Tuesday 30 August 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 2 - ಸ್ಪೂರ್ತಿಯಾಗಲಿ ಕ್ರಿಸ್ತ

ಫಾ.ಚಸರಾರವರ ಸ್ಪೂರ್ತಿಯಾಗಲಿ ಕ್ರಿಸ್ತದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರದು ಅದನ್ನು ಮುಂದುವರಿಸುವ ನಡುವೆ ಡಾ.ಜಿ.ಎಸ್.ಶಿವರುದ್ರಪ್ಪನವರ ’ಕಾವ್ಯಾರ್ಥ ಚಿಂತನ’ ಎಂಬ ಪುಸ್ತಕದ ಒಂದೆರೆಡು ಅಧ್ಯಾಯಗಳನ್ನು ಓದುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ಒಬ್ಬ ಕವಿಯ ಕಾವ್ಯ ಕೃಷಿಯಲ್ಲಿ ಅಥವಾ ಒಂದು ಕಾವ್ಯ ಸೃಷ್ಟಿಯಲ್ಲಿ ಯಾವ ಯಾವ ಅಂಶಗಳು ಒಳಗೊಂಡಿರುತ್ತವೆ ಎಂಬುದರ ಬಗ್ಗೆ ಅಧ್ಯಯನಶೀಲವಾದ ಲೇಖನಗಳ ಸರಮಾಲೆ ಪುಸ್ತಕದಲ್ಲಿದೆ. ಜಿ.ಎಸ್.ಎಸ್ ಎಂದಿನಂತೆ ಅತ್ಯಂತ ಗಂಭೀರ ಹಾಗೂ ಆಳವಾದ ವಸ್ತುವನ್ನು ಅಪಾರವಾದ ಅಧ್ಯಯನದಿಂದ ಸರಳವಲ್ಲದಿದ್ದರೂ ಸುಲಲಿತವಾಗಿ ಬರೆದಿದ್ದಾರೆ. ಕಾವ್ಯ ಸೃಷ್ಟಿಯ ವಿವಿಧ ಮಜಲುಗಳಲ್ಲಿ ’ಪ್ರತಿಭೆ’ಯ ಬಗ್ಗೆ ಮೊದಲ ಅಧ್ಯಾಯವಿದ್ದರೆ, ಎರಡನೆಯ ಅಧ್ಯಾಯ ’ಸ್ಪೂರ್ತಿ’ಗೆ  ಮೀಸಲು.  ಕವಿಯೊಬ್ಬನಿಗೆ ಪ್ರತಿಭೆ ಹೇಗೆ ಮುಖ್ಯವೋ  ಹಾಗೆಯೇ ಆತ ಪಡೆಯುವ ಸ್ಪೂರ್ತಿ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ ಜಿ.ಎಸ್.ಎಸ್.



 ’ಸ್ಪೂರ್ತಿಯಾಗಲಿ ಕ್ರಿಸ್ತ’ ಗೀತೆಯನ್ನು ಒಬ್ಬ ಕಾವ್ಯ ವಿಮರ್ಶಕ ಅದೊಂದು ಕಾವ್ಯವೆಂದು ಪರಿಗಣಿಸಲಾರನೇನೋ, ಆದರೆ ಸಾಮಾನ್ಯ ಕೇಳುಗನಿಗೆ ಅದೊಂದು ಸುಂದರವಾದ ಕವಿತೆಯೇ. ಜಿ.ಎಸ್.ಎಸ್ ರವರ ಆ ಮೊದಲೆರೆಡು ಅಧ್ಯಾಗಳನ್ನು ಓದುತ್ತಾ ಹೋದಂತೆ, ಈ ಹಾಡಿನ ರಚನೆಯಲ್ಲಿ ಫಾ.ಚಸರಾರವರ ಪ್ರತಿಭೆಯ ಪಾಲೆಷ್ಟು, ಅವರ ಪಡೆದುಕೊಂಡ ಸ್ಪೂರ್ತಿಯ ಪಾಲೆಷ್ಟಿರಬಹುದು ಎಂಬ ಪ್ರಶ್ನೆ ಮನದಲ್ಲಿ ಮೂಡಿ ಬಂತು. ಫಾ ಚಸರಾ ಇದ್ದಿದ್ದರೆ ಕೇಳಬಹುದಿತ್ತೇನೋ? ಇದ್ದಾಗ ಕೇಳಿದ್ದರೂ ಹಾರಿಕೆಯ ಉತ್ತರವೇ ಸಿಗುತ್ತಿತ್ತೇನೋ?




