Monday, 14 May 2018

ಜೀವನ ಪ್ರೇಮ ಸ್ಪುರಿಸುವ ಕಲಾವಿದ ಅಂತೋಣಿ ರಾಜ್ಸಾಮಾನ್ಯರಾಗಿದ್ದುಕೊಂಡೇ ಅಸಾಮಾನ್ಯ ಸಾಧನೆಗಳತ್ತ ನಡೆಯುವ ಅಥವಾ ಅಸಮಾನ್ಯ ಪ್ರತಿಭಯ ನಡುವೆಯೇ ಸಾಮಾನ್ಯರಂತೆ ಬಾಳುತ್ತಾ ಹೋಗುವವರು ನಮ್ಮ ನಡುವೆಯೇ ಇರುತ್ತಾರೆ. ಇದೆಲ್ಲದರ ಮಧ್ಯೆ ಅಸಾಮಾನ್ನರಲ್ಲದಿದ್ದರೂ ಸಾಮಾನ್ಯ ಬದುಕನ್ನೇ ಆಸಕ್ತಿದಾಯವಾಗಿಸಿಕೊಂಡು, ಕಲಾತ್ಮಕವಾಗಿ ಬದುಕುವ ಕಲೆಯೂ ಕೆಲವರಿಗೆ ಒದಗಿ ಬಂದಿರುತ್ತದೆ. ಇವರು ಅಂತೋಣಿ ರಾಜ್. ಆರ್. ಮಕ್ಕಳಿಗೆ ಚಾಕಲೇಟ್ ಅಂಕಲ್. ಪರಿಚಯವಿರುವ ಯಾವುದೇ ಮಗು ಇವರನ್ನು ಗುರಿತಿಸುವುದೇ ಹಾಗೆ. ಜೇಬು ಒಂದು ರೀತಿಯ ಚಾಕಲೇಟ್ ಅಕ್ಷಯ ಪಾತ್ರೆ. ಯವುದೇ ಮಗುವನ್ನು ಕಂಡರೆ ಮಾತಮಾತನಾಡುತ್ತಲೇ ಜೇಬಿನಿಂದ ಒಂದಷ್ಟು ಚಾಕಲೇಟ್ ಕೈತುಂಬಿ ಮಗುವಿಗೆ ರವಾನೆಯಾಗಿರುತ್ತದೆ. 

ನನ್ನ ಮಕ್ಕಳಿಗೆ ಇವರು ತರಕಾರಿ ಅಂಕಲ್. ಎರಡು ತಿಂಗಳಿಗೆ ಒಮ್ಮೆಯೋ ಇನ್ನೊಮ್ಮೆಯೋ ಒಂದು ಪ್ಲಾಸ್ಟಿಕ್ ಬ್ಯಾಗಿನ ತುಂಬಾ ತರಕಾರಿ ತಂದು ಮನೆಗೆ ಬರುತ್ತಾರೆ. "ಇದೆಲ್ಲಾ ಯಾಕೆ ಅಂಕಲ್" ಎಂದರೆ, "ಮತ್ತೆ ಇನ್ನೇನು ಮಾಡುವುದು, ನಾವೆಲ್ಲಿ ತಿಂತೀವಿ ಇಷ್ಟು" ಎಂಬ ಉತ್ತರ ಬರುತ್ತದೆ. ವಿಷಯ ಏನೆಂದರೆ ಮಾರುಕಟ್ಟೆಯಲ್ಲಿ ಇವರದು ಒಂದು ತರಕಾರಿ ಅಂಗಡಿ ಇದೆ, ಇವರು ಅಂಗಡಿಗೆ ಹೋಗುವುದಿಲ್ಲ ಆದರೆ ವಾರಕ್ಕೆ ಒಂದೋ ಎರಡೋ ಬಾರಿ ಅಂಗಡಿಯ ತರಕಾರಿಗಳೇ ಇವರಲ್ಲಿಗೆ ಬರುತ್ತದೆ. ಮನೆಗೆ ಒಂದಿಷ್ಟು ಬಳಸಿ ಮಿಕ್ಕಿದ್ದೆಲ್ಲಾ ಮನೆಗೆ ಬಂದವರಿಗೆ, ಪರಿಚಿತರಿಗೆ ಹಂಚಿಬಿಡುವುದೇ ಕಾಯಕ. ಮನೆಗೆ ಬಂದವರಿಗೆ ಕೊಡುವುದೇನೋ ಸರಿ, ಯಾವುದೋ ಕೆಲಸದ ಮೇಲೆ ಎಲ್ಲಿಗಾದರೂ ಹತ್ತಿರ ಹೋದರ ದಾರಿಯಲ್ಲಿ ಸಿಗುವ ಪರಿಚಿತರ ಮನೆಗೆ ಹೋಗಿ ಆ ಭಾರವಾದ ತರಕಾರಿ ಬ್ಯಾಗ್ ಕೊಡುವ ಮನಸ್ಸಿಗೆ ಏನನ್ನೋಣ?.  

