Wednesday 14 November 2012

ಹಾವೊಂದು ಬಳಿ ಬಂದು.......

ಆ ದಿನ ಕೆಲಸ ಮುಗಿಸಿ ಮನೆಗೆ ಬಂದಾಗ, ಜೀವ ಅರ್ಧವಾಗಿತ್ತು!
ಬಾಗಿಲ ಬಳಿ ಬರುತ್ತಲೇ ಹೆಂಡತಿಯಾದವಳು, ಸ್ವಲ್ಪ ಇರಿ.ಯಾಕೋ ಪೀಠಿಕೆಯೇ ಸರಿಹೋಗುತ್ತಿಲ್ಲ..
ಈ ಮೊದಲೇ ಹೆಂಡತಿಯಾದವಳು, ನಾನು ಬಾಗಿಲ ಬಳಿ ಬರುತ್ತಲೇ, “ರೀ ಅಲ್ಲಿ. ಅದು.. ಇ ಎಂದು ಏನೊ ಬಡಬಡಿಸಲು ಶುರುಮಾಡಿದಳು. ಮುಖದಲ್ಲಿ ಸ್ವಲ್ಪ ಭಯ, ಆತಂಕ ಇತ್ತು. ನಾನು, “ಆ ದರಿದ್ರ ಸೀರಿಯಲ್ ನೋಡಬೇಡ ಅಂದ್ರೆ ಕೇಳ್ತೀಯಾ, ಹೇಳು?” ಎಂದೆ. ಆಕೆ, “ಅದಲ್ಲಾ ರೀ, ಇವತ್ತು ಮನೇಲಿ ಇಷ್ಟುದ್ದ, ಇಷ್ಟು ದಪ್ಪದ ಒಂದು ಭಯಾನಕ ಹುಳ ನೋಡಿದೆ” ಎಂದು ತನ್ನ ಕೈ ಕಣ್ಣುಗಳನ್ನು ಬಳಸಿ, ಅಭಿವ್ಯಕ್ತಿಸಿದ್ದನ್ನು ನೋಡಿಯೇ ನಾನು ಇನ್ನರ್ಧ ಇಳಿದುಹೋದೆ. ಹಾವು ಗೀವೇನಾದರೂ ಮನೆಯೊಳಗೆ ಹೊಕ್ಕಿತೆ? ??
ನನಗೆ ಚಿಂತೆಗಿಟ್ಟುಕೊಂಡಿತು.

