Monday 30 December 2013

ಆಡಿಯೋ ಅನಿಸಿಕೆ : ನಿನ್ನಿಂದಲೇ

ಪುನೀತ್ ಚಿತ್ರ ಜೀವನದಲ್ಲಿ ಮೈಲಿಗಲ್ಲಾದ ಮಿಲನ ಚಿತ್ರದ ’ನಿನ್ನಿಂದಲೇ’ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡ ’ನಿನ್ನಂದಲೇ’ ಚಿತ್ರ ತನ್ನ ಹೆಸರಿಂದಲೇ ಚಿತ್ರ ರಸಿಕರನ್ನು ಸೆಳೆದುಕೊಳ್ಳುತ್ತಿದ್ದಂತೆ, ಆಗಾಗ ಬಿಡುಗಡೆಯಾಗುತ್ತಿರುವ ಚಿತ್ರದ ಸ್ಟಿಲ್ ಗಳಿಂದಾಗಿ ಚಿತ್ರದ ಬಗೆಗಿನ ನಿರೀಕ್ಷೆ ಮತ್ತಷ್ಟು ಹಿಗ್ಗಿದೆ. ಪುನೀತ್ ಚಿತ್ರವೆಂದ ಮೇಲೆ ಅದರಲ್ಲಿನ ಹಾಡುಗಳ ಬಗ್ಗೆ ಕಾತುರ ಇದ್ದೆದ್ದೇ. ಅಪ್ಪು ಚಿತ್ರಗಳಲ್ಲಿನ ಬೇರೆ ಎಲ್ಲ ಅಂಶಗಳಷ್ಟೇ ಪ್ರಮುಖವಾದದ್ದು ಚಿತ್ರದ ಸಾಹಸ ದೃಶ್ಯಗಳು ಹಾಗೂ ಹಾಡುಗಳು. ಮಕ್ಕಳ ಹಾಗೂ ಯುವಕರ ಪಾಲಿಗಂತೂ ಅಪ್ಪು ಈ ಎರಡು ಅಂಶಗಳಿಂದಾಗಿಯೇ ಫೇವರೇಟ್. 2013ರಲ್ಲಿ ಪುನೀತ್ ನ ಯಾವುದೇ ಚಿತ್ರ ಬಿಡುಗಡೆ ಆಗದೆ ನಿರಾಸೆಯಲ್ಲಿದ್ದ ಅವರ ಅಭಿಮಾನಿಗಳ ಪಾಲಿಗೆ ಸ್ವಲ್ಪ ಸಮಾಧಾನವೆಂಬಂತೆ ನಿನ್ನಿಂದಲೇ ಧ್ವನಿಸುರಳಿ ಬಿಡುಗಡೆಯಾಗಿದೆ. ಸಿ.ಡಿ. ಗಳು ಭರದಿಂದ ಮಾರಾಟವಾಗುತ್ತಿರುವ ಸುದ್ದಿ ಇದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅದರೂ ಹಾಡುಗಳನ್ನು ಕೇಳಿದಾಗ ಇನ್ನೂ ಏನೋ ಬೇಕಿತ್ತು ಎಂಬ ಭಾವ ಕಾಡುತ್ತದೆ. ಇತ್ತೀಚಿನ ಕನ್ನಡ ಚಿತ್ರ ಗೀತೆಗಳಲ್ಲಿನ ಸೃಜನಶೀಲತೆ, ಪುನೀತ್ ಹಾಡುಗಳಿಗೆ ಇರುವ ಜನಪ್ರಿಯತೆ, ನಿರೀಕ್ಷೆಯ ಹಿನ್ನಲೆಯಲ್ಲಿ ಮಣಿಶರ್ಮ ಮತ್ತಷ್ಟು ಶ್ರಮವಹಿಸಬಹುದಿತ್ತೇನೋ ಎನಿಸುತ್ತದೆ.