 ಹೀಗೆ ಒಮ್ಮೆ ಮನೆಗೆ ಬಂದಿದ್ದಾಗ ಓಡಾಡುತ್ತಿದ್ದ ಮಗನನ್ನು ಕರೆದು, "ನಿನಗೆ ಯಾವ ಪ್ರಾಣಿ ಇಷ್ಟನೋ" ಎಂದು ಕೇಳಿದಾಗ ನಾನು ನನ್ನ ಮಗ ತಬ್ಬಿಬ್ಬು ಸರಿ 'ಆನೆ' ಎಂದು ಅವನು ಉತ್ತರಿಸುತ್ತಿದ್ದಂತೆ ಜೇಬಿನಿಂದ ಯವುದೋ ಒಂದು ಸಣ್ಣ ಪೇಪರ್ ತೆಗೆದು ಅದರ ಮೇಲೆಯೇ ಆನೆಯ ಒಂದು ಕಾರ್ಟೂನ್ ಚಿತ್ರ ಬಿಡಿಸಿದರು. "ಇನ್ನೊಂದು ಪ್ರಾಣಿ" ಎಂದು ಕೇಳಲು, ನಾವೂ ಹೇಳಲೂ ಮತ್ತೊಂದು ಪೇಪರ್ ಹುಡುಕುತ್ತಿದ್ದಾಗ ನಾನೇ ಒಂದು ಬುಕ್ ತಂದುಕೊಟ್ಟೆ, ಮುಂದೆ ಕೂತಲ್ಲೇ ಏಳೆಂಟು ಪುಟಗಳ ತುಂಬಾ ಹೀಗೆ ಪ್ರಾಣಿ, ಪಕ್ಷಿ, ಅದಕಿಂತ ಕ್ರೂರ ಪ್ರಾಣಿ ಮನುಷ್ಯರ ಚಿತ್ರಗಳು ತುಂಬಿಕೊಂಡವು. 


 ಚಿಕ್ಕ ವಯಸ್ಸಿನಿಂದ ಚಿತ್ರಕಲೆಯ ಮೇಲೆ ಪ್ರೀತಿ. ಬಾಲ್ಯದಿಂದ ಅವರನ್ನು ಬಲ್ಲವರ ಮಧ್ಯ ಅವರು ತಮ್ಮ "ಡ್ರಾಯಿಂಗ್"ನಿಂದಲೇ ಹೆಸರುವಾಸಿ. ಸ್ನೇಹಿತರ.  ಸಹಪಾಠಿಗಳ ಚಿತ್ರಗಳನ್ನೂ ಕ್ಷಣಮಾತ್ರದಲ್ಲಿ ಬರೆಯುವ ಕಲೆ ಆಗಲೇ ಸಿಧಿಸಿತ್ತು. ಹವ್ಯಾಸವೇನೋ ಎಂದರೆ ಹೀಗೆ ಬರೆದ ಸಾವಿರಾರು ಸಣ್ಣ ಸಣ್ಣ ಕಾರ್ಟೂನ್ಗಳು, ಚಿತ್ರಗಳು ಮನೆಯಲ್ಲಿ ಭದ್ರವಾಗಿ ಕೆಲವನ್ನು ಅಂದವಾಗಿ, ಜೋಡಿಸಿ ಪುಸ್ತಕವಾಗಿ ಇಟ್ಟುಕೊಂಡಿದ್ದರೆ ಇನ್ನಷ್ಟು ಬಿಡಿಬಿಡಿಯಾಗಿ ಹಾಗೇ ಇವೆ. ರೇಖಾಚಿತ್ರಗಳು, ಹಳೆಯ ವಾಸ್ತುಶಿಲ್ಪದ ಕಟ್ಟಡಗಳು, ಪ್ರಾಣಿಗಳು ಹಾಗು ಅದರಲ್ಲೂ ಹೆಣ್ಣಿನ ಮುಖದ ವಿವಿಧ  ಭಾವಗಳು ಇರುವ ಚಿತ್ರಗಳ ಪ್ರಮುಖ ವಿಷಯಗಳು, ಒಂದೇ ಚಿತ್ರದಲ್ಲಿ ಎರಡು ಮು‌ಖಗಳು, ಎರಡು ಭಾವಗಳನ್ನು, ಎರಡು ಅರ್ಥಗಳನ್ನು ನೀಡುವ ಡಬಲ್ ಡೈಮೆನ್ಷನ್  ಚಿತ್ರಗಳೂ ಇವೆ. ಚತ್ರಕಲೆಯ ಜೊತೆಗೆ ಅಂಚೆಚೀಟಿ ಮತ್ತು ನಾಣ್ಯ/ ನೋಟುಗಳ ಸಂಗ್ರಹವೂ ಇವರಿಗೆ ಅಂಟಿಕೊಂಡಿರುವ ಹವ್ಯಾಸಗಳು.  
