ಮೊದಲೆಲ್ಲಾ ನಮಗೆ ಗೊತ್ತಿದ್ದು ಈ ಮಕ್ಕಳ ದಿನಾಚರಣೆಯೊಂದೇ,Children's day. ಅದು ಬಿಟ್ಟರೆ ಕಾರ್ಮಿಕರ ದಿನ. ಈಗಂತೂ ವಿವಿಧ ಡೇ ಗಳದ್ದೇ ಭರಾಟೆ.ಮೆಲ್ಲಗೆ ಬಂದ ವ್ಯಾಲೆಂಟೆನ್ಸ್ ಡೇ ಜೊತೆಗೆ, ಮದರ್ಸ್ ಡೇ, ನಂತರ ಫಾದರ್ಸ್ ಡೇ, ಫ್ರೆಂಡ್ ಶಿಪ್ ಡೇ ಇತ್ಯಾದಿಗಳು ಬಂದು ಈ ಚಿಲ್ದ್ ರ್ನ್ಸ್ ಡೇ ಯಾಕೋ ಸ್ವಲ್ಪ ಕಳೆಗುಂದಿದಂತೆ ಕಾಣುತ್ತಿದೆ. ಎಲ್ಲಾ ಡೇಗಳೂ ತನ್ನದೇ ಆದ ವಾಣಿಜ್ಯ,ವ್ಯಾಪಾರದ ನೆಲೆಯಲ್ಲಿ ಬೆಳೆದು ನಿಂತಿದೆ. ಆ ದಿನಗಳಂದು ಉಡುಗೊರೆಗಳು, ಗ್ರೀಟಿಂಗ್ ಕಾರ್ಡುಗಳು ಮಾರಾಟದ ಅಂಗಡಿ, ಮಳಿಗೆಗಳಲ್ಲಿ ಕಂಗೊಳಿಸ ತೊಡಗಿದರೆ, ಹೋಟೆಲ್ ಗಳು ಪೈಪೋಟಿಯ ಮೇಲೆ ವಿಶೇಷ ತಿನಿಸುಗಳನ್ನು ತಯಾರು ಮಾಡಿ, ತಾಯಂದಿರ ದಿನದಂದು ತಾಯಿಯೊಡನೆ ಬಂದರೆ ರಿಯಾಯಿತಿ, ವ್ಯಾಲೆಂಟೆನ್ಸ್ ದಿನದಂದು ಜೋಡಿಯಾಗಿ ಬಂದರೆ ಉಡುಗೊರೆ ಹೀಗೆ ಅನೇಕ ಸರ್ಕಸ್ ಗಳನ್ನು ಮಾಡುತ್ತಾ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತವೆ, ವ್ಯಾಲೆಂಟೆನ್ಸ್ ದಿನದ ಸಡಗರವಂತೂ ಹೇಳತಿರದು.
ಈಗ ವಾಣಿಜ್ಯ ವ್ಯಾಪರೀಕರಣ ಮಕ್ಕಳನ್ನು ಬಿಟ್ಟಿಲ್ಲ. ಇಂದು ನಮ್ಮ ನಿಮ್ಮ ನಡುವಿನ ಮಕ್ಕಳು ಕೇವಲ ಮುದ್ದು ಬೊಂಬೆಗಳಲ್ಲ, ಮಾತಿನ ಗಿಳಿಗಳಲ್ಲ, ಮುಗ್ದತೆಯ ಪ್ರತಿಬಿಂಬ ಮಾತ್ರವಲ್ಲ. ಅವು ಸಾವಿರಾರು ಕೋಟಿಗಳನ್ನು ತರಬಲ್ಲ ಗ್ರಾಹಕರು. ಒಂದು ವಾಣಿಜ್ಯ ಸಂಸ್ಥಯ ಅಂಕಿ ಅಂಶಗಳ ಅಂದಾಜಿನ ಪ್ರಕಾರ 2015 ರ ವೇಳೆಗೆ ಭಾರತದ ಮಕ್ಕಳ ಆಟಿಕೆಗಳ ಒಟ್ಟು ವ್ಯಾಪರದ ಮೊತ್ತ 13,000 ಕೋಟಿಗಳನ್ನು ದಾಟುವ ಸಂಭವವಿದೆಯಂತೆ. ಸಂಭವವಲ್ಲ ಖಂಡಿತ ಎಂದು ವಾಣಿಜ್ಯ ತಜ್ಞರು ಖಚಿತ ಪಡಿಸುತ್ತಾರೆ. ಅಂದರೆ ನಾವು ನೀವು ಸಣ್ಣ ಪುಟ್ಟ ಅಂಗಡಿ, ಶಾಪಿಂಗ್ ಮಾಲ್ ಗಳಲ್ಲಿ ಕಾಣುವ ಒಂದು ಸಣ್ಣ ಕಾರಿನಿಂದ ಹಿಡಿದು ಬೆಲೆ ಬಾಳುವ ಆಟದ ಸಾಮಾನುಗಳ ಒಟ್ಟು ವ್ಯವಹಾರವನ್ನು ಈಗ ಸಾವಿರ ಕೋಟಿಗಳ ಲೆಕ್ಕದಲ್ಲಿ ಏಣಿಸಲಾಗುತ್ತಿದೆ, ಭಾರತದಂಥ ಅಪಾರ ಜನ ಸಂಖ್ಯೆಯ ದೇಶದಲ್ಲಿ ಇದು ದೊಡ್ಡ ವಿಷಯವೇನ್ನಲ್ಲ ಎನಿಸಿದರೂ, ಈ ಉದ್ಯಮದ ಬೃಹತ್ ಸ್ವರೂಪವನ್ನು ಕಂಡಾಗ ಇನ್ನು ಮುಂದೆ ಇದೆಲ್ಲಾ ಮಕ್ಕಳಾಟ ಎನ್ನಲ್ಲು ಸಾಧ್ಯವಿಲ್ಲ. ಇಂದು ಯಾವುದೇ ಒಂದು ಉದ್ಯಮ ತನ್ನ ಗ್ರಾಹಕರನ್ನು ಸೆಳೆಯುವ ತನ್ನ ಕಾರ್ಯ ತಂತ್ರದಲ್ಲಿ ಬಹಳವಾಗಿ ಯೋಚಿಸುವುದು ಇದೇ ಮಕ್ಕಳ ಬಗ್ಗೆ. ಯುವ ಜನರದ್ದು ಇನ್ನೂ ಒಂದು ಹೆಜ್ಜೆ ಮುಂದೆ. ನಮ್ಮ ಟಿ.ವಿ.ಗಳ ಮುಂದೆ ಒಂದಷ್ಟು ಸಮಯ ಕಳೆದರೆ ಅದರಲ್ಲಿನ ಬಹುತೇಕ ಜಾಹಿರಾತುಗಳು ಇವರಿಬ್ಬರ ಮೇಲೇ ಕೇಂದ್ರೀಕೃತವಗಿರುತ್ತದೆ. ಮಕ್ಕಳ ಆಟಿಕೆಗಳಂಥ ಸಾಮಾನ್ಯ ವಸ್ತುವಿನ ಉದ್ಯಮ ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣವೇನೆಂದು ವಿಶ್ಲೇಷಿಸುತ್ತ ಹೊರಟಾಗ ಕೆಲವು ಆಸಕ್ತಿಕರ ವಿಷಯಗಳು ಕಾಣಸಿಗುತ್ತವೆ.

ಚಂದಮಾಮ, ಜಾನಪದ ಕಥೆಗಳು ಹಾಗೂ ಇನ್ನಿತರ ಚಂದದ ಆಟಗಳ ಜಾಗದಲ್ಲಿ ಬೆನ್ ಟೆನ್, ಸ್ಪೈಡರ್ ಮ್ಯಾನ್, ದೋರೆಮ್ಯಾನ್ ಇತ್ಯಾದಿಗಳು ಬಂದು ಕೂತಿವೆ. ಅಷ್ಟು ಮಾತ್ರವಲ್ಲದೆ ಅವಕ್ಕೆ ಸಂಬಂಧಿಸಿದ ವಸ್ತುಗಳು ಮಾರುಕಟ್ಟೆಯಲ್ಲಿ ಬಂದು ನಮ್ಮ ಮನೆಗಳನ್ನು, ಮಕ್ಕಳ ಮನಗಳನ್ನು ಆಕ್ರಮಿಸಿಕೊಂಡಿವೆ. ಕಡೆಗೆ ಕ್ರೀಡೆ, ಸಂಗೀತ ನೃತ್ಯಗಳ ಸ್ವರೂಪವೂ ಬದಲಾಗಿ, ಅವೆಲ್ಲವೂ ಮನಸ್ಸಿನ ಅಥವಾ ವ್ಯಕ್ತಿತ್ವದ ವಿಕಸನ, ಮನೋರಂಜನೆಗಿಂತ ಜನಪ್ರಿಯತೆ, ಹಣ ಮಾಡುವ ಮೆಟ್ಟಿಲುಗಳಾಗಿವೆ. ಈ ರೀತಿಯ ಅನೇಕ ಸಾಮಾಜಿಕ, ಆರ್ಥಿಕ ಕಾರಣಗಳು ನಮ್ಮ ಮನೆಗಳನ್ನು ತಾಕುತ್ತಿದ್ದು, ಮಕ್ಕಳು ಸಹಾ ಅದರ ಭಾಗವಾಗಿ, ಅದರ ಸಾಧನಗಳಾಗುತ್ತಿರುವುದು ಬದಲಾಗುತ್ತಿರುವ ಪರಿಸ್ಥಿತೆಗೆ ಸಾಕ್ಷಿಯಾಗಿದೆ.ಇಂದು ಒಂದು ಮಗು ಶಾಲೆಗೆ ಹೋಗುವ ಮುನ್ನವೇ ಒತ್ತಡದ ಸುಳಿಯಲ್ಲಿ ಬಂಧಿಯಾಗಿರುತ್ತದೆ. ಶಾಲೆಯಲ್ಲಿ ಕಲಿಯಬೇಕಾದುದನ್ನು ಮೊದಲೇ ಕಲಿತ್ತಿದ್ದರೆ ಮಾತ್ರ ಅದಕ್ಕೆ ಶಾಲೆಯಲ್ಲಿ ಸ್ಥಾನ. ಇನ್ನೂ ಆಡುವ ವಯಸ್ಸು ಎಂಬುದನ್ನು ಈಗ 3 ವರ್ಷದ ಮಗುವ ಬಗ್ಗೆಯೂ ಹೇಳುವಂತಿಲ್ಲ. ಈಗದು ಓದುವ ವಯಸ್ಸು. ಮುಂದೆ ಇಂಜನೀಯರೋ,ಡಾಕ್ಟರೋ, ಲಕ್ಷ ಸಂಪಾದಿಸುವ ಅಧಿಕಾರಿಯಾಗಬೇಕೆಂದರೆ ಈಗಿನಿಂದಲೇ ತಯಾರಿ ಅಗತ್ಯ ಎನ್ನುವ ಕಾಲ.
