Thursday 27 December 2012

ಹೋಗಿ ಗೋದಲಿಯ ಕಡೆ ಮತ್ತೊಮ್ಮೆ…




ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿದೆಯಾದರೆ, ಅಲ್ಲಿ
ಹಾಲಿಲ್ಲದೆ ಅಳುವ ಕಂದನ ರೋಧನ ಕೇಳಿತೆ ಹೇಳಿ
ಚಳಿಗೆ ಬೆತ್ತಲೆಯಾಗಿರುವ ಕೊಳೆಗೇರಿಗಳ ಆಕ್ರಂದನ
ಕೇಳದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!

ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿದೆಯಾದರೆ ಅಲ್ಲಿ
ತುಳಿತ ಜನರ ಬೆಂದ ಮುಖಗಳು ಕಂಡಿತೆ ಹೇಳಿ
ಭಾರಕ್ಕೆ ಬೆಂಡಾಗಿರುವ ಬಾಗಿದ ಬೆನ್ನುಗಳ ಜೀವನ್ಮರಣ
ಕಾಣದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!

ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿದೆಯಾದರೆ ಅಲ್ಲಿ
ಗೊಲ್ಲರ ಆನಂದ ಅತಿಶಯ ಅನುಭವಕ್ಕೆ ಸಿಕ್ಕಿತ್ತೇ ಹೇಳಿ
ತುಳಿತಗೊಳಗಾದವರಿಗೆ ಕ್ರಿಸ್ತ ತಂದ ಭರವಸೆಯ ಹೊಂಗಿರಣ
ಸಿಕ್ಕದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!

ಹೋಗಿ, ಗೋದಲಿಯ ಕಡೆ ಮತ್ತೊಮ್ಮೆ
ಮಾರ್ಕೆಟ್ನ ಗಲ್ಲಾಟೆಗಳನ್ನೆಲ್ಲಾ ಬಿಟ್ಟು
ವಿಧಿಯಾಚರಣೆಗಳ ಪಕ್ಕಕಿಟ್ಟು
ಕಣ್ಣಾಯಿಸಿ ನಿಮ್ಮನೇ ಮರೆತು
ಪದವಿ ಬಿಟ್ಟು ಬಡ ದಾಸನಾದ ಕ್ರಿಸ್ತನ
ಬಡ ಗೋದಲಿಯಡೆ
ಕೂತು
ಭರವಸೆಯ ತುಂಬಿದ ಗೊಲ್ಲರ ಜೊತೆ ಬೆರೆತು.

ಹೋಗಿ, ಗೋದಲಿಯ ಕಡೆ ಮತ್ತೊಮ್ಮೆ

ಕ್ರಿಸ್ತ ಜಯಂತಿಯ ಶುಭಾಶಯಗಳು

ಪ್ರೀತಿಯಿಂದ
 ಜೋವಿ ಯೇ.ಸ
Read more!

ಆ ಕ್ರಿಸ್ಮಸ್‌ಗಾಗಿ ಕಾಯುತ್ತಿದ್ದೇನೆ?

ಪ್ರೀತಿಯ ಅನು…
ನನ್ನ ಹುಟ್ಟೂರಿಗೆ ಹೋದಾಗೆಲ್ಲಾ ನನ್ನನ್ನು ಅತಿಯಾಗಿ ಕಾಡುವ  ಒಂದು ಮನೆಯ ವಾಸ್ತವವೇ ಈ ಕತೆ. ನಾನು ಆ ಮನೆಯ ಒಳಗಿನವನಲ್ಲ. ಮನೆಯ ಆಂತರ್ಯಕ್ಕೆ ಸೇರಿದವನಂತೂ ಅಲ್ಲವೇ ಅಲ್ಲ. ಆ ಮನೆಯ ವಾಸ್ತವವನ್ನು ದೂರದಿಂದಲ್ಲೇ ನೋಡುತ್ತಿರುವ ಹೊರಗಿನವ. ಆ ಮನೆಯ ತುಮುಲಗಳನ್ನು ಮಾನ ಅವಮಾನಗಳು, ಹಿಂಸೆ ನೋವುಗಳನ್ನು ಸಂಕ್ಷೇಪಗೊಳಿಸುವ ಈ ಕತೆ ಮನೆಯ ಸಂಪೂರ್ಣ ವಾಸ್ತವವನ್ನು ನಿರೂಪಿಸುವುದು ಎಂದು ಹೇಳಿದರೆ ಅದು ಉತ್ಪ್ರೇಕ್ಷಿತ ಮಾತಾಗಬಹುದು. ಆದರೂ ಆ ಮನೆಯವರಿಗೆ ಕ್ರಿಸ್ಮಸ್ ಹಬ್ಬದಾಚರಣೆಯ ಪ್ರಸ್ತುತತೆಯ ಬಗ್ಗೆ ನಾನೇ  ನನ್ನನ್ನು  ಪ್ರಶ್ನಿಸಿಕೂಂಡಾಗ ಬರೆದ ಸಾಲುಗಳ ಸಂಕಲನವೇ ಈ ಕತೆ.

ಆ ಕ್ರಿಸ್ಮಸ್‌ಗಾಗಿ ಕಾಯುತ್ತಿದ್ದೇನೆ?

ಕ್ರಿಸ್‌ಮಸ್‌ದು ಅದೆಂಥ ಗಮ್ಮತ್ತು ! ತನ್ನ ಆಚರಣೆಗೆ ಇನ್ನೂ ಹತ್ತು ದಿನಗಳ ಬಾಕಿ ಚುಪ್ತವಾಗುವುದರ ಮೊದಲೇ  ಊರಿಗೆ ಊರೇ  ಸಂಭ್ರಮಕ್ಕೆ ತುದಿಗಾಲಾಲ್ಲಿ ನಿಲ್ಲುವಂತೆ ಮೋಡಿ ಮಾಡಿಬಿಟ್ಟಿದೆ. ಇದ್ದರಿಂದ ನಮ್ಮ ಊರು ತನ್ನ ನಿತ್ಯಗಟ್ಟಳೆಗೆ ನಮಸ್ಕಾರ ಹೇಳಿ ಮಾವು ತೋರಣ ಕಟ್ಟಿ ರಂಗೋಲಿ ಹಾಕಿ ಕ್ರಿಸ್ಮಸ್ ಮದುಮಗನಿಗೆ ಕಾಯುವ ಮದುಮಗಳಾಗಿಬಿಟ್ಟಿದ್ದಾಳೆ. ಹೆಚ್ಚಿದಕ್ಕೆ ಸಣ್ಣದೋ, ದೊಡ್ಡದೋ, ಅಗ್ಗದೋ, ದುಬಾರಿದೋ ನೂರಾರು ನಕ್ಷತ್ರಗಳಂತೂ ಮನೆಗಳ ನೆತ್ತಿಯನ್ನೇರಿ ಜಗಜಗಿಸುತ್ತಾ ಆಕಾಶದ ನಕ್ಷತ್ರಗಳನ್ನೇ ನಾಚಿಸುವ ಸಿಂಗಾರದ ಚಿನಿಮಿನಿಗಳಾಗಿಬಿಟ್ಟಿವೆ. ಯುವಕರಂತೂ ತಮ್ಮ ಬಗ್ಗದ ಅದಮ್ಯ ಉತ್ಸಾಹದಲ್ಲಿ ಕ್ರಿಸ್ಮಸ್ ತಾತನ ಜತೆಗೂಡಿ ಮನೆ ಮನೆಗೆ ಹೋಗುತ್ತಾ ’ಕ್ರಿಸ್ತ ಜಯಂತಿಯು ಬಂತು ನಮಗೆಲ್ಲಾ ಸಂತೋಷ ತಂತು’ ಎಂದು ಹಾಡುತ್ತಾ ಕುಣಿಯುತ್ತಾ ಊರಿಗೆ ಊರೇ ಹುಚ್ಚೆದು ಕುಣಿಯವಂತಹ ಮೋಡಿ ಮಾಡಿಬಿಟ್ಟಿದ್ದಾರೆ. ಇದರಲ್ಲಿ ಯುವಕರಿಗಿಂತ ನಾವೇನು ಕಡಿಮೆಯಿಲ್ಲವೆನ್ನುವ ಊರ ಹಿರಿಯರು ತಾವೇ ಕಟ್ಟಿದ ಕ್ರಿಸ್ಮಸ್ ಭಜನೆಗಳನ್ನು ತಮ್ಮದೇ ಧಾಟಿಯಲ್ಲಿ ಹಾಡುತ್ತಾ ಸಂಭ್ರಮಕ್ಕೆ ಸಾಂಪ್ರದಾಯಿಕ ಹಿಮ್ಮೇಳವಾಗಿಬಿಟ್ಟಿದ್ದಾರೆ. ಮತ್ತೊಂದು ಕಡೆ, ಊರಿನ ಪುಟಾಣಿಗಳು ’ಹೊಯ್ಯಾರೆ ಹೊಯ್ಯಾರೆ.’ ಹಾಡಿಗೆ ತಮ್ಮ ಕೈಕಾಲುಗಳ ಚಲವಲನಗಳನ್ನು ಸಮೀಕರಿಸುವ ಹಠಕ್ಕೆ ಬಿದ್ದಿರುವಂತೆ ಡ್ಯಾನ್ಸ್ ಅಭ್ಯಾಸದ ಜಪದಲ್ಲಿ ಮುಳುಗಿಬಿಟ್ಟಿದ್ದಾರೆ. ಒಟ್ಟಾರೆ, ಕ್ರಿಸ್ಮಸ್ ಜಾದುವಿಗೆ ಒಳಗಾಗದಿರುವವರು ಊರಿನಲ್ಲಿ ಯಾರು ಇಲ್ಲವೇನೋ ಎಂಬ ಮಟ್ಟದಲ್ಲಿ ಸಿದ್ಧತೆಯ ಕಾರ್ಯ ಭರದಿಂದ ಜರುಗುತ್ತಿದೆ. ಜತೆಗೆ ಆಚರಣೆಯ ವೆಚ್ಚಕ್ಕೆಂದೇ ಮನೆಗಿಷ್ಟು ಎಂದು ವಂತಿಕೆ ನಿಗಧಿಯಾಗಿ ಜಮಾವಣೆಯ ಕಾರ್ಯ ಕೂಡ ಹಿಂದೆ ಬಿದ್ದಿಲ್ಲ. ಇವೆಲ್ಲವುಗಳ ನಡುವೆ ವಿಚಿತ್ರ ಪ್ರಾಣಿಯಂತೆ ಧರ್ಮಕೇಂದ್ರದ ಪಾಧರ್ ಮಾತ್ರ :“ಕ್ರಿಸ್ಮಸ್ ಒಂದು ಭರವಸೆಯ ಹಬ್ಬ. ಹೂಸ ಹೂಸ ಸಂಬಂಧಗಳನ್ನು ಕಟ್ಟಿಕೊಟ್ಟ ಹಬ್ಬ. ಬಡಬಗ್ಗರಿಗೆ ಬಿಡುಗಡೆಯನ್ನು ತಂದ ಕ್ರಾಂತಿಯ ಹಬ್ಬ. ಶಾಂತಿಯ ಪ್ರೀತಿಯ ಹಬ್ಬ. ಆದ್ದರಿಂದ ಬಾಹ್ಯಕ್ಕಿಂತ ಆಧ್ಯಾತ್ಮಿಕವಾಗಿ  ಕ್ರಿಸ್ಮಸ್ ಹಬ್ಬದ ಆಚರಣೆಗೆ ಸಿದ್ಧಗೊಳ್ಳಿ ” ಸ್ನಾನಿಕ ಯೊವಾನ್ನಾನಂತೆ ಕೂಗಾಡುವುದು ಊರಿನ ಜನರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಇವಿಷ್ಟು ಊರಿನ ವಿಚಾರವಾದರೆ ನಮ್ಮ ಮನೆಯ ವಿಚಾರವೇ ಬೇರೆ!

