Thursday 12 May 2011

ಹಾರೋಬೆಲೆಯ ಶತಮಾನದ ನಾಟಕ ‘ಮಹಿಮೆ’





‘ಯೇಸು ಹೃದಯವೇ.. ದಾಸರ ಮೇಲೆ ನೀಡಿ ನಿಮ್ಮ ವರವ

ದೋಷಭರಿತ ನಮ್ಮಗಳಿಗೆ ...ನೀಡಿ ನಿಮ್ಮಾಶೀರ್ವಾದವ’ 

ಈ ನಾಂದಿ ಪದ್ಯ ಪ್ರಾರಂಭವಾಗುತ್ತಿದ್ದಂತೆ ಊರ ಜನರಲ್ಲಿ ಒಂದು ಬಗೆಯ ಸಂಚಲನ ಸೃಷ್ಟಿಯಾಗುತ್ತದೆ. ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ತಮ್ಮ ಕೆಲಸಗಳನ್ನು ಮುಗಿಸಿ ನಾಟಕ ನೋಡಲು ಮೈದಾನದತ್ತ ಧಾವಿಸುತ್ತಾರೆ. ಮಕ್ಕಳು ಸಾಕಷ್ಟು ಮೊದಲೇ ರಂಗಸ್ಥಳದ ಮುಂದಿನ  ಬಯಲಲ್ಲಿ ಚಾಪೆಹಾಸಿ ತಮ್ಮ ಜಾಗ ಕಾದಿರಿಸುತ್ತಾರೆ. 


ಊರಿನ ಯುವಕರಲ್ಲಿ ಸಂಭ್ರಮ. ಪಟಾಕಿ ಸಿಡಿಸಿ ಅದನ್ನು ವ್ಯಕ್ತಪಡಿಸುವ ಕಾತರ. ಹಿರಿಯರಿಗೆ ಹಳೆಯ ನೆನಪುಗಳು ನುಗ್ಗಿ ಬರುತ್ತವೆ. ಪಾತ್ರಧಾರಿಗಳಿಗೆ ಮೇಕಪ್ ಸರಿ ಪಡಿಸಿಕೊಂಡು ರಂಗದ ಮೇಲೆ ಬರುವ ಕಾತರ.... ಹೀಗೆ ಎಲ್ಲರಲ್ಲೂ ಒಂದು ಬಗೆಯ ಚಡಪಡಿಕೆ.  ಇದು ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ‘ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಹಾಗೂ ಪುನರುತ್ಥಾನದ ಮಹಿಮೆ’ಯನ್ನು ಸಾರುವ ನಾಟಕದ ಆರಂಭದ ಸಂದರ್ಭ.


ಶತಮಾನ ದಾಟಿರುವ ಈ ನಾಟಕ ಜನರ ಬಾಯಲ್ಲಿ ‘ಮಹಿಮೆ’ ಎಂದೇ ಹೆಸರಾಗಿದೆ. ಯೇಸು ಕ್ರಿಸ್ತರ ಜೀವನ, ಬೋಧನೆ, ವಿಶೇಷವಾಗಿ ಅವರು ಶಿಲುಬೆಗೇರುವ ಸಂದರ್ಭದ ಯಾತನಾಮಯ ಘಟನೆಗಳು ಹಾಗೂ ನಂತರದ ಪುನರುತ್ಥಾನದ ಬಗೆಗೆ ಬೈಬಲ್‌ನಲ್ಲಿ ಉಲ್ಲೇಖವಾಗಿರುವ ವೃತ್ತಾಂತಗಳೇ ಈ ನಾಟಕದ ಕಥಾವಸ್ತು. 1906ರಲ್ಲಿ ಈ ನಾಟಕ ರಂಗದ ಮೇಲೆ ಮೊದಲು ಪ್ರದರ್ಶನವಾಯಿತು. ಆ ನಂತರ ಇದು ಪ್ರತಿ ವರ್ಷ ಒಂದೇ ರಂಗ ಮಂಟಪದ ಮೇಲೆ ‘ಶುಭ’ ಶುಕ್ರವಾರದಂದು ಪ್ರದರ್ಶನಗೊಳ್ಳುತ್ತ ಬಂದಿದೆ! ನಾಟಕದ ಕಥಾ ವಸ್ತು ಹಾಗೂ ಅದು ನಡೆದ ಸಂದರ್ಭ 2000 ವರ್ಷಗಳ ಹಿಂದಿನ ಜೆರುಸಲೇಮೀನದ್ದಾದರೂ ನಾಟಕದ ಸಂಭಾಷಣೆ, ಸಂಗೀತ, ವೇಷ ಭೂಷಣ, ರಂಗ ವಿನ್ಯಾಸ ಇತ್ಯಾದಿಗಳು  ಕನ್ನಡ ನಾಡಿನ ಸಂಸ್ಕೃತಿ ಹಾಗೂ ಜಾನಪದದ ಪ್ರತೀಕವಾಗಿವೆ.