ಚಸರಾರವರ ಅಪಾರ ಪ್ರತಿಭೆ, ಪದ ಬಂಢಾರ, ಸಂಗೀತ ಬಳಕೆ ಬಗ್ಗೆ ಎರೆಡು ಮಾತಿಲ್ಲ. ಅವರ ಲೇಖನಗಳಲ್ಲೇ ಒಮ್ಮೊಮ್ಮೆ ಕವಿತೆಯ ಸ್ಪರ್ಶವಿದೆ. ಈ ಹಾಡಿನಲ್ಲಿ ಅವರ ಪ್ರತಿಭೆಗಿಂತ ಅವರ ಮನದಾಳದ ಭಾವಗಳೇ ಹಾಡಾಗಿ ಮೂಡಿ ಬಂದಿದೆ ಎನಿಸುತ್ತದೆ. ಇಲ್ಲಿ ಎರೆಡು ರೀತಿಯ ಸ್ಪೂರ್ತಿಯ ಸೆಲೆ ಹಾಡಿಗೆ ಪ್ರೇರಣೆಯಾಗಿದೆ. ಕ್ರಿಸ್ತ, ಆತನ ಮಾನವ ಪ್ರೇಮ, ಮಾನವತೆ ಒಂದು ಸ್ಪೂರ್ತಿಯಾದರೆ, ತನ್ನ ಜನರ ನೋವು, ಭಾರ, ಆ ನೋವಿಗೆ ದನಿಯಾಗುವ, ಹೆಗಲಾಗುವ, ಭಾರವನ್ನು ಹಗುರಾಗಿಸುವ ವ್ಯಕ್ತಿಯೊಬ್ಬನ ಆಸೆ ಮತ್ತೊಂದು ಸ್ಪೂರ್ತಿ. ಹಾಡು ಹಂತ ಹಂತವಾಗಿ ಸ್ಪೂರ್ತಿಯನ್ನು  ಬೇಡುತ್ತಾ, ಸ್ಪೂರ್ತಿ ಪಡೆಯುತ್ತಾ ಕೊನೆಗೆ ತಾನೇ ಮತ್ತೊಬ್ಬರಿಗೆ ಸ್ಪೂರ್ತಿಯಾಗುವ ಬಯಕೆಯನ್ನು ತೋಡಿಕೊಳ್ಳುತ್ತದೆ. 




ಮೊದಲ ಸಾಲುಗಳಲ್ಲಿ ಕ್ರಿಸ್ತನ ಭಾವವು, ಆತನ ಪ್ರೇಮವು ಸ್ಪೂರ್ತಿಯಾಗಲಿ ಎಂಬ ಪ್ರಾರ್ಥನೆ ಇದೆ. ಕ್ರಿಸ್ತನ ಯಾವ ಭಾವಗಳು ಎಂಬ ವಿವರಗಳು ಇಲ್ಲಿಲ್ಲ. ಅದು ಕ್ರಿಸ್ತನ, ಕ್ಷಮಾ ಭಾವವಿರಬಹುದು, ಸಹನೆ, ಕ್ರಾಂತಿಕಾರಕ ಧೋರಣೆಯ ಭಾವವೂ ಇರಬಹುದು.  ಇನ್ನೂ ’ಕ್ರಿಸ್ತನ ಪ್ರೇಮವು’ ಎಂಬುದು ಆತನ  ಮಾನವತಾ ಪ್ರೇಮ, ದಲಿತರ, ನೊಂದವರ, ಜೀವನದ ಜಂಜಾಟದಿಂದ ಬಳಲುವವರ ಪರವಾದ ಕಾಳಜಿಯ ಭಾವವೂ ಇರಬಹುದು.  ಅದೆಲ್ಲವೂ ’ನನ್ನ ಪ್ರೇಮದ ಕಾವ್ಯಕ್ಕೆ ಸ್ಪೂರ್ತಿಯಾಗಲಿ’ ಎನ್ನುವಾಗ ಅಲ್ಲಿ ರಚನಾಕಾರರ ಉದ್ದೇಶಗಳ ಪರಿಚಯವೂ ಆಗಿ, ಅದಕ್ಕೆ ಕ್ರಿಸ್ತ ಸ್ಪೂರ್ತಿಯಾಗಲಿ ಎನ್ನುವುದರೊಂದಿಗೆ ಪ್ರಾರ್ಥನೆಗೊಂದು ಪೂರ್ಣತೆ ದೊರೆಯುತ್ತದೆ. 