ಇಂದು ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಐನ್ ಸ್ಟೈನ್ ಹಾಗೂ ಇತರ ಬುದ್ಧಿವಂತರಂತೆ ಬುದ್ಧಿವಂತರಾಗಬೇಕು, ಜನಪ್ರಿಯರಾಗಬೇಕು ಎಂಬ ಇಚ್ಛೆ. ತಪ್ಪೇನಿಲ್ಲ, ಆದರೆ ಅದೇ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ರ ಮಾತು, ಜೀವನ ಮೇಲ್ಪಂಕ್ತಿಯಾಗುವುದಿಲ್ಲ “If you want your children to be intelligent, read them fairy tales. If you want them to be more intelligent, read them more fairy tales”, "ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದು ನಿಮ್ಮ ಇಚ್ಛೆಯಾದರೆ ಅವರಿಗಾಗಿ ಕಿನ್ನರ ಕಥೆಗಳನ್ನು ಓದಿರಿ, ಇನ್ನೂ ಹೆಚ್ಚು ಬುದ್ಧಿವಂತರಾಗಬೇಕೆಂದರೆ ಅವರಿಗಾಗಿ ಇನ್ನೂ ಹೆಚ್ಚಿನ ಕಿನ್ನರ ಮಕ್ಕಳ ಕಥೆಗಳನ್ನು ಓದಿರಿ" ಎನ್ನುತ್ತಾರೆ ಅದೇ ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್. ಈ ಒಂದು ಮಾತಿನಲ್ಲಿ ಅನೇಕ ಅರ್ಥಗಳನ್ನು ನಾವು ಕಾಣಬಹುದಾಗಿದೆ. ಒಂದು ಮಗು ಬುದ್ಧಿವಂತನಾಗಿ ಬೆಳೆಯಬೇಕಾದರೆ, ಅದರಲ್ಲಿ ಅದರ ಬಾಲ್ಯ ಜೀವನ, ಕುಟುಂಬ ಪರಿಸರ, ಅದರ ಯೋಚನಾ ಸಾಮರ್ಥ್ಯ, ಕ್ರಿಯಾಶೀಲತೆ ಎಲ್ಲವೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಒಂದು ಕಥೆ ಹೇಳುವ, ಕೇಳುವ ಕ್ರಿಯೆಗೆ ಅದರದೇ ಆದ ಸೊಗಸಿದೆ.