ಈ ಹಾವಿಗೂ, ನನಗೂ ಅಷ್ಟಾಗಿ ಆಗಿಬರುವುದಿಲ್ಲ. ನಮ್ಮ ಮಾವ ತೀರಿಕೊಂಡಿದ್ದು ಈ ಹಾವು ಕಚ್ಚಿಯೇ! ನಮ್ಮ ಅಜ್ಜ ಕೂಡ ಮನೆಗೆ ಬಂದ ಹಾವನ್ನು ಸಾಯಿಸಿ,  ಹಾವಿನ ದ್ವೇಷಕ್ಕೆ ಬಲಿಯಾದವರೇ!  ಈಗಲೂ ಒಂದು ಅನಾಮಿಕ ಹಾವು, ನಮ್ಮ ಮನೆಯ ಸಮೀಪ ಆಗಾಗ ಕಾಣಿಸಿಕೊಳ್ಳುತ್ತಾ, ಮಾಯವಾಗುತ್ತಾ, ದ್ವೇಷದ ಎಪಿಸೋಡ್ ನ್ನು ಮುಂದುವರಿಸುತ್ತಿರುವಂತೆ ನನಗೆ ಭಾಸವಾಗಿದ್ದಿದೆ. ನನಗೋ ’ಹಾವು-ಏಣಿ’ ಆಟದ ಪುಟ ಕಂಡರೇ ಭಯ! ಒಂದೊಮ್ಮೆ, ದಾರಿಯಲ್ಲಿ ನನ್ನ ಸೈಕಲ್ಲಿನ ಚಕ್ರಕ್ಕೆ ಹಾವು ಸಿಕ್ಕಾಕಿಕೊಂಡು, ನಾನು ಭಯವಾಗಿ ಜೋರು ಪೆಡಲು ತುಳಿದಾಗ, ಅದು ತಿರುತಿರುತಿರುಗಿ ಹಿಂದೆ ತಿರುಗಿ.. ಕಾಣದಾಗಿ.ಮಾಯಾವಾಗಿ. ನಾನೂ ಅನಾಯಾಸವಾಗಿ, ಹಾವಿನ ’ಕಚ್ಚುಪಟ್ಟಿ’ಗೆ ಸೇರಿಕೊಂಡಿರುವುದು ನೆನಪಾಗಿ ಭಯ ಹೆಚ್ಚಾಯಿತು. ಆದರೆ ನಾನಿರುವುದು ಎರಡನೆಯ ಮಹಡಿಯಲ್ಲಿ. ಸಾಮಾನ್ಯ ಹಾವೊಂದು, ಗೋಡೆಯ ಮೇಲೆ ಹಾರುತ್ತಾ ಅಲ್ಲಿಯವರೆಗೂ ಬರುವುದು ಅಸಾಧ್ಯ ಎಂಬ ಅಂಶ ಸ್ವಲ್ಪ ಸಮಾಧಾನ ತಂದಿತು. ಆದರೇನು? ಎರಡನೆಯ ಮಹಡಿಯವರೆಗೂ, ರತ್ನಗಂಬಳಿಯಂತೆ  ಸಲೀಸಾದ ಮೆಟ್ಟಿಲುಗಳಿವೆಯಲ್ಲಾ?  ರಾಜಗಾಂಭೀರ್ಯದಿಂದೆಂಬಂತೆ ಹತ್ತಿ ಬಂದಿರಲೂ ಸಾಕು!
ಸರಿ, ಹಾಗೆ ಬರುವಾಗ, ಬಾಗಿಲು ತೆರೆದಿರಬೇಕಲ್ಲಾ? ಅದಕ್ಕೇನು? ಸೀರಿಯಲ್ಲು ಓಡುವಾಗ, ಹೆಣ್ಮಕ್ಕಳಿಗೆ ಗಂಡನೇ ಕಾಣುವುದಿಲ್ಲ. ಇನ್ನು ಈ ಹಾವೇನು ಮಹಾ! ಹಾವು ಬಂದ ಮನೆಯೊಳಗೆ ನಾನೂ ಬಲಗಾಲಿಟ್ಟು ಬಂದು ಕುಳಿತೆ. ಏನು ಮಾಡುವುದು ಎಂದು ಯೋಚಿಸುವ ಮೊದಲೇ ನೀರು ಕುಡಿಯಬೇಕೆನಿಸಿತು. ನೀರು ಕುಡಿಯುತ್ತಿರುವಾಗ, ನಾನು ಕುಳಿತಿರುವ ಜಾಗದಲ್ಲೇನಾದರೂ ಹಾವು ಸೇರಿಕೊಂಡಿದ್ದರೆ ಗತಿಯೇನು? ಅನ್ನಿಸಿ ಛಕ್ಕನೆ ಎದ್ದು ನಿಂತೆ.  ಕಚ್ಚಿದರೆ ಅನ್ಯಾಯದ ಸಾವಾಗುತ್ತದಲ್ಲಾ!
ಅಕೆ, ’ಏನಾಯಿತು’ ಎಂದಳು. ಏನಿಲ್ಲ.. ಈ ಹುಳ ಎಂದೆಯಲ್ಲಾ? ಎಲ್ಲಿ ಹೋಯಿತು ಏನಾದರೂ ನೋಡಿದೆಯಾ? - ಕೇಳಿದೆ.
ಅದಾ? ಅದೋ. ಈ ಮಂಚದ ಒಳಗೆಲ್ಲೋ ಸೇರಿಕೊಂಡಿರಬೇಕು.. ಇಲ್ಲೇ ನೋಡಿದ್ದು ನೋಡಿ..  ಎಂದದ್ದು ಸ್ವಲ್ಪ ಸಮಾಧಾನವಾದರೂ, ಹಾವೂ ಕೂಡ ಹಸಿವು, ನೀರಡಿಕೆ, ಸಂಜೆಯ ವಾಕಿಂಗ್ ಹವ್ಯಾಸ ಉಳ್ಳದ್ದೇ. ಈಗ ಎಲ್ಲಿ ಅಡ್ಡಾಡುತ್ತಿದೆಯೋ ಬಲ್ಲವರಾರು?