ಇನ್ನೂ ಹಾಡಿನ ಮೊದಲ ಚರಣದಲ್ಲಿ, ’ಭಾವರಹಿತ ಹೃದಯಗಳ’ ಬಗ್ಗೆ ಪ್ರಾರ್ಥನೆ ಇದೆ. ಗೆತ್ಸೆಮನಿ ತೋಪಿನಲ್ಲಿ ಯೇಸು ಪ್ರಾರ್ಥಿಸುವಾಗ ಬಹಳವಾಗಿ ನೊಂದುಕೊಂಡಿದ್ದು ಇದೇ ಭಾವರಹಿತರ ಬಗ್ಗೆಯೇ. ನಿಜ ದೇವರನ್ನು, ದೇವರ ಆಶಯವನ್ನು ತಿಳಿಯದ ನಿರ್ಲಿಪ್ತ ಜನರ ಬಗ್ಗೆ ಯೇಸು ಅನೇಕ ಕಡೆ ಬೇಸರ ವ್ಯಕ್ತಪಡಿಸುವುದನ್ನು ಬೈಬಲ್ ನಲ್ಲಿ ಕಾಣಬಹುದಾಗಿದೆ. ಸದಯ ಸಮಾರಿತನ ಸಾಮತಿಯಲ್ಲಿ ಸಹಾ ಗಾಯಾಳುವಿಗಾಗಿ ಮರುಗದ ಭಾವರಹಿತ ಯಾಜಕ ಹಾಗೂ ಲೇವಿಯವನಿಗಿಂತ ಸಮಾರಿತನ ಹೃದಯ ವೈಶಾಲ್ಯದಿಂದಾಗಿ ಆತನೇ ನೆರೆಯವನು ಎಂದು ಯೇಸು ಹೇಳುತ್ತಾರೆ. ನಿಜ ದೇವರನ್ನು ಅರಿಯದವರು ’ಭಾವರಹಿತರಾದರೆ’ , ಪರರ ಕಷ್ಟಗಳಿಗೆ ಸ್ಪಂದಿಸದವರೂ  ಅದೇ ಸಾಲಿಗೆ ಸೇರುತ್ತಾರೆ.  ಜಗತ್ತಿನಲ್ಲಿ ನಡೆಯುವ ಅನೇಕ ತಪ್ಪುಗಳಿಗೆ ದುಷ್ಟರ  ದುಷ್ಟತನ ಎಷ್ಟು ಕಾರಣವೋ, ಒಳ್ಳೆಯವರ ಮೌನವೂ ಅಷ್ಟೇ ದೊಡ್ಡ ಕಾರಣ ಎಂಬರ್ಥದ ಮಾತುಗಳನ್ನು ಮಾರ್ಟಿನ್ ಲೂಥರ್ ಹೇಳುತ್ತಾರೆ.ಇಂತಹ ಭಾವರಹಿತರಲ್ಲಿ ಕ್ರಿಸ್ತನ ಸ್ಪೂರ್ತಿ ಹರಿಯಲಿ ಎಂಬ  ಸಾಲು ನಿಜಕ್ಕೂ ಅರ್ಥಗರ್ಭಿತ.




