Friday 20 October 2017

ಮಿಥುನ್ ಬಿರಾಲ - ಸಂವಾದ


ಕ್ರಿಕೆಟ್ ಆಟದಲ್ಲಿ ಆಟಗಾರರು ಬಹು ಮುಖ್ಯ ಭಾಗ. ೨೨ ಜನ ಮೈದಾನದಲ್ಲಿ ಆಟವಾಡಿದರೆ, ತೆರೆಯ ಹಿಂದೆ ನೂರಾರು ಜನರ ಶ್ರಮವಿರುತ್ತದೆ. ಅಂತಹ ಒಂದು ಬಹು ಮುಖ್ಯ ಕಾರ್ಯಕ್ಷೇತ್ರವೆಂದರೆ ಪಂದ್ಯದ ರೆಫರಿಯ ಹುದ್ದೆ. ಅತ್ಯಂತ ಜವಬ್ದಾರಿಯ ಹಾಗೂ ಗೌರವಯುತವಾದ ಹುದ್ದೆಗೆ ತನ್ನದೇ ಆದ ಘನತೆಯಿದೆ. ಕರ್ನಾಟಕದ ಆಟಗಾರರಿಗೆ ವಿಶ್ವ ಕ್ರಿಕೆಟ್ನಲ್ಲಿ ಒಂದು ವಿಶಿಷ್ಠ ಸ್ಥಾನವಿದೆ. ಸಭ್ಯ ಕ್ರಿಕೆಟಿಗರೆಂದೇ ಖ್ಯಾತಿ ಪಡೆದ ನಮ್ಮದೇ ಆಟಗಾರರು ರೆಫರಿ ಹುದ್ದೆಯನು ಅಲಂಕರಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮಿಥುನ್ ಬಿರಾಲ ಹುದ್ದೆಗೆ ಆಯ್ಕೆಯಾಗಿದ್ದಾರೆ. ೪೦ ವರ್ಷದ ಮಿಥುನ್ ರವರ ತಂದೆ ರಘುನಾಥ್ ಬಿರಾಲ ಸಹಾ ಹುದ್ದೆಯನ್ನು ನಿಭಾಯಿಸಿದವರೇ. ಇಂತಹ ಸಂದರ್ಭದಲ್ಲಿ ಮಿಥುನ್ರವರನ್ನು ಮಾತುಕತೆಯ ಪರವಾಗಿ ಅಭಿನಂದಿಸಿದಾಗ ನಡೆದ ಸಂವಾದ .

ಮಾ.- ನಮಸ್ಕಾರ ಮಿಥುನ್, ಮೊದಲಿಗೆ ಬಿಸಿಸಿಐ ನಿಯೋಜಿತ  ಮ್ಯಾಚ್ ರೆಫ಼ರಿ ಆಗಿ ಆಯ್ಕೆಯಾಗಿರುವ ನಿಮಗೆ ನಮ್ಮ ಮಾತುಕತೆ ಬಳಗ ಹಾಗೂ ಕಥೋಲಿಕ ಕ್ರೈಸ್ತರ ಪರವಾಗಿ ಅಭಿನಂದನೆಗಳು. ಪಾತ್ರದಲ್ಲಿನ ನಿಮ್ಮ ಮುಂದಿನ ದಿನಗಳಿಗೆ ನಮ್ಮ ಶುಭ ಹಾರೈಕೆಗಳು
ಮಿಥುನ್ ನಮಸ್ಕಾರ ಪ್ರಶಾಂತ್. ನಿಮಗೂ, ನಿಮ್ಮ ಪತ್ರಿಕೆಗೂ, ಎಲ್ಲಾ ಜನರಿಗೂ ನನ್ನ ಧನ್ಯವಾದಗಳು. ನಿಮ್ಮ ಅಭಿನಂದನೆಯೊಂದಿಗೆ ಪ್ರಾರಂಭಿಸುತ್ತಿರುವ ನನ್ನ ಹೊಸ ಇನ್ನಿಂಗ್ಸ್ಗಾಗಿ ನನಗಾಗಿ ಪ್ರಾರ್ಥನೆಯೂ ಇರಲಿ.