ರಾತ್ರಿಯಾಗಿತ್ತು. ಹಸಿವು ಬೇರೆ! ಭಯದ ವಾತಾವರಣದಲ್ಲಿ ಬಾತ್ ರೂಮಿಗೆ ಹೋಗಿಬರಲು ಭಯ. ನನ್ನ ದುರಾದೃಷ್ಟಕ್ಕೆ, ನೇರ ಕಮೋಡ್ ನಿಂದ ಜಿಗಿದರೆ ಪಾಡೇನು? ಅದು ಇನ್ನೂ ಘೋರ ಅನ್ಯಾಯದ ಸಾವು!

ಸದ್ಯಕ್ಕೆ ಅಪೇಕ್ಷೆಗಳನ್ನೆಲ್ಲಾ ಅದುಮಿಟ್ಟುಕೊಂಡು, ಹಾವು ಹಿಡಿಯುವುದೆಂದು ತೀರ್ಮಾನಿಸಿದೆ. ಮೊದಲು ಮನೆಯನ್ನೆಲ್ಲಾ ಕಣ್ಣಲ್ಲೇ ಒಮ್ಮೆ ಜಾಲಾಡಿ, ಮಂಚಕ್ಕೆ ಮುಹೂರ್ತ ಇಟ್ಟೆ. ಕರೆಂಟ್ ಇತ್ತು, ಆದರೂ ಧೈರ್ಯಕ್ಕೆ ಇರಲಿ ಎಂದು ಒಂದು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಹೊರಟೆ. ಇನ್ನೊಂದು ಕೈ ಇತ್ತಲ್ಲಾ.? ಅರ್ಧಾಂಗಿಯನ್ನು ಕರೆದೆ. ಆಕೆ ಬರಲೊಲ್ಲೆ ಎಂದು ತಲೆಯಾಡಿಸಿದಳು. “..ಏಕಾಂಗಿ.ಸಂಚಾರಿ” ಹಾಡು ದಾರಿಹೋಕನ ಮೊಬೈಲಿನೊಳಗಿನಿಂದ ಸರಿದು ಹೋದದ್ದು ಕೇಳಿತು.  ಮೆಲ್ಲಮೆಲ್ಲಗೆ ಹೆಜ್ಜೆ ಇಡುತ್ತಾ. ಸದ್ದು ಮಾಡದೇ..ಮಂಚದ ಬಳಿ ಬಂದೆ. ಯಾಕೆಂದರೆ, ’ಹಾವಿಗೆ ಕಿವಿ ತುಂಬಾ ಸೂಕ್ಷ್ಮ. ಎಷ್ಟು ದೂರದಲ್ಲಿದ್ದರೂ ಗುರುತಿಸುವ ಶಕ್ತಿ ಈ ಹಾವಿಗಿದೆ! ಎಂಬ ವಿಷಯವನ್ನು ವನಜಾ ಮಿಸ್ ಮತ್ತೊಮ್ಮೆ ಕಿವಿಯಲ್ಲಿ ಉಸುರಿದರು. ಈ ಹಾವು ಮಂಚದ ಬಳಿ ಬರುವುದಕ್ಕೆ ಕಾರಣವಾದರೂ ಏನು? ನಾವುಗಳು ನಿದ್ರೆಯಲ್ಲಿರುವಾಗ ಹಾಗೆಯೇ ಚಿರನಿದ್ರೆಗೆ ಜಾರಿಸಿಬಿಡಲು ಅನುಕೂಲವಾಗುತ್ತದೆಯೆಂದೆ? ಅಡಗಿ ಅಟ್ಯಾಕ್ ಮಾಡಲು ಪ್ರಸ್ತದ ಸ್ಥಳವೇ ಪ್ರಶಸ್ತ ಎಂದೆ?
ಕೋಲೊಂದನ್ನು ಎತ್ತಿಕೊಂಡೆ. ಈಗ ಸಂಪೂರ್ಣ ಶಸ್ತ್ರಸನ್ನದ್ಧನಾದಂತೆ ಅನ್ನಿಸಿತು. ಆದರೆ ಈ ಕೋಲಿಗೆ ಮೂರು ವರುಷದ ನನ್ನ ಮಗಳೇ ಹೆದರುವುದಿಲ್ಲ. ಇನ್ನು ಹನ್ನೆರಡು ವರುಷಗಳವರೆಗೂ ದ್ವೇಷ ಸಾಧಿಸುವ ಮಹಾನ್ ಹಾವು ಹೆದರೀತೆ? ಆದರೆ ಮನುಷ್ಯಮಾತ್ರದವನಾದ ನಾನೇನು ಮಾಡಲಿ? ಕೋಲಿಲ್ಲದಿದ್ದರೆ ಎದೆಯೊಳು ತಣ್ಣಗೆ ಮಲಗಿರುವ ಧೈರ್ಯವನ್ನೇಗೆ ಬಡಿದೆಬ್ಬಿಸಲಿ?