 ನಿಜಕ್ಕೂ ಅಪರೂಪವೆನಿಸಿರುವ ಸ್ಟಾಂಪುಗಳ ದೊಡ್ಡ ಸಂಗ್ರಹವನ್ನು ನೊಡುವುದೇ ಒಂದು ರೋಮಾಂಚನ. ಒಂದೊಂದು ಸ್ಟಾಂಪಿಗೂ ಅದರದೇ ಆದ ಮಹತ್ವ, ಇತಿಹಾಸ ಹಾಗೂ ಅವರ ವೈಯಕ್ತಿಕ ಅನುಭವ ಅಂಟಿಕೊಂಡಿದೆ. ಒಂದೊಂದರ ಬಗ್ಗೆಯೂ ವಿಸ್ತಾರವಾಗಿ ಮಾತನಾಡುವ ಕಲೆಯೂ ಅವರಿಗೆ ಒಲಿದಿದೆ. ಸ್ಟಾಂಪ್ ಕಲೆಕ್ಷನ್ ಹವ್ಯಾಸದ ಹತ್ತಿರದ ಸಂಬಂಧಿ ನಾಣ್ಯಗಳ ಕಲೆಕ್ಷನ್ ಅಲ್ಲವೇ? ಆ ಹವ್ಯಾಸವೂ ಇದೆ. ಹಳೆಯ ನಾಣ್ಯ ಹಾಗೂ ನೋಟುಗಳ ಸಂಗ್ರಹವವು ಮನಮೋಹಕ. ಅಪರೂಪದ ನೋಟುಗಳನ್ನು ಪಡೆಯಲು, ಸಂಗ್ರಹಿಸಲು ಅವರು ಪಟ್ಟ, ಪಡುವ ಶ್ರಮದ ಬಗ್ಗ ಅವರ ಪತ್ನಿ ಹೇಳುತ್ತಿದ್ದರೆ ಆಶ್ಚರ್ಯವಾಗುತ್ತದೆ. ಜೀವನದಲ್ಲಿನ ಒಂದು ಹವ್ಯಾಸಕ್ಕಾಗಿ ಅವರು ತೋರುವ ಬದ್ದತೆ ಶಿಸ್ತುಗಳ ಪರಿಣಾಮಗಳನ್ನು ಆ ಸಂಗ್ರಹದ  ಅಲ್ಬಮ್ ಗಳು ಸಾರುತ್ತವೆ. ಈ ರೀತಿ ತಮ್ಮ ಬದುಕನ್ನು ಸುಂದರವಾಗಿಸಿಕೊಂಡು ತಮ್ಮದೇ ಆದ ಪ್ರಪಂಚದಲ್ಲಿ ಬಾಳುತ್ತಿರುವವರು ಎಷ್ಟೋ. ಆದರೆ ಅಂತೋಣಿರಾಜ್ ಮತ್ತಷ್ಟು ವಿಶಿಷ್ಟವಾಗಿ ನಿಲ್ಲುತ್ತಾರೆ.  ಬೆಂಗಳೂರಿನ ಚಾಮರಾಜಪೇಟೆಯಲ್ಲಿ  ಬಾಲ್ಯವನ್ನು ಕಳೆದ ಇವರು ಅಲ್ಲಿನ ಹಳೆಯ ನಿವಾಸಿಗಳಿಗೆಲ್ಲಾ ಚಿರಪರಿಚಿತರು. ಸಂತ ಜೋಸೆಫರ ಬ್ರಿಯಾಂಡ್ ಸ್ಕೈರ್ ಶಾಲೆಯಲ್ಲಿ ಶಿಕ್ಷಣ, ಮುಂದೆ ಆಡುಗೋಡಿ ಮೈಕೋ            ಉದ್ಯೋಗ. ಯಾವುದಕ್ಕೂ ಬಗ್ಗದ, ಜಗ್ಗದ ತಮ್ಮ ಸಹಜ ಸ್ವಭಾವದಿಂದ ಉದ್ಯೋಗ ಬಿಡಬೆಕಾಗಿ ಬಂದರೂ, ಬದುಕುವ ಅನೇಕ ದಾರಿಗಳಿಂದ ಜೀವನ ಸರಾಗ, ಹೋಟೆಲ್, ತರಕಾರಿ ವ್ಯಾಪಾರ ಹಾಗೂ ಕಲವು ಸಣ್ಣ ಪುಟ್ಟ ವ್ಯಾಪಾರಗಳಿಂದಲೇ ಜೀವನ ಸರಾಗವಾಗಿ ಸಾಗುತ್ತಿತ್ತು. ವಿಭಿನ್ನವಾದ ಹವ್ಯಾಸಗಳೊಂದಿಗೆ ಪತ್ನಿ ಅಂಜಲೀನ ಫರ್ನಾಂಡಿಸ್ ಮತ್ತು ಮಗ ವಿನಯ್ ರೊಂದಿಗೆ ಸಂಸಾರವೂ ಸುಂದರ.  ತಮಿಳು ಮಾತೃ ಭಾಷೆಯಾದರೂ, ಸುಮಾರು ಏಳೆಂಟು ಭಾಷೆಗಳಲ್ಲಿ ಮಾತು ನಿರರ್ಗಳ. ಓದುವುದರಲ್ಲೂ ಪರಿಣಿತಿ.ಕನ್ನಡದ ಓದಿಗೆ ಪ್ರಾಶಸ್ತ್ಯ. ಹಿಂದೊಮ್ಮೆ ಐ.ಏ.ಎಸ್ ಮಾಡುವ ಹಂಬಲವೂ ಇತ್ತು. ವೈಜ್ಞಾನಿಕ ಹಾಗೂ ವೈದ್ಯಕೀಯ
ಪುಸ್ತಕಗಳ ಬಗ್ಗೆಯೂ ಆಸಕ್ತಿ. 
ಇಷ್ಟೆಲ್ಲದರ ನಡುವೆಯೂ ದೇವರಲ್ಲಿ ಮಾತ್ರ ಅಪಾರ ಭಕ್ತಿ. ಪ್ರಾರ್ಥನೆ, ಶುಭಸಂದೇಶ, ದೇವಾಲಯಗಳಿಗೆ ಸಮಯ ಕೊಡುವುದರಲ್ಲಿ ಯಾವುದೇ ಕೊರತೆಯಿಲ್ಲ. ಅದರಲ್ಲೂ ಬಾಲ ಯೇಸು ಹಾಗೂ ದೇವಮಾತೆಯ ಬಗ್ಗೆ ವಿಶೇಷ ಪ್ರೀತಿ, ವಿಶ್ವಾಸ. ಹೀಗೆ ನೆಮ್ಮದಿಯ , ಸಮೃದ್ಧ ಜೀವನ, ಪರಿಶ್ರಮ ಬೇಡುವ ವ್ಯಾಪರ, ಸಮಯ ಬದ್ಧತೆ ಬಯಸುವ ಹವ್ಯಾಸಗಳು, ಸುಂದರ ಸಾಂಸಾರಿಕ ಜೀವನದ ನಡುವೆ ಬರಸಿಡಿಲಿನಂತ ಸುದ್ದಿ ಬಂದದ್ದು ೨೦೦೯ರಲ್ಲಿ. ವಿಶ್ರಾಂತಿಯಿಲ್ಲದ ಜೀವನ ಕ್ರಮದ ನಡುವೆ ಯಾಕೋ ದೈಹಿಕವಾಗಿ ಸೊರಗುತ್ತಿದ್ದಾರೆ ಎಂದು ಕುಟುಂಬ ಹಾಗೂ ಸ್ನೇಹಿತರಿಗೆ ಅನಿಸುತಿತ್ತು. ಆರೋಗ್ಯದಲ್ಲೂ ಆಗಾಗ್ಗೆ ಏರುಪೇರುಗಳಾಗಿ ಕೆಲಸದ ಒತ್ತಡದ ಹಾಗೂ ಸಮಯದ ಅಭಾವದ ನಡುವೆ ಕಾಲ ತಳ್ಳುತ್ತಲೇ ಬಂದದ್ದೂ ಆಯಿತು. ಇನ್ನೂ ಸಾಧ್ಯವೇ ಇಲ್ಲ ಎಂಬ ಹಂತ ತಲುಪಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಂಡಾಗ ಕಂಡು ಬಂದದ್ದು ಕ್ಯಾನ್ಸರ್.