ಡೋಂಟ್ ಕೇರ್ : ಕವಿರಾಜ್ ಸಾಹಿತ್ಯದ ವಿಶಾಲ್ ದದ್ಲಾನಿ ಹಾಡಿರುವ ಈ ಗೀತೆ ನೃತ್ಯಕ್ಕಾಗಿಯೇ ಸಂಯೋಜಿಸಿದಂತಿದೆ. ಈ ಹಾಡಿಗೆ ಪುನೀತ್ ಹೇಗೆ ನೃತ್ಯ ಮಾಡಿರಬಹುದು ಎಂಬದಷ್ಟೇ ಮುಂದಿನ ಕುತೂಹಲ. ವಿಶಾಲ್ ಗಾಯನದಲ್ಲಿ ಅಂಥಾ ವಿಶೇಷತೆ ಎನಿಲ್ಲ. ವೇಗದ ಧಾಟಿಯಲ್ಲಿ ಇರುವುದರಿಂದ ಕವಿರಾಜರ ಸಾಹಿತ್ಯಕ್ಕೂ ಹೆಚ್ಚಿನ ಅವಕಾಶ ಸಿಕ್ಕಿಲ್ಲ.

ನೀನು ಇರುವಾಗ : ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ ಈ ಸುಮಧುರ ಹಾಡಿಗೆ ಕಲ್ಯಾಣ್ ಉತ್ತಮವಾದ ಸಾಹಿತ್ಯವನ್ನು ಒದಗಿಸಿದ್ದಾರೆ. ಪ್ರೇಮಿಗಳ ಆಶಯ ಹಾಗೂ ತೊಳಲಾಟವನ್ನು ಸಾಹಿತ್ಯ ಮಾತ್ರವಲ್ಲದೆ ರಾಗದ ಮೂಲಕವೂ ಉತ್ತಮವಾಗಿ ಹಿಡಿದಿಡುವಲ್ಲಿ ಸಂಗೀತ ನಿರ್ದೇಶಕ ಮಣಿಶರ್ಮ ಸಫಲವಾಗಿದ್ದಾರೆ. ಅನುರಾಧ ಭಟ್ಟರ ಧ್ವನಿ ಅಪ್ತವಾಗಿದ್ದೂ, ಅನುರಾಧ ಚಿತ್ರದಿಂದ ಚಿತ್ರಕ್ಕೆ ಮತ್ತಷ್ಟು ಭರವಸೆ ಮೂಡಿಸುತ್ತಾರೆ. 

ಮೌನ ತಾಳಿತು : ಮೌನ ತಾಳಿತು ಎಂಬ ಹೆಚ್ಚಿನ ಅಬ್ಬರವಿಲ್ಲದ ಗೀತೆಗೆ ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಪೂರಕವಾಗಿದೆ. ಚಿತ್ರದಲ್ಲಿನ ದು:ಖದ ಸನ್ನಿವೇಶದಲ್ಲಿ ಬರಬಹುದು ಎಂಬಂತಿರುವ ಹಾಡು ಪರದೆಯ ಮೇಲೆ ಮತ್ತಷ್ಟು ಇಷ್ಟವಾಗಬಹುದೇನೋ. ಗಾಯಕ ಅರ್ಜಿತ್ ಸಿಂಗ್ ಧ್ವನಿ ಚೆನ್ನಾಗಿದ್ದರೂ ಯಾರೇ ಹಾಡಿದ್ದರೂ  ವಿಭಿನ್ನವಾದ ರಾಗದ ಧಾಟಿಯಿಂದಾಗಿ ಕೇಳುತ್ತಾ ಕೇಳುತ್ತಾ ಕೇಳುಗರಿಗೆ ಇಷ್ಟವಾಗಬಹುದಾದ ಗೀತೆಯಿದು. 

ನಿಂತೆ ನಿಂತೆ : ಧ್ವನಿ ಸುರಳಿಯ ಅತ್ತ್ಯುತ್ತಮ ಗೀತೆ ಎನ್ನಬಹುದು. ವಿಜಯ್ ಪ್ರಕಾಶ್ ಎಂದಿನಂತೆ ತಮ್ಮ ಧ್ವನಿ ಹಾಗೂ ಶೈಲಿಯಿಂದಾಗಿ ಹಾಡನ್ನು ತಮ್ಮದಾಗಿಸುಕೊಳ್ಳುವುದು ಮಾತ್ರವಲ್ಲದೆ ಕೇಳುಗರನ್ನು ಆವರಿಸಿಕೊಳ್ಳುತ್ತಾರೆ. ಚಿನ್ಮಯಿ ಹಾಗೂ ಸುಧಾಮಯಿ ಸಹಾ ಉತ್ತಮವಾಗಿ ಧ್ವನಿಗೂಡಿಸಿದ್ದಾರೆ, ನಡು ನಡುವೆ ಬರುವ ಇಂಗ್ಲೀಷ್ ಕೋರಸ್ ಉತ್ತಮವಾಗಿದೆ. ಕವಿರಾಜರ ಸಾಹಿತ್ಯವೂ ಗೀತೆಗೆ ಮೆರಗನ್ನು ತಂದುಕೊಟ್ಟಿದೆ.