ಕ್ರಿಸ್‌ಮಸ್ ಅಂತ ಮನೆಮಂದಿಗೆಲ್ಲಾ ಬಟ್ಟೆಬರೆ ತಂದು ಮನೆ ಮೇಲೆ ಚಂದದೊಂದು ಸ್ಟಾರ್ ಕಟ್ಟಿ ನಮ್ಮನ್ನೆಲ್ಲಾ ಸಂಭ್ರಮಕ್ಕೆ ಅಣಿಯಾಗಿಸಬೇಕಿದ್ದ ನಮ್ಮ ಅಪ್ಪ, ಎಷ್ಟೂ ವರ್ಷಗಳ ಹಿಂದೆ ಕ್ರಿಸ್‌ಮಸ್‌ಗೆ ಇನ್ನೊಂದು ವಾರ ಬಾಕಿಯಿರುವಂತೆ ಕದ್ದು ಮುಚ್ಚಿ ರಾತ್ರೋರಾತ್ರಿ ಮನೆಬಿಟ್ಟು ಓಡಿಹೋದ್ನಂತೆ. ಫಲವಾಗಿ ಅಪ್ಪ ತಲೆಮರೆಸಿಕೊಂಡು ಓಡಿಹೋದುದ್ ನೆನಪಿಸುವುದಕ್ಕೇ ಕ್ರಿಸ್ಮಸ್ ಬರುತ್ತದೋ ಅಥವಾ ಅಪ್ಪ ತಲೆಮರೆಸಿಕೊಂಡು ಓಡಿಹೋದುದರ ನೆನಪೇ ಕ್ರಿಸ್ಮಸ್‌ನ್ನು ಬರಮಾಡುತ್ತೋ ಗೊತ್ತಿಲ್ಲ. ಅಂತೂ ಕ್ರಿಸ್ಮಸ್‌ವೆಂದರೆ ನಮ್ಮ ಮನೆಗೆ ಬೇವುಬೆಲ್ಲ. ಕೆಲವೊಮ್ಮೆ ಕಹಿ ಕಹಿ ಹಸಿ ಬೇವು ಮಾತ್ರ. ಅದೇನೇ ಇರಲ್ಲಿ, ನನ್ನ ಅಪ್ಪನಿಗೆ ಓಡಿ ಹೋಗಕ್ಕೆ ಕ್ರಿಸ್‌ಮಸ್‌ಯೇ ಬೇಕಾಯ್ತಾ? ಕ್ರಿಸ್ಮಸ್‍ಗಂತ ಎಂಥಾ ಉಡುಗೊರೆ ಕೊಟ್ಟು ಹೋಗಿಬಿಟ್ಟೋನೆ! 

ಹೌದು, ಕ್ರಿಸ್‌ಮಸ್ನಲ್ಲಿ ಕ್ರಿಸ್ತ ನಮ್ಮ ಮನೆಗೆ ಬರಲು ಸಿದ್ಧನಾದ್ರೆ, ನಮ್ಮ ಅಪ್ಪ ಮನೆ ಬಿಟ್ಟು ಹೋದ್ನಂತೆ. ಎಂತಹ ವಿಪರ್ಯಾಸ!  ಹೋಗೋದು ಹೋದ ಮನೆ ಮಠ ಸಂಸಾರ ಬಿಟ್ಬು ಹೋದ ಬುದ್ಧನಂತೆ ಯಾವುದಾದರೂ ಘನವಾದ ಕಾರಣಕ್ಕೆ ಹೋದ್ನಾ! ಅದು ಇಲ್ಲ. ನಿಜ ಹೇಳಬೇಕೆಂದ್ರೆ ಅಪ್ಪ ಮನೆಬಿಟ್ಟಾಗಿಂದ ಕ್ರಿಸ್‌ಮಸ್ ನಮ್ಮ ಮನೆಯ ಹೊಸ್ತಿಲ ದಾಟಿ ಒಳ ಬಂದೆ ಇಲ್ವೇನೋ! ಮನೆಯ ಕತ್ತಲು ದಿನೇ ದಿನೇ ಹೆಪ್ಪುಗಟ್ಟುತ್ತಿದೆ. ಬಡತನ ಕಬ್ಬುರಸದ ಮಿಷಿನ್‌ನಂತೆ ನಮ್ಮನ್ನು ಶಕ್ತಿಮೀರಿ ಹಿಂಡಿ ಭರವಸೆಯಿಲ್ಲದಂತೆ ಜೊಳ್ಳಾಗಿಸಿಬಿಟ್ಟಿದೆ. ಕೆಲವೊಮ್ಮೆ ನಮ್ಮ ಜನರು ನಮ್ಮ ಕಡೆ ಬೀರುವ ತುಚ್ಛ ನೋಟಗಳು, ಬಾಯಿಗೆ ಬಂದಂತೆ ಮಾತನಾಡುವ ಹೊಲಸು ಮಾತುಗಳು “ನಾವು ಹುಟ್ಟಲೇಬಾರದಿತ್ತು” ಎಂಬ ಕೊರಗನ್ನು ತುಂಬಿ ತುಳುಕಿಸಿ ಬದುಕುವ ನಮ್ಮ ಆಸೆಯನ್ನೇ ಕಿತ್ತು ತಿಂದುಬಿಟ್ಟಿದೆ.

