ತಡವಾಗಿಯಾದರೂ ಮೈಸೂರಿಗೆ ಹೋಗುವ ನಿರ್ಧಾರಮಾಡಿ ಹೋರಟೆಬಿಟ್ಟೆವು. 402ನೇ ದಸರದಲ್ಲಿ ಅಂತಿಂಥ ಯಾವ ವಿಶೇಷಗಳು ಮೇಳೈಸದಿರುವ ಸೂಚನೆ ಇದ್ದರೂ ಬಲರಾಮನ ಬದಲಿಗೆ ಅರ್ಜುನ ಈ ಬಾರಿಯ ಅಂಬಾರಿ ಹೊರುತ್ತಾನೆ. ಆತ ದೈತ್ಯನಂತೆ ಬಲರಾಮನಿಂತ ಕೊಂಚ ಉದ್ದ ಮತ್ತು ತೂಕ ಉಳ್ಳವನಂತೆ. ಆದರೆ ಬಲುತುಂಟ, ಮುಂಗೋಪಿ ತನ್ನ ಹಳೇ ಮಾವುತನನ್ನೆ ಕೊಲೆ ಮಾಡಿದ ಕೊಲೆಪಾತಕ. ಇಂತಹ ಕಾರಣಗಳಿಂದಲೇ ದಸರೆ ಗಜಪಡೆಯಿಂದ ಡಿಬಾರ್ ಆಗಿದ್ದನಂತೆ. ಅನಿವಾರ್ಯವಾಗಿ ಈತನಿಗೆ ಅಂಬಾರಿ ಹೊರುವ ಅವಕಾಶ ಬಂದಿದೆ. ಬಲರಾಮ ಅಂಬಾರಿ ಹೊತ್ತುಹೋಗುವಾಗ ಆತನನ್ನು ಮುಟ್ಟಿ ಚಾಮುಂಡಿಯನ್ನು ನೆನೆಯುತ್ತಿದ್ದ ಜನ, ಈ ಬಾರಿ ಅಂಬಾರಿ ಹೊರುವ ಅರ್ಜುನನ ಬಳಿ ಸುಳಿಯಲು ಸಾದ್ಯವಿಲ್ಲ. ಅವನ ತಂಟೆ ತಕರಾರುಗಳು ಸಲ್ಲದಾದ್ದರಿಂದ ಅವನ ಸುತ್ತ ಪ್ಯಾರ ಮಿಲಿಟರಿ, ಬಂದೂಕುದಾರಿಗಳು, ಕಟ್ಟಿಹಾಕುವ ಬಿರಿಹಗ್ಗ, ಅವ್ವಳಿಕೆ ಚುಚ್ಚುಮದ್ದು ಇತ್ಯಾದಿಗಳ ಸಿದ್ಧ ಪಡೆ ಇರಲಿದೆಯಂತೆ ಎಂಬೆಲ್ಲ ಸುದ್ದಿ ಓದಿ ಈ ಬಾರಿಯ ಅಂಬಾರಿ ಮೆರವಣಿಗೆಯನ್ನು ನೇರವಾಗಿ ನೋಡಲೆಬೇಕೆಂದು ಕೌತುಕಿಸಿದ ಮನಸ್ಸು ನೆಚ್ಚಿನ ನಾಯಕನ ಚಲನಚಿತ್ರದ ಬಿಡುಗಡೆಗೆ ಕಾದಂತೆ ಆಗಿತ್ತು.