ಹಾರು ಹಾರು : ಸರಳವಾದರೂ ವಿಭಿನ್ನವಾದ ಈ ಹಾಡಿಗೆ ಸ್ವೀಕಾರ್ ಹಾಗೂ ಚೈತ್ರ ಧ್ವನಿಗೂಡಿಸಿದ್ದಾರೆ. ಕವಿರಾಜ್ ರ ಸಾಹಿತ್ಯ ಅಗತ್ಯಕ್ಕೆ ತಕ್ಕಂತಿದೆ. ಮಣಿಶರ್ಮರ ವಾದ್ಯ ಸಂಯೋಜನೆಯಲ್ಲಿ ಹೊಸತೇನಿಲ್ಲ.

ಭೋಲೊ ಭಂ : ಡಾ.ನಾಗೆಂದ್ರ ಪ್ರಸಾದರ ಸಾಹಿತ್ಯವಿರುವ ಗೀತೆಗಲಲ್ಲಿ ಕೇಳ ಸಿಗುವ ಲವಲವಿಕೆ, ತುಂಟತನಗಳಿರುವ ಮತ್ತೊಂದು ಯುಗಳ ಗೀತೆ. ಕಾರ್ಥಿಕ್ ಹಾಗೂ ಶ್ರವನ್ ಭಾರ್ಗವಿ ಲವಲವಿಕೆಯಿಂದಲೇ ಹಾಡಿದ್ದಾರೆ. ಹಾಡಿನ ಧಾಟಿ ಹಾಗೂ ವೇಗಕ್ಕೆ ತೆಲುಗು ಗೀತೆಗಳ ಗುಣವಿದೆ. ಪುನೀತ್ ನೃತ್ಯವನ್ನು ಈ ಹಾಡಿನ ಮೂಲಕ ಕಣ್ಣು ತುಂಬಿಕೊಳ್ಳಬೇಕು ಎಂಬ ಭರವಸೆ ಹಾಗೂ ಆಸೆಯನ್ನು ಮೂಡಿಸುವ ಗೀತೆ.