 ಸೌಮ್ಯ ಸ್ವಭಾವದ ಪತ್ನಿ ಹಾಗೂ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದ ಮಗನಿಗೆ ಮಾತ್ರವಲ್ಲದೆ, ಕುಟುಂಬ ಸ್ನೇಹಿತರೆಲ್ಲರಿಗೂ ಇದು ಅರಗಿಸಿಕೊಳ್ಳಲಾಗದ ವಿಷಯ. ಇಂತಹ ವ್ಯಕ್ತಿಗೆ ದೇವರು ಹೀಗೆ ಮಾಡಬಹುದೇ? ಎಂಬ ಪ್ರಶ್ನೆ. ಆದರೆ ಈ ಪರಿಸ್ಥಿತಿಯನ್ನು ಅರಗಿಸಿಕೊಂಡವರು ಸ್ವತ: ಅಂತೋಣಿರಾಜ್ ರವರೇ. ದೇವರನ್ನು ಪ್ರಶ್ನೆ ಮಾಡುವುದರ ಬದಲು ಅವರಿಂದಲೇ ಉತ್ತರ ಪಡೆಯುವ ಪ್ರಯತ್ನ ಮಾಡಿದರು. ಸುಮಾರು ೯ ವರ್ಷಗಳಿಂದ ಈ ಮಾರಣಾಂತಿಕ ಖಾಯಿಲೆಯೊಂದಿಗೆ ನಡೆದಿದೆ ಅವರ ಹೋರಾಟ. ಆಸ್ಪತ್ರೆಯಲ್ಲಿ ಅಥವಾ ತೀವ್ರ ಅನಾರೋಗ್ಯದ ದಿನಗಳಲ್ಲಿ ಅವರನ್ನು ನಾನು ನೋಡಿಲ್ಲವಾದ್ದರಿಂದ ಅವರ ಈ ಹೋರಾಟದಲ್ಲಿ ನಾನು ಅವರಲ್ಲಿ ಕಂಡಿರುವುದು ಕೇವಲ ಅಪಾರವಾದ ವಿಶ್ವಾಸ, ಆತ್ಮ ವಿಶ್ವಾಸ, ಮೆಟ್ಟಿ ನಿಲ್ಲುವ ಧೈರ್ಯ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ’ಅವರಿಲ್ಲವೇ’ ಎಂದು ದೇವರತ್ತ ಬೆರಳು ಮಾಡುವ ಸಮರ್ಪಣಾ ಭಾವ.ನಿಜಕ್ಕೂ ಉತ್ಪ್ರೇಕ್ಷೆಯಲ್ಲ.