ಏನಾದರೂ ಸಿಕ್ಕಿತೆ..ಹೇಳಿ.ನನಗೆ ನಿದ್ರೆ ಬರ್ತಾ ಇದೆ. ಎಂಬ ಮಾತು ಅವಳಲ್ಲದೆ ಇನ್ಯಾರು ತಾನೆ ಹೇಳಲು ಸಾಧ್ಯ?
ಇರು ಮಾರಾಯ್ತಿ.. ಈಗಷ್ಟೆ ಸರಿಅದು ಹೇಗಿತ್ತು ಅಂತಾದರೂ ಹೇಳ್ತೀಯಾ” ಕೋಲು ನೆಲಕ್ಕೂರುತ್ತಾ ಕೇಳಿದೆ.
ಭಯಾನಕವಾಗಿ ಇತ್ತು ಕಣ್ರಿ. ಕಪ್ಪು ಅಂದ್ರೆ ಅಷ್ಟು ಕಪ್ಪು. ನಿಮಗಿಂಥ .. ಮೊದಲಿಗೆ ಬೆಡ್ ಶೀಟು, ತಲೆದಿಂಬುಗಳನ್ನು ಕೋಲಿನಿಂದ ಸರಿಸುತ್ತಾ, ಒಳಗೆಲ್ಲಾದರೂ ಸೇರಿಕೊಂಡಿದೆಯೇನೊ ಎಂದು ಪರಿಶೀಲಿಸಿದೆ. ಅಂಥದ್ದೇನೂ ಕಾಣಲಿಲ್ಲ. ಹಾಗೆ ಚೂರು ಸರಿದು,ಮಂಚವನ್ನು ಅಲ್ಲಾಡಿಸಿ, ತಕ್ಷಣ ನಿಂತಿದ್ದ ಸ್ಥಳಕ್ಕೇ ವಾಪಾಸು ಬಂದು ನಿಂತೆ. ಯಾಕೆಂದರೆ ನಾನು ಅಲುಗಾಡಿಸುವವರೆಗೂ ಪ್ರಶಾಂತವಾಗಿ ಕಾದಿದ್ದು, ಆಮೇಲೆ ಗಬಕ್ಕನೆ ಬಾಯಿ ಹಾಕಿದರೆ ? ಸದ್ಯ. ಯಾವ ಸದ್ದೂ ಕೇಳಲಿಲ್ಲ.
ಈಗ ಸ್ವಲ್ಪ ಧೈರ್ಯ ಬಂದ ಹಾಗೆ ಆಯಿತು. ಬೆಡ್ ಶೀಟು, ಕಂಬಳಿಗಳನ್ನು ಝಾಡಿಸಿದೆ. ಯಮಗಾತ್ರದ ಬೆಡ್ಡನ್ನು, ಪಾಪ ಒಬ್ಬನೇ ಎತ್ತಿ ಗೋಡೆಗೆ ಒರಗಿ ನಿಲ್ಲಿಸಿದೆ. ಅದು ಪ್ರಿಯತಮೆಯನ್ನು ಅಗಲಿದ ಪ್ರಿಯಕರನ ಹಾಗೆ ನನಗೆ ಕಂಡು, ನನ್ನ ಕಲ್ಪನೆಗೆ ಬರ ಬಂದಿರಬೇಕು ಅನಿಸಿತು. ಇರಲಿ. ಮೊಳಕಾಲೂರಿ, ತಲೆಯನ್ನು ಸಾಧ್ಯವಾದಷ್ಟು ಬಗ್ಗಿಸಿ, ಕಣ್ಣುಗುಡ್ಡೆ ಹಿಗ್ಗಿಸಿ ಮಂಚದ ಅಡಿಗೆ ಟಾರ್ಚು ಬಿಟ್ಟೆ.