ಮಾ.- ನಿಮ್ಮ ತಂದೆ ರಘುನಾಥ್ ಬಿರಾಲ ಅವರೂ ಸಹಾ ಮ್ಯಾಚ್ ರೆಫರಿ ಆಗಿದ್ದವರು. ತಂದೆಯ ಹೊರತಾಗಿ  ರೆಫರಿಯ ಹುದ್ದೆ ಆಯ್ಕೆ ಮಾಡಲು ಪ್ರೇರಣೆ ಏನು? ಸ್ವತ: ಆಟಗಾರರಾಗಿದ್ದ ನೀವು ಕೋಚ್ ಅಥವಾ ತರಬೇತುದಾರರಾಗಬಹುದಿತ್ತಲ್ಲವೇ?
ಮಿಥುನ್ ಹೌದು ನಾನು ಆಸ್ಟ್ರೇಲಿಯಾದವರು ನೀಡುವ ೨ನೇ ಹಂತದ ಸರ್ಟಿಫೈಡ್ ಕೋಚ್. ವರ್ಷದ ರಣಜಿ ಸರಣಿ ಅರಂಭಗೊಂಡರೂ ಕೋಚ್ ಆಗಿ ನನಗೆ ಯಾವುದೇ ರಾಜ್ಯದಿಂದ ಕರೆ ಇನ್ನೂ ಬಂದಿಲ್ಲ. ಕರ್ನಾಟಕ ರಾಜ್ಯ ಸಂಸ್ಥೆಯಿಂದ ಅವಕಾಶ ಲಭಿಸಿದಾಗ, ಇದು ಸದ್ಯಕ್ಕೆ ಅತ್ತ್ಯುತ್ತಮ ಅವಕಾಶ ಎಂದೆನಿಸಿತು. ಕೋಚ್ ಹುದ್ದೆಯ ಅರ್ಹತೆ ಪಡೆದಿರುವುದರಿಂದ ಅದನ್ನು ಯಾವುದೇ ಸಮಯದಲ್ಲೂ ಮಾಡಬಹುದಾಗಿದೆ. ಆಟದೊಂದಿಗೆ ಯಾವುದಾದರೊಂದು ರೀತಿಯ ನಂಟನ್ನು ಉಳಿಸಿಕೊಳ್ಳಬೇಕಾಗಿರುವುದು ಮುಖ್ಯ ಎನಿಸಿತು. ಹುದ್ದೆಯನ್ನು ನಾನು ಸ್ವೀಕರಿಸಿರುವುದು ಸಂತಸ ತಂದಿದೆ.