ನಗಡಿ, ತಲೆ ನೋವುಗಳೂ ನಮಗೆ ದೊಡ್ಡ ಖಾಯಿಲೆಯಂತೆ ಕೆಲವೊಮ್ಮೆ ಕಾಣುತ್ತದೆ. ಅವರು ತಮ್ಮ ಅನಾರೋಗ್ಯದ 
ಬಗ್ಗೆ ಮಾತಾನಡುವುದನ್ನು ಕೇಳಿ ಆಶ್ಚರ್ಯಪಟ್ಟಿದ್ದೇನೆ. ಯಾವುದೋ ಒಂದು ಸಣ್ಣ ತಲೆ ನೋವು ಎಂಬಂತೆ ಯಾವುದೇ ಉದ್ವೇಗವಿಲ್ಲದೆ, ಸಂಯಮ ಕಳೆದುಕೊಳ್ಳದೆ, ದು:ಖ-ನೋವಿನ, ಸ್ವ ಅನುಕಂಪದ ಸಣ್ಣ ಛಾಯೆಯೂ ಇಲ್ಲದೆ ತಮ್ಮ ದೈಹಿಕ ಯಾತನೆಯ ಬಗ್ಗೆ ವಿವರಗಳನ್ನು ನೀಡುತ್ತಾರೆ. ಕ್ಯಾನ್ಸರ್ ಹಾಗೂ ಅದರ ಚಿಕಿತ್ಸೆಯ ಬಗ್ಗೆ ತಾವೇ ಎಂದೋ ಓದಿದ್ದ ಪುಸ್ತಕವು ನೆರವಿಗೆ ಬಂದು, ತಮ್ಮ ದೇಹದಲ್ಲಿ ಆಗುತ್ತಿದ್ದ ಆಗು ಹೋಗುಗಳ ಸ್ಪಷ್ಟ ಚಿತ್ರಣ ತಮಗೆ ದೊರಕುತಿತ್ತು ಎನ್ನುತ್ತಾರೆ.   

ಈಗಾಗಲೇ ಸುಮಾರು ೨೫ಕ್ಕೂ ಹೆಚ್ಚು ಬಾರಿ ಆಗಿರುವ ಕಿಮೋಥೆರಪಿಗೆ ದೇಹವೇ ಒಗ್ಗಿಕೊಂಡಿದ್ದೂ “ಕೂದಲು ಉದುರುವುದು ನಿಂತು ಹೋಗಿದೆ ನೋಡು” ಎನ್ನುತ್ತಾ ನೀಟಾಗಿ ಎಣ್ಣೆ ಹಾಕಿ ಬಾಚಿಕೊಂಡಿರುವ ಕೂದಲಿನ ಮೇಲೆ ಕೈಯಾಡಿಸುತ್ತಾ ನಗುತ್ತಾರೆ.ಇನ್ನೊಂದು ಆಸಕ್ತಿಕರ ವಿಷಯವೆಂದರೆ ತಮ್ಮ ಯಾವುದೇ ಮೆಡಿಕಲ್ ರಿಪೋರ್ಟ್ ಬಂದಾಗ ಅದನ್ನು ಮೊದಲು ತೆಗೆದುಕೊಂಡು ಹೋಗುವುದೇ ವಿವೇಕನಗರದ ಬಾಲ ಯೇಸುವಿನ ದೇವಾಲಯಕ್ಕೆ. ಅಲ್ಲಿ ಬಾಲ ಯೇಸುವಿನ ಪ್ರತಿಮೆಯ ಪಾದದ ಬಳಿ ಅದನಿರಿಸಿ ನಂತರ ಡಾಕ್ಟರ್ ಬಳಿ ತೋರಿಸುವ ರೂಢಿ. “ ಎಲ್ಲಕ್ಕಿಂತ ದೊಡ್ಡ ಡಾಕ್ಟರ್ ಅವರಲ್ಲವೇ? ರಿಪೋರ್ಟ್ ಬಂದಿದೆ ನೋಡ್ಕೊಳ್ಳಿ ಎನ್ನುತ್ತೇನೆ, ಅವರು ನೀಡುವ ಟ್ರೀಟ್ ಮೆಂಟ್ ಮೊದಲು ಆಮೇಲೆ ಡಾಕ್ಟ್‌ರ್ ಗಳು ನೀಡುವ ಟ್ರೀಟ್ ಮೆಂಟ್” ಎನ್ನುವಾಗ ಅವರ ಮುಗುಳ್ನಗೆ ಮಾಸುವುದಿಲ್ಲ. ಆದರಿಂದಲೇ ೨೦೦೯ರಿಂದಲೂ ಹೀಗೆ ಇದ್ದೇನೆ, ಆ ’ದೊಡ್ಡ ಡಾಕ್ಟರ್’ನ ಪ್ರೀತಿ ಕಾಳಜಿಗೆ ಸಾಕ್ಷಿ ನಾನೇ” ಎನ್ನುತ್ತಾರೆ.