 ಹಾರೋಬೆಲೆ ಗ್ರಾಮ ಪೂರ್ವಕ್ಕೆ ಅರ್ಕಾವತಿ ನದಿ, ಪಶ್ಚಿಮಕ್ಕೆ ಪಾದ್ರಿಕೆರೆ, ಉತ್ತರಕ್ಕೆ ಕಪಾಲ ಬೆಟ್ಟ, ದಕ್ಷಿಣಕ್ಕೆ ಹೊಂಗೆ ಹಳ್ಳದ ಸುಂದರ ಪರಿಸರದಲ್ಲಿದೆ. 16ನೇ ಶತಮಾನದಿಂದ ಇಲ್ಲಿ ಕ್ರೈಸ್ತರು ನೆಲೆಸಿದ್ದಾರೆ. 1900ರಲ್ಲಿ ವಂದನೀಯ ಸ್ವಾಮಿ ಲಾಜರಸ್ ಅವರು ಮೊದಲ ಬಾರಿಗೆ ಈ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಹಾಡುಗಳ ರಚನೆಯಲ್ಲಿ ಪರಿಣಿತರಾದ ಲಾಜರಸ್ ಬಹು ಭಾಷಾ ಪರಿಣಿತರು.1906ರ ಏಪ್ರಿಲ್ 13ರ ಶುಭ ಶುಕ್ರವಾರ ಆರು ಮಂದಿ ಪಾತ್ರಧಾರಿಗಳು ಈ ನಾಟಕ ಪ್ರದರ್ಶಿಸಿದ್ದರು. ಆಗ ನಾಟಕದ ಸಮಯ ಒಂದು ಗಂಟೆಯಾಗಿತ್ತು.

1925ರ ವೇಳೆಗೆ (ಲಾಜರಸ್ ಅವರು ನಿಧನರಾದ ವರ್ಷ) ಅರವತ್ತು ಮಂದಿ ಪಾತ್ರಧಾರಿಗಳು ಇಡೀ ರಾತ್ರಿ ಪ್ರದರ್ಶಿಸುವ ವಿಸ್ತಾರಕ್ಕೆ ನಾಟಕ ಬೆಳೆದಿತ್ತು. ಆನಂತರ ಊರಿನ ಶಿಕ್ಷಕ ಸಿ.ಇನ್ನಾಸಪ್ಪ ಅವರ ಸಾರಥ್ಯದಲ್ಲಿ ಪರಿಷ್ಕರಣೆಗೊಂಡು ಪ್ರದರ್ಶನವಾಗುತ್ತ ಬಂದಿದೆ.