-ಪ್ರಶಾಂತ್ ಇಗ್ನೇಷಿಯಸ್

Wednesday 25 December 2013

ಕ್ರಿಸ್ಮಸ್

ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್ಶಪೂರ್ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು  ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್ ಮಸ್ ಹಬ್ಬದೂ ದೊಡ್ಡ ಪಾತ್ರವೇ. ದೂರದಲೆಲ್ಲೋ ಕೇಳಿ ಬರುವ ಕ್ರಿಸ್ ಮಸ್ ನ ಕ್ಯಾರೋಲ್ ಹಾಡು, ಗಿಜಿ ಗಿಜಿ ರಸ್ತೆಯ ಆಚೆಗೆ ದೀಪಗಳಿಂದ ಕಂಗೊಳಿಸುವ ಯಾವುದೋ ಚರ್ಚ್, ಸ್ವಲ್ಪ ಇಣುಕಿ ನೋಡಿದರೆ ಒಳಗೆ ಕಾಣ ಸಿಗುವ ಅಲಂಕೃತ ಗೋದಲಿ, ಎತ್ತರದಲ್ಲಿ ಕಟ್ಟಿರುವ ತಾರೆ, ಅಂಗಡಿಗಳಲ್ಲಿ ತೂಗಿ ಹಾಕಿರುವ ಬಣ್ಣ ಬಣ್ಣದ ಅಲಂಕಾರದ ವಸ್ತುಗಳು, ಮಳಿಗೆಗಳ ಬಾಗಿಲಲ್ಲಿ ಸ್ವಾಗತ ಮಾಡುತ್ತಿರುವ ಬಿಳಿಯ ಗಡ್ಡಧಾರಿ ಕ್ರಿಸ್ ಮಸ್ ತಾತ,  ಇವೆಲ್ಲವೂ ಡಿಸೆಂಬರ ಚಳಿಗೆ ತಳಕುಗೊಂಡ ದೃಶ್ಯಗಳು. ಹಾಗೆ ನೋಡಿದರೆ ಇಡೀ ವಿಶ್ವದಲ್ಲಿ ವಿಶಿಶ್ಟ ರೀತಿಯಲ್ಲಿ ಅಚರಿಸಲಾಗುವ ಕ್ರಿಸ್ಮಸ್ ಸಮಯದಲ್ಲಿ ಒಂದು ಮಾಯಲೋಕವೇ ಸ್ರುಶ್ಟಿಯಾದಂತೆ ಕಾಣಿಸುತ್ತದೆ.ಇತ್ತೀಚೆಗಂತೂ ಆಡಂಬರದ ಪಾಶ್ಚಾತ್ಯ ಶೈಲಿಯೇ ವಿಶ್ವದ ಎಲ್ಲೆಡೆ ಹಬ್ಬುತ್ತಿದೆ. ವ್ಯಾಪಾರೀಕರಣದ ಕದಂಬ ಬಾಹುಗಳು ಕ್ರಿಸ್ಮಸ್ ನ ಆಚರಣೆಯ ಸುತ್ತ ಹಬ್ಬಿಕೊಳ್ಳುತ್ತಿದ್ದರೂ, ಕ್ರಿಸ್ಮಸ್ ನ ನಿಜವಾದ ಆಚರಣೆಗಳು ಬಹಳ ಅರ್ಥಗರ್ಭಿತ. ಕ್ರಿಸ್ಮಸ್ ಸಮಯದಲ್ಲಿ ನೋಡಲು ಸಿಗುವ ಗೋದಲಿ, ನಕ್ಷತ್ರ, ಸ್ಯಾಂಟ ಕ್ಲಾಸ್, ದೇವ ದೂತರುಗಳು ಎಲ್ಲಕ್ಕೂ ತನ್ನದೇ ಅರ್ಥವಿದೆ. 