ಮಾ.- ಪಂದ್ಯಗಳಲ್ಲಿ ಆಟಗಾರರ ನಡುವಳಿಕೆ ಬಗ್ಗೆ ಗಮನ ಹಾಗೂ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಮಯದಲ್ಲಿ ಮ್ಯಾಚ್ ರೆಫರಿಗಳು ಕಾರ್ಯಪ್ರವೃತ್ತರಾಗುವ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಒಂದಷ್ಟು ಮಾಹಿತಿ ಇದ್ದರೂ, ಒಬ್ಬ ರೆಫರಿಯ ಇತರ ಕಾರ್ಯ ಚಟುವಟಿಕೆಗಳು ಯಾವುವು?
ಮಿಥುನ್ ಕ್ರೀಡೆಯಲ್ಲಿ ಆಟಗಾರರೇ ಅತಿ ಮುಖ್ಯ ಮತ್ತು ಅದು ನಡೆಯುವುದೇ ಅವರಿಂದ. ಆಟಗಾರರ ಮೈದಾನದೊಳಗೆ ತಮ್ಮ ಅತ್ತ್ಯುತ್ತಮ ಸಾಮಾರ್ಥ್ಯ ತೋರಲು ಬೇಕಾದ ಏನೆಲ್ಲಾ ಸೌಲಭ್ಯಗಳು ಇರಬೇಕೋ ಅದರೆಲ್ಲದರ ಕಡೆ ಗಮನ ಕೊಡಬೇಕು. ಒಬ್ಬ ಮ್ಯಾಚ್ ರೆಫರಿ ಆಟಗಾರರ ಗೆಳೆಯನಂತಿರಬೇಕೆ ವಿನಹ ಅವರ ಮೇಲೆ ಸವಾರಿ ಮಾಡಬಾರದು. ಹೌದು, ಆಟ ಲೋಕ ರೂಢಿಯ ಕ್ರೀಡಾ ಮನೋಭಾವದಿಂದ ನಡೆಯುತ್ತಿದೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಕಟ್ಟುನಿಟ್ಟಾಗಿರಬೇಕಾಗಿದ್ದರೂ ಕಠೋರವಾಗಿರಲು ಸಾಧ್ಯವಿಲ್ಲ. ತೂಗಿಸಿಕೊಂಡು ಹೋಗಬೇಕಾಗುತ್ತದೆ. ಇದರೊಂದಿಗೆ ಮೈದಾನ ಹಾಗೂ ಕ್ರೀಡಾಂಗಣದಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ, ಆಟಗಾರರು ಉಳಿದುಕೊಳ್ಳುವ ಹೋಟೆಲ್ಲುಗಳ ಗುಣಮಟ್ಟ, ಆಟದ ವರದಿಗಾಗಿ ಸರಿಯಾದ ಅಂತರ್ಜಾಲ ವ್ಯವಸ್ಥೆ, ಮೈದಾನದಲ್ಲಿನ ಸಲಕರಣೆಗಳ ಗುಣಮಟ್ಟ ಹೀಗೆ ಎಲ್ಲದರ ಬಗ್ಗೆ ರೆಫರಿ ಗಮನ ಹರಿಸಬೇಕಾಗುತ್ತದೆ. ಒಟ್ಟಿನಲ್ಲಿ ಆಟಕ್ಕೆ ಆಟಗಾರರಿಗೆ ಯಾವುದೇ ತೊಂದರೆ ಆಗದಂತ ವಾತಾವರಣದ ಬಗ್ಗೆ ಸದಾ ಗಮನಹರಿಸಬೇಕಾಗುತ್ತದೆ.

ಮಾ. - ವಿಶ್ವ ಕ್ರಿಕೆಟ್ನಲ್ಲಿ ಕರ್ನಾಟಕದ ಕ್ರಿಕೆಟಿಗರು ತಮ್ಮ ಸಭ್ಯ ಕ್ರಿಕೆಟ್ ಎಂದು ಹೆಸರುವಾಸಿಯಾದವರು, ಒಂದು ಸಂಪ್ರದಾಯ ನಿಮ್ಮ ಹುದ್ದೆಯ ಮೇಲೆ ಹೇಗೆ ಪರಿಣಾಮ ಬೀರಬಹುದು. ಏಕೆಂದರೆ ಯಾವುದೋ ಒಂದು ನಡುವಳಿಕೆ ಒಂದು ಸಂಸ್ಕೃತಿಯಲ್ಲಿ ಬೆಳೆದ ಆಟಗಾರನಿಗೆ ತಪ್ಪೆನಿಸಿದರೆ  ಇನ್ನೊಬ್ಬನಿಗೆ ಅದು ಏನೂ ಅನಿಸದಿರಬಹುದು
ಮಿಥುನ್ - ಹೌದು ನಮ್ಮ ಆಟಗಾರರು ಉತ್ತಮ ನಡುವಳಿಕೆಗೆ ಹೆಸರುವಾಸಿ ಹಾಗೂ ಕ್ರಿಕೆಟ್ ಉತ್ತಮ ರಾಯಭಾರಿಗಳು. ಆದರೆ ಆಟಗಾರರು ಪರಸ್ಪರ ಆಡುತ್ತಲೇ ಇರುವುದರಿಂದ, ಹೇಗೆ ನಡೆದುಕೊಳ್ಳಬೇಕು ಹಾಗೂ ತಮ್ಮ ಮಿತಿಗಳನ್ನು ತಿಳಿದವರೇ ಆಗಿರುತ್ತಾರೆ. ಅದನ್ನು ಮೀರಿದ ಅಶಿಸ್ತಿನ ನಡುವಳಿಕೆಗೆ ನಿಯಮಗಳಿವೆ ಹಾಗೂ ಅದರ ಪ್ರಕಾರ ಅದೇಷ್ಟೇ ದೊಡ್ಡ ಆಟಗಾರನಾಗಿದ್ದರೂ ತಲೆ ಬಾಗಬೇಕಾಗುತ್ತದೆ