ಆರಂಭದಲ್ಲಿ ಹೊಂಗೆಸೊಪ್ಪಿನ ಚಪ್ಪರದಲ್ಲಿ ಪಂಜುಗಳ ಬೆಳಕಿನಲ್ಲಿ  ನಾಟಕ ಪ್ರದರ್ಶನವಾಗುತ್ತಿತ್ತು. ಈಗ ಝಗಮಗಿಸುವ ಬೆಳಕಿನ ರಂಗ ಮಂಟಪದಲ್ಲಿ ನಡೆಯುತ್ತದೆ. ಈ ನಾಟಕದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಬಯಲಾಟದ ಎಳೆಗಳನ್ನು ಗುರುತಿಸಬಹುದು. ಈಟಿ, ಕತ್ತಿ, ಗುರಾಣಿ ಹಿಡಿದ ಸೈನಿಕರ ಆರ್ಭಟದ ಕುಣಿತಗಳೆಲ್ಲ ನಮ್ಮ ಪೌರಾಣಿಕ ನಾಟಕಗಳಲ್ಲಿ ಇರುವಂತೆಯೇ ಇವೆ. ಆಧ್ಯಾತ್ಮ ಹಾಗೂ ಜಾನಪದ ಸಂಸ್ಕೃತಿಗಳು ನಾಟಕದಲ್ಲಿ ಹದವಾಗಿ ಬೆರೆತಿವೆ.

ನಾಟಕದಲ್ಲಿ ಮನರಂಜನೆಗಿಂತ ಭಕ್ತಿಯೇ ಪ್ರಧಾನ. ನಾಟಕದ ತಾಲೀಮು ನೋಡುತ್ತಲೇ ಸಂಭಾಷಣೆ,  ಹಾಡುಗಳನ್ನು ಕಂಠ ಪಾಠ ಮಾಡಿದ ಗ್ರಾಮಸ್ಥರ ಸಂಖ್ಯೆ ಗಣನೀಯ ವಾಗಿದೆ. ಹೊಲ ಗದ್ದೆಗಳಲ್ಲಿ ದುಡಿಯುವಾಗ, ಕುರಿ, ದನಕರುಗಳನ್ನು ಮೇಯಿಸುವಾಗ, ಗಾಡಿ ಹೊಡೆಯುವ ಸಮಯದಲ್ಲಿ ನಾಟಕದ ಹಾಡುಗಳನ್ನು ಗಟ್ಟಿಯಾಗಿ ಮೆಲಕು ಹಾಕುವ ಜನರನ್ನು ಇಲ್ಲಿ ನೋಡಬಹುದು.
ಹಾರೋಬೆಲೆ ಗ್ರಾಮ ಅನೇಕ ಧರ್ಮ ಗುರುಗಳು, ಸಮಾಜ ಸೇವಕರು, ಲೇಖಕರು, ಕಲಾವಿದರು, ಸಂಗೀತಗಾರರನ್ನು ನೀಡಿದೆ. ಅದೇ ಹಾರೋಬೆಲೆಯ ಹೆಗ್ಗಳಿಕೆ.


ಗರಿಗಳ ಭಾನುವಾರ



ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿರುವ ಕ್ರೈಸ್ತ ಬಾಂಧವರು.

 ಅಥವಾ ಏಪ್ರಿಲ್ ತಿಂಗಳಲ್ಲಿ ಒಂದು ಭಾನುವಾರದಂದು ಕ್ರೈಸ್ತ ಬಾಂಧವರು ಕೈಯಲ್ಲಿ ತೆಂಗಿನ ಗರಿಗಳನ್ನು ಹಿಡಿದುಕೊಂಡು ಹೋಗುವುದನ್ನು ಕಂಡು ನೀವು ಆಶ್ಚರ್ಯ ಪಟ್ಟಿರಬಹುದು. ಆ ಗರಿಗಳು ಹಿರಿಯರಿಗೆ ಭಕ್ತಿಯ ಸಂಕೇತವಾದರೆ ಪುಟ್ಟಮಕ್ಕಳಿಗೆ ಅದನ್ನು ಆಡಿಸುತ್ತಾ ನಿಲ್ಲುವ ಸಂಭ್ರಮ. ಬೆಳೆದ ಮಕ್ಕಳಿಗಂತೂ ಅದರಲ್ಲೆೀ ಶಿಲುಬೆ ಅಥವಾ ಇತರ ಆಕಾರಗಳನ್ನು ಮಾಡಿಕೊಂಡು ತಮ್ಮ ಕಲಾ ನೈಪುಣ್ಯವನ್ನು ವ್ಯಕ್ತಗೊಳಿಸುವ ತವಕ. ಇದೆಲ್ಲ ನಡೆಯುವುದು ಗರಿಗಳ ಹಬ್ಬ ಅಥವಾ ಗರಿಗಳ ಭಾನುವಾರದಂದು.