ಕ್ರಿಸ್ಮಸ್ ನ ಹಿನ್ನಲೆಯನ್ನು ತಿಳಿಯಲು ಬೈಬಲ್ ನಲ್ಲಿ ಯೇಸು ಕ್ರಿಸ್ತನ ಜನನದ ಸುತ್ತ ನಡೆಯುವ ಘಟನೆಗಳತ್ತ ಕಣ್ಣಾಡಿಸಿದರೆ, ಅದೊಂದು ಮನಮೋಹಕವಾದ ದ್ರುಶ್ಯ ಕಾವ್ಯದಂತೆ ಕಾಣಿಸುತ್ತದೆ. ದ್ವೇಶ, ಅಶಾಂತಿ, ದೌರ್ಜನ್ಯ, ಅಸಮತೆಯಿಂದ ಬಳಲುತ್ತಿದ್ದ ಜಗತ್ತಿಗೆ ದೇವರು ಯೇಸುವಿನ ರೂಪದಲ್ಲಿ ತಮ್ಮ ಮಗನನ್ನೇ ಕಳುಹಿಸುತ್ತಾರೆ ಎಂಬುದು ತಿರುಳಾದರೂ ದೇವರ ಪುತ್ರ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಒಂದು ದನಗಳು ವಾಸಿಸುವ ಗೋದಲಿಯಲ್ಲಿ ಜನಿಸಿದ ಎಂಬುದು ದೀನತೆಯ ಪ್ರತೀಕವಾಗಿದೆ. ಇದೇ ದೀನತೆ, ಕ್ಷಮೆ, ಸಹನೆಯ ಸಂದೇಶವನ್ನು ಯೇಸು ಮುಂದೆ ಬೋದಿಸಿದರು ಎಂಬುದಕ್ಕೆ ಈ ಗೋದಲಿ ಮುನ್ನುಡಿಯಾಗುತ್ತದೆ. ಅಂತೆಯೇ ಜನರನ್ನು ರಕ್ಷಿಸುವ ಉದ್ಧಾರಕ ಬಂದಾಗ ಪೂರ್ವ ದಿಕ್ಕಿನಲ್ಲಿ ತಾರೆಯೊಂದು ಕಾಣಿಸುತ್ತದೆ ಎಂಬ ಪ್ರವಾದನೆ ಯೇಸು ಹುಟ್ಟಿದ್ದಾಗ ನಿಜವಾಗುತ್ತದೆ. ಪ್ರಜ್ವಲವಾಗಿ ಹೊಳೆಯುತ್ತಿದ್ದ ಆ ತಾರೆಯೇ ಜನರಿಗೆ ಯೇಸು ಹುಟ್ಟಿದ ಸಂದೇಶವನ್ನು ಸಾರಿದ್ದಲ್ಲದೆ, ಗೋದಲಿಗೆ ದಾರಿಯನ್ನೂ ತೋರಿಸಿತು ಎನ್ನುತ್ತದೆ ಬೈಬಲ್. ಇದೇ ಸಂಕೇತವಾಗಿ ಇಂದಿಗೂ ಕ್ರಿಸ್ಮಸ್ ಸಮಯದಲ್ಲಿ ಬಣ್ಣ ಬಣ್ಣದ ತಾರೆಗಳು ಕ್ರೈಸ್ತರ ಮನೆಗಳ ಮೇಲೆ ರಾರಾಜಿಸುತ್ತವೆ. ಯೇಸು ಹುಟ್ಟಿದ ಸಂತೋಷದ ವಾರ್ತೆಯನ್ನು ಆ ಸಮಯದಲ್ಲಿ ದೇವ ದೂತರುಗಳು ಆಕಾಶದಲ್ಲಿ ಹಾಡುಗಳ ಮೂಲಕ ಎಲ್ಲೆಡೆ ಸಾರಿದರರು ಎನ್ನುವುದರ ಸಂಕೇತವಾಗಿ ಮನೆ ಮನೆಗೆ ಹೋಗಿ ಕ್ರಿಸ್ಮಸ್ ಹಾಡುಗಳನ್ನು ಹಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಇಷ್ಟೆಲ್ಲದರ ನಡುವೆಯೇ ಜೀವನದುದ್ದಕ್ಕೂ ಶಾಂತಿ, ಪ್ರೀತಿ, ಸಹನೆ, ಕ್ಷಮೆಯ ಸಂದೇಶವನ್ನು ತನ್ನ ನಡೆ ನುಡಿಯಿಂದ ಬೋಧಿಸಿದ ಯೇಸು ಕ್ರಿಸ್ತನನ್ನು ಕಂದನಾಗಿ, ಮನೆಯ ಮಗುವಾಗಿ, ಅನಂದ ತರುವ ಬಂದುವಾಗಿ, ಕತ್ತಲನನ್ನು ಹೋಗಲಾಡಿಸುವ ದಿವ್ಯ ಬೆಳಕ್ಕಾಗಿ ನೆನಪಿಸಿಕೊಳ್ಳುವ ಸುಸಮಯ ಈ ಕ್ರಿಸ್ಮಸ್.

ಇನ್ನೂ ಸ್ಯಾಂಟ ಕ್ಲಾಸ್ ದೇ ಮತ್ತೊಂದು ಕಥೆ. 4ನೇ ಶತಮಾನದಲ್ಲಿ ಈಗಿನ ಟರ್ಕಿ ದೇಶದಲ್ಲಿದ್ದ ನಿಕೋಲೇಸ್ ಎಂಬ ವ್ಯಕ್ತಿಗೆ ಬಡವರನ್ನು ಕಂಡರೆ ಬಹಳ ಪ್ರೀತಿ. ಬಡವರಿಗೆ ಉಡುಗೊರೆಗಳನ್ನು ಕೊಡುವುದು ಅವರಿಗೆ ಇಷ್ಟವಾದ ಕೆಲಸ. ಅದನ್ನು ಯಾರಿಗೂ ಗೊತ್ತಾಗದ ಹಾಗೆ ಮಾಡುತ್ತಿದ್ದದ್ದು ಅವರ ವಿಶೇಶತೆ. ಬಡವನ ಮನೆಯ ಹೊರಗಿನ ಪಾದರಕ್ಷೆಗಳಲ್ಲಿ ನಾಣ್ಯವನ್ನು ಇಡುವುದು, ಹೊಗೆ ಗೂಡಿನಿಂದ ಉಡುಗೊರೆಗಳನ್ನು ಚೆಲ್ಲುವುದು, ಈ ರೀತಿಯಾಗಿ ಗೌಪ್ಯವಾಗಿ ಮಾಡುತ್ತಿದ್ದ ನಿಕೋಲೇಸ್ ಮಾಡುತ್ತಿದ ಸಹಾಯವನ್ನು ಅವರು ಸತ್ತ ಮೇಲೂ ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಬಂದರು ಎನ್ನುತ್ತದೆ ಮಾಹಿತಿಗಳು. 19ನೇ ಶತಮಾನದಲ್ಲಿ ಅಮೇರಿಕಾದ ಕಲಾವಿದನೊಬ್ಬ ಈ ಸ್ಯಾಂಟ ಎಂಬ ಕಲ್ಪನೆಗೆ ಈಗಿರುವ ರೂಪ ಕೊಟ್ಟ ಫಲವಾಗಿ ಈಗ ಕೆಂಪು ಬಣ್ಣದ ಸ್ಯಾಂಟ ನ ರೂಪ ಜನಪ್ರಿಯವಾಗಿದೆ. ಇಂತಹ ಮಾನವೀಯ ಗುಣದ ಸ್ಯಾಂಟವನ್ನು ಇಂದಿನ ವ್ಯಾಪಾರಿ ಜಗತ್ತು ಒಬ್ಬ ಮಾರಾಟ ವ್ಯಕ್ತಿಯಾಗಿ ಬಳಸಿಕೊಳ್ಳುತ್ತಿರುವುದು ದು:ಖಕರವಾದರೂ ಮಕ್ಕಳ ಮನಸ್ಸಿನಲ್ಲಿ ಸ್ಯಾಂಟ ವ್ಯಾಪಾರವನ್ನು ಮೀರಿದ ಮುದ್ದಿನ ತಾತನೇ.