ಮುಂದಿನ ಸಾಲು  ದುಡಿದು ಬೆಂದ ಜನರನ್ನು  ಕ್ರಿಸ್ತನ ಸ್ಪೂರ್ತಿ ತಣಿಸಲಿ ಎನ್ನುತ್ತದೆ. ಇದೂ ಕೂಡ ಕ್ರಿಸ್ತನ ಆಶಯವೇ. ’ದುಡಿದು ಬಳಲಿದ ಜನರೇ, ಬನ್ನಿ ನನ್ನ ಬಳಿಗೆ ನಾ ನೀಡುವೆ ನಿಮಗೆ ವಿಶ್ರಾಂತಿಯ’ ಎಂಬ ಯೇಸುವಿನ ಕರೆ ಈ ಸಾಲಿಗೆ ಸ್ಪೂರ್ತಿಯೇನೋ. ವಿಶ್ರಾಂತಿಯ ಸ್ಪೂರ್ತಿ ನಿಜಕ್ಕೂ ದುಡಿದ ಜನರ ಮನವನ್ನು ತಣಿಸಬಲ್ಲದು ಹಾಗೂ ಅನಿವಾರ್ಯವಾದ ದುಡಿತದ ಶ್ರಮವನ್ನುಸಹನೀಯಗೊಳಿಸಬಹುದು. ಇನ್ನೂ, ಬಿತ್ತಿದ ಬೀಜ ಚಿಗುರಲು, ಬೆಳೆಯಲು, ಹೆಮ್ಮರವಾಗಲು ಬೆಳಕು, ಬೆಳಕಿನ ಕಾವು ಅವಶ್ಯ. ಅಂತೆಯೇ ಭರವಸೆ, ಆಸೆ, ಕನಸುಗಳು ಚಿಗುರಲು, ಬೆಳೆಯಲು ಕ್ರಿಸ್ತನ ಪ್ರೇಮದ ಬೆಚ್ಚನೆಯ ಸ್ಪರ್ಶ, ಕಾವು ಅವಶ್ಯ. ಆ ಪ್ರೀತಿಯ ಕಾವಿನಲ್ಲಿ ಎಲ್ಲವೂ ಚಿಗುರಲಿ ಎಂಬ ಆಶಯದೊಂದಿಗೆ ಮೊದಲ ಚರಣ ಮುಗಿಯುತ್ತದೆ.




ಮುಂದೆ ಹಾಡಿನ ಗಮನ ಹರಿಯುವುದು ’ತುಳಿತದಿಂದ ನರಳುತ್ತಿರುವ ಜನರತ್ತ’.  ಎಲ್ಲಾ ರೀತಿಯ ಶೋಷಣೆಗೆ ಒಳಗಾದ ಜನರು ಇಲ್ಲಿ ನೆನಪಾಗುತ್ತಾರೆ. ಜಾತಿಯ ಶೋಷಣೆಗೊಳಗಾದ ದಲಿತ, ಸಂಖ್ಯಾಬಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗುವ  ಅಲ್ಪಸಂಖ್ಯಾತ, ಕೌಟಂಬಿಕ ದೌರ್ಜನ್ಯ ಎದುರಿಸುವ ಮಹಿಳೆ, ತನ್ನದೇ ನೆಲದಲ್ಲಿ ಪರಕೀಯನಾದ ಕನ್ನಡ ಕ್ರೈಸ್ತ ಎಲ್ಲರಿಗೂ ಈ ಸಾಲಿನಲ್ಲಿ ಪಾಲಿದೆ. ಅಂತಹ ಜನತೆಗೆ ಒಳ್ಳೆಯ ದಿನಗಳು ಬರಲಿ, ಆ ದಿನಗಳಿಗೆ ಆಸೆಯಿಂದ ಕಾಯುವ , ನಿರೀಕ್ಷಿಸುವ ಸಹನೆಗೆ ಬೇಕಾದ ಸ್ಪೂರ್ತಿಯನ್ನು ಅವರಿಗೆ ನೀಡು ಎಂದು ಈ ಸಾಲುಗಳು ಬೇಡಿಕೊಳ್ಳುತ್ತದೆ. ಅಲ್ಲಿಯವರೆಗೂ ಅವರ ನೋವನ್ನು ನೀಗಿಸು ಎಂಬ ಬೇಡಿಕೆಯೂ ಅಲ್ಲಿದೆ.