ಏನಿದು ಗರಿಗಳ ಭಾನುವಾರ?
ಇದನ್ನು ಶುಭ ಶುಕ್ರವಾರಕ್ಕೆ ಮುಂಚಿನ ಭಾನುವಾರ ಅಂದರೆ, ಕ್ರೈಸ್ತರ 40 ದಿನಗಳ ತಪಸ್ಸು ಕಾಲದ (ಲೆಂಟ್) ಕೊನೆಯ ಭಾನುವಾರ ಅಚರಿಸಲಾಗುತ್ತದೆ. ಅಂದು ಚರ್ಚಿನಲ್ಲಿ ಸೇರುವ ಕ್ರೈಸ್ತ ಬಾಂಧವರೆಲ್ಲರ ಬಳಿಯಲ್ಲಿ ಗರಿಗಳನ್ನು ಕಾಣಬಹುದು.

ಚರ್ಚ್ ಆವರಣದಲ್ಲಿ ಪೂಜಾವಸ್ತ್ರಗಳನ್ನು ಧರಿಸಿದ ಗುರುಗಳು ಪವಿತ್ರ ಗ್ರಂಥವನ್ನು ಪಠಿಸಿ ಗರಿಗಳನ್ನು ಮಂತ್ರಿಸಿದ ನಂತರ ಎಲ್ಲರೂ ಒಂದೊಂದು ಗರಿಯನ್ನು ಕೈಯಲ್ಲಿ ಹಿಡಿದು ಶಿಸ್ತಾಗಿ ಮೆರವಣಿಗೆಯಲ್ಲಿ ಯೇಸುವಿನ ಸ್ತುತಿಗೀತೆಯನ್ನು ಹಾಡುತ್ತಾ ದೇವಾಲಯದ ಒಳಗೆ ಹೋಗುವ ದೃಶ್ಯ ಮನಮೋಹಕ.

ಆಬಾಲವೃದ್ಧರಾದಿಯಾಗಿ ಎಲ್ಲರೂ ಪಾಲ್ಗೊಳ್ಳುವ ಈ ಆಚರಣೆಯಿಂದ ಪವಿತ್ರ ವಾರಕ್ಕೆ ಚಾಲನೆ ದೊರೆತು ಅದು ಗುಡ್ ಫ್ರೈಡೆ ಹಾಗೂ ಈಸ್ಟರ್ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಅಂದು ನಳನಳಿಸುವ ಹರಿದ್ವರ್ಣದ ಗರಿಗಳು ಶಿಲುಬೆಯಾಕಾರ ತಳೆದು ಮನೆಗಳ ಬಾಗಿಲನ್ನು ಅಲಂಕರಿಸುತ್ತವೆ. ಮುಂದಿನ ವರ್ಷದ ಬೂದಿ ಬುಧವಾರದಂದು ಅವು ಬೆಂಕಿಗೆ ಆಹುತಿಯಾಗುವುದರಲ್ಲಿ ಏನೋ ಒಂದು ಸಾರ್ಥಕತೆ ಇದೆ.