ಒಬ್ಬ ಪೋಷಕ ಒಂದು ಮಗುವಿಗೆ ಕಥೆ ಹೇಳುತ್ತಾನೆ ಅಂದರೆ ಅಲ್ಲಿ ಅದಕ್ಕಾಗಿ ಸಮಯ ಇಟ್ಟ ಹಾಗೆ ಆಗುತ್ತದೆ. ಮಗು ಹಾಗೂ ಪೋಷಕರ ಮಧ್ಯೆಯೊಂದು ಅವಿನಾಭಾವ ಸಂಬಂಧ ಏರ್ಪಡುತ್ತದೆ. ಈ ಸಂಬಂಧ ಎಳೆಯ ಮನಗಳ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಹಾಗೆಯೇ ಕಥೆ ಕೇಳುವ ಸಮಯದಲ್ಲಿ ಮಗು ತನ್ನದೇ ಆದ ಭಾವ ಪ್ರಪಂಚದಲ್ಲಿ ತೇಲಾಡುತ್ತಾ ತನ್ನದೇ ಆದ ಲೋಕವನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ, ಅದರ ಯೋಚನೆ ಮಾಡುವ ಶಕ್ತಿಯೂ ದೊಡ್ಡದಾಗುತಾ ಹೋಗುತ್ತದೆ. ಕಥೆಯಲ್ಲಿನ ಪಾತ್ರಗಳೊಂದಿಗೆ ಅದರ ವ್ಯಕ್ತಿತ್ವಕ್ಕೂ ಒಂದು ಸ್ಪಷ್ಟತೆ ದೊರಕುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಮಗುವಿನ ಕ್ರಿಯಾಶೀಲತೆ ಹೆಚ್ಹಾಗುತ್ತದೆ. ಈ ದಂತ ಕಥೆಗಳಲ್ಲಿ ಕಾಣ ಸಿಗುವ ಅಡೆ ತಡೆಗಳು, ಅದನ್ನು ಜಯಿಸುವ ಪರಿ ಇವೆಲ್ಲವೂ ಮಗುವಿನ ತೊಡಕುಗಳನ್ನು ಮೀರುವ ಶಕ್ತಿ ಹಾಗೂ ಯೋಚನಾ ಸಾಮರ್ಥ್ಯವನ್ನು ವೃದ್ಧಿಗೊಳಿಸುತ್ತದೆ, ಅದರಲ್ಲೂ ಈ ರೀತಿಯ ಕಥೆಗಳಲ್ಲಿ ಹೆಚ್ಚಾಗಿ ಅದ್ಭುತಗಳು ನಡೆಯುವ ಸನ್ನಿವೇಶಗಳೂ ಬರುತ್ತವೆ.ಜೀವನದಲ್ಲಿ ಅದ್ಭುತಗಳು ನಡೆಯುತ್ತವೆ ಎಂಬ ನಂಬಿಕೆಯೇ ಅನೇಕ ಸಕರಾತ್ಮಕ ಕ್ರಿಯೆಗಳಿಗೆ ನಾಂದಿಯಾಗಬಲ್ಲವು.

ಮಕ್ಕಳಿರಲವ್ವ ಮನೆ ತುಂಬಾ ಎಂಬ ಗಾದೆ ಈ ಕಾಲದಲ್ಲಿ ಅಸಾಧ್ಯವೆನಿಸದರೆ ಮಕ್ಕಳಿರಲವ್ವ ಮನದ ತುಂಬಾ ಎಂಬುದಾದರೂ ಸಾಧ್ಯವಾಗಲಿ.
- ಪ್ರಶಾಂತ್ ಇಗ್ನೇಷಿಯಸ್
Article hodutta hodutta nanu nanna ballya jeevanavannu nenesikolluvanthayithu,Jatre maddeddali nithu aatikeyennu kodisu yendu hatamadutta, adannu kodisade thiraskarisi buddiyadagallanu heluva nanna ammana mathugalannu keevihalli hakikollade,onde reethi hattamadida bekagiruvadannu ammaninda thegedukondaga ,yenoo sadisida Kushi.Antha samayagalu kevala kshanika matra.
ReplyDeleteDhanyavaadagalu
ReplyDelete