ಎಲ್ಲಾ ಸಂಸ್ಕ್ರುತಿ, ದೇಶ, ಭಾಷೆಗಳೂ ತಮ್ಮದೇ ಆದ ರೀತಿಯಲ್ಲಿ ಕ್ರೈಸ್ತ ಧರ್ಮ ಹಾಗೂ ಕ್ರಿಸ್ಮಸ್ ಅನ್ನು ಆಚರಿಸುವಂತೆ ನಮ್ಮ ಕರ್ನಾಟಕದ ಕ್ರೈಸ್ತರೂ ತಮ್ಮದೇ ಆದ ಸ್ಥಳೀಯ ಆಚಾರ ವಿಚಾರದೂಂದಿಗೆ ಕ್ರಿಸ್ಮಸ್ ಆಚರಿಸುತ್ತಾರೆ. ಕನ್ನಡದ ಕ್ರಿಸ್ಮಸ್ ಗೀತೆಗಳಲ್ಲಿ ಕನ್ನಡದ ಜಾನಪದ ಮಿಳಿತವಾಗಿರುವ ಪರಿಯನ್ನು ಕೇಳಿಯೇ ಆನಂದಿಸಬೇಕು. ಚರ್ಚುಗಳಲ್ಲಿನ ಕನ್ನಡದ ಪ್ರಾರ್ಥನೆಗಳಲ್ಲಿ ನಾಡು ಹಾಗೂ ನಾಡಿನ ಜನರಿಗಾಗಿ ಪ್ರಾರ್ಥನೆ ಎಂದಿಗೂ ಮೀಸಲು.  ಕ್ರೈಸ್ತರ ಮನೆಗಳಲ್ಲಿ ಮಾಡಲಾಗುವ ಕ್ರಿಸ್ಮಸ್ ತಿಂಡಿಗಳಲ್ಲಿ ರವೆ ಉಂಡೆ, ಚಕ್ಕಲಿ, ಖರ್ಜಿಕಾಯಿ,ಮುರುಕು, ಕಜ್ಜಾಯಗಳದ್ದೇ ಕಾರುಬಾರು. ಇದರ ಜೊತೆ ಕೇಕ್, ಕಲಕಲ, ರೋಸ್ ಕುಕ್ ನದೂ ಪಾಲುಗಾರಿಕೆ. ಮನೆಗಳಲ್ಲಿ ಅಲಂಕಾರಗೊಳ್ಳುವ ಗೋದಲಿಯಲ್ಲಿ ದಸರಾ ಬೊಂಬೆಗಳ ರೀತಿಯದೇ ಮೆರಗು. ಮನೆ ಮುಂದೆ ಅರಳುವ ರಂಗೋಲಿಯಲ್ಲಿ ’ಹ್ಯಾಪಿ ಕ್ರಿಸ್ಮಸ್’ ಎಂಬ ಹಾರೈಕೆ. ಮನೆಗಳಿಗೆ ತಿಂಡಿ ತಿನ್ನಲು ಬರುವ ಅಕ್ಕ ಪಕ್ಕದ ಮನೆಯ ಮಕ್ಕಳ ಕಲರವಕ್ಕೆ ಜಾತಿ ಮತಗಳ ಹಂಗಿಲ್ಲ.