ಹಿನ್ನೆಲೆ: 2000 ವರ್ಷಗಳ ಹಿಂದೆ ಯೇಸುಕ್ರಿಸ್ತನ ನಾಡಿನಲ್ಲಿ ಸ್ವದೇಶಿಯರು ಪರಕೀಯರ ದಬ್ಬಾಳಿಕೆಯಿಂದ ನಲುಗಿದ್ದರು. ರೋಮನ್ ಚಕ್ರಾಧಿಪತ್ಯದ ಸಿಕ್ಕಾಪಟ್ಟೆ ಸುಂಕ, ದರ್ಪ ಮತ್ತು  ಶೋಷಣೆ ಒಂದೆಡೆಯಾದರೆ ತಮ್ಮ ದೇಶಸ್ಥರೇ ಆದ ಪುರೋಹಿತ ವರ್ಗದವರಿಂದ ಗೊಡ್ಡು ಸಂಪ್ರದಾಯಗಳ ಬಲವಂತ ಹೇರಿಕೆ, ಸಾಮಾಜಿಕ ಬಹಿಷ್ಕಾರ, ಭ್ರಷ್ಟಾಚಾರಗಳಿಂದ ಅಮಾಯಕ ಜನ ಬಲು ನೊಂದಿದ್ದರು.

ತಮ್ಮನ್ನು ಈ ಸಂಕೋಲೆಗಳಿಂದ ಬಿಡಿಸುವ ಒಬ್ಬ ವಿಮೋಚಕನಿಗಾಗಿ ಕಾದಿದ್ದ ಅವರಿಗೆ ಯೇಸುಕ್ರಿಸ್ತ ಆಶಾಕಿರಣವಾಗಿ ಕಂಡುದರಲ್ಲಿ ಅಚ್ಚರಿಯಿಲ್ಲ. ಒಮ್ಮೆ ಯೇಸು ಜೆರುಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಭಾರೀ ಜನಸಾಗರವೇ ಸೇರಿತ್ತು. ಆ ಜನರೆಲ್ಲ ಕೈಯಲ್ಲಿ ಗರಿಗಳನ್ನು ಹಿಡಿದದ್ದು ಮಾತ್ರವಲ್ಲದೆ ದಾರಿಯಲ್ಲಿ ಮಡಿ ಹಾಸಿ ಸಂಭ್ರಮ, ಹರ್ಷೋದ್ಗಾರದ ಗೀತೆಗಳೊಂದಿಗೆ ಯೇಸುವನ್ನು ಮೆರವಣಿಗೆಯಲ್ಲಿ ಕರೆದೊಯ್ದಿದ್ದರು ಎಂಬ ಉಲ್ಲೆೀಖ ಬೈಬಲ್ ಗ್ರಂಥದಲ್ಲಿ ಇದೆ. ಆದರೆ ಜೆರುಸಲೆಂ ಒಳಹೊಕ್ಕ ಮೇಲೆ ನಡೆದುದೇ ಬೇರೆ. ಯಾವ ಜನ ಜಯಕಾರ ಹಾಕಿ ಯೇಸುವನ್ನು ಸ್ವಾಗತಿಸಿದರೋ ಅದೇ ಜನ ಧಿಕ್ಕಾರ ಹಾಕಿ ಶಿಲುಬೆಗೆ ಏರಿಸಿದರು.

ಈ ಹಿನ್ನೆಲೆಯಲ್ಲಿ ನಡೆಯುವುದೇ ಗರಿಗಳ ಹಬ್ಬ. ಈ ವರ್ಷ ಇದನ್ನು  ಭಾನುವಾರ (ಏಪ್ರಿಲ್ 17) ಆಚರಿಸಲಾಗುತ್ತದೆ. ಈ ಆಚರಣೆಯು ದೊಡ್ಡ ಗುರುವಾರ, ಶುಭ ಶುಕ್ರವಾರ, ಪವಿತ್ರ ಶನಿವಾರಗಳ ಶೋಕ ಭರಿತ ಸಪ್ತಾಹಕ್ಕೆ ನಾಂದಿ ಹಾಡುತ್ತದೆ. ಮೃತ್ಯುಂಜಯ ಯೇಸುವಿನ ಪಾಸ್ಕ ಭಾನುವಾರದ ಶುಭೋದಯಕ್ಕೆ ಮತ್ತು ಎಲ್ಲಕ್ಕೂ ಮಿಗಿಲಾದ ಸಂತಸ ಸಂಭ್ರಮಕ್ಕೆ ಕಾಯುವಂತೆ ಪ್ರೇರೇಪಿಸುತ್ತದೆ