ಅಂತೂ ಇಂತೂ ನಮ್ಮ ನೆಂಟರಿಸ್ಥರೊಬ್ಬರ ಸಹಾಯದಿಂದ ಅಂಬಾರಿ ಹೋಗುವ ಹಾದಿಯ ಇಕ್ಕೆಲಗಳಲ್ಲಿ ಅದಾಗಲೇ ಕಿಕ್ಕಿರಿದು ತುಂಬಿದ್ದ ಜನರ ನಡುವೆ ಬೇಡುವಂತ ದೀನ ಮುಖಮಾಡಿ ಸ್ವಲ್ಪ, ಸ್ವಲ್ಪ, ಸ್ವಲ್ಪ ಅನ್ನುತ್ತಲೆ ಸಾಕಾಗುವಷ್ಟು ಜಾಗ ಗಿಟ್ಟಿಸಿಕೊಂಡು ಕೂತುಬಿಟ್ಟೆವು. ಇದು ನಿಜಕ್ಕೂ ಹಿಮಾಲಯ ಹತ್ತಿ ಹಿರಿಹಿಗ್ಗುವ ಸಂತೋಷ. ಆದರೆ ಅಲ್ಲಿಂದಾಚೆಗಿನದೆ ಸಶೇಷ. ಡಬ್ಬದಲ್ಲಿ ಕೂತ ಗಿಫ್ಟುಗಳಂತೆ ಸುತ್ತಲು ಅಚ್ಚುಕಟ್ಟಾಗಿ ಪ್ಯಾಕ್ ಅಗಿತ್ತು. ಆಗ ಸಮಯ 1:30 ರ ಮಧ್ಯಾಹ್ನ. ಸಾಲು ಮರಗಳ ಮಧ್ಯೆ ಪ್ರಖರವಾದ ಬಿಸಿಲು. ಅಲ್ಲಿ ಕೂತವರನ್ನು ನೋಡಿ ಪಾಪ ಎಂದು ಮರುಕಪಟ್ಟುಕೊಳ್ಳುತ್ತಿದ್ದೆವು. ಅಲ್ಲಿದ್ದ ಎಲ್ಲರನ್ನು ಗಮನಿಸುವ ಗುರುತಿಸುವ ವ್ಯವದಾನ ನಮಗೆ. ಏಕೆಂದರೆ ಅಂಬಾರಿ ಆ ಸ್ಥಳಕ್ಕೆ ಬಂದು ತಲುಪಲು 4 ರ ತಿಳಿ ಸಂಜೆ ಆದೀತು ಎಂದು ತಿಳಿದವರು ಹೇಳುತ್ತಿದ್ದರು. ಪಕ್ಕದಲ್ಲಿ ಇದ್ದವರು ಪಕ್ಕದ ಮನೆಯವನಂತಾಗಿ ಹೋದ. ಅಲ್ಲೊಬ್ಬ ಇಲ್ಲೊಬ್ಬ ಇದ್ದ ವಿದೇಶಿಯರನ್ನು What? Where You? Mysore Good? ಎಂದೆಲ್ಲ ಮಾತನಾಡಿಸುತ್ತ ತಿಳಿದ ಇಂಗ್ಲೀಷ್ ಪದಗಳಲ್ಲೆ ಮೈಸೂರನ್ನು ವರ್ಣಿಸಿ ಹೇಳುತ್ತಿದ್ದ ಸ್ಥಳಿಯರ ಔದಾರ್ಯ ಮೆಚ್ಚಲೇಬೇಕು. ಊಟದ ಸಮೇತ ಊರ ಮುಂಚಿತವಾಗಿ ಬಂದಿದ್ದ ಹಲವರು ಪೊಟ್ಟಣ ತೆರೆದು ಊಟ, ಇಡ್ಲಿ, ಪಲಾವುಗಳನ್ನು ತಿನ್ನುತ್ತಿದ್ದರು. ಬೀಡಿ ಹಚ್ಚಿದವನು ಜನರಿಂದ ಉಗಿಸಿಕೊಂಡು ಹೊಗೆಯನ್ನು ಹೊರಬಿಡಲಾಗದೆ ಕಣ್ಣುಕಿವಿಯೆಲ್ಲ ಬಿಸಿಯಾಗುತಿದ್ದ ಅವನ ಹಾವಭಾವವೇ ಸಮಯ ಸಾಗಿಸಲಿಕ್ಕೊಂದು ಮೋಜು. ಬುಟ್ಟಿವ್ಯಾಪಾರಿಗಳಿಂದ ಕಡ್ಲೆಕಾಯಿ, ಕಾರಬೆಳೆ, ಬಟಾಣಿ ಕೊಳ್ಳಲು ಕಾಸನ್ನು ಪಾಸು ಮಾಡುವಾಗಿನ ಜನರ ಸಹಕಾರಕ್ಕೆ ಸಲಾಮು ಹೊಡಿಯಲೆ ಬೇಕು. ಪಾಸು ಮಾಡುವಾಗ ಪುಸಕ್ಕನೆ ಕೈಜಾರಿದ ಒಂದು ರೂಪಾಯಿ ನಾಣ್ಯಕೊಸ್ಕರ ಕೂತವರ ತಳವನೆಲ್ಲ ತಡಕಾಡುವ ಗಾಬರಿ ಅವರ್ಣನೀಯ. ಇನ್ನು ಪ್ರಕೃತಿ ಕರೆದರತ್ತು ಮುಗಿದೆ ಹೋಯಿತು. ಆ ಸಂಕಷ್ಟಕರವಾದ ಸ್ವಂತ ವಿಷಯವನ್ನು ಯಾರೊಂದಿಗೆ ಹೇಳಿಕೊಳ್ಳಲಾದೀತು?. ಅಲ್ಲಿಗೆ ಎದುರುಬದಿಯಲ್ಲಿ ಬಿಸಿಲಿನಲ್ಲಿ ಕೂತವರನ್ನು ಕಂಡು "ಪಾಪ" ಎಂದು ಮರುಕಪಟ್ಟುಕೊಳ್ಳುತಿದ್ದುದನ್ನು ನಿಲ್ಲಿಸಿಬಿಟ್ಟೆವು.