ಹೀಗೆ ಇಡೀ ವಿಶ್ವವೇ ಜಾತಿ ಮತಗಳ ಬೇಧವಿಲ್ಲದೆ ಆಚರಿಸುವ ಕ್ರಿಸ್ಮಸ್ ನ ಹಬ್ಬದ ತಿರುಳಿರುವುದು ಶಾಂತಿ ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲೇ. ಇದೇ ಶಾಂತಿ ಪ್ರೀತಿ ಸಹನೆ ದೀನತೆ  ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್ಪಡಿಸಲಿ, ಯೇಸುವಿನ ಸಂದೇಶಗಳು ನಮ್ಮ ಮನಸ್ಸೆಂಬ ಗೋದಲಿಯಲ್ಲಿ ಸದಾ ನೆಲೆಗೊಳ್ಳಲ್ಲಿ ಎನ್ನುವುದರಲ್ಲಿದೆ ಕ್ರಿಸ್ಮಸ್ ನ ಸಾರ್ಥಕತೆ.

-ಪ್ರಶಾಂತ್ ಇಗ್ನೇಷಿಯಸ್

Monday 16 December 2013

ಆಡಿಯೋ ಅನಿಸಿಕೆ : ಶ್ರಾವಣಿ ಸುಬ್ರಮಣ್ಯ

ಮಳೆ ನಿಂತರೂ ಹನಿ ಜಾರಿಯಲ್ಲಿರುವಂತೆ ಗಣೇಶ್ ಚಿತ್ರವೆಂದ ಮೇಲೆ ಮುಂಗಾರು ಮಳೆಯ ಹಾಡುಗಳ ನೆನಪಿಗೆ ಕೊನೆಯಿಲ್ಲ. ಅದರಿಂದಲೇ ಸಹಜವಾಗಿ ಗಣೇಶ್ ಚಿತ್ರಗಳ ಹಾಡುಗಳ ಬಗ್ಗೆ ಒಂದು ಕುತೂಹಲ ಜಾರಿಯಲ್ಲಿ ಇದ್ದೇ ಇರುತ್ತದೆ. ಅದೇ ಕುತೂಹಲದಿಂದ ಹರಿಕೃಷ್ಣ ಸಂಗೀತ ನಿರ್ದೇಶನದ, ಮಂಜು ಸ್ವ್ರರಾಜ್ ರ ಶ್ರಾವಣಿ ಸುಬ್ರಮಣ್ಯ ಚಿತ್ರದ ಹಾಡುಗಳನ್ನು ಕೇಳಿದಾಗ ನಿರಾಸೆ ಆಗವುದಿಲ್ಲ.  ಆದರೂ ಹರಿ ಸಂಗೀತ ನಿರ್ದೇಶನದ ಹಾಡುಗಳಲ್ಲಿನ ಲವಲವಿಕೆ ಹಾಗೂ ಹೊಸತನ ಇಲ್ಲಿ ಸ್ವಲ್ಪ ಮಟ್ಟಿಗೆ ಕಾಣೆಯಾಗಿದೆ ಎಂದೇ ಹೇಳಬಹುದು.  ಇತ್ತೀಚಿನ ಚಿತ್ರಗಳಲ್ಲಿನ ಸಿದ್ಧ ಸೂತ್ರದಲ್ಲೇ ಹಾಡುಗಳು ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಹೇಗಿದೆ ಹಾಡುಗಳು? 