ಕ್ಯಾನ್ಸರ್ ನಂತ ಖಾಯಿಲೆಗಳನ್ನುಎದುರಿಸುವಾಗ ಮನೋಸ್ಥೈರ್ಯ ಬಹಳ ಮುಖ್ಯ. ಅದನ್ನು ಎದುರಿಸುತ್ತಾ ಚಿಕಿತ್ಸಾ ವಿಧಾನವೇ ಯಾತನೆಯ ವಿಷಯವಾಗಬಲ್ಲದು. ನಿರಾಶೆ ಆವರಿಸಿಕೊಂಡರೆ ಚಿಕಿತ್ಸೆಗಳ ಕೆಲಸ ನಿಧಾನವಾಗಬಲ್ಲದು. ಈ ಸಮಯದಲ್ಲಿ ಅಂತೊಣಿರಾಜ್ ರವರಿಗೆ ಸಹಾಯಕವಾಗಿ ನಿಂತಿದ್ದೇ ಈ ಜೀವನ ಪ್ರೀತಿ ಹಾಗೂ ದೈವ ವಿಶ್ವಾಸ. ಇಷ್ಟು ವರ್ಷಗಳ ಕಾಲ ಪೂರ್ಣವಾಗಿ ಮೆಟ್ಟಿನಿಲ್ಲದಿದ್ದರೂ ಜೀವನವನ್ನು ಸಹನೀಯವಾಗಿಸಿಕೊಳ್ಳಲು ಸಹಾಯ ಮಾಡಿರುವುದು ಇವೇ. ಬಹಳ ಮೃದು, ಸೌಮ್ಯ ಸ್ವಭಾವದ ಪತ್ನಿ ಆಂಜಲೀನಾರವರಿಗೆ ಇದೆಲ್ಲಾ ಭಾರವಾದ ವಿಷಯವೇ. ಆದರೆ ಪತಿಯ ಮಾತು, ಬಿಡುವಿಲ್ಲದ ಜೀವನ ಕ್ರಮ, ಹವ್ಯಾಸ, ಜೀವನ ಪ್ರೀತಿ, ದೈವ ವಿಶ್ವಾಸ ಧೈರ್ಯವನ್ನು ತಂದಿದೆ. ಈ 
ದಂಪತಿಗಳನ್ನು ಮಾತನಾಡಿಸುವುದೇ ಸೊಗಸು. ಅವರಲ್ಲಿ ನೋವಿದೆ ಆದರೆ ಎಲ್ಲೂ ಬೇಸರದ ಸಣ್ಣ ಛಾಯೆಯೂ ಇಲ್ಲ. ಅನಾರೋಗ್ಯ ತಂದೊಡ್ಡುವ ಸವಾಲುಗಳಿವೆ ಆದರೆ ಎದೆಗುಂದಿಲ್ಲ. ಹೇಗೋ ಏನೋ ಎಂಬ ಅಳುಕಿದೆ ಆದರೆ ಈ ಕ್ಷಣದ ನೆಮ್ಮದಿಯನ್ನು ಆ ಅಳಕು ನುಂಗಲು ಬಿಡುತ್ತಿಲ್ಲ. ಮಾತಿನಲ್ಲಿ ಹಾಸ್ಯ- ಪ್ರೀತಿ. ಪರಸ್ಪರ ಪ್ರೀತಿ ಹಾಗೂ ’ಎಲ್ಲವನ್ನೂ ಮೇಲಿನ ಡಾಕ್ಟರ್ ನೋಡಿಕೊಳ್ಳುತ್ತಾರೆ’ ಎಂಬ ನಂಬಿಕೆ, ಪ್ರಾರ್ಥನೆಯೊಂದಿಗೆ ಜೀವನ ನಡೆಯುತ್ತಿದೆ. ಅವರ ಮನೆಯಿಂದ ಹೊರಟಾಗ ಏನು ಹಾರೈಸುವುದು ಎಂದು ತಿಳಿಯದೇ ನಾನೇ ಒಂದಷ್ಟು ಸ್ಪೂರ್ತಿ, ಜೀವನ ಪಾಠ ತುಂಬಿಕೊಂಡು, ಮತ್ತೆ ಬರುತ್ತೇನೆ ಎಂದು ಬೀಳ್ಕೊಟ್ಟೆ.

 

No comments:

Post a Comment