ಒಂದೇಟಿಗೆ ಎಂಥದ್ದೂ ಕಾಣಲಿಲ್ಲ. ಹಾವು ಹಾಗೆಯೇ! ನನ್ನ ಪಕ್ಕದಲ್ಲೇ ಇದ್ದರೂ, ನನ್ನ ಗೆಳೆಯರಿಗೆ ಕಂಡರೂ, ’ಇಲ್ಲಿ..ಇಲ್ಲಿ.. ಎಂದು ಅವರು ಅರಚುವವರೆಗೂ, ನನ್ನ ಅರಿವಿಗೆ ಬರದ್ದು ನನ್ನ ಅನುಭವಕ್ಕೆ ಬಂದಿದೆ. ಇದೂ ಕೂಡ ಹಾಗೇ ಇರಬಹುದೆ? ಮತ್ತೊಮ್ಮೆ ಸೂಕ್ಷವಾಗಿ ಟಾರ್ಚು ಹರಿದಾಡಿಸಿದೆ. ಯಾವ ಹಾವೂ ಕಾಣಲಿಲ್ಲ. ಆದರೆ ಬೆಳಕಿಗೆ ನನ್ನ ಬಲಕ್ಕೆ ಏನೋ ಸಣ್ಣಗೆ ಸರಿದಂತಾಯಿತು. ಟಾರ್ಚು ಕೀಲಿಸಿ ನೋಡಿದೆ. ಒಂದು ನನ್ನ ಮಗಳ ಅಂಗೈಯಷ್ಟಗಲದ ಒಂದು ಜಿರಲೆ! ಪೊರಕೆ ತಂದವನೇ ಹೀಗೆ ಒಂದೇ ಏಟು.!
ಲೇ ಇವಳೇ ಇಲ್ನೋಡು.ಎಂದು ಕರೆದೆ.
ಅರೆನಿದ್ರೆಯಲ್ಲಿ ಎದ್ದುಬಂದ ಇವಳು, “ ಇದೇ ಇರ್ಬೇಕು ಕಣ್ರಿ..ಇದರ ಮನೆ ಮುಚ್ಚ ಆದ್ರೆ ಆವಾಗ್ಲೆ ಇನ್ನೂ ಸ್ವಲ್ಪ ದಪ್ಪ ಗಿಪ್ಪ ಇದ್ದಂಗಿತ್ತು
ಎಂದದ್ದು ಕೇಳಿ ಅಲ್ಲೇ ಕುಸಿದು ಕುಳಿತೆ. ಹಾವಾದರೂ ಬಂದು ನನ್ನನ್ನು ಕಚ್ಚಬಾರದೇ ಅನಿಸಿತು.