ಹೊಸ ಬೆಳಕಿನ ಈಸ್ಟರ್






ಕ್ರೈಸ್ತರ ಹಬ್ಬ ಎಂದರೆ ಮೊಟ್ಟ ಮೊದಲು ನೆನಪಿಗೆ ಬರುವುದು ಕ್ರಿಸ್‌ಮಸ್. ಏಸು ಕ್ರಿಸ್ತರ ಜನನದ  ಸಂಭ್ರಮದ ಹಬ್ಬವಾಗಿರುವುದರಿಂದ ಸಹಜವಾಗಿಯೇ ಧರ್ಮ, ಜಾತಿ ಮೀರಿದ ಮನ್ನಣೆ ಜನಪ್ರಿಯತೆ ಕ್ರಿಸ್‌ಮಸ್‌ಗಿದೆ.

ಆದರೆ ಕ್ರಿಸ್‌ಮಸ್ ರಂಗು ರಂಗಿನ ಹಬ್ಬವಾದರೆ ಪವಿತ್ರ ವಾರದ ಭಾನುವಾರದಂದು ಬರುವ ‘ಈಸ್ಟರ್’ ಕ್ರೈಸ್ತರಿಗೆ ನಿಜಕ್ಕೂ ಮಹತ್ವದ ಹಬ್ಬ. ಶನಿವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ನಡೆಯುವ ಅರ್ಥಗರ್ಭಿತ ಪ್ರಾರ್ಥನೆ ಹಾಗೂ ವಿಧಿವಿಧಾನಗಳನ್ನು ಒಳಗೊಂಡ ‘ಪಾಸ್ಕ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ  ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸ್ವಾಗತಿಸುತ್ತಾರೆ.

 ಅಂತೆಯೇ ಇದರೊಂದಿಗೆ 40 ದಿನಗಳ ತಪಸ್ಸು ಕಾಲದ ತ್ಯಾಗ, ದೇಹ ದಂಡನೆಯ ವ್ರತ ಮುಕ್ತಾಯಗೊಳ್ಳುತ್ತದೆ.

ಆನಂದ ಸಂಭ್ರಮದ ವಾತಾವರಣ ಮೂಡುತ್ತದೆ. ಇದನ್ನು ಪಾಸ್ಕ ಹಬ್ಬ ಹಾಗೂ ಪುನರುತ್ಥಾನದ ಹಬ್ಬ ಎಂದೂ ಕರೆಯಲಾಗುತ್ತದೆ.

ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಏಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್.

ಏಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ  ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಫೂರ್ತಿ ತುಂಬಿತ್ತು.

 ಬೈಬಲ್‌ನ ವಿಮೋಚನಾ ಕಾಂಡವೆಂಬ ಅಧ್ಯಾಯದಲ್ಲಿ  ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹೊಸ ಬದುಕಿನೆಡೆಗೆ ಕರೆದೊಯ್ದ ಸಂಗತಿಯ ನೆನಪಿನ ಅಚರಣೆಯೂ ಈ ಹಬ್ಬಕ್ಕೆ ತಳಕು ಹಾಕಿಕೊಂಡಿದೆ. ಹೀಗಾಗಿ ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ  ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದು ವ್ಯಾಖ್ಯಾನಿಸುತ್ತದೆ ಕ್ರೈಸ್ತ ಸಿದ್ಧಾಂತ. ಈ ಎಲ್ಲಾ ಕಾರಣಗಳಿಂದ  ಮಹತ್ವದ ಹಬ್ಬ ಈಸ್ಟರ್.

