆಯಲ್ಲಿ ಬಂದು ಕುಳಿತ್ತಿದ್ದು ಇರಿಸುಮುರಿಸಿಗೆ ಕಾರಣವಾಗಿತ್ತು. ಅಕ್ಕ ಕೊಟ್ಟ ಬಂಗಾರದಲ್ಲಿ ಈಗ ಅಭರಣಗಳನ್ನು ಮಾಡುವ ತುರಾತುರಿಯಲ್ಲಿರುವ ಮಗ ರಾಮನ ಮೇಲೆ ಅವನಿಗೆ ಸಂಶಯ ಮೂಡ ತೊಡಗುತ್ತದೆ. ಮಗ ಕುಲಕಸಬಿನ ರೀತಿ ರಿವಾಜನ್ನು ಮರೆತಾನು ಎಂದು ಕೊಳ್ಳುತ್ತಾನೆ. ಅಕ್ಕ ಕೊಟ್ಟ ಬಂಗಾರದಲ್ಲಿ ಒಡವೆಗಳನ್ನು ಮಾಡುತ್ತಿರುವ ಮಗ ರಾಮು, ಅಕ್ಕ ಎಂಬ ಕಕ್ಕಲಾತಿಯಲ್ಲಿ ಬಂಗಾರ ಕದಯಲಿಕ್ಕಿಲ್ಲ ಎಂಬ ಅನುಮಾನ ಕಾಡುತ್ತಿರುತ್ತದೆ. ಮನೆಯ ಒಳಗೆ ಹಜಾರದಲ್ಲಿ ತೂಗು ಮಂಚ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ದಶರಥ, ಮಗ ರಾಮುವಿಗೆ ಹೇಗಾದರೂ ಮಾಡಿ ಈ ಬಗ್ಗೆ ಸೂಚನೆ ಕೊಡಬೇಕು ಎಂದು ಕೊಂಡ. ಬಾಯಿ ಬಿಟ್ಟು ಜೋರಾಗಿ ಹೇಳುವಂತಿಲ್ಲ. ಏಕೆಂದರೆ, ಮಗಳು ಸುಹಾಸಿನಿಯ ಗಂಡ-ಅಳಿಯ, ರಾಮುವಿನ ಮಕ್ಕಳೊಂದಿಗೆ ಆಡುತ್ತಾ ಅಲ್ಲೇ ಹಜಾರದಲ್ಲೇ ಇನ್ನೊಂದು ಕಡೆ ಕುಳಿತ್ತಿದ್ದ. ಮೊಮ್ಮಗುವೊಂದು ಕೈ ಕೊಸರಿಕೊಂಡು, ತೂಗು ಮಂಚದಿಂದ ಕೆಳಗೆ ಇಳಿದು ಮುಗ್ಗರಿಸಿ ಬಿತ್ತು. ಆಗ, ದಶರಥ ಹೊರಗೆ ಮನೆಯ ಮುಂದಿನ ಅಂಗಡಿಯಲ್ಲಿ ಕುಳಿತ್ತಿದ್ದ ಮಗ ರಾಮುವಿಗೆ ಕೇಳಿಸುವಂತೆ, ರಾಮ ರಾಮಾ, ರಾಮ ರಾಮ ಎಂದು ಎರೆಡು ಬಾರಿ ಕೂಗಿಕೊಂಡ.ಅಳಿಯನಿಗೆ ಮಾವನ ಕೂಗು ಮತ್ತು ಮನೆಯಲ್ಲಿದ್ದ ತಿಳವಳಿಕೆ ಹೊಂದಿದ್ದ ದೊಡ್ಡ ಮೊಮ್ಮಕ್ಕಳಿಗೆ ಅಜ್ಜನ ಕೂಗು ಅಗತ್ಯಕ್ಕಿಂತ ಜೋರಾಗಿತ್ತು ಎನ್ನಿಸಿತು. 

ಅಷ್ಟರಲ್ಲಿ ಅತ್ತ ಹೊರಗೆ ಅಂಗಡಿಯಲ್ಲಿ ಕುಳಿತು, ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ,ಕುಟ್ಟಾ ಕುಟ್ಟಾ, ಕುಟ್ಟೋನ್ ಕೆಟ್ಟ ಎಂಬ ಶಬ್ದ ಬರುವಂತೆ ಬಂಗಾರವನ್ನು ಹದವಾಗಿ ಬಡಿಯುತ್ತಿದ್ದ, ರಾಮು,  ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದನಲ್ಲಾ! ಎಂದು ಜೋರಾಗಿ ಉದ್ಗರಿಸುತ್ತಾನೆ. ಅದನ್ನು ಕೇಳಿಸಿಕೊಂಡ ದಶರಥನಿಗೆ ಸಮಾಧಾನ ಮೂಡುತ್ತದೆ. ದಶರಥ ಅಳಿಯನಿಗೆ ಮಾವನ ಮತ್ತು ಭಾವ ರಾಮುವಿನ ಮಾತುಗಳು ವಿಚಿತ್ರವಾಗಿ ಕಾಣಿಸುತ್ತದೆ. ಮಾವ ದಶರಥ  ರಾಮ ರಾಮಾ ಎಂದು ಕೂಗಿದರೆ, ಅದಕ್ಕೆ ಪ್ರತಿಯಾಗಿಯೋ ಎಂಬಂತೆ, ಭಾವ ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದನಲ್ಲಾ! ಎಂದು ಜೋರಾಗಿ ಉದ್ಗರಿಸಿದ್ದು ಒಗಟಾಗಿ ಕಾಡುತ್ತದೆ. ಒಂದೆರೆಡು ದಿನಗಳು ಕಳೆದ ಮೇಲೆ, ರಾಮು ಎಲ್ಲಾ ಒಡವೆಗಳನ್ನು ಮಾಡಿ ಕೊಟ್ಟಾಗ, ರಾಮುವಿನ ಅಕ್ಕ ಸುಹಾಸಿನಿಯ ಗಂಡ ಅವುಗಳನ್ನು ತೆಗೆದುಕೊಂಡು ಮನೆಗೆ ಹೋಗುತ್ತಾನೆ. 