-ಯಜಮಾನ್ ಫ್ರಾನ್ಸಿಸ್, ಬೇಗೂರಿನಿಂದ.

5 comments:

  1. ಬೆರಗುಗಣ್ಣಿನಿಂದ ನಿಮ್ಮ ಅಕ್ಷರಗಳಲ್ಲಿ ಹಾವನ್ನು ಹುಡುಕಾಡಿದೆ. ಒಂದು ಹಾವು ಇಂತಹ ಚಂದದ ಲೇಖನವನ್ನು ಬರೆಯಲು ಸ್ಪೂರ್ತಿಯಾಗಿದ್ದೆಯಾದರೆ, ಹಾವುಗಳು ಮನೆಗೆ ಬರಲಿ.
    -Santhosh Ignatius

    ReplyDelete
    Replies
    1. ನಿಮ್ಮ ಹಾರೈಕೆ ನಿಜವಾಗಲಿ. ಹಾವುಗಳು ಮನೆಗೆ ಬರಲಿ ಮತ್ತು ಮನೆಗೆ ಮಾತ್ರ ಬರಲಿ, ಮನಸ್ಸಿನೊಳಗೆ ಬೇಡ. ಯಜಮಾನ್

      Delete
  2. ನಿಮ್ಮ ಹಾರೈಕೆ ನಿಜವಾಗಲಿ. ಹಾವುಗಳು ಮನೆಗೆ ಬರಲಿ ಮತ್ತು ಮನೆಗೆ ಮಾತ್ರ ಬರಲಿ, ಮನಸ್ಸಿನೊಳಗೆ ಬೇಡ!

    ReplyDelete
  3. ಪ್ರಶಾಂತ್ ಇಗ್ನೇಷಿಯಸ್16 November 2012 at 09:49

    ಯಜಮಾನ್, ಕ್ರಿಯಾಶೀಲತೆಯೆಂಬ ಹಾವು ಮನಸ್ಸಿನೊಳಗೂ ಬರಲಿ ಬಿಡಿ. ಬಂದು ಸೋಮಾರಿತನ, ಅಸಡ್ಡೆ, ಹೊಟ್ಟೆಕಿಚ್ಚುಗಳೆಂಬ ಕಪ್ಪೆ, ಇಲಿ, ಹಲ್ಲಿಗಳನ್ನು ತಿಂದು ಮನಸ್ಸನ್ನು ಸ್ವಚ್ಚವಾಗಿಡಲಿ. ಅನ್ಯಾಯದ ವಿರುದ್ಧ ಆಗಾಗ ಬುಸ್ಸುಗುಡುತ್ತಿರಲಿ :-)

    ReplyDelete
  4. ಪ್ರಶಾಂತ್ ಇಗ್ನೇಷಿಯಸ್21 November 2012 at 18:02

    ಬಾಗಿಲ ಬಳಿ ಬರುತ್ತಲೇ ಹೆಂಡತಿಯಾದವಳು, ಸ್ವಲ್ಪ ಇರಿ.ಯಾಕೋ ಪೀಠಿಕೆಯೇ ಸರಿಹೋಗುತ್ತಿಲ್ಲ..
    ಈ ಮೊದಲೇ ಹೆಂಡತಿಯಾದವಳು, ನಾನು ಬಾಗಿಲ ಬಳಿ ಬರುತ್ತಲೇ,

    "ಹಾವಿನ ’ಕಚ್ಚುಪಟ್ಟಿ’ಗೆ ಸೇರಿಕೊಂಡಿರುವುದು ನೆನಪಾಗಿ ಭಯ ಹೆಚ್ಚಾಯಿತು"......

    super lines :-))

    ReplyDelete