ಭವ್ಯ ಎನ್ನುವಂತ
ಸ್ತಬ್ಧಚಿತ್ರಗಳು ಸಾಗಿ ಬಂದವು. ಒಂದಕ್ಕಿಂತ ಒಂದು ಸುಂದರ ಮತ್ತು ವಿಶಿಷ್ಟ. ಯಾವ ಜಿಲ್ಲಾಪಂಚಾಯಿತಿಯದು ಹೆಚ್ಚು ಮನೋಹರ ಎಂದು ವರ್ಗೀಕರಿಸಲಾಗದಷ್ಟು
ವಿಭಿನ್ನ. ಎಲ್ಲವೂ ಅಚ್ಚುಕಟ್ಟಾಗಿ ರೂಪತಳೆದಿರುವ ಕಲಾತ್ಮಕತೆ. ನಡುನಡುವೆ ಸಾಗುತ್ತಿದ್ದ ಕಲಾತಂಡದಿಂದ
ಸೊಗಸಾದ ಕಲಾಪ್ರದರ್ಶನ ತಾಳ ಅದಬೆರೆತ ಮೇಳ. ಒಟ್ಟು ಇದ್ದ 37 ಸ್ತಬ್ಧಚಿತ್ರಗಳು ಸಾಗುವಷ್ಟರಲ್ಲಿ
5:30ರ ಸಂಜೆ. ಪೋಲಿಸ್ ಬ್ಯಾಂಡ್, ಅದರಿಂದೆ ಮೇಯರ್ ಕುದರೆ ಸವಾರಿ, ಅದರಿಂದೆ ಅಶ್ವದಳ, ಅದರಿಂದೆ ದೊಡ್ಡ
ಮಿಲಿಟರಿ ಬೆಟಾಲಿಯನ್, ಅದರಿಂದೆ ಬಂದವನೆ ಗಾಂಬೀರ್ಯ ವದನ, ದೈತ್ಯರೂಪಿ, ಅಜಾನುಬಾಹು ಅರ್ಜುನ. ಅಕ್ಕಪಕ್ಕ
ಗಜರಾಣಿರ ಮಧ್ಯೆ ಧಾವಿಸಿ ಬರುತ್ತಿದ್ದ. ಸ್ತಂಬೀಭೂತರಂತಾಗಿದ್ದ ಜನರು ಎಚ್ಚರಗೊಂಡವರಂತೆ ಎದ್ದು ನಿಂತು
ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿದರು. ಅವನ ರಾಜಕಳೆಯಿಂದ ಮೆರವಣಿಗೆಗೆ ಮೆರಗು ತಂದಿದ್ದಕ್ಕಾಗಿ
ಧನ್ಯವಾದ ಸಲ್ಲಿಸಿದರು. ಹಲವರು ನಿಂತಲ್ಲೇ ತಾಯಿ ಚಾಮುಂಡಿಯನ್ನು ನೆನೆದು ಪುನೀತರಾದರು. ಚಾಮರ ದೂತ್ತೆಂದು
ಬೀಸಿ ಹೊದಂತಾದ ಅನುಭವ. ಉಸಿರು ತುಂಬಿ ಬಂತು. ಸುರಕ್ಷತೆಯ ಸಲುವಾಗಿ ಒಂದು ದೊಡ್ಡ ಹಿಂಡೆ ಅವನ ಹಿಂದೆ
ಇತ್ತು.
-ಸಂತೋಷ್ ಇಗ್ನೇಷಿಯಸ್,
ಒಂದು ಒಳ್ಳೇ ಕಚಗುಳಿಯ ಓದು ನೀಡಿದ್ದಕ್ಕೆ ಧನ್ಯವಾದಗಳು. ಅವ್ವಳಿಕೆ, ಕೌತುಕಿಸಿದ, ನೆಂಟರಿಸ್ಥರು ಇತ್ಯಾದಿಯಾಗಿ ಕೆಲ ಅಪಭ್ರಂಶಗಳ ತಡೆಯನ್ನು ಹೊರತುಪಡಿಸಿ refine ಮಾಡಿದರೆ ಲೇಖನ ಸರ್ವಗ್ರಾಹ್ಯವಾಗುವುದರಲ್ಲಿ ಸಂಶಯವಿಲ್ಲ.keep it up.
ReplyDeleteThanks for the compliment sir.
Deleteಅವ್ವಳಿಕೆ is a typo error. It suppose to be ಅರವಳಿಕೆ.
ಕೌತುಕಿಸಿದ, ನೆಂಟರಿಸ್ಥರು ಪದಗಳಲ್ಲಿರುವ ಆಭಾಸವೇನೆಂದು ತಿಳಿಸಿದರೆ ತಿದ್ದಿಕೊಳ್ಳಲು ಸಹಾಯವಾದೀತು. ನಿಮ್ಮಂತಹ ಉತ್ತಮ ಲೇಖಕರ ಸಲಹೆಗಳು ಅಗತ್ಯವಾಗಿ ಬೇಕಾಗಿದೆ.