ಮಾ.-  ಮ್ಯಾಚ್ ರೆಫರಿ ಆಗಲಿ ಯಾವುದಾದರೂ ನಿರ್ದಿಷ್ಟವಾದ ಅರ್ಹತೆ ಇದೆಯೇ?
ಮಿಥುನ್ - ಹೌದು, ರೆಫರಿ ಆಗಬಯಸುವವರು ಕನಿಷ್ಠ ೨೦ ರಣಜಿ ಪಂದ್ಯಗಳನ್ನಾದರು ಆಡಿರಲೇ ಬೇಕಾಗುತ್ತದೆ.

ಮಾ.- ಇಂದಿನ ದಿನಗಳಲ್ಲಿ ಮ್ಯಾಚ್ ರೆಫರಿ ಹುದ್ದೆಯ ಸವಾಲುಗಳೇನು?
ಮಿಥುನ್ ಈಗ ಪ್ರತಿ ಪಂದ್ಯವೂ ಕ್ಯಾಮರಗಳಲ್ಲಿ ಚಿತ್ರೀಕರಣವಾಗುತ್ತದೆ. ಇದರಿಂದ ಅನುಕೂಲದೊಂದಿಗೆ ಒತ್ತಡವೂ ಇರುತ್ತದೆ. ಪಂದ್ಯದ ಪ್ರತಿ ಕ್ಷಣವನ್ನೂ ಗಮನಿಸಲು ಕ್ಯಾಮರಗಳು ಸಹಾಯಕ. ಅದೇ ನಿಟ್ಟಿನಲ್ಲಿ ನಮ್ಮಿಂದ ಯಾವುದೇ ಒಂದು ಲೋಪವಾದರೆ ಬೇರೆಯವರು ಅದನ್ನು ಎತ್ತಿ ತೋರಿಸುವ ಸಂಭವವೂ ಇದೆ.