ಮನೆಯಲ್ಲಿ ಹೆಂಡತಿ ಸುಹಾಸಿನಿಯ ಜೊತೆಗೆ ಅದು ಇದು ಮಾತಾನಾಡುವಾಗ, ಮಾವ ’ರಾಮಾ ರಾಮಾ’ ಎಂದದ್ದು, ಆಗ ಉತ್ತವೆಂಬಂತೆ, ರಾಮು ’ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದನಲ್ಲಾ!’ ಎಂದು ಉದ್ಗರಿಸಿದ ಬಗ್ಗೆ ಗಂಡ ತಿಳಿಸಿದಾಗ, ಅವಳು ಮುಗುಳ್ನಕ್ಕಳು. "ನೀವು ಗಂಡಸರೇ ಇಷ್ಟು, ಸೊನ್ನೆ, ಸೂಕ್ಷ್ಮಗಳು ಅರ್ಥವಾಗುವುದಿಲ್ಲ.ನಿಮ್ಮದು ಮಂದ ಬುದ್ಧಿ" ಎಂದು ಮೂದಲಿಸಿ ಅಪಹಾಸ್ಯ ಮಾಡಿದಳು. "ಏನೇ ಹಂಗಂದ್ರೆ?" ಎಂದು ಗಂಡ ಕೆಣಕಿದಾಗ," ರೀ ನೀವು ಎದುರಿಗಿದ್ದರೂ, ತಮ್ಮ ಅಕ್ಕಳಾದ ನನ್ನ ಬಂಗಾರ ಕದಿಯಲು ಹಿಂದೆ ಮುಂದೆ ನೋಡದೇ ಕದ್ದಿದ್ದಾನೆ. ಹುಟ್ಟು ಗುಣ ಸುಟ್ಟರೂ ಬಿಡುವುದಿಲ್ಲವಂತೆ. ’ರಾಮ ರಾಮ’ ಎಂದು ಅಪ್ಪ ಅಂದದ್ದು, ’ಅಕ್ಕನ ಬಂಗಾರ ಕದ್ದೆಯೋ? ಇಲ್ಲವೋ? ಎಂದು ವಿಚಾರಿಸಲು.ಅಪ್ಪನಿಗಿಂತ ಘಾಟಿಯಾದ ಮಗ ರಾಮುವಿನ ’ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದ್ದಾನಲ್ಲ!’ ಎಂಬ ಉದ್ಗಾರದ ಮಾತು, ’ಅಕ್ಕನ ಬಂಗಾರವನ್ನು ತಾನು ಆಗಲೇ ಕದ್ದು ಬಿಟ್ಟಾಗಿದೆ’ ಎಂಬುದರ ಸೂಚನೆ" ಎಂದು ಮುಸಿನಗುತ್ತಾ ಸುಹಾಸಿನಿ ವಿವರಿಸಿದಳು.

ಆಗ, ಅವಳ ಗಂಡ ಪೆಚ್ಚು ಪೆಚ್ಚಾಗಿ ಮುಗಳ್ನಕ್ಕ.  ಅಂದಿನಿಂದ, ’ಅಕ್ಕಸಾಲಿಗ ಅಕ್ಕನ ಬಂಗಾರವನ್ನು ಕದಿಯದೇ ಬಿಡೋನಲ್ಲ’ ಎಂಬ ಗಾದೆ ಮಾತು ಪ್ರಚಲಿತದಲ್ಲಿ ಬಂದಿತಂತೆ.

 - ಎಫ್.ಎಂ.ನಂದಗಾವ್

ತಾಯ್ನುಡಿ


ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದುಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಇಂಡಿಯನ್ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ವಾಸ್ತವವಾಗಿ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಪು ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.
ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ

ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಮ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ. ನಿಟ್ಟಿನಲ್ಲಿ ಚಿಂತಿಸಿದಾಗ ತಾಯ್ನುಡಿಯು ವಂಶವಾಹಿಯಾಗಿ ಬರದೆ ಬಾಲ್ಯದ ನುಡಿಗಲಿಕೆಯ ಸಂದರ್ಭದಲ್ಲಿ ಹೆಚ್ಚಾಗಿ ಕಿವಿ ಮೇಲೆ ಬಿದ್ದ ನುಡಿಯೇ ತಾಯ್ನುಡಿ ಎಂದು ಭಾವಿಸಬೇಕಾಗುತ್ತದೆ. ಮಗು ಪದಸಂಪತ್ತನ್ನು ಪಡೆದು ಅದರಲ್ಲೇ ತನ್ನ ಭಾವನೆಗಳನ್ನು ಹೊರಹಾಕುತ್ತದೆ.

ಕೊಸರು: ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ನುಡಿ ಗೊತ್ತು. ಆತ್ಮವಿದ್ದವರೆಲ್ಲ ನುಡಿಗೆ ಸ್ಪಂದಿಸುತ್ತಾರೆ.

-ಮರಿಜೋಸೆಫ್