ಅದೆನೇ ಇರಲಿ, ನಮ್ಮಮ್ಮ ತುಂಬಾ ಗಟ್ಟಿಗಿತ್ತಿ. ಓದಿರುವುದು ಮೂರನೇ ಕ್ಲಾಸಾದ್ರು ಅದನ್ನೇ ದೊಡ್ಡ ಸಾಧನೆಯೆಂಬಂತೆ ಕೊಚ್ಚಿಕೊಳ್ಳುವ ಮುಗ್ಧತೆ ನಮ್ಮಮ್ಮಳದು. ಅವಳ ಮನೆಯಲ್ಲಿ ಅಮ್ಮಳೇ ಜಾಸ್ತಿ ಓದಿಕೊಂಡಿರುವುದಂತೆ. ತನ್ನ ತಂದೆ ತಾಯಿ ಅಂದ್ರೆ ನನ್ನ ಅಜ್ಜ ಅಜ್ಜಿಯವರ ಮಾತಿಗೆ ಮರು ಮಾತಾನಾಡದೆ ನಮ್ಮಪ್ಪನ ತಾಳಿಗೆ ಕೊರಳು ಕೊಟ್ಟಂತಹ ಮಹಾ ಶರಣಾರ್ಥಿ ನನ್ನ ತಾಯಿ. ಮದುವೆಯಾದ ನಂತರ ಅಪ್ಪನ ಪ್ರೀತಿ ಪ್ರೇಮದ ರುಚಿಯನುಭವಿಸಿದಳೋ ಇಲ್ಲವೋ ಗೊತ್ತಿಲ್ಲ, ಅಪ್ಪನ ತೀಟೆಯನ್ನು ಬಹು ನಮ್ರತೆಯಿಂದ ತೀರಿಸಿದ ಪತಿವ್ರತೆ. ಅಪ್ಪ ತಲೆಮರೆಸಿಕೊಂಡಾನಂತರದಿಂದ ನಮ್ಮಮ್ಮ ವ್ಯಸನದಿಂದ ಕಡ್ಡಿಯಾಗಿಬಿಟ್ಟಿದ್ದಾಳೆ. ಮನದಲ್ಲಿ ಶಾಂತಿಯಿಲ್ಲ. ಮುಖದಲ್ಲಿ ನಗುವಿಲ್ಲ. ಬಂಡೆಕಲ್ಲಿನಂತೆ ನಿರ್ಭಾವವಾಗಿಬಿಟ್ಟಿದ್ದಾಳೆ. ಪಾನ್ ಪರಾಗನ್ನು ಒಂದು ಬಂಡಿ ತಿನ್ತಾಳೆ. ನಮಗೆಲ್ಲಾ ಒಂದು ನೆಲೆ ಕಲ್ಪಿಸಿಕೊಡಲು ಕತ್ತೆಯಂತೆ ಡುಡಿಯುತ್ತಿದ್ದಾಳೆ. ಒಂದಿನ ಅಡುಗೆ ಕೆಲಸಕ್ಕೆ ಹೋದ್ರೆ, ಇನ್ನೊಂದು ದಿನ ಕಳೆ ಕೀಳುವ ಕೆಲ್ಸಕ್ಕೆ ಬೇರೆ ಬೇರೆಯವರ ಹೊಲಗಳಿಗೆ ಹೋಗ್ತಾಳೆ. ಇದೇ ಕೆಲ್ಸವೆಂಬ ಆದ್ಯತೆಯಿಲ್ಲ. ಒಂದೇ ಕೆಲಸಕ್ಕೆ ಅಂಟಿಕೊಳ್ಳುವ ಆಯ್ಕೆಯಿಲ್ಲ ಅಮ್ಮಳಿಗೆ. ನಾವು ಇನ್ನೊಬ್ಬರ ದಾಕ್ಷಿಣ್ಯದಲ್ಲಿ ಬದುಕುತ್ತಿರಬೇಕಾದರೆ ನಮ್ಮ ಆಸೆ, ಇಷ್ಟ, ಆದ್ಯತೆಗಳಿಗೆ ಪುರಸ್ಕಾರವೇ? ಬಿಕ್ಷುಕ ಇದೇ ಬೇಕೆಂದು ತಗಾದೆ ಮಾಡಲು ಸಾಧ್ಯವೇ? ಕೊಟ್ಟಿದೇ ಪಂಚಾಮೃತವೆಂದು ಸ್ವೀಕರಿಸಬೇಕು; ಅದು ನಮ್ರತೆಯಿಂದ.  ಅಮ್ಮ ಕೂಲಿ ಕೆಲಸಕಂತ ಬೆಳಿಗ್ಗೆ ಅಷ್ಟೂತ್ತಿಗೆ ಹೋದ್ರೆ ನನ್ನ ಹೊಟ್ಟೆ ಅವತ್ತಿನ ಮಧ್ಯಾಹ್ನದ ಊಟ ಕೇಳುವಂತಿಲ್ಲ. ಹೀಗೆ ಹೊಟ್ಟೆಗೆ ಊಟವಿಲ್ಲದೆ ಏಷ್ಟೂ ಮಧ್ಯಾಹ್ಣಗಳನ್ನು ಕಳೆದಿದ್ದೇನೋಲೆಕ್ಕವೇ ಇಲ್ಲ. ಲೆಕ್ಕವಿಟ್ಟು ಒಪ್ಪಿಸುವುದಾದರೂ ಯಾರಿಗೆ? ಕೆಲವೊಮ್ಮೆ ಅನಿಸುತ್ತದೆ:  ಅಮ್ಮ ಯಾಕಾದರೋ ನನಗೆ ಊಟ ತಿನ್ನಲು ಕಲಿಸಿದಳೋ ಅಂತಾ. ಇಂತಹ ನನ್ನ ನೂರಾರು ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.