ಮಾ.-  ಇನ್ನೂ ನಿಮ್ಮ ಕ್ರಿಕೆಟ್ ಜೀವನಕ್ಕೆ ಬಂದರೆ, ಪಾದಾರ್ಪಣೆ ಮಾಡಿದ ಮೊದಲ ವರ್ಷದಲ್ಲಿ ಅತಿ ಹೆಚ್ಚು ರನ್ನುಗಳನ್ನು ಹೊಡೆದ ದಾಖಲೆ ೧೭ ವರ್ಷಗಳಿಂದ ನಿಮ್ಮ ಹೆಸರಲ್ಲಿದೆ. ಆಟಗಾರನಾಗಿ ನಿಮ್ಮ ಆರಂಭದ ವರ್ಷಗಳ ಬಗ್ಗೆ ಹೇಳಿ?
ಮಿಥುನ್ ಕ್ರಿಕೆಟ್ ಕುಟುಂಬ ಹಿನ್ನಲೆಯಿಂದ ಬಂದವರಿಗೆ ಏರುಪೇರುಗಳು ಸಹಜ. ನಾನಾಡಿದ ಮೊಟ್ಟ ಮೊದಲ ಪಂದ್ಯದಲ್ಲಿ ಶತಕಗಳಿಸಿದ್ದೆ. ನನಗಾಗ ೧೩ ವರ್ಷ. ನಂತರ ಎಲ್ಲಾ ವಯೋಮಾನದ ತಂಡಗಳಲ್ಲೂ ನಾನು ಆಡಿದ್ದೇನೆ. ಕಿರಿಯರ ತಂಡದಲ್ಲಿ ದ್ವಿಶತಕ ಬಾರಿಸಿದ್ದು ನನಗೆ ರಣಜಿ ಪ್ರವೇಶಿಸಲು ಸಹಕಾರಿಯಾಯಿತು. ರಣಜಿ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷ ನನಗೆ ಆಡಲು ಅವಕಾಶವೇ ಸಿಗಲಿಲ್ಲ. ನನ್ನ ತಂದೆ ಆಗ ತಂಡದ ಕೋಚ್ ಆಗಿದ್ದರು. ನನಗಿಂತ ಹಿಂದೆ ಬಂದವರಿಗೆಲ್ಲಾ ನನಗಿಂತ ಮುಂಚೆ ಅವಕಾಶ ಸಿಕ್ಕಿದು ನೋಡಿಯೂ ನನಗೆ ಏನೂ ಅನಿಸಲಿಲ್ಲ ಎಂದು ನಾನು ಹೇಳಿದರೆ ಅದು ಸುಳ್ಳಾಗುತ್ತದೆ. ಈಗ ಹಿಂದಿರುಗಿ ನೋಡಿದರೆ ನನ್ನ ತಂದೆಯ ಹುದ್ದೆಯ ಬಗ್ಗೆ ನನಗೇನು ಹೊಟ್ಟೆಕಿಚ್ಚಿಲ್ಲ. ಅವರದು ನಿಜಕ್ಕೂ ಕಷ್ಟದ ಕೆಲಸವೇ. ಕಷ್ಟದ ದಿನಗಳೇ ನನಗೆ ಮುಂದೆ ಅವಕಾಶ ಸಿಕ್ಕಾಗ ದಾಖಲೆಯ ರನ್ನು ಗಳಿಸಲು ಪ್ರೇರಣೆಯಾಯಿತು.

ಮಾ.- ನಿಮ್ಮ ಅಂದಿನ ಸಾಮರ್ಥ್ಯದ ಹಿನ್ನಲೆಯಲ್ಲಿ ನೋಡಿದಾಗ, ನೀವು ಕ್ರಿಕೆಟ್ನಲ್ಲಿ ಇನ್ನಷ್ಟು ಸಾಧಿಸಬಹುದಿತ್ತು ಎನಿಸುವುದಿಲ್ಲವೇ? ಅಂದು ನೀವು ಎದುರಿಸಿದ ಸವಾಲುಗಳೇನು?
ಮಿಥುನ್ ಹೌದು, ನಾನು ಇನ್ನಷ್ಟು ಸಾಧಿಸಬಹುದಿತ್ತು. ಆದರೆ ಅಂದು ನಾನು ಎಸ್. ಎಸ್. ದಾಸ್, ಆಕಾಶ್ ಚೋಪ್ರ, ಸೆಹ್ವಾಗ್, ಗೌತಮ್ ಗಂಭೀರ ಮುಂತಾದವರೊಂದಿಗೆ ಸ್ಪರ್ಧೆಯಲ್ಲಿದ್ದೆ. ಅವರ ಸಾಧನೆಗಳೇನು ಎಂಬುದು ಈಗ ಎಲ್ಲರಿಗೆ ತಿಳಿದಿದೆ. ಆದರಿಂದ ನನಗೆ ಯಾವುದೇ ರೀತಿಯ ವಿಷಾದವಿಲ್ಲ.