ಅಕ್ಕಲ್ ಬೆಣ್ಣೆ : ಕೃಷ್ಣೇ ಗೌಡರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಹಾಡು ಮಾಸ್ ಪ್ರೇಕ್ಷಕರಿಗಾಗಿಯೇ ಸಿದ್ಧವಾದಂತಿದ್ದೆ. ಹರಿ ಉತ್ತಮವಾಗಿ ಸಂಗೀತ ನೀಡಿರುವ ಈ ಗೀತೆ ಕುಣಿತಕ್ಕೆ ಹೇಳಿ ಮಾಡಿಸಿದಂತಿದೆ. ಬಹಳ ದಿನಗಳ ನಂತರ ಹಾಡಿರುವ ಮಂಜುಳ ಗುರುರಾಜ್ ತಮ್ಮ ಹಿಂದಿನ ಗತ್ತನ್ನು ಉಳಿಸಿಕೊಂಡಿದ್ದಾರೆ. ಅವರ ಧ್ವನಿ ಹಾಗೂ ಹಾಡಿನಲ್ಲಿ  ನುಸುಳಿರುವ ಒಳಗೆ ’ಸೇರಿದರೆ ಗುಂಡು’ ಎಂಬ ಸಾಲುಗಳು ಹಳೆಯ ’ಗುಂಡಿನ’ ಹಾಡನ್ನೂ ಸೇರಿದಂತೆ 90ರ ದಶಕದ ಹಾಡುಗಳನ್ನು ನೆನಪಿಸುತ್ತದೆ. 

ನಿನ್ನ ನೋಡೋ : ಕನ್ನಡ ಸಿನಿಮಾ ಸಂಗೀತದಲ್ಲಿ made for each other ಎಂಬಂತೆ ಆಗಿ ಹೋಗಿರುವ ಸೋನು, ಹರಿ, ಗಣೇಶ್ ರ ಕಾಂಬಿನೇಶನಿನ್ನ ಮತ್ತೊಂದು ಗೀತೆ. ಕವಿರಾಜರ ಸಾಹಿತ್ಯವಿರುವ ಗೀತೆ ಕೇಳಲು ಮಧುರವಾಗಿದೆ ಎಂಬುದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯವಿಲ್ಲವೇನೋ. ಈ ರೀತಿಯ ಹಾಡುಗಳಲ್ಲಿ ಪಳಗಿ ಹೋಗಿರುವ ಸೋನು ಹೆಚ್ಚಿನ ಶ್ರಮವಿಲ್ಲದೆ ಹಾಡಿದ್ದಾರೆ.

ನಗುವ ಮೊಗವ : ಹರಿಕೃಷ್ಣರ ಗೀತೆಗಳಲ್ಲಿನ ಜೀವಂತಿಕೆ ಈ ಗೀತೆಯಲ್ಲಿ ಕಾಣುತ್ತದೆ. ಕವಿರಾಜ್ ರ ಸಾಹಿತ್ಯಕ್ಕೆ ಧ್ವನಿಗೂಡಿಸಿರುವ ಸೋನು ಹಾಗೂ ನಂದಿತಾ ಹಾಡಿಗೆ ಮತ್ತಷ್ಟು ಜೀವ ತುಂಬಿದ್ದಾರೆ. ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಉತ್ತಮ ಗಾಯನವಿರುವ ಈ ಹಾಡನ್ನು ಕೇಳುತ್ತಿದ್ದರೆ ಎಲ್ಲೋ ಮೊದಲೇ ಕೇಳಿದಂತೆ ಅನಿಸಿದರೂ ಎಲ್ಲಿ ಎಂದು ತಟ್ಟನೆ ಗೊತ್ತಾಗದಿರುವುದೇ ಈ ಹಾಡಿನ ಹೆಗ್ಗಳಿಕೆ.

ಕಣ್ಣಲ್ಲೇ ಕಣ್ಣಿಟ್ಟು : ನಾಯಕ ನಾಯಕಿಯ ಪ್ರೇಮದ ಪರಿಯನ್ನು ವಿವರಿಸುವ ಹಾಡಿಗೆ ಶಾನ್ ಕಂಠವನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಡಾ.ನಾಗೆಂದ್ರ ಪ್ರಸಾದ್ ರಿಗೆ ಈ ರೀತಿಯ ಹಾಡಿನ ಸಾಹಿತ್ಯ ಕರತಲಾಮಲಕ. ಯುವಕ ಯುವತಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ಗೀತೆ. ಚಿತ್ರದ ಕತೆಗೆ ಪೂರವಾಗಿರುವಂತಿದೆ ಈ ಹಾಡು.

-ಪ್ರಶಾಂತ್ ಇಗ್ನೇಷಿಯಸ್