'Helping hands are better than praying lips'  ಎಂಬ ಮಾತನ್ನು ನೆನಪಿಸುವ ಸಾಲುಗಳು ಮುಂದೆ ಬರುತ್ತವೆ. ಪ್ರಾರ್ಥನೆಗಿಂತ ಸಹಾಯ ನೀಡುವ ಕರಗಳು ಉತ್ತಮ ಎಂಬುದು ಇದರ ಅರ್ಥವಾದರೂ, ಪ್ರಾರ್ಥನೆಯೊಂದಿಗೆ ನಮ್ಮ ಕ್ರಿಯಾಶೀಲ ಪ್ರಯತ್ನವೂ ಆಗಬೇಕು ಎನ್ನುವುದು ಅದರ ವಿಶಾಲ ಅರ್ಥ. ಭಾವರಹಿತ ಹೃದಯಗಳಿಗೆ, ಬೆಂದ ಜನರಿಗೆ, ಶೋಷಣೆಗೊಳಗಾದ ಜನರಿಗೆ ಬೇಡಿಕೊಂಡ ರಚನಾಕಾರರು ಇಲ್ಲಿ ತಮ್ಮ ಪಾತ್ರದ ಬಗ್ಗೆ ಯೋಚಿಸತೊಡುಗುತ್ತಾರೆ. ಇಲ್ಲಿ ಚಸರಾರವರ ನಿಲುವು, ನೈಜ ಕಾಳಜಿ, ಭಾವ ತೆರೆದುಕೊಳ್ಳುತ್ತದೆ. ಎಲ್ಲಾ ಜನರಿಗಾಗಿ ಕ್ರಿಸ್ತ ನೀನು ಸ್ಪೂರ್ತಿಯಾಗುವುದರ ಜೊತೆಗೆ ಅವರ ನೆರವಿಗೆ ನನ್ನ ದನಿಯು ಸೇರಲಿ ಎಂಬ ಆಶಯ ಈ ಸಾಲಿನಲ್ಲಿದೆ. ಕೇವಲ ಪಾರ್ಥಿಸುವುದು ಮಾತ್ರವಲ್ಲದೆ ನಮ್ಮ ಕೊಡುಗೆಯೂ ಇರಬೇಕು ಎನ್ನುವುದು ಇಲ್ಲಿದೆ. ನೊಂದವರ, ಬಳಲಿದವರ, ಶೋಷಿತರ ಪರವಾಗಿ ನಿಲ್ಲುವುದೆಂದರೆ ಅವರಿಗಾಗಿ ದನಿ ಎತ್ತುವುದು, ಅವರ ಜೊತೆ ಬಳಲುವುದು, ಅವರಿಗಾಗಿ ನರಳವುದು ಎಲ್ಲವೂ ಸೇರಿಕೊಳ್ಳುತ್ತದೆ. ನಮ್ಮ ತೊಡಗುವಿಕೆ ಅವರಿಗೆ ಸಾಂತ್ವನ ನೀಡಲಿ, ಅವರ ಜಂಜಾಟದ ಬದುಕಿಗೆ ನಮ್ಮ ನೆರವು ಸ್ಪೂರ್ತಿಯಾಗಲಿ ಎಂಬ ಉದಾತ್ತ ಆಶಯದೊಂದಿಗೆ ಹಾಡು ಪದಗಳಲ್ಲಿ, ಶಬ್ದಗಳಲ್ಲಿ ಮುಕ್ತಾಯಗೊಂಡರೂ ಅಂತರಂಗದ ಆಲಾಪವಾಗಿ ಮುಂದುವರಿಯುತ್ತದೆ. 