ಮಾ.- ಇಂದಿನ ಕ್ರಿಕೆಟ್ ಬದಲಾಗಿದೆಯೇ?
ಮಿಥುನ್ ಖಂಡಿತ. ಅಂದು ೨೫೦ ರಿಂದ ೨೭೫ ರನ್ನುಗಳು ಸ್ಪರ್ಧಾತ್ಮಕವಾಗಿದ್ದವು, ಇಂದು ೧೮೦ ರನ್ನುಗಳನ್ನು ೨೦ ಓವರುಗಳಲ್ಲಿ ಚಚ್ಚಿ ಬಿಸಾಡುತ್ತಾರೆ. ಹೆಚ್ಚು ರನ್ನುಗಳು, ರಂಗು ರಂಗಿನ ಬಟ್ಟೆ, ಅಡ್ಡಾದಿಡ್ಡಿ ಹೊಡೆತಗಳು ಎಲ್ಲಾ ಸೇರಿ ಕ್ರಿಕೆಟ್ ಮನೋರಂಜನೆಯ ಮಾಧ್ಯಮವಾಗಿದೆ. ಮೊದಲ ಎಸೆತದಿಂದಲೇ ಮನೋರಂಜನೆ. ಸಾಂಪ್ರದಾಯಿರಿಗೆ ಟೆಸ್ಟ್ ಕ್ರಿಕೆಟ್ ಇಷ್ಟ. ಅದರಲ್ಲಿ ಅಂತಹ ಬದಲಾವಣೆ ಆಗಿಲ್ಲ.

ಮಾ.- ಈಗಿನ ನಿಮ್ಮ ಮೆಚ್ಚಿನ ಕ್ರಿಕೆಟಿಗರು?
ಮಿಥುನ್ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, .ಬಿ.ಡಿವಿಲಿಯರ್ಸ್ ಹಾಗೂ ಜೋ ರೂಟ್

ಮಾ.- ಕ್ರಿಕೆಟ್ ಆಡುವುದನ್ನು ಬಿಟ್ಟು ರಂಗದಲ್ಲಿ ಯುವಕರಿಗೆ ಬೇರೆ ಉದ್ಯೋಗಾವಕಾಶಗಳು ಇವೆಯೇ?
ಮಿಥುನ್ ನಿಮ್ಮ ಅಭಿರುಚಿಗೆ ತಕ್ಕಂತೆ ಅನೇಕ ಅವಕಾಶಗಳಿವೆ. ವೀಕ್ಷಕ ವಿವರಣೆ, ಅಂಪೈರ್, ಸ್ಕೋರರ್, ಅಂಕಣ ತಯಾರಿಕೆ, ದೈಹಿಕ ಸಲಹೆಗಾರರು, ಕ್ಯಾಮರಾ ಮೆನ್, ಮಾಧ್ಯಮ ಪ್ರತಿನಿಧಿ ಹೀಗೆ ಅನೇಕ ಅವಕಾಶಗಳಿವೆ.

ಮಾ.- ವಂದನೆಗಳು ಮಿಥುನ್. ನಿಮ್ಮ ಹುದ್ದೆ ಅಂತರಾಷ್ಟ್ರೀಯ ಪಂದ್ಯಗಳಿಗೂ ಆದಷ್ಟು ಬೇಗ ವಿಸ್ತಾರಗೊಳ್ಳಲಿ ಎಂದು ಹಾರೈಸುತ್ತೇವೆ.
ಮಿಥುನ್ - ನಿಮ್ಮ ಹಾರೈಕೆಗೆ ಹಾಗೂ ಸಂವಾದಕ್ಕಾಗಿ ವಂದನೆಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.