ಕ್ರೈಸ್ತ ಜನಮನದಲ್ಲಿ ದೊಡ್ಡ ಹಬ್ಬ ಅಥವಾ ದೊಡ್ಡಬ್ಬ ಎಂದೇ ಪರಿಚಿತ. ಈ ಹಬ್ಬಕ್ಕೆ ನಿರ್ದಿಷ್ಟ ದಿನಾಂಕವಿಲ್ಲ. ಆದರೆ ಸಾಮಾನ್ಯವಾಗಿ ಮಾರ್ಚ್ ತಿಂಗಳ 20ರ  ತರುವಾಯ ಬರುವ ಪೌರ್ಣಿಮೆಯ ನಂತರದ ಭಾನುವಾರ ಆಚರಿಸಲಾಗುತ್ತದೆ. ಈ ಹಬ್ಬದ ನಂತರದ 50 ದಿನಗಳ ಅವಧಿಯನ್ನು ಪಾಸ್ಕ ಕಾಲವೆಂದು ಕರೆಯಲಾಗುತ್ತದೆ.

ಭರವಸೆಯ ಹಬ್ಬ
ಈಸ್ಟರ್ ಎಂದರೆ ಬೆಳಕಿನ ಹಬ್ಬ, ಅದಕ್ಕಿಂತಲೂ ಹೆಚ್ಚಾಗಿ ಅದು ಹೊಸ ಭರವಸೆಯ ಹಬ್ಬ.

ನಲವತ್ತು ದಿನಗಳ ‘ತಪಸ್ಸು ಕಾಲ’ದ ಬಳಿಕ ಈಸ್ಟರ್ ಸಂಭ್ರಮಕ್ಕೆ ಜನ ಚರ್ಚ್‌ಗಳಲ್ಲಿ ಸೇರುತ್ತಾರೆ ಶನಿವಾರ ರಾತ್ರಿ ದಿವ್ಯ ಬಲಿಪೂಜೆಗೆ ಮುಂಚಿತವಾಗಿ ಚರ್ಚ್‌ನ ಅಂಗಳದಲ್ಲಿ ಹಾಕಿದ ಹೊಸ ಬೆಂಕಿಯ ಸುತ್ತ ಜಮಾಯಿಸುತ್ತಾರೆ. ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸುತ್ತಾ ಆ ಬೆಂಕಿಯಿಂದ ತಮ್ಮ ಕೈಯಲ್ಲಿರುವ ದೊಡ್ಡ ಮೇಣದಬತ್ತಿಯನ್ನು ಬೆಳಗಿಸುತ್ತಾರೆ. ಅಲ್ಲಿರುವ ಭಕ್ತಾದಿಗಳು ಅದರಿಂದ ಮೇಣದಬತ್ತಿಯನ್ನು ಹೊತ್ತಿಸಿ ಚರ್ಚ್‌ನ ಒಳಗೆ ಪ್ರವೇಶಿಸುತ್ತಾರೆ. ಅಲ್ಲಿಯವರೆಗೆ ಚರ್ಚ್‌ನ ಒಳಗೆ ಗಾಢಾಂಧಕಾರ ನೆಲೆಸಿರುತ್ತದೆ. ಹೊಸ ಬೆಳಕಿನೊಂದಿಗೆ ಜನ  ಒಳಪ್ರವೇಶಿಸಿದ ಬಳಿಕವೇ ಚರ್ಚ್‌ನ ದೀಪಗಳನ್ನು ಉರಿಸಲಾಗುತ್ತದೆ. ಬಳಿಕ ಸಂಭ್ರಮದ ಈಸ್ಟರ್ ಬಲಿಪೂಜೆ ನಡೆಯುತ್ತದೆ. ಜನ ಹೊಸ ಭರವಸೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬೆಳಕಿನ ಹಬ್ಬಕ್ಕೆ ಸ್ವಾಗತ ಕೋರುತ್ತಾರೆ.