ಏಳೆಂಟು ಸಾಲುಗಳ ಈ ಹಾಡಿನಲ್ಲಿ ಫಾ ಚಸರಾರವರ ಅಶಯ ಇನ್ನೇನಿತ್ತೋ? ನನಗೆ ಗೋಚರವಾದ  ಭಾವಗಳು ಇವು.  ಒಮ್ಮೆ ಒಂದು ಗೀತೆ ಕೇಳುಗನನ್ನು ಮುಟ್ಟುತ್ತಿದ್ದಂತೆ ಅದು ರಚನಾಕಾರ, ಸಂಗೀತ ನಿರ್ದೇಶಕನ ಸ್ವತ್ತಲ್ಲ, ಇನ್ನೇನ್ನಿದ್ದರೂ ಕೇಳುಗನಿಗೆ ಸೇರಿದ್ದೂ ಎನ್ನುತ್ತಾರೆ ಕನ್ನಡದ ಕವಿಯೊಬ್ಬರು. ಆ ಮಾತಂತೆ ರಚನಾಕಾರರ ಆಶಯಕ್ಕೆ ಕೇಳುಗರಿಗೆ ಗೋಚರಿಸುವ ಅರ್ಥಗಳೂ ಸೇರಿಕೊಂಡಾಗ ಒಂದು ಗೀತೆ ಅಮರವಾಗುತ್ತದೆ.  ಕಳೆದ ಇಪ್ಪತ್ತು ವರ್ಷಗಳಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಕನ್ನಡ ಕ್ರೈಸ್ತ ಜನಪದ ಭಾಗವಾಗಿ ಉಳಿದು ಹೋಗಿದೆ ಎಂದರೆ ತಪ್ಪಾಗಲಾರದೇನೋ.




ಮೊದಲೇ ಹೇಳಿದಂತೆ ಈ ಹಾಡಿನ ಭಾವ ತೀವ್ರತೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿರುವುದು ಹಾಡಿನ ವಾದ್ಯ ಸಂಯೋಜನೆ ಹಾಗೂ ಗಾಯನ. ಸಾಧು ಕೋಕಿಲರವರ ಸಂಗೀತದ ನೈಪುಣ್ಯ ಇಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಹೊರ ಹೊಮ್ಮಿದೆ. ಯಾವ ಸಂಗೀತದ ಮಟ್ಟಿಗೆ ಯಾವ ವಾದ್ಯ ಬಳಕೆಯಾಗಬೇಕು ಎಂಬ ಆಯ್ಕೆಯಲ್ಲಿ ಸಾಧುರವರು ಯಾವಾಗಲೂ master class. ಚಸರಾರವರ ಸಾಹಿತ್ಯದಲ್ಲಿನ ಅಷ್ಟೂ ತನ್ಮಯತೆಯನ್ನು, ಆಳವನ್ನು ತಮ ಕಂಠದೊಳಗೆ ಬರಮಾಡಿಕೊಂಡಂತೆ ಗಾಯಕ ವಿಷ್ಣು ದನಿ ನೀಡಿದ್ದಾರೆ. ಒಬ್ಬ ಸಹೃದಯ ಕವಿಯ ಅಂತರಾಳದ ಭಾವಗಳಿಗೆ ಹೃದಯಸ್ಪರ್ಶಿ ಸಾಹಿತ್ಯ ಒದಗಿ ಬಂದು ಮನಮುಟ್ಟುವ ಸಂಗೀತ ಕೂಡಿಕೊಂಡು, ಹೃದಯದಿಂದ ಹೊಮ್ಮಿದಂತ ಗಾಯನ ಸೇರಿದರೆ ಏನಾಗಬಹುದೋ ಅದು ’ಸ್ಪೂರ್ತಿಯಾಗಲಿ ಕ್ರಿಸ್ತ’ ಹಾಡಿನಲ್ಲಿ ಆಗಿದೆ.



 ಇಂತಹ ಇನ್ನಷ್ಟು ಗೀತೆಗಳಿಗೆ ಕ್ರಿಸ್ತ ಸ್ಪೂರ್ತಿಯಾಗಲಿ.