ಶಾಲೆ ಸೇರಿ ವಿದ್ಯೆ ಕಲಿಯ ಬೇಕಾಗಿದ್ದ ನನ್ನ ಇಬ್ಬರು ತಂಗಿಯಂದಿರು ಬೇರೆ ಮನೆಗಳನ್ನು ಸೇರಿ ಮನೆಕೆಲಸದಾಳುಗಳಾಗಿಬಿಟ್ಟಿದ್ದಾರೆ. ಅವರದೋ ವಯಸು ಮೀರಿದ ದುಡಿಮೆ. ನೆಪಕ್ಕೆ ಶಾಲೆಗೋದರೂ ಶಾಲೆಯಲ್ಲಿದ್ದು ಅವರು ಕಲಿಯುವುದೇ ಅಪರೂಪ. ಅವರಿಗೆ ಮೂರೊತ್ತು ಕೆಲ್ಸ.  ಸವೆದು ಬಡಕಲಾಗಿರುವ ತಂಗಿಯಂದಿರನು ನೋಡಿದ್ರೆ ನನ್ನ ದು:ಖ ಬಾಯಿಗೆಬರುತ್ತದೆ. ಪುಸ್ತಕಗಳನ್ನ ಹಿಡಿಯಬೇಕಾಗಿದ್ದ ಕೈಗಳು ಕಂಡವರ ಮನೆಯ ಪಾತ್ರೆ ತಿಕ್ಕುವುದರಲ್ಲಿ ಕಸಬರೆ ಬಳಿಯುವುದರಲ್ಲಿ ತಮ್ಮ “ಹಣೆಬರಹ” ಬರೆದುಕೊಳ್ಳುತ್ತಿರುವುದನ್ನು ಕಂಡರೆ ನನ್ನ ಹೃದಯ ಮಮ್ಮಲ ಮರುಗುತ್ತಿರುತ್ತದೆ. ಕುಂಟೆಬಿಲ್ಲೆ ಅದು ಇದು ಎಂದು ಆಟವಾಡಿಕೊಂಡು ಕುಣಿದು ಕುಪ್ಪಳಿಸುವ ವಯಸ್ಸಿನಲ್ಲಿ ಅಷ್ಟು ಇಷ್ಟು ದುಡ್ಡು ತರುವ ಕಲಸದಾಳಾಗಿಬಿಟ್ಟಿದ್ದಾರೆ ನನ್ನ ತಂಗಿಯಂದಿರು! ಏನು ಮಾಡೋದು? ನಾನಾದರೂ ಚೆನ್ನಾಗಿ ಓದಿ; ಒಳ್ಳೆ ಕೆಲಸಕ್ಕೆ ಸೇರಿ ನಮ್ಮ ಅಮ್ಮ ತಂಗಿಯಂದಿರನ್ನು ಚೆನ್ನಾಗಿ ನೋಡಿಕೂಳ್ಳಬೇಕೆಂಬ ಆಸೆ ನನ್ನಲ್ಲಿ ತೀವ್ರವಾಗಿದ್ದರೂ  ನನ್ನ ಓದುವಿನ ಕಡೆ ಗಮನ ಕೊಡಲು ಕಿಂಚಿತ್ತೂ ಸಾಧ್ಯವಾಗುತ್ತಿಲ್ಲ. ಇಂತಹ ನೋವಿನ  ಕ್ಷಬ್ಧವಾಗಿರುವ ಮನಸ್ಸಿಗೆ ಓದು ಎಂಬುವಳು ಒಲಿತಾಳ ! ಗಟ್ಟಿತನವಿಲ್ಲದ ಮರಳೇ ತುಂಬಿರುವ ಭೂವಿಯು ತನ್ನ ಮೇಲೆ ದೂಡ್ಡ ಕಟ್ಟಡ ಬಯಸಿದಂತೆ!

ಸರಿ, ಇವೆಲ್ಲಾ ನಾನು ನಿಮಗೆ ಏಕೆ ಹೇಳುತ್ತಿದ್ದೇನೆ? ಹೌದು ವರ್ಷಕ್ಕೊಮ್ಮೆ ಬರುವ ಕ್ರಿಸ್ಮಸ್‌ಗಳೋ ಅಪ್ಪ ಮನೆ ಬಿಟ್ಟು ಓಡಿ ಹೋಗಿದನ್ನೇ ನೆನಪಿಸಿ ನನ್ನ ದು:ಖ ಹಿಮ್ಮಡಿಗೊಳಿಸುತ್ತದೆಯೇ ವಿನಃ ಗೋದಲಿ, ಹೊಸಬಟ್ಟೆಗಳು, ಕೇಕ್‌ಗಳೆಂಬ ಸಂಭ್ರಮವಾಗುತ್ತಿಲ್ಲ. ಅಮ್ಮನ ಕಣ್ಣೀರನ್ನು ಒರೆಸುತ್ತಿಲ್ಲ. ದಾಸ್ಯದಲ್ಲಿರುವ ನನ್ನ ತಂಗಿಂದಿರಿಗೆ   ಬಿಡುಗಡೆಯನ್ನೇ ತರುತ್ತಿಲ್ಲ. ಇಂತಹ ಕ್ರಿಸ್ಮಸ್‌ಗೆ ನಾನೇಗೆ ಸಿದ್ಧಗೊಳಬೇಕು?

ಆಪ್ಪ ನಮ್ಮನೆಲ್ಲಾ ಬಿಟ್ಟು ಹೋಗಿ ಎಷ್ಟು ವರ್ಷಗಳಾಯಿತೋ? ಅವನು ಯಾಕೆ ನಮ್ಮನೆಲ್ಲಾ ಬಿಟ್ಟು ಓಡಿ ಹೋದ? ಎಂದು ಅಮ್ಮಳನ್ನು ಕೇಳಿದರೆ ಅವಳಿಂದ ಬರುವ ಒಂದೇ ಒಂದು ಉತ್ತರ; ಬರೀ ಕಣ್ಣೀರು. “ನಿಮ್ಮಪ್ಪ ಸಿಕ್ಕಾಪಟ್ಟೆ ಸಾಲ ಮಾಡಿ ತೀರಿಸಲಾಗದೆ ರಾತ್ರೋರಾತ್ರಿಯಲ್ಲಿ ಓಡಿ ಹೋದ ಹೇಡಿ ಕಣೋ ಅಪ್ಪನಿಗೆ ಅಷ್ಟೋ ಇಷ್ಟೋ ಸಾಲ ಕೊಟ್ಟಿದ್ದ ರಾಜಮ್ಮಳ ನಿರೂಪಣೆ ಇದಾದ್ರೆ ಮತ್ತೊಂದು ನನ್ನ ಚಿಕ್ಕಮ್ಮಳದು: “ನಿಮ್ಮ ಅಪ್ಪ ಮದ್ವೆ ಮುಂಚೆ ಒಂದು ಹುಡುಗಿನ ಇಷ್ಟ ಪಟ್ಟಿದ. ಹುಡುಗಿಯ ಮನೆಯವರು ನಿಮ್ಮಪ್ಪನಿಗೆ  ಅವರ ಹುಡುಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪದಿದ್ದ ಕಾರಣ, ಆ ಹುಡುಗಿಗೆ ಬೇರೆ ಹುಡುಗನ ಜತೆ ಮದುವೆಯಾಯ್ತು. ನಿಮ್ಮಪ್ಪ ವಿಧಿಯಿಲ್ಲದೆ ನಿಮ್ಮಮ್ಮನ ಕಟ್ಕೊಂಡ. ಅವನಿಗೆ ಏನಾಯ್ತೋ ನಾ ಕಾಣೆ ಸಾಲವೆಂದು ತಲೆಮರೆಸಿಕೊಂಡು ಹೋಗಿ ಈಗ ಮದ್ವೆ ಮುಂಚೆ ಪ್ರೀತಿಸಿದ ಹುಡುಗಿ ಜತೆ ಸೇರ್ಕೊಂಡವ್ನೆ ಮುಠಾಳ.”  ಇಂತಹ ಮಾತುಗಳನ್ನು ಕೇಳುವಾಗ ಅಪ್ಪನನ್ನು ಸುಟ್ಟು ಬೂದಿ ಮಾಡುವಷ್ಟು ಕೋಪ ನನ್ನ ತುಂಬಿಕೊಳ್ಳುತ್ತದೆ. ಏನು ಹೇಳಬೇಕೆಂದು ನನಗೆ ತೋಚುವುದಿಲ್ಲ. ಮೌನಕ್ಕೆ ಶರಣಾಗಿಬಿಡುತ್ತೇನೆ.

ಹೌದು ನಮ್ಮಪ್ಪ ಸಾಲಕ್ಕೆ ಹೆದರಿ ಓಡಿಹೋಗಿದ್ದೆ ಅದರೆ ತಾನು ಕಟ್ಟಿಕೊಂಡ ಹೆಂಡತಿಯನ್ನೋ ಅಥವಾ ಹುಟ್ಟಿಸಿದ ಮಕ್ಕಳನ್ನು ನೋಡುವುದಕೊಸ್ಕರವಾದರೂ ಕದ್ದುಮುಚ್ಚಿ ಬರುತ್ತಿದ್ದ, ಅಥವಾ ಪೋನ್ ಮಾಡುತ್ತಿದ್ದ. ಅವ್ಯಾವು ಇಲ್ಲವೆಂದರೆ ಯಾವುದೋ ಬಲವಾದ ಶಕ್ತಿಯೊಂದು ಅವನನ್ನು ಹಿಡಿದಿಟ್ಟಿರಲೇಬೇಕೆಂದು ನನ್ನಲ್ಲಿ ಆಗಾಗ ಮೂಡುವ ವಿವರಣೆ. ಆದರೂ ಈ ಬಗ್ಗೆ ನನಗೆ ನಿಖರವಾದ ಮಾಹಿತಿ ಇಲ್ಲ. ಮಾಹಿತಿ ಸಿಕ್ಕರೂ ನಾನು ಮಾಡಲಾಗುವುದಾದರೂ ಏನು?

ಅಪ್ಪ ಮನೆ ಬಿಟ್ಟು ನಾಲ್ಕೈದು ವರ್ಷಗಳ ನಂತರ ಅಮ್ಮ ತಲೆ ಕೆಡಿಸಿಕೊಂಡು  ಕುಡಿತದ ಚಟಕ್ಕೆ ತನ್ನನ್ನೇ ಮಾರಿಕೊಂಡಿಬಿಟ್ಟಿದ್ದಳು.  ಚಿಂತೆಯ ತೀವ್ರತೆಯ ಕೈಯಿಂದ ತಪ್ಪಿಸಿಕೊಳ್ಳಲು ಅಮ್ಮ ಕಂಡು ಕೊಂಡಿದ್ದ ತಾತ್ಕಾಲಿಕ ಪರಿಹಾರ ಇದಾಗಿತ್ತು. ಕೆಲವೊಮ್ಮೆ ಅಮ್ಮಳ ಕುಡಿತ ಎಲ್ಲೆ ದಾಟಿದಾಗ ಮನೆಮುಂದಿದ್ದ ಮೋರಿಯೇ ಅವಳಿಗೆ ಮನೆಯಾಗಿಬಿಡುತ್ತಿತ್ತು. ಎಷ್ಟೋ ಸಲ ಮೋರಿಯಲ್ಲಿ ಬಿದ್ದುಬಿಡುತ್ತಿದ್ದ ಅಮ್ಮಳನ್ನು ನಾನು ಮತ್ತು ನನ್ನ ತಂಗಿ ಹೊತ್ತು ತಂದು ಮನೆಯಲ್ಲಿ ಮಲಗಿಸಲು ಎಷ್ಟೂ ಕಷ್ಟಪಟ್ಟಿದ್ದೇವೆ! ಅವಮಾನ, ಅಸಹ್ಯ, ಅಪಮಾನದ ..ನೋವು ..ಇವ್ಯಾವು ಆಗ ನಮ್ಮ ಮನಸಸ್ಸುಗಳಾಗುತ್ತಿದ್ದ ತೋಳಲಾಟವನ್ನು ಕನ್ನಡಿರಿಸುವ ಸರಿಯಾದ ಪದಗಳೇ ಅಲ್ಲವೆನೋ!
ನೀನು ಹುಟ್ಟಿದ್ಮೇಲೆನೇ ನಮ್ಗೆ ದರಿದ್ರ ಅಂಟ್ಕೊಂಡಿದ್ದು ಎಂದು ಸದಾ ಮೂಗು ಮುರಿಯುವ ನನ್ನ ಅತ್ತೆ, ನನ್ನನಿರಲಿ, ನನ್ನ ನೆರಳನ್ನು ಕಂಡ್ರೂ ಮೈಮೇಲೆ ಇರುವೆ ಬಿಟ್ಕೊಂಡಗೆ ಆಡ್ತಾರೆ. ನಮ್ಮಮ್ಮಳ ಆರೈಕೆಯ ಗರಡಿಯಲ್ಲಿ ನಮ್ಮಪ್ಪ ಬಿಟ್ಟು ಹೋದ ಇನ್ನೊಂದು ಜೀವವೇ ನನ್ನ ಅತ್ತೆ. ಅಪ್ಪನ ಸ್ವಂತ ಅಕ್ಕ. ಅವಳಿಗೆ ಎಂತ್ತದೋ ಕಾಯಿಲೆ. ಅಗಾಗ ಮೈ ಮೇಲೆ ದೇವ್ರು ಬಂದಾಗೆ ಕಿರುಚಾಡುತ್ತಾಳೆ. ತನ್ನಷ್ಟಕ್ಕೆ ಏನೇನೋ ಮಾತಾನಾಡಿಕೊಳ್ಳುತ್ತಿರುತ್ತಾಳೆ. ಅಂತಹ ಸಮಯದಲ್ಲಿ ಅತ್ತೆಯ ಮುಖವನ್ನು ನೋಡಲು ಭಯವಾಗುತ್ತದೆ. ಅವಳಿಗೆ ಔಷಧೋಪಚಾರವನ್ನು ಕೊಡಿಸುವುದಕ್ಕೂ ಅಮ್ಮಳಲ್ಲಿ ದುಡ್ಡಿಲ್ಲ. ಅತ್ತೆ ಮನೆಯಲ್ಲಿ ಅಲ್ಪಸ್ವಲ್ಪ ಕೆಲಸ ಮಾಡುತ್ತಾಳೆ. ಅದು ಮನಸ್ಸಾದಾಗ ಮಾತ್ರ. ಇಲ್ಲದಿದ್ದರೆ ಮನೆಯ ಒಂದು ಮೂಲೆಯಲ್ಲಿ ಗುಂಡುಕಲ್ಲಿನಂತೆ ಕೂತೇ ಇರುತ್ತಾಳೆ.

ನನ್ನ ಸಂಬಂಧಿಕರದೋ ಇನ್ನೊಂದು ಗೋಳು. ಅವರ ಮನೆಗಳಲ್ಲಿನನ್ನನ್ನು ಒಂದು ನಿಮಿಷವಿರಲು ಸಹ ಬಿಡುವುದಿಲ್ಲ. ಅವರ ಮಕ್ಕಳ ಜತೆ ಅವರುಗಳ ಮನೆಗಳಿಗೆ ನಾನು ಹೋದರೆ ಅವರು ಕೆಂಡಮಂಡಲವಾಗುತ್ತಾರೆ. ನಮ್ಮಪ್ಪ ತಲೆಮರೆಸಿ ಹೋಗಿದಕ್ಕೂ ಏನೋ ನನ್ನ ಮೇಲೆ ಈ  ರೀತಿಯ ತಾತ್ಸಾರ. ನಮ್ಮಪ್ಪ ಮನೆ ಬಿಟ್ಟು ಹೋಗುವುದಕ್ಕೂ ನನ್ನಗೂ ಏನು ಸಂಬಂಧ? ನಮ್ಮ ಜನರ ಬುದ್ದಿಯೇ ಇಷ್ಟು: ಸಂಬಂಧಗಳಿರಬಾರದ ಕಡೆ ಸಂಬಂಧ ಹುಡುಕ್ತಾರೆ ಸಂಬಂಧಗಳಿರಬೇಕಾದ ಕಡೆ ಸಂಬಂಧ ಮುರಿತ್ತಾರೆ. ಇವರಿಗೆ ಯಾವಾಗ ಒಳ್ಳೆ ಬುದ್ಧಿ ಬರುತ್ತದೆಯೋ ಗೊತ್ತಿಲ್ಲ. ಇವರ ಕಟ್ಟೋರ ಹೃದಯಗಳಲ್ಲಿ ಆ ಭಗವಂತ ಯಾವಾಗ ಬೆಳಕಿನ ಕಿರಣ ಮೂಡಿಸ್ತಾನೋ ಗೊತ್ತಿಲ್ಲ.

ಇಷ್ಟೂ.. ಕ್ರಿಸ್ಮಸ್  ಎಂದಾಕ್ಷಣ ನನ್ನಲ್ಲಿ ಕಟ್ಟಿಕೊಳ್ಳುವ  ನನ್ನ ಮೆನೆಯ ದುರಂತ. ವ್ಯಂಗ್ಯ. ಆದರೂ ಒಂದು ಕ್ರಿಸ್ಮಸ್ ನಮ್ಮ ಮನೆಗೆ ಬಂದೇ ಬರುತ್ತದೆ ಎಂದು ನನ್ನ ಮನಸ್ಸು ಆಗಾಗ ಕೂಗಿ ಹೇಳುತ್ತಿರುತ್ತದೆ. ಮನೆಯ ನೆತ್ತಿಯ ಮೇಲೆ ಒಂದು ಸ್ಟಾರ್ ಕಟ್ಟಲು, ನಮ್ಮ ಸಂಭ್ರಮಕ್ಕೆ ಹೊಸ ಬಟ್ಟೆ ಬರೆ, ಕೇಕ್ಗಳನ್ನು ತರಲು, ಚಿಂತೆಯ ಚಿತೆಯಾಗಿರುವ ಅಮ್ಮಳ ಮುಖಕ್ಕೆ ಸ್ವಲ್ಪ ನಗುವನ್ನು ತುಂಬಲು, ಅಡಿಯಾಳುಗಳಾಗಿಬಿಟ್ಟಿರುವ ತಂಗಿಯರನ್ನು ಮನೆಗೆ ವಾಪಸಾಗಿಸಲು, ಬದುಕುವ ಆಸೆಯನ್ನೇ ಕಳೆದುಕೊಂಡಿರುವ ನನ್ನಲ್ಲಿ ಬದುಕುವ ಆಸೆಯನ್ನುಟ್ಟಿಸಲು, ನಮ್ಮನ್ನೆಲ್ಲರನ್ನು ಅಕ್ಕರೆಯಿಂದ ಪ್ರೀತಿಸಲು ಒಬ್ಬ ಅಪ್ಪ ಬಂದೇ ಬರುತ್ತಾನೆ. ಅಂದೇ ನಮಗೆಲ್ಲ ಕ್ರಿಸ್ಮಸ್. ಆ ಕ್ರಿಸ್ಮಸ್ಗಾಗಿ ಕಾಯುತ್ತಿದ್ದೇನೆ?

 ಜೋವಿ ಯೇ.ಸ
vpaulsj@gmail.com
Read more!

Saturday 15 December 2012

ಅವತರಿಸಿದ ಕ್ರಿಸ್ತ

ಸೃಷ್ಟಿ ಹೇಳ್ವ ಅಳಲು ಕೇಳ್ವ ಕರ್ತ ಕ್ರಿಸ್ತನಾಥನು


ತನ್ನ ಸೃಷ್ಟಿ ಮನುಜರೂಪಿ ತಾನೇ ಆದ ಆತನು



ಬರುವಾತ ಇಳೆಗೆ ಸೂರ್ಯ ಬೀಱ್ವ ಬೆಳಕ ಬಿತ್ತಲು

ಬರುವ ಗಳಿಗೆ ಹೊನಲು ಇಲ್ಲ ಎಲ್ಲೂ ಬರಿಯ ಕತ್ತಲು



ರತ್ನತೊಟ್ಟು ಬರುವದಾರಿ ಸೋನೆ ಮೇಘ ಮೆಟ್ಟಿಲು

ಬರುವ ಹಟ್ಟಿ ಶೂನ್ಯತಳದ ಬರಿದು ಬೇಗೆ ಬಟ್ಟಲು



ಸರ್ವಲೋಕ ಸರ್ವಶಕ್ತ ಏಕಮಾತ್ರ ದೇವನು

ತುಳಿತ ದಲಿತ ಕರಿಯ ಜನರ ನೆಳಲು ಮಾತ್ರ ಕಾಣ್ವನು



ಬೆತ್ತಲಾದ ಜಗಕ್ಕೆ ಕ್ರಿಸ್ತ ರಕ್ಷೆ ಕೋಟೆ ಕೊತ್ತಲು

ಬಸಿದು ಬಂದ ಬಸಿರ ಸುತ್ತ ಶೇಷ ಉಸಿರು ಕಾವಲು



ನೆಲದ ಆ ನಿರೀಕ್ಷೆ ಮೀರಿ ಅವತರಿಸಿದ ದೇವನು

ನಮ್ಮ ಮನದಲ್ಲಿ ಜಾಗ ಅಲ್ಪ ಸಿಕ್ಕರೂ ಸಾಕು...

ಮತ್ತೆ ಹುಟ್ಟಿ ಬರುವನು..

ಕ್ರಿಸ್ತ ಮತ್ತೆ ಹುಟ್ಟಿ ಬರುವನು....!!

                                                                  -